ವಿದ್ಯೆಯಿಂದ ಸ್ವತಂತ್ರವಾಗಿರಿ
ನಾರಾಯಣ ಗುರುಗಳ ಕ್ರಾಂತಿಕಾರಿ ಚಳವಳಿಗಳು
ಭಾಗ-8
ಶಿಶುಗಳು ಸಮಾಜದ ಸಸಿಗಳು:
ಶಿಶುಗಳು ಸಮಾಜದ ಸಸಿಗಳು. ಅವುಗಳು ತಾಯಿ ತಂದೆಯ ನೇರ ಆಶ್ರಯದಲ್ಲಿ ಬೆಳೆಯುವುದೇ ಲೇಸು, ಮಕ್ಕಳ ಶಿಕ್ಷಣದ ಬೇಕು, ಬೇಡಗಳನ್ನು ತಂದೆಯ ಆಶ್ರಯದಲ್ಲಿ ತಾಯಿಯೇ ನಿಗಾವಹಿಸಬೇಕು. ಹಾಗಾಗಬೇಕಾದರೆ ಹೆಂಡತಿಗೆ ಗಂಡನ ದುಡಿಮೆಯಲ್ಲಿ ಅಧಿಕಾರವಿರಬೇಕು. ಅದಕ್ಕಾಗಿ ಅವಿಭಕ್ತ ಅಳಿಯ ಸಂತಾನದ ದೊಡ್ಡ ಕುಟುಂಬಗಳು ಮಕ್ಕಳ ಸಂತಾನವಾಗಿ, ಚಿಕ್ಕ ಕುಟುಂಬಗಳಾಗಿ ಬದಲಾಗಬೇಕು. ಹಾಗಾದಾಗಲೇ ವ್ಯಕ್ತಿ ವಿಕಾಸಕ್ಕೆ ಮತ್ತು ಮಕ್ಕಳ ಶಿಕ್ಷಣಕ್ಕೆ ಆಸ್ಪದವಾಗುತ್ತದೆ. ಹಾಗಾದಾಗ ತಂದೆ ತಾಯಂದಿರು ತಮ್ಮ ಮಕ್ಕಳ ಶಿಕ್ಷಣದ ಬಗೆಗೆ ಪೂರ್ಣ ಜಾಗ್ರತೆ ವಹಿಸಲು ಸಾಧ್ಯ ಎನ್ನುವುದಾಗಿ ಗುರುಗಳು ಕರೆಕೊಟ್ಟರು.
ಅಳಿಯ ಸಂತಾನದ ಬದಲಿಗೆ ಮಕ್ಕಳ ಸಂತಾನದ ಸಣ್ಣ ಕುಟುಂಬವನ್ನು ಅಸ್ತಿತ್ವಕ್ಕೆ ತರುವಲ್ಲಿ ನಾರಾಯಣ ಗುರುಗಳು ಬಹುತೇಕ ಸಫಲರಾದರು. ಹಾಗೆಂದ ಮಾತ್ರಕ್ಕೆ ನಾರಾಯಣ ಗುರುಗಳು ಇಂದಿನ ಅಮೀಬ ಕುಟುಂಬವನ್ನು ಪ್ರೋತ್ಸಾಹಿಸಿದವರಲ್ಲ. ಏಕ ಜೀವಾಣುವಾದ ಅಮೀಬವು ನಿಶ್ಚಿತ ಪ್ರಮಾಣದ ಬೆಳವಣಿಗೆ ಆದ ತಕ್ಷಣ, ಪಟ್ಟನೆ ಒಡೆದು ಎಂದೆಂದೂ ಸಂಪರ್ಕವನ್ನು, ಸಂಬಂಧವನ್ನು ಪಡೆಯದ, ಪಡೆಯಲಾಗದ ಪಡೆಯಬೇಕೆಂಬ ಬಯಕೆರಹಿತ ಎರಡಾಗಿ ಹೋಗುತ್ತವೆ. ಆಧುನಿಕ ಚಿಕ್ಕ ಸಂಸಾರಗಳು ಪಾಶ್ಚಾತ್ಯಾನುಕರಣೆಯ ಇಂತಹ ಮೈಕ್ರೋ ಕುಟುಂಬಗಳಾಗಿ ಬೆಳೆಯುತ್ತಿರುವುದು ಭಾವಿ ಸಮಾಜಕ್ಕೆ ಅಪಾಯಕಾರಿ, ನಾರಾಯಣ ಗುರುಗಳಿಂದ ಪ್ರತಿಪಾದಿತ ಚಿಕ್ಕ ಸಂಸಾರ ‘ನಾವಿಬ್ಬರು. ನಮಗಿಬ್ಬರು’ ಎನ್ನುವ ಆಧುನಿಕ ಪಾಶ್ಚಾತ್ಯ ಮೈಕ್ರೋ ಕುಟುಂಬವಾಗಿರಲಿಲ್ಲ. ಅದರಲ್ಲಿ ಅಜ್ಜ-ಅಜ್ಜಿ, ಹಿರಿ-ಕಿರಿಯರಿದ್ದರು ಎನ್ನುವುದನ್ನು ನಾವು ಮನದಟ್ಟು ಮಾಡಿಕೊಳ್ಳಬೇಕು. ನಾರಾಯಣ ಗುರುಗಳ ಆದರ್ಶ ಕುಟುಂಬದ ಅನುಕರಣೆಯನ್ನು ಈಳವರಲ್ಲದೆ, ನಾಯರ್‌ರು, ಬ್ರಾಹ್ಮಣರು, ಪುಲಯ್ಯನವರು ಮುಂತಾದ ಎಲ್ಲ ಪಂಗಡದವರು ಅನುಸರಿಸಲು ಸಿದ್ಧರಾದರು. ಅನುಸರಿಸಿದರು. ಸಾರ್ವಜನಿಕರ ಒತ್ತಾಯದ ಮೇಲೆ ಸರಕಾರವೂ ಕೊನೆಗೆ ಇದಕ್ಕೆ ಅಗತ್ಯವಾದ ಕಾಯ್ದೆಗಳನ್ನು ಜಾರಿಗೆ ತಂದಿತು. ಗುರುಗಳ ಶಿಕ್ಷಣ ಕ್ರಾಂತಿಗೆ ಇದ್ದ ಬಹುದೊಡ್ಡ ತಡೆಯೊಂದು ತೆರವಾಗಿ ಹೆದ್ದಾರಿ ನಿರ್ಮಾಣವಾದಂತಾಯಿತು.
ಗುರುಗಳು ದೇವಸ್ಥಾನ ಮತ್ತು ಎಸ್‌ಎನ್‌ಡಿಪಿ ಯೋಗದ ಮುಖಾಂತರ ಶಿಕ್ಷಣವನ್ನು ಸಾಮಾನ್ಯ ಜನರಿಗೆ ಮುಟ್ಟಿಸುವ ಕೈಂಕರ್ಯಲ್ಲಿ ತೊಡಗಿದರು. ‘‘ದೇವಾಲಯಗಳ ನಿರ್ಮಾಣದಲ್ಲಿ ಹಣ ಖರ್ಚು ಮಾಡುವುದಕ್ಕೆ ಜನರು ಪಶ್ಚಾತ್ತಾಪ ಪಡುವ ಸಂಭವವಿದೆ. ಆದರೂ ಅಂತಹ ಪ್ರಯತ್ನಗಳನ್ನು ಪೂರ್ತಿಯಾಗಿ ನಿಲ್ಲಿಸುವುದು ಹಿತಕರವಲ್ಲ. ಆದುದರಿಂದ ಸಣ್ಣ ದೇವಾಲಯಗಳು ನಿರ್ಮಾಣವಾಗಲಿ. ಹೇಗಿದ್ದರೂ ದೊಡ್ಡ ದೇವಾಲಯಗಳು ವಿದ್ಯಾಸಂಸ್ಥೆಗಳೇ ಆಗಬೇಕು. ...ಈಗ ನಾವು ಜನರನ್ನು ವಿದ್ಯಾವಂತರನ್ನಾಗಿ ಮಾಡಲು ಪ್ರಯತ್ನಿಸಬೇಕು. ಅವರ ಜ್ಞಾನ ಹೆಚ್ಚಾಗಲಿ, ಅವರನ್ನು ಸುಧಾರಿಸಲು ಇದೊಂದೇ ದಾರಿ’’ ಎನ್ನುವುದಾಗಿ ಗುರುಗಳು ಸಂದೇಶ ಕೊಟ್ಟರು.
ಗುರುಗಳ ಎಲ್ಲ ಪ್ರಯತ್ನಗಳ ಹಿಂದಿನ ಉದ್ದೇಶ ಜನಸಾಮಾನ್ಯರನ್ನು ವಿದ್ಯಾವಂತರನ್ನಾಗಿ ಮಾಡುವುದೇ ಆಗಿತ್ತು. ಆದ್ದರಿಂದಲೇ ಗುರುಗಳು ಸುಂದರವಾದ ಹೇಳಿಕೆಯನ್ನು ಕೊಟ್ಟರು. ‘‘ವಿದ್ಯೆಯಿಂದ ಸ್ವತಂತ್ರರಾಗಿರಿ.’’ಈ ಸಂದೇಶವನ್ನು ಕೊಡುವಾಗ ಗುರುಗಳು ಲೌಕಿಕ ಮತ್ತು ಅಲೌಕಿಕವಾದ ಎರಡೂ ವಿದ್ಯೆಯ ಬಗೆಗೆ ಹೇಳಿದ್ದಾರೆ. ಅವಿದ್ಯೆ ಎನ್ನುವ ಮಾಯೆಯೇ ಸಂಸಾರ ಬಂಧನಕ್ಕೆ ಮೂಲವಾಗಿದೆ. ಆದ್ದರಿಂದ ಆ ಮಾಯೆಯಿಂದ ಬಿಡುಗಡೆ ಆಗಬೇಕಾದರೆ ಧಾರ್ಮಿಕ ವಿದ್ಯೆಯ ಅಗತ್ಯ ಇದೆ. ದೈನಂದಿನ ಲೌಕಿಕ ಜೀವನಕ್ಕೆ ಶಿಕ್ಷಣವು ಮಹತ್ವವಾದದ್ದು. ಶಿಕ್ಷಣದ ಬಗೆಗೆ ಗುರುಗಳು ಸಭೆ ಸಮಾರಂಭಗಳಲ್ಲಿ ಹೇಳಿಕೆಗಳನ್ನು ಕೊಡುತ್ತಲೇ ಬಂದರು. ಅಂತಹ ಸಂದೇಶಗಳಲ್ಲಿ ಕೆಲವು ಹೀಗಿವೆ
ಶಿಕ್ಷಣದಿಂದ ವಿಕಾಸ ಮತ್ತು ಸ್ವಾತಂತ್ರ್ಯ:
‘‘ಸಮಾಜದ ಉನ್ನತಿಗೆ ಶಿಕ್ಷಣ ಅನಿವಾರ್ಯವಾಗಿದೆ. ಈ ಶಿಕ್ಷಣ ಪ್ರಾಪ್ತಿಗಾಗಿ ಜನರು ದೇವಸ್ಥಾನದ ನಿರ್ಮಾಣದಲ್ಲಿ ಹೇಗೆ ಉತ್ಸುಕರಾಗಿದ್ದಾರೋ ಅದೇ ರೀತಿಯಲ್ಲಿ ಉತ್ಸಾಹ ಮತ್ತು ಸ್ಫೂರ್ತಿಯಿಂದ ವಿದ್ಯಾನಿಲಯಗಳ ನಿರ್ಮಾಣದ ಕಾರ್ಯದಲ್ಲಿ ತತ್ಪರರಾಗ ಬೇಕಾಗಿದೆ. ಸಮಾಜದಲ್ಲಿ ಶಿಕ್ಷಣದ ಸರ್ವಾಂಗೀಣವಾದ ವಿಕಾಸವಾಗುವಂತೆ ಪ್ರಯತ್ನಿಸಬೇಕಾಗಿದೆ’’. ‘‘ವಿದ್ಯೆಯಿಂದ ಸ್ವತಂತ್ರರಾಗಿರಿ. ಸಂಘಟನೆಗಳಿಂದ ಬಲಯುತರಾಗಿರಿ’’ ಈ ಮಹಾವಾಕ್ಯಗಳನ್ನು ಎಸ್‌ಎನ್‌ಡಿಪಿ ಯೋಗವು ತನ್ನ ಕಾರ್ಯ ಪ್ರಣಾಳಿಕೆಯಲ್ಲಿ ಸೇರಿಸಿಕೊಂಡಿತು. ಸಮಾಜದ ಪ್ರಬಲ ವರ್ಗದವರು ಮಾತ್ರ ಶಿಕ್ಷಣವನ್ನು ಪಡೆಯಬಹುದಾಗಿದ್ದ ದಿನಗಳವು. ಶೂದ್ರರು, ಅವರ್ಣರು ವಿದ್ಯಾವಂತರಾಗುವುದನ್ನು ಮೇಲ್ವರ್ಗದವರು ಸಹಿಸುತ್ತಿರಲಿಲ್ಲ. ಮೇಲ್ವರ್ಗಗಳು ಸಂಘಟಿತರಾಗಿ ಶೂದ್ರಾದಿ ಅವರ್ಣರು ವಿದ್ಯಾವಂತರಾಗುವುದನ್ನು ವಿರೋಧಿಸುತ್ತಿದ್ದವು. ಆದ್ದರಿಂದಲೇ ಗುರುಗಳು ವಿದ್ಯೆಯ ಒಟ್ಟೊಟ್ಟಿಗೆ ಸಂಘಟನೆಯ ಶಕ್ತಿಯನ್ನೂ ಬೋಧಿಸಿದರು. ಶೋಷಿತರು ಸಂಘಟಿತರಾದಾಗ ಶಕ್ತಿವಂತರಾಗುತ್ತಾರೆ. ಸಂಘಟನೆಯಿಂದ ಕೇಂದ್ರೀಕೃತವಾದ ಶಕ್ತಿಯನ್ನು ಮೊದಲು ಶಿಕ್ಷಣಕ್ಕೆ ಉಪಯೋಗಿಸಿಕೊಳ್ಳಬೇಕು ಎನ್ನುವುದು ಗುರುಗಳ ನಿಲುವಾಗಿತ್ತು. ಶಿಕ್ಷಣದ ಶಕ್ತಿ ಒದಗಿ ಬಂದರೆ ಮತ್ತೆಲ್ಲವೂ ಅದನ್ನು ಅನುಸರಿಸಿ ಬರುವವು ಎಂದು ಗುರುಗಳ ನಂಬಿದ್ದರು. ಅವರ್ಣರು ಸಂಘಟಿತರಾಗದೆ ಇರುವುದರಿಂದಲೇ ವಿದ್ಯೆಯಿಂದ, ಧಾರ್ಮಿಕ, ಸಾಮಾಜಿಕ, ರಾಜಕೀಯ, ಆರ್ಥಿಕ, ಔದ್ಯೋಗಿಕ ಹಾಗೂ ಇನ್ನುಳಿದ ಕ್ಷೇತ್ರಗಳಿಂದ ದೂರ ಉಳಿದರು. ಇದರ ಪರಿಣಾಮದಿಂದಾಗಿ ಇಡೀ ಅವರ್ಣ ಸಮುದಾಯಗಳನ್ನು ಶೋಷಣೆ ಮಾಡಲು ಮೇಲ್ವರ್ಗದವರು ಸಮರ್ಥರಾದರು. ಆದ್ದರಿಂದ ಶೋಷಿತರು ಸಂಘಟನೆಯ ಶಕ್ತಿಯಿಂದ ತಮ್ಮದೇ ಆದ ವಿದ್ಯಾ ಸಂಸ್ಥೆಗಳನ್ನು ಕಟ್ಟಿಕೊಳ್ಳಬೇಕೆಂದು ಗುರುಗಳು ಕರೆ ಕೊಟ್ಟರು, ಶಿಕ್ಷಣ ಶಕ್ತಿ ಮತ್ತು ಸಾಂಘಿಕ ಶಕ್ತಿ ಒಂದಾದಾಗ ಸಮಾಜದ ಪ್ರಗತಿ ಸಾಧ್ಯ. ಆ ಪ್ರಗತಿಪರ ಸಮಾಜದಿಂದ ಸ್ವತಂತ್ರ ಮತ್ತು ದೃಢ ಮಾನಸಿಕ ಚಿತ್ತಗಳು ಉಂಟಾಗಿ ದಾಸ್ಯತ್ವದ ಮನೋಭಾವನೆಗಳು ಕ್ರಮೇಣ ತೊಲಗುವವು. ಹೀಗಾದಾಗ ಸ್ವತಂತ್ರ, ಸ್ವಾವಲಂಬಿ ಸಮಾಜದ ಪುನುರುತ್ಥಾನ ಸಾಧ್ಯ ಎನ್ನುವುದು ಗುರುಗಳ ಯೋಜನೆಯಾಗಿತ್ತು. ಆದ್ದರಿಂದಲೇ ಹಿಂದುಳಿದ ಶೋಷಿತ ಸಮಾಜದ ಅಭ್ಯುದಯವು ಯೋಗ್ಯ ಶಿಕ್ಷಣವನ್ನು ಪಡೆದ ಯುವಕರನ್ನು ಅವಲಂಬಿಸುತ್ತದೆ ಎನ್ನುವುದಾಗಿ ಗುರುಗಳು ಆಗಾಗ ಸಭೆ ಸಮಾರಂಭಗಳಲ್ಲಿ ಹೇಳುತ್ತಿದ್ದರು.
1905ರಲ್ಲಿ ಕ್ವಿಲಾನಿನಲ್ಲಿ ನಡೆದ ಸಭೆಯಲ್ಲಿ ಗುರುಗಳು ಶಿಕ್ಷಣದ ಬಗೆಗೆ ಹೇಳಿಕೆ ಕೊಟ್ಟರು. ‘‘ವಿದ್ಯಾಭ್ಯಾಸದ ಅಮೂಲ್ಯ ಗುಣಗಳನ್ನು ಜನರಿಗೆ ತಿಳಿಸಿ ಹೇಳಬೇಕು. ವಿದ್ಯಾಭ್ಯಾಸ ಇಲ್ಲದ್ದರಿಂದಾಗುವ ದುಷ್ಪರಿಣಾಮಗಳನ್ನು ವಿವರಿಸಿ ತಿಳಿಸಬೇಕು. ಕನಿಷ್ಠಪಕ್ಷ ಪ್ರಾಥಮಿಕ ವಿದ್ಯಾಭ್ಯಾಸವಾದರೂ ಎಲ್ಲರಿಗೂ ಸಿಗುವಂತಾಗಬೇಕು. ಮಹಿಳೆಯರು ವಿದ್ಯಾವಂತೆಯರಾಗಬೇಕು. ಎಲ್ಲರಿಗೂ ವಿದ್ಯಾಭ್ಯಾಸದಲ್ಲಿ ಅಭಿರುಚಿ ಹುಟ್ಟುವಂತೆ ಮಾಡಲು ಪ್ರಯತ್ನಿಸಬೇಕು. ಸೌಕರ್ಯ ದೂರೆತ ಕಡೆಗಳಲ್ಲೆಲ್ಲ ಶಾಲೆಗಳನ್ನು, ವಾಚನಾಲಯಗಳನ್ನು ಸ್ಥಾಪಿಸಬೇಕು.’’
ಕಲಿಯಿರಿ ಮತ್ತು ಕಲಿಸಿರಿ. ಬೆಳೆಯಿರಿ ಮತ್ತು ಬೆಳೆಸಿರಿ. ಯೋಚಿಸಿರಿ ಮತ್ತು ಯೋಜಿಸಿರಿ. ಚೈತನ್ಯಪೂರ್ಣರಾಗಿ ಕಾರ್ಯತತ್ಪರರಾಗಿರಿ. ಒಗ್ಗಟ್ಟಿನಿಂದ ಕರ್ತವ್ಯ ಪ್ರಜ್ಞೆಗಳನ್ನು ಹೊಂದಿರಿ. ಜನ್ಮಜಾತ ಹಕ್ಕುಗಳನ್ನು ಪಡೆಯಿರಿ. ಹೀಗೆನ್ನುತ್ತ ಗ್ರಾಮ, ಗ್ರಾಮಗಳಲ್ಲಿಯ ಮನೆ ಮನೆಗಳಿಗೂ ಗುರುಗಳ ಸಂದೇಶಗಳು ಮುಟ್ಟಿದವು. ಆ ಸಂದೇಶಗಳು ಮಂತ್ರಗಳೋಪಾದಿಯಲ್ಲಿ ಜನಮನಗಳಲ್ಲಿ ಸ್ಪಂದನಗೊಂಡವು.
ಕೃಪೆ: ‘ಶ್ರೀ ನಾರಾಯಣ ಗುರು ವಿಜಯ ದರ್ಶನ’ ಗ್ರಂಥ