ಸಂಸ್ಕೃತ ತಲೆಗೇರಿ ಕೂರಲು ಕನ್ನಡಿಗರ ಕೀಳರಿಮೆಯೇ ಕಾರಣ
ಇತ್ತೀಚೆಗೆ, ಮುಖ್ಯವಾಗಿ ಫೇಸ್‌ಬುಕ್‌ನಲ್ಲಿ ಎಲ್ಲರ ಕನ್ನಡ, ತಿಳಿಗನ್ನಡ, ಸರಳಗನ್ನಡ ಹೆಸರುಗಳಲ್ಲಿ ಕನ್ನಡದ ಮೇಲೆ ಸಂಸ್ಕೃತದ ಯಜಮಾನಿಕೆಯ ಬಗ್ಗೆ, ಮಹಾಪ್ರಾಣಗಳನ್ನು ಕೈಬಿಡುವ ಬಗ್ಗೆ ಚರ್ಚೆಗಳು- ಕೆಲವೊಮ್ಮೆ ಅತಿರೇಕ, ಫೆನೆಟಿಕ್ ಎನ್ನಬಹುದಾದ ಸಲಹೆಗಳನ್ನೂ ಒಳಗೊಂಡಿರುತ್ತವೆ. ಈ ಸಮಸ್ಯೆಯ ಹಲವು ಪಾತಳಿಗಳಲ್ಲಿ ಒಂದನ್ನಷ್ಟೇ- ಅಂದರೆ, ಸಂಸ್ಕೃತದ ಯಜಮಾನಿಕೆಯನ್ನಷ್ಟೇ- ಕೇಂದ್ರವಾಗಿಟ್ಟ ಕೆಲವು ಅನಿಸಿಕೆಗಳು ಇಲ್ಲಿವೆ.
ನಮಗೆ ಶಾಲೆಯಲ್ಲಿ - ಮುದ್ದಣನ ‘ರಾಮಾಶ್ವಮೇಧ’ದ್ದಿರಬೇಕು- ‘ಮುದ್ದಣ ಮನೋರಮೆಯ ಸಲ್ಲಾಪ’ ಎಂಬ ಪಾಠವೊಂದಿತ್ತು. ಹಳೆಗನ್ನಡದಲ್ಲಿದ್ದ ಇದನ್ನು ಬರೆದ ಜನ ಮುದ್ದಣ- ಕೆಲವು ನೂರು ವರ್ಷಗಳ ಹಿಂದಿನವನಾಗಿರದೆ, ಉಡುಪಿಯ ಮಿಷನ್ ಹೈಸ್ಕೂಲಿನಲ್ಲಿ ಪಿಟಿ ಮಾಸ್ತರರಾಗಿದ್ದ ಲಕ್ಷ್ಮೀನಾರಣಪ್ಪ ಎಂಬವರಾಗಿದ್ದರು ಎಂಬುದು ನನ್ನನ್ನಂತೂ ಭಯಂಕರ ಅಚ್ಚರಿಯಲ್ಲಿ ಕೆಡವಿತ್ತು. ಆಧುನಿಕ ಕಾಲದ ಮನುಷ್ಯರಿಗೆ ಅರ್ಥವಾಗಲು ಸ್ವಲ್ಪವಾದರೂ ತಿಣುಕಬೇಕಾದ ಹಳೆಗನ್ನಡದಲ್ಲಿ ಇವರು ಯಾಕೆ ಬರೆದರು? ಸಮಕಾಲೀನ ಕನ್ನಡದಲ್ಲಿಯೇ ಬರೆಯಲಿಲ್ಲವೇಕೆ?
ಇದನ್ನು ಬರೆಯುತ್ತಿರುವಾಗ ಅವರ ನೆನಪಾಗುತ್ತಿರುವ ಕಾರಣವೆಂದರೆ: ಇಲ್ಲಿನ ಅನಿಸಿಕೆಗಳಿಗೆ ಸಮನಾದವು ಅಲ್ಲಿಯೂ ಇವೆ. ಮುದ್ದಣನ ಭಾಷೆ ಅರ್ಥವಾಗದ ಮನೋರಮೆ ಟೀಕಿಸುತ್ತಾಳೆ: ‘‘ನೀರಿಳಿಯದ ಗಂಟಲೊಳ್ ಕಡಬು ತುರುಕಿದಂತಾಯಿತು’’. ಈಗ ಸರಳ ಕನ್ನಡದ ದನಿ ಎತ್ತಿರುವವರ ಅಳಲು ಇದೇ: ಸಂಸ್ಕೃತಮಯ ಕನ್ನಡವು ಸಾಮಾನ್ಯ ಕನ್ನಡಿಗರ ಗಂಟಲಲ್ಲಿ ಇಳಿಯದಂತಾಗಿದೆ ಎಂಬುದು. ಅದೇ ಹೊತ್ತಿಗೆ ಸಂಸ್ಕೃತ ಪದಬಳಕೆಯ ಬಗ್ಗೆ ಮುದ್ದಣ ಹೇಳುತ್ತಾನೆ: ‘‘ಕರಿಮಣಿ ಸರದೊಳ್ ಹವಳಮಂ ಕೋದಂತೆ’’ ಅಲ್ಲೊಂದಿಲ್ಲೊಂದು ಇರಲಿ ಎಂದು. ನನ್ನಂತವರ ಆಕ್ಷೇಪ ಇರುವುದು: ಇದಕ್ಕೆ ಬದಲಾಗಿ, ಈಗ ಹವಳದ ಸರದಲ್ಲಿ ಕರಿಮಣಿಯ ಕೋದಂತೆ ಕನ್ನಡದ ಗತಿಯಾಗುತ್ತಿದೆ; ಹವಳದ ನಡುವೆ ಕನ್ನಡ ಕತ್ತುರಿಯ ಕರಿಮಣಿ ಕಾಣದಂತೆ ಮಾಯವಾಗುತ್ತಿದೆ ಮತ್ತು ಇದನ್ನು ಒಂದು ಉದ್ದೇಶದಿಂದಲೇ, ವ್ಯವಸ್ಥಿತವಾಗಿ ಮಾಡಲಾಗುತ್ತಿದೆ ಎಂಬುದು. ಸಂಸ್ಕೃತದ ಪದಗಳನ್ನು ಬಳಸಿದರೂ ಅಭಿಮಾನದಿಂದ ‘‘ಕನ್ನಡ ಕತ್ತುರಿಯಲ್ತೆ?’’ ಎಂದು ಹೇಳಿದ್ದ ಮುದ್ದಣ ಯಾನೆ ಲಕ್ಷ್ಮೀನಾರಣಪ್ಪಕೂಡಾ ಈಗ ಇದ್ದಿದ್ದರೆ, ಈ ಬಗ್ಗೆ ದನಿ ಎತ್ತುತ್ತಿದ್ದರು.
ಕನ್ನಡವನ್ನು ಸರಳಗೊಳಿಸಲು ಮಹಾಪ್ರಾಣಗಳನ್ನು, ಅನುನಾಸಿಕ, ವಿಸರ್ಗಗಳನ್ನು ಕೈಬಿಟ್ಟರೆ ಸಾಕು ಎಂದು ಕೆಲವರು ತಿಳಿದುಕೊಂಡಂತಿದೆ. ಮತ್ತೆ ಕೆಲವರು ಸಂಸ್ಕೃತ ಪದಗಳನ್ನೆಲ್ಲಾ ಕೈಬಿಡಬೇಕೆಂದು ಇದು ಬಹಳ ಸುಲಭದ ಕೆಲಸ ಎಂಬಂತೆ ಹೇಳುತ್ತಾರೆ. ಅದಕ್ಕಾಗಿ ಕೆಲವರು ಮೃತ ಸಂಸ್ಕೃತದಂತೆ ಯಾರಿಗೂ ಅರ್ಥವೇ ಆಗದ ಹಳೆಗನ್ನಡ ಕಾವ್ಯಗಳಿಂದ ಸತ್ತ ಕನ್ನಡ ಪದಗಳನ್ನು ಅಗೆದು ಅಗೆದು ತಂದು ಜೀವಕೊಡಲು ಮುಂದಾಗಿದ್ದಾರೆ. ಮತ್ತೆ ಕೆಲವರು ಇನ್ನೂ ಮುಂದೆ ಹೋಗಿ, ಸುಲಭದಲ್ಲಿ ಬರೆಯಬಹುದಾದ, ಈಗಾಗಲೇ ಅಭ್ಯಾಸವಾಗಿರುವ ‘ಒಂದು’ ಎಂಬುದನ್ನೂ ‘ಒನ್ದು’ ಎಂದು ಬರೆಯಿರಿ; ‘ಕೈ’ ಎಂಬುದನ್ನು ‘ಕಯ್’ ಎಂದು ಬರೆಯಿರಿ ಇತ್ಯಾದಿಯಾಗಿ ಹೇಳುತ್ತಿದ್ದಾರೆ. ಇವೆಲ್ಲವುಗಳ ಬಗ್ಗೆ ಬರೆಯಲು ಇಲ್ಲಿ ಜಾಗ ಸಾಲದಿರುವುದರಿಂದ, ಬರೀ ನಮ್ಮ ಕೀಳರಿಮೆ, ಸಂಸ್ಕೃತದ ಹೇರಿಕೆ ಮತ್ತು ಯಜಮಾನಿಕೆಯ ಬಗ್ಗೆ ಮಾತ್ರ ಈ ಬರಹವಿದೆ.
ಯಾವುದೇ ಭಾಷೆಯ ಬಗ್ಗೆ ಭಾಷಾ ಶಾಸ್ತ್ರಜ್ಞರು (ಭಾಷಾ ಬಲ್ಲಿದರು) ಮಾತ್ರ ಮಾತಾಡಬೇಕು, ಬರೆಯಬೇಕು ಎಂಬ ಕರಾರು ಇಲ್ಲದೇ ಇರುವುದರಿಂದ ಮತ್ತು ಕನ್ನಡಕ್ಕೆ ಈಗಿನ ಗತಿ ತಂದಿರುವುದಕ್ಕೆ ಕಾರಣ ಇಂತಹ ಭಾಷಾ ‘ಶಾಸ್ತ್ರಿ’ಗಳೇ ಆಗಿರುವುದರಿಂದ, ಬಾಲ್ಯದಿಂದ ಬ್ಯಾರಿ, ಕೊಂಕಣಿಯಂತಹ ಹಲವು ಭಾಷೆಗಳು ಕಿವಿಗೆ ಬೀಳುತ್ತಲೇ, ಶಾಲೆಯಲ್ಲಿ ಕನ್ನಡ ಕಲಿತು ಅನ್ನಕ್ಕಾಗಿ ಅದರ ನೆರಳಲ್ಲಿಯೇ ಬದುಕಿರುವ, ತುಳು ತಾಯಿನುಡಿಯ ಪತ್ರಕರ್ತನ ಅನುಭವದಿಂದ ಮಾತ್ರವೇ ಈ ಅನಿಸಿಕೆಗಳು ಬಂದಿವೆ; ಪಾಂಡಿತ್ಯದಿಂದಲ್ಲ.
ಹಳೆಗನ್ನಡ ಕಾವ್ಯಗಳಲ್ಲಿ ಸಂಸ್ಕತ ಬಹಳ ಹಿಂದೆಯೇ ಸೇರಿಹೋಗಿರುವುದನ್ನು ನಾವು ಕಾಣುತ್ತೇವೆ. ಆದರೆ, ಅದು ಜನಸಾಮಾನ್ಯರ ಮಟ್ಟಕ್ಕೆ ಇಳಿದು ಬರಲಿಲ್ಲ. ಯಾಕೆಂದರೆ, ಇಂತಹ ಕಾವ್ಯಗಳು ರಾಜರ ಆಸ್ಥಾನದಲ್ಲಿ ವಂದಿಮಾಗಧರು, ಪಂಡಿತರು, ಮೇಲ್ಜಾತಿ- ವರ್ಗದ ‘ಶಿಕ್ಷಿತ’ರಿಗೆ ಸೀಮಿತವಾಗಿತ್ತೇ ಹೊರತು, ಅಕ್ಷರ ವಂಚನೆಯ ಶಿಕ್ಷೆಗೆ ಗುರಿಯಾದವರನ್ನು ಮುಟ್ಟಲಿಲ್ಲ. ಆದುದರಿಂದಲೇ, ಆಡು ಮಾತುಗಳಲ್ಲೂ, ಮಾತಿನಿಂದಲೇ ಹರಡಿದ ಜಾನಪದ ಹಾಡುಗಳಲ್ಲಿಯೂ, ಜನಕಾವ್ಯಗಳಲ್ಲೂ, ಸಾಮಾನ್ಯ ಜನರು ಸಾಮಾನ್ಯ ಜನರಿಗಾಗಿ ಬರೆದು ಹಾಡಿದ ವಚನಗಳಲ್ಲೂ ಸಂಸ್ಕೃತದ ಪ್ರಭಾವ ತೀರಾ ಕಡಿಮೆ ಇರುವುದನ್ನು ಕಾಣಬಹುದು. ಹಾಗಾಗಿಯೇ ನಮ್ಮ ಹಳ್ಳಿಗರ ಆಡುಗನ್ನಡದಲ್ಲಿ ಸಂಸ್ಕೃತ ಪದಗಳು ಹೆಚ್ಚಿಲ್ಲ.
ಇಂತಹ ಸ್ಥಿತಿಯಲ್ಲಿ ಸಂಸ್ಕೃತದ ಹಿಂಬಾಗಿಲ ಹರಡುವಿಕೆಗೆ ಕಾರಣವಾದದ್ದು ಸಾಮಾನ್ಯ ಜನರಿಗೂ ಓದುಬರಹ ಕಲಿಸಲು ಹೊರಟ ಆಧುನಿಕ ಶಾಲಾ ಶಿಕ್ಷಣ ಎಂಬುದು ಒಂದು ವಿಚಿತ್ರವಾದರೂ ನಿಜ. ಮೊದಲಿಗೆ ಶಿಕ್ಷಕರಾಗಿದ್ದವರು ಬಹುತೇಕ ಬ್ರಾಹ್ಮಣಾದಿ ಸಂಸ್ಕೃತಾಭಿಮಾನಿ ಮೇಲ್ಜಾತಿಯವರು ಎಂಬುದನ್ನು ನೆನಪಿನಲ್ಲಿ ಇಡೋಣ. ಕನ್ನಡದ ಮಕ್ಕಳಿಗೂ, ತುಳು, ಬ್ಯಾರಿ, ಕೊಂಕಣಿ, ಕೊಡವ ಇತ್ಯಾದಿ ತಾಯಿನುಡಿಯ ಮಕ್ಕಳಿಗೂ ಕನ್ನಡ ‘ಓದು ಬರಹ’ ಕಲಿಸಲು ಹೊರಟು, ಅವರು ಮಾಡಿದ್ದೇನು? ಜನರಿಂದ ದೂರವಾದ ಮೃತ ಸಂಸ್ಕೃತವನ್ನು, ಅದೇ ಕಾರಣಕ್ಕಾಗಿ ಸತ್ತ ಬೆರಕೆ ಹಳೆಗನ್ನಡದ ಜೊತೆಜೊತೆಗೆ ಈ ಮಕ್ಕಳ ಗಂಟಲೊಳಗೆ ತುರುಕಿ, ಅವರ ನೆಲದ ಆಡು ಭಾಷೆಯಿಂದ ಬೇರೆ ಮಾಡಿದ್ದು. ಅದರ ಬಗ್ಗೆಯೇ ಕೀಳರಿಮೆ ಮೂಡಿಸಿದ್ದು. ನೆಲದ ಭಾಷೆಯನ್ನೇ ಪರಕೀಯ ಮಾಡಿ, ನೆಲಕ್ಕೆ ತಳ್ಳಿದ್ದು.
ಪರಿಣಾಮವಾಗಿ, ಈ ಕೀಳರಿಮೆಯಿಂದಾಗಿ ತಲೆಮಾರಿನ ಬಳಿಕ ತಲೆಮಾರು ತಮ್ಮ ಸ್ವಂತ ಭಾಷೆಯ ಬಗ್ಗೆ ನಾಚಿಕೆಪಡುತ್ತಾ, ಪುರೋಹಿತಶಾಹಿಯಸಂಸ್ಕೃತಕ್ಕೂ, ವಸಾಹತುಶಾಹಿಯ ಇಂಗ್ಲಿಷ್‌ಗೂ ಗುಲಾಮರಾಗಿ ಬಾಳುವಂತಾಯಿತು. ನನ್ನ ಕಲ್ಪನೆಯ ಪಂಡಿತರಾದ ಪ್ರೊ. ಕಂದೂರು ಸುಬ್ಬಯ್ಯ ಭಟ್ಟರೂ, ಡಾ. ಬಸಪ್ಪದಾನಪ್ಪಹಿರೇಮಠರೂ, ತಮ್ಮ ಗ್ರಾಮ್ಯ ಹೆಸರುಗಳನ್ನು ನಾಚಿಕೆಯಿಂದ ಮರೆಮಾಚಿ ಪ್ರೊ. ಕೆ. ಎಸ್. ಭಟ್, ಡಾ. ಬಿ. ಡಿ. ಹಿರೇಮಠ್ ಆಗಬೇಕಾದಷ್ಟು ಕೀಳರಿಮೆ ಬೆಳೆಸಿಕೊಂಡರೆ, ಕೆಳಜಾತಿಯ ಪಾಮರರ ಗತಿಯೇನು? ಮುಂದೆ ಚಂದಪ್ಪಚಂದ್ರಹಾಸನೂ, ಸೂರಪ್ಪ ಸೂರ್ಯಕುಮಾರನೂ ಆಗಿ, ಈಗ ಎಲ್ಲಾ ಹೆಸರುಗಳು ಬಹುತೇಕ ಸಂಸ್ಕೃತವೇ ಆಗಿವೆ. ಹೀಗಿರುವಾಗ ಕನ್ನಡದಲ್ಲಿ ಸಂಸ್ಕೃತ ನುಸುಳಿ, ತಲೆಗಿಂತ ದೊಡ್ಡ ಕಿರೀಟವಾಗಿ ತಲೆಭಾರವಾಗದೇ ಇದ್ದೀತೆ?
ಇವೆಲ್ಲವೂ ಆರಂಭವಾದುದು ‘‘ಗುರುವರ್ಯರ, ಗುರುಬ್ರಹ್ಮರ ಪಾದಕಮಲಗಳಲ್ಲಿ, ಚರಣಾರವಿಂದಗಳಲ್ಲಿ’’. ಶಾಲೆಯಲ್ಲಿ ತಮ್ಮದೇ ಭಾಷೆ ಕಲಿಯಲು ಬಂದ ಕನ್ನಡದ ಮಕ್ಕಳು ನೀರಿಂದ ಹೊರತೆಗೆದ ಮೀನುಗಳಂತಾಗಿ ತಮ್ಮದೇ ಭಾಷೆ ಕಲಿಯಲಾಗದ ದಡ್ಡರೆನಿಸಿಕೊಂಡರೆ, ಹೆಚ್ಚೆಚ್ಚು ಸಂಸ್ಕೃತ ಪದಗಳನ್ನು, ವಿಶೇಷಣಗಳನ್ನು, ಉಪಮೆಗಳನ್ನು ‘ಕರತಲಾಮಲಕ’ವಾಗಿ ಬಳಸಿದವರು ‘ಶುದ್ಧ’ ಕನ್ನಡದ ‘ಶ್ರೇಷ್ಠ’ ಸಾಹಿತಿಗಳಾಗಿ ಮುಂದಿನ ತಲೆಮಾರುಗಳಿಗೆ ಮಾದರಿಗಳಾದರು. ಬೂಸಾ ಸಾಹಿತ್ಯವೇ ‘ಕನ್ನಡ ಕಲಿಕೆ’ಯ ಮೂಲವಾಯಿತು. ಶಾಲಾ ಪ್ರಬಂಧ, ಭಾಷಣ ಸ್ಪರ್ಧೆಗಳಲ್ಲಿ, ಪರೀಕ್ಷೆಗಳಲ್ಲಿ ಮುಂದೆ ಪತ್ರಿಕೆಗಳಲ್ಲಿ ನಡೆದದ್ದು ಇದೇ!
ಸರಿಯಾಗಿ ಇಂಗ್ಲಿಷ್ ಗೊತ್ತಿಲ್ಲದಿದ್ದರೂ ತಮ್ಮ ಭಾಷೆಯಲ್ಲಿ ಮಾತಾಡುವಾಗ ನಾಲ್ಕಾರು ಇಂಗ್ಲಿಷ್ ಪದಗಳನ್ನು ಉದುರಿಸಿ ತಾವು ಶ್ರೇಷ್ಠರು, ಸುಶಿಕ್ಷಿತರು ಎಂಬ ಸ್ಖಲನ ಸುಖ ಅನುಭವಿಸುವವರೂ, ಕನ್ನಡದ ಪದಗಳಿದ್ದರೂ ಅರ್ಥವಾಗದ ಸಂಸ್ಕೃತ ಪದಗಳನ್ನು ಬಳಸಿ ‘ಶ್ರೇಷ್ಠ-ಶಿಷ್ಟ ಕನ್ನಡ’ದ ಭ್ರಮೆಯಲ್ಲಿ ಇರುವವರೂ ಒಂದೇ ರೀತಿಯ ಜನ. ಈಗ ಸಂಸ್ಕೃತವನ್ನು ವಿರೋಧಿಸಲು ಮತ್ತು ಅದರಿಂದ ಆದಷ್ಟು ಕಳಚಿಕೊಳ್ಳಲು ಇರುವ ಕಾರಣವೆಂದರೆ, ಅದು ಮೇಲುಕೀಳಿನ, ಹೇರಿಕೆಯ, ಜನರ ನಡೆನುಡಿಗಳಲ್ಲಿ ಹರಡಿ ನಿಧಾನವಾಗಿ ಕೊಲ್ಲುವ ವಿಷವಾಗಿದೆ ಎಂಬುದು.
ಯಾವುದೇ ಸಂಸ್ಕೃತವೇ ಗೊತ್ತಿಲ್ಲದ ಭಯಂಕರ ಭಾಷಣಕಾರ ತನ್ನ ಭಾಷಣ ಆರಂಭಿಸುವುದೇ ಒಂದು ಉರುಹೊಡೆದ ಸಂಸ್ಕೃತ ಶ್ಲೋಕದಿಂದ. ನಂತರ ಇದರ ತಾತ್ಪರ್ಯ ಎಂದರೆ... ಎಂದು ಕನ್ನಡದಲ್ಲಿ ವಿವರಿಸಿ ಸವಕಲು ಬ್ರಾಹ್ಮಣ್ಯದ ಮೌಲ್ಯಗಳನ್ನು ಒದರಿದನೆಂದರೆ ಕೇಳುಗರೆಲ್ಲಾ ಪ್ರೀ ಪ್ರೋಗ್ರಾಂ ಮಾಡಿದವರಂತೆ ತಲೆದೂಗಿ, ಅಹಾ ಎನ್ನುತ್ತಾರೆ. ನಿಜ. ನಮ್ಮ ಜನರ ಮನಸ್ಸುಗಳನ್ನು ಇಂತಹವಕ್ಕೆ ಸೂಕ್ಷ್ಮವಾಗಿ ಟ್ಯೂನ್ ಮಾಡಿ ಇಡಲಾಗಿದೆ. ನಂತರ ಜನರ ಭಾಷೆಯಲ್ಲಿ ಅನುವಾದ ಮಾಡಿ ಹೇಳಬೇಕು ಎಂದಾದರೆ, ಮೊದಲು ಸಂಸ್ಕೃತದಲ್ಲಿ ಒದರುವ ಅಗತ್ಯವಾದರೂ ಏನು? ಉದ್ದೇಶ ಏನೆಂದರೆ, ನಮ್ಮ ಸಂಸ್ಕೃತದಲ್ಲಿ ಇದು ಇದೆ, ನಿಮ್ಮ ಭಾಷೆಯಲ್ಲಿ ಇಲ್ಲ ಎಂದು ತೋರಿಸಿ ಯಜಮಾನಿಕೆ ಸ್ಥಾಪಿಸುವುದು.
ನಮ್ಮದೇ ಭಾಷೆಯಲ್ಲಿ ಉಚ್ಚರಿಸಿದ ದೇಹಭಾಗಗಳು, ಸಂಸ್ಕೃತದಲ್ಲಿ ಹೇಳಿದರೆ, ಲಿಂಗದಂತೆ ಪವಿತ್ರವಾದವು. ಉಚ್ಚೆ, ಹೇಲು, ಹೂಸುಗಳು ನಮ್ಮ ಭಾಷೆಯಲ್ಲಿ ವಾಸನೆ, ಅಸಹ್ಯ ಎನಿಸುತ್ತಿದ್ದವು, ಸಂಸ್ಕೃತದಲ್ಲಿ ಮಲ, ಮೂತ್ರ, ಅಪಾನವಾಯುವಾದ ಕೂಡಲೇ ಸುವಾಸನೆಯಿಂದ ಕೂಡಿ ಸಹ್ಯವಾದವು! ನಾವು ಓದುತ್ತಿದ್ದ ಪತ್ರಿಕೆಗಳೂ ಅಷ್ಟೇ! ಸಂಸ್ಕೃತಭ್ರೂಯಿಷ್ಟ! ಈ ವಿಷ ಮುಂದೆ ಸಮಾಜದ ಎಲ್ಲ ದೇಹಭಾಗಗಳಿಗೆ ಹರಡಿತು. ಮೆದುಳಿಗೇ ಹರಡಿದ ಮೇಲೆ ಇನ್ನೇನು ಹೇಳುವುದು!
ಇಂತಹ ಪರಿಸ್ಥಿತಿಯಲ್ಲಿ ಕನ್ನಡವನ್ನು ಸರಳ ಮಾಡಬೇಕು, ಜನಭಾಷೆಗೆ ಸಿಗಬೇಕಾದ ಗೌರವವನ್ನು ಮತ್ತೆ ಮರಳಿಸಬೇಕಾದರೆ, ಮೊದಲು ಮಾಡಬೇಕಾದ ಕೆಲಸವೆಂದರೆ, ಸಂಸ್ಕೃತವನ್ನು ಅದರ ಮಠಪೀಠದಿಂದ ಕೆಳಗುರುಳಿಸುವುದು ಮತ್ತು ನಮ್ಮದೇ ಭಾಷೆಯ ಬಗ್ಗೆ ನಮಗಿರುವ ಕೀಳರಿಮೆಯನ್ನು ಬೇರು ಸಮೇತ ಕಿತ್ತೆಸೆಯುವುದು. ಶಿಷ್ಟ-ಗ್ರಾಮ್ಯ ಎಂಬ ಮೇಲುಕೀಳನ್ನು ವಿರೋಧಿಸುವುದು. ಇದಕ್ಕಾಗಿ, ಈ ಮೃತ ಸಂಸ್ಕೃತವು ಎಲ್ಲೆಲ್ಲಿ ಹೇಗೆಹೇಗೆ ನುಸುಳಿದೆ, ನುಸುಳಿಸಲಾಗುತ್ತಿದೆ ಮತ್ತು ಅದನ್ನು ಹೇಗೆ ಹೊರತೆಗೆದು ಅಂತ್ಯಸಂಸ್ಕಾರ ನಡೆಸಬೇಕು ಎಂಬುದರ ಬಗ್ಗೆ ಮೊದಲು ಚರ್ಚೆ ನಡೆಯಬೇಕು. ಚರ್ಚೆ ನಡೆಸೋಣ