ಗುಣವಾಗದಿದ್ದರೆ ಲಾಕ್‌ಡೌನ್ ಮಾತ್ರೆ!
ಯಾಕೋ ವಿಪರೀತ ಕೆಮ್ಮು. ಪತ್ರಕರ್ತ ಎಂಜಲು ಕಾಸಿಗೆ ಆತಂಕ. ‘‘ಕೊರೋನ ಸ್ಫೋಟ...’’ ಎಂದು ವರದಿ ಮಾಡಿದ, ಇದೀಗ ತನ್ನನ್ನೇ ಕೊರೋನ ಹಿಡಿದುಕೊಂಡಿರಬಹುದೆ? ಎಂದು ಹೆದರಿ, ಹತ್ತಿರದ ವೈದ್ಯರ ಬಳಿಗೆ ಹೋದ. ವೈದ್ಯರು ಸಂಪೂರ್ಣ ಕವಚಗಳನ್ನು ಧರಿಸಿ, ಚಂದ್ರ ಲೋಕ ಪ್ರಯಾಣಕ್ಕೆ ಸಿದ್ಧರಾಗಿರುವ ಗಗನಯಾನಿಯಂತೆ ನಿಂತಿದ್ದರು. ‘‘ಕೊರೋನ ಇದೆಯಾ?’’ ಯಾರಲ್ಲೋ ಕೇಳುತ್ತಿದ್ದರು.
‘‘ಕೊರೋನ ಇಲ್ಲ ಸಾರ್... ಟಿಬಿ ಇದೆ...’’ ಆತ ಹೇಳುತ್ತಿದ್ದ.
‘‘ಟಿಬಿ ಇದ್ರೆ ಪರವಾಗಿಲ್ಲ. ಕೊರೋನ ಲಸಿಕೆ ಹಾಕಿಕೊಂಡಿದ್ದೀಯಾ?’’
‘‘ಇಲ್ಲ ಸಾರ್...ಟಿಬಿಗೇ ಔಷಧಿ ತಗೊಂಡಿಲ್ಲ. ಕೊರೋನಗೆ ಲಸಿಕೆ ಹೇಗೆ ತಗೊಳ್ಳಿ?’’ ಆತ ಉತ್ತರಿಸಿದ.
‘‘ಲಸಿಕೆ ಫ್ರೀಯಾಗಿ ಸಿಗತ್ತೆ. ಎಲ್ಲಿ ಬೇಕಾದರಲ್ಲಿ. ಬೇಗ ಹಾಕಿಸ್ಕೋ...’’
‘‘ಆದ್ರೆ ಟಿಬಿಗೆ ಎಲ್ಲೂ ಫ್ರೀಯಾಗಿ ಔಷಧಿ ಸಿಗ್ತಾ ಇಲ್ಲ ಸಾರ್. ಕೊರೋನ ಲಸಿಕೆ ಇದೆ. ಬೇಕಾದ್ರೆ ಹಾಕ್ತೀವಿ ಅಂತಾರೆ...’’ ಆತ ವಿಷಾದದಿಂದ ಹೇಳುತ್ತಿರುವುದು ಕಾಸಿಗೆ ಕೇಳಿತು.
‘‘ಹಾಕಿ ನೋಡಿ. ಕೊರೋನ ಲಸಿಕೆಯಿಂದ ಟಿಬಿ ವಾಸಿಯಾದ್ರೂ ವಾಸಿಯಾದೀತು. ಸದ್ಯಕ್ಕೆ ಟಿಬಿ ಔಷಧಿ ದುಡ್ಡನ್ನೆಲ್ಲ ಕೊರೋನಕ್ಕೆ ಸುರಿದಿದ್ದಾರೆ. ಆದುದರಿಂದ ಟಿಬಿಗೂ ಕೊರೋನ ಲಸಿಕೇನೇ ಔಷಧಿ...’’ ವೈದ್ಯರು ಹೇಳಿದರು.
‘‘ತುಂಬಾ ಕೆಮ್ಮು. ಬಾಯಲ್ಲಿ ರಕ್ತ ಬರುತ್ತಿದೆ...’’ ಆತ ಮತ್ತೆ ಸಮಸ್ಯೆ ಹೇಳಿಕೊಂಡ. ‘‘ಹಾಗಾದರೆ ನೀವು ಬೂಸ್ಟರ್ ತೆಗೆದುಕೊಳ್ಳಬೇಕಾಗುತ್ತದೆ...’’ ವೈದ್ಯರು ಮತ್ತೆ ಪರಿಹಾರ ಹೇಳಿದರು.
‘‘ಸಾರ್ ಟಿಬಿಗೆ ಹೊಟ್ಟೆತುಂಬಾ ಊಟ ಮಾಡಬೇಕು ಎಂದಿದ್ದಾರೆ. ಆದರೆ ಲಾಕ್‌ಡೌನ್‌ನಿಂದಾಗಿ ಕೆಲಸವೂ ಇಲ್ಲ. ಇರುವ ಊಟವೂ ಇಲ್ಲ...’’
‘‘ಕೊರೋನ ಸ್ಫೋಟ ಆಗಿದೆ. ಪೇಪರ್ ಓದಿಲ್ವಾ ನೀವು...ಪತ್ರಕರ್ತರು ಹೇಳಿದ್ದಾರೆ ಎಂದ ಮೇಲೆ ಆಯಿತು. ಕೊರೋನಕ್ಕೆ ನಾವು ಔಷಧಿ ಕೊಡುವುದೇ ಪತ್ರಕರ್ತರ ಬಳಿ ವಿಚಾರಣೆ ನಡೆಸಿದ ಬಳಿಕ. ಎಲ್ಲಾ ಆಸ್ಪತ್ರೆಗಳಲ್ಲೂ ಕೊರೋನ ತಜ್ಞರಾಗಿ ಪತ್ರಕರ್ತರನ್ನೇ ನೇಮಕ ಮಾಡಲು ಸರಕಾರ ಆದೇಶ ನೀಡಿದೆ. ಕೊರೋನಗೆ ಔಷಧಿ ಕೊಡಬೇಕಾದರೆ ಪತ್ರಿಕೋದ್ಯಮದಲ್ಲಿ ಪದವಿ ಪಡೆಯುವುದು ಅತ್ಯಗತ್ಯ...’’
ಅದನ್ನು ಕೇಳಿ ಕಾಸಿಗೆ ಹೆಮ್ಮೆಯಾಯಿತು. ಕೊನೆಗೂ ಈ ಕೊರೋನದಿಂದಾಗಿ ಪತ್ರಕರ್ತನಾದ ನನಗೂ ಒಂದು ಮರ್ಯಾದೆ ಸಿಕ್ಕಿತು ಎನ್ನುವುದು ಅವನ ಖುಷಿ.
‘‘ಆದರೆ ಊಟಕ್ಕೆ ಏನು ಮಾಡುವುದು?’’ ಟಿಬಿ ರೋಗಿ ಕೇಳಿದ.
‘‘ಊಟಕ್ಕೂ ಲಸಿಕೆಗಳನ್ನೇ ಬಳಸಿ. ಬೆಳಗ್ಗೆ ಒಂದು, ಮಧ್ಯಾಹ್ನ ಒಂದು, ರಾತ್ರಿ ಒಂದು ತೆಗೆದುಕೊಳ್ಳಿ. ಲಸಿಕೆ ನೀಡುವುದರಲ್ಲಿ ಭಾರತ ವಿಶ್ವದಲ್ಲೇ ದಾಖಲೆ ಮಾಡಬೇಕಾಗಿದೆ. ಅದಕ್ಕಾಗಿ ನೀವೆಲ್ಲರೂ ನಿಮ್ಮದೇ ಆದ ಕೊಡುಗೆಗಳನ್ನು ನೀಡಬೇಕು...’’ ವೈದ್ಯರು ಸಲಹೆ ನೀಡಿದರು.
‘‘ಸಾರ್ ನನ್ನಿಂದ ಇತರರಿಗೆ ಟಿಬಿ ರೋಗ ಹರಡಿದರೆ?’’
‘‘ಹರಡಿದರೆ ಏನು ಮಾಡುವುದು? ಗಂಟಲು ಪರೀಕ್ಷೆ ಮಾಡಿ ಲಸಿಕೆ ಕೊಡುವುದು’’ ವೈದ್ಯರು ಪರಿಹಾರ ನೀಡಿದರು.
‘‘ಸಾರ್ ಹೀಗೆ ಆದರೆ ನಾನು ಟಿಬಿಯಿಂದ ಸತ್ತೇ ಹೋಗಬಹುದು’’
‘‘ಟಿಬಿಯಿಂದ ಸತ್ತು ಹೋದರೆ ಪರವಾಗಿಲ್ಲ. ಆದರೆ ಕೊರೋನದಿಂದ ಸಾಯಬಾರದು. ಅಲ್ಲಿ ಕೆಳಗೆ ಗೋಡಾನ್‌ನಲ್ಲಿ ಲಸಿಕೆಗಳನ್ನು ರೇಷನ್‌ನಲ್ಲಿ ತೂಕ ಮಾಡಿ ಕೊಡುತ್ತಿದ್ದಾರೆ. ಒಂದು ಲೀಟರ್ ಲಸಿಕೆಯನ್ನು ತೆಗೆದುಕೊಂಡು ಹೋಗಿ’’ ಸಲಹೆ ನೀಡಿದರು. ಟಿಬಿ ರೋಗಿ ತಲೆಯಾಡಿಸುತ್ತಾ ಅಲ್ಲಿಂದ ತೆರಳಿದ.
ಇದೀಗ ಪತ್ರಕರ್ತ ಎಂಜಲು ಕಾಸಿಯ ಸರದಿ. ‘‘ಸಾರ್ ವಿಪರೀತ ಕೆಮ್ಮು...’’ ಹೇಳಿದ.
‘‘ಪೊಲೀಸ್ ಸ್ಟೇಶನ್‌ಗೆ ಹೋಗಿಲ್ವಾ?’’ ವೈದ್ಯರು ಕೇಳಿದರು.
‘‘ಯಾಕೆ ಸಾರ್?’’ ಕಾಸಿ ಆತಂಕದಿಂದ ಕೇಳಿದ.
‘‘ನಮ್ಮಲ್ಲಿ ಲ್ಯಾಬ್‌ಗಳ ಕೊರತೆಯಿದೆ. ಆದುದರಿಂದ ಕೊರೋನ ಶಂಕಿತರನ್ನು ಪೊಲೀಸ್ ಠಾಣೆಯಲ್ಲಿ ಪೊಲೀಸರೇ ವಿಚಾರಣೆ ನಡೆಸಿ ಇಲ್ಲಿಗೆ ಕಳುಹಿಸಿ ಕೊಡುತ್ತಾರೆ’’
‘‘ಅಂದರೆ...’’
‘‘ರೋಗ ಇಲ್ಲ ಅಂದವರಿಗೆ ಟ್ರೀಟ್‌ಮೆಂಟ್ ಮಾಡಿ, ಅವರಲ್ಲಿ ರೋಗ ಇದೆ ಎಂದು ಹೇಳಿಸಿ, ಬಳಿಕ ಇಲ್ಲಿಗೆ ಕಳುಹಿಸಿ ಕೊಡುವುದು...ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ಬನ್ನಿ’’
ಅದಕ್ಕಿಂತ ಇಲ್ಲೇ ಒಪ್ಪಿಕೊಳ್ಳುವುದು ವಾಸಿ ಎಂದು ಕಾಸಿಗೆ ಅನ್ನಿಸಿತು. ‘‘ಸಾರ್ ನನಗೆ ಕೊರೋನ ಇದೆ ಎಂದು ಒಪ್ಪಿಕೊಂಡಿದ್ದೇನೆ. ದಯವಿಟ್ಟು ನೀವೇ ಮದ್ದುಕೊಂಡಿ’’
‘‘ನೀವೇ ಒಪ್ಪಿಕೊಂಡದ್ದು ಒಳ್ಳೆಯದಾಯಿತು. ನೋಡಿ ಸಿಂಪಲ್. ಮನೆಯಲ್ಲೇ ಇರಿ. ದಿನಕ್ಕೆ ಮೂರು ಹೊತ್ತು ತಣ್ಣೀರಿನಲ್ಲಿ ಕರ್ಫ್ಯೂ ಮಾತ್ರೆಗಳನ್ನು ಕುಡಿಯಿರಿ. ವಾರಾಂತ್ಯದಲ್ಲಿ ಎರಡು ವೀಕೆಂಡ್ ಕರ್ಫ್ಯೂ ಮಾತ್ರೆಗಳನ್ನು ತೆಗೆದುಕೊಳ್ಳಿ. ಅದರಲ್ಲೂ ಗುಣವಾಗದಿದ್ದರೆ ಲಾಕ್‌ಡೌನ್ ಮಾತ್ರೆ ಬರೆದುಕೊಡುತ್ತೇನೆ...ಹೋಗಿ..’’
ಕಾಸಿ ಬದುಕಿದೆಯಾ ಬಡ ಜೀವ ಎಂದು ಕೆಮ್ಮುತ್ತಲೇ ಅಲ್ಲಿಂದ ಪರಾರಿಯಾದ.