ರಾಯಚೂರು ಜಿಲ್ಲಾ ನ್ಯಾಯಾಧೀಶರ ವಿರುದ್ಧ ‘ದೇಶದ್ರೋಹ, ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ’
ಜಿಲ್ಲಾ ದಸಂಸ (ಭೀಮವಾದ)ದಿಂದ ರಾಜ್ಯಪಾಲರಿಗೆ ಮನವಿ
ಉಡುಪಿ, ಜ.31: ರಾಯಚೂರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ 73ನೇ ಗಣರಾಜ್ಯೋತ್ಸವ ಕಾರ್ಯಕ್ರಮ ದಲ್ಲಿ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡಿವರು ಸಂವಿಧಾನಕ್ಕೆ ಹಾಗೂ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಜಾತಿ ನಿಂದನೆ ಮಾಡಿ, ಗೌರವ ಸೂಚಿಸಲು ಇಟ್ಟಿದ್ದ ಅಂಬೇಡ್ಕರ್ ಭಾವಚಿತ್ರವನ್ನು ಅಲ್ಲಿಂದ ತೆಗೆಸಿ ಧ್ವಜಾರೋಹಣ ಮಾಡಿರುವುದಕ್ಕೆ ಅವರ ವಿರುದ್ಧ ದೇಶದ್ರೋಹ ಹಾಗೂ ದಲಿತ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಿ ಕಾನೂನು ಕ್ರಮಕೈಗೊಳ್ಳುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಉಡುಪಿ ಜಿಲ್ಲೆ ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಕರ್ನಾಟಕ ಉಡುಪಿ ಜಿಲ್ಲೆ ರಾಜ್ಯಪಾಲರನ್ನು ಒತ್ತಾಯಿಸಿದೆ.
ಈ ಕುರಿತ ಮನವಿಯನ್ನು ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ರಾಜ್ಯಪಾಲರಿಗೆ ಕಳುಹಿಸಿರುವ ಸಂಘಟನೆಗಳು, ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಗೌರವಾರ್ಪಣೆ ಮಾಡಲು ನಿರಾಕರಿಸಿ ಅವರನ್ನು ಕೀಳು ಜಾತಿಯ ವ್ಯಕ್ತಿಯೊಂದು ಪರಿಗಣಿಸಿ ಜಾತಿ ನಿಂದನೆ ಮಾಡಿದ್ದಲ್ಲದೇ ಸಂವಿಧಾನ ಶಿಲ್ಪಿಗೆ ಹಾಗೂ ನ್ಯಾಯಪೀಠಕ್ಕೆ ಅವಮಾನ ಮಾಡಿದ್ದಾರೆ. ಇದು ಸಂವಿಧಾನಕ್ಕೆ ಹಾಗೂ ದೇಶದ ಪ್ರಜಾಪ್ರಭುತ್ವಕ್ಕೆ ಮಾಡಿರುವ ಮಹಾದ್ರೋಹ ಎಂದು ಮನವಿಯಲ್ಲಿ ಹೇಳಿವೆ.
ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಈ ಮೂರು ಅಂಗಗಳಲ್ಲಿ ಪವಿತ್ರವಾದುದು ನ್ಯಾಯಾಂಗ ಎಂದು ಗೌರವಿಸುತ್ತೇವೆ. ರಾಜ್ಯ ಸರಕಾರ 2020ರ ಜ.25ರಂದು ಹೊರಡಿಸಿದ ಸುತ್ತೋಲೆಯಲ್ಲಿ ಗಣರಾಜ್ಯೋ ತ್ಸವದ ಎಲ್ಲಾ ಕಾರ್ಯಕ್ರಮಗಳಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಕಡ್ಡಾಯವಾಗಿ ಇಡುವಂತೆ ಸೂಚಿಸಿದೆ.
ಆದರೆ ರಾಯಚೂರು ಜಿಲ್ಲಾ ನ್ಯಾಯಾಧೀಶರು ಸರಕಾರಿ ಆದೇಶವನ್ನು ಉಲ್ಲಂಘಿಸಿ, ನ್ಯಾಯಾಧೀಶರ ವೃತ್ತಿಗೆ ಮಸಿ ಬಳಿಯುವ ಕೆಲಸ ಮಾಡಿದ್ದಲ್ಲದೇ, ಪ.ಜಾ. ಮತ್ತು ಪ.ಪಂ.ಗಳಿಗೆ ಅವಮಾನ ಮಾಡಿ ತಾರತಮ್ಯ ಎಸಗಿದ್ದಾರೆ. ಹೀಗಾಗಿ ಇವರ ಮೇಲೆ ದೇಶದ್ರೋಹ ಹಾಗೂ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ದೂರು ಮನವಿ ಸಲ್ಲಿಸುತ್ತಿರುವುದಾಗಿ ಮನವಿಯಲ್ಲಿ ತಿಳಿಸಲಾಗಿದೆ.
ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರು ಮನವಿಯನ್ನು ಸ್ವೀಕರಿಸಿದರು. ಮನವಿ ಸಲ್ಲಿಸಿದ ನಿಯೋಗದಲ್ಲಿ ದಸಂಸದ ರಾಜ್ಯ ಸಂಘಟನಾ ಸಂಚಾಲಕ ಶೇಖರ್ ಹಾವಂಜೆ, ಜಿಲ್ಲಾ ಸಂಘಟಕರಾದ ರಮೇಶ್ ಹರಿಕಂಡಿಗೆ, ರಮೇಶ್ ಮಾಬಿಯಾನ್, ವಿಠಲ್ ಹಾವಂಜೆ, ಕೃಷ್ಣ ಮಾವಿನಕಟ್ಟೆ, ಆರ್‌ಪಿಐನ ಜಿಲ್ಲಾ ಅಧ್ಯಕ್ಷ ಗೋಪಾಲ್ ಇಸರ್‌ಮಾರ್ ಮುಂತಾದವರು ಉಪಸ್ಥಿತರಿದ್ದರು.