ರಾಜ್ಯದ ಗ್ರಾಮ ಪಂಚಾಯತ್ ಗಳಲ್ಲಿ 409 ಕೋಟಿ ರೂ. ದುರುಪಯೋಗ
ಬೆಂಗಳೂರು: ರಾಜಸ್ವ ಸ್ವೀಕೃತಿಯನ್ನು ಪಂಚಾಯತ್ ನಿಧಿಗೆ ಜಮಾ ಮಾಡದೇ ದುರುಪಯೋಗಪಡಿಸಿಕೊಂಡಿರುವುದು, ಸರಕಾರದ ಪರವಾಗಿ ವಸೂಲಿ ಮಾಡಿರುವ ಉಪಕರಗಳನ್ನು ಸರಕಾರಕ್ಕೆ ಜಮೆ ಮಾಡದೇ ಇರುವುದು, ಭರಿಸಲಾಗಿರುವ ವೆಚ್ಚಗಳಿಗೆ ಓಚರ್ಗಳನ್ನು ಹಾಜರುಪಡಿಸದಿರುವುದು, ಅನುಮೋದಿತ ಪಟ್ಟಿ ದರಕ್ಕಿಂತ ಹೆಚ್ಚಿನ ದರ ಪಾವತಿಸಿರುವ ಪ್ರಕರಣಗಳೂ ಸೇರಿದಂತೆ ಇನ್ನಿತರ ಪ್ರಕರಣಗಳಲ್ಲಿ ರಾಜ್ಯದ ಗ್ರಾಮ ಪಂಚಾಯತ್ಗಳಲ್ಲಿ ಒಟ್ಟು 409.96 ಕೋಟಿ ರೂ. ದುರುಪಯೋಗವಾಗಿದೆ.
ರಾಜ್ಯದ ಗ್ರಾಮ ಪಂಚಾಯತ್ಗಳ ಹಣಕಾಸು ನಿರ್ವಹಣೆಗೆ ಸಂಬಂಧಿಸಿದಂತೆ 2019ರ ಮಾರ್ಚ್ 31ಕ್ಕೆ ಅಂತ್ಯಗೊಂಡಂತೆ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯು ಸಿದ್ಧಪಡಿಸಿರುವ ಲೆಕ್ಕಪರಿಶೋಧನೆ ವರದಿಯು ಗ್ರಾಮ ಪಂಚಾಯತ್ಗಳಲ್ಲಿನ ಅಕ್ರಮಗಳ ಸ್ವರ್ಗಸೀಮೆಯನ್ನು ತೆರೆದಿಟ್ಟಿದೆ. ಈ ವರದಿಯ ಪ್ರತಿ ‘the-file.in’ಗೆ ಲಭ್ಯವಾಗಿದೆ.
ಗ್ರಾಮ ಪಂಚಾಯತ್ಗಳಿಗೆ ಹಣಕಾಸಿನ ಹರಿವು, ವಿವಿಧ ಲೆಕ್ಕ ಶೀರ್ಷಿಕೆಗಳಡಿಯಲ್ಲಿ ಭರಿಸಿರುವ ವೆಚ್ಚಗಳು, ತೆರಿಗೆ ದರ ವಿಧಿಸಿರುವುದು, ತೆರಿಗೆಗಳ ಬೇಡಿಕೆ, ವಸೂಲಾತಿ ಮತ್ತು ಬಾಕಿ, ಜೋಡಿ ದಾಖಲೆ ಲೆಕ್ಕಪದ್ಧತಿ ನಿರ್ವಹಿಸದಿರುವುದು, ರಾಜಸ್ವ ಸ್ವೀಕೃತಿಯನ್ನು ಪಂಚಾಯತ್ ನಿಧಿಗೆ ಜಮಾ ಮಾಡದೇ ದುರುಪಯೋಗಪಡಿಸಿಕೊಂಡಿರುವುದು, ಗ್ರಾಮ ಪಂಚಾಯ್ತಿ ನಿಧಿಯಿಂದಲೇ ಹಣ ಡ್ರಾ ಮಾಡಿ ಸರಕಾರಕ್ಕೆ ಜಮಾ ಮಾಡದೇ ಇರುವುದು, ನಿಯಮಬಾಹಿರ ವೆಚ್ಚ ಭರಿಸಿರುವ ಪ್ರಕರಣಗಳೂ ಸೇರಿದಂತೆ ಹತ್ತಾರು ಪ್ರಕರಣಗಳನ್ನು ಲೆಕ್ಕಪರಿಶೋಧನೆ ವರದಿಯು ಹೊರಗೆಡವಿದೆ. ತೆರಿಗೆಗಳ ದರ ವಿಧಿಸುವುದು, ಬೇಡಿಕೆ, ವಸೂಲಾತಿ ಮತ್ತು ಬಾಕಿ ಉಳಿಸಿಕೊಂಡಿರುವ ಸಂಬಂಧ ಲೆಕ್ಕಪರಿಶೋಧನೆ ವರದಿಯಲ್ಲಿ ವಿಸ್ತೃತವಾಗಿ ವಿವರಿಸಲಾಗಿದೆ. ಕರ್ನಾಟಕ ಪಂಚಾಯತ್ರಾಜ್ ನಿಯಮಗಳು 2006ರ ನಿಯಮ 33 ಮತ್ತು 34ರಂತೆ ಗ್ರಾಮ ಪಂಚಾಯತ್ಗಳು ವಿಧಿಸುವ ವಿವಿಧ ತೆರಿಗೆಗಳ ಕುರಿತಂತೆ, ಬೇಡಿಕೆ-ವಸೂಲಾತಿ-ಬಾಕಿ ವಹಿಗಳನ್ನು ನಿರ್ವಹಿಸಬೇಕು. ಆದರೆ ಬಹಳಷ್ಟು ಗ್ರಾಮ ಪಂಚಾಯತ್ಗಳು ಇದನ್ನು ನಿರ್ವಹಿಸಿಲ್ಲ. ಈ ರೀತಿ ಬೇಡಿಕೆ, ವಸೂಲಾತಿ, ಬಾಕಿ ವಹಿಗಳನ್ನು ನಿರ್ವಹಿಸದಿದ್ದಲ್ಲಿ ಮತ್ತು ಸಂಸ್ಥೆವಾರು ಬಾಕಿ ಪಟ್ಟಿ ತಯಾರಿಸದಿದ್ದಲ್ಲಿ ಗ್ರಾಮ ಪಂಚಾಯತ್ಗಳಿಗೆ ಬರುವ ಆದಾಯವು ಕೈ ತಪ್ಪುವ ಸಾಧ್ಯತೆ ಇರುತ್ತದೆ ಎಂದು ವರದಿಯು ಅಭಿಪ್ರಾಯಿಸಿದೆ.
ಬಹುತೇಕ ಗ್ರಾಮ ಪಂಚಾಯತ್ಗಳು ಲೆಕ್ಕಪರಿಶೋಧನೆಗೆ ವಾರ್ಷಿಕ ಲೆಕ್ಕಪತ್ರಗಳನ್ನು ನಿಗದಿತ ಅವಧಿಯಲ್ಲಿ ಸಲ್ಲಿಸುತ್ತಿಲ್ಲ. 2018-19ನೇ ಸಾಲಿನ ಲೆಕ್ಕಪತ್ರಗಳನ್ನು ಜೋಡಿ ದಾಖಲೆ ಲೆಕ್ಕ ಪದ್ಧತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ನಿರ್ವಹಿಸುತ್ತಿಲ್ಲ ಎಂಬುದು ಲೆಕ್ಕಪತ್ರ ತಪಾಸಣೆಯಿಂದ ತಿಳಿದು ಬಂದಿದೆ.
ಗ್ರಾಮ ಪಂಚಾಯತ್ಗಳಿಂದ ಭರಿಸಲಾದ ವೆಚ್ಚಗಳಿಗೆ ಸಂಬಂಧಿಸಿದಂತೆ ಓಚರ್ಗಳನ್ನು ಹಾಜರುಪಡಿಸದೇ ಇರುವ ಪ್ರಕರಣಗಳಲ್ಲಿ 175.25 ಕೋಟಿ ರೂ.ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ. ಮನೆ ಮತ್ತು ಕಂದಾಯಗಳ ಮೇಲೆ ಉಪಕರಗಳನ್ನು ವಸೂಲಿ ಮಾಡಿರುವ ಗ್ರಾಮ ಪಂಚಾಯತ್ಗಳು ಈ ಪೈಕಿ 91.82 ಕೋಟಿ ರೂ.ಗಳನ್ನು ಸರಕಾರಕ್ಕೆ ಜಮೆ ಮಾಡಿಲ್ಲ. ಕೆಟಿಪಿಪಿ ಕಾಯ್ದೆ ಉಲ್ಲಂಘಿಸಿರುವ ಪಂಚಾಯತ್ಗಳಲ್ಲಿ 44.64 ಕೋಟಿ ರೂ.ಗಳನ್ನು ಆಕ್ಷೇಪಣೆಯಲ್ಲಿಟ್ಟಿರುವುದು ಲೆಕ್ಕ ಪರಿಶೋಧನಾ ವರದಿಯಿಂದ ಗೊತ್ತಾಗಿದೆ.
2018-19ನೇ ಸಾಲಿನಲ್ಲಿ 1,632 ಗ್ರಾಮ ಪಂಚಾಯತ್ಗಳಲ್ಲಿನ ರಾಜಸ್ವ ವಸೂಲಿಯಲ್ಲಿ 10.97 ಕೋಟಿ ರೂ. ದುರುಪಯೋಗವಾಗಿದೆ. ಕೊಪ್ಪಳ ಸೇರಿದಂತೆ 5 ಜಿಲ್ಲೆಗಳ 549 ಪಂಚಾಯತ್ಗಳು ಶಾಸನಬದ್ಧ ಕಡಿತಗೊಳಿಸಿರುವ 3.86 ಕೋಟಿ ರೂ. ಗಳನ್ನು ಸರಕಾರಕ್ಕೆ ಜಮೆ ಮಾಡಿಲ್ಲ. ವಿವಿಧ ಯೋಜನೆಗಳ ಬಿಲ್ಗಳನ್ನು ಪಾವತಿಸುವಾಗ ಉಪಕರ/ತೆರಿಗೆಗಳನ್ನು ಕಟಾಯಿಸದೇ, ಕಡಿಮೆ ಕಟಾಯಿಸಿರುವ ಬೆಂಗಳೂರು ನಗರ ಜಿಲ್ಲೆಯ 131 ಗ್ರಾಮ ಪಂಚಾಯತ್ಗಳು ಸೇರಿದಂತೆ ಒಟ್ಟು 2,417 ಪಂಚಾಯತ್ಗಳಲ್ಲಿ 8.80 ಕೋಟಿ ರೂ.ಗಳನ್ನು ಆಕ್ಷೇಪಣೆಯಲ್ಲಿರಿಸಲಾಗಿದೆ.
ಬೆಳಗಾವಿಯ 363 ಪಂಚಾಯತ್ಗಳು ಸೇರಿದಂತೆ ರಾಜ್ಯದ ಒಟ್ಟು 4,347 ಪಂಚಾಯತ್ಗಳು ಮನೆ ಮತ್ತು ಕಂದಾಯಗಳ ಮೇಲೆ ವಸೂಲು ಮಾಡಿರುವ 91.92 ಕೋಟಿ ರೂ.ಗಳನ್ನು ಸರಕಾರಕ್ಕೆ ಜಮೆ ಮಾಡಿಲ್ಲ. ಬೆಂಗಳೂರು ನಗರ ಜಿಲ್ಲೆಯ 142 ಪಂಚಾಯತ್ಗಳು ಸೇರಿದಂತೆ 550 ಪಂಚಾಯತ್ಗಳು ಕಾಮಗಾರಿ ಬಿಲ್ಗಳಲ್ಲಿ ಕಟಾಯಿಸಿದ ತೆರಿಗೆಗಳನ್ನು ಪಾವತಿಸಲು ಡ್ರಾ ಮಾಡಿ ಪೂರ್ತಿಯಾಗಿ ಸರಕಾರಕ್ಕೆ ಜಮೆ ಮಾಡದೇ 6.86 ಕೋಟಿ ರೂ. ದುರುಪಯೋಗಪಡಿಸಿಕೊಂಡಿರುವುದು ವರದಿಯಿಂದ ತಿಳಿದು ಬಂದಿದೆ.
ಬೆಳಗಾವಿ ಜಿಲ್ಲೆಯ 37 ಪಂಚಾಯತ್ಗಳು ಸೇರಿದಂತೆ ರಾಜ್ಯದ 17 ಜಿಲ್ಲೆಗಳ 146 ಪಂಚಾಯತ್ಗಳು ವಿವಿಧ ಯೋಜನೆಗಳಿಲ್ಲಿನ ಖರೀದಿ/ಕಾಮಗಾರಿ ವೆಚ್ಚಗಳಿಗೆಂದು 96.28 ಲಕ್ಷ ರೂ.ಗಳನ್ನು ಸ್ವಂತ ಹೆಸರಿನ ಮೇಲೆ ಚೆಕ್ ಹಣ ಡ್ರಾ ಮಾಡಿವೆ. ಅಲ್ಲದೆ ಈ ಪಂಚಾಯತ್ಗಳು ಲೆಕ್ಕಪರಿಶೋಧನೆಯ ಪರಿಶೀಲನೆಗೆ ನೀಡಿಲ್ಲ ಎಂಬುದು ವರದಿಯಿಂದ ಗೊತ್ತಾಗಿದೆ.
ತಾಂತ್ರಿಕ ಮಂಜೂರಾತಿ ಪಡೆಯದೇ ಕಾಮಗಾರಿ ನಿರ್ವಹಿಸಿರುವ ಪ್ರಕರಣಗಳಲ್ಲಿ 18.17 ಲಕ್ಷ, ನಿಯಮಬಾಹಿರವಾಗಿ ವೆಚ್ಚ ಭರಿಸಿರುವ ಪ್ರಕರಣಗಳಲ್ಲಿ 8.32 ಕೋಟಿ ರೂ., ಕಾಮಗಾರಿಗಳ ಅಳತೆಗಳನ್ನು ಅಳತೆ ಪುಸ್ತಕದಲ್ಲಿ ನಮೂದಿಸದೇ ಮತ್ತು ಅಳತೆ ಪುಸ್ತಕಗಳನ್ನುಲೆಕ್ಕಪರಿಶೋಧನೆಗೆ ಹಾಜರಪಡಿಸದೇ ಇರುವ ಪ್ರಕರಣಗಳಲ್ಲಿ 3.82 ಕೋಟಿ ರೂ., ಕಾಮಗಾರಿ ಅಳತೆಯನ್ನು ಇಲಾಖೆಯ ಅಭಿಯಂತರರಿಂದ ಪರಿಶೀಲನೆ ಮಾಡಿಸದೇ ಇರುವ ಪ್ರಕರಣಗಳಲ್ಲಿ 17.33 ಕೋಟಿ ರೂ., ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಗೊಳ್ಳದೇ ಸಾಮಗ್ರಿ ಇತರ ಬಿಲ್ಲಿನ ಮೊತ್ತ ಪಾವತಿಸಿರುವ ಪ್ರಕರಣಗಳಲ್ಲಿ 5 ಕೋಟಿ ರೂ.ಗಳನ್ನು ಆಕ್ಷೇಪಣೆಯಲ್ಲಿರಿಸಲಾಗಿದೆ.