ಭೂತ ಪೂಜೆ ಮತ್ತು ಪ್ರಾಣಿ ಬಲಿ ನಿಷೇಧ
ನಾರಾಯಣ ಗುರುಗಳ ಕ್ರಾಂತಿಕಾರಿ ಚಳವಳಿಗಳು
ನಾರಾಯಣ ಗುರುಗಳು ಭೂತ, ಪ್ರೇತ, ದೈವಗಳಿಗೆ ಪ್ರಾಣಿ ಬಲಿ, ಕಳ್ಳು ಸಾರಾಯಿಗಳನ್ನು ನಿಷೇಧಿಸಿದ್ದು ಮಾತ್ರವಲ್ಲದೆ ಅವುಗಳು ಪೂಜೆಗೆ ಯೋಗ್ಯವಲ್ಲವೆಂದು ಹೇಳಿದರು. ಭೂತ ದರ್ಶನಗಳು ನಂಬಿಕೆಗೆ ಅರ್ಹವಲ್ಲವೆಂದು ತ್ಯಜಿಸಲು ಕರೆ ಕೊಟ್ಟರು. ಒಮ್ಮೆ ಗುರುಗಳು ಚೆಂಗನ್ನೂರಿನಲ್ಲಿದ್ದಾಗ ಒಬ್ಬ ಮುದುಕನು ನಡುಗುತ್ತ ಬಂದು ತನ್ನ ಮೇಲೆ ದೈವಾವೇಶವಾಗಿದೆ. ನಾನು ಯಾರು ಗೊತ್ತೆ? ಎಂದನು. ಗುರುಗಳು ನೀನೊಬ್ಬ ಗಟ್ಟಿ ವ್ಯಕ್ತಿ ಎಂದರು. ಏನು ನನ್ನನ್ನು ತಮಾಷೆ ಮಾಡುವೆಯಾ? ನನ್ನ ಶಕ್ತಿಯನ್ನು ನೋಡ ಬಯಸುವೆಯಾ? ಎಂದು ಕೇಳಿದನು. ಗುರುಗಳು ನಗುತ್ತ ಹಲ್ಲುಗಳಿಲ್ಲದ ನಿನ್ನ ಬಾಯಲ್ಲಿ ಹಲ್ಲುಗಳನ್ನು ನೋಡ ಬಯಸುತ್ತೇನೆ ಎಂದರು. ತಬ್ಬಿಬ್ಬಾದ ಪಾತ್ರಿ ಗುರುಗಳ ಕಾಲಿಗೆ ಬಿದ್ದು ಕ್ಷಮೆ ಬೇಡಿಕೊಂಡನು.
ದೇವಸ್ಥಾನಗಳಲ್ಲಿ ನಡೆಯುತ್ತಿದ್ದ ಪ್ರಾಣಿಗಳ ಬಲಿಯನ್ನು ಕೆಲವೊಮ್ಮೆ ಅವರೇ ಹೋಗಿ ನಿಲ್ಲಿಸುತ್ತಿದ್ದರು. ಪ್ರಾಣಿ ಬಲಿ ನಿಷೇಧದ ಕುರಿತು ಗುರು ಒಂದು ಕವಿತೆ ರಚಿಸಿದರು.
‘‘1) ಎಲ್ಲರೂ ಅಣ್ಣ ತಮ್ಮಂದಿರ ಹಾಗೆ, ಈ ಸತ್ಯತೆಯನ್ನು ನೆನಸುವಾಗ ನಮಗೆ ಪ್ರಾಣಿಗಳನ್ನು ಕೊಲ್ಲಲಿಕ್ಕೆ ಹೇಗೆ ಸಾಧ್ಯವಾಗುವುದು? ಅಯ್ಯೋ ಅವುಗಳನ್ನು ನಿಷ್ಕರುಣೆಯಿಂದ ಹೇಗೆ ತಿನ್ನುವುದು?
2) ಕೊಲ್ಲದಿರುವ ಪ್ರತಿಜ್ಞೆ ಒಳ್ಳೆಯದು. ಮಾಂಸ ತಿನ್ನದಿರುವ ಪ್ರತಿಜ್ಞೆಯು ಮತ್ತಷ್ಟು ಒಳ್ಳೆಯದು. ಓ ಜನರೇ, ಹೇಳಿರಿ, ಇದಲ್ಲವೇ ಎಲ್ಲಾ ಧರ್ಮಗಳ ಮೂಲ ತತ್ವ?
3) ಕೊಲ್ಲಲ್ಪಡಲು ಯಾರೂ ಇಚ್ಛಿಸುವುದಿಲ್ಲ, ಈ ಅನರ್ಥವನ್ನು ತಾನು ಇಚ್ಛಿಸದಿರುವಾಗ, ಅದು ಬೇರೆಯವರಿಗೆ ಹೇಗೆ ಪ್ರಿಯವಾಗಬೇಕು ಎಲೋ, ಉತ್ತಮ ಜನರೇ ಹೇಳಿರಿ, ನ್ಯಾಯವು ಎಲ್ಲರಿಗೂ ಒಂದೇ ಅಲ್ಲವೇ?
4) ಯಾರೂ ತಿನ್ನುವವರಿಲ್ಲದಿದ್ದರೆ ಯಾರೂ ಕೊಲ್ಲುವುದಿಲ್ಲ, ತಿನ್ನುವುದರಿಂದಲೇ ಕೊಲ್ಲುವುದು ನಡೆಯುತ್ತದೆ. ಆದ್ದರಿಂದ ತಿನ್ನುವುದು ಕೊಲ್ಲುವುದಕ್ಕಿಂತಲೂ ದೊಡ್ಡ ಪಾಪ.
5) ಯಾರು ಕೊಲ್ಲುವುದಿಲ್ಲವೋ ಅವರು ಧಾರ್ಮಿಕರು. ಉಳಿದವರು ಕ್ರೂರ ಜಂತುಗಳು. ಉಳಿದ ಎಲ್ಲಾ ಗುಣಗಳಿದ್ದರೂ ಕೊಲ್ಲುವವನಿಗೆ ಶಾಂತಿ ದೊರೆಯದು’’
ಈ ಮೇಲಿನ ಕವಿತೆಯನ್ನು ಗುರುದೇವರು ಅಹಿಂಸೆಯ ಪರವಾಗಿ ರಚಿಸಿದರು.
‘‘ಪ್ರೇಮವಿಲ್ಲದಿದ್ದರೆ ಮನುಷ್ಯನು ಎಲುಬು, ಚರ್ಮ, ನಾಡಿಗಳು ಮತ್ತು ದುರ್ವಾಸನೆಯ ಆಕಾರ ಮಾತ್ರ’’ ಎಂದು ಹೇಳುತ್ತಿದ್ದರು. ‘‘ಓ ಕರುಣಾಕರನಾದ ದೇವನೇ ನಾವು ಒಂದು ಇರುವೆಗೂ ಹಿಂಸೆಯನ್ನುಂಟು ಮಾಡದಂತೆ ನಮ್ಮ ಹೃದಯಕ್ಕೆ ಕರುಣೆಯನ್ನು ಕೊಡು’’ ಇದು ಅಹಿಂಸೆಗಾಗಿ ದೇವರಲ್ಲಿ ಗುರುದೇವರ ಮೊರೆಯಾಗಿತ್ತು,
ತಿರಂಡುಕುಳಿ, ಪುಳಿಕುಟ ನಿಷೇಧ
ಹೆಣ್ಣು ಋತುಮತಿಯರಾದಾಗ ಮಾಡುವ ವಿಧಿಯೇ ತಿರಂಡುಕುಳಿ. ಕನ್ಯೆಯರು ಪ್ರಥಮ ಋತುಮತಿಯರಾದಾಗ ಅವರ ಫಲವಂತಿಕೆಯ ಸೌಭಾಗ್ಯ ಅಕ್ಷಯವಾಗಲೆಂದು ಈ ವಿಧಿಯ ಒಂದು ಆಶಯವಾದರೆ ಇನ್ನೊಂದು ಹೆಣ್ಣು ದೈಹಿಕವಾಗಿ ಮದುವೆಗೆ ಸಿದ್ಧಳಾಗಿದ್ದಾಳೆ ಎನ್ನುವುದನ್ನು ಸಾರ್ವತ್ರಿಕ ಜಾಹೀರುಗೊಳಿಸುವ ಔತಣ.
ಬಿಲ್ಲವರು ಇದನ್ನು ತಲೆನೀರು ಮದುವೆ ಎನ್ನುತ್ತಿದ್ದರು. ಸಿಪ್ಪೆ ಸಹಿತ ಐದು ತೆಂಗಿನ ಕಾಯಿಯ ಮೇಲೆ ತೆಂಗಿನ ಮರದ ಬುಡದಲ್ಲಿ ಗುರಿಕಾರರ ಮನೆಯ, ಊರ ಮತ್ತು ಮನೆಯ ಮುತ್ತೈದೆಯರು ಸೇರಿ ವಿಧಿವತ್ತಾಗಿ ಪ್ರಥಮ ಋತುಮತಿಯಾದ ಹೆಣ್ಣಿಗೆ ಸ್ನಾನ ಮಾಡಿಸುವುದು ಮತ್ತು ಕೊನೆಯ ದಿನ ಗರಡಿಯಲ್ಲಿ ಸ್ನಾನ ಮಾಡಿಸಿ ಶುದ್ಧ ಮಾಡುವುದರಿಂದ ಮತ್ತು ಮದುವೆಯಂತೆ ಸಮಾರಂಭ ಮಾಡುವುದರಿಂದ ತಲೆ ನೀರು ಮದುವೆ ಎಂದು ಹೆಸರು ಬಂದಿರಬಹುದು. ಹೆಣ್ಣಿನ ಸಂಬಂಧಿಕರು ಮತ್ತು ಊರ ಕೆಲವರು ಈ ದಿನಗಳಲ್ಲಿ ಬೆಲ್ಲ, ಕಾಯಿ ಕಲಸಿದ ಅವಲಕ್ಕಿ ಮುಂತಾದ ತಿಂಡಿಗಳನ್ನು ತಂದು ಕೊಡುವ ಪದ್ಧತಿಯೂ ಇದೆ. ಋತುಮತಿಯಾದ ಏಳು ಅಥವಾ ಒಂಭತ್ತನೇ ದಿನ ಹುಡುಗಿಯನ್ನು ವಧುವಿನಂತೆ ಸಿಂಗರಿಸಿ ಸಭೆಯಲ್ಲಿ ಕುಳ್ಳಿರಿಸಿ ಆರತಿ ಎತ್ತಿ ಅಕ್ಷತೆ ಹಾಕುತ್ತಾರೆ. ಮದುವೆ ಆಗಿದ್ದರೆ ಗಂಡನ ಮನೆಗೆ ಇಲ್ಲದಿದ್ದರೆ ಹೆಣ್ಣಿನ ಸಂಬಂಧಿಕರ ಮನೆಗೆ ಒಂದು ರಾತ್ರಿಗಾದರೂ ಕಳುಹಿಸುತ್ತಾರೆ.
ಕೇರಳದಲ್ಲಿ ಹೆಚ್ಚು ಕಡಿಮೆ ಇದೇ ರೀತಿಯ ವಿಧಿಗಳಿದ್ದು ಅದನ್ನು ‘ತಿರಂಡುಕುಳಿ’ ಎನ್ನುತ್ತಿದ್ದರು. ತಿರಂಡುಕುಳಿಯಲ್ಲಿ ಹೆಣ್ಣು ಮದುವೆ ಆಗಿದ್ದರೆ ಅವಳ ನಾದಿನಿಯವರು ಯಾರಾದರೂ ಒಂದು ಹೊಸ ಸೀರೆ ಕೊಟ್ಟು ಅವಳನ್ನು ಗಂಡನ ಮನೆಗೆ ಕರೆದೊಯ್ಯುತ್ತಿದ್ದರು. ಇದು ಬಹು ಖರ್ಚಿನದ್ದಾಗಿತ್ತು. ಇದು ಅನಗತ್ಯ ವಿಧಿ ಎಂದು ತ್ಯಜಿಸಲು ಗುರು ಕರೆ ಕೊಟ್ಟರು.
ಹೆಂಡತಿ ಚೊಚ್ಚಲ ಗರ್ಭಿಣಿ ಆದ ಏಳನೇ ತಿಂಗಳಲ್ಲಿ ಗಂಡನು ಏಳು ಬೇರುಗಳ ಮಿಶ್ರಣದ ರಸವನ್ನು ಕುಡಿಯಲು ಕೊಡುವ ವಿಧಿ ‘ಪುಳಿಕುಟಿ’ ಇದಕ್ಕೂ ಸಾರ್ವಜನಿಕರ ಔತಣದ ಸಂಭ್ರಮ. ಇದರಲ್ಲಿ ಅನವಶ್ಯಕ ಆರ್ಥಿಕ ವ್ಯಯವಾಗುತ್ತಿತ್ತು. ಆದ್ದರಿಂದ ಇದನ್ನು ಅನಗತ್ಯವೆಂದು ಗುರು ನಿಷೇಧಿಸಿದರು. ಈ ಕುಟಿಯಲ್ಲಿಯ ಕೆಲವು ವಟಮೂಲಗಳು ಹುಟ್ಟುವ ಮಗುವಿನ ದೈಹಿಕ ಮತ್ತು ಮಾನಸಿಕ ವಿಕಾಸದಲ್ಲಿ ದುಷ್ಪರಿಣಾಮಗಳನ್ನು ಬೀರುವ ಕಾರಣ ಗುರುದೇವರು ಇದನ್ನು ನಿಷೇಧಿಸಿದ್ದರು ಎಂದು ಕೆಲವರು ಈ ಗ್ರಂಥಕರ್ತನಿಗೆ ಹೇಳಿದ್ದುಂಟು. ಆದರೆ ಇದಕ್ಕೆ ಲಿಖಿತ ದಾಖಲೆಗಳು ಇಲ್ಲ.
ಸತ್ತವರಿಗೆ ಮಾಡುವ ವಿಜೃಂಭಣೆಯ ಉತ್ತರ ಕ್ರಿಯಾ ವಿಧಿಗಳನ್ನು ಕೊನೆಗೊಳಿಸಿ ಸರಳ ವಿಧಾನಗಳನ್ನು ಜಾರಿಗೆ ತಂದರು.
ಅರ್ಥರಹಿತ ಅನಗತ್ಯ ಸಂಪ್ರದಾಯಗಳು ಜನಸಾಮಾನ್ಯರನ್ನು ಆರ್ಥಿಕ ದಿವಾಳಿತನಕ್ಕೆ ತಳ್ಳುತ್ತಿದ್ದವು. ಕೆಲವೊಮ್ಮೆ ತಾಳಿಕೆಟ್ಟು ಕಲ್ಯಾಣಗಳು ಕನ್ಯೆಯರ ಮಾನಕ್ಕೆ ಮಾರಕವಾಗುತ್ತಿದ್ದವು. ಅನಾಗರಿಕ ಎನಿಸುವ ಸಂಪ್ರದಾಯಗಳಿಂದ ಸಮಾಜಕ್ಕೆ ಹಾನಿಯಲ್ಲದೆ ಪ್ರಯೋಜನಗಳಿರಲಿಲ್ಲ. ಆದ್ದರಿಂದ ಗುರು ಅಂತಹವುಗಳನ್ನು ನಿಲ್ಲಿಸಿದರು.
ಕೃಪೆ : ‘ಶ್ರೀ ನಾರಾಯಣ ಗುರು ವಿಜಯ ದರ್ಶನ’ ಗ್ರಂಥ