ಯುಎಇ ಸುರಕ್ಷತಾ ಅಗತ್ಯಗಳಿಗೆ ಸಂಪೂರ್ಣ ನೆರವು ನೀಡುತ್ತೇವೆ: ಇಸ್ರೇಲ್ ಅಧ್ಯಕ್ಷರ ವಾಗ್ದಾನ
ಶೇಖ್ ಮುಹಮ್ಮದ್ ಬಿನ್ ಝಾಯೆದ್ ರೊಂದಿಗೆ ಮಾತುಕತೆ
photo:twitter/@Isaac_Herzog
ದುಬೈ, ಜ.31: ಯುಎಇ ದೇಶದ ಸುರಕ್ಷತಾ ಅಗತ್ಯಗಳಿಗೆ ನಾವು ಸಂಪೂರ್ಣ ನೆರವು ನೀಡುತ್ತೇವೆ ಮತ್ತು ದೇಶದ ಸಾರ್ವಭೌಮತ್ವದ ಮೇಲಿನ ದಾಳಿಯನ್ನು ಎಲ್ಲಾ ರೀತಿ ಮತ್ತು ವಿಧದಲ್ಲಿ ಖಂಡಿಸುತ್ತೇವೆ ಎಂದು ಇಸ್ರೇಲ್ ಅಧ್ಯಕ್ಷ ಇಸಾಕ್ ಹರ್ಝೋಗ್ ಹೇಳಿದ್ದಾರೆ.
ಯುಎಇ ಯುವರಾಜ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಸಂಬಂಧ ವರ್ಧನೆಯ ಉಪಕ್ರಮಗಳ ಬಗ್ಗೆ ಸುಮಾರು ಎರಡೂವರೆ ಗಂಟೆ ಮಾತುಕತೆ ನಡೆಸಿದ ಸಂದರ್ಭ ಹರ್ಝೋಗ್ ಈ ವಾಗ್ದಾನ ಮಾಡಿದ್ದಾರೆ ಎಂದು ಯುಎಇ ಸರಕಾರಿ ಸ್ವಾಮ್ಯದ ಮಾಧ್ಯಮ ವರದಿ ಮಾಡಿದೆ.
ಕೊಲ್ಲಿ ದೇಶಗಳೊಂದಿಗೆ ಸಂಬಂಧ ಸುಧಾರಣೆಯ ಉಪಕ್ರಮವಾಗಿ ಇಸ್ರೇಲ್ ಅಧ್ಯಕ್ಷ ಇಸಾಕ್ ಹರ್ಝೋಗ್ ರವಿವಾರ ಯುಎಇಗೆ ಅಧಿಕೃತ ಭೇಟಿಗಾಗಿ ಆಗಮಿಸಿದ್ದು ಇಸ್ರೇಲ್ ಅಧ್ಯಕ್ಷರೊಬ್ಬರು ಯುಎಇಗೆ ನೀಡಿರುವ ಪ್ರಪ್ರಥಮ ಭೇಟಿ ಇದಾಗಿದೆ. ಅಮೆರಿಕದ ಮಧ್ಯಸ್ಥಿಕೆಯಲ್ಲಿ ನಡೆದಿರುವ ಅಬ್ರಹಾಂ ಒಪ್ಪಂದದ ಅನ್ವಯ ಬಹ್ರೈನ್, ಸುಡಾನ್ ಮತ್ತು ಮೊರೊಕ್ಕೋ ದೇಶಗಳು ಈಗಾಗಲೇ ಇಸ್ರೇಲ್ನೊಂದಿಗೆ ರಾಜತಾಂತ್ರಿಕ ಬಾಂಧವ್ಯವನ್ನು ಸ್ಥಾಪಿಸಿಕೊಂಡಿವೆ.
ಇಸ್ರೇಲ್ ನ ರಾಷ್ಟ್ರಗೀತೆಯ ಗಾಯನ ಹಾಗೂ 21 ಕುಶಾಲುತೋಪುಗಳನ್ನು ಸಿಡಿಸುವ ಮೂಲಕ ಯುಎಇಯಲ್ಲಿ ಹರ್ಝೋಗ್ ಗೆ ಅದ್ದೂರಿ ಸ್ವಾಗತ ಕೋರಲಾಗಿದೆ. ಈ ವಲಯದ ಇತರ ದೇಶಗಳೂ ಯುಎಇಯ ಮಾದರಿಯನ್ನು ಅನುಸರಿಸಿ ಇಸ್ರೇಲ್ ಗೆ ಮಾನ್ಯತೆ ನೀಡಿ ಸ್ನೇಹ ಸಂಬಂಧ ಬೆಳೆಸಿಕೊಳ್ಳಬೇಕು ಎಂದು ಒತ್ತಾಯಿಸಿದ ಹರ್ಝೋಗ್, ಅಬುಧಾಬಿಯ ಮೇಲೆ ಇತ್ತೀಚೆಗೆ ನಡೆದ ವಾಯುದಾಳಿಯನ್ನು ಖಂಡಿಸಿದರು. ಇರಾನ್ ಬೆಂಬಲಿತ ಹೌತಿ ಸಂಘಟನೆ ಈ ದಾಳಿಯ ಹೊಣೆ ಹೊತ್ತಿದೆ.
ಇಸ್ರೇಲ್ ಅಧ್ಯಕ್ಷರು ದುಬೈ ಆಡಳಿತಗಾರರನ್ನು ಹಾಗೂ ಉನ್ನತ ಅಧಿಕಾರಿಗಳನ್ನು ಭೇಟಿಯಾಗುವ ಜೊತೆಗೆ ದುಬೈ ಎಕ್ಸ್ಪೋ ಕಾರ್ಯಕ್ರಮಕ್ಕೆ ಭೇಟಿ ನೀಡಲಿದ್ದಾರೆ ಎಂದು ಇಸ್ರೇಲ್ ರಾಯಭಾರಿ ಕಚೇರಿ ಹೇಳಿದೆ. ಇಸ್ರೇಲ್ ನ ಆಡಳಿತ ವ್ಯವಸ್ಥೆಯಲ್ಲಿ ಪ್ರಧಾನಿಗೆ ಹೆಚ್ಚಿನ ಅಧಿಕಾರವಿದ್ದರೆ ಅಧ್ಯಕ್ಷರ ಹುದ್ದೆ ವಿಧ್ಯುಕ್ತವಾಗಿದೆ.
ಕಳೆದ ತಿಂಗಳು ಇಸ್ರೇಲ್ ಪ್ರಧಾನಿಯ ಯುಎಇ ಭೇಟಿ ಸಂದರ್ಭ, ಇರಾನ್ನ ಪರಮಾಣು ಕಾರ್ಯಕ್ರಮ ಮಾತುಕತೆಯ ಪ್ರಮುಖ ಅಜೆಂಡಾ ಆಗಿತ್ತು. ಯೆಮನ್ನಲ್ಲಿರುವ ಇರಾನ್ ಬೆಂಬಲಿತ ಹೌದಿ ಪಡೆಗಳು ಜನವರಿ 18ರಂದು ಯುಎಇ ವಿರುದ್ಧ ಮಾರಣಾಂತಿಕ ಡ್ರೋನ್ ದಾಳಿ ನಡೆಸಿದ ಬಳಿಕ, ಯುಎಇಗೆ ಭದ್ರತೆ ಮತ್ತು ಗುಪ್ತಚರ ಬೆಂಬಲ ಒದಗಿಸುವುದಾಗಿ ಇಸ್ರೇಲ್ ವಾಗ್ದಾನ ನೀಡಿದೆ.
ಇಸ್ರೇಲ್ ಅಧ್ಯಕ್ಷರ ಭೇಟಿಯ ಸಂದರ್ಭದ ಕಾರ್ಯಕ್ರಮಗಳನ್ನು ಕಟ್ಟುನಿಟ್ಟಿನ ನಿಯಂತ್ರಣಕ್ಕೆ ಒಳಪಡಿಸಲಾಗಿದ್ದು ಮಾಧ್ಯಮಗಳಿಗೆ ಆಹ್ವಾನ ಇರಲಿಲ್ಲ. ಅಲ್ಲದೆ ಸಭೆಯ ಬಳಿಕ ಮಾಧ್ಯಮಗೋಷ್ಟಿಯೂ ಇರಲಿಲ್ಲ ಎಂದು ಮೂಲಗಳು ಹೇಳಿವೆ.