ಹೌದಿ ಬಂಡುಕೋರರ ಎರಡು ಕ್ಷಿಪಣಿಗಳನ್ನು ಹೊಡೆದುರುಳಿಸಿದ ಯುಎಇ
Screengrab(Twitter/@richimedhurst)
ದುಬೈ: ಸಂಯುಕ್ತ ಅರಬ್ ಎಮಿರೇಟ್ಸ್ ಅನ್ನು ಗುರಿಯಾಗಿಸಿ ಹೌದಿ ಬಂಡುಕೋರರು ಉಡಾಯಿಸಿದ್ದ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಯುಎಇ ಇಂದು ಹೊಡೆದುರುಳಿಸಿದೆ. ಈ ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಎಮಿರೇಟ್ಸ್ ರಕ್ಷಣಾ ಸಚಿವಾಲಯ ಹೇಳಿದೆ.
ಈ ಕ್ಷಿಪಣಿಯ ಚೂರು ಚೂರಾದ ಭಾಗಗಳು ಅಬುಧಾಬಿಯ ವಿವಿಧೆಡೆ ಹರಡಿವೆ ಎಂದು ತಿಳಿಸಿರುವ ರಕ್ಷಣಾ ಸಚಿವಾಲಯ ಭವಿಷ್ಯದಲ್ಲಿ ಇಂತಹ ದಾಳಿಗಳು ನಡೆಯದಂತೆ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದೆ.
ಕಳೆದ ವಾರವಷ್ಟೇ ನಡೆದ ಕ್ಷಿಪಣಿ ದಾಳಿಯು ಅಬುಧಾಬಿಯ ತೈಲ ಡಿಪೋ ಒಂದಕ್ಕೆ ಹಾನಿಯುಂಟು ಮಾಡಿ ಮೂವರ ಸಾವಿಗೆ ಕಾರಣವಾಗಿತ್ತು. ಈ ದಾಳಿಯಿಂದಾಗಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಅಗ್ನಿ ಅನಾಹುತವೂ ಸಂಭವಿಸಿತ್ತು.
ಇದರ ಬೆನ್ನಲ್ಲೇ ಹೌದಿ ನಡೆಸುವ ಅಲ್ ಮಸೀರಾಹ್ ಟಿವಿ ವಾಹಿನಿ ಸುದ್ದಿಯೊಂದನ್ನು ಬಿತ್ತರಿಸಿ ಸೌದಿ ಅರೇಬಿಯಾ ಮತ್ತು ಯುಎಇ ವಿರುದ್ಧದ ವಿಸ್ತೃತ ಮಿಲಿಟರಿ ಕಾರ್ಯಾಚರಣೆಯ ವಿವರಗಳನ್ನು ಕೆಲವೇ ಗಂಟೆಗಳಲ್ಲಿ ಘೋಷಿಸುವುದಾಗಿ ತಿಳಿಸಿತ್ತು.
ರವಿವಾರ ತಡ ರಾತ್ರಿ ಸೌದಿಯ ಅಧಿಕೃತ ಮಾಧ್ಯಮ ಮಾಹಿತಿಯೊಂದನ್ನು ನೀಡಿ ಹೌದಿ ಬ್ಯಾಲಿಸ್ಟಿಕ್ ಕ್ಷಿಪಣಿ ದೇಶದ ದಕ್ಷಿಣ ಭಾಗದಲ್ಲಿ ಬಿದ್ದಿದೆ ಹಾಗೂ ಇಬ್ಬರು ವಿದೇಶೀಯರಿಗೆ ಗಾಯಗಳಾಗಿವೆ ಹಾಗೂ ಕೈಗಾರಿಕಾ ಪ್ರದೇಶವೊಂದರಲ್ಲಿ ಕೆಲ ವರ್ಕ್ಶಾಪ್ಗಳು ಮತ್ತು ವಾಹನಗಳಿಗೆ ಹಾನಿಯುಂಟು ಮಾಡಿದೆ ಎಂದು ತಿಳಿಸಿತ್ತು.
ಯೆಮೆನ್ನಲ್ಲಿನ ಹೌದಿ ಗುರಿಗಳ ಮೇಲೆ ಸೌದಿ ನೇತೃತ್ವದ ಮೈತ್ರಿ ಪಡೆ ವಾಯು ದಾಳಿಗಳನ್ನು ಹೆಚ್ಚಿಸಿದೆ. ಕಳೆದ ಶನಿವಾರ ಅಲ್ಲಿನ ಉತ್ತರ ಪ್ರಾಂತ್ಯದ ತಾತ್ಕಾಲಿಕ ದಿಗ್ಬಂಧನ ಕೇಂದ್ರದ ಮೇಲೆ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 60 ಮಂದಿ ಸಾವಿಗೀಡಾಗಿದ್ದರೆ, ಹೌದಿ ವಶದಲ್ಲಿರುವ ರಾಜಧಾನಿ ಸನಾದಲ್ಲಿ ಮಂಗಳವಾರ 20 ಮಂದಿ ಸಾವಿಗೀಡಾಗಿದ್ದರು.
Breaking: Abu Dhabi’s air defenses have been activated. The Houthi Resistance has launched ballistic missiles at the UAE. Reports of attacks on Saudi Arabia as well. pic.twitter.com/xBoORj1tW1
— Richard Medhurst (@richimedhurst) January 24, 2022