varthabharthi


ರಾಷ್ಟ್ರೀಯ

ಮಹಾತ್ಮಾ ಗಾಂಧಿ ನಿಂದನೆ : ಕಾಳಿಚರಣ್ ಮಹಾರಾಜ್‌ಗೆ ನ್ಯಾಯಾಂಗ ಬಂಧನ

ವಾರ್ತಾ ಭಾರತಿ : 22 Jan, 2022

ಥಾಣೆ, ಜ. 21: ಮಹಾತ್ಮಾ ಗಾಂಧಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಕಾಳಿಚರಣ್ ಮಹಾರಾಜ್ ಮಹಾರಾಷ್ಟ್ರದ ಥಾಣೆಯಲ್ಲಿರುವ ನ್ಯಾಯಾಲಯ ಶುಕ್ರವಾರ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಇದೇ ರೀತಿಯ ಪ್ರಕರಣವೊಂದಕ್ಕೆ ಸಂಬಂಧಿಸಿ ಚತ್ತೀಸ್‌ಗಢದ ರಾಯಪುರ ಕಾರಾಗೃಹದಲ್ಲಿದ್ದ ಕಾಳಿಚರಣ್ ಮಹಾರಾಜ್ ಅವರನ್ನು ಥಾಣೆ ನಗರದ ನೌಪಾಡ ಪೊಲೀಸ್ ಠಾಣೆಯ ಪೊಲೀಸರ ತಂಡ ಬುಧವಾರ ರಾತ್ರಿ ಬಂಧಿಸಿತ್ತು.

ಟ್ರಾನ್ಸಿಟ್ ರಿಮಾಂಡ್‌ನಲ್ಲಿ ಅವರನ್ನು ಗುರುವಾರ ಸಂಜೆ ಥಾಣೆಗೆ ಕರೆತರಲಾಗಿತ್ತು ಹಾಗೂ ಶುಕ್ರವಾರ ಬೆಳಗ್ಗೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಥಾಣೆಯ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಜೆಎಂಎಫ್‌ಸಿ) ಎಸ್.ವಿ. ಮೆಟಿಲ್ ಪಾಟೀಲ್ ಅವರು ಕಾಳಿಚರಣ್ ಮಹಾರಾಜ್ ನ್ಯಾಯಾಂಗ ಬಂಧನ ವಿಧಿಸಿದರು. ಈ ಸಂದರ್ಭ ನ್ಯಾಯಾಲಯದ ಆವರಣದಲ್ಲಿ ಪೊಲೀಸರು ಭಾರೀ ಬಿಗಿ ಭದ್ರತೆ ಏರ್ಪಡಿಸಿದ್ದರು. ಮಹಾತ್ಮಾ ಗಾಂಧಿ ಅವರನ್ನು ನಿಂದಿಸಿರುವುದಕ್ಕೆ ಸಂಬಂಧಿಸಿ ಎನ್‌ಸಿಪಿ ನಾಯಕ ಹಾಗೂ ಮಹಾರಾಷ್ಟ್ರ ಸಚಿವ ಜಿತೇಂದ್ರ ಅವಧ್ ಅವರು ಸಲ್ಲಿಸಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿದ ಬಳಿಕ ಕಾಳಿಚರಣ್ ಮಹಾರಾಜ್ ಬಂಧನವಾಗಿತ್ತು. ಛತ್ತೀಸ್‌ಗಢ ಅಲ್ಲದೆ ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಕೂಡ ಕಾಳಿಚರಣ್ ಮಹಾರಾಜ್ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)