varthabharthi


ವಾರ್ತಾಭಾರತಿ 19ನೇ ವಾರ್ಷಿಕ ವಿಶೇಷಾಂಕ

ನಿಮಗೆ ತಲುಪುತ್ತಿರುವುದು ಸುಳ್ಳು ಸುದ್ದಿ ಎಂದು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ: ಇಸ್ಮತ್ ಆರಾ

ವಾರ್ತಾ ಭಾರತಿ : 23 Jan, 2022
ಸಂದರ್ಶನ : ಫಾತಿಮಾ ಯಹ್ಯಾ ಅಹ್ಮದ್

ಇಸ್ಮತ್ ಆರಾ thewire.in ವೆಬ್ ತಾಣಕ್ಕೆ ಉತ್ತರ ಪ್ರದೇಶದ ವಿಶೇಷ ವರದಿಗಳನ್ನು ಮಾಡುತ್ತಿರುವ ಯುವ ಪತ್ರಕರ್ತೆ. ಈ ಹಿಂದೆ ದಿ ಹಿಂದೂ, ನ್ಯೂಸ್ ಲಾಂಡ್ರಿ, ಬಿಬಿಸಿ ಹಿಂದಿ, ಫಸ್ಟ್ ಪೋಸ್ಟ್, ನ್ಯೂಸ್ 18, ದಿ ಕ್ವಿಂಟ್, ಹಫ್ ಪೋಸ್ಟ್ ಗಳಲ್ಲೂ ಇವರ ವರದಿ, ಲೇಖನಗಳು ಪ್ರಕಟವಾಗಿವೆ. ದೇಶವನ್ನೇ ಬೆಚ್ಚಿ ಬೀಳಿಸಿದ ಉತ್ತರ ಪ್ರದೇಶದ ಹಾಥರಸ್ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಅಲ್ಲಿನ ಪೊಲೀಸರು ನಿರ್ವಹಿಸಿದ ರೀತಿ ಎಲ್ಲರಿಗೂ ಆಘಾತ ತಂದಿತ್ತು. ಆ ದಲಿತ ಯುವತಿಯ ಮೇಲೆ ಅತ್ಯಾಚಾರ ನಡೆದೇ ಇಲ್ಲ ಎಂದು ಬಿಟ್ಟಿದ್ದರು ಯುಪಿ ಪೊಲೀಸರು. ಆದರೆ ಸಂತ್ರಸ್ತೆ ಸಾಯುವ ಮುನ್ನ ನೀಡಿದ್ದ ಹೇಳಿಕೆಯಿದ್ದ ವೈದ್ಯಕೀಯ ವರದಿಯ ಬೆನ್ನು ಬಿದ್ದು ಪಡೆದ ಇಸ್ಮತ್ ಆಕೆಯ ಮೇಲೆ ಅತ್ಯಾಚಾರ ಆಗಿತ್ತು, ಪೊಲೀಸರು ಸುಳ್ಳು ಹೇಳುತ್ತಿದ್ದಾರೆ ಎಂಬ ಕಟು ಸತ್ಯವನ್ನು ಬಯಲಿಗೆಳೆದರು. ಈ ವರದಿಯ ಆಧಾರದಲ್ಲಿ ಕೊನೆಗೆ ಸಿಬಿಐ ಕೂಡ ಉತ್ತರ ಪ್ರದೇಶ ಪೊಲೀಸರು ತಪ್ಪು ಮಾಡಿದ್ದಾರೆ, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು ಎಂದು ಚಾರ್ಜ್ ಶೀಟ್ ಸಲ್ಲಿಸಿದರು. ಈ ವಿಶೇಷ ತನಿಖಾ ವರದಿಗಾಗಿ ಈ ಸಾಲಿನ ಲಾಡ್ಲಿ ಅವಾರ್ಡ್ ನೀಡಿ ಇಸ್ಮತ್ ಆರಾ ಅವರನ್ನು ಪುರಸ್ಕರಿಸಲಾಗಿದೆ. ಹಾಥರಸ್ ತನಿಖಾ ವರದಿ, ದ್ವೇಷ ಅಪರಾಧ ವರದಿ ಮಾಡುವಾಗ ಎದುರಿಸುವ ಸವಾಲುಗಳು ಇತ್ಯಾದಿಗಳ ಬಗ್ಗೆ ಇಲ್ಲಿ ಇಸ್ಮತ್ ‘ವಾರ್ತಾಭಾರತಿ’ ಜೊತೆ ಮಾತಾಡಿದ್ದಾರೆ.

ಇಸ್ಮತ್ ಆರಾ

"ನಾನಿನ್ನೂ ವಿದ್ಯಾರ್ಥಿಯಾಗಿರುವಾಗಲೇ ಪತ್ರಿಕೋದ್ಯಮಕ್ಕೆ ಬಂದೆ. ಮಾಧ್ಯಮ ಕ್ಷೇತ್ರದಲ್ಲಿ ಪ್ರಾತಿನಿಧ್ಯಕ್ಕಾಗಿ ದುರ್ಬಲ ಸಮುದಾಯಗಳ ಹೆಚ್ಚೆಚ್ಚು ಧ್ವನಿಗಳು ಬರಬೇಕು ಎಂದು ನಾನು ಬಲವಾಗಿ ನಂಬಿದ್ದೆ. ದಲಿತರು, ಕ್ರೈಸ್ತರು ಹಾಗೂ ಮುಸ್ಲಿಮರು ಈ ಕ್ಷೇತ್ರದಲ್ಲಿ ಇದ್ದಾಗ ಮಾತ್ರ ಈ ಸಮುದಾಯಗಳ ವಿರುದ್ಧ ನಡೆಯುವ ಅನ್ಯಾಯ ವರದಿಯಾಗುತ್ತವೆ. ಹಾಗಾಗಿ ನನಗೆ ನನ್ನ ಆದ್ಯತೆ ಸ್ಪಷ್ಟವಿದೆ. ಸ್ಥಳಕ್ಕೆ ಹೋಗಿ ವರದಿ ಮಾಡುವುದು ಮತ್ತು ಜನಸಾಮಾನ್ಯರ ಸಮಸ್ಯೆಗಳಿಂದ ಗಮನ ಬೇರೆಡೆ ಹೋಗದಂತೆ ನಿರಂತರ ನೋಡಿಕೊಳ್ಳುವುದು ಮಾತ್ರ ನನ್ನ ಎದುರಿರುವ ಸವಾಲು."

► ‘ದಿ ವೈರ್’ಗೆ ಸೇರುವ ಮುನ್ನ ನೀವು ಕೆಲವು ಮುಖ್ಯವಾಹಿನಿಯ, ಖ್ಯಾತ ಮಾಧ್ಯಮಗಳಿಗಾಗಿ ವರದಿಗಾರಿಕೆ ಮಾಡಿದ್ದೀರಿ. ಆ ಕೆಲಸಕ್ಕೂ ಈಗಿನ ಅನುಭವಕ್ಕೂ ಏನು ವ್ಯತ್ಯಾಸ?

- ಇದು ನಾವು ಯಾವುದನ್ನು ಮುಖ್ಯವಾಹಿನಿ ಎಂದು ಪರಿಗಣಿಸುತ್ತೇವೆ ಎಂಬುದನ್ನು ಅವಲಂಬಿಸಿದೆ. ನಮ್ಮಲ್ಲಿ ಹೆಚ್ಚಿನವರು ಮುಖ್ಯವಾಹಿನಿ ಮಾಧ್ಯಮಗಳನ್ನು ಟೀಕಿಸುತ್ತೇವೆ. ಆದರೆ ‘ದಿ ವೈರ್’ ಮತ್ತು ಇತರ ಹಲವು ಹೊಸ ವೆಬ್ ಸೈಟ್‌ಗಳು ದೇಶದಲ್ಲಿ ಪತ್ರಿಕೋದ್ಯಮಕ್ಕೆ ಹೊಸ ಚೈತನ್ಯ ತುಂಬುತ್ತಿರುವುದನ್ನು
ಪ್ರೋತ್ಸಾಹಿಸಲು ಮರೆಯುತ್ತೇವೆ. ಈ ಹಿಂದೆ ನಾನು ದಿ ಹಿಂದೂ, ಬಿಬಿಸಿ ಹಿಂದಿ ಹಾಗೂ ನ್ಯೂಸ್ 18 ಸಹಿತ ಇತರ ಕೆಲವು ಮಾಧ್ಯಮಗಳಲ್ಲಿ ಬರೆದಿದ್ದೇನೆ. ಪ್ರತಿಯೊಂದರಲ್ಲೂ ವಿಭಿನ್ನ ಕಲಿಕಾ ಅನುಭವ ನನಗೆ ಸಿಕ್ಕಿದೆ.

► ಭಾರತದಲ್ಲಿ ಪತ್ರಿಕಾ ಸ್ವಾತಂತ್ರದ ಮೇಲೆಯೇ ದಾಳಿ ನಡೆಯುತ್ತಿದ್ದರೂ ಮಾಧ್ಯಮದ ದೊಡ್ಡ ಭಾಗ ಸರಕಾರದ ಪ್ರಚಾರ ಯಂತ್ರದ ಹಾಗೆ ಕೆಲಸ ಮಾಡುತ್ತಿದೆ. ನೀ ವು ಪತ್ರಕರ್ತೆಯಾಗಿ ಇಂತಹ ಒತ್ತಡಗಳನ್ನು ಹೇಗೆ ಎದುರಿಸುತ್ತೀರಿ?

- ಭಾರತದಲ್ಲಿ ಪತ್ರಿಕೋದ್ಯಮದ ಸ್ಥಿತಿಗತಿ ಈಗ ಅಧೋಗತಿಗೆ ಹೋಗಿದೆ ಎಂಬುದು ನಿಜ. ಸರಕಾರದ ಪ್ರಚಾರ ವಿಭಾಗದಂತೆ ವತಿರ್ಸುತ್ತಿರುವ ನ್ಯೂಸ್ ಚಾನೆಲ್‌ಗಳು ಕ್ರೈಸ್ತರು, ದಲಿತರು ಹಾಗೂ ಮುಸ್ಲಿಮರಂತಹ ದಮನಿತ ಸಮುದಾಯಗಳ ವಿರುದ್ಧ ದ್ವೇಷ ಹರಡುತ್ತಾ ತಾವು ನಿಜವಾಗಿ ಏನು ಮಾ ಡಬೇಕೋ ಅದರ ತದ್ವಿರುದ್ಧವಾಗಿ ವರ್ತಿಸುತ್ತಿವೆ. ನಾನಿನ್ನೂ ವಿದ್ಯಾರ್ಥಿಯಾಗಿರುವಾಗಲೇ ಪತ್ರಿಕೋದ್ಯಮಕ್ಕೆ ಬಂದೆ. ಮಾಧ್ಯಮ ಕ್ಷೇತ್ರದಲ್ಲಿ ಪ್ರಾತಿನಿಧ್ಯಕ್ಕಾಗಿ ದುರ್ಬಲ ಸಮುದಾಯಗಳ ಹೆಚ್ಚೆಚ್ಚು ಧ್ವನಿಗಳು ಬರಬೇಕು ಎಂದು ನಾನು ಬಲವಾಗಿ ನಂಬಿದ್ದೆ. ದಲಿತರು, ಕ್ರೈಸ್ತರು ಹಾಗೂ ಮುಸ್ಲಿಮರು ಈ ಕ್ಷೇತ್ರದಲ್ಲಿ ಇದ್ದಾಗ ವಾತ್ರ ಈ ಸಮುದಾಯಗಳ ವಿರುದ್ಧ ನಡೆಯುವ ಅನ್ಯಾಯ ವರದಿಯಾಗುತ್ತವೆ. ಹಾಗಾಗಿ ನನಗೆ ನನ್ನ ಆದ್ಯತೆ ಸ್ಪಷ್ಟವಿದೆ. ಸ್ಥಳಕ್ಕೆ ಹೋಗಿ ವರದಿ ಮಾಡುವುದು ಮತ್ತು ಜನಸಾವಾನ್ಯರ ಸಮಸ್ಯೆಗಳಿಂದ ಗಮನ ಬೇರೆಡೆ ಹೋಗದಂತೆ ನಿರಂತರ ನೋಡಿಕೊಳ್ಳುವುದು ಮಾತ್ರ ನನ್ನ ಎದುರಿರುವ ಸವಾಲು.


► ಮುಸ್ಲಿಮ್ ಹೆಸರಿನ ಮಹಿಳಾ ಪತ್ರಕರ್ತೆಯಾಗಿ ನೀವು ದ್ವೇಷ ಅಪರಾಧಗಳ ವರದಿಗಾರಿಕೆಗೆ ಹೋದಾಗ ಯಾವ ರೀತಿಯ ಸಮಸ್ಯೆ, ಸವಾಲುಗಳನ್ನು
ಎದುರಿಸಬೇಕಾಗುತ್ತದೆ? 

- ಮಹಿಳಾ ಪತ್ರಕರ್ತೆಯಾಗುವುದು ಬಹಳ ಸವಾಲಿನ ಕೆಲಸ. ಆದರೆ ಅಷ್ಟೇ ತೃಪ್ತಿ ನೀಡುವ ಕೆಲಸ ಅದು. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ವರದಿ ಮಾಡುವಾಗ ಸಾಮಾನ್ಯವಾಗಿ ಪುರುಷ ವರದಿಗಾರರು ಹೋಗಲು ಬಿಡದ ಸ್ಥಳಗಳಿಗೆ ನಮಗೆ ಸುಲಭವಾಗಿ ಹೋಗಬಹುದು , ಅಲ್ಲಿನ ಮಹಿಳೆಯರ ಜೊತೆ ಆಪ್ತವಾಗಿ ಮಾತನಾಡಬಹುದು. ಆದರೆ ಲೈಂಗಿಕ ಕಿರುಕುಳ ಎದುರಿಸುವ ಅಪಾಯ ಯಾವಾಗಲೂ ಇದ್ದೇ ಇದೆ. ನನ್ನ ಹಿರಿಯ ಸಹೋದ್ಯೋಗಿಗಳು ಸುರಕ್ಷತೆಯ ದೃಷ್ಟಿಯಿಂದ ವರದಿಗಾರಿಕೆಗೆ ಹೋಗುವಾಗ ಒಬ್ಬಳೇ ಹೋಗಬೇಡ ಎಂದು ಸಲಹೆ ನೀಡುತ್ತಾರೆ. ಇದು ಮಹಿಳೆಯರು ಎಂತಹ ದುರ್ಬಲ ಪರಿಸ್ಥಿತಿಯಲ್ಲಿದ್ದಾರೆ ಎಂಬುದಕ್ಕೆ ನಿದರ್ಶನವಾಗಿದೆ. ಇನ್ನು ದ್ವೇಷ ಅಪರಾಧಗಳ ವರದಿಗಾರಿಕೆ ಇನ್ನೊಂದು ಸವಾಲಿನ ಕೆಲಸ. ಬಹುಸಂಖ್ಯಾತ ಸಮುದಾಯಕ್ಕೆ ಯಾರು ಪ್ರಶ್ನೆ ಕೇಳಿದರೂ ಅವರನ್ನು ಸಂಶಯದ ದೃಷ್ಟಿಯಿಂದ ನೋಡಲಾಗುತ್ತದೆ. ದಿಲ್ಲಿ ಗಲಭೆಯ ಸಂದರ್ಭದಲ್ಲಿ ಬಹುಸಂಖ್ಯಾತ ಸಮುದಾಯಕ್ಕೆ ಸೇರಿದ ವರದಿಗಾರನೊಬ್ಬ ಕೆಲು ಪ್ರಶ್ನೆ ಕೇಳಿದ ಮಾತ್ರಕ್ಕೆ ಆತ ಹಿಂದೂ ಎಂಬುದನ್ನು ಸಾಬೀತುಪಡಿಸಲು ಒತ್ತಡ ಹಾಕಿದ್ದು ನನಗಿನ್ನೂ ನೆನಪಿದೆ. ಹೀಗಿರುವಾಗ ಗುಂಪುಗಳು ಹಾಗೂ ಸರಕಾರಿ ಪಡೆಗಳ ಸುಲಭ ತುತ್ತಾಗಿರುವ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವರದಿಗಾರರು ಎಂತಹ ಕ್ಲಿಷ್ಟ ಪರಿಸ್ಥಿತಿ ಎದುರಿಸಬೇಕಾಗಬಹುದು ಎಂಬುದನ್ನು ನೀವು ಊಹಿಸಬಹುದು.

► ನೀವು ಇತ್ತೀಚೆಗೆ ಲಾಡ್ಲಿ ಪ್ರಶಸ್ತಿಗೆ ಪಾತ್ರರಾಗಿದ್ದೀರಿ. ಇದಕ್ಕೆ ಕಾರಣವಾದ ವರದಿಯ ಬಗ್ಗೆ ಸ್ವಲ್ಪ ಹೇಳಿ.

- ಹಾಥರಸ್ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಕುರಿತ ನನ್ನ ಕೆಲಸವನ್ನು ಗುರುತಿಸಿದ ಲಾಡ್ಲಿ ಅವಾರ್ಡ್ ಸಮಿತಿ ಹಾಗೂ ಪಾಪುಲೇಷನ್ ಫಸ್ಟ್ ಟೀಮ್‌ಗೆ ನಾನು ಕೃತಜ್ಞಳಾಗಿದ್ದೇನೆ. ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಇಲ್ಲದ ಯುವ ಪತ್ರಕರ್ತೆಯಾಗಿ ಸಾಮಾನ್ಯವಾಗಿ ನಾು ಮಾಡುವ ವರದಿಗಾರಿಕೆ ಬಹಳ ಬೇಗ ಬದಿಗೆ ಸರಿಸಲ್ಪಡುತ್ತದೆ. ಆದರೆ ಇಲ್ಲಿ ನನ್ನ ವರದಿಗಾರಿಕೆಯನ್ನು ಗುರುತಿಸಿದ್ದು ದೊಡ್ಡ ಗೌರವವಾಗಿದೆ. ಹಾಥರಸ್ ಅತ್ಯಾಚಾರ ಸಂತ್ರಸ್ತೆಯ ವೈದ್ಯಕೀಯ ಹಾಗೂ ಕಾನೂನು ವರದಿ ಕುರಿತ ತನಿಖಾ ವರದಿಗೆ ಈ ಪ್ರಶಸ್ತಿ ಬಂದಿದೆ.

► ಹಾಥರಸ್ ಸಂತ್ರಸ್ತೆಯ ಬಗ್ಗೆ ವರದಿ ಮಾಡುವ ಅವಕಾಶ ನಿಮಗೆ ಹೇಗೆ ಸಿಕ್ಕಿತು ? ಅದರಲ್ಲಿ ನೀವು ಎದುರಿಸಿದ ಸವಾಲುಗಳೇನು ? ಯಾರಿಗೂ ಸಿಗದ ಆ ಮಾಹಿತಿಯನ್ನು ನೀವು ಹೇಗೆ ಹುಡುಕಿ ತೆಗೆದಿರಿ? ಸ್ವಲ್ಪ ವಿವರಿಸಿ.

- ನಾನು ಪೂರ್ಣಕಾಲಿಕ ಕೆಲಸ ಪ್ರಾರಂಭಿಸಿದ ಮೊದಲ ವರ್ಷದಲ್ಲೇ ಹಾಥರಸ್ ಕೇಸಿನ ವರದಿ ಮಾಡಿದೆ. ಇದರ ವರದಿಗಾರಿಕೆಗೆ ನನ್ನನ್ನು ಉತ್ತರ ಪ್ರದೇಶಕ್ಕೆ ಕಳಿಸಿದಾಗ ನಾನಿನ್ನೂ ನನ್ನ ಸ್ನಾತಕೋತ್ತರ ಪದವಿಯನ್ನೇ ಮುಗಿಸಿರಲಿಲ್ಲ. ಅಲ್ಲಿ ಸಮಾಜದ ಸ್ಥಿತಿಗತಿ ಮತ್ತು ಮಹಿಳೆಯರ ವಿರುದ್ಧ ನಡೆಯುವ ಅಪರಾಧಗಳ ಬಗ್ಗೆ ನಾನು ಬಹಳ ವಿಷಯ ಕಲಿತೆ. ಉತ್ತರ ಪ್ರದೇಶದಲ್ಲಿ ಜಾತಿ ಸಮೀಕರಣ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನೂ ನೋಡಿದೆ. ಅಲ್ಲಿ ನನಗೆ ಮೂಲವೊಂದರಿಂದ ಸಣ್ಣದೊಂದು ಸುಳಿವು ಸಿಕ್ಕಿತು.
ಸಂತ್ರಸ್ತೆ ಸಾಯುವ ಮೊದಲಿನ ಆಕೆಯ ಮೆಡಿಕೋ ಲೀಗಲ್ ಕೇಸ್ ವರದಿ ಸಿಕ್ಕಿದರೆ ಆಕೆಯ ಮೇಲೆ ಅತ್ಯಾಚಾರ ನೆದೇ ಇಲ್ಲ ಎಂದು ಹೇಳುತ್ತಿರುವ ರಾಜ್ಯ ಪೊಲೀಸರ ಹೇಳಿಕೆ ಸುಳ್ಳು ಎಂದು ಸಾಬೀತುಪಡಿಸಲು ಸಾಧ್ಯ ಎಂದು ನನಗೆ ಹೊಳೆಯಿತು. ಕೊನೆಗೂ ಹಲವು ದಿನಗಳ ಪ್ರಯತ್ನದ ಬಳಿಕ ಆ ವರದಿಯ ಪ್ರತಿ ನನ್ನ ಕೈಸೇರಿತು. ಆದರೆ ಅದಕ್ಕಾಗಿ ಪಟ್ಟ ಪ್ರುತ್ನ, ಎದುರಿಸಿದ ಸವಾಲು, ಆತಂಕ ಸಣ್ಣದಲ್ಲ. ಆದರೂ ಆ ಬಗ್ಗೆ ನಾನೇನೂ ತಲೆಕೆಡಿಸಿಕೊಂಡಿಲ್ಲ.


► ನೀವು ಮತ್ತು ಇತರರು ಮಾಡಿದ ವರದಿಗಳಿಂದ ಹಾಥರಸ್ ಸಂತ್ರಸ್ತೆಗೆ ನ್ಯಾಯ ಸಿಕ್ಕಿದೆ ಎಂದು ನಿಮಗೆ ಅನಿಸುತ್ತದೆಯೇ?

- ಆಕೆಗೆ ನ್ಯಾಯ ಸಿಕ್ಕಿದೆಯೇ ಎಂದು ನನಗೆ ಗೊತ್ತಿಲ್ಲ. ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಇನ್ನಷ್ಟೇ ತೀರ್ಪು ಬರಬೇಕಿದೆ. ನಾವು ಮಹಿಳಾ ಸಬಲೀಕರಣದ ಬಗ್ಗೆ ಮಾತಾಡುತ್ತಲೇ ಭಾರತದಲ್ಲಿ ಅತ್ಯಾಚಾರ ಪ್ರಕರಣಗಳ ವಿಚಾರಣೆ ಮುಗಿಯಲು ವರ್ಷಗಟ್ಟಲೆ ತಗಲುತ್ತಿದೆ. ಈಗಲೂ ಸಂತ್ರಸ್ತೆಯ ಕುಟುಂಬ ಭಯದಲ್ಲಿ ಬದುಕುತ್ತಿದೆ. ಸಿಆರ್‌ಪಿಎಫ್ ಸಿಬ್ಬಂದಿ ಕುಟುಂಬಕ್ಕೆ ರಕ್ಷಣೆ ಒದಗಿಸುತ್ತಿದ್ದಾರೆ. ಆದರೆ ಅವರ ಗ್ರಾಮದ ಹೊರಗೆ ಮನೆ ಕೊಡಬೇಕು ಎಂಬ ಅವರ ಬೇಡಿಕೆ ಇನ್ನೂ ಈಡೇರಿಲ್ಲ. ಆದರೆ ನನ್ನ ವರದಿ ಸಿಬಿಐ ಡಿಸೆಂಬರ್‌ನ ಲ್ಲಿ ಸಲ್ಲಿಸಿದ ಚಾರ್ಜ್ ಶೀಟ್ ಮೇಲೆ ಖಂಡಿತ ಪರಿಣಾಮ ಬೀರಿತು. ಮೆಡಿಕೋ ಲೀಗಲ್ ಕೇಸ್ ವರದಿ ಕುರಿತ ನನ್ನ ವರದಿಯಲ್ಲಿದ್ದ ಸಂತ್ರಸ್ತೆಯ ಹೇಳಿಕೆಯನ್ನು ಓದಿ ಅದನ್ನು ಆಧರಿಸಿ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ಆಕೆಯ ಹೇಳಿಕೆ ವುತ್ತು ವೈದ್ಯಕೀಯ ಪರೀಕ್ಷೆಯನ್ನು ಆಧರಿಸಿ ಸಿಬಿಐ ಚಾರ್ಜ್ ಶೀಟ್‌ನಲ್ಲಿ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಜೊತೆ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಆರೋಪವನ್ನೂ ಹೊರಿಸಿತು.

► ದ್ವೇಷ ಅಪರಾಧಗಳ ವರದಿಗಾರಿಕೆ ಮಾಡುವುದು ಎಷ್ಟು ಕಷ್ಟ? ಅದು ನಿಮ್ಮ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ?

- ದ್ವೇಷ ಅಪರಾಧಗಳ ವರದಿಗಾರಿಕೆ ನಾನೇ ಆಯ್ದುಕೊಂಡ ಕ್ಷೇತ್ರ. ದೇಶದ ಉದ್ದಗಲಗಳಿಂದ ವಿಶೇಷವಾಗಿ ಉತ್ತರ ್ರದೇಶದಿಂದ ದ್ವೇಷ ಅಪರಾಧದ ಕುರಿತು ವರದಿ ಮಾಡುವ ಪತ್ರಕರ್ತರಿಗೆ ಜನರು ಮಾಹಿತಿ ಕಳಿಸುತ್ತಲೇ ಇರುತ್ತಾರೆ. ಅವರಿಗಾದ ಅನ್ಯಾಯವನ್ನು ಹೇಳುವ ವೇದಿಕೆ ಸಿಗಬಹುದು ಎಂಬ ಭರವಸೆಯಿಂದ ಅವರು ನಮ್ಮನ್ನು ಸಂಪರ್ಕಿಸುತ್ತಾರೆ. ಇದು ಬಹಳ ಒತ್ತಡದ ಕೆಲಸ. ಕೆಲವೊಮ್ಮೆ ರಾತ್ರಿ ನಿದ್ರೆ ಬರುವುದಿಲ್ಲ. ದಿಲ್ಲಿ ಗಲಭೆಯ ಸಂದರ್ಭದಲ್ಲಿ ಮುಸ್ಲಿಂ ಪುರುಷನೊಬ್ಬನ ಜನನಾಂವನ್ನೇ ಸೀಳಿದ ಚಿತ್ರವೊಂದನ್ನು ವೈದ್ಯರೊಬ್ಬರು ನನಗೆ ಕಳಿಸಿದ್ದರು. ಅದರ ಭೀಕರೆ ಇನ್ನೂ ನನ್ನನ್ನು ಕಾಡುತ್ತಿದೆ. ಆ ರಾತ್ರಿ ನನಗೆ ನಿದ್ರೆ ಹತ್ತಲೇ ಇಲ್ಲ. ನನ್ನ ಹಲವು ವರದಿಗಾರ ಮಿತ್ರರೂ ಇದೇ ರೀತಿಯ ಆಘಾತವನ್ನು ಅನುಭವಿಸಿದ್ದಾರೆ. ಆದರೆ ಪತ್ರಕರ್ತೆಯಾಗಿ ಕೋಮು ವಿಭಜನೆ ಅತ್ಯಂತ ಹೆಚ್ಚುತ್ತಿರುವ ಭಾರತದಲ್ಲಿ ದ್ವೇಷ ಅಪರಾಧಗಳಿಗೆ ಗುರಿಯಾಗು ಸಂತ್ರಸ್ತರ ನೋವನ್ನು ಜನರ ಮುಂದಿಡುವುು ನನ್ನ ಕರ್ತವ್ಯ ಎಂದು ನಾನು ಬಲವಾಗಿ ನಂಬಿದ್ದೇನೆ.

► ಈ ದಿನಗಳಲ್ಲಿ ಬಹಳ ಯುವ ಪತ್ರಕರ್ತರು ವ ರದಿಗಾರರಾಗಲು ಬಯಸುವುದಿಲ್ಲ. ಆದರೂ ಕಠಿಣ ಪರಿಶ್ರಮ, ಆಳವಾದ ಆಧ್ಯಯನ ಹಾಗೂ ಸವಾಲುಗಳಿರುವ
ವಿಷಯಗಳ ವರದಿ ಮಾಡಲು ಹೋಗುವುದೇ ಇಲ್ಲ. ಅವರಿಗೆ ಟಿವಿ ಚಾನೆಲ್‌ಗಳ ಗ್ಲಾಮರ್ ಕಡೆ ಹೆಚ್ಚು ಆಕರ್ಷಣೆ. ಇದಕ್ಕೆ ಪರಿಹಾರವೇನು?

- ಯುವ ಪತ್ರಕರ್ತರು ಗಂಭೀರ ವಿಷಯಗಳ ವರದಿಗಾರಿಕೆ ಮಾಡಲು ಬಯಸುವುದಿಲ್ಲ ಎಂಬುದನ್ನು ನಾನು ಸಂಪೂರ್ಣವಾಗಿ ಒಪ್ಪುವುದಿಲ್ಲ. ನಾನು ಮಾತಾಡಿದ, ಮಾರ್ಗದರ್ಶನ ನೀಡಿದ ಪತ್ರಕರ್ತರಾಗ ಬಯಸುವ ಯುವಜನರು ವರದಿಗಾರರಾದರೆ ಜೈಲಿಗೆ ಹೋಗಬೇಕಾಗುತ್ತದೆ ಅಥವಾ ಹಲ್ಲೆಗೆ ಒಳಗಾಗಬೇಕಾಗುತ್ತದೆ ಎಂದು ಭಯವಾಗುತ್ತದೆ ಎಂದು ಹೇಳುತ್ತಾರೆ. ನಮ್ಮ ದೇಶದಲ್ಲಿ ಪ್ರಕರ್ತರನ್ನು ನಡೆಸಿಕೊಂಡ ಬಗೆ ಅದರಲ್ಲೂ ಕಳೆದ ಕೆಲವು ವರ್ಷಗಳ ಬೆಳವಣಿಗೆಯಿಂದ ಈ ರೀತಿಯ ವಾತಾವರಣ ಸೃಷ್ಟಿಯಾಗಿದೆ. ಇತ್ತೀಚೆಗೆ ಶಾಲೆಗಳ ಪರಿಸ್ಥಿತಿ ಬಗ್ಗೆ ಬರೆದಿದ್ದಕ್ಕೆ ಪತ್ರಕರ್ತರನ್ನು ಬಂಧಿಲಾಗಿದೆ, ಪ್ರತಿಭಟನೆಯನ್ನು ವರದಿ ಮಾಡುತ್ತಿದ್ದ ಪತ್ರಕರ್ತರನ್ನು ವಶಕ್ಕೆ ಪಡೆಯಲಾಗಿದೆ, ಕೇವಲ ಟ್ವೀಟ್ ಮಾಡಿದ್ದಕ್ಕೆ ಬಂಧಿಸಲಾಗಿದೆ, ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಯುವಕರು, ಯುವತಿಯರು ಪತ್ರಿಕೋದ್ಯಮಕ್ಕೆ ಬರಲು ಹೆದರುವುದನ್ನು ನಾವು ಅರ್ಥಮಾಡಿಕೊಳ್ಳಬಹುದು.
ಪತ್ರಿಕೋದ್ಯಮ ಕ್ಷೇತ್ರವೇ ಬಹಳ ಸವಾಲಿನದ್ದು. ಆದರೆ ಇತ್ತೀಚಿನ ವರ್ಷಗಳಲ್ಲಿ ಅದಕ್ಕೆ ಸೇರಿಕೊಂಡಿರುವ ಬೆದರಿಕೆ, ಕಡಿಮೆಯಾ ಗಿರುವ ವೈಯಕ್ತಿಕ ಸುರಕ್ಷತೆಯ ಖಾತರಿ ಇತ್ಯಾದಿಗಳಿಂದಾಗಿ ವಿದ್ಯಾರ್ಥಿಗಳಿಗೆ ತಾವು ಪತ್ರಿಕೋದ್ಯಮಕ್ಕೆ ಹೋಗುತ್ತೇವೆ ಎಂದು ಹೆತ್ತವರನ್ನು ಮನವೊಲಿಸುವುದೂ ಕಷ್ಟವಾಗಿಬಿಟ್ಟಿದೆ.


► ಈಗ ಜನರು ವಾಟ್ಸ್‌ಆ್ಯಪ್ ಹಾಗೂ ಸರಾರದ ಭಟ್ಟಂಗಿತನ ಮಾಡುವ ಟಿವಿ ಚಾನೆಲ್‌ಗಳನ್ನೇ ಹೆಚ್ಚು ನೆಚ್ಚಿಕೊಂಡಿದ್ದಾರೆ. ಗಂಭೀರ ಸುದ್ದಿ ನೀಡುವ ಮಾಧ್ಯಮಗ ನ್ನು ಜನಸಾಮಾನ್ಯರು ಅಷ್ಟಾಗಿ ನೋಡುತ್ತಿಲ್ಲ. ಹೀಗಿರುವಾಗ ಭಾರತದಲ್ಲಿ ಮಾಧ್ಯಮದ ಭವಿಷ್ಯದ ಬಗ್ಗೆ ನೀವು ಏನು ಹೇಳುತ್ತೀರಿ?

- ನೋಡಿ, ಜನರು ಯಾವುದಕ್ಕೆ ಅರ್ಹರು ಅಂತಹದ್ದೇ ನಾಯಕರನ್ನು ಪಡೆಯುತ್ತಾರೆ ಎಂಬ ಒಂದು ಪ್ರಸಿದ್ಧ ಮಾತಿದೆ. ಈಗ ಸುಳ್ಳು ಸುದ್ದಿಗಳ ವಾಟ್ಸ್‌ಆ್ಯಪ್ ಮೆಸೇಜ್‌ಗಳು ವಿಶ್ವಾಸಾರ್ಹ ಸುದ್ದಿ ಸಂಸ್ಥೆಗಳ ಸರಿಯಾದ ಸುದ್ದಿಗಳಿಗಿಂತ ಹೆಚ್ಚು ಜನರನ್ನು ತಲುಪುತ್ತಿವೆ. ನಿಮಗೆ ತಲುಪುತ್ತಿರುವುದು ಸುಳು್ಳ ಸುದ್ದಿ, ತಿರುಚಿದ ಸುದ್ದಿ ಎಂದು ಜನರಲ್ಲಿ ಜಾಗೃತಿ ಮೂಡಿಸುವ ವ್ಯವಸ್ಥಿತ ಅಭಿಯಾನ ನಡೆಯಬೇಕಿದೆ. ದೇಶದಲ್ಲಿ ಪತ್ರಿಕೋದ್ಯಮದ ಭವಿಷ್ಯದ ಬಗ್ಗೆ ಬೇರೆಯವರಿಗೆ ಇರುವಷ್ಟೇ ಆತಂಕ ಹಾಗೂ  ಅನಿಶ್ಚಿತತೆ ನನ್ನಲ್ಲೂ ಇದೆ. ಆದರೆ ನಾವು ವರದಿ ಮಾಡುವ ನಮ್ಮ ಕೆಲಸ ಮಾಡುತ್ತಾ ಹೋಗಬೇಕು, ಅಷ್ಟೇ.


► ಪ್ರತಿಭಟನಾನಿರತ ರೈತನೊಬ್ಬನ ಸಾವಿನ ಕುರಿತ ವರದಿಗಾಗಿ ಉತ್ತರ ಪ್ರದೇಶದಲ್ಲಿ ನಿಮ್ಮ ವಿರುದ್ಧ ಪ್ರಕರಣ ದಾಖಲಾಗಿದೆ. ಅದು ಎಲ್ಲಿಗೆ ತಲುಪಿದೆ ? ಅದರಿಂದ ನಿಮಗೆ ಎಷ್ಟು ಸಮಸ್ಯೆಯಾಯಿತು?

- ಹೌದು, ರೈತ ಪ್ರತಿಭಟನೆಗೆ ಸಂಬಂಧಿಸಿ ನಮ್ಮ ವರದಿಯೊಂದಕ್ಕಾಗಿ ನನ್ನ ಸಂಪಾದಕರು ಹಾಗೂ ನನ್ನ ವಿರುದ್ಧ ಪ್ರಕರಣ ದಾಖಲಾಗಿದೆ. ವರದಿಯಲ್ಲಿ ಆ ರೈತನ ಕುಟುಂಬದ ಹೇಳಿಕೆಯಿತ್ತು. 2020ರ ಜನವರಿ 26ರಂದು ನಡೆದ ರೈತರ ಟ್ರಾಕ್ಟರ್ ಪೆರೇಡ್ ಸಂದರ್ಭ ಆ ರೈತ ಪ್ರಾಣ ಕಳಕೊಂಡಿದ್ದ. ಹಲವು ಸುದ್ದಿ ಸಂಸ್ಥೆಗಳು ಆ ಸುದ್ದಿಯನ್ನು ಪ್ರಕಟಿಸಿದ್ದವು. ರೈತನ ಕುಟುಂಬದ ಹೇಳಿಕೆ ಪ್ರಕಟಿಸಿದ್ದಕ್ಕೆ ಕೆಲವು ಹಿರಿಯ ವರದಿಗಾರರ ವಿರುದ್ಧ  ದೇಶದ್ರೋಹದ ಪ್ರಕರಣವೂ ದಾಖಲಾಯಿತು. ಸಾರ್ವಜನಿಕ ಸಮಸ್ಯೆ ಸೃಷ್ಟಿ ಹಾಗೂ ರಾಷ್ಟ್ರೀಯ ಐಕ್ಯತೆ ಕುರಿತು ಪೂರ್ವಗ್ರಹಪೀಡಿತ ಕೃತ್ಯಗಳ ಆರೋಪದಡಿ ನನ್ನ ಹಾಗೂ ನನ್ನ ಸಂಪಾದಕರ ವಿರುದ್ಧ ಪ್ರಕರಣ ದಾಖಲಾಯಿತು. ಆ ಬಳಿಕ ನಮಗೆ ಹಲವು ಬಾರಿ ನ್ಯಾಯಾಲಯಗಳು ನಿರೀಕ್ಷಣಾ ಜಾಮೀನು ನೀಡಿವೆ. ಎಫ್‌ಐಆರ್ ಅನ್ನು ರದ್ದು ಪಡಿಸಬೇಕು ಎಂದು ನಾವು ಸುಪ್ರೀಂಕೋರ್ಟ್ ಮೊರೆ ಹೋದಾಗ ಪತ್ರಿಕಾ ಸ್ವಾತಂತ್ರ ಹತ್ತಿಕ್ಕುವ ಯತ್ನವನ್ನು ತಾನು ವಿರೋಧಿಸುವುದಾಗಿ ಹೇಳಿ ಹೈಕೋರ್ಟ್‌ಗೆ ಹೋಗಲು ನಮಗೆ ಸೂಚಿಸಿತು. ನನಗೆ ನ್ಯಾಯಾಂಗದ ಮೇಲೆ ಸಂಪೂರ್ಣ ಭರವಸೆ ಇದೆ.

► ಮುಖ್ಯವಾಹಿನಿ ಮಾಧ್ಯಮಗಳಿಗೆ ಹೋಲಿಸಿದರೆ ನಿಮ್ಮದು ವಿಭಿನ್ನ ಪತ್ರಿಕೋದ್ಯಮ, ಇದಕ್ಕೆ ಜನರ ಪ್ರತಿಕ್ರಿಯೆ ಹೇಗಿದೆ?

- ನಮ್ಮ ವಿರುದ್ಧ ಟ್ರೋಲಿಂಗ್, ಕೆಟ್ಟ ಕಮೆಂಟ್‌ಗಳು, ಅತ್ಯಾಚಾರ, ಕೊಲೆ ಬೆದರಿಕೆಗಳು ಸಾಕಷ್ಟು ಬರುತ್ತವೆ. ಆದರೆ ಅಷ್ಟೇ ದೊಡ್ಡ ಸಂಖ್ಯೆಯಲ್ಲಿ ಜನರು ನಮ್ಮ ಕೆಲಸವನು್ನ ಅಭಿನಂದಿಸಿ ಪ್ರೋತ್ಸಾಹಿಸುತ್ತಾರೆ. ಯುವಜನರು, ವಿದ್ಯಾರ್ಥಿಗಳು ನಮ್ಮ ಕೆಲಸದಿಂದ ಸ್ಫೂರ್ತಿ ಸಿಕ್ಕಿದೆ ಎನ್ನುತ್ತಾರೆ. ಹಿರಿಯರು ಮೌನವಾಗಿ ನಮ್ಮನ್ನು ಬೆಂಬಲಿಸುತ್ತಾರೆ. ಇದು ಎದ್ದು ಕಾಣುವ ಪ್ರೋತ್ಸಾಹ ಅಲ್ಲ. ಆದರೆ ನಾವು ನಮ್ಮ ಕೆಲಸ ಮುಂದುವರಿಸಿಕೊಂಡು ಹೋಗಲು ಇದು ಸಾಕು.


► ನೀವು ಮಾಡುತ್ತಿರುವ ವರದಿಗಳು ಕೇವಲ ಉನ್ನತ ಶಿಕ್ಷಣ ಪಡೆದವರು, ಬುದ್ಧಿಜೀವಿಗಳಿಗೆ ಮಾತ್ರ ತಲುಪುತ್ತಿವೆ. ಜನಸಾಮಾನ್ಯರು ಇನ್ನೂ ಸುಳ್ಳು, ದ್ವೇಷ ಹರಡುವ ಟಿವಿ ಚಾನೆಲ್‌ಗಳ ಹಿಂದೆಯೇ ಬಿದ್ದಿದ್ದಾರೆ ಎಂಬ ಭಾವನೆಯಿದೆ. ಇದನ್ನು ನೀವು ಒಪ್ಪುತ್ತೀರಾ?

- ಇಲ್ಲ, ನಾನಿದನ್ನು ಒಪ್ಪುವುದಿಲ್ಲ. ಈಗ ದಿನದಿಂದ ದಿನಕ್ಕೆ ಜನರಿಗೆ ಟಿವಿ ಚಾನೆಲ್ ಒಂದೇ ಸುದ್ದಿ ಸಿಗುವ ಮಾಧ್ಯಮ ಅಲ್ಲ ಎಂದು ಅರಿವಾಗುತ್ತಿದೆ. ಉದಾಹರಣೆಗೆ, ರೈತರ ಪ್ರತಿಭಟನೆ ನಡೆಯುವಾಗ ರೈತರು ತಮ್ಮದೇ ಪತ್ರಿಕೆ ಆರಂಭಿಸಿದ್ದರು. ಅವರು ತಮ್ಮ ವಿರುದ್ಧ ಸುಳ್ಳು ಹರಡುವ ಟಿವಿ ಚಾನೆಲ್ ಗಳನ್ನು ಸಂಪೂರ್ಣ ಬಹಿಷ್ಕರಿಸಿ ಸೋಷಿಯಲ್ ಮೀಡಿಯವನ್ನು ಗರಿಷ್ಠ ಬಳಸಿಕೊಂಡರು. ಅವರಲ್ಲಿ ಹೆಚ್ಚಿನವರು ಮೇಲ್ ಸ್ತರದವರೂ ಅಲ್ಲ, ಬಹಳ ಶಿಕ್ಷಣ ಪಡೆದವರೂ ಅಲ್ಲ.


► ಯುವ ಪತ್ರಕರ್ತರಿಗೆ ನಿಮ್ಮ ಸಲಹೆಯೇನು?

- ಯುವ ಪತ್ರಕರ್ತರು ತಮ್ಮ ಸುತ್ತಮುತ್ತಲ ಸಮಾಜವನ್ನು ಸರಿಯಾಗಿ ಕಣ್ಣು, ಕಿವಿ ತೆರೆದು ನೋಡಬೇಕು. ಅಲ್ಲೇ ಮಾಡಲು ವರದಿಗಳಿವೆ. ಮುಖ್ಯವಾಹಿನಿ ಮೀಡಿಯಾಗಳು ಮಾಡದ ವರದಿಗಳು ಯಾವುದಿವೆ ಎಂಬುದನ್ನು ಹುಡುಕಿ. ನಿಮ್ಮ ಹಳ್ಳಿಯ, ನಗರದ, ಸಮುದಾಯಗಳ ಅದೆಷ್ಟೋ ಸುದ್ದಿಗಳನ್ನು ಬೇರೆಯವರು ನಿರ್ಲಕ್ಷಿಸಿರುತ್ತಾರೆ. ಅವುಗಳನ್ನು ಗುರುತಿಸಿ ವರದಿ ಮಾಡಿ. ನೀವು ಮಾಡಲು ಇಚ್ಛಿಸುವ ವರದಿಗಳ ಕುತೂಹಲಕಾರಿ ಅಂಶವನ್ನು ತೋರಿಸಿ. ಸಂಪಾದಕರಿಗೆ ಅದರಲ್ಲಿ ಆಸಕ್ತಿ ಕೆರಳಿಸುವಂತೆ ಹೇಗೆ ಮಾಡಬಹುದು ಎಂಬುದನ್ನು ಕಲಿತುಕೊಳ್ಳಿ. ವರದಿ  ಮಾಡಲು ಹೊರಡುವ ಮುನ್ನ ಇದು ಯಾಕೆ ಜನರ ಮುಂದೆ ಬರಬೇಕು? ಯಾಕೆ  ಇದು ಬಹಳ ಮುಖ್ಯ? ಎಂಬುದನ್ನು ನಿಮಗೆ ನೀವೇ ಕೇಳಿಕೊಳ್ಳಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)