ಆಕ್ಸಿಜನ್ ಜನರೇಟರ್ ಯುನಿಟ್ ಖರೀದಿಗಾಗಿ 140 ಕೋ. ರೂ. ಪ್ರಸ್ತಾವ
ಪಿಎಂ ಕೇರ್ಸ್ ನಿಧಿಯಿಂದ ಪಡೆದುಕೊಳ್ಳಿ ಎಂದ ಆರ್ಥಿಕ ಇಲಾಖೆ!
ಬೆಂಗಳೂರು, ಫೆ.3: ಕೋವಿಡ್ ಮೂರನೇ ಅಲೆ ಎದುರಿಸಲು 140 ಕೋಟಿ ರೂ. ಮೊತ್ತದಲ್ಲಿ ಆಕ್ಸಿಜನ್ ಜನರೇಟರ್ ಯುನಿಟ್ಗಳ ಖರೀದಿಗಾಗಿ ಪಿಎಂ ಕೇರ್ಸ್ ಫಂಡ್ ಅಡಿಯಲ್ಲಿ ಅನುದಾನ ಕೋರದ ಆರೋಗ್ಯ ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯು ಆರ್ಥಿಕ ಇಲಾಖೆಯನ್ನು ಕೋರಿರುವುದು ಇದೀಗ ಬಹಿರಂಗವಾಗಿದೆ.
ಕೋವಿಡ್ ಮೂರನೇ ಅಲೆಯ ನಿರ್ವಹಣೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳುವ ಸಲುವಾಗಿ ಒಟ್ಟಾರೆ ಕೋರಿದ್ದ 1,595 ಕೋಟಿ ರೂ.ಗಳಿಗೆ ಪಟ್ಟಿ ತಯಾರಿಸಿ ಅನುಮೋದನೆಗೆ ಸಲ್ಲಿಸಿದ್ದ ಪ್ರಸ್ತಾವನೆಯಲ್ಲಿಯೇ ನರ್ಸಿಂಗ್, ಎಎಚ್ಎಸ್ ಮತ್ತು ಫಿಸಿಯೋಥೆರಪಿ ಕಾಲೇಜುಗಳನ್ನು ತೆರೆಯಲು ಅನುಮತಿ ಕೋರಿದ್ದ ಸಂಗತಿಯು ಇದೀಗ ಹೊರಬಿದ್ದಿದೆ.
ಕೋವಿಡ್ ಮೂರನೇ ಅಲೆ ಪೂರ್ವ ಸಿದ್ಧತೆಗಾಗಿ ವೈದ್ಯಕೀಯ ಮತ್ತು ಆರೋಗ್ಯ, ಕುಟಂಬ ಕಲ್ಯಾಣ ಇಲಾಖೆಯು ಸಲ್ಲಿಸಿದ್ದ ಪ್ರಸ್ತಾವನೆ ಮತ್ತು ಈ ಸಂಬಂಧ ಆರ್ಥಿಕ ಇಲಾಖೆಯು ನೀಡಿದ್ದ ಅಭಿಪ್ರಾಯಕ್ಕೆ ಸಂಬಂಧಿಸಿದಂತೆ ‘the-file.in’ ಆರ್ಥಿಕ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಸಮಗ್ರ ಕಡತವನ್ನು ಆರ್ಟಿಐ ಅಡಿಯಲ್ಲಿ ಪಡೆದುಕೊಂಡಿದೆ.
ಆಕ್ಸಿಜನ್ ಜನರೇಟರ್ ಯುನಿಟ್ಗಳನ್ನು ಖರೀದಿ ಸಲು 140.00 ಕೋಟಿ ರೂ.ಗಳ ಅನುದಾನ ಕೋರಿದ್ದು, ಈ ಪೈಕಿ 100 ಕೋಟಿ ರೂ. ಅನುದಾನ ನೀಡಲು ಆರ್ಥಿಕ ಇಲಾಖೆಯು ಸಹಮತಿಸಿತ್ತಾದರೂ ಇವುಗಳನ್ನು ಪಿಎಂ ಕೇರ್ಸ್, ಸಿಎಸ್ಆರ್ ಫಂಡ್ನ ಮೂಲಕ ಪಡೆದುಕೊಳ್ಳಬೇಕು ಎಂದು ಆರ್ಥಿಕ ಇಲಾಖೆಯ (ವೆಚ್ಚ-5) ಅಧೀನ ಕಾರ್ಯದರ್ಶಿ ರವಿಚಂದ್ರನ್ ಅವರು ಅಭಿಪ್ರಾಯಿಸಿದ್ದರು ಎಂಬುದು ಇಲಾಖೆಯ ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ನರ್ಸಿಂಗ್, ಎಎಚ್ಎಸ್ ಮತ್ತು ಫಿಸಿಯೋತೆರೆಪಿ ಕಾಲೇಜು ಸ್ಥಾಪನೆಗಾಗಿ ಇಲಾಖೆಯು ಒಟ್ಟು 31.00 ಕೋಟಿ ರೂ.ಗಳ ಅನುದಾನ ಕೋರಿಕೆಯೂ ಒಳಗೊಂಡಿತ್ತು. ಆದರೆ ಆರ್ಥಿಕ ಇಲಾಖೆಯು ಕೋವಿಡ್-19ರ ಮೂರನೇ ಅಲೆಯ ತಯಾರಿಯಲ್ಲಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಇದನ್ನು ತಳ್ಳಿ ಹಾಕಿತ್ತು.
ಮೈಕ್ರೋಮೈಸಿಸ್ ಉಪಕರಣಗಳನ್ನು ಈಗಾಗಲೇ 12.28 ಕೋಟಿ ರೂ. ಮೊತ್ತದಲ್ಲಿ ಖರೀದಿಸಿದ್ದರೂ ಇಲಾಖೆಯು ಮತ್ತೊಮ್ಮೆ 17.00 ಕೋಟಿ ರೂ. ಮೊತ್ತದ ಅನುದಾನ ಕೋರಿದ್ದಾಗಿ ಆರ್ಟಿಐ ದಾಖಲೆಯಿಂದ ತಿಳಿದುಬಂದಿದೆ.
19 ಜಿಲ್ಲಾಸ್ಪತ್ರೆ ಮತ್ತು 40 ತಾಲೂಕು ಆಸ್ಪತ್ರೆಗಳ ಕಟ್ಟಡ ಕಾಮಗಾರಿಗೆ 857 ಕೋಟಿ ರೂ. (ವೈದ್ಯಕೀಯ ಶಿಕ್ಷಣ ಇಲಾಖೆ 217.00 ಕೋಟಿ ರೂ., ಆರೋಗ್ಯ ಇಲಾಖೆ 640 ಕೋಟಿ ರೂ.), ಈ ಆಸ್ಪತ್ರೆಗಳಿಗೆ ಉಪಕರಣ ಖರೀದಿಗೆ 236.44 ಕೋಟಿ ರೂ., ಮಾನವ ಸಂಪನ್ಮೂಲಕ್ಕಾಗಿ ಆರೋಗ್ಯ ಇಲಾಖೆಯು ಕೋರಿದ್ದ 300 ಕೋಟಿ ರೂ. ಅನುದಾನ ಪೈಕಿ 200 ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯು ಆರಂಭದಲ್ಲಿ ಸಹಮತ ವ್ಯಕ್ತಪಡಿಸಿತ್ತಾದರೂ ಕಟ್ಟಡ ಕಾಮಗಾರಿ ದೀರ್ಘಾವಧಿ ಯೋಜನೆಯಾಗಿದ್ದರಿಂದ ಒಟ್ಟು 857 ಕೋಟಿ ರೂ. ಕೋರಿಕೆ ಪ್ರಸ್ತಾವವನ್ನು ಪರಿಗಣಿಸಿಲ್ಲ.
ಹಾಗೆಯೇ ಬಜೆಟ್ನಲ್ಲಿ ಒದಗಿಸಿದ್ದ ಅನುದಾನವನ್ನು ಮಾನವ ಸಂಪನ್ಮೂಲ ಮತ್ತು ಇತರ ಬಾಬ್ತುಗಳಿಗೆ ಖರ್ಚು ಮಾಡಲು ಸೂಚಿಸಿತ್ತಲ್ಲದೆ ವಾಸ್ತವ ವೆಚ್ಚಗಳಿಗೆ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಸಲ್ಲಿಸಬಹುದು ಎಂದು ಆರ್ಥಿಕ ಇಲಾಖೆಯು ಅಭಿಪ್ರಾಯಿಸಿತ್ತು.
ಅದೇ ರೀತಿ ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಬರುವ ಎಲ್ಲಾ ವೈದ್ಯಕೀಯ ಕಾಲೇಜುಗಳ ಹಾಸಿಗೆ ಸಾಮರ್ಥ್ಯದ ಪಿಐಸಿಯು, ಎನ್ಐಸಿಯು, ಎಚ್ಡಿಯು, ಮಾನವ ಸಂಪನ್ಮೂಲ, ವೈದ್ಯಕೀಯ ಉಪಕರಣ, ಪರಿಕರ ಮತ್ತು ಕಾಮಗಾರಿಗೆ ಇಲಾಖೆಯು 1,594.57 ಕೋಟಿ ರೂ. ಅನುದಾನ ಕೋರಿಕೆ ಪೈಕಿ ಆರ್ಥಿಕ ಇಲಾಖೆಯು 422.71 ಕೋಟಿ ರೂ. ಬಿಡುಗಡೆಗೆ ಸಹಮತಿಸಿತ್ತು.
ವೈದ್ಯಕೀಯ ಶಿಕ್ಷಣ ಕಾಲೇಜುಗಳಲ್ಲಿ 1,280 ಹಾಸಿಗೆಗಳಿಗೆ ಪಿಐಸಿಯು, ಎನ್ಐಸಿಯು, ಎಚ್ಡಿಯು ಅಳವಡಿಸುವ ಸಲುವಾಗಿ 197.18 ಕೋಟಿ ರೂ., ವೈದ್ಯಕೀಯ ಕಾಲೇಜುಗಳಲ್ಲಿ ಪರೀಕ್ಷೆಗಳನ್ನು ಬಲವರ್ಧನೆಗೊಳಿಸಲು ಉಪಕರಣ ಖರೀದಿಸಲು 228.46 ಕೋಟಿ ರೂ. ಪೈಕಿ 153.31 ಕೋಟಿ ರೂ. ಬಿಡುಗಡೆಗೆ ಒಪ್ಪಿಗೆ ದೊರೆತಿತ್ತು.
ಹಾಗೆಯೇ ಆಕ್ಸಿಜನ್ ಬೆಡ್ಗಳಿಗಾಗಿ 2.50 ಕೋಟಿ ರೂ., ಮಾನವ ಸಂಪನ್ಮೂಲಕ್ಕಾಗಿ 76.37 ಕೋಟಿ ರೂ., ತಾತ್ಕಾಲಿಕವಾಗಿ ಸ್ಟೆಬಲೇಷನ್ ಘಟಕ ನಿರ್ಮಾಣಕ್ಕೆ 18 ಕೋಟಿ ರೂ., ವೈದ್ಯಕೀಯ ಕಾಲೇಜು, ಸಂಸ್ಥೆಗಳ ತರಬೇತಿ ವೆಚ್ಚಕ್ಕೆ 1.30 ಕೋಟಿ ರೂ., ಮೈಕ್ರೋಮೈಸಿಸ್ ಉಪಕರಣ ಖರೀದಿಗೆ 17.09 ಕೋಟಿ ರೂ., ಪಿಪಿಇ ಕಿಟ್, ಎನ್ 95 ಮಾಸ್ಕ್ ಇತ್ಯಾದಿ ಉಪಕರಣಗಳ ಖರೀದಿಗೆ 571.77 ಕೋಟಿ ರೂ., ಕಟ್ಟಡ ಕಾಮಗಾರಿಗೆ 5.40 ಕೋಟಿ ರೂ., ನರ್ಸಿಂಗ್, ಎಎಚ್ಎಸ್ ಮತ್ತು ಫಿಸಿಯೋತೆರಪಿ ಕಾಲೇಜುಗಳ ಸ್ಥಾಪನೆಗೆ 31.00 ಕೋಟಿ ರೂ., ಎಸ್ಎಬಿವಿ ವೈದ್ಯಕೀಯ ಕಾಲೇಜನ್ನು ಮೇಲ್ದರ್ಜೆಗೇರಿಸಲು 315.00 ಕೋಟಿ ರೂ., ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಯುನಿಟ್ ಸ್ಥಾಪಿಸಲು 130 ಕೋಟಿ ರೂ. ಸೇರಿದಂತೆ ಒಟ್ಟು 1,594.57 ಕೋಟಿ ರೂ.ಗಳ ಅನುದಾನಕ್ಕೆ ಕೋರಿಕೆ ಸಲ್ಲಿಸಿತ್ತು. ಈ ಪೈಕಿ ಆರ್ಥಿಕ ಇಲಾಖೆಯು 422.71 ಕೋಟಿ ರೂ., ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು 1,176.71 ಕೋಟಿ ರೂ. ಸೇರಿದಂತೆ ಒಟ್ಟಾರೆ 1,599.42 ಕೋಟಿ ರೂ. ಬಿಡುಗಡೆಗೆ ಕೋರಿಕೆ ಸಲ್ಲಿಸಿತ್ತು ಎಂಬುದು ದಾಖಲೆಗಳಿಂದ ತಿಳಿದು ಬಂದಿದೆ.