varthabharthi


ಜನ ಜನಿತ

‘ಕೇಸರೀಜಿ’ಗಳಿಂದ ನೇತಾಜಿ ಹೈಜಾಕ್

ವಾರ್ತಾ ಭಾರತಿ : 23 Jan, 2022
ನಿಖಿಲ್ ಕೋಲ್ಪೆ

ಹೇಳಿಕೊಳ್ಳಲು ಒಬ್ಬನೇ ಒಬ್ಬ ಕಳಂಕವಿಲ್ಲದ ಸ್ವಾತಂತ್ರ್ಯ ಹೋರಾಟಗಾರನಿಲ್ಲದ ಸಂಘ ಪರಿವಾರವು ತನ್ನ ತತ್ವಕ್ಕೆ ಸಂಪೂರ್ಣ ವಿರುದ್ಧ ಇದ್ದ ಸುಭಾಸ್ ಚಂದ್ರ ಬೋಸ್ ಅವರನ್ನೂ-ವಿವೇಕಾನಂದರು, ಪಟೇಲರಂತೆ- ಹೈಜಾಕ್ ಮಾಡಿರುವ ಕುರಿತು, ಅವರ 125ನೇ ಜನ್ಮದಿನದಂದು ಒಂದೆರಡು ವಿಚಾರಗಳು.

ಪ್ರತೀ ವರ್ಷವೂ ಜನವರಿ 23ರಂದು ಉಳಿದವರಂತೆ ಸಂಘ ಪರಿವಾರವೂ ಬೋಸರ ಜನ್ಮದಿನವನ್ನು ಆಚರಿಸಲು ಆರಂಭಿಸಿದೆ. ಆದರೆ ಇಲ್ಲಿ- ಬೋಸ್ ಮತ್ತು ಸಾವರ್ಕರ್, ಐಎನ್‌ಎ ಮತ್ತು ಆರೆಸ್ಸೆಸ್ ಒಂದೇ ಎಂಬಂತಹ ಕಣ್ಕಟ್ಟನ್ನು ಅದು ಮಾಡುತ್ತಿದೆ. ಸಾವರ್ಕರ್ ಸೂಚನೆಯಂತೆ ಬೋಸ್ ಹಿಟ್ಲರನ ಪಾಳಯದ ಬೆಂಬಲ ಕೋರಿದರು ಮತ್ತು ಸಾವರ್ಕರ್-ಆರೆಸ್ಸೆಸ್ ರಾಷ್ಟ್ರೀಯವಾದವೂ, ಬೋಸ್-ಐಎನ್‌ಎ ರಾಷ್ಟ್ರೀಯವಾದವೂ ಒಂದೇ ಎಂಬ ಅಪ್ಪಟ ಸುಳ್ಳು ಪ್ರಚಾರ ಇದರ ಅಂಗ.

ನೇತಾಜಿ ಎಂದೇ ಜನಪ್ರಿಯರಾದ ಸುಭಾಸ್ ಚಂದ್ರ ಬೋಸ್ ಅವರ ಹೆಸರು ಕೇಳಿದ ಕೂಡಲೇ ನನಗೆ ನೆನಪಾಗುವುದು ನಾವು ಹುಡುಗರಾಗಿದ್ದಾಗ ಸಂಘಪರಿವಾರದ ಅಡ್ಡೆಯಾದ ನಮ್ಮ ಪೇಟೆಯ ಚಿಕ್ಕ ಓಣಿಯ ಮುರುಕಲು ಮನೆಯಲ್ಲಿ ಕೆಂಡದ ಪೆಟ್ಟಿಗೆಯಿಂದ ಇಸ್ತ್ರಿ ಮಾಡುತ್ತಿದ್ದ ತಮಿಳ ಮುದುಕ ರಾಮಸ್ವಾಮಿ. ಯಾಕೆಂದರೆ, ಅವರು ಬೋಸರ ಇಂಡಿಯನ್ ನ್ಯಾಷನಲ್ ಆರ್ಮಿ (ಐಎನ್‌ಎ)ಯಲ್ಲಿ ಸೈನಿಕನಾಗಿ ಬರ್ಮಾದಲ್ಲಿ ಕಾದಾಡಿದವರು. ನಾವು ಆ ಕಾದಾಟದ ಬಗ್ಗೆ ಶಾಲೆಯಲ್ಲಿ ಕಲಿತದ್ದಕ್ಕಿಂತ ಹೆಚ್ಚು ಕಲಿತದ್ದು ಸದಾ ಬೋಸರನ್ನು ಹೊಗಳಿ ಹಾಡುತ್ತಿದ್ದ ಅವರಿಂದಲೇ. ಪೆರಿಯಾರ್ ಅಭಿಮಾನಿಯಾಗಿದ್ದ ಅವರು, ನಾಸ್ತಿಕರಾಗಿದ್ದರು. ಕಾಂಗ್ರೆಸ್ ಮತ್ತು ಆರೆಸ್ಸೆಸ್ ಎಂದರೆ ಸಮಾನವಾಗಿ ಮೂಗುಮುರಿಯುತ್ತಿದ್ದರು.

ರಾಮಸ್ವಾಮಿಯಂತಹ ದಕ್ಷಿಣ ಭಾರತೀಯ, ಶೂದ್ರ, ನಾಸ್ತಿಕನಂತೆಯೇ- ಹಿಂದೂ, ಮುಸ್ಲಿಂ, ಸಿಖ್, ಕ್ರೈಸ್ತ ಎನ್ನದೆ- ಗಂಡು, ಹೆಣ್ಣು ಎನ್ನದೆ- ತೆಂಕು ಬಡಗು, ಮೂಡು, ಪಡು ಎನ್ನದೆ- ಇಡೀ ಭಾರತದಿಂದ ಐಎನ್‌ಎಗೆ ದೇಶಪ್ರೇಮಿಗಳನ್ನು ಸೆಳೆದಿದ್ದ ಸುಭಾಸ್ ಚಂದ್ರ ಬೋಸರನ್ನು ತಮ್ಮವ ಎಂದು ಹೇಳಿಕೊಳ್ಳಲು- ಮೇಲ್ಜಾತಿ ಹಿಡಿತದ, ಬೇಗಡೆ ಹಿಂದುತ್ವದ, ಬೇರೆ ಧರ್ಮದವರನ್ನು ದ್ವೇಷ ಮಾಡುವ, ಮಹಿಳೆಯರನ್ನು ಯಾವುದೇ ಸ್ವಾತಂತ್ರ್ಯ ಇಲ್ಲದ ‘ಸ್ವಯಂಸೇವಿಕೆ’ಯರನ್ನಾಗಿ ಇರಿಸಿರುವ ಸಂಘ ಪರಿವಾರವು ಏಕೆ ಮತ್ತು ಹೇಗೆ ತಮ್ಮವನನ್ನಾಗಿ ಮಾಡುತ್ತಿದೆ ಎಂಬುದನ್ನು ಮಾತ್ರ ಇಲ್ಲಿ ಚುಟುಕಾಗಿ ನೋಡೋಣ.

ಹೇಳಿಕೊಳ್ಳಲು ಒಬ್ಬ ಸಾಚಾ ಸ್ವಾತಂತ್ರ್ಯ ಹೋರಾಟಗಾರನಾಗಲೀ, ತಮ್ಮ ಮೇಲುಕೀಳಿನ ವಿಚಾರಗಳಿಗೆ ಸರಿಹೊಂದುವ ಒಬ್ಬ ಸಮಾಜ ಸುಧಾರಕನಾಗಲೀ, ಆಧ್ಯಾತ್ಮಿಕ ಚಿಂತಕನಾಗಲೀ, ಕರಟ ಜಗಿಯುವ ಕಪಟಿಗಳ ಹೊರತು ತಿರುಳು ಅರಿತ ಒಬ್ಬ ಸಾಚಾ ಧಾರ್ಮಿಕ ನಾಯಕನಾಗಲೀ ಇಲ್ಲದ ಸಂಘ ಪರಿವಾರವು- ಬೇರೆಯವರ ಸಾಧನೆಗಳನ್ನು ತಮ್ಮದನ್ನಾಗಿ ಮಾಡಿಕೊಳ್ಳುವ, ತಮ್ಮನ್ನು ವಿರೋಧಿಸುವವರನ್ನೇ ತಮ್ಮವರೆಂದು ಬಿಂಬಿಸುವ ಸುಳ್ಳಿನ ಕಲೆಯನ್ನು ಒಂದು ಲಲಿತ ಕಲೆಯ ಮಟ್ಟಕ್ಕೆ ಏರಿಸಿದೆ. ಕರ್ಮಠ ಹಿಂದುತ್ವವನ್ನು ಗೇಲಿ ಮಾಡಿದ ವಿವೇಕಾನಂದರು, ಆರೆಸ್ಸೆಸನ್ನು ಕಾನೂನುಬಾಹಿರಗೊಳಿಸಿದ್ದ ವಲ್ಲಭಬಾಯಿ ಪಟೇಲರಂತಹವರ ಸಾಲಿಗೆ ಸುಭಾಸ್ ಚಂದ್ರ ಬೋಸರೂ ಸೇರಿರುವುದರಲ್ಲಿ ಆಚ್ಚರಿ ಏನಿಲ್ಲ. ಇದೊಂದು ಬಹಳವಾಗಿ ಯೋಚಿಸಿ, ಮೆಲ್ಲಮೆಲ್ಲನೆ ಜಾರಿಗೊಳಿಸಲಾಗುತ್ತಿರುವ ಒಂದು ಹುನ್ನಾರ.

ಪ್ರತೀ ವರ್ಷವೂ ಜನವರಿ 23ರಂದು ಉಳಿದವರಂತೆ ಸಂಘ ಪರಿವಾರವೂ ಬೋಸರ ಜನ್ಮದಿನವನ್ನು ಆಚರಿಸಲು ಆರಂಭಿಸಿದೆ. ಆದರೆ ಇಲ್ಲಿ- ಬೋಸ್ ಮತ್ತು ಸಾವರ್ಕರ್, ಐಎನ್‌ಎ ಮತ್ತು ಆರೆಸ್ಸೆಸ್ ಒಂದೇ ಎಂಬಂತಹ ಕಣ್ಕಟ್ಟನ್ನು ಅದು ಮಾಡುತ್ತಿದೆ. ಸಾವರ್ಕರ್ ಸೂಚನೆಯಂತೆ ಬೋಸ್ ಹಿಟ್ಲರನ ಪಾಳಯದ ಬೆಂಬಲ ಕೋರಿದರು ಮತ್ತು ಸಾವರ್ಕರ್-ಆರೆಸ್ಸೆಸ್ ರಾಷ್ಟ್ರೀಯವಾದವೂ, ಬೋಸ್-ಐಎನ್‌ಎ ರಾಷ್ಟ್ರೀಯವಾದವೂ ಒಂದೇ ಎಂಬ ಅಪ್ಪಟ ಸುಳ್ಳು ಪ್ರಚಾರ ಇದರ ಅಂಗ.

ಬೋಸ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸಮಾಜವಾದಿ ಗುಂಪಿನಲ್ಲಿ ಇದ್ದವರು ಮತ್ತು 1939ರ ತ್ರಿಪುರ ಅಧಿವೇಶನದ ಅಧ್ಯಕ್ಷರು ಎಂದೂ, ಸಮಾಜವಾದ, ಜಾತ್ಯತೀತತೆ, ಮತ್ತಿತರ ವಿಷಯಗಳ ಬಗ್ಗೆ ಅವರು ಮತ್ತು ನೆಹರೂ ಆವರ ಅಭಿಪ್ರಾಯಗಳು ಒಂದೇ ರೀತಿ ಇದ್ದವೆಂದೂ ಇತಿಹಾಸ ತಿಳಿದವರಿಗೆ ಗೊತ್ತಿದೆ. ಅವರು ಯಾವತ್ತೂ ಸಂಘ ಪರಿವಾರದ ಕತ ಬಲಪಂಥೀಯರಾಗಿರಲಿಲ್ಲ. ಬೋಸ್ ಅವರು ನಂತರ ಕಾಂಗ್ರೆಸ್ ಬಿಟ್ಟರೆಂಬುದನ್ನೇ ಬಂಡವಾಳ ಮಾಡಿಕೊಂಡು ಅವರು ತಮ್ಮವರೆನ್ನುವ ಸಂಘಿಗಳು- ಸಮಾಜವಾದಿಗಳು ಮತ್ತು ಕಮ್ಯುನಿಸ್ಟರೂ ಮೊದಲಿಗೆ ಕಾಂಗ್ರೆಸ್‌ನಲ್ಲಿಯೇ ಇದ್ದು, ನಂತರ ಬೇರೆಯಾದವರು ಎಂಬುದನ್ನು ಜಾಣತನದಿಂದ ಮರೆಯುತ್ತಾರೆ. ಆವರ ಭಿನ್ನಾಭಿಪ್ರಾಯ ಇದ್ದದ್ದು ವಿಚಾರಗಳ ಬಗೆಗಲ್ಲ; ವಿಧಾನದ ಬಗ್ಗೆ. ಗಾಂಧಿ ಮತ್ತು ಕಾಂಗ್ರೆಸ್‌ನ ಅಹಿಂಸಾತ್ಮಕ ಹೋರಾಟ ಅವರಿಗೆ ಇಷ್ಟವಿರಲಿಲ್ಲ. ಒಂದೇ ವಿಧಾನ ಏಕೆ, ಎಲ್ಲಾ ವಿಧಾನಗಳು ಇರಲಿ ಎಂಬುದು ಅವರ ನಿಲುವು. ಈ ವಿಷಯದಲ್ಲಿ ಬೋಸರಿಗೆ ಗಾಂಧಿಯವರ ಜೊತೆ ಸಹಮತ ಇರಲಿಲ್ಲ. ಆದರೆ, ಗಾಂಧಿಯವರನ್ನೇ ಕೊಂದು, ಇದೀಗ ಅವರನ್ನು ಸ್ವಚ್ಛತಾ ಅಭಿಯಾನದ ಕನ್ನಡಕಕ್ಕೆ ಮಿತಿಗೊಳಿಸಿದವರು ಇದನ್ನೇ ನೆಪ ಮಾಡಿದ್ದಾರೆ. 1939ರಲ್ಲಿ ಚಿಕ್ಕ ಅವಧಿಯಲ್ಲಿ ಬಹಳ ಮತಭೇದ ಹೊಂದಿದ್ದ ಗಾಂಧಿ, ಬೋಸ್ 1942ರ ಚಳವಳಿಯ ವೇಳೆಗೆ ವಿಚಾರಗಳಲ್ಲಿ ತುಂಬಾ ಹತ್ತಿರ ಬಂದಿದ್ದರು. ಆ ಹೊತ್ತಿನ ಇಬ್ಬರ ಹೇಳಿಕೆಗಳೂ ಒಬ್ಬರು ಇನ್ನೊಬ್ಬರ ಬಗ್ಗೆ ಹೊಂದಿದ್ದ ಮೇರೆ ಮೀರಿದ ಗೌರವವನ್ನು ತೋರಿಸುತ್ತವೆ.

ಬೋಸ್ ಅವರ ಸೆರೆ ಮತ್ತು ನಾಟಕೀಯ ಪರಾರಿಗೆ ಮೊದಲು 1940ರ ಜೂನ್‌ನಲ್ಲಿ ಇಬ್ಬರ ನಡುವಿನ ಕೊನೆಯ ಮತ್ತು ಉದ್ದವಾದ ನೇರಾನೇರ ಚರ್ಚೆಯಲ್ಲಿ ಅಸಹಕಾರ ಚಳವಳಿಯನ್ನು ಆರಂಭಿಸುವಂತೆ ಬೋಸ್ ಬಲವಾದ ಒತ್ತಾಯ ಮಾಡಿದ್ದರು. ಕಾಲ ಕೂಡಿಬಂದಿಲ್ಲ ಎಂದು ಗಾಂಧಿ ಹೇಳಿದ್ದರು. ಕೊನೆಗೆ ಅವರು ಬೋಸ್‌ರಿಗೆ ಹೇಳಿದ್ದೆಂದರೆ, ಸ್ವಾತಂತ್ರ್ಯ ಪಡೆಯುವಲ್ಲಿ ಯಶಸ್ವಿಯಾದರೆ, ‘ನನ್ನ ಬಂಡುಕೋರ ಮಗ’ ಪಡೆಯುವ ಮೊದಲ ಅಭಿನಂದನಾ ಟೆಲಿಗ್ರಾಂ ತನ್ನದಾಗಿರುತ್ತದೆ ಎಂದು. ದಾರಿ ಬೇರೆಯಾಗಿದ್ದರೂ, ಇಬ್ಬರು ಅಪ್ಪಟ ದೇಶ ಪ್ರೇಮಿಗಳ ಎದೆಯ ಸಂಬಂಧ ಬೇಗಡೆ ದೇಶಪ್ರೇಮಿಗಳಿಗೆ ಎಂದಿಗಾದರೂ ಅರಗಬಹುದೆ?

ಈ ಸಂದರ್ಭದಲ್ಲಿ ಬೋಸ್ ಮಾತುಕತೆ ನಡೆಸಿದ ಇಬ್ಬರು ನಾಯಕರೆಂದರೆ ಮುಸ್ಲಿಂ ಲೀಗ್ ನಾಯಕ ಮುಹಮ್ಮದ್ ಅಲಿ ಜಿನ್ನಾ ಮತ್ತು ಹಿಂದೂ ಮಹಾಸಭಾ ಅಧ್ಯಕ್ಷ ಸಾವರ್ಕರ್. ಒಂದು ವೇಳೆ ಎಲ್ಲರೂ ಸೇರಿ ಬ್ರಿಟಿಷರ ವಿರುದ್ಧ ಒಗ್ಗಟ್ಟಿನ ಹೋರಾಟ ಮಾಡಿ ಗೆದ್ದರೆ, ಜಿನ್ನಾ ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗಬೇಕು ಎಂದು ಬೋಸ್ ಸೂಚಿಸಿದ್ದರು. ಬರೀ ಜಿನ್ನಾರನ್ನು ಹೊಗಳಿದ್ದಕ್ಕೇ ಬಿಜೆಪಿ ಕಟ್ಟಿ ಬೆಳೆಸಿದ ಹಿರಿಯ ನಾಯಕ ಎಲ್.ಕೆ. ಅಡ್ವಾಣಿಯವರನ್ನು ಮೂಲೆಗುಂಪು ಮಾಡಿ ಮತ್ತೆಮತ್ತೆ ಅವಮಾನಿಸುತ್ತಿರುವ ಸಂಘಿಗಳು- ಬೋಸರಿಗೆ ದೇಶ ಮತ್ತು ಧರ್ಮದ್ರೋಹಿ ಪಟ್ಟಕಟ್ಟ ಬೇಕಿತ್ತಲ್ಲವೆ?

ಸಾವರ್ಕರ್ ಜೊತೆಗಿನ ಮಾತುಕತೆಯಿಂದ ಬೋಸ್ ತೀರಾ ನಿರಾಸೆಗೊಂಡಿದ್ದರು. ಭಾರತೀಯರು ಬ್ರಿಟಿಷರ ಸೇನೆ ಸೇರಿ ತರಬೇತಿ ಪಡೆಯಬೇಕು ಎಂದು ಸಾವರ್ಕರ್ ಬಯಸಿದ್ದರೆ, ಬ್ರಿಟಿಷ್ ಸೇನೆಯ ಗುಲಾಮಿ ಮಾಡುತ್ತಿರುವ ಬಹುಸಂಖ್ಯೆಯ ಸೈನಿಕರು ಬಂಡೇಳುವಂತೆ ಮಾಡಬೇಕು ಎಂಬುದು ಬೋಸರ ನಿಲುವಾಗಿತ್ತು.

ಆರೆಸ್ಸೆಸ್‌ನ ವಿಚಾರ, ಸಂಘಟನೆ, ತರಬೇತಿ, ಲಾಠಿ, ಸಮವಸ್ತ್ರ, ಸೆಲ್ಯೂಟ್ ಎಲ್ಲವೂ ಆರ್ಯನ್ ಶ್ರೇಷ್ಠತೆಯ ಹಿಟ್ಲರನ ನಾಝಿಗಳಿಂದ ಕದ್ದದ್ದು ಎಂಬುದರ ಬಗ್ಗೆ ಅದರ ಸ್ಥಾಪಕ ಕೇಶವ ಬಲಿರಾಮ ಹೆಡಗೇವಾರ್ ಮತ್ತು ಮಾಧವ ಸದಾಶಿವ ಗೋಳ್ವಾಲ್ಕರ್ ಅವರ ಪುಸ್ತಕಗಳನ್ನು ಓದಿದವರಿಗೆ ಯಾವ ಸಂಶಯವೂ ಉಳಿಯುವುದಿಲ್ಲ. ಅದರ ಶಾಖೆಗಳಲ್ಲಿ ಬಳಸುವ ಕಬ್ಬಿಣದ ಧ್ವಜಕಂಬದ ಅಡಿಗಟ್ಟು ಕೂಡಾ ನಾಝಿ ಸ್ವಸ್ತಿಕ. ಹೀಗಾಗಿ ಬ್ರಿಟಿಷರಿಗೆ ಎದುರಾಗಿ ಜರ್ಮನಿ, ಇಟಲಿ, ಜಪಾನ್ ಇದ್ದ ಹಿಟ್ಲರ್‌ನ ಕೂಟ ಸೇರಲು ಬೋಸ್ ನಿರ್ಧರಿಸಿದ್ದನ್ನು ಈಗ- ಅವರು ತಮ್ಮವರು ಎಂದು ಬಿಂಬಿಸಲು ಬಳಸಲಾಗುತ್ತಿದೆ.

1943ರ ಅಕ್ಟೋಬರ್ 21ರಂದು ಬೋಸ್ ಅವರು ಸಿಂಗಾಪುರದಲ್ಲಿ ಇಂಡಿಯನ್ ನ್ಯಾಷನಲ್ ಆರ್ಮಿ (ಐಎನ್‌ಎ) ರಕ್ಷಣೆಯಲ್ಲಿ ದೇಶತೊರೆದ ತಾತ್ಕಾಲಿಕ ಭಾರತೀಯ ಸರಕಾರ ಸ್ಥಾಪಿಸಿದ ಹೊತ್ತಿಗೆ ಇಲ್ಲಿ ಭಾರತದಲ್ಲಿ ಈ ಮರಿ ನಾಝಿಗಳು ಏನು ಮಾಡುತ್ತಿದ್ದರು ಗೊತ್ತೆ? ಹಿಂದೂ ರಾಷ್ಟ್ರೀಯವಾದಿಗಳು ಬ್ರಿಟಿಷರನ್ನು ಬೆಂಬಲಿಸಬೇಕೆಂದೂ, ಅವರ ಯುದ್ಧ ಯತ್ನಗಳಿಗೆ ಅಡಚಣೆಯಾಗುವ ಯಾವುದೇ ಚಳವಳಿ ನಡೆಸಬಾರದೆಂದೂ ಹಿಂದೂ ರಾಷ್ಟ್ರ ಪ್ರತಿಪಾದಕ ಸಾವರ್ಕರ್ ಕರೆಕೊಡುತ್ತಿದ್ದರು. ಅಲ್ಲಿ ಬೋಸ್ ಅವರು ದೇಶದ ಸ್ವಾತಂತ್ರ್ಯ ಹೋರಾಟದ ಸಂಘಟನೆಗಾಗಿ ದೇಶದಿಂದ ದೇಶಕ್ಕೆ ಅಲೆದಾಡುತ್ತಾ, ಪರದೇಶಗಳಲ್ಲಿ ಭಾರತದ ಬಾವುಟ ಅರಳಿಸುತ್ತಾ, ವಿಮಾನ ಅವಗಢದಲ್ಲಿ ಜೀವ ಕೊಟ್ಪರೆ, ಇಲ್ಲೊಬ್ಬರು ತನ್ನನ್ನು ಮಾಫಿ ಮಾಡಿ ಎಂದು ಬ್ರಿಟಿಷರಲ್ಲಿ ಭಿಕ್ಷೆ ಬೇಡುತ್ತಿದ್ದರು.

ದೇಶದ ಎಲ್ಲಾ ಜನರಲ್ಲಿ ಧಾರ್ಮಿಕ ಸಾಮರಸ್ಯ, ನಿಸ್ವಾರ್ಥ ಸೇವೆಯ ಮನಸ್ಸು ಬೆಳೆಸಲು ಹೆಣಗುತ್ತಿದ್ದ ದೇಶಪ್ರೇಮಿ ಬೋಸರು ಮತ್ತು ಐಎನ್‌ಎ ಎಲ್ಲಿ? ಜಾತಿ, ಧರ್ಮ ಮೇಲುಕೀಳಿನ ಮೂಲಕ ಜನರನ್ನು ಒಡೆಯುವ ಭೂಪಟಪ್ರೇಮಿ ಸಾವರ್ಕರ್ ಮತ್ತು ಆರೆಸ್ಸೆಸ್ ಎಲ್ಲಿ? ಜನವರಿ 30, 1947ರಂದು ಗೋಡ್ಸೆ ಗಾಂಧಿಯವರನ್ನು ಗುಂಡು ಹಾರಿಸಿ ಕೊಲ್ಲುವುದಕ್ಕೆ ಒಂದು ವಾರ ಮೊದಲು: ಜನವರಿ 23ರಂದು ಬೋಸ್ ಹುಟ್ಟಿದ ದಿನವನ್ನು ನೆನಪಿಸಿಕೊಂಡು ಅವರು ಹೇಳಿದ್ದು: ‘‘ಸುಭಾಸ್‌ಗೆ ಪ್ರಾಂತೀಯತೆಯಾಗಲೀ, ಧಾರ್ಮಿಕ ತಾರತಮ್ಯವಾಗಲೀ ಗೊತ್ತಿರಲಿಲ್ಲ. ಅವರ ವೀರ ಸೇನೆಯ ಪುರುಷರು ಮತ್ತು ಮಹಿಳೆಯರು ಯಾವುದೇ ಭೇದವಿಲ್ಲದೆ ಇಡೀ ದೇಶದಿಂದ ಬಂದರು. ಅವರು ಪಡೆದಂತಹ ಪ್ರೀತಿ ಮತ್ತು ನಿಷ್ಠೆಯನ್ನು ಹುಟ್ಟಿಸಲು ಕೆಲವು ಜನರಿಗೆ ಮಾತ್ರ ಸಾಧ್ಯವಿತ್ತು.’’

ಕೊನೆಗೂ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ 1947ರ ಆಗಸ್ಟ್ 15ರಂದು ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಕೆಂಪುಕೋಟೆಯಿಂದ ಮಾಡಿದ ಭಾಷಣದಲ್ಲಿ ಇಬ್ಬರೇ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಹೆಸರೆತ್ತಿದ್ದರು. ಒಬ್ಬರು ಸಹಜವಾಗಿಯೇ ಮಹಾತ್ಮಾ ಗಾಂಧಿಯಾದರೆ, ಇನ್ನೊಬ್ಬರು ಗಾಂಧಿಯವರನ್ನು ಮೊತ್ತ ಮೊದಲ ಬಾರಿಗೆ ‘ಫಾದರ್ ಆಫ್ ದಿ ನೇಶನ್’, ‘ರಾಷ್ಟ್ರಪಿತ’ ಎಂದು ಕರೆದ ಸುಭಾಸ್ ಚಂದ್ರ ಬೋಸ್. ಅಂತಹ ಬೋಸ್ ಅವರನ್ನು ತಮ್ಮವರು ಎನ್ನುವುದು ಬಿಡಿ, ಅವರ ಹೆಸರೆತ್ತುವ ಯೋಗ್ಯತೆಯೂ ಗಾಂಧಿ ಹಂತಕರಿಗೆ, ಆ ಕೊಲೆಯ ರೂವಾರಿಗಳಿಗೆ ಮತ್ತು ಸ್ವಾತಂತ್ರ್ಯ ಹೋರಾಟಕ್ಕಾಗಿ ಕಿರುಬೆರಳನ್ನೂ ಎತ್ತದೆ, ಬ್ರಿಟಿಷರ ಕಾಲುತೊಳೆದು ಅಧಿಕಾರ, ಪಿಂಚಣಿ, ಸವವತ್ತು ಅನುಭವಿಸಿದವರ ಸಂಘಟನೆಗಾಗಲೀ ಅದರ ಪರಿವಾರಕ್ಕಾಗಲೀ ಇಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)