ಭಾರತದ ಟ್ರಾಲ್ ಸೇನೆಯನ್ನು ಎದುರಿಸಲು ‘ಸತ್ಯದ ಸೇನೆ’ ಬೇಕು ; ಆದರೆ, ಅದು ವಾಸ್ತವಿಕತೆ-ಪರಿಶೀಲನೆಗಿಂತ ಮುಂದೆ ಹೋಗಬೇಕು
ಗಣರಾಜ್ಯದ ಸಂರಕ್ಷಕರೆಲ್ಲ ನಮ್ಮ ನಮ್ಮ ರಾಜಕೀಯ ಭಿನ್ನಾಭಿಪ್ರಾಯ ಮತ್ತು ಪೈಪೋಟಿಗಳನ್ನು ಮುಂದುವರಿಸೋಣ. ಆದರೆ, ನಾವೆಲ್ಲರೂ ಒಂದು ಉದ್ದೇಶಕ್ಕಾಗಿ ಜೊತೆಗೂಡೋಣ. ಅದೆಂದರೆ, ರಾಜಕೀಯ ವ್ಯವಸ್ಥೆಯೊಂದು ಉಗುಳುವ ಸುಳ್ಳುಗಳನ್ನು, ಅದರ ವಂದಿ-ಮಾಗಧರನ್ನು ಮತ್ತು ಅದನ್ನು ಆವರಿಸಿಕೊಂಡಿರುವ ಇಡೀ ಪರಿಸರ ವ್ಯವಸ್ಥೆಯನ್ನು ಬಯಲಿಗೆಳೆಯೋಣ. ಒಪ್ಪವಾದ ಸಂವಹನ ತಂತ್ರಗಾರಿಕೆಯನ್ನು ಸಿದ್ಧಪಡಿಸಲು ಸಮಾನ ವ್ಯವಸ್ಥೆಯೊಂದನ್ನು, ಚಿಂತನ ಚಾವಡಿಯೊಂದನ್ನು ಅಥವಾ ತಂಡವೊಂದನ್ನು ಸ್ಥಾಪಿಸೋಣ.
ಟ್ರಾಲ್ಗಳ ಸೇನೆಯು ನಮ್ಮ ಗಣರಾಜ್ಯವನ್ನೇ ವಶಪಡಿಸಿಕೊಳ್ಳುವ ಬೆದರಿಕೆಯನ್ನು ಒಡ್ಡಿದೆ. ಅದು ಈಗಾಗಲೇ ನಮ್ಮ ಸಾರ್ವಜನಿಕ ಚರ್ಚೆಗಳನ್ನು ಕೆಳಮಟ್ಟಕ್ಕೆ ಇಳಿಸಿದೆ, ನಮ್ಮ ಸಾಮಾಜಿಕ ಸಂಭಾಷಣೆಗಳಿಗೆ ವಿಷ ಹಿಂಡಿದೆ ಹಾಗೂ ಭಾರತದ ರಾಷ್ಟ್ರೀಯತೆಗೆ ಹಾನಿ ಮಾಡಿದೆ. ಈಗ ಅದು ವಂಚನೆಯ ಸಾಮ್ರಾಜ್ಯವನ್ನು ನಿರ್ಮಿಸುವತ್ತ ಮುನ್ನಡೆದಿದೆ. ಇದು ನಮ್ಮ ನಾಗರಿಕತೆಗೆ ಎದುರಾಗಿರುವ ಬೆದರಿಕೆಗಿಂತ ಕಡಿಮೆಯೇನಲ್ಲ.
ಇದು ಟ್ರಾಲ್ಗಳ ವಂಚನೆಯನ್ನು ಬೆಟ್ಟು ಮಾಡಿ ಹೇಳುವ ಸಮಯ. ಟ್ರಾಲ್ಗಳ ಬಗ್ಗೆ ಗೊಣಗುವುದನ್ನು ಬಿಟ್ಟು, ಅವುಗಳಿಗೆ ಪ್ರತಿರೋಧ ಒಡ್ಡುವ ಸಮಯ. ಸತ್ಯದ ಸೇನೆಯನ್ನು ರಚಿಸುವ ಸಮಯ.
ಇದು ಕೇವಲ ಆಶಯವಲ್ಲ. ಇಲ್ಲೊಂದು ಗಟ್ಟಿ ಪ್ರಸ್ತಾವವಿದೆ. ಗಣರಾಜ್ಯದ ಸಂರಕ್ಷಕರೆಲ್ಲ ನಮ್ಮ ನಮ್ಮ ರಾಜಕೀಯ ಭಿನ್ನಾಭಿಪ್ರಾಯ ಮತ್ತು ಪೈಪೋಟಿಗಳನ್ನು ಮುಂದುವರಿಸೋಣ. ಆದರೆ, ನಾವೆಲ್ಲರೂ ಒಂದು ಉದ್ದೇಶಕ್ಕಾಗಿ ಜೊತೆಗೂಡೋಣ. ಅದೆಂದರೆ, ರಾಜಕೀಯ ವ್ಯವಸ್ಥೆಯೊಂದು ಉಗುಳುವ ಸುಳ್ಳುಗಳನ್ನು, ಅದರ ವಂದಿ-ಮಾಗಧರನ್ನು ಮತ್ತು ಅದನ್ನು ಆವರಿಸಿಕೊಂಡಿರುವ ಇಡೀ ಪರಿಸರ ವ್ಯವಸ್ಥೆಯನ್ನು ಬಯಲಿಗೆಳೆಯೋಣ. ಒಪ್ಪವಾದ ಸಂವಹನ ತಂತ್ರಗಾರಿಕೆಯನ್ನು ಸಿದ್ಧಪಡಿಸಲು ಸಮಾನ ವ್ಯವಸ್ಥೆಯೊಂದನ್ನು, ಚಿಂತನ ಚಾವಡಿಯೊಂದನ್ನು ಅಥವಾ ತಂಡವೊಂದನ್ನು ಸ್ಥಾಪಿಸೋಣ. ಒಪ್ಪಿತ ತಂತ್ರಗಾರಿಕೆಯನ್ನು ಶಕ್ತಿಶಾಲಿ ಸಂದೇಶಗಳನ್ನಾಗಿ ಪರಿವರ್ತಿಸಲು ಭಾರತದ ಶ್ರೇಷ್ಠ ರಚನಾತ್ಮಕ ಮನಸ್ಸುಗಳನ್ನು ಒಟ್ಟಿಗೆ ತರೋಣ. ಇಂತಹ ಸಂದೇಶಗಳನ್ನು ಬಹುವಾಹಿನಿಗಳು ಮತ್ತು ವೇದಿಕೆಗಳ ಮೂಲಕ ಹರಡುವುದಕ್ಕಾಗಿ ಪರಿಣಾಮಕಾರಿ ವ್ಯವಸ್ಥೆಯೊಂದನ್ನು ರೂಪಿಸೋಣ. ಅಂತಿಮವಾಗಿ, ಸತ್ಯವು ಸಾಮಾನ್ಯ ಜನರಿಗೆ ಅವರ ಭಾಷೆಯಲ್ಲಿ ತಲುಪುವಂತೆ ಮಾಡುವುದಕ್ಕಾಗಿ ಲಕ್ಷಾಂತರ ಸ್ವಯಂಸೇವಕರ ಜಾಲವೊಂದನ್ನು ನಿರ್ಮಿಸೋಣ.
ಸತ್ಯವು ವಾಸ್ತವಿಕತೆ-ಪರಿಶೀಲನೆಗಿಂತಲೂ ಮುಂದಕ್ಕೆ ಹೋಗಬೇಕು. ಸುಳ್ಳುಗಳನ್ನು ಬಯಲಿಗೆಳೆಯುವ ಕಾರ್ಯದಲ್ಲಿ ಮಾಡಲು ಇರುವ ಹೆಚ್ಚಿನ ಕೆಲಸವೆಂದರೆ ಸರಿಯಾದ ಅಂಕಿ-ಅಂಶಗಳು ಮತ್ತು ವಾಸ್ತವಗಳನ್ನು ಕಲೆ ಹಾಕುವುದು. ಆದರೆ, ಹೆಚ್ಚಿನ ಟ್ರಾಲ್ ಪಡೆಗಳು ವಾಸ್ತವಿಕತೆಗಳು ಮತ್ತು ಅಂಕಿ-ಅಂಶಗಳನ್ನು ಲೆಕ್ಕಿಸುವುದಿಲ್ಲ. ಅದಕ್ಕಾಗಿ ನಾವು ಜನರು ತಾವೇ ಅನುಭವಿಸಿರುವ ಸಂಗತಿಗಳನ್ನು ‘ಅನುಭವಿತ ಸತ್ಯ’ದ ರೂಪದಲ್ಲಿ ಹೊರತರಲು ವಿಧಾನಗಳನ್ನು ಕಂಡುಕೊಳ್ಳಬೇಕಾಗಿದೆ. ಸಾಮಾನ್ಯೀಕರಿಸಿದ ಸಂಗತಿಗಳು ಮತ್ತು ನಮಗೆ ಹೆಚ್ಚಿನ ಸಂಬಂಧವಿರದ ವಿಷಯಗಳ ಬಗ್ಗೆ ಸುಳ್ಳುಗಳನ್ನು ಹೇಳುವುದು ಸುಲಭ. ಆದರೆ, ಜನರು ತಾವೇ ಅನುಭವಿಸಿದ ವಿಷಯಗಳ ಬಗ್ಗೆ ಸುಳ್ಳು ಹೇಳುವುದು ಕಷ್ಟ. ಲಡಾಖ್ನಲ್ಲಿ ಬಿಟ್ಟುಕೊಟ್ಟಿರುವ ಭೂಭಾಗಗಳ ಬಗ್ಗೆ ನರೇಂದ್ರ ಮೋದಿ ಸರಕಾರದ ಗೊಂದಲಕಾರಿ ಹೇಳಿಕೆಗಳನ್ನು, ಸುಳ್ಳುಗಳನ್ನು ಬಯಲಿಗೆಳೆಯುವುದು ಕಷ್ಟವಾಗಿರಬಹುದು. ಆದರೆ, ಉದ್ಯೋಗ ಸೃಷ್ಟಿಯ ಬಗ್ಗೆ ಅಥವಾ ಕೊರೋನ ವೈರಸ್ ನಿರ್ವಹಣೆಯಲ್ಲಿನ ವೈಫಲ್ಯದ ಬಗೆಗಿನ ಸುಳ್ಳುಗಳನ್ನು ಬಯಲಿಗೆಳೆಯುವುದು ಸುಲಭ. ಯಾಕೆಂದರೆ, ಅದು ವೈಯಕ್ತಿಕ ಅನುಭವವನ್ನು ಹೊರತರುವುದಾಗಿದೆ.
ವಾಸ್ತವಿಕತೆಗಳನ್ನು ನಿರೂಪಿಸಿದರಷ್ಟೇ ಸಾಲದು. ಈ ವಾಸ್ತವಿಕತೆಗಳನ್ನು ಜೊತೆಯಾಗಿ ಪೋಣಿಸಬೇಕು ಹಾಗೂ ಜನರು ಅದನ್ನು ತಮ್ಮ ಅನುಭವಗಳಿಗೆ ಹೋಲಿಸಿಕೊಳ್ಳುವಂತಾಗಬೇಕು. ಪಂಜಾಬ್ನ ಫಿರೋಝ್ಪುರದಲ್ಲಿ ಪ್ರಧಾನಿಯ ಜೀವಕ್ಕೆ ಬೆದರಿಕೆಯಿತ್ತು ಎನ್ನುವ ಅಪಪ್ರಚಾರವನ್ನು ಮರುದಿನ ಹೊರಬಂದ ವೀಡಿಯೊಗಳು ಹತ್ತಿಕ್ಕಿದವು. ಆದರೆ ಅಷ್ಟೇ ಸಾಕಾಗುವುದಿಲ್ಲ. 2002ರ ಚುನಾವಣೆಯ ಮುನ್ನ ನಡೆದ ಅಕ್ಷರಧಾಮ ದಾಳಿ ಘಟನೆ ಸೇರಿದಂತೆ ಚುನಾವಣೆಗಳ ಮುನ್ನ ಯಾವೆಲ್ಲ ಘಟನೆಗಳು ನಡೆದಿವೆ ಎನ್ನುವ ವಿವರಗಳನ್ನೂ ಅದರೊಂದಿಗೆ ನೀಡಬೇಕು. ಆಗ ಜನರಿಗೆ ಇಂತಹ ಘಟನೆಗಳ ಹಿಂದೆ ಇರುವ ಮಾದರಿಯೊಂದನ್ನು ನೋಡಲು ಸಾಧ್ಯವಾಗುತ್ತದೆ
ಜೊತೆಗೆ, ವಾಸ್ತವಿಕ ಸತ್ಯಗಳನ್ನು ನೀಡಿದರಷ್ಟೇ ಸಾಕಾಗುವುದಿಲ್ಲ, ಭಾವನಾತ್ಮಕ ಸತ್ಯಗಳನ್ನೂ ಕೊಡಬೇಕು. ಸುಲ್ಲಿ ಡೀಲ್ಸ್ ಅಥವಾ ಬುಲ್ಲಿ ಬಾಯಿ ಆ್ಯಪ್ ಅಪರಾಧದ ವ್ಯಾಪ್ತಿಯನ್ನೂ ಮೀರಿದ್ದಾಗಿದೆ. ಅದು ಸಂತ್ರಸ್ತರಿಗೆ ಮತ್ತು ಅದನ್ನು ಮಾಡಿದವರಿಗೂ ತೀವ್ರ ಭಾವನಾತ್ಮಕ ದುರಂತವಾಗಿದೆ. ಈ ವಿಧಾನದಲ್ಲಿ ಸತ್ಯ ಹೇಳುವುದೆಂದರೆ ಮಾನವ ಮುಖವನ್ನು ಅನಾವರಣಗೊಳಿಸುವುದಾಗಿದೆ ಹಾಗೂ ತಮ್ಮ ಮಗಳೇ ಇದರ ಸಂತ್ರಸ್ತೆಯಾಗಿದ್ದರೆ ಅಥವಾ ತಮ್ಮ ಮಗನೇ ಇದರಲ್ಲಿ ಶಾಮೀಲಾಗಿದ್ದರೆ ತಮಗೆ ಹೇಗನಿಸುತ್ತಿತ್ತು ಎನ್ನುವುದನ್ನು ಪ್ರತಿಯೊಬ್ಬರೂ ಯೋಚಿಸುವಂತೆ ಮಾಡುವುದಾಗಿದೆ.
ಹಾಗಾಗಿ, ಇದರಲ್ಲಿ ವಾಸ್ತವಿಕ ಸತ್ಯ, ಅನುಭವಿತ ಸತ್ಯ, ಭಾವನಾತ್ಮಕ ಸತ್ಯ ಮತ್ತು ವಿವರಣಾತ್ಮಕ ಸತ್ಯ ಸೇರಿದಂತೆ ಎಲ್ಲ ವಿಧದ ಸತ್ಯಗಳನ್ನು ಒಳಗೊಳಿಸಬೇಕಾಗಿದೆ.
ಸತ್ಯದ ಸಿದ್ಧಾಂತ
ಇತರ ಯಾವುದೇ ಸೇನೆಯಂತೆ, ಸತ್ಯದ ಸೇನೆಗೂ ಯೋಜಿತ ಸಿದ್ಧಾಂತವೊಂದು ಬೇಕಾಗಿದೆ. ಸತ್ಯವೇ ತನ್ನ ಸಿದ್ಧಾಂತ ಮತ್ತು ಅತ್ಯಂತ ಸಮರ್ಥ ತಂತ್ರಗಾರಿಕೆ ಎಂಬ ಮೂಲ ನಿಲುವಿಗೆ ಅದು ಬದ್ಧವಾಗಬೇಕು. ಸತ್ಯ ಹೇಳುವುದರಿಂದ ಅನುಕೂಲವಾಗುವುದಿಲ್ಲ ಎಂದು ತಿಳಿದಿದ್ದರೂ, ಅದರಿಂದ ಲಾಭವಿಲ್ಲದಿದ್ದರೂ ಸತ್ಯವನ್ನೇ ಹೇಳುವ ಧೈರ್ಯವನ್ನು ಈ ಸಿದ್ಧಾಂತವು ಹೊಂದಬೇಕು. ಅಲ್ಲಿ ಹೇಳಲಾಗುವ ವಿಷಯಗಳು ಸ್ವತಂತ್ರ ಸಾರ್ವಜನಿಕ ಪರಿಶೀಲನೆಗೆ ಒಳಪಡುವಂತಿರಬೇಕು. ಟ್ರಾಲ್ ಸೇನೆಯು ಪ್ರತಿ ದಿನ ನಮ್ಮನ್ನು ಹಿಂದೂ-ಮುಸ್ಲಿಮ್ ವಿಷಯಗಳತ್ತ ಆಹ್ವಾನಿಸುತ್ತದೆ. ನಮ್ಮ ಪ್ರತಿಕ್ರಿಯೆ ಏನೇ ಇದ್ದರೂ, ಅದಕ್ಕೆ ಮಡಿಕೆ ಕುದಿಯುತ್ತಲೇ ಇರಬೇಕು. ಇಲ್ಲಿರುವ ಸವಾಲು ಎಂದರೆ, ತಮ್ಮನ್ನು ಸಮರ್ಥಿಸಿಕೊಳ್ಳುವ ಬಲವಂತಕ್ಕೆ ಟ್ರಾಲ್ ಪಡೆಗಳು ಒಳಪಡುವ ವೇದಿಕೆಗಳಿಗೆ ಸಮರವನ್ನು ವರ್ಗಾಯಿಸುವುದು. ಬರಹ ರೂಪದಲ್ಲಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಇರುವ ಯಾವುದೇ ಬರಹಗಳ ಬಗ್ಗೆ ಟ್ರಾಲ್ಗಳು ಮತ್ತು ಅವರ ಒಡೆಯರು ಹೆಚ್ಚಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ದೃಶ್ಯಗಳು ಕಾಣುವಂತಹ ಶಕ್ತಿಶಾಲಿ ಭಾಷೆಯಲ್ಲಿ ಸತ್ಯದ ಸೇನೆಯು ಮಾತನಾಡಬೇಕು. ಭಾರತೀಯ ಭಾಷೆಗಳಲ್ಲಿ ಬರಹಗಳನ್ನು ಸೃಷ್ಟಿಸಿದರಷ್ಟೇ ಸಾಲದು, ಅದು ಜನರ ಆಡು ಮಾತುಗಳಲ್ಲಿರಬೇಕು. ಸುಳ್ಳುಗಳ ಬಲೆಯನ್ನು ಒಡೆಯಲು ಹಾಸ್ಯ, ವ್ಯಂಗ್ಯ, ವಿಡಂಬನೆಯಂತಹ ತಂತ್ರಗಾರಿಕೆಗಳನ್ನು ಬಳಸಬೇಕು.
ಅಂಧ ಭಕ್ತರಿಂದ ಸುತ್ತುವರಿದಿರುವ ಸತ್ಯಾನಂತರದ ಈ ಜಗತ್ತಿನಲ್ಲಿ ಸತ್ಯದ ರಾಜಕಾರಣಕ್ಕೆ ಏನಾದರೂ ಅವಕಾಶವಿದೆಯೇ? ಇದೆ ಎಂದು ನನಗನಿಸುತ್ತದೆ. ಸತ್ಯದ ಮೌಲ್ಯವನ್ನು ಅರಿಯಲು ಟ್ರಾಲ್ಗಳ ಅಪಪ್ರಚಾರದ ವಿಧಾನಗಳನ್ನು ನಾವು ಗಮನಿಸಬೇಕು. ಲಖಿಂಪುರ ಖೇರಿಯ ಬಗ್ಗೆ ಮಾಧ್ಯಮಗಳ ನೆರವಿನಿಂದ ಹರಡಲಾದ ಸುಳ್ಳುಗಳು ನೆನಪಿದೆಯೇ? ತಮ್ಮನ್ನು ಸಮರ್ಥಿಸಿಕೊಳ್ಳುವ ಮಟ್ಟಕ್ಕೆ ಟ್ರಾಲ್ಗಳನ್ನು ಇಳಿಸಲು ರೈತರ ಮೇಲೆ ಹರಿಯುತ್ತಿರುವ ವೀಡಿಯೊಗಳು ಮತ್ತು ವಾಸ್ತವಾಂಶಗಳು ಬೇಕಾದವು. ವಾಸ್ತವಾಂಶಗಳನ್ನು ತಿರುಚಲು ಮತ್ತು ತನಗೆ ಅನುಕೂಲವಲ್ಲದ ಅಂಕಿ-ಅಂಶಗಳನ್ನು ಹತ್ತಿಕ್ಕಲು ಸರಕಾರ ಯಾವ ರೀತಿಯಲ್ಲಿ ಪ್ರಯತ್ನಿಸುತ್ತದೆ ಎನ್ನುವುದನ್ನು ಗಮನಿಸಿ. ಅದು ಹಾಗೆ ಯಾಕೆ ಮಾಡುತ್ತದೆಂದರೆ, ಸತ್ಯಕ್ಕೆ ಬೆಲೆಯಿದೆ. ರೈತರು ರಸ್ತೆಗಳಲ್ಲಿರುವ ಭಾವನಾತ್ಮಕ ಸತ್ಯವು ಮೋದಿ ಸರಕಾರವನ್ನು ಒಂದು ವರ್ಷಕ್ಕೂ ಅಧಿಕ ಕಾಲ ಇಕ್ಕಟ್ಟಿಗೆ ಸಿಲುಕಿಸಿತ್ತು.
ಸ್ವಯಂಸೇವಕರ ಸೇನೆ
ಸತ್ಯದ ಸೇನೆಗೆ ಸದಸ್ಯರನ್ನು ಸೇರ್ಪಡೆಗೊಳಿಸುವುದು ಹೇಗೆ? ಸತ್ಯವನ್ನು ಸ್ವೀಕರಿಸುವವರು ನಮ್ಮಲ್ಲಿದ್ದಾರೆಯೇ? ಖಂಡಿವಾಗಿಯೂ, ನಮ್ಮಲ್ಲಿದ್ದಾರೆ. ರವೀಶ್ ಕುಮಾರ್ರ ಸಾಮಾಜಿಕ ಮಾಧ್ಯಮ ಅನುಯಾಯಿಗಳ ಸಂಖ್ಯೆಯನ್ನೇ ನೋಡಿ. ದೊಡ್ಡ ಮಾಧ್ಯಮ ಸಂಸ್ಥೆಗಳು ಪ್ರತಿರೋಧವಿಲ್ಲದೆ ಶರಣಾದಾಗ ಪ್ರತಿ ರಾಜ್ಯ ಮತ್ತು ಜಿಲ್ಲೆಗಳಲ್ಲಿ ಸಣ್ಣ ಸಣ್ಣ ಯೂಟ್ಯೂಬ್ ಚಾನೆಲ್ಗಳು ಹುಟ್ಟಿಕೊಂಡವು. ಅವುಗಳು ದೊಡ್ಡ ಸಂಖ್ಯೆಯ ಅನುಯಾಯಿಗಳನ್ನು ಹೊಂದಿವೆ. ತಮಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಜನರು ಈಗಲೂ ಸತ್ಯವನ್ನೇ ಬಯಸುತ್ತಾರೆ. ರೈತ ಚಳವಳಿಯ ಸಂದರ್ಭದಲ್ಲಿ, ಸತ್ಯಕ್ಕಾಗಿ ಸ್ವಯಂಸೇವಕರಾಗಿ ನೇಮಕಗೊಳ್ಳಲು ಜನರ ದೊಡ್ಡ ಪಡೆಯೇ ಕಾಯುತ್ತಿತ್ತು ಎನ್ನುವುದು ಇದಕ್ಕೆ ಪುರಾವೆಯಾಗಿದೆ.
ಅದಕ್ಕೆ ಸೇನೆ ಎಂಬ ಹೆಸರನ್ನು ಯಾಕೆ ಇಡುವುದು? ಈ ಸೇನಾ ಸಂಬಂಧಿ ಪದವು ಕೆಲವು ಶಾಂತಿಪ್ರಿಯ ಗೆಳೆಯರ ಚಿಂತೆಗೆ ಕಾರಣವಾಗಬಹುದು. ಕೋಮು ಹಿಂಸೆಯ ವಿರುದ್ಧ ಹೋರಾಡಲು ಸ್ವತಃ ಮಹಾತ್ಮಾ ಗಾಂಧಿಯೇ ಶಾಂತಿ ಸೇನೆಯನ್ನು ರಚಿಸಿದ್ದರು ಎನ್ನುವುದನ್ನು ನಾವು ನೆನಪಿಸಬಹುದಾಗಿದೆ. ವಾಸ್ತವ ಏನೆಂದರೆ, ನಾವು ಈಗ ಯುದ್ಧದಲ್ಲಿ ತೊಡಗಿದ್ದೇವೆ; ನಮ್ಮ ದೇಶ ಮತ್ತು ನಾಗರಿಕತೆಯನ್ನು ಉಳಿಸುವುದಕ್ಕಾಗಿ ನಡೆಸುತ್ತಿರುವ ಯುದ್ಧ. ಈ ಪವಿತ್ರ ಯುದ್ಧಕ್ಕಾಗಿ ನಮಗೆ ಸೇನೆಯೊಂದರ ಅಗತ್ಯವಿದೆ.
ಕೃಪೆ: theprint.in