varthabharthi


ಅನುಗಾಲ

ದಮನದ ದಿನಗಳು ಮುಂದಿವೆಯೇ?

ವಾರ್ತಾ ಭಾರತಿ : 27 Jan, 2022
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಸಂವಿಧಾನವು ನೀಡಿದ ಮೂಲಭೂತ ಹಕ್ಕುಗಳನ್ನು ಮಾತನಾಡುವ, ಹಕ್ಕುಗಳಿಗಾಗಿ ಹೋರಾಡುವ, ಚಟುವಟಿಕೆಗಳ ಮೂಲಕ ಸಮಯವನ್ನು ವ್ಯರ್ಥಗೊಳಿಸಿದ್ದೇವೆಂದು ಹೇಳುವುದೇ ಸಂವಿಧಾನದ ಮೂಲಭೂತ ಹಕ್ಕುಗಳ ಉಲ್ಲಂಘನೆ ಮತ್ತು ಸಂವಿಧಾನಕ್ಕೆಸಗುವ ಅಪಚಾರ. ಯಾವುದು ಸಂವಿಧಾನದ ಬೆನ್ನೆಲುಬೋ, ಅದನ್ನು ಮುರಿದು ಯಾವುದು ಸಂವಿಧಾನದ ಜೀವದುಸಿರೋ ಅದನ್ನು ಅಳಿಸುವ ಯಾವುದೇ ಪ್ರಯತ್ನವು ಅದೆಷ್ಟೇ ಕ್ಷೀಣವಾಗಿರಲಿ, ತಾತ್ವಿಕವಾಗಿ ದೇಶದ್ರೋಹವೇ. ಅದರಲ್ಲೂ ಅದು ದೇಶದ ಅತ್ಯುನ್ನತ ಸ್ಥಾನದಲ್ಲಿರುವವರ ಬಾಯಿಂದ ಬಂದರೆ ಅದು ಇನ್ನಷ್ಟು ಘೋರ ಅಕ್ರಮ.



ದೇಶದೆಲ್ಲೆಡೆ ಅಶಾಂತಿಯ ಅಲೆಗಳು ಅಪ್ಪಳಿಸುತ್ತಿವೆ. ದ್ವೇಷರಾಜಕಾರಣವು ತಲೆದೋರಿದೆಯೆಂದು ಹೇಳಿದರೆ ಸಾಲದು; ತಳವೂರಿದೆ. ಇಂತಹ ಸಂದರ್ಭದಲ್ಲಿ ಪ್ರಧಾನಿ ಮೂಲಭೂತ ಕರ್ತವ್ಯಗಳನ್ನು ನೆನಪಿಸಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ನಡೆಸಿದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಧಾನಿ ಒಂದು ಹೊಸ ಶ್ರುತಿಯಲ್ಲಿ ಮಾತನಾಡಿದ್ದಾರೆ. ಈ ದೇಶದ ಅನನ್ಯತೆಯನ್ನು ಹಾಡಿ ಹೊಗಳುತ್ತ ಕಳೆದ 75 ವರ್ಷಗಳಲ್ಲಿ (ಅಂದರೆ ಹಿಂದಿನ ಸರಕಾರಗಳ ಅವಧಿಯಲ್ಲಿ) ಈ ದೇಶವು ತನ್ನ ಸಂವಿಧಾನದ ಮೂಲಕ 'ಮೂಲಭೂತ ಹಕ್ಕು'ಗಳನ್ನು ನಂಬಿಕೊಂಡು ದೇಶದ ಬೆಳವಣಿಗೆಗೆ, ಅಭಿವೃದ್ಧಿಗೆ ತೊಡಕಾಯಿತೆಂದಿದ್ದಾರೆ. ಹಕ್ಕುಗಳ ಬಗ್ಗೆ ಮಾತನಾಡಿ, ಹಕ್ಕುಗಳ ಕುರಿತು ಹೋರಾಡಿ, ನಮ್ಮ ಸಮಯವನ್ನು ಹಾಳುಮಾಡಿದೆವೆಂದು ಹೇಳಿದ್ದಾರೆ. ಆದ್ದರಿಂದ ಇನ್ನು ಮುಂದಿನ 25 ವರ್ಷಗಳು 'ಮೂಲಭೂತ ಕರ್ತವ್ಯ'ಗಳ ಅವಧಿಯಾಗಬೇಕೆಂದು ಹೇಳಿದ್ದಾರೆ. ಕರ್ತವ್ಯದ ದೀಪವನ್ನು ಹಚ್ಚಬೇಕೆಂದು ಮಾರ್ಗದರ್ಶನ ಮಾಡಿದ್ದಾರೆ. (ಇದೇ ಸಂದರ್ಭದಲ್ಲಿ ಮಾತನಾಡಿದ ರಾಜಸ್ಥಾನದ ಮುಖ್ಯಮಂತ್ರಿ ದೇಶದಲ್ಲಿರುವ ಪ್ರಕ್ಷುಬ್ಧ್ದತೆಯನ್ನು ನೆನಪಿಸಿ ಎಚ್ಚರಿಸಿದ್ದಾರೆ.)

ಭಾರತೀಯ ಸಂವಿಧಾನವು ಅಪಾಯದಲ್ಲಿದೆಯೆಂದು ಪ್ರತಿಪಕ್ಷಗಳು ಅಲ್ಲೊಮ್ಮೆ ಇಲ್ಲೊಮ್ಮೆ ಹುಯಿಲೆಬ್ಬಿಸುವುದನ್ನು ಮತ್ತು ಕೆಲವು ಚಿಂತಕರು, ನಿವೃತ್ತ ಅಧಿಕಾರಿಗಳು ಅಭಿವ್ಯಕ್ತಿ ಮಾಧ್ಯಮದ ಮೂಲಕ ಪ್ರತಿಭಟಿಸುವುದನ್ನು ಹೊರತುಪಡಿಸಿದರೆ, ಒಕ್ಕೂಟ ಸರಕಾರದ ಅಥವಾ ಆಡಳಿತಪಕ್ಷದ (ಈಗ ಅವೆರಡರ ನಡುವೆ ಯಾವ ವ್ಯತ್ಯಾಸವೂ ಉಳಿದಿಲ್ಲ) ಮತಾಂಧ ನಿಲುವಿಗೆ ನೆರವಾಗುವ, ಸಮಾಜಕ್ಕೆ ಬೆನ್ನು ಹಾಕುವ, ವಾತಾವರಣವೇ ದೇಶದೆಲ್ಲೆಡೆ ಇದೆ. ಭಾರತೀಯ ಸಂವಿಧಾನದ ಹೃದಯಭಾಗವಿರುವುದು ಮೂಲಭೂತ ಹಕ್ಕುಗಳಲ್ಲಿ. ಇವನ್ನು ರಕ್ಷಿಸುವುದೆಂದರೆ ಈ ದೇಶದ ಕೋಟಿಕೋಟಿ ಪ್ರಜೆಗಳನ್ನು ರಕ್ಷಿಸುವುದು. ಮೂಲಭೂತ ಹಕ್ಕುಗಳಿಗೆ ಅಪಚಾರವಾದರೆ ಅಥವಾ ಯಾವುದೇ ಸರಕಾರ ಯಾವುದೇ ಕಾರಣಕ್ಕೂ ಅವನ್ನು ಉಲ್ಲಂಘಿಸಿದರೆ ಈ ದೇಶವು ಜೀವಂತವಾಗಿ ಉಳಿಯದು. ಆಗಾಗ ಈ ಹಕ್ಕುಗಳು ತೀವ್ರ ನಿಗಾ ಘಟಕಕ್ಕೆ ದಾಖಲಾದರೂ ಜನರ ಹೋರಾಟದಿಂದ ಮತ್ತು ನ್ಯಾಯಾಂಗದ ನಡವಳಿಕೆಯಿಂದ ಅವು ಆರೋಗ್ಯಭಾಗ್ಯವನ್ನು ಕಂಡಿವೆ. ಕಳೆದೊಂದು ದಶಕದಿಂದ ಮಾಧ್ಯಮಗಳು ಜೋಳವಾಳಿಗೆಯನ್ನೂ ಪೀತಪತ್ರಿಕೋದ್ಯಮವನ್ನೂ ತಮ್ಮ ಲಕ್ಷಣವಾಗಿ ಬೆಳೆಸಿಕೊಂಡಿವೆಯಾದರೂ ಆ ಮರುಭೂಮಿಯಲ್ಲೂ ಓಯಸಿಸ್‌ಗಳಿವೆ; ಎಂದೇ ಅಲ್ಲೂ ನೀರಿನ ಜೀವಸೆಲೆಗಳಿವೆ. ಅವು ಕೂಡಾ ಈ ಹಕ್ಕುಗಳನ್ನು ಉಳಿಸಿವೆ.

1970ರ ದಶಕದಲ್ಲಿ ಇಂದಿರಾ ನಾಯಕತ್ವದ ಕಾಂಗ್ರೆಸ್ ಸರಕಾರವು 42ನೇ ಸಂವಿಧಾನ ತಿದ್ದುಪಡಿಯ ಮೂಲಕ ಸಂವಿಧಾನದ ಪ್ರಸ್ತಾವನೆಯಲ್ಲಿ ಆ ವರೆಗಿದ್ದ 'ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯ' ಎಂಬ ಪದಪುಂಜದ ನಡುವೆ 'ಸಮಾಜವಾದಿ ಜಾತ್ಯತೀತ' ಎಂಬ ಪದಗಳನ್ನು ಸೇರಿಸಿ 'ಸಾರ್ವಭೌಮ ಸಮಾಜವಾದಿ ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯ' ಎಂದು ಕಾಣಿಸಿತು. ಸಂವಿಧಾನದ 'ಜಾತ್ಯತೀತ ಎಂಬ' ಸರಳ ಅರ್ಥದ ಪದವನ್ನು ಅಧಿಕೃತ ಕನ್ನಡ ಅವತರಣಿಕೆಯಲ್ಲಿ 'ಸರ್ವಧರ್ಮ ಸಮಭಾವದ' ಎಂದು ಕಾಣಿಸಿದೆ. ಪ್ರಜಾಪ್ರಭುತ್ವ ಅಥವಾ ಪ್ರಜಾತಂತ್ರ ಎಂಬುದಕ್ಕೆ ಬದಲಾಗಿ 'ಪ್ರಜಾಸತ್ತಾತ್ಮಕ' ಎಂದು ಬಳಸಲಾಗಿದೆ. ಆದರೆ ನಮ್ಮ ಅಧಿಕಾರಶಾಹಿ ಯಾವತ್ತೂ ಅರ್ಥವನ್ನು ಎಷ್ಟು ಕ್ಲಿಷ್ಟಗೊಳಿಸಲು ಸಾಧ್ಯವಿದೆಯೋ ಅಷ್ಟೂ ಕ್ಲಿಷ್ಟಗೊಳಿಸುತ್ತದೆ. ಹೀಗಾಗಿ ಅದರ ಆಶಯಗಳನ್ನು ಅರ್ಥಮಾಡಿಕೊಂಡರೆ ಪದಗಳು ಮುಖ್ಯವಾಗುವುದಿಲ್ಲ. 'ಜಾತ್ಯತೀತ' ಎಂಬ ಪದವಿಲ್ಲದಿದ್ದರೂ ನಮ್ಮ ಸಂವಿಧಾನದ ಜಾತ್ಯತೀತ ಲಕ್ಷಣಗಳನ್ನು ಮರೆಯಲಾಗದು ಎಂದು ಸರ್ವೋಚ್ಚ ನ್ಯಾಯಾಲಯವು ಹಲವು ಬಾರಿ ಒತ್ತಿ ಹೇಳಿದೆ. ಹಾಗೆಯೇ ಸಂವಿಧಾನದ ಮೂಲಚೌಕಟ್ಟನ್ನು ಬದಲಾಯಿಸುವ ಹಕ್ಕು ಸಂಸತ್ತಿಗೂ ಇಲ್ಲವೆಂದು ಸರ್ವೋಚ್ಚ ನ್ಯಾಯಾಲಯವು ಕೇಶವಾನಂದ ಭಾರತೀ ಪ್ರಕರಣದಲ್ಲಿ ಹೇಳಿದ್ದನ್ನು ಅನೇಕ ಬಾರಿ ಮತ್ತೆ ಮತ್ತೆ ಜಪಿಸಿ ಸರಕಾರಕ್ಕೂ ಶಾಸಕಾಂಗಕ್ಕೂ ಕಾರ್ಯಾಂಗಕ್ಕೂ ನೆನಪಿಸಿದೆ. ಅದನ್ನು ಯಾವ ಬಹುಮತವೂ ಬದಲಾಯಿಸಲಾಗದು. 1990ರ ದಶಕದಲ್ಲಿ ಅಡ್ವಾಣಿಯವರು 'ಢೋಂಗಿ ಜಾತ್ಯತೀತತೆ'ಯೆಂದು ಹೇಳುವ ಮೂಲಕ ಸಂವಿಧಾನದ ಈ ಸಾರ್ಥಕ ಪದಕ್ಕೆ ಅಪಚಾರವೆಸಗಿದರು. ಆದರೆ ಅವರು ಪ್ರಧಾನಿಯಷ್ಟು ಉನ್ನತ ಹುದ್ದೆಯನ್ನು ಹೊತ್ತಿರಲಿಲ್ಲ. ಅವರಿಗೆ ಮತೀಯ ರಾಜಕಾರಣವಷ್ಟೇ ಮುಖ್ಯವಾಗಿತ್ತು.

ಒಳ್ಳೆಯ ಪ್ರಭುತ್ವವಿದ್ದರೆ ಜನಪರವಾದ ನೀತಿಯನ್ನು ನಿರೀಕ್ಷಿಸಬಹುದು. ಆದರೆ ಸದ್ಯ ಈ ದೇಶದ ರಾಜಕಾರಣವು ಶಿಥಿಲವಾಗುತ್ತಿರುವ ವೇಗವನ್ನು ಗಮನಿಸಿದರೆ ಜನಪರವೆಂಬುದು ಬದುಕಿನ ಭಾಗವಾಗಿ ಬಾರದೆ, ಪರಲೋಕದ ಹಾದಿಯಲ್ಲೇನಾದರೂ ಸಿಗಬಹುದೇನೋ? ಉದಾಹರಣೆಗೆ 47ನೇ ವಿಧಿಯು ಮಾದಕ ಪಾನೀಯಗಳ ಮತ್ತು ಆರೋಗ್ಯಕ್ಕೆ ಹಾನಿಕರವಾದ ಔಷಧಿಗಳ ಸೇವನೆಯನ್ನು ನಿಷೇಧಿಸಲು ರಾಜ್ಯವು (ಈ ಸಂದರ್ಭದಲ್ಲಿ ಒಕ್ಕೂಟ ಮತ್ತು ರಾಜ್ಯ ಸರಕಾರಗಳು:-ಲೇ.) 'ಪ್ರಯತ್ನಿಸತಕ್ಕುದು'. ಎನ್ನುತ್ತದೆ. ಆದರೆ ಈ ಕುರಿತ ಪ್ರಯತ್ನ ಈ ವರೆವಿಗೂ ನಡೆದಿಲ್ಲ. ಬದಲಾಗಿ ಅವನ್ನು ಹೆಚ್ಚಿಸುವಲ್ಲಿ, ಪ್ರೋತ್ಸಾಹಿಸುವಲ್ಲಿ ಸರಕಾರ ವಿಶೇಷ ಪ್ರಯತ್ನವನ್ನು ನಡೆಸುತ್ತಿದೆ. ನಮ್ಮ ಪ್ರಜಾಕೋಟಿಗೆ 'ಅಬಕಾರಿ ಇಲಾಖೆ' ಮತ್ತು 'ಮದ್ಯಪಾನ ಸಂಯಮ ಮಂಡಳಿ' ಇವೆರಡೂ ಒಂದೇ ಸರಕಾರದಡಿ ಕೆಲಸಮಾಡುತ್ತಿರುವುದು ಹುಲಿಯನ್ನೂ ದನವನ್ನೂ ಒಂದೇ ನೊಗಕ್ಕೆ ಕಟ್ಟಿದಂತೆ ಒಂದು ಮೋಜನ್ನು ನೀಡಿದೆ. 'ಮದ್ಯಪಾನ ಸಂಯಮ ಮಂಡಳಿ' ಆಚಾರಕ್ಕಾದರೆ, 'ಅಬಕಾರಿ ಇಲಾಖೆ' ಸುಖಕ್ಕೆ ಎಂಬಂತಿದೆ. ಅರಣ್ಯಗಳನ್ನು ಮತ್ತು ವನ್ಯಜೀವಿಗಳನ್ನು ರಕ್ಷಿಸಲು ಪ್ರಯತ್ನಿಸಲು ಸರಕಾರ ಪ್ರಯತ್ನಿಸಬೇಕು. ಈ ಕುರಿತು ಕಾಯ್ದೆಯಿದೆ; ಇದಕ್ಕಾಗಿಯೇ ಇಲಾಖೆಯಿದೆ. ಆದರೆ ಇವುಗಳ ಕೆಲಸವೆಂದರೆ ತಾವು ಅರಣ್ಯವನ್ನು ಲೂಟಿ ಹೊಡೆಯದಿದ್ದರೂ ಅದರ ಲೂಟಿಗೆ ನೆರವಾಗುವುದು ಮತ್ತು ನೆರವಾಗದಿದ್ದಾಗಲೂ ಕುರುಡುತನವನ್ನು ಕಾಯ್ದುಕೊಳ್ಳುವುದು.

ಪರಿಣಾಮವೆಂದರೆ ಕಾಡಿನಲ್ಲಿರುವ ಅಷ್ಟಿಷ್ಟು ಪ್ರಾಣಿಗಳು, ಮರಗಳು ಪ್ರವಾಸೋದ್ಯಮಕ್ಕೆ ಬಲಿಯಾಗುತ್ತಿವೆ. ನಮ್ಮ ಮಕ್ಕಳು ಹಳ್ಳಿಯಲ್ಲಿ ಜೀವಿಸುವುದು ಸಾಧ್ಯವಾಗದೆ ನಗರ ಪ್ರದೇಶಗಳಿಗೆ ವಲಸೆ ಹೋಗುವಂತೆ ವನ್ಯಜೀವನವು ಸೊರಗಿ ಕಾಡುಪ್ರಾಣಿಗಳೆಲ್ಲ ನಾಡಿಗೆ ಧಾವಿಸುತ್ತಿವೆ. ಸಂವಿಧಾನದ 36ರಿಂದ 51ನೇ ವಿಧಿಯ ಕುರಿತಾದ ಯಾವುದೇ ಭಾಗವನ್ನು ಚರ್ಚಿಸಿ: ಅದು ಬದುಕಿನ ಗೋಳಿನ ಕಥೆಯಾಗುತ್ತದೆ. 42ನೇ ಸಂವಿಧಾನ ತಿದ್ದುಪಡಿಯ ಸಂದರ್ಭದಲ್ಲಿ ಸಂಸತ್ತು ಸಂವಿಧಾನದ 4ನೇ ಅಧ್ಯಾಯವಾದ 'ರಾಜ್ಯನೀತಿಯ ನಿರ್ದೇಶಕ ತತ್ವಗಳು' (36-51ನೇ ವಿಧಿಗಳು) ಆದ ಬಳಿಕ (ವಿಧಿ '51ಕ'ದಡಿ) 'ಮೂಲಭೂತ ಕರ್ತವ್ಯಗಳು' ಎಂಬ ಒಂದು ಅಧ್ಯಾಯವನ್ನು (4-ಎ) ಸೇರಿಸಿತು. ಇದೊಂದು ಮೈಲಿಗಲ್ಲೆಂಬಂತೆ ಆಗಿನ ಸರಕಾರ ಹೇಳಿಕೊಂಡರೂ ಇದು ಬಹಳ ಐತಿಹಾಸಿಕ ಸ್ಮಾರಕವಾಗಿ ಉಳಿದಿಲ್ಲ. 4ನೇ ಅಧ್ಯಾಯದಲ್ಲಿ ಹೇಳಿದ ವಿಚಾರಗಳನ್ನು ಸರಕಾರಗಳು ಹೇಗೆ ಮತ್ತು ಎಷ್ಟು ಮರೆತಿವೆಯೋ ಅದೇ ರೀತಿ ಇವೂ ಗೌಣವಾಗಿವೆ. ಕಾರಣವೆಂದರೆ ರಾಜ್ಯನೀತಿಯ ನಿರ್ದೇಶಕ ತತ್ವಗಳನ್ನು ಹೇಗೆ ಸಾಂವಿಧಾನಿಕವಾಗಿ ಒತ್ತಾಯಿಸಲು ಸಾಧ್ಯವಿಲ್ಲವೋ ಇವನ್ನೂ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿ ಒತ್ತಾಯಿಸುವಂತಿಲ್ಲ. (2010ರಲ್ಲಿ ಈ ಪಟ್ಟಿಗೆ 6ರಿಂದ 14 ವಯಸ್ಸಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣವನ್ನೂ ಸೇರಿಸಲಾಯಿತು.) ಆದರೆ ಸಂವಿಧಾನದ ಮೂಲಭೂತ ಹಕ್ಕುಗಳು ಇಂದಿಗೂ ತಾಳಬಲ್ಲವನಿಗೆ ರಕ್ಷಣೆಯನ್ನು ನೀಡುತ್ತಿವೆ. ಇವುಗಳಿದ್ದೂ ಅಸಂಖ್ಯಾತ ಜನರು ದಬ್ಬಾಳಿಕೆಗೆ ಗುರಿಯಾಗುತ್ತಿದ್ದಾರೆ. ನೂರಾ ನಲ್ವತ್ತು ಕೋಟಿ ಜನಸಂಖ್ಯೆಯಲ್ಲಿ ನೂರು-ಸಾವಿರ ಬಿಡಿ, ಲಕ್ಷ ಜನರು ಸತ್ತರೂ ಅದು ಸುದ್ದಿಯಾಗದಿರುವ ಹಂತಕ್ಕೆ ನಾವು ತಲುಪಿದ್ದೇವೆ. ಸುದ್ದಿಯಾಗುವುದು ಯಾವುದು? ಸಿನೆಮಾ ತಾರೆಯರು ಮತ್ತಿತರ ಜನಪ್ರಿಯರ, ಪ್ರಸಿದ್ಧರ, ರಾಜಕಾರಣಿಗಳ, ಪ್ರತಿಷ್ಠಿತರ ಐಷಾರಾಮೀ ಮತ್ತು ವರ್ಣರಂಜಿತ ಜೀವನ, ಆಳುವವರಿಗೆ ಇವೆಲ್ಲ ಕ್ಷೌರ ಮಾಡುವಾಗ ನೆಲಕ್ಕೆ ಬಿದ್ದ ಕೂದಲಿನ ರಾಶಿಯಂತಿರುತ್ತವೆ. ಜನರಿಗೆ ಒಂದು ಕಡೆ ಬೆಳೆಯುವ ಸಂಕಟಗಳು; ಇನ್ನೊಂದೆಡೆ ಪರಿಭವದ ಯಾತನೆಗಳು.

ಸಾವಿನಲ್ಲೇ ಮುಕ್ತಿ.

ಸರಕಾರವು ಜನರನ್ನು ಎಷ್ಟು ಸಾಧ್ಯವೋ ಅಷ್ಟೂ ಶೋಷಿಸಿ ತನ್ನ ಸುಂಕವನ್ನು ಪಡೆದುಕೊಳ್ಳುತ್ತಿದೆ. ಇದನ್ನು ಪ್ರತಿಭಟಿಸಿದರೆ ದೇಶದ್ರೋಹದ ಆರೋಪಗಳಡಿ ಹಿಂಸಿಸಿ ಸೇಡು ತೀರಿಸಿಕೊಳ್ಳುತ್ತದೆ. ಆದರೆ ಜನರು ಒಟ್ಟಾದಾಗ ಸರಕಾರದ ಮಾರಕಾಸ್ತ್ರಗಳು ಫಲನೀಡುವುದಿಲ್ಲ. ಕೃಷಿ ಕಾನೂನುಗಳನ್ನು ವಾಪಸ್ ಪಡೆದಂತೆ ಹಿಂದೆ ಸರಿಯಬೇಕಾಗುತ್ತದೆ. ಸಂಘಟಿತ ಹೋರಾಟಕ್ಕೆ ಇಂದಲ್ಲ ನಾಳೆ ಜಯವಿದೆ. ಸಂವಿಧಾನದ ಮೂಲಕವೇ ತಮ್ಮ ಸ್ವಾರ್ಥಗಳನ್ನು ಈಡೇರಿಸುವ ಮತ್ತು ಅಧಿಕಾರವನ್ನು ಉಳಿಸಿಕೊಳ್ಳುವ ಯೋಜನೆಯನ್ನು ಸರಕಾರ ಹಾಕಿಕೊಂಡಂತಿದೆ. ಆದರೆ ಪ್ರಧಾನಿ ಒತ್ತುಕೊಟ್ಟ ಈ ಕರ್ತವ್ಯಗಳನ್ನು ಪ್ರಜೆಗಳು ಪಾಲಿಸಬೇಕೆಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅವರೇ ತಮ್ಮ ಕರ್ತವ್ಯಗಳನ್ನು ನಿಭಾಯಿಸಿ ಮಾದರಿಯಾಗುತ್ತಿಲ್ಲ. ಸಂವಿಧಾನದ ಅಡಿಯಲ್ಲಿ ಮಾಡಬೇಕಾದ ಅತೀ ಮುಖ್ಯ ಕರ್ತವ್ಯವೆಂದರೆ ಸಂವಿಧಾನವನ್ನು ಗೌರವಿಸುವುದು. ಸಂವಿಧಾನವನ್ನು ಗೌರವಿಸುವುದೆಂದರೆ 1) ಸಂವಿಧಾನದಡಿಯಲ್ಲಿರುವ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸದೆ ಕಾಪಾಡುವುದು ಮತ್ತು ಎತ್ತಿಹಿಡಿಯುವುದು; 2) ಸಂವಿಧಾನಬಾಹಿರವಾಗಿ ನಡೆಯುವ ಎಲ್ಲ ಚಟುವಟಿಕೆಗಳನ್ನು ತಡೆಯುವುದು ಮತ್ತು ನಿಗ್ರಹಿಸುವುದು.

ಸಂವಿಧಾನವು ನೀಡಿದ ಮೂಲಭೂತ ಹಕ್ಕುಗಳನ್ನು ಮಾತನಾಡುವ, ಹಕ್ಕುಗಳಿಗಾಗಿ ಹೋರಾಡುವ, ಚಟುವಟಿಕೆಗಳ ಮೂಲಕ ಸಮಯವನ್ನು ವ್ಯರ್ಥಗೊಳಿಸಿದ್ದೇವೆಂದು ಹೇಳುವುದೇ ಸಂವಿಧಾನದ ಮೂಲಭೂತ ಹಕ್ಕುಗಳ ಉಲ್ಲಂಘನೆ ಮತ್ತು ಸಂವಿಧಾನಕ್ಕೆಸಗುವ ಅಪಚಾರ. ಯಾವುದು ಸಂವಿಧಾನದ ಬೆನ್ನೆಲುಬೋ, ಅದನ್ನು ಮುರಿದು ಯಾವುದು ಸಂವಿಧಾನದ ಜೀವದುಸಿರೋ ಅದನ್ನು ಅಳಿಸುವ ಯಾವುದೇ ಪ್ರಯತ್ನವು ಅದೆಷ್ಟೇ ಕ್ಷೀಣವಾಗಿರಲಿ, ತಾತ್ವಿಕವಾಗಿ ದೇಶದ್ರೋಹವೇ. ಅದರಲ್ಲೂ ಅದು ದೇಶದ ಅತ್ಯುನ್ನತ ಸ್ಥಾನದಲ್ಲಿರುವವರ ಬಾಯಿಂದ ಬಂದರೆ ಅದು ಇನ್ನಷ್ಟು ಘೋರ ಅಕ್ರಮ. ಕರ್ತವ್ಯಗಳ ಬಗ್ಗೆ ಎಷ್ಟೇ ಭಾಷಣ ಮಾಡಿದರೂ ಅದು ಅಪ್ರಾಸಂಗಿಕವಾಗುವುದು, ಅಪ್ರಸ್ತುತವಾಗುವುದು, ಹಕ್ಕುಗಳ ಕುರಿತ ಈ ಅಪ್ರಬುದ್ಧ ನೇತ್ಯಾತ್ಮಕ ಮಾತುಗಳಿಂದ. ಆದ್ದರಿಂದ ಪ್ರಧಾನಿ ಹಕ್ಕುಗಳ ಕುರಿತು ಯಾರೇ ಮಾತನಾಡುವುದಾಗಲೀ ಹೋರಾಡುವುದಾಗಲೀ ಅದು ಸಂವಿಧಾನದ ರಕ್ಷಣೆಯೆಂದು ಬಗೆಯಬೇಕೇ ಹೊರತು ವ್ಯರ್ಥ ಕಾಲಹರಣವೆಂದು ಹೇಳುವುದು ಅವರಿಗೆ ಮತ್ತು ಅವರು ಪ್ರತಿನಿಧಿಸುವ ರಾಜಕಾರಣಕ್ಕೆ ಶೋಭಿಸಿದರೂ ಅವರಿರುವ ಸ್ಥಾನಕ್ಕೆ ಶೋಭಿಸಲಾರದು. ಎರಡನೆಯದು- ಸಂವಿಧಾನಬಾಹಿರವಾಗಿ ನಡೆಯುವ ಎಲ್ಲ ಚಟುವಟಿಕೆಗಳನ್ನು ತಡೆಯುವ, ನಿಗ್ರಹಿಸುವ ಕರ್ತವ್ಯವು ಯಾವುದೇ ಪ್ರಜೆಗೆ ಮತ್ತು ಮುಖ್ಯವಾಗಿ ಸಾಂವಿಧಾನಿಕ ಹುದ್ದೆಯಲ್ಲಿರುವವರಿಗೆ ಮೂಲಭೂತವಾದದ್ದು. ಪ್ರಧಾನಿ ಸಂವಿಧಾನದ ಹೆಸರಿನಲ್ಲಿ ಮತ್ತು ಅದರ ರಕ್ಷಣೆಯ ಪ್ರತಿಜ್ಞೆಯನ್ನು ಮಾಡಿಯೇ ಅಧಿಕಾರವನ್ನು ಸ್ವೀಕರಿಸಿದವರಾಗಿದ್ದು ಅವರಿಂದ ಸಂವಿಧಾನಕ್ಕೆ ಅಪಚಾರವಾಗುವ ಯಾವ ನಡೆನುಡಿಯು ಬರಬಾರದು. ಅವರು ತಾನು ರಾಜಕಾರಣಿ ಇಲ್ಲವೆ ರಾಜಕಾರಣಿಗಳ ನಾಯಕನೆಂದಷ್ಟೇ ತಿಳಿಯದೆ, ಈ ದೇಶದ ಮತ್ತು ದೇಶದ ಸಂವಿಧಾನದ ಗೌರವದ ಹೊಣೆಯನ್ನು ಹೊತ್ತವನೆಂದು ಭಾವಿಸಬೇಕು. 'ಜಾತ್ಯತೀತ' ಎಂಬ ಪದವು ಮತ್ತು ಅದರ ಹಿಂದಿನ ತಾತ್ವಿಕ ಅಗತ್ಯವು ಎಲ್ಲಿಯವರೆಗೆ ಈ ದೇಶದಲ್ಲಿರುತ್ತದೆಯೋ ಅಲ್ಲಿಯ ತನಕವೂ ಅವರು ಜಾತ್ಯತೀತತೆಗೆ ವಿರುದ್ಧವಾಗಿ ನಡೆಯುವ ಆಗುಹೋಗುಗಳನ್ನು ವಿದ್ಯಮಾನಗಳನ್ನು ತಿಳಿದುಕೊಂಡು ಅವನ್ನು ನಿಯಂತ್ರಿಸುವ ಮಾತುಗಳನ್ನಾಡಬೇಕು ಮತ್ತು ಅದರಂತೆ ನಡೆಯಬೇಕು. ರಾಷ್ಟ್ರಪತಿಗಳು, ಉಪರಾಷ್ಟ್ರಪತಿಗಳು ಏನೂ ಮಾತನಾಡುವುದಿಲ್ಲವೆಂಬ ಆರೋಪವಿದೆ; ಆದರೆ ಅವರು ಅಲಂಕಾರಿಕ ವಸ್ತುಗಳೇ ಹೊರತು ನೈಜವಾದ ಯಾವ ಅಧಿಕಾರವನ್ನೂ ಹೊಂದಿಲ್ಲ. ಅವರು ಪ್ರಧಾನಿಯ ಆಯ್ಕೆಯೆಂಬುದನ್ನು ಮರೆಯಬಾರದು.

ಅವರ ಭವಿಷ್ಯವಿರುವುದು ಪ್ರಧಾನಿಯವರ ಮುಷ್ಟಿಯಲ್ಲಿ. ಆದರಿಂದ ಅವರು ಸಂವಿಧಾನವನ್ನು ರಕ್ಷಿಸುತ್ತಾರೆಂಬ ಭ್ರಮೆ ಬೇಡ. ಆದರೆ ಪ್ರಧಾನಿ ಈ ಎರಡೂ ಕಾರ್ಯಗಳಲ್ಲಿ ಶೂನ್ಯಸಂಪಾದನೆಯನ್ನು ಮಾಡಿದ್ದಾರೆ. ಹರಿದ್ವಾರದ ಧರ್ಮಸಂಸತ್ತು ಮಾತ್ರವಲ್ಲ, ದೇಶದ ಎಲ್ಲೆಡೆ ನಡೆಯುವ ಸಂವಿಧಾನಬಾಹಿರ ಕೆಲಸಗಳ ಕುರಿತು ಘೋರ ಮೌನವನ್ನು ತಾಳಿದ್ದಾರೆ. ಇದನ್ನು ಒಪ್ಪಿಗೆಯೆಂದೋ, ಅನುಮೋದನೆಯೆಂದೋ ಈ ಧರ್ಮಸಂಸದೀಯರೂ ಮತ್ತು ಕಾನೂನಿನ ಸ್ವಘೋಷಿತ ಪಾಲಕರು ತಿಳಿದಿದ್ದಾರೆ. ಮತೀಯ ವಿಷಕನ್ಯೆಯನ್ನು ಬೆಳೆಸುವ ಕೆಲಸವು ಕಳೆದ ಕೆಲವು ದಶಕಗಳಿಂದ ಸದ್ದಿಲ್ಲದೇ ನಡೆದಿದೆ. ಇವೆಲ್ಲವೂ ಈ ದೇಶದ ಒಟ್ಟಂದವನ್ನು ಕೆಡಿಸುವತ್ತ ದಾಪುಗಾಲನ್ನಿಟ್ಟಿವೆ. ಆದರೆ ಪ್ರಧಾನಿ ಕೇದಾರನಾಥದ ಗವಿಯಲ್ಲಿ ಮಾಡಿದ ತಪಸ್ಸನ್ನು ಮುಂದೆ ತಮ್ಮ ಕರ್ತವ್ಯದಲ್ಲಿಯೂ ಚುನಾವಣಾ ರಾಜಕೀಯವೆಂಬಂತೆ ಮುಂದುವರಿಸಿದ್ದು ವಿಷಾದಕರ. ಇಂತಹ ವೈರುಧ್ಯಗಳು ಬದುಕಿನ ಎಲ್ಲ ಕ್ಷೇತ್ರಗಳಲ್ಲಿರುವಂತೆ ಮತ್ತು ಉಳಿಯುವಂತೆ ನಮ್ಮನ್ನಾಳುವವರು ನೋಡಿಕೊಳ್ಳುತ್ತಿದ್ದಾರೆ. ಕರ್ತವ್ಯಗಳ ಹೆಸರಿನಲ್ಲಿ ಇನ್ನೆಷ್ಟು ಜನರನ್ನು ದಮನಿಸುವ ಕೆಲಸ ನಡೆಯುತ್ತದೆಯೋ ಕಾದು ನೊಡಬೇಕು. ಕಾಯುವವರೂ ಕೊಲ್ಲುವವರೂ ಒಬ್ಬರೇ ಆದಾಗ ಇನ್ನೇನನ್ನು ನಿರೀಕ್ಷಿಸಬಹುದು? ಸದ್ಯ ಈ ಮೂಲಭೂತ ಕರ್ತವ್ಯಗಳಡಿ ಯಶಸ್ವಿಯಾಗಿ ಪ್ರದರ್ಶಿತವಾಗುತ್ತಿರುವುದು ಸಿನೆಮಾ ಥಿಯೇಟರುಗಳಲ್ಲಿ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ ಮಾತ್ರ!

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)