varthabharthi


ಅನುಗಾಲ

ನನ್ನೊಡನಿರು ನೀ

ವಾರ್ತಾ ಭಾರತಿ : 3 Feb, 2022
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ನೆನಪುಗಳನ್ನು ಕೊಲ್ಲುವವರು ಇಷ್ಟಾದರೂ ನೆನಪು ಮಾಡಿಕೊಳ್ಳುವುದು ಒಳ್ಳೆಯದು: ಬದುಕಿದಷ್ಟು ಕಾಲ ನೆನಪುಗಳಿಗೆ ಅಳಿವಿಲ್ಲ. ದ್ವೇಷದ ರಾಕ್ಷಸತ್ವವು ಸತ್ವಹೀನ; ಅದೆಷ್ಟೇ ವಿಜೃಂಭಿಸಿದರೂ ಸಾತ್ವಿಕ ಸತ್ಯದೆದುರು ಉಳಿಯುವುದಿಲ್ಲ. ಆದ್ದರಿಂದ ಹೀಗೆ ಒಂದು ಕವಿತೆ ಹಾಡಾಗಿ, ನುಡಿಯಾಗಿ ಪಡಿಮೂಡಿದಾಗ ಅದನ್ನು ಅಧಿಕಾರದ ಮೂಲಕ ಅಳಿಸಲು ಸಾಧ್ಯವಿಲ್ಲ; ಮತ್ತು ಆ ಮೂಲಕ ಗಾಂಧಿಯನ್ನು ಮರೆಸಲು ಎಷ್ಟೇ ಯತ್ನಿಸಿದರೂ ನೆಲದಾಳಕ್ಕೆ, ಮನದಾಳಕ್ಕೆ ಇಳಿದ ಗಾಂಧಿಯ ಬೇರುಗಳು ಸಾಯವು. ಅವು ಇನ್ನಷ್ಟು ಆಳಕ್ಕಿಳಿಯುತ್ತವೆ; ಅವರನ್ನು ಹೆಚ್ಚು ಹೆಚ್ಚು ಅಜರಾಮರವಾಗಿಸುತ್ತವೆ.ನನ್ನೊಡನಿರು ನೀ
ಆವರಿಸುವ ಸಂಜೆಯ ಭರಕೆ ಇರು ನೀ ನನ್ನೊಡನೆ;
ಆಳಕ್ಕಿಳಿಯುತಿದೆ ಕತ್ತಲು; ದೊರೆಯೇ ಇರು ನೀ ನನ್ನೊಡನೆ;
ನೆರಳ ನೀಡುವವರು ಕುಸಿದು ಕುಳಿತರೆ, ಸುಖಭೋಗಗಳು ದೂರವಾದರೆ,
ಅಸಹಾಯಕರ ಸಹಾಯಕನೇ, ಇರು ನೀ ನನ್ನೊಡನೆ.
ಬದುಕಿನ ಕಿರು ದಿನ ದಾಟುವ ಹೊತ್ತು ಧಾವಿಸಿ ಬರುತಿದೆ;
ಜಗದ ಐಸಿರಿ ಮಬ್ಬಾಗುತಿದೆ, ವೈಭವವಳಿಯುತಿದೆ,
ನಾನು ನೋಡುವೆಲ್ಲೆಡೆ ಪರಿವರ್ತನೆಯೂ ಅವನತಿಯೂ
ಬದಲಾಗದಿಹ ನೀನಿರು ನನ್ನೊಡನೆ.
ಕಳೆಯುವ ಪ್ರತಿ ಕ್ಷಣ ನೀನಿರಬೇಕು;
ನಿನ್ನ ಕರುಣೆಯನುಳಿದು ಶಕ್ತಿಯೆಲ್ಲಿದೆ ಹೇಳು?
ನೀನು ತೋರಿದ ದಾರಿ ತೋರುವವರ್ಯಾರು?
ಮುಗಿಲಿರಲಿ, ಬಿಸಿಲಿರಲಿ, ದೊರೆ ನೀನಿರು ನನ್ನೊಡನೆ.
ನಿನ್ನ ಅಭಯಹಸ್ತವಿರಲು ಹೆದರಲಾರೆ ಯಾವ ವೈರಿಗೂ
ಕೇಡಿಗಿನಿತು ಬಲವಿಲ್ಲ, ಕಣ್ಣೀರಿಗೆ ನೋವಿಲ್ಲ;
ಎಲ್ಲಿ ಸಾವಿನ ಮೊನಚು, ಎಲ್ಲಿ ಗೋರಿಗೆ ಗೆಲುವು?
ಗೆಲ್ಲುವೆನು ನೀನಿರಲು ನನ್ನೊಡನೆ.
ಶಿಲುಬೆೆಯನು ಹಿಡಿದುಕೋ ನನ್ನ ಮುಚ್ಚುವ ಕಣ್ಣುಗಳೆದುರು;
ಮಬ್ಬನ್ನು ಸೀಳಿ ಹೊಳೆಯುತ್ತ ಆಗಸದ ಪಥ ತೋರು;
ಸಗ್ಗದ ಬೆಳಗು ಬೆಳಗಲಿ, ಲೋಕದ ಸುಳ್ಳು ನೆರಳು ಸರಿಯಲಿ;
ಬದುಕಿನಲ್ಲೂ ಸಾವಿನಲ್ಲೂ, ದೊರೆಯೇ ಇರು ನನ್ನೊಡನೆ.

(ಮೂಲ ಇಂಗ್ಲಿಷ್ Abide with me’: ಹೆನ್ರಿ ಫ್ರಾನ್ಸಿಸ್ ಲೈಟ್. ಕನ್ನಡಕ್ಕೆ: ಬಾಲಸುಬ್ರಹ್ಮಣ್ಯ ಕಂಜರ್ಪಣೆ)
***
 
 ಸಲ್ಲದ ವಿಷಾದನೀಯ ಕಾರಣಗಳಿಗಾಗಿ ಸುದ್ದಿಗೆ ಬಂದಿರುವ Abide with me’ (ಕನ್ನಡದಲ್ಲಿ ‘ನನ್ನೊಡನಿರು ನೀ’ ಅಥವಾ ‘ನೀನಿರು ನನ್ನೊಡನೆ’ ಎಂದು ಹೇಳಬಹುದು) ಎಂಬ ಇಂಗ್ಲಿಷ್ ಕವಿತೆಯನ್ನು ಈ ಲೇಖನದ ಉದ್ದೇಶಕ್ಕಾಗಿಯೇ ಕನ್ನಡಿಸಿದ್ದೇನೆ. ಹೆನ್ರಿ ಲೈಟ್ ಎಂಬ ಆಂಗ್ಲ ಕವಿ (ಈತ ಇಂಗ್ಲೆಂಡಿನ ಚರ್ಚೊಂದರಲ್ಲಿ ಪಾದ್ರಿಯಾಗಿದ್ದ.) ಇದನ್ನು ಬರೆದವನು. ಆತನೂ ಆತನ ಪತ್ನಿ ಅನ್ನಾ ಅಶಕ್ತರ, ರೋಗಿಗಳ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಡಬ್ಲಿನ್‌ನ ಟ್ರಿನಿಟಿ ಕಾಲೇಜು ದಿನಗಳಲ್ಲಿ ಕವಿತೆ ಬರೆದು ಪುರಸ್ಕಾರಗಳನ್ನು ಮತ್ತು ತನ್ನ ಪ್ರತಿಭೆ, ಪಾಂಡಿತ್ಯಕ್ಕಾಗಿ ವಿದ್ಯಾರ್ಥಿವೇತನವನ್ನು ಪಡೆದಿದ್ದರೂ ಕವಿಯಾಗಿ ಆತ ಮುಂದುವರಿದ ಬಗ್ಗೆ ದಾಖಲೆಗಳಿಲ್ಲ. ಆತ ಕ್ಷಯರೋಗ ಪೀಡಿತನಾಗಿದ್ದ. ತನ್ನ ಮರಣವು ಹತ್ತಿರವಾಗುತ್ತಿರುವುದನ್ನು ಮನಗಂಡು ಆತ ತನ್ನ 45ನೇ ವರ್ಷದಲ್ಲಿ ಒಂದು ವಿದಾಯ ಭಾಷಣವನ್ನು ತಯಾರಿಸಿ 1847ರ ಸೆಪ್ಟಂಬರ್ 4ರಂದು ಅದನ್ನು ಮಾಡಿದ. ಆ ಭಾಷಣದಲ್ಲಿ ಆತ 1820ರಲ್ಲಿ ಬರೆದ ಈ ಸ್ವರಚಿತ ಕವಿತೆಯನ್ನು ಸೇರಿಸಿದ್ದ. ಅದಾದ 10 ವಾರಗಳಲ್ಲಿ ಮರಣ ಹೊಂದಿದ.

ಶರಣಾಗತಿಯ ಮತ್ತು ಆರ್ತತೆಯ ಉತ್ತುಂಗ ಸ್ಥಿತಿಯನ್ನು ಕವಿ ಇದರಲ್ಲಿ ತೋಡಿಕೊಂಡಿದ್ದಾನೆ. ಈ ಕವಿತೆಯು ಜಾಗತಿಕ ಮನ್ನಣೆಯನ್ನು ಪಡೆಯಿತು. ವಿವಿಧ ಕಾರಣಗಳಿಗಾಗಿ ಅದು ಸಮಾಜದ ಎಲ್ಲ ವರ್ಗಗಳ ಜನರಿಂದ ಸ್ತುತಿಯನ್ನು ಗಳಿಸಿತು. ಕವಿ ಮಾಡಿದ ಸಮಾಜಸೇವೆ, (ಪ್ರಾಯಃ ಆತನ ದುರಂತ ಅಂತ್ಯ), ಕವಿತೆಯ ಆರ್ತ ಧ್ವನಿ, ಅದು ದೀನ-ದಲಿತರ ಕುರಿತು ತೋರಿಸಿದ ಮರುಕಳಿಸುವ ಕಳಕಳಿ, ಸರಳ ನಿರೂಪಣೆ ಇವೆಲ್ಲ ಆ ಕವಿತೆಯನ್ನು ಧ್ವನಿಪೂರ್ಣವಾಗಿಸಿತು. ಅಲ್ಲಿ ವ್ಯಕ್ತವಾಗುವ ದೇವರು ಕಾಲಾತೀತ, ದೇಶಾತೀತ. ‘ಕ್ರಾಸ್’ ಅಥವಾ ಶಿಲುಬೆ ಎಂಬುದು ಆತ ನಂಬಿದ, ಅನುಸರಿಸಿದ ದೇವರ ಮೂರ್ತ ಪ್ರತೀಕವಾಗಿದ್ದರೂ ಕವಿತೆಯ ಆಶಯವು ಧರ್ಮಪ್ರಚಾರವಲ್ಲ. ಅದು ಅನುಷಂಗಿಕ/ಪ್ರಾಸಂಗಿಕ. ಅಲ್ಲಿ ಇತರ ಧರ್ಮಗಳ ದೇವದೇವತೆಗಳ ಸಂಕೇತ ಬಂದಿದ್ದರೂ ಅದು ಧಾರ್ಮಿಕವಾಗಲು ಸಾಧ್ಯವಿಲ್ಲ. ನೀರಿನಲ್ಲಿ ಮುಳುಗುತ್ತಿರುವವನಿಗೆ ತನ್ನನ್ನು ಉಳಿಸಲು ಬರುವವನ ಮತ ಧರ್ಮ ಮುಖ್ಯವಾಗಲು ಸಾಧ್ಯವಿಲ್ಲ. ಅದು ಅಳಿವು-ಉಳಿವಿನ ಪ್ರಶ್ನೆ. ಅಸಹಾಯಕತೆಯ, ಶರಣಾಗತಿಯ ಉತ್ತುಂಗತೆ. ಅದು ವ್ಯಾಸಭಾರತದ ಭಾಗವಾದ ಮತ್ತು ‘ವಿಷ್ಣು ಸಹಸ್ರನಾಮ’ ಎಂಬ ಹೆಸರಿನಲ್ಲಿ ಪಾರಾಯಣಗೊಳ್ಳುತ್ತಿರುವ ಸ್ತೋತ್ರದ ಮೊದಲ ಶ್ಲೋಕದ ‘ವಿಶ್ವಂ ವಿಷ್ಣು’ (ಜಗತ್ಕಾರಣನು, ಸರ್ವವ್ಯಾಪಕನು,) ಎಂಬ ಪದಮೂಲ ಚಿಂತನೆಗೆ ಪರ್ಯಾಯವಾದ ಅಭಿವ್ಯಕ್ತಿ. ಕನಕದಾಸರ ‘‘ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ’’ ಪದ್ಯವೂ ಇದೇ ಮಾದರಿಯದ್ದು. ಅನೇಕ ವಚನಗಳೂ ಈ ಪರಂಪರೆಯಲ್ಲಿವೆ.


ಗಾಂಧಿ ಈ ಕವಿತೆಯನ್ನು ಬಹಳ ಮೆಚ್ಚಿಕೊಂಡಿದ್ದರು. ತಾನು ಹಿಂದೂ ಎಂದು ಹೇಳಿಕೊಂಡಿದ್ದ ಗಾಂಧಿಗೆ ಇತರ ಧರ್ಮೀಯರು ಅಷ್ಟೇ ನಿಕಟವಾಗಿದ್ದರು. ಗಾಂಧಿಯ ಬದುಕನ್ನು ಗಮನಿಸಿದವರಿಗೆ ಜಾತ್ಯತೀತತೆಯೆಂದರೇನು ಎಂದು ಬೇರೆ ಕಲಿಯಬೇಕಾಗಿಲ್ಲ. ಕ್ರಿಸ್ತ, ಬುದ್ಧ, ಅಲ್ಲಾಹು ಹೀಗೆ ಎಲ್ಲರನ್ನು ಅವರು ತನ್ನ ಧರ್ಮಶ್ರದ್ಧೆಯನ್ನು ಬಲಿಗೊಡದೆ ಸರಿಸಮವಾಗಿ ಕಂಡವರು. ತನ್ನ ಭಜನೆಯನ್ನು ‘ಈಶ್ವರ ಅಲ್ಲಾ ತೇರೇ ನಾಮ್’ ಎಂದು ಪಠಿಸಿದರು. ತನ್ನ ಸುತ್ತಲಿನ ಜಗತ್ತನ್ನು ಕಂಡು ಮರುಗಿ ‘ಸಬಕೋ ಸನ್ಮತಿ ದೇ ಭಗವಾನ್’ ಎಂದು ಆರ್ತರಾಗಿ ಪ್ರಾರ್ಥಿಸಿದರು. 13ನೇ ಶತಮಾನದಲ್ಲಿ ಇಟಾಲಿಯನ್ ಪಾದ್ರಿ ಸಂತ ಫ್ರಾನ್ಸಿಸ್ ಅಸಿಸಿ ಇಂತಹದ್ದೊಂದು ಕವಿತೆ (ಅದು ಕವಿತೆಯೋ ಪ್ರವಚನವೋ ಎಂಬುದು ನನಗೆ ಸ್ಪಷ್ಟವಿಲ್ಲ) ಬರೆದ. ಇದನ್ನು ನವೋದಯದ ಕವಿ ‘ಸೌರಭ’ ‘ಪ್ರಾರ್ಥನೆ’ ಎಂಬ ಶೀರ್ಷಿಕೆಯಲ್ಲಿ ಕನ್ನಡಿಸಿದ್ದಾರೆ. ಅದರಲ್ಲಿ ‘‘ಓ ತಂದೆ! ದ್ವೇಷ ಮದ ಮಾತ್ಸರ್ಯ ಹೊಗೆಯಾಡುವೆಡೆಯಲ್ಲಿ ಪ್ರೇಮಬೀಜವ ಬಿತ್ತಿ ಬೆಳೆಸಿ ಕಾಪಾಡು; ನ್ಯಾಯ ನೀತಿಗಳನ್ನು ಮರೆತ ಮಾನವರೆಡೆಗೆ ಕ್ಷಮೆಯೆಂಬ ಕುಡಿನೋಟ ಬೀರಿ ಸೊಗ ನೀಡು ಸಂಶಯದ ವಿಷದುರಿಯು ಉರಿವ ಎದೆಎದೆಯೊಳಗೆ ನಂಬಿಕೆಯ ತಂಬೆಲರ ಬೀಸಿ ಉರಿ ತಣಿಸು; ಆಶಾ ನಿರಾಶೆಗಳ ಹೊನಲೊಳಗೆ ಹೋಗುವಗೆ ಭರವಸೆಯ ಕೈಗೋಲನಿತ್ತು ಭಯ ನೀಗು. ಕತ್ತಲೆಯ ಪರಿಹರಿಸಿ ಜ್ಞಾನ ದೀವಿಗೆಯುರಿಸಿ ನಿತ್ಯ ದುಃಖಿಗಳೆದೆಗೆ ಸಂತಸವ ನೀಡು.’’ ಎಂಬ ಸಾಲುಗಳಿವೆ. ಗಾಂಧಿಮನ ಮನಸೋಲಬಹುದಾದ ಸಂದೇಶಗಳನ್ನು ನೀಡಿದೆ. ಹೆನ್ರಿ ಲೈಟ್‌ನ ಈ ಕವಿತೆಗೆ ಗಾಂಧಿ ಮಾರುಹೋಗಿದ್ದರು. ಇದಷ್ಟೇ ಅಲ್ಲ, ಅವರು ಜಗತ್ತಿನ ಎಲ್ಲೆಡೆಯಿಂದ ಬಂದ, ಬರುವ ಒಳ್ಳೆಯ ಯೋಚನೆಗಳನ್ನು, ಚಿಂತನೆಗಳನ್ನು ಸ್ವೀಕರಿಸಿದ್ದರು. ಋಗ್ವೇದದ ‘ಆನೋ ಭದ್ರಾ ಕ್ರತವೋ ಯಾಂತು ವಿಶ್ವತಃ’ (‘ಒಳ್ಳೆಯ ಚಿಂತನೆಗಳು ಜಗತ್ತಿನ ಎಲ್ಲೆಡೆಯಿಂದ ಸುತ್ತುವರಿಯಲಿ’ ಅಥವಾ Let noble thoughts come to us from every side) ಎಂಬ ಉಕ್ತಿಯನ್ನು ಬದುಕಲ್ಲಿ ಅಳವಡಿಸಿಕೊಂಡವರು ಗಾಂಧಿ. ಕಾರ್ಡಿನಲ್ ನ್ಯೂಮನ್‌ನ "Lead Kindly Light' (ಕರುಣಾಳು ಬಾ ಬೆಳಕೆ) ಕವಿತೆಯನ್ನೂ ಅವರು ಸದಾ ನೆನಪಿಸುತ್ತಿದ್ದರು. ಜಾನ್ ರಸ್ಕಿನ್‌ನ "Unto this last' (ಕೊನೆಯವನ ತನಕ) ಎಂಬ ಮೂಲ ಬೈಬಲ್ಲಿನ ತಾತ್ವಿಕ ಚಿಂತನೆ ಅವರದ್ದಾಗಿತ್ತು. ಆದ್ದರಿಂದಲೇ ಅವರು ಭಾರತ ಸ್ವಾತಂತ್ರ್ಯವನ್ನು ಎಲ್ಲರೂ ಸಡಗರದಿಂದ ಆಚರಿಸುತ್ತಿದ್ದರೆ ತಾನು ದೀನದಲಿತರ ಸೇವೆಗೆ ಹೆಗಲುಕೊಟ್ಟಿದ್ದರು. ಗಾಂಧಿಗೆ ಇಷ್ಟವಾದ್ದನ್ನು ಈ ದೇಶ ಗೌರವಿಸಿತು. ದೇಶದ ರಾಜಕೀಯ ಪಲ್ಲಟವು ಗಾಂಧಿಗೆ ಇಷ್ಟವಾದ್ದನ್ನು ಆಚರಿಸಲು ವಿಫಲವಾದದ್ದು ಇತಿಹಾಸ. ಆದ್ದರಿಂದಲೇ ಅವರಿಷ್ಟದ ಅನೇಕ ಸಂಗತಿಗಳು ದೇಶದಿಂದ ಮಾಯವಾದವು. ಒಂದು ಉದಾಹರಣೆಯೆಂದರೆ ಇಂದಿಗೂ ಮದ್ಯಪಾನ ನಿಷೇಧ ನಡೆಯಲೇ ಇಲ್ಲ. ಹೀಗಿದ್ದರೂ ಗಾಂಧಿ ತನ್ನ ಸಮಕಾಲೀನ ಜಗತ್ತಿನ ಮೇಲೆ ಬೀರಿದ ಪ್ರಭಾವವು ಅವರನ್ನು ಒಬ್ಬ ಪವಾಡ ಸದೃಶರನ್ನಾಗಿಸಿ ಮರೆಯಲಾರದ ಮಹಾನುಭಾವನನ್ನಾಗಿಸಿತು. ತಾನು ಭಾರತದವನು ಎಂಬುದಕ್ಕಿಂತಲೂ ತಾನು ಗಾಂಧಿಯ ನಾಡಿನವನು ಎಂಬುದೇ ಇಂದಿಗೂ ಭಾರತೀಯರಿಗೆ ಹೆಚ್ಚು ಆತ್ಮಾಭಿಮಾನದ ವಿಚಾರ.

ಇಂತಹ ಗಾಂಧಿಯ ಅನೇಕ ನೆನಪುಗಳನ್ನು ದೇಶದಲ್ಲಿ ಉಳಿಸಿಕೊಂಡು ಬರಲಾಗುತ್ತದೆ. ಅದೇ ರೀತಿಯಲ್ಲಿ ಗಾಂಧಿ ಮೆಚ್ಚಿದ ಈ ಕವಿತೆಯನ್ನು ಯಾವುದಾದರೂ ರೀತಿಯಲ್ಲಿ ಬಳಸಿಕೊಳ್ಳಲು ನಡೆಸಿದ ಪ್ರಯತ್ನದ ಫಲವಾಗಿ ಅದು ಗಣರಾಜ್ಯೋತ್ಸವದ ಸಮಾರೋಪದಲ್ಲಿ ಈ ಕವಿತೆಯನ್ನು ನುಡಿಸಲಾಗುತ್ತಿತ್ತು. 1950ರಿಂದ ಅವ್ಯಾಹತವಾಗಿ ಈ ಪದ್ಧತಿ ಮುಂದುವರಿಯಿತು. 2022ರ ಗಣರಾಜ್ಯೋತ್ಸವದಲ್ಲಿ ಈ ಸಂಪ್ರದಾಯಕ್ಕೆ ಕೊನೆ ಹಾಡಲಾಯಿತು. ಕಳೆದ ಏಳು ವರ್ಷಗಳಿಂದ ಇದು ಮುಂದುವರಿದುಕೊಂಡು ಬಂದಿದೆಯೆಂಬುದೇ ಈ ದೇಶದ ಅದೃಷ್ಟ. 2020ರಲ್ಲೇ ಈ ಕವಿತೆಯನ್ನು ಕೈಬಿಡುವ ಯತ್ನಗಳಾಗಿದ್ದರೂ ಪ್ರತಿಭಟನೆಯಿಂದಾಗಿ ಅದು ಮುಂದೂಡಲ್ಪಟ್ಟಿತ್ತು. ಅದೀಗ ಸಾಕಾರವಾಗಿದೆ. ಒಂದು ರೀತಿಯಲ್ಲಿ ಇದು ನಿರೀಕ್ಷಿತವೇ: 1971ರಿಂದ ಸ್ಥಿರವಾಗಿ ಉರಿಯುವ ‘ಅಮರ್ ಜವಾನ್ ಜ್ಯೋತಿ’ಯೆಂಬ ನಂದಾದೀಪವನ್ನು ನಂದಿಸಿ ಇತ್ತೀಚೆಗೆ ಸ್ಥಾಪಿತವಾದ ರಾಷ್ಟ್ರೀಯ ಯುದ್ಧ ಸ್ಮಾರಕದೊಂದಿಗೆ ಸೇರಿಸುವ ನಿರ್ಣಯದೊಂದಿಗೆ ಈ ನಿರ್ಣಯವೂ ಬಂದಿದೆಯೆಂದರೆ ಇದು ಆಕಸ್ಮಿಕವೇನಲ್ಲ; ಬದಲಾಗಿ ದೀರ್ಘ ದುಷ್ಟ ಚಿಂತನೆಯ ಫಲವೆಂದು ಅರ್ಥವಾಗುತ್ತದೆ. ಯೋಧರನ್ನು ಅಮರರೆಂದು ತಿಳಿದು ಅದಕ್ಕೆ ಸಂಕೇತವಾದ ಅಮರ ಜ್ಯೋತಿ ನಮ್ಮ ಪರಂಪರೆಗೆ ಹತ್ತಿರದ್ದು. ಭಾರತದಲ್ಲಿ ಬೆಳಕನ್ನು ನಂದಿಸಿ ಸಡಗರ ಪಡುವ ಕ್ರಮವಿಲ್ಲ. ಯುದ್ಧ ನೆನಪಿಸುವುದಾದರೂ ಏನನ್ನು? ನೇತ್ಯಾತ್ಮಕ ಕೆಡುಕನ್ನು. ಈಗ ನಾವು ರಾಷ್ಟ್ರೀಯ ಯುದ್ಧ ಸ್ಮಾರಕವನ್ನುಳಿಸಿಕೊಂಡಿದ್ದೇವೆ. ನೆನಪಿಸಬೇಕಾದ್ದು ಯುದ್ಧದಲ್ಲಿ ಉಳಿದ, ಅಳಿದ ಯೋಧರ ಸಾಧನೆಗಳನ್ನು; ಯುದ್ಧವನ್ನಲ್ಲ. ಅದು ಕ್ರೌರ್ಯ ಮತ್ತು ಹಿಂಸೆಯನ್ನು ಜೀವಂತವಾಗಿಡುವ ಸಂಕೇತ. ಪ್ರಾಯಃ ಈ ಕವಿತೆಯಲ್ಲಿ ಬರುವ ‘ಕ್ರಾಸ್’ ಅಥವಾ ‘ಶಿಲುಬೆ’ ಎಂಬ ಪದವು ಸರಕಾರಕ್ಕೆ ಅಪಥ್ಯವಾಗಿರಬಹುದು. ಈಗ ಅಳಿಸಲೆತ್ನಿಸಿದ ‘ನನ್ನೊಡನಿರು ನೀ’ ಕವಿತೆಯಲ್ಲಿ ಬರುವ ಶಿಲುಬೆಯನ್ನು ತನ್ನ ಅಧಿಕಾರದ ಮೂಲಕ ಮೂರ್ತರೂಪವಾಗಿ ಸರಕಾರ ಇನ್ನಷ್ಟು ಭದ್ರಪಡಿಸಿದೆ. ಈ ನಿರ್ಧಾರಗಳಿಗೆ ಸರಕಾರವು ಸಮರ್ಥನೆಯನ್ನೇನೂ ನೀಡಿಲ್ಲ. ನಿರ್ಣಯದ ನಂತರವೇ ಸಮರ್ಥನೆಯನ್ನು ಹುಡುಕುವುದು ದುಷ್ಟರ ಅದರಲ್ಲೂ ಅಧಿಕಾರಸ್ಥರ ಜಾಯಮಾನ. ಸಂಶಯಗಳಿಗೆ ಎಡೆಮಾಡುವ ನಿರ್ಧಾರಗಳಿಗೆ ಸರಕಾರ ಸಮರ್ಪಕ ಉತ್ತರ/ವಿವರಣೆಯನ್ನು ನೀಡಿ ನಿವಾರಿಸುವುದು ಒಳ್ಳೆಯದು. ಅದು ಆಳುವವರ ಜವಾಬ್ದಾರಿಯ, ಉತ್ತರದಾಯಿತ್ವದ ಲಕ್ಷಣ ಕೂಡಾ.

ಇನ್ನೂ ಮುಖ್ಯವಾದ ಆತಂಕವೆಂದರೆ ಕಲೆಯಲ್ಲಿ ಜಾತಿ-ಮತಗಳನ್ನು ಹುಡುಕುವುದು. ಭಾರತೀಯರು ಹೇಳುವ ಸ್ವರ್ಗ ಗ್ರೀಕ್ ಪುರಾಣದ್ದಲ್ಲ. ನಮ್ಮಲ್ಲಿ ಇಂದ್ರನಿದ್ದರೆ ಅಲ್ಲಿ ಇನ್ನೊಬ್ಬ ದೇವರಿರುತ್ತಾನೆ. ಒಟ್ಟಾರೆ ಜಗನ್ನಿಯಾಮಕನೊಬ್ಬನಿದ್ದಾನೆಂಬ ತಾತ್ಪರ್ಯ ಅರ್ಥವಾಗದಿದ್ದರೆ ಜ್ಞಾನವೆಲ್ಲ ಶೂನ್ಯ.
ಇಕ್ಬಾಲ್ ಕವಿಯ ‘ಸಾರೇ ಜಹಾಂ ಸೆ ಅಚ್ಛಾ’ ಇನ್ನೂ ಉಳಿದುಕೊಂಡಿದೆ. ಅದು ಸರಕಾರದ ದಾಖಲೆಯಿಂದ ಯಾವಾಗ ಮರೆಯಾಗುತ್ತದೆಯೋ ಗೊತ್ತಿಲ್ಲ. ಕನ್ನಡದ ಸಾಹಿತ್ಯವನ್ನು ನೆನಪಿಸಿದರೆ ಯೇಸುವಿನ ಕುರಿತಂತೆ ಮಂಜೇಶ್ವರ ಗೋವಿಂದ ಪೈಗಳು ‘ಗೊಲ್ಗೊಥಾ’ ಮತ್ತು ಬುದ್ಧನ ಕುರಿತಂತೆ ‘ವೈಶಾಖಿ’ ಎಂಬ ಖಂಡ ಕಾವ್ಯಗಳನ್ನು ಬರೆದಿದ್ದಾರೆ. ಈ ಕಾರಣಕ್ಕೇ ಅವರ ರಾಷ್ಟ್ರಕವಿ ಪ್ರಶಸ್ತಿಯನ್ನು ಕಸಿದುಕೊಳ್ಳಬಹುದೇ? ನಿರಂಜನರ ‘ಮೃತ್ಯುಂಜಯ’, ಕೆ.ವಿ.ಅಯ್ಯರ್ ಅವರ ‘ರೂಪದರ್ಶಿ’, ಇವೆಲ್ಲ ಭಾರತಕ್ಕಿಂತ ಹೊರತಾದ ಸಂಸ್ಕೃತಿಗಳನ್ನು ವಸ್ತುವಾಗಿಸಿದ ಕೃತಿಗಳು. ಕಿಟ್ಟೆಲ್‌ನ ಶಬ್ದಕೋಶವು ಕನ್ನಡಕ್ಕೆ ಕಳಶಪ್ರಾಯವಾದ ಕೃತಿ. ಈ ಕಾರಣಕ್ಕೆ ಅವನ್ನು ಅಳಿಸಬಹುದೇ?

ನೆನಪುಗಳನ್ನು ಕೊಲ್ಲುವವರು ಇಷ್ಟಾದರೂ ನೆನಪು ಮಾಡಿಕೊಳ್ಳುವುದು ಒಳ್ಳೆಯದು: ಬದುಕಿದಷ್ಟು ಕಾಲ ನೆನಪುಗಳಿಗೆ ಅಳಿವಿಲ್ಲ. ದ್ವೇಷದ ರಾಕ್ಷಸತ್ವವು ಸತ್ವಹೀನ; ಅದೆಷ್ಟೇ ವಿಜೃಂಭಿಸಿದರೂ ಸಾತ್ವಿಕ ಸತ್ಯದೆದುರು ಉಳಿಯುವುದಿಲ್ಲ. ಆದ್ದರಿಂದ ಹೀಗೆ ಒಂದು ಕವಿತೆ ಹಾಡಾಗಿ, ನುಡಿಯಾಗಿ ಪಡಿಮೂಡಿದಾಗ ಅದನ್ನು ಅಧಿಕಾರದ ಮೂಲಕ ಅಳಿಸಲು ಸಾಧ್ಯವಿಲ್ಲ; ಮತ್ತು ಆ ಮೂಲಕ ಗಾಂಧಿಯನ್ನು ಮರೆಸಲು ಎಷ್ಟೇ ಯತ್ನಿಸಿದರೂ ನೆಲದಾಳಕ್ಕೆ, ಮನದಾಳಕ್ಕೆ ಇಳಿದ ಗಾಂಧಿಯ ಬೇರುಗಳು ಸಾಯವು. ಅವು ಇನ್ನಷ್ಟು ಆಳಕ್ಕಿಳಿಯುತ್ತವೆ; ಅವರನ್ನು ಹೆಚ್ಚು ಹೆಚ್ಚು ಅಜರಾಮರವಾಗಿಸುತ್ತವೆ.
‘ನನ್ನೊಡನಿರು ನೀ’ ಈಗ ಎಂದಿಗಿಂತ ಹೆಚ್ಚು ಪ್ರಸ್ತತವಾಗಿದೆ. ಮಾತ್ರವಲ್ಲ, ವ್ಯಂಗ್ಯವೆಂಬಂತೆ ಅದರ ಸಾರ ಎಲ್ಲರಿಗೂ ಗೊತ್ತಾಗಿದೆ. ಪ್ರತಿನಾಯಕರೇ ನಾಯಕನ ಹಿರಿಮೆಗೆ ಕಾರಣರಾಗುವುದು ಹೀಗೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)