ಮುರಿದ ಸೈಕಲ್‌ನಲ್ಲಿ ಲಂಡನ್‌ಗೆ ಒಂದು ಸುತ್ತು
ಗೆಳೆಯ ಯೋಗೀಂದ್ರ ಮರವಂತೆಯವರ ‘ಮುರಿದ ಸೈಕಲ್ ಹುಲಾ ಹೂಪ್ ಹುಡುಗಿ’ ಕೃತಿಯಲ್ಲಿ ಕೊರೊನ ಎಂಬ ಭೀಕರ ಸಾಂಕ್ರಾಮಿಕದಿಂದ ಚೇತರಿಸಿಕೊಳ್ಳುತ್ತಿರುವ ಲಂಡನ್‌ನ, ಅಷ್ಟೇಕೆ ಇಡೀ ಯು.ಕೆ.ಯ ಚಿತ್ರವಿದೆ. ಅವರೇ ಹೇಳಿರುವಂತೆ ಇದು ಕೋವಿಡ್ ಹೋರಾಟದ ನೆಪದಲ್ಲಿ ಯು.ಕೆ.ಯ ದೈನಿಕದ ಒಳನೋಟಗಳನ್ನು ತಿಳಿಯುವ, ಖುಲಾಸೆಗೊಳಿಸುವ ಪ್ರಯತ್ನವೂ ಹೌದು.’’
ಉದ್ಯೋಗ ನಿಮಿತ್ತ ಯುನೈಟೆಡ್ ಕಿಂಗ್‌ಡಮ್‌ನಲ್ಲಿರುವ ಯೋಗೀಂದ್ರ ಅಲ್ಲಿನ ದೈನಂದಿನ ಜೀವನದ ಪ್ರತ್ಯಕ್ಷದರ್ಶಿಯಾಗಿರುವುದರಿಂದ ಅವರಲ್ಲಿ ನಿರೂಪಿಸಿರುವ ವಿದ್ಯಮಾನಗಳು, ಪ್ರಸಂಗಗಳು, ವ್ಯಕ್ತಿವಿಶೇಷಗಳು, ಸಮಾಜದ, ಸರಕಾರದ ಪ್ರಯತ್ನಗಳು, ಇವುಗಳಿಗೆಲ್ಲ ಅಧಿಕೃತತೆಯ ಒಂದು ಮುದ್ರೆ ಬಿದ್ದಂತಾಗಿದೆ. ಬಡವರ ಪರವಾಗಿ ಹೋರಾಡಿ ಜಯಿಸಿದ ಮಾರ್ಕಸ್ ರಾಷ್ಟೊರ್ಡ್ ಎಂಬ ಕ್ರೀಡಾಪಟುವಿನಿಂದ ಹಿಡಿದು ಗಮ್ಯವನ್ನು ತಲಪುವ ಮೊದಲೇ ಬಲಿಯಾಗುವ ವಲಸೆಗಾರರವರೆಗೆ ಇಪ್ಪತ್ತು ಲೇಖನಗಳಲ್ಲಿ ಹರಡಿಕೊಂಡಿರುವ ಕಣ್ಣಿಗೆ ಕಟ್ಟುವಂಥ ಒಂದಿಡೀ ಜಗತ್ತು ಇಲ್ಲಿ ತನ್ನೆಲ್ಲ ಬಣ್ಣ ವಾಸನೆಗಳೊಡನೆ ಓದುಗರನ್ನು ಆವರಿಸಿಕೊಳ್ಳುತ್ತದೆ.
ಯೋಗೀಂದ್ರರ ಬರವಣಿಗೆಗಿರುವ ಒಂದು ವಿಶೇಷ ಗುಣವೆಂದರೆ ಅದರ ಇಂದ್ರಿಯ ಗಮ್ಯತೆ, ಸೃಜನಶೀಲವಾದ ಎಲ್ಲ ಉತ್ತಮ ಬರವಣಿಗೆಯಲ್ಲೂ ಓದುಗರ ಇಂದ್ರಿಯಗಳ ಮೂಲಕವೇ ಅವರನ್ನು ತಟ್ಟಿ ಪ್ರಚೋದಿಸುವ, ಮೂಲಕವೇ ಅವರಿಗೆ ಅನುಭವವೊಂದನ್ನು ನಿಜಗೊಳಿಸಿಕೊಡುವ ಹಂಬಲವಿರುತ್ತದೆ. ಯೋಗೀಂದ್ರರ ಬರವಣಿಗೆ ಈ ಬಗೆಯದು.
ಈ ಪುಸ್ತಕದ ಶೀರ್ಷಿಕೆಯಾಗಿರುವ ‘ಮುರಿದ ಸೈಕಲ್, ಹುಲಾ ಹೂಪ್ ಹುಡುಗಿ ನನ್ನ ದೃಷ್ಟಿಯಲ್ಲಿ ಒಂದು ಅತ್ಯುತ್ತಮ ಪ್ರಬಂಧ, ಇಂಗ್ಲೆಂಡಿನ ನಾಟಿಂಗ್‌ಹ್ಯಾಮ್ ನಗರದ ಹಾಗೂ ಆ ನಗರದಲ್ಲಿದ್ದನೆನ್ನಲಾದ ‘ರಾಬಿನ್ ಹುಡ್’ ಎಂಬ ಜನಾನುರಾಗಿ ಬಂಡುಕೋರನ ಪ್ರಸ್ತಾಪದಿಂದ ಪ್ರಾರಂಭವಾಗುವ ಈ ಪ್ರಬಂಧ 19ನೇಯ ಶತಮಾನದ ಕೊನೆಯಲ್ಲಿ ನಾಟಿಂಗ್‌ಹ್ಯಾಮ್‌ನಲ್ಲಿ ಆರಂಭವಾಗಿ ಹೊರ ಜಗತ್ತಿನಲ್ಲಿ ತನ್ನ ’ರಾಲಿ ಸೈಕಲ್’ನಿಂದ ಹೆಸರುವಾಸಿಯಾದ ಫ್ಯಾಕ್ಟರಿ, ವರ್ತಮಾನ ಕಾಲದಲ್ಲಿ ಅತಿ ವೇಗವಾಗಿ ಹರಡಿದ ಕೋವಿಡ್ ಸೋಂಕು, ಗೋಡೆಯ ಮೇಲೆ ಚಿತ್ರಗಳ ಮೂಲಕ ಸಂದೇಶವೊಂದನ್ನು ಕೊಡುವ ಗ್ರಾಫಿಟಿ ಕಲೆ, ಅಂತಹ ಕಲೆಯಲ್ಲಿ ನಿಷ್ಣಾತನಾದ ಕಲಾವಿದ ’ಬ್ಯಾಂಕ್ಸಿ’, ಇತ್ಯಾದಿ ಹಿನ್ನೆಲೆಯಲ್ಲಿ ಒಂದು ಭಿತ್ತಿಚಿತ್ರವನ್ನೂ, ಅದಕ್ಕೆ ಕಾರಣವಾದ ಒಂದು ವಿಶಿಷ್ಟ ಪ್ರಸಂಗವನ್ನೂ ತುಂಬ ಧ್ವನಿಪೂರ್ಣವಾಗಿ ಚಿತ್ರಿಸುತ್ತದೆ. ‘‘ಈಗಿನ ಬದುಕು ಮುರಿದ ಸೈಕಲಿನಂತಿದೆ. ಅದೇ ಮುರಿದ ಬದುಕಿನೊಳಗಿನಿಂದ ಒಂದು ಸರಳ ಸಾಮಾನ್ಯ ನಿರುಪಯೋಗಿ ಎಂದು ಕಾಣುವ ವಸ್ತುವನ್ನು ತೆಗೆದು ಆಟಿಕೆಯಂತೆ ಬಳಸಿ ಉಲ್ಲಾಸದಲ್ಲಿರುವ ಬಾಲಕಿಯಂತೆ ನಾವೂ ಇರೋಣ ಎಂಬ ಅರ್ಥ ಸಂದೇಶ ಈ ಕಲಾಕೃತಿಯಲ್ಲಿ ಅಡಗಿರಬಹುದು’’ ಎಂಬ ಪ್ರೊಫೆಸರರೊಬ್ಬರ ವ್ಯಾಖ್ಯಾನದಿಂದ ಈ ಪ್ರಬಂಧ ಸ್ವತಃ ಒಂದು ಕಲಾತ್ಮಕ ಸ್ಥಿರ ಚಿತ್ರದಂತೆ (ಸ್ಟಿಲ್-ಲೈಫ್) ಗಮನ ಸೆಳೆಯುತ್ತದೆ. ಪುಸ್ತಕ: ಮುರಿದ ಸೈಕಲ್ ಹುಲಾ ಹೂಪ್ ಹುಡುಗಿ
ಲೇಖಕರು: ಯೋಗೀಂದ್ರ ಮರವಂತೆ ಮುದ್ರಣ: 2021
ಪುಟಗಳು: 120
ಬೆಲೆ:125
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು- 560001
ದೂರವಾಣಿ: 080-22161900/22161901/22161902
ಎಸ್.ದಿವಾಕರ್