ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯಗೊಳಿಸಿಲ್ಲ
ಶಿಕ್ಷಣ ಇಲಾಖೆಯ ಆದೇಶದಲ್ಲಿ ಪ್ರಸ್ತಾಪ
ಬೆಂಗಳೂರು, ಜ.25: ರಾಜ್ಯದ ಪದವಿಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಯಾವುದೇ ಸಮವಸ್ತ್ರವನ್ನು ನಿಗದಿಗೊಳಿಸಿ ಕಡ್ಡಾಯಗೊಳಿಸಿಲ್ಲ. ಆದರೂ ರಾಜ್ಯದ ಸರಕಾರಿ ಮತ್ತು ಖಾಸಗಿ ಪದವಿಪೂರ್ವ ಕಾಲೇಜುಗಳು ತಮ್ಮ ಸಂಸ್ಥೆಯ ಹಂತದಲ್ಲಿ ಸಮವಸ್ತ್ರ ಮತ್ತು ವಸ್ತ್ರಸಂಹಿತೆಯನ್ನು ನಿಗದಿಗೊಳಿಸಿ ಅನೇಕ ವರ್ಷಗಳಿಂದ ಅನುಷ್ಠಾನಗೊಳಿಸುತ್ತಿವೆ.
ಉಡುಪಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದ ಕಾರಣಕ್ಕೆ ತರಗತಿಗಳಿಗೆ ಪ್ರವೇಶ ನಿರಾಕರಿಸಿರುವ ಪ್ರಕರಣದ ವಿವಾದವು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ವಸ್ತ್ರಸಂಹಿತೆ ಮತ್ತು ಸಮವಸ್ತ್ರ ಕುರಿತು ರಾಜ್ಯದ ಎಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರಿಗೆ ಅಧಿಕೃತವಾಗಿ ನಿರ್ದೇಶನ ನೀಡಲು ಮುಂದಾಗಿದೆ. ಈ ಸಂಬಂಧ ಶೀಘ್ರದಲ್ಲೇ ಹೊರಡಿಸಲಿರುವ ಆದೇಶದಲ್ಲಿ ಪದವಿಪವೂರ್ವ ಕಾಲೇಜುಗಳಲ್ಲಿ ಯಾವುದೇ ಸಮವಸ್ತ್ರ, ವಸ್ತ್ರಸಂಹಿತೆ ಕಡ್ಡಾಯಗೊಳಿಸಿಲ್ಲ ಎಂಬ ಅಂಶವೂ ಪ್ರಸ್ತಾಪವಾಗಿದೆ.
ಹಿಜಾಬ್ ಧರಿಸುವ ಬಗೆಗಿನ ನಿರ್ದೇಶನ ನೀಡುವ ಕುರಿತು ಪದವಿಪೂರ್ವ ಶಿಕ್ಷಣ ಇಲಾಖೆಯು ಸಿದ್ಧಪಡಿಸಿರುವ ಆದೇಶದ (ಇಪಿ; 14 ಎಸ್ಎಚ್ಎಚ್ 2022) ಕರಡು ಪ್ರತಿ ‘the-file.in’ಗೆ ಲಭ್ಯವಾಗಿದೆ.
ಯಾವುದೇ ಪದವಿಪೂರ್ವ ಕಾಲೇಜುಗಳಲ್ಲಿ ಯಾವುದೇ ಹೊಸ ನೀತಿಯ ವಸ್ತ್ರ ಸಂಹಿತೆಯನ್ನು ಅಳವಡಿಸಬಾರದು ಮತ್ತು ಸಂಸ್ಥೆಯ ಹಂತದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ನಿಗದಿಗೊಳಿಸಿರುವ ಸಮವಸ್ತ್ರ, ವಸ್ತ್ರಸಂಹಿತೆಯ ವಿಷಯದಲ್ಲಿ ಯಥಾಸ್ಥಿತಿಯನ್ನು ಮುಂದುವರಿಸಬೇಕು ಎಂದು ರಾಜ್ಯದ ಎಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರಿಗೆ ಆದೇಶ ಹೊರಡಿಸಲು ಪದವಿಪೂರ್ವ ಶಿಕ್ಷಣ ಇಲಾಖೆಯು ನಿರ್ಧರಿಸಿದೆ.
ಇದೇ ರೀತಿಯ ಪ್ರಕರಣಗಳನ್ನು ಇನ್ನು ಮುಂದೆ ರಾಜ್ಯದ ಯಾವುದೇ ಪದವಿಪೂರ್ವ ಕಾಲೇಜುಗಳಲ್ಲಿ ಮರುಕಳಿಸದಂತೆ ಎಚ್ಚರ ವಹಿಸಬೇಕು. ಹಾಗೆಯೇ ಯಾವುದೇ ಹೊಸ ನೀತಿಯ ವಸ್ತ್ರಸಂಹಿತೆಯನ್ನು ಅಳವಡಿಸದೇ ಯಥಾಸ್ಥಿತಿಯನ್ನು ಮುಂದುವರಿಸಬೇಕು ಎಂದು ಆದೇಶದಲ್ಲಿ ನಿರ್ದೇಶಿಸಿರುವುದು ಗೊತ್ತಾಗಿದೆ.
ಸರಕಾರವು ರಾಜ್ಯದ ಪದವಿಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ನಿಗದಿಗೊಳಿಸಿ ಕಡ್ಡಾಯಗೊಳಿಸಿರುವುದಿಲ್ಲ ಎಂದು ಸರಕಾರವು ಆದೇಶದಲ್ಲಿ ಹೇಳಿದೆಯಾದರೂ ಉಡುಪಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ತಮ್ಮದೇ ಆಯ್ಕೆಯ ವಸ್ತ್ರ ಧರಿಸಿ ಬರಲು ಒತ್ತಾಯಿಸುತ್ತಾ ಗೊಂದಲ ಸೃಷ್ಟಿಸುತ್ತಿದೆ ಎಂದೂ ಆದೇಶದಲ್ಲಿ ಉಲ್ಲೇಖಿಸಿದೆ ಎಂದು ತಿಳಿದು ಬಂದಿದೆ.
ಉಡುಪಿ ಜಿಲ್ಲೆಯ ಉಡುಪಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಸಮವಸ್ತ್ರ ಮತ್ತು ಹಿಜಾಬ್ ಧರಿಸುವ ಬಗೆಗೆ ನಿರ್ದೇಶನ ನೀಡುವ ಕುರಿತು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಅವರು 2022ರ ಜನವರಿ 17ರಂದು ಸರಕಾರಕ್ಕೆ ಪತ್ರ ಬರೆದಿದ್ದರು. ಈ ಪತ್ರವನ್ನಾಧರಿಸಿ ಪದವಿಪೂರ್ವ ಶಿಕ್ಷಣ ಇಲಾಖೆಯು ಸಭೆ ನಡೆಸಿದೆ.
ಹಿಜಾಬ್ ಧರಿಸುವುದು ಮತ್ತು ಸಮವಸ್ತ್ರದ ಕುರಿತು ’ಪದವಿಪೂರ್ವ ಶಿಕ್ಷಣ ಇಲಾಖೆ 2021-22ರ ದಾಖಲಾತಿ ಮಾರ್ಗಸೂಚಿಯ ಅಧ್ಯಾಯ 4ರ ಪ್ರಕಾರ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯವಾಗಿರುವುದಿಲ್ಲ. ಆದ್ದರಿಂದ ಈ ಕೂಡಲೇ ವಿದ್ಯಾರ್ಥಿನಿಯರನ್ನು ತರಗತಿಗೆ ಸೇರ್ಪಡೆಗೊಳಿಸಲು ಸೂಚಿಸಿದೆ. ಒಂದು ವೇಳೆ ತರಗತಿಗಳಿಗೆ ಸೇರ್ಪಡೆಗೊಳಿಸದಿದ್ದಲ್ಲಿ ತಮ್ಮನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರ ಸೂಚನೆ ಮೇರೆಗೆ ಉಡುಪಿ ಜಿಲ್ಲೆಯ ಉಪ ನಿರ್ದೇಶಕರು ಹೊರಡಿಸಿದ್ದ ಆದೇಶವನ್ನು ಕಾಲೇಜಿನ ಪ್ರಾಂಶುಪಾಲರು ಪಾಲಿಸಿರಲಿಲ್ಲ ಎಂಬ ಅಂಶವನ್ನು ಆದೇಶದ ನಡವಳಿಯಲ್ಲಿ ಉಲ್ಲೇಖಿಸಿರುವುದು ಕರಡು ಆದೇಶದಿಂದ ತಿಳಿದು ಬಂದಿದೆ.
ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರ ಆದೇಶವನ್ನು ಪ್ರಾಂಶುಪಾಲರು ಪಾಲಿಸದೇ ವಿದ್ಯಾರ್ಥಿನಿಯರಿಗೆ ಪ್ರವೇಶ ನೀಡದೆ ಅವರ ಮೂಲಭೂತ ಹಕ್ಕನ್ನು ನಿರಾಕರಿಸಲಾಗಿದೆ ಎಂದು ಅಭಿಪ್ರಾಯಪಟ್ಟಿರುವ ಇಲಾಖೆಯು ನಿರ್ದೇಶಕರ ಆದೇಶವನ್ನು ಪಾಲಿಸಲು ಮತ್ತು ವಿದ್ಯಾರ್ಥಿನಿಯರನ್ನು ತರಗತಿಗಳಿಗೆ ಸೇರ್ಪಡೆಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಪದ್ಮಿನಿ ಎಸ್.ಎನ್. ಅವರು ನಿರ್ದೇಶನ ನೀಡಿರುವುದು ಆದೇಶದಿಂದ ಗೊತ್ತಾಗಿದೆ.
ಆದೇಶದಲ್ಲಿರುವುದೇನು?
ಸರಕಾರವು ರಾಜ್ಯದ ಪದವಿಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ನಿಗದಿಗೊಳಿಸಿ, ಕಡ್ಡಾಯಗೊಳಿಸಿರುವುದಿಲ್ಲ. ಆದರೂ ಸರಕಾರಿ ಮತ್ತು ಖಾಸಗಿ ಪದವಿಪೂರ್ವ ಕಾಲೇಜುಗಳು ತಮ್ಮ ಸಂಸ್ಥೆಯ ಹಂತದಲ್ಲಿ ಸದುದ್ದೇಶ ಮತ್ತು ಶೈಕ್ಷಣಿಕ ಹಿತದೃಷ್ಟಿಗಳಿಂದ ಸಮವಸ್ತ್ರ/ವಸ್ತ್ರಸಂಹಿತೆಯನ್ನು ನಿಗದಿಗೊಳಿಸಿ ಅನೇಕ ವರ್ಷಗಳಿಂದ ಅನುಷ್ಠಾನಗೊಳಿಸುತ್ತಿವೆ ಎಂದು ಆದೇಶದಲ್ಲಿ ಪ್ರಸ್ತಾಪಿಸಿದೆ.
ಕೆಲವು ವಿದ್ಯಾರ್ಥಿನಿಯರು ತಮ್ಮ ಆಯ್ಕೆಯ ವಸ್ತ್ರವನ್ನು ತೊಡಲು ಅವಕಾಶ ಕಲ್ಪಿಸಲು ಒತ್ತಾಯ ಮಾಡುತ್ತಾ ಕಾಲೇಜಿನಲ್ಲಿ ಅನಗತ್ಯವಾದ ಗೊಂದಲವನ್ನು ಸೃಷ್ಟಿಸುತ್ತಿದ್ದಾರೆ. ಈ ರೀತಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ತಮ್ಮದೇ ಆಯ್ಕೆಯ ವಸ್ತ್ರವನ್ನು ಧರಿಸಲು ಅವಕಾಶ ನೀಡಲು ಒತ್ತಾಯಿಸಿದ್ದಲ್ಲಿ ಮತ್ತು ಅದನ್ನು ಕಾಲೇಜುಗಳು ಒಪ್ಪಿಕೊಂಡಲ್ಲಿ ಕಾಲೇಜುಗಳಲ್ಲಿ ಗೊಂದಲ, ಅಶಿಸ್ತುಗಳು ಹೆಚ್ಚಾಗುತ್ತದೆ. ಇದು ಕೆಲವೊಮ್ಮೆ ವಿದ್ಯಾರ್ಥಿಗಳು ಸಭ್ಯತೆಯನ್ನು ಮೀರಿದ ಉಡುಗೆಗಳನ್ನು ತೊಡಲು ಪ್ರಚೋದಿಸುವ ಸಾಧ್ಯತೆ ಯೂ ಇರುತ್ತದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.