23 ವರ್ಷಗಳ ಹಿಂದೆ ಮೃತಪಟ್ಟ ವ್ಯಕ್ತಿಗೆ 125 ಕೋ.ರೂ. ಬೆಲೆಯ ಭೂಮಿ ಮಂಜೂರು
ಸರಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಸಭೆಯಲ್ಲಿ ಬಹಿರಂಗ
ಬೆಂಗಳೂರು: ಇಪ್ಪತ್ತಮೂರು ವರ್ಷಗಳ ಹಿಂದೆಯೇ ಮೃತಪಟ್ಟ ವ್ಯಕ್ತಿಯೊಬ್ಬರ ಹೆಸರಿನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಪರಿಗಣಿಸಿ ಸುಮಾರು 125 ಕೋಟಿ ರೂ. ಮೌಲ್ಯದ ಜಾಗವನ್ನು ಮಂಜೂರು ಮಾಡಿರುವ ಪ್ರಕರಣ ಇದೀಗ ಬಹಿರಂಗವಾಗಿದೆ. ಮೃತ ವ್ಯಕ್ತಿಯ ಹೆಸರಿಗೆ ಜಮೀನು ಮಂಜೂರು ಆದೇಶ ಹೊರಡಿಸಿರುವ ಸಹಾಯಕ ಆಯಕ್ತರ ವಿರುದ್ಧ ಇದುವರೆಗೂ ಯಾವುದೇ ಕ್ರಿಮಿನಲ್ ಮೊಕದ್ದಮೆ ಹೂಡದೇ ನಿರ್ಲಕ್ಷ್ಯ ವಹಿಸಲಾಗಿದೆ.
ಬೆಂಗಳೂರು ನಗರ ಜಿಲ್ಲೆಯ ದಕ್ಷಿಣ ತಾಲೂಕಿನ ಬೇಗೂರು ಹೋಬಳಿಯ ಹುಳಿಮಾವು ಗ್ರಾಮದ ಸರ್ವೇ ನಂಬರ್ 63ರಲ್ಲಿನ ಜಮೀನು ಮಂಜೂರಾತಿ ಕುರಿತಂತೆ ಕೆ.ಜಿ.ಬೋಪಯ್ಯ ಅಧ್ಯಕ್ಷತೆಯಲ್ಲಿರುವ ಸರಕಾರಿ ಜಮೀನುಗಳ ಸಂರಕ್ಷಣಾ ಸಮಿತಿಯು ವಿಚಾರಣೆಗೆ ಕೈಗೆತ್ತಿಕೊಂಡು ಪರಿಶೀಲನೆ ನಡೆಸುತ್ತಿರುವಾಗಲೇ ಮೃತ ವ್ಯಕ್ತಿ ಹೆಸರಿನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಪುರಸ್ಕರಿಸಿ, ಈ ಸಂಬಂಧ ಆದೇಶವನ್ನೂ ಹೊರಡಿಸಲಾಗಿದೆ.
ಸರಕಾರಿ ಜಮೀನುಗಳ ಸಂರಕ್ಷಣಾ ಸಮಿತಿಯು 2022ರ ಜನವರಿ 19ರಂದು ನಡೆಸಿದ್ದ ಸಭೆಯ ನಡವಳಿಗಳು ‘ದಿ ಫೈಲ್’ಗೆ ಲಭ್ಯವಾಗಿದೆ.
ಮತ್ತೊಂದು ಸಂಗತಿ ಎಂದರೆ ಸರ್ವೇ ನಂಬರ್ 63ರಲ್ಲಿನ ಒಟ್ಟಾರೆ ಜಮೀನನ್ನು ಮಂಜೂರು ಮಾಡಿರುವ ಕುರಿತು ಇದೇ ಸಮಿತಿಯು ಪರಿಶೀಲಿಸುತ್ತಿದೆ. ಈ ಕುರಿತು ಹಲವು ಸಭೆಗಳನ್ನು ನಿರಂತರವಾಗಿ ನಡೆಸುತ್ತಿದೆ. ಹೀಗಿದ್ದರೂ ಮೃತ ವ್ಯಕ್ತಿಯ ಹೆಸರಿನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಪರಿಶೀಲನೆ ನಡೆಸದೆಯೇ ಪುರಸ್ಕರಿಸಿದ್ದ ಬೆಂಗಳೂರು ದಕ್ಷಿಣ ತಾಲೂಕಿನ ಸಹಾಯಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕ ಹಾಗೂ ಸರ್ಕಾರದ ಹಿತಾಸಕ್ತಿಯನ್ನು ಕಾಪಾಡಬೇಕಾದವರು ಈ ರೀತಿ ಉಲ್ಲಂಘನೆ ಮಾಡಿದರೆ ಹೇಗೆ? ಸಮಿತಿಯ ಪರಿಶೀಲನೆ ಇದ್ದಾಗಲೂ ಸಹ ಏಕೆ ಹೀಗೆ ಮಾಡಿದರು. ಅವರ ವಿರುದ್ಧ ಕೇವಲ ಅಮಾನತು ಒಂದೇ ಶಿಕ್ಷೆಯಲ್ಲ. ಅವರ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲು ಮಾಡಬೇಕು,ಎಂದು ಸಮಿತಿ ಸದಸ್ಯ ಎ.ಟಿ.ರಾಮಸ್ವಾಮಿ ಅವರು ಕಂದಾಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದರು ಎಂಬುದು ನಡವಳಿಯಿಂದ ತಿಳಿದು ಬಂದಿದೆ.
ಅಲ್ಲದೆ, Again I am telling is this is not a small issue. ಈ ಪ್ರಕರಣ ಹಗಲು ದರೋಡೆಗೂ ಮೀರಿದ ಹಗರಣವಾಗಿದೆ. ರೆವಿನ್ಯೂ ಇಲಾಖೆಯವರು ಇದನ್ನು ಒಪ್ಪಿಕೊಳ್ಳುವಿರಾ? ಎಂದು ಎ.ಟಿ.ರಾಮಸ್ವಾಮಿ ಅವರು ಕಂದಾಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿರುವುದು ನಡವಳಿಯಿಂದ ಗೊತ್ತಾಗಿದೆ.
ಇದಕ್ಕೆ ದನಿಗೂಡಿಸಿದ್ದ ಸಮಿತಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಅವರು ‘ತೋಟಿಯಲ್ಲಪ್ಪ ಮೃತಪಟ್ಟು ಹೋಗಿ ಎಷ್ಟು ವರ್ಷ ಆಗಿದೆಯೆಂದು ಗೊತ್ತಿಲ್ಲ. How can he become an applicant? ಈ ರೀತಿ ಆದರೆ ಹೇಗೆ? ಎಂದು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ್ದ ಜಿಲ್ಲಾಧಿಕಾರಿ’ ಏಕೆ ಈ ಆದೇಶ ಹೊರಡಿಸಿದ್ದಾರೆಂದು ಎ.ಸಿ.ಅವರಿಗೆ ಮಾತ್ರ ಗೊತ್ತಿದೆ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಎ.ಟಿ.ರಾಮಸ್ವಾಮಿ ಅವರು, ನೀವು ಜಾಗವನ್ನು ತೆರವು ಮಾಡಿಸಿದ್ದು ಸರಿ, ಆದರೆ ಎ ಸಿ ಅವರು ಹಕ್ಕುದಾತ ಆದೇಶ ಮಾಡಿದ್ದರಿಂದ ಅವರು ಕೋರ್ಟ್ನಲ್ಲಿ ಅಪ್ರೋಚ್ ಮಾಡಲು ರಹದಾರಿ ಕೊಟ್ಟಂತೆ ಆಯಿತು. ಸ್ಟೇ ತಂದಿರುವುದರಿಂದ ಹತ್ತಾರು ವರ್ಷಗಳು ಈ ಪ್ರಕರಣ ಎಳೆಯುತ್ತದೆ. ನಮ್ಮ ಸರಕಾರಿ ಕಾನೂನು ಕೋಶ ಜೀವಂತವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಅಲ್ಲದೆ ’ಅವರ ಹೆಸರಿನಲ್ಲಿ ಅರ್ಜಿ ಕೊಟ್ಟು ಇ-ಸ್ಯಾಂಕ್ಷನ್ ಮಾಡಿಸಿಕೊಂಡಿದ್ದಾರೆ. ಇದನ್ನು ವೆರಿಫೈ ಮಾಡಬೇಕೋ ಬೇಡವೋ? without verifying the facts ಆದೇಶ ಮಾಡಿದರೆ ಹೇಗೆ ಆದೇಶವನ್ನು ಸುಮ್ಮನೆ ಮಾಡಿಲ್ಲ. ಇದನ್ನು ನೋಡಿದರೆ ಮೈ ಮನಸ್ಸು ಕುದಿಯುತ್ತದೆ. ಅದಕ್ಕಾಗಿ land administration collapse ಆಗಿ ಬಹಳ ದಶಕಗಳೇ ಕಳೆದು ಹೋಗಿವೆ. ಹೀಗಾದರೆ ನಾವು ಸಮಾಜಕ್ಕೆ ಏನು ಬಿಟ್ಟು ಹೋಗುತ್ತೇವೆ? ಇದರ ಬಗ್ಗೆ ಗಂಭೀರವಾಗಿ ತೆಗೆದುಕೊಳ್ಳಿ ಎಂದು ಪ್ರಧಾನ ಕಾರ್ಯದರ್ಶಿಗೆ ಹೇಳಿದ್ದೆವು ಎಂದು ತರಾಟೆಗೆ ತೆಗೆದುಕೊಂಡಿದ್ದರು.
ಯಾರೋ ಒಬ್ಬರು ಕೈಬರಹದ ಪಹಣಿಯನ್ನು ಇಟ್ಟುಕೊಂಡು ಅರ್ಜಿ ಕೊಡುತ್ತಾರೆ. ಯಾರ ಹೆಸರಿಗೆ ಅರ್ಜಿ ಕೊಟ್ಟಿದ್ದಾರೆಯೋ ಆ ಮನುಷ್ಯ ಬದುಕಿಲ್ಲ. 1957ರಲ್ಲಿಯೇ ಅವರ ಹೆಸರಿಗೆ ದರಖಾಸ್ತು ಮಂಜೂರಾಗಿದ್ದರೆ ಸುಮಾರು 65 ವರ್ಷಗಳ ಏಕೆ ಸುಮ್ಮನಿದ್ದರು, ಈಗ ಹೇಗೆ ಈ ಪ್ರಸ್ತಾಪ ದಿಢೀರ್ ಉದ್ಭವವಾಯಿತು? ಅದರ ಮಾರುಕಟ್ಟೆ ಬೆಲೆ ಒಂದು ಚದರಡಿಗೆ 23-25 ಸಾವಿರ ರೂಪಾಯಿ ಇದೆ. ಸುಮಾರು 125 ಕೋಟಿ ರೂ. ಬೆಲೆ ಬಾಳುವ ಜಮೀನಿಗೆ ಏಕಾಏಕಿ ಅರ್ಜಿ ಕೊಟ್ಟರೇ ಹೇಗೆ? ದರಖಾಸ್ತು ಷರತ್ಗಳ ಪ್ರಕಾರ ಅವರ ಅನುಭವಕ್ಕೆ ಹೋಗದಲೇ ರದ್ದಾಗಿರುತ್ತದೆ. ಯಾರ ಹೆಸರಿನಲ್ಲಿ ಅರ್ಜಿ ಕೊಟ್ಟಿದ್ದಾರೆಯೋ ಅವರು ಬದುಕಿಲ್ಲ. ಇದನ್ನು ಮಾನ್ಯ ಮಾಡಿರುವ ಎ.ಸಿ. ಅವರು ಸತ್ತವರ ಹೆಸರಿಗೆ ಮಂಜೂರಾತಿ ಮಾಡಿ ಆದೇಶ ಹೊರಡಿಸಿದರೆ ಹೇಗೆ? (He is Assistant Commissioner, Sub Divisional Magistrate). ಅದಲ್ಲದೆ ಅವರು ಕಳೆದ ಮೂರೂ ಸಭೆಗಳಿಗೆ ತಪ್ಪಿಸಿಕೊಳ್ಳುತ್ತಿದ್ದಾರೆ,’ ಎಂದು ಸಮಿತಿ ಸದಸ್ಯ ಎ.ಟಿ.ರಾಮಸ್ವಾಮಿ ಅವರು ಜಿಲ್ಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿರುವುದು ನಡವಳಿಯಿಂದ ಗೊತ್ತಾಗಿದೆ.
ಪ್ರಕರಣದ ವಿವರ
ಬೆಂಗಳೂರು ನಗರ ಜಿಲ್ಲೆಯ ದಕ್ಷಿಣ ತಾಲೂಕಿನ ಬೇಗೂರು ಹೋಬಳಿಯ ಹುಳಿಮಾವು ಗ್ರಾಮದ ಸರ್ವೇ ನಂಬರ್ 63ರಲ್ಲಿ 1.20 ಎಕರೆ ಜಾಗವನ್ನು ತೋಟಿ ಯಲ್ಲಪ್ಪ (ಮೂಲ ಹೆಸರು ಈರನಹಳ್ಳಿ ಯಲ್ಲಪ್ಪ) ಎಂಬವರಿಗೆ ಮಂಜೂರು ಮಾಡಲಾಗಿದೆ. ಈ ಸಂಬಂಧ ಆರ್ಟಿಸಿ ಕೂಡ ಮಾಡಿಕೊಡಲಾಗಿದೆ. ಆದರೆ, ವಾಸ್ತವದಲ್ಲಿ ತೋಟಿ ಯಲ್ಲಪ್ಪ ಎಂಬವರು 1998ರ ನವೆಂಬರ್ 4ರಂದು ನಿಧನರಾಗಿದ್ದಾರೆ. ಆದರೆ, ಅವರ ಹೆಸರಿನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಬೆಂಗಳೂರು ದಕ್ಷಿಣ ತಾಲೂಕಿನ ಸಹಾಯಕ ಆಯುಕ್ತರು ಪರಿಶೀಲನೆ ನಡೆಸದೆಯೇ ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ ಎಂಬ ಸಂಗತಿ ಸಭೆಯ ನಡವಳಿಯಿಂದ ತಿಳಿದು ಬಂದಿದೆ.
ಈ ಪ್ರಕರಣದ ಕುರಿತು ಸರಕಾರಿ ಜಮೀನುಗಳ ಸಂರಕ್ಷಣಾ ಸಮಿತಿಯು ನಡೆಸಿದ್ದ ಸಭೆಗೆ ಹಾಜರಾಗಿದ್ದ ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಅವರು ವಿವರಣೆ ನೀಡಿದ್ದಾರೆ. ’ ತೋಟಿಯಲ್ಲಪ್ಪ ಎಂಬವರಿಗೆ 1 ಎಕರೆ 20 ಗುಂಟೆಯನ್ನು ನಮ್ಮ ಸಹಾಯಕ ಆಯುಕ್ತರು ಆದೇಶ ಹೊರಡಿಸಿರುವ ಸಂಬಂಧ ಅದರ ವಿರುದ್ಧವಾಗಿ ಎಚ್.ಎಂ.ರಾಮಕೃಷ್ಣಪ್ಪ ಮತ್ತು 7 ಜನ ಇತರರು ಡಿ.ಸಿ.ಕೋರ್ಟ್ ನಲ್ಲಿ ಮೇಲ್ಮನವಿ (ಪ್ರಕರಣ ಸಂಖ್ಯೆ:ಆರ್ಪಿ 331/2021) ಸಲ್ಲಿಸಿದ್ದಾರೆ. ಸಹಾಯಕ ಆಯುಕ್ತರು ನೀಡಿದ್ದ ಆದೇಶದ ವಿರುದ್ಧ ತಡೆಯಾಜ್ಞೆ ನೀಡಿದ್ದೇನೆ. ಪ್ರಕರಣದ ಮೂರನೇ ಪ್ರತಿವಾದಿ ತೋಟಿ ಯಲ್ಲಪ್ಪ ಬದುಕಿಲ್ಲ. ಅವರ ಪರವಾಗಿ ಯಾರು ಬರುತ್ತಾರೋ ಅವರು ಮೂರನೇ ಪ್ರತಿವಾದಿಯಾಗಲಿದ್ದಾರೆ, ಎಂದು ವಿವರಣೆ ನೀಡಿರುವುದು ಸಭೆ ನಡವಳಿಯಿಂದ ಗೊತ್ತಾಗಿದೆ.
ಇದೇ ಪ್ರಕರಣದ ಕುರಿತು ವಿವರಣೆ ನೀಡಬೇಕಿದ್ದ ಸಹಾಯಕ ಆಯುಕ್ತರು ಸಮಿತಿಯು ನಡೆಸಿದ್ದ ಮೂರು ಸಭೆಗಳಿಗೆ ಹಾಜರಾಗದೇ ತಪ್ಪಿಸಿಕೊಳ್ಳುತ್ತಿರುವುದು ಸಭೆ ನಡವಳಿಯಿಂದ ತಿಳಿದು ಬಂದಿದೆ.
1957ರಲ್ಲಿ ಯಾರಿಗೋ ಮಂಜೂರಾತಿಯಾಗಿತ್ತು ಎಂದು ಕೈಬರಹದ ಪಹಣಿಯನ್ನು ತೋರಿಸಿ ಸಲ್ಲಿಕೆಯಾುವ ಅರ್ಜಿಗಳನ್ನು ಪರಿಶೀಲಿಸದೆಯೇ ಪುರಸ್ಕರಿಸುವ ಸಹಾಯಕ ಆಯುಕ್ತರು ಅತ್ಯಂತ ಬೆಲೆ ಬಾಳುವ ಜಮೀನುಗಳನ್ನು ಮಂಜೂರು ಮಾಡುತ್ತಿದ್ದರೂ ಕ್ರಿಮಿನಲ್ ಮೊಕದ್ದಮೆ ದಾಖಲಿಸದಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.