ದ.ಕ. ದಲ್ಲಿ ವಸಾಹತುಶಾಹಿ ವಿರುದ್ಧದ ನಾಲ್ಕು ರೈತ ದಂಗೆಗಳು
ಚಿತ್ರ ಕೃಪೆ: ಸತೀಶ್ ಬಿ.ಆರ್
‘ಅರ್ಥಶಾಸ್ತ್ರ’ ಉಪನ್ಯಾಸಕರಾಗಿರುವ ಪ್ರಭಾಕರ ಶಿಶಿಲ ಅವರು ಕನ್ನಡ ನಾಡಿಗೆ ಸಾಹಿತ್ಯ ಚಟುವಟಿಕೆಗಳ ಮೂಲಕ ಹೆಚ್ಚು ಪರಿಚಿತರು. ಕನ್ನಡ ಸಾಹಿತ್ಯಲೋಕದೊಳಗೆ ಶಿಕಾರಿಗಿಳಿದದ್ದು, ಬಡ್ಡಡ್ಕ ಅಪ್ಪಯ್ಯ ಗೌಡರ ಬೇಟೆಯ ಕತೆಗಳನ್ನಾಧರಿಸಿದ ‘ಶಿಕಾರಿಯ ಸೀಳುನೋಟ’ ಕೃತಿಯ ಮೂಲಕ . ಇವರ ‘ಪುಂಸ್ತ್ರೀ’ ಕಾದಂಬರಿ ಹತ್ತು ಭಾಷೆಗಳಿಗೆ ಅನುವಾದವಾಗಿದೆ. ಕರ್ನಾಟಕ ಸಾಹಿತ್ಯ ಅಕಾಡಮಿ ಮತ್ತು ಯಕ್ಷಗಾನ ಅಕಾಡಮಿ ಪ್ರಶಸ್ತಿಯನ್ನು ಇವರು ತಮ್ಮದಾಗಿಸಿಕೊಂಡಿದ್ದಾರೆ. ಡಾ. ಪ್ರಭಾಕರ ಶಿಶಿಲರು ಹಿರಿಯ ಸಾಹಿತಿ ಮತ್ತು ಸಂಶೋಧಕರು. ಇದುವರೆಗೆ ಕನ್ನಡದಲ್ಲಿ 50 ಮತ್ತು ಅರ್ಥಶಾಸ್ತ್ರದಲ್ಲಿ 175 ಕೃತಿಗಳನ್ನು ಹೊರ ತಂದಿದ್ದಾರೆ. ಕೊಡಗಿನ ಇತಿಹಾಸವನ್ನು ವ್ಯಾಪಕವಾಗಿ ಅಧ್ಯಯನ ಮಾಡಿ ನದಿ ಎರಡರ ನಡುವೆ, ಮೂಡಣದ ಕೆಂಪುಕಿರಣ, ದೊಡ್ಡ ವೀರರಾಜೇಂದ್ರ ಮತ್ತು ಲಿಂಗರಾಜ ಎಂಬ ನಾಲ್ಕು ಸಂಶೋಧನಾತ್ಮಕ ಐತಿಹಾಸಿಕ ಕೃತಿ ರಚಿಸಿದ್ದಾರೆ. ಅಮರ ಸುಳ್ಯದ ಸ್ವಾತಂತ್ರ ಹೋರಾಟ ಎಂಬ ಕೃತಿಯೊಂದನ್ನು ಎಳೆಯರಿಗಾಗಿಯೇ ರಚಿಸಿದ್ದಾರೆ. ಕೊಡಗು ಕೆನರಾ ಸ್ವಾತಂತ್ರ ಹೋರಾಟ ಎಂಬ ಅವರ ಕೃತಿ ಶೀಘ್ರದಲ್ಲಿ ಹೊರ ಬರಲಿದೆ. ಇತಿಹಾಸದಲ್ಲೂ ಅಪಾರ ಆಸಕ್ತಿ ಹೊಂದಿರುವ ಶಿಶಿಲ ಅವರು ಇಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ರಿಟಿಷರ ವಿರುದ್ಧ ನಡೆದ ರೈತ ದಂಗೆಗಳನ್ನು ಸಂಕ್ಷಿಪ್ತವಾಗಿ ಕಟ್ಟಿಕೊಟ್ಟಿದ್ದಾರೆ.
- ಡಾ. ಬಿ. ಪ್ರಭಾಕರ ಶಿಶಿಲ
1837ರ ಅಮರ ಸುಳ್ಯ ರೈತ ಬಂಡಾಯದ ಬಳಿಕ ಪುತ್ತೂರಿನಿಂದ ಮಡಿಕೇರಿವರೆಗಿನ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಯಿತು. ರೈತ ಹೋರಾಟವನ್ನು ದರೋಡೆ ಮತ್ತು ದೇಶದ್ರೋಹಿ ಕೃತ್ಯವೆಂಬಂತೆ ಬಿಂಬಿಸಲಾಯಿತು. ಬಹುತೇಕ ಸ್ವಾತಂತ್ರ ಹೋರಾಟಗಾರ ಮನೆಯವರಿಗೆ ತಮ್ಮ ಹಿರಿಯರ ಬಲಿದಾನ ಗೊತ್ತಾಗದೇ ಹೋಯಿತು. ಪರಿಣಾಮವಾಗಿ ಇಂದಿಗೂ ಅಮರ ಸುಳ್ಯ ಸೀಮೆ ಹಿಂದುಳಿದ ಪ್ರದೇಶವಾಗಿ ಉಳಿದುಕೊಂಡಿದೆ.
ದ.ಕ. ಜಿಲ್ಲೆಯಲ್ಲಿ ವಸಾಹತುಶಾಹಿ ಆಡಳಿತ ಕ್ರಿ.ಶ. 1799ರಿಂದ ಆರಂಭವಾಯಿತು. ಅಲ್ಲಿಯವರೆಗೆ ಟಿಪ್ಪು ಈ ಜಿಲ್ಲೆಯ ಆಡಳಿತ ನಡೆಸುತ್ತಿದ್ದ. ಅವನ ತೆರಿಗೆ ವ್ಯವಸ್ಥೆ ಸೌಮ್ಯವಾಗಿತ್ತು. ಕಂದಾಯ ವ್ಯವಸ್ಥೆ ಕ್ರೂರವಾಗಿರಲಿಲ್ಲ. ನೈಸರ್ಗಿಕ ಪ್ರಕೋಪಗಳಾದಾಗ ಅವನು ಕಂದಾಯ ಮನ್ನಾ ಮಾಡುತ್ತಿದ್ದ. ಗಾಂಜಾ, ಆಫೀಮು, ಸಾರಾಯಿ ಸೇವನೆಯನ್ನು ನಿಷೇಧಿಸಿ ಮಹಿಳೆಯರ ಮೆಚ್ಚುಗೆಗೆ ಪಾತ್ರನಾಗಿದ್ದ. ಉಪ್ಪು ಮತ್ತು ಹೊಗೆಸೊಪ್ಪು ಉತ್ಪಾದನೆಯನ್ನು ಯಾರು ಬೇಕಾದರೂ ಮಾಡಬಹುದಿತ್ತು. ಆದುದರಿಂದ ಟಿಪ್ಪುವಿನ ಕಾಲದಲ್ಲಿ ರೈತರು ಬಂಡೇಳಲಿಲ್ಲ. ಆದರೆ ವಸಾಹತು ಶಾಹಿ ಆಡಳಿತಕ್ಕೆ ಆರಂಭದಲ್ಲಿಯೇ ಪ್ರತಿರೋಧ ತೋರಿಸಿದರು. ಈ ಜಿಲ್ಲೆಯ ರೈತರು ಸ್ವಾತಂತ್ರ ಪೂರ್ವದಲ್ಲಿ ಬ್ರಿಟಿಷರ ವಿರುದ್ಧ ನಾಲ್ಕು ಬಾರಿ ಬಂಡೆದ್ದಿದ್ದರು.
1) 1811ರ ಕಂದಾಯ ನಿರಾಕರಣೆ ಚಳವಳಿ
ಕ್ರಿ.ಶ. 1799ರಲ್ಲಿ ಈ ಜಿಲ್ಲೆಯ ಆಡಳಿತ ಚುಕ್ಕಾಣಿ ಹಿಡಿದ ಈಸ್ಟ್ ಇಂಡಿಯಾ ಕಂಪೆನಿ ಕಂದಾಯ ಆಡಳಿತ ವ್ಯವಸ್ಥೆಯಲ್ಲಿ ನಾಲ್ಕು ಬದಲಾವಣೆ ಮಾಡಿತು.
► ಒಟ್ಟು ಉತ್ಪತ್ತಿಯ ಶೇ.50ರಷ್ಟನ್ನು ಕಂದಾಯವಾಗಿ ಸರಕಾರಕ್ಕೆ ನಗದು ರೂಪದಲ್ಲಿ ನೀಡುವುದು.
► ನೈಸರ್ಗಿಕ ಪ್ರಕೋಪಗಳಿಂದ ಒಂದು ವರ್ಷ ಕಂದಾಯ ಕಟ್ಟಲಾಗದೆ ಇದ್ದರೆ ಮರು ವರ್ಷ ಕಂದಾಯದ ಒಂದೂವರೆ ಪಟ್ಟು ಕಂದಾಯ ಕಟ್ಟುವುದು.
► ಉಪ್ಪುಮತ್ತು ತಂಬಾಕನ್ನು ಸರಕಾರದಿಂದ ಅಧಿಕೃತ ಪರವಾನಿಗೆ ಪಡೆದ ಕೆಲವೇ ಮಂದಿ ಉತ್ಪಾದಿಸುವುದು.
► ಎಲ್ಲಾ ವ್ಯವಹಾರಗಳನ್ನು ಹಣದ ರೂಪದಲ್ಲಿ ನಡೆಸುವುದು.
ಆಗಿನ ದ.ಕ. ಜಿಲ್ಲೆಯಲ್ಲಿ ಈಗಿನ ಉಡುಪಿ, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ಎಲ್ಲಾ ತಾಲೂಕುಗಳು ಒಳಗೊಂಡಿದ್ದವು. ಕಾಸರಗೋಡು ಜಿಲ್ಲೆ ಆಗ ಬೇಕಲ ತಾಲೂಕಾಗಿತ್ತು. ಅಲ್ಲಿ ಯಾವ ನಿರ್ಬಂಧವೂ ಇಲ್ಲದೆ ತಂಬಾಕನ್ನು ಸಹಸ್ರಾರು ರೈತರು ಬೆಳೆಯುತ್ತಿದ್ದರು. ಬೇಕಲ, ಕುಂಬಳೆ, ಮಂಜೇಶ್ವರ, ಉದ್ಯಾವರ, ಕಾಪು ಮತ್ತು ಮೂಲ್ಕಿಗಳಲ್ಲಿ ಉಪ್ಪನ್ನು ಉತ್ಪಾದಿಸಲಾಗುತ್ತಿತ್ತು. ಸರಕಾರದ ಉಪ್ಪು ಮತ್ತು ಹೊಗೆೆಸೊಪ್ಪು ಏಕಸ್ವಾಮ್ಯ ಕಾಯ್ದೆಯಿಂದ ಬೇಕಲದ ರೈತರ ಹೊಟ್ಟೆಗೆ ಪೆಟ್ಟು ಬಿತ್ತು. ಅವೆರಡರ ಕೊಳ್ಳುವ ಬೆಲೆ ಮತ್ತು ಮಾರುವ ಬೆಲೆಯನ್ನು ಸರಕಾರವೇ ನಿರ್ಧಾರ ಮಾಡತೊಡಗಿದುದರಿಂದ ದರ ದುಪ್ಪಟ್ಟಾಗಿ ಗ್ರಾಹಕರು ಬೆಲೆ ಏರಿಕೆಯ ದಳ್ಳುರಿಯಲ್ಲಿ ಸಿಲುಕಿದರು. ಇದರ ವಿರುದ್ಧ ಕ್ರಿ. ಶ. 1811ರಲ್ಲಿ ದ.ಕ. ಜಿಲ್ಲೆಯ ರೈತರು ಕರ ನಿರಾಕರಣೆ ಚಳವಳಿ ನಡೆಸಿದರು.
ಅದು ಒಂದು ರೀತಿ ಅಹಿಂಸಾತ್ಮಕ ದಂಗೆಯಾಗಿತ್ತು. ಬ್ರಿಟಿಷರ ಕಂದಾಯ ವ್ಯವಸ್ಥೆಯನ್ನಾಗಲಿ, ನ್ಯಾಯಾಂಗ ವ್ಯವಸ್ಥೆಯನ್ನಾಗಲಿ ದ.ಕ. ಜಿಲ್ಲೆಯ ರೈತರು ಒಪ್ಪಿಕೊಳ್ಳಲಿಲ್ಲ. ಉಪ್ಪು ಮತ್ತು ಹೊಗೆಸೊಪ್ಪು ಏಕಸ್ವಾಮ್ಯದಿಂದಾಗಿ ಲಕ್ಷಾಂತರ ರೈತರು ತೊಂದರೆಗೊಳಗಾದರು. ಅವುಗಳ ಜತೆಗೆ ಕ್ರಿ.ಶ. 1800ರ ಪ್ರಥಮ ದಶಕದ ಆರ್ಥಿಕ ಹಿಂಜರಿತದಿಂದಾಗಿ ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಲೆ ಸಿಗಲಿಲ್ಲ. ಆದುದರಿಂದ ರೈತರು ಕಂದಾಯ ಕಟ್ಟಲಾಗದೆ ಚಳವಳಿ ನಡೆಸಿದರು.
ಆಗ ಅಲೆಕ್ಸಾಂಡರ್ ರೀಡ್ ಎಂಬಾತ ದ.ಕ. ಜಿಲ್ಲಾಧಿಕಾರಿಯಾಗಿದ್ದ. ಕ್ರಿ.ಶ.1811ರ ಕಂದಾಯ ನಿರಾಕರಣೆಗೆ ಕಾರಣವೇನೆಂದು ಸರಕಾರ ಕೇಳಿದಾಗ ರೈತರು ಸುಳ್ಳು ಹೇಳಿ ಕಂದಾಯ ವಂಚಿಸುತ್ತಿದ್ದಾರೆಂದು ಕಾರಣ ನೀಡಿದ. ಈ ಕಾರಣವನ್ನು ನಂಬದ ಈಸ್ಟ್ ಇಂಡಿಯಾ ಕಂಪೆನಿ ಚಳವಳಿಯನ್ನು ಸೌಮ್ಯವಾಗಿ ಹತ್ತಿಕ್ಕಲು ಸೂಚಿಸಿತು. ಹಾಗಾಗಿ ಅಲೆಕ್ಸಾಂಡರ್ ರೀಡ್ ಮೂರು ಘೋಷಣೆಗಳನ್ನು ಮಾಡಿದ.
► ಬಲವಾದ ಕಾರಣಗಳಿಂದ ಸಾಗುವಳಿ ಮಾಡಲಾಗದ ಭೂಮಿಗೆ ಒಂದು ವರ್ಷದ ಮಟ್ಟಿಗೆ ಕಂದಾಯ ವಿನಾಯಿತಿ. ಮರು ವರ್ಷ ಹಿಂದಿನ ಕಂದಾಯಕ್ಕೆ ಒಂದೂವರೆ ಪಟ್ಟು ಹೆಚ್ಚು ಸೇರಿಸಿ ಕಂದಾಯ ಕಟ್ಟುವುದು.
► ಭೂ ಕಂದಾಯ ನಾಲ್ಕು ನೂರು ರೂ.ಗಳಿಗಿಂತ ಕಡಿಮೆ ಎಂದಾದರೆ ಸಾಗುವಳಿ ಮಾಡಿದ ಜಾಗಕ್ಕೆ ಮಾತ್ರ ಕಂದಾಯ ಕಟ್ಟುವುದು.
► ಭೂ ಕಂದಾಯವು 400 ರೂ.ಗಳಿಗಿಂತ ಹೆಚ್ಚು ಎಂದಾದರೆ ಸಾಗುವಳಿದಾರ ಹೊಂದಿರುವ ಸಂಪೂರ್ಣ ಭೂಮಿಗೆ ಕಂದಾಯ ಕಟ್ಟುವುದು.
ಈ ವಿನಾಯಿತಿಗಳು ತೋರಿಕೆಯವು ಮಾತ್ರವಾಗಿದ್ದವು. ಅವುಗಳಿಂದ ರೈತರಿಗೆ ಯಾವ ಪ್ರಯೋಜನವೂ ಸಿಗಲಿಲ್ಲ. ದೊಡ್ಡ ರೈತರು ಕಂದಾಯ ಕಟ್ಟಿ ಬ್ರಿಟಿಷರ ಕೃಪೆಗೆ ಪಾತ್ರರಾಗುತ್ತಿದ್ದರು. ಸಣ್ಣ ರೈತರು ಭೂಮಿ ಕಳಕೊಂಡು ಕೃಷಿ ಕಾರ್ಮಿಕರಾದರು. ಇದರ ಪರಿಣಾಮವೇ ಕ್ರಿ. ಶ. 1831ರ ಕೂಟುದಂಗೆ.
2.) ಕೂಟು ದಂಗೆ 1831
ಕ್ರಿ. ಶ. 1811ರ ಕರ ನಿರಾಕರಣೆ ಚಳವಳಿ ವೈಯಕ್ತಿಕ ಮಟ್ಟದಲ್ಲಿ ನಡೆದರೆ ಕ್ರಿ. ಶ. 1831ರ ಕೂಟು ದಂಗೆ ಸಾಮೂಹಿಕ ಮಟ್ಟದ್ದಾಗಿತ್ತು. ಶಾಂತಿಯುತವಾದ ಪ್ರದರ್ಶನ ಮತ್ತು ಈಸ್ಟ್ ಇಂಡಿಯಾ ಕಂಪೆನಿಗೆ ಬಹಿಷ್ಕಾರ ಇವು ಕೂಟುದಂಗೆಯ ಎರಡು ರೂಪಗಳಾಗಿದ್ದವು. ಬೇಕಲದಲ್ಲಿ 1831 ರ ಜನವರಿ ಮೊದಲ ವಾರದಲ್ಲಿ ಕೂಟು ದಂಗೆ ಆರಂಭವಾಯಿತು. ಅದು ಬಾರಕೂರು, ಬಂಟವಾಳ, ಬ್ರಹ್ಮಾವರ, ಮಧೂರು, ಮಂಜೇಶ್ವರ, ಮುಲ್ಕಿ, ಕದ್ರಿ, ಕುಂಬಳೆ, ವಾಮಂಜೂರು, ಮೊಗ್ರಾಲು, ಉದ್ಯಾವರ, ಉಪ್ಪಿನಂಗಡಿ ಮತ್ತು ವಿಟ್ಲಗಳಲ್ಲಿ ಪಸರಿಸಿ ಬ್ರಿಟಿಷ್ ಆಡಳಿತಕ್ಕೆ ದೊಡ್ಡ ಸವಾಲನ್ನು ಎಸೆಯಿತು.
ಕೂಟು ದಂಗೆಯನ್ನು ಆರಂಭಿಸಿದವರು ರೈತರು. ಅದಕ್ಕೆ ಬೆಂಬಲ ನೀಡಿದವರು ಕಂದಾಯ ಸಂಗ್ರಹಿಸುತ್ತಿದ್ದ ಪಟೇಲರು ಮತ್ತು ಶ್ಯಾನು ಭೋಗರು. ಇವರಲ್ಲಿ ಬಹುತೇಕರು ಸ್ಥಾನಿಕ ಬ್ರಾಹ್ಮಣರಾಗಿದ್ದರು. ಈ ಸ್ಥಾನಿಕ ಬ್ರಾಹ್ಮಣರ ಮೇಲೆ ಕ್ರಿಶ್ಚಿಯನ್ ಅಧಿಕಾರಿಗಳನ್ನು ಛೂ ಬಿಟ್ಟು ಬ್ರಿಟಿಷ್ ಸರಕಾರ ನಿಜವಾದ ಸಮಸ್ಯೆಗಳನ್ನು ಅಡಗಿಸಿಟ್ಟು ಬಂಡಾಯವನ್ನು ಬ್ರಾಹ್ಮಣ, ಕ್ರಿಶ್ಚಿಯನ್ ಕೋಮು ದಂಗೆಯನ್ನಾಗಿ ಬಿಂಬಿಸಲು ಯತ್ನಿಸಿತು. ಆದರೆ ದ.ಕ.ಜಿಲ್ಲೆಯ ರೈತರು ಇದನ್ನು ನಂಬಲು ಸಿದ್ಧರಿರಲಿಲ್ಲ. ಕೂಟು ದಂಗೆ ನಿಲ್ಲುವ ಲಕ್ಷಣ ಕಾಣದಾದಾಗ ಆಗಿನ ಜಿಲ್ಲಾಧಿಕಾರಿ ಕ್ಯಾಮರಾೂನ್ ರೈತ ಮುಖಂಡರ ಸಭೆ ಕರೆದು ತಾನು ಪ್ರತಿಯೊಬ್ಬ ರೈತನ ನಷ್ಟವನ್ನು ಅಂದಾಜಿಸಿ ಪರಿಹಾರ ಒದಗಿಸುವುದಾಗಿ ಘೋಷಿಸಿದ. ಪರಿಣಾಮವಾಗಿ ಕ್ರಿ. ಶ. 1831ರ ಎಪ್ರಿಲ್ ತಿಂಗಳಲ್ಲಿ ಕೂಟು ದಂಗೆ ಅಂತ್ಯವಾಯಿತು.
ಕೂಟು ದಂಗೆಯು ಎರಡು ಸ್ಪಷ್ಟ ಪರಿಣಾಮಗಳನ್ನು ಉಂಟು ಮಾಡಿತು.
► ಅದು ದೊಡ್ಡ ರೈತರಿಂದ ಸಣ್ಣ ರೈತರನ್ನು ಪ್ರತ್ಯೇಕಿಸಿತು.
► ಕ್ರಿಶ್ಚಿಯನ್ ಅಧಿಕಾರಿಗಳಿಂದ ಬ್ರಾಹ್ಮಣ ಮತ್ತು ಶೂದ್ರ ಅಧಿಕಾರಿಗಳನ್ನು ಪ್ರತ್ಯೇಕಿಸಿತು.
ಇದರ ಪರಿಣಾಮ ಕ್ರಿ.ಶ. 1837ರ ಅಮರ ಸುಳ್ಯ ದಂಗೆಯಲ್ಲಿ ಕಾಣಿಸಿಕೊಂಡಿತು.
3.) ಕೂಜುಗೋಡು ರೈತ ದಂಗೆ 1836
ಕ್ರಿ.ಶ. 1834ರಲ್ಲಿ ಈಸ್ಟ್ ಇಂಡಿಯಾ ಕಂಪೆನಿ ಚಿಕ್ಕವೀರರಾಜನನ್ನು ಸಿಂಹಾಸನದಿಂದ ಇಳಿಸಿ ಕೊಡಗನ್ನು ತನ್ನ ವಸಾಹತನ್ನಾಗಿ ಮಾಡಿಕೊಂಡಿತು. ಆ ಬಳಿಕ ಅದು ಮಾಡಿದ ತಕ್ಷಣದ ಕೆಲಸವೆಂದರೆ ಸುಳ್ಯ ಮತ್ತು ಪುತ್ತೂರಿನ 110 ಗ್ರಾಮಗಳನ್ನು ಕೊಡಗಿನಿಂದ ಬೇರ್ಪಡಿಸಿ ದ.ಕ. ಜಿಲ್ಲೆಗೆ ಸೇರಿಸಿದ್ದು. ಹಾಗಾಗಿ ಈ 11 ಗ್ರಾಮಗಳ ಮೇಲೆ ದ.ಕ. ಜಿಲ್ಲೆಯ ಕ್ರೂರ ಕಂದಾಯ ವ್ಯವಸ್ಥೆ ಹೇರಲ್ಪಟ್ಟಿತು. ರೈತಾಪಿ ಜನರು ಕ್ರುದ್ಧರಾದರು. ಬ್ರಿಟಿಷರ ವಿರುದ್ಧ ದಂಗೆ ಏಳುವ ಬಗ್ಗೆ ಸನ್ನಾಹ ಮಾಡತೊಡಗಿದರು.
ಕ್ರಿ. ಶ. 1834ಕ್ಕೆ ಮೊದಲು ಅಪರಂಪಾರನೆಂಬ ಒಬ್ಬ ಜಂಗಮ ಕೊಡಗನ್ನು ಬ್ರಿಟಿಷರು ಆಕ್ರಮಿಸಬಹುದಾದ ಸಾಧ್ಯತೆಯನ್ನು ಮನಗಂಡಿದ್ದ. ಆ ಬಳಿಕ ಸಾಮೂಹಿಕ ಮತಾಂತರಗಳು ನಡೆಯಬಹುದೆಂಬ ಭೀತಿ ಅವನಿಗಿತ್ತು. ಹಾಗಾಗಿ ಅವನು ಹುಲಿ ಕಡಿದ ನಂಜಯ್ಯ ಎಂಬ ಪ್ರಚಂಡ ಅನುಭವಿಯ ಸ್ನೇಹ ಬೆಳೆಸಿ ಜಂಗಮರ ಪಡೆಯೊಂದನ್ನು ಸಿದ್ಧಪಡಿಸಿದ. ಈ ಪಡೆಯಲ್ಲಿ ಚಿಕ್ಕವೀರರಾಜನ ಸುಬೇದಾರ ಕಲ್ಯಾಣಸ್ವಾಮಿ ಮತ್ತು ಶನಿವಾರ ಸಂತೆಯ ರೈತ ಪುಟ್ಟ ಬಸವ ಜಂಗಮರಾಗಿ ಸೇರಿಕೊಂಡಿದ್ದರು. ಆದರೆ ಕೊಡಗು ಬ್ರಿಟಿಷರ ವಸಾಹತು ಆದಾಗ ಈ ಜಂಗಮ ಪಡೆಯಿಂದ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಬ್ರಿಟಿಷರು ಕೊಡಗಿನ ಕಂದಾಯ ವ್ಯವಸ್ಥೆಯನ್ನು ಬದಲಾಯಿಸಲು ಹೋಗದ ಕಾರಣ ಕೊಡಗರನ್ನು ಬಂಡೆಬ್ಬಿಸುವ ಅಪರಂಪಾರನ ಪ್ರಯತ್ನಕ್ಕೆ ಜಯ ಸಿಗಲಿಲ್ಲ. ಹಾಗಾಗಿ ಅಪರಂಪಾರ ದ.ಕ. ಜಿಲ್ಲೆಯನ್ನು ತನ್ನ ಪ್ರಯೋಗ ಶಾಲೆಯನ್ನಾಗಿ ಮಾಡಲು ಬಿಸಿಲೆಘಾಟಿ ಇಳಿದು, ಸುಬ್ರಹ್ಮಣ್ಯ ಕ್ಷೇತ್ರ ಹಾದು ಕೂಜುಗೋಡು ಕಟ್ಟೆಮನೆಗೆ ಬಂದ.
ಆಗ ಕೂಜುಗೋಡು ಕಟ್ಟೆಮನೆಯ ಯಜಮಾನನಾಗಿದ್ದವನು ಪಟೇಲ ಅಪ್ಪಯ್ಯಗೌಡ. ಅವನು ಊರ ಪಟೇಲ ಮಾತ್ರವಲ್ಲದೆ ಸುಬ್ರಹ್ಮಣ್ಯ ದೇವಾಲಯದ ಮೊಕ್ತೇಸರನೂ ಆಗಿದ್ದ. ಅವನಿಗೆ ಅಮೈ ಮಲ್ಲಪ್ಪನೆಂಬ ಪರಮ ಧೈರ್ಯಶಾಲಿ ಮಿತ್ರನೊಬ್ಬನಿದ್ದ. ಅಪರಂಪಾರನ ಮತ್ತು ಜಂಗಮ ಮಿತ್ರರೊಡನೆ ಸಮಾಲೋಚನೆ ನಡೆಸಿದ ಅಪ್ಪಯ್ಯ ಮತ್ತು ಮಲ್ಲಪ್ಪ ಬ್ರಿಟಿಷರ ವಿರುದ್ಧ ಹೋರಾಡಲು ರೈತರನ್ನು ಒಗ್ಗೂಡಿಸಲು ತೊಡಗಿದರು. ರೈತ ಪಡೆಗೆ 200 ರೈತರ ಸೇರ್ಪಡೆಯಾಯಿತು. ಅವರು ಮಡಿಕೇರಿ ಮುತ್ತುವ ಯೋಜನೆ ಹಾಕಿಕೊಂಡರು.
ಈ ಸುದ್ದಿ ಕೊಡಗಿನ ಆಡಳಿತಾಧಿಕಾರಿ ಲೀಹಾರ್ಡಿಗೆ ತಲುಪಿತು. ಅವನು ಬೋಪು ದಿವಾನನ ನೇತೃತ್ವದಲ್ಲಿ ದೊಡ್ಡ ಸೇನೆಯೊಂದನ್ನು ಕೂಜುಗೋಡಿಗೆ ಕಳಹಿಸಿಕೊಟ್ಟ. ಅದನ್ನು ಎದುರಿಸಲು ಅಪ್ಪಯ್ಯ ಗೌಡನ ದಂಡಿನಿಂದ ಸಾಧ್ಯವಾಗದೆ ಅದು ಪಲಾಯನ ಮಾಡಿತು. ಅಪರಂಪಾರ ಮಂಜರಬಾದಿನಲ್ಲಿ ಮತ್ತು ಕಲ್ಯಾಣ ಸ್ವಾಮಿ ಬೈತೂರಿನಲ್ಲಿ ಸಿಕ್ಕಿ ಬಿದ್ದರು. ಹುಲಿ ಕಡಿದ ನಂಜಯ್ಯ ಮತ್ತು ಪುಟ್ಟ ಬಸವ ಉಪಾಯದಿಂದ ತಪ್ಪಿಸಿಕೊಂಡು ಮೊದಲೇ ನಿಶ್ಚಯಿಸಿದಂತೆ ಕೆದಂಬಾಡಿ ರಾಮಗೌಡನಲ್ಲಿಗೆ ಬಂದು ಪೂಮಲೆ ಅರಣ್ಯದಲ್ಲಿ ಭೂಗತರಾಗಿ ಸಂದರ್ಭಕ್ಕಾಗಿ ಕಾಯತೊಡಗಿದರು.
4.) ಅಮರ ಸುಳ್ಯ ರೈತ ದಂಗೆ 1837
ಅಮರ ಸುಳ್ಯದ ಪೂಮಲೆ ಕೆದಂಬಾಡಿಯಲ್ಲಿ ರಾಮ ಗೌಡನೆಂಬ ಮಧ್ಯಮ ವರ್ಗದ ರೈತ ಕಂದಾಯ ಕಟ್ಟಲಾಗದೆ ಭೂರಹಿತ ಕಾರ್ಮಿಕರಾದ ಸುಮಾರು 1,200 ರೈತರನ್ನು ಒಗ್ಗೂಡಿಸಿ ದಂಡೊಂದನ್ನು ಕಟ್ಟಿದ. ಚಿಕ್ಕವೀರರಾಜೇಂದ್ರನ ಸುಬೇದಾರರುಗಳಾಗಿದ್ದ ಗುಡ್ಡೆಮನೆ ಅಪ್ಪಯ್ಯ ಮತ್ತು ತಮ್ಮಯ್ಯ ಹಾಗೂ ಚೆಟ್ಟಿ ಕುಡಿಯ ಮತ್ತು ಕರ್ತು ಕುಡಿಯರಿಂದ ರೈತ ದಂಡಿಗೆ ಶಸ್ತ್ರಾಸ್ತ್ರ ಶಿಕ್ಷಣ ಕೊಡಿಸಿದ್ದ. ಬ್ರಿಟಿಷರನ್ನು ದಕ್ಷಿಣ ಹಿಂದೂಸ್ಥಾನದಿಂದ ಓಡಿಸಿ ರಾಜ ಪ್ರಭುತ್ವವನ್ನು ಮರಳಿ ಸ್ಥಾಪಿಸುವ ಕನಸನ್ನು ಎಲ್ಲರೂ ಕಾಣತೊಡಗಿದರು.
ಈ ಹಿಂದೆ ಅಪರಂಪಾರನನ್ನು ಕೊಡಗಿನ ಅಪ್ಪಾಜಿ ರಾಜನ ಹಿರಿಯ ಮಗ ವೀರಪ್ಪನೆಂದೂ, ಕಲ್ಯಾಣಸ್ವಾಮಿಯನ್ನು ಕಿರಿಯ ಮಗ ನಂಜುಂಡನೆಂದೂ ಬಿಂಬಿಸಿ ಹುಲಿ ಕಡಿದ ನಂಜಯ್ಯ ಒಂದು ವ್ಯೆಹ ರಚಿಸಿದ್ದ. ಅವರಿಬ್ಬರ ಬಂಧನದಿಂದಾಗಿ ಪುಟ್ಟ ಬಸವ ದಂಡಿನ ನಾಯಕನಾಗುವುದು ಅನಿವಾರ್ಯವಾಯಿತು. ಅದನ್ನು ವಿರೋಧಿಸಿ ತೊಂದರೆ ನೀಡಿದ ಅಮಲ್ದಾರ ಅಟ್ಲೂರು ರಾಮಪ್ಪಯ್ಯನನ್ನು ಕೊಲ್ಲಬೇಕಾಗಿ ಬಂತು. ಪುಟ್ಟಬಸವನನ್ನು ಕಲ್ಯಾಣಸ್ವಾಮಿ ಎಂದು ಬಿಂಬಿಸಲಾಯಿತು. ನಿರೂಪಗಳನ್ನು ಸ್ವಾಮಿ ಅಪರಂಪಾರನ ಹೆಸರಲ್ಲಿ ಹೊರಡಿಸುವುದೆಂದು ನಿರ್ಣಯಿಸಲಾಯಿತು. ಅಲ್ಲದೆ ಇಡೀ ಜಿಲ್ಲೆಗೆ ಅನ್ವಯವಾಗುವಂತೆ ನಾಲ್ಕು ಅಂಶಗಳ ಇಸ್ತಿಹಾರು ಒಂದನ್ನು ಸಿದ್ಧಪಡಿಲಾಯಿತು.
► ರಾಜರ ಕಾಲದ ಕಂದಾಯ ವ್ಯವಸ್ಥೆಯ ಮರುಸ್ಥಾಪನೆ.
► ಉಪ್ಪು, ಹೊಗೆಸೊಪ್ಪು ಏಕಸ್ವಾಮ್ಯ ಕಾಯ್ದೆಯ ರದ್ದತಿ.
► ಮೂರು ವರ್ಷ ಕಂದಾಯ ಮನ್ನಾ.
► ಸರಕಾರಿ ನೌಕರರಿಗೆ ಒಂದು ತಿಂಗಳ ವೇತನ ಮುಂಗಡ ನೀಡಿಕೆ.
ಕ್ರಿ. ಶ. 1837ರ ಮಾರ್ಚ್ 30ರಂದು ಕೆದಂಬಾಡಿಯಿಂದ ಹೊರಟ ರೈತ ದಂಡು ಅಮರ ಸುಳ್ಯದ ರಾಜಧಾನಿ ಬೆಳ್ಳಾರೆಯನ್ನು ಮುತ್ತಿ ಖಜಾನೆಯನ್ನು ವಶಪಡಿಸಿಕೊಂಡಿತು. ಮರುದಿನ ಪುತ್ತೂರಲ್ಲಿ ಆಗಿನ ಜಿಲ್ಲಾಧಿಕಾರಿ ಲೂವಿನ್ ಮೇಜರ್ ಡೌಕರ್‌ನ ಜೊತೆ ತನ್ನ 150 ಸೈನಿಕರೊಡನೆ ರೈತ ದಂಡಿಗೆ ಎದುರಾದ. ಸಂಘರ್ಷದಲ್ಲಿ ನಾಲ್ವರು ರೈತರು ಹುತಾತ್ಮರಾದರು, 1,200 ರೈತರನ್ನು ಎದುರಿಸಲಾಗದೆ ಲೂವಿನ್‌ನ ದಂಡು ಹೆದರಿ ಪಲಾಯನ ಮಾಡಿತು. ಎಪ್ರಿಲ್ 5ರಂದು ರೈತ ದಂಡು ಮಂಗಳೂರನ್ನು ಮುಟ್ಟಿ ಬಾವುಟಗುಡ್ಡೆಯಲ್ಲಿ ಹಾಲೇರಿ ರಾಜರ ವಿಜಯ ಧ್ವಜವನ್ನು ಹಾರಿಸಿ ದಕ್ಷಿಣ ಕನ್ನಡ ಜಿಲ್ಲೆ ಸ್ವತಂತ್ರವಾಯಿತೆಂದು ಘೋಷಿಸಿತು. ಎರಡು ವಾರ ಜಿಲ್ಲೆಯ ಆಡಳಿತ ನಡೆಸಿತು. ಆದರೆ ಎಪ್ರಿಲ್ 19ರಂದು ಮುಂಬೈ ಮತ್ತು ತಲಚ್ಚೇರಿಯಿಂದ ಬಂದ ಬೃಹತ್ ಬ್ರಿಟಿಷ್ ಪಡೆಯನ್ನು ಎದುರಿಸಲಾಗದೆ ರೈತ ದಂಡು ಪಲಾಯನ ಮಾಡಿತು. ದಂಡಿನ ನಾಯಕರಾದ ಲಕ್ಷ್ಮಪ್ಪ ಬಂಗರಸ, ಪುಟ್ಟ ಬಸವ ಮತ್ತು ಗುಡ್ಡೆಮನೆ ಅಪ್ಪಯ್ಯರನ್ನು ನೇಣಿಗೇರಿಸಿ ಶವಗಳನ್ನು ಕಾಗೆ ಹದ್ದುಗಳಿಗೆ ಕುಕ್ಕಿ ತಿನ್ನಲು ಅವಕಾಶ ಮಾಡಿಕೊಡಲಾಯಿತು. ಹೀಗೆ ಬಹಳ ಮಹತ್ವಾಕಾಂಕ್ಷೆಯಿಂದ ಆರಂಭವಾದ 1837ರ ರೈತ ದಂಗೆ ದುರಂತದಲ್ಲಿ ಪರ್ಯಾವಸಾನವಾಯಿತು.
ರೈತ ದಂಗೆಗಳು ವಿಫಲವಾದುದೇಕೆ? ಈ ರೈತರು ನೇಗಿಲು ಹಿಡಿದವರೇ ಹೊರತು ಬಂದೂಕು ಹಿಡಿದವರಲ್ಲ. ಅವರ ಸಾಂಪ್ರದಾಯಿಕ ಬಂದೂಕುಗಳಿಂದ ಬ್ರಿಟಿಷರ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಎದುರಿಸಲು ಸಾಧ್ಯವಾಗಲಿಲ್ಲ. ರೈತರಿಗೆ ಸೇನಾ ತರಬೇತಿಯಾಗಲಿ, ಸೇನಾ ಶಿಸ್ತಾಗಲಿ ದಕ್ಕಿರಲಿಲ್ಲ. ಕೊನೆ ಕೊನೆಯಲ್ಲಿ ರೈತ ದಂಡನ್ನು ಸೇರಿಕೊಂಡವರಲ್ಲಿ ಬಂದೂಕು ಕೂಡಾ ಇರಲಿಲ್ಲ. ಇವರನ್ನು ಕೊತ್ತಲಿಂಗೆ ಬಂಟರು ಎಂದು ಕೆಲವು ಇತಿಹಾಸಕಾರರು ಲೇವಡಿ ಮಾಡಿದ್ದಿದೆ.
1837ರ ಅಮರ ಸುಳ್ಯ ರೈತ ಬಂಡಾಯದ ಬಳಿಕ ಪುತ್ತೂರಿನಿಂದ ಮಡಿಕೇರಿವರೆಗಿನ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಯಿತು. ರೈತ ಹೋರಾಟವನ್ನು ದರೋಡೆ ಮತ್ತು ದೇಶದ್ರೋಹಿ ಕೃತ್ಯವೆಂಬಂತೆ ಬಿಂಬಿಸಲಾಯಿತು. ಬಹುತೇಕ ಸ್ವಾತಂತ್ರ ಹೋರಾಟಗಾರ ಮನೆಯವರಿಗೆ ತಮ್ಮ ಹಿರಿಯರ ಬಲಿದಾನ ಗೊತ್ತಾಗದೇ ಹೋಯಿತು. ಪರಿಣಾಮವಾಗಿ ಇಂದಿಗೂ ಅಮರ ಸುಳ್ಯ ಸೀಮೆ ಹಿಂದುಳಿದ ಪ್ರದೇಶವಾಗಿ ಉಳಿದುಕೊಂಡಿದೆ.
ಹೆಚ್ಚಿನ ಓದಿಗೆ
1.ತಿ. ತಾ ಶರ್ಮ -ಕರ್ನಾಟಕದಲ್ಲಿ ಸ್ವಾತಂತ್ರ ಸಂಗ್ರಾಮ
2.ಶ್ಯಾಮ ಭಟ್: ಸೌತ್ ಕೆನರಾ 1799-1860
3. ಎನ್.ಎಸ್. ದೇವಿಪ್ರಸಾದ್ : ಅಮರ ಸುಳ್ಯದ ಸ್ವಾತಂತ್ರ ಸಮರ
4. ಪ್ರಭಾಕರ ಶಿಶಿಲ: ಮೂಡಣದ ಕೆಂಪು ಕಿರಣ
5. ಪ್ರತಿಮಾ ಜಯರಾಂ: ಕೊಡಗು-ಕೆನರಾ ಆರ್ಥಿಕ ಬಂಡಾಯ
6. ಪ್ರಭಾಕರ ಶಿಶಿಲ: ಕೊಡಗು ಕೆನರಾ ಸ್ವಾತಂತ್ರ ಹೋರಾಟ
7. ಪುರುಷೋತ್ತಮ ಬಿಳಿಮಲೆ - ಅಮರ ಸುಳ್ಯದ ರೈತ ಹೋರಾಟ
8. ವಿದ್ಯಾಧರ ಬಡ್ಡಡ್ಕ-ಅಮರ ಸುಳ್ಯ 1837