ಏಳು ಸುರಂಗಗಳನ್ನು ಕೊರೆದ ‘ಒನ್ ಮ್ಯಾನ್ ಆರ್ಮಿ’ ದ.ಕ.ಜಿಲ್ಲೆಯ ಅಮೈ ಮಹಾಲಿಂಗ ನಾಯ್ಕರಿಗೆ ಪದ್ಮಶ್ರೀ ಪ್ರಶಸ್ತಿ
ಅಮೈ ಮಹಾಲಿಂಗ ನಾಯ್ಕ
ಮಂಗಳೂರು, ಜ.25: ಏಕಾಂಗಿಯಾಗಿ ಅಪೂರ್ವ ಮತ್ತು ಅಪಾಯಕಾರಿಯಾದ ಕೆಲಸದ ಮೂಲಕ ಜೀವ ಜಲವನ್ನು ತರಿಸಿ ಬೋಳು ಗುಡ್ಡೆಯನ್ನು ನಂದನವನ ಮಾಡಿದ ಪ್ರಯತ್ನಶೀಲ ಪ್ರಗತಿಪರ ಕೃಷಿಕ ಅಮೈ ಮಹಾಲಿಂಗ ನಾಯ್ಕ ಅವರು ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಬಂಟ್ವಾಳ ತಾಲೂಕಿನ ಅಡ್ಯನಡ್ಕ ಸಮೀಪದ ಅಮೈ ನಿವಾಸಿ 76ರ ಹರೆಯದ ಮಹಾಲಿಂಗ ನಾಯ್ಕ ಅವರು ಕರಾವಳಿ ಜಿಲ್ಲೆಗಳಲ್ಲಿ ಕೃಷಿ ನಿಧಾನವಾಗಿ ಹಿನ್ನೆಲೆಗೆ ಸರಿಯುತ್ತಿರುವ ಸಂದರ್ಭದಲ್ಲಿ ಕೃಷಿಕಾಯಕದ ಮೂಲಕ ಸ್ವಾವಲಂಬಿ ಜೀವನ ನಡೆಸಲು ಸಾಧ್ಯ ಎಂಬುದನ್ನು ಹೊಸ ತಲೆಮಾರಿಗೆ ತೋರಿಸಿಕೊಟ್ಟವರು.
ಕೃಷಿಗೆ ನೀರು ಹಾಯಿಸಲು ಪಂಪ್ಸೆಟ್ಗಳ ಸೌಲಭ್ಯಗಳೇ ಇಲ್ಲದ ಕಾಲದಲ್ಲಿ ಹಿಂದಿನ ತಲೆಮಾರಿನವರು ಅವಲಂಬಿಸಿದ್ದ ಸುರಂಗ ನೀರಿನ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟು, ಇದೇ ವ್ಯವಸ್ಥೆಯಲ್ಲಿ ವಿದ್ಯುತ್ ರಹಿತವಾಗಿ ಗ್ರಾವಿಟಿ ನೆರವಿನಲ್ಲಿ ಕೃಷಿಗೆ ತುಂತುರು ನೀರಾವರಿ, ಸ್ಪ್ರಿಂಕ್ಲರ್ ನೀರಾವರಿ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಯಶಸ್ವಿಯಾಗಿರುವ ಮಾಹಾಲಿಂಗ ನಾಯ್ಕ ಏಕಾಂಗಿಯಾಗಿ ಏಳು ಸುರಂಗಗಳನ್ನು ಕೊರೆದ 'ಒನ್ ಮ್ಯಾನ್ ಆರ್ಮಿ'ಯಾಗಿದ್ದಾರೆ.
ಮಹಾಲಿಂಗ ನಾಯ್ಕರ ಬದುಕಿನ ಯಶೋಗಾಥೆ
ಅಡಿಕೆ, ತೆಂಗಿನ ಮರ ಏರುವುದರಲ್ಲಿ ನಿಪುಣರಾಗಿದ್ದ ಕೃಷಿ ಕೂಲಿ ಕಾರ್ಮಿಕ ಮಹಾಲಿಂಗ ನಾಯ್ಕ 1978ರಲ್ಲಿ ಮಹಾಬಲ ಭಟ್ಟರ ಮೂಲಕ ಎರಡು ಎಕರೆ ಗುಡ್ಡ ‘ದರ್ಖಾಸ್ತು‘ ರೂಪದಲ್ಲಿ ಪಡೆದಿದ್ದರು. ಮನೆ ಕಟ್ಟಲು ಅಸಾಧ್ಯವಾದ, ನೀರಿಲ್ಲದ ಇಳಿಜಾರು ಬೋಳು ಗುಡ್ಡದಲ್ಲಿ ಕೃಷಿ ತೋಟ ಮಾಡುವುದು ಮಹಾಲಿಂಗ ನಾಯ್ಕರಿಗೆ ಸವಾಲಾಗಿ ಕಂಡು ಬಂದರೂ ಅವರು ತನ್ನ ಪ್ರಯತ್ನವನ್ನು ಬಿಡಲಿಲ್ಲ. ಅಲ್ಲೇ ಭವಿಷ್ಯರೂಪಿಸುವ ಉದ್ದೇಶದಿಂದ ಸ್ವಲ್ಪಜಾಗವನ್ನು ಸಮತಟ್ಟು ಮಾ ಡಿ ಸಣ್ಣದೊಂದು ಮನೆ ಕಟ್ಟಿದರು.
ಕುಡಿಯುವ ನೀರಿಗಾಗಿ ಪಕ್ಕದ ಮನೆಯವರನ್ನು ಆಶ್ರಯಿಸಿದ್ದ ಮಹಾಲಿಂಗ ನಾಯ್ಕರಿಗೆ ಬಾವಿ ತೋಡಿಸಲು ಕೈಯಲ್ಲಿ ದುಡ್ಡಿರಲಿಲ್ಲ. ಬಾವಿ ತೋಡಿದರೆ ನೀರು ದೊರೆಯುವ ಸಾಧ್ಯತೆ ಇರಲಿಲ್ಲ. ಏಕಾಂಗಿಯಾಗಿ ಬಾವಿ ತೋಡುವುದು ಅಸಾಧ್ಯದ ಮಾತು. ಆಗ ಅವರಿಗೆ ಹೊಳೆದುದು ಸುರಂಗ ಕೊರೆತ. ಅರ್ಧ ದಿನ ಕೂಲಿ ಕೆಲಸ, ಉಳಿದರ್ಧ ದಿನ ಮತ್ತು ರಾತ್ರಿ ಹೊತ್ತು ಸುರಂಗ ಕೊರೆಯುವ ಮೂಲಕ ಜೀವಜಲ ಹುಡುಕುವ ಭಗೀರಥ ಪ್ರಯತ್ನ ಮಾಡಿದ್ದರು. ಸತತ ಸುರಂಗ ಕೊರೆದರೂ ನೀರು ಸಿಗಲಿಲ್ಲ. ನಿರಾಶರಾಗದೆ ಒಂದರ ಹಿಂದೆ ಇನ್ನೊಂದರಂತೆ ಏಳು ಸುರಂಗಗಳನ್ನು ಕೊರೆದು ಜೀವಜಲ ಶೋಧಿಸಿದ್ದರು.
ಒಂದು ಎಕರೆಯಲ್ಲಿ ಕೃಷಿ
ಮಹಾಲಿಂಗ ನಾಯ್ಕ ಒಂದು ಎಕರೆಯಲ್ಲಿ ಅಡಿಕೆ, ತೆಂಗು, ಬಾಳೆ, ಕಾಳುಮೆಣಸಿನ ಕೃಷಿ ಕೈಗೊಂಡಿದ್ದಾರೆ. ಇನ್ನೊಂದು ಎಕರೆಯಲ್ಲಿ ಕಾಡು ಬೆಳೆಸಿದ್ದಾರೆ. ಗೇರು ಕೃಷಿಯೂ ಇದೆ. ಮಣ್ಣಿನ ಟ್ಯಾಂಕಿಯಿಂದ ವಿದ್ಯುತ್ನ ಖರ್ಚಿಲ್ಲದೆ ಗ್ರಾವಿಟಿ ಮೂಲಕ ಅಡಿಕೆ, ತೆಂಗು ಮತ್ತು ಬಾಳೆ ಗಿಡಗಳಿಗೆ ನೀರು ಉಣಿಸುವ ವಿಧಾನವನ್ನು ಕಂಡುಕೊಂಡಿದ್ದರು. ಅವರ ತೋಟದಲ್ಲಿ 300 ಅಡಿಕೆ, 75 ತೆಂಗು, 200 ಬಾಳೆ ಗಿಡಗಳಿವೆ. ಹಟ್ಟಿಗೊಬ್ಬರ, ಕಾಂಪೋಸ್ಟ್ ಗೊಬ್ಬರವನ್ನು ಹಾಕುತ್ತಾರೆ. ಜಮೀನಿನಲ್ಲಿ ಇಂಗು ಗುಂಡಿಗಳ ಮೂಲಕ ಜಲಕೊಯ್ಲು ಮಾಡುತ್ತಾರೆ. ಸಾಲಕ್ಕಾಗಿ ಯಾವುದೇ ಬ್ಯಾಂಕ್ ಮೊರೆ ಹೋದವರಲ್ಲ. ಕೃಷಿಯಲ್ಲಿ ದೊರೆತ ಆದಾಯದಿಂದ ಸ್ವಂತ ಮನೆ ಕಟ್ಟಿದ್ದಾರೆ. ಮನೆಗೆ ವಿದ್ಯುತ್ ಸೇರಿದಂತೆ ಮೂಲಸೌಕರ್ಯಗಳು ಬಂದಿವೆ. ಛಲಗಾರ ಮಹಾಲಿಂಗ ನಾಯ್ಕರಿಗೆ ದುಡಿಮೆ ಎಲ್ಲವನ್ನು ನೀಡಿದೆ. ಮಹಾಲಿಂಗ ನಾಯ್ಕರ ಏಕಾಂಗಿ ಸಾಧನೆಯನ್ನು ದೂರದರ್ಶನ ತನ್ನ ‘ವಾಟರ್ ವಾರಿಯರ್’ ಧಾರಾವಾಹಿಯಲ್ಲಿ ಬಿತ್ತರಿಸಿತ್ತು. ಅವರಿಗೆ 2019ರಲ್ಲಿ ಮಂಗಳೂರು ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿ ನೀಡಿ ಗೌರವಿಸಿತ್ತು.
‘ತುಂಬಾ ಖುಷಿಯಾಯಿತು’
ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ಅಮೈ ಮಹಾಲಿಂಗ ನಾಯ್ಕ ಅವರನ್ನು ‘ವಾರ್ತಾ ಭಾರತಿ’ ಸಂಪರ್ಕಿಸಿದಾಗ ಪ್ರಶಸ್ತಿಗೆ ಆಯ್ಕೆಯಾಗಿರುವ ವಿಷಯ ಕೇಳಿ ಖುಷಿಯಾಯಿತು ಎಂದರು.
ಸ್ವಲ್ಪ ಹೊತ್ತಿನ ಮೊದಲು ದಿಲ್ಲಿಯಿಂದ ಫೋನ್ ಬಂತು. ಪ್ರಶಸ್ತಿ ಸ್ವೀಕರಿಸಲು ದಿಲ್ಲಿಗೆ ವಿಮಾನದಲ್ಲಿ ಹೋಗಬೇಕೆಂತೆ. ಯಾವಾಗ ಎಂದು ಅವರು ಹೇಳಿಲ್ಲ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.