ಕ್ಯಾನ್ಸರ್ ತಡೆಗಟ್ಟುವುದು ಹೇಗೆ?
ಇಂದು ವಿಶ್ವ ಕ್ಯಾನ್ಸರ್ ದಿನ
ಇಂದು ವಿಶ್ವ ಕ್ಯಾನ್ಸರ್ ದಿನಾಚರಣೆ. ಕ್ಯಾನ್ಸರ್ ಪೀಡಿತರಿಗೆ ಆತ್ಮಸ್ಥೈರ್ಯ ಮತ್ತು ಮನೋ ಸ್ಥೈರ್ಯ ನೀಡಿ, ನೈತಿಕ ಬೆಂಬಲ ಕೊಟ್ಟು ಅವರು ಕ್ಯಾನ್ಸರ್ ರೋಗವನ್ನು ಎದುರಿಸುವಲ್ಲಿ ಅವರಿಗೆ ಸಕಲ ರೀತಿಯ ಸಹಾಯ ಮಾಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ಸೇರಿಕೊಳ್ಳುವ ಎಲ್ಲಾ ಪ್ರಯತ್ನ ಮಾಡಬೇಕು ಎಂಬ ಮಹೋನ್ನತವಾದ ಆಶಯವನ್ನು ಈ ಕ್ಯಾನ್ಸರ್ ದಿನಾಚರಣೆ ಹೊಂದಿದೆ.
ಏನಿದು ಕ್ಯಾನ್ಸರ್?
ಕ್ಯಾನ್ಸರ್ ಕಾಯಿಲೆ ಅಥವಾ ಅರ್ಬುದ ರೋಗ ಎನ್ನುವುದು ಜೀವಕೋಶಗಳ ಅನಿಯಂತ್ರಿತ ವಿಭಜನೆಯಿಂದಾಗಿ ಉಂಟಾಗುವ ಮಾಂಸದ ಗಡ್ಡೆಯಾಗಿರುತ್ತದೆ. ಆಂಗ್ಲಭಾಷೆಯಲ್ಲಿ ಟ್ಯೂಮರ್ ಎಂದು ಕರೆಯುತ್ತಾರೆ. ಈ ಟ್ಯೂಮರ್ ಗಡ್ಡೆಗಳಲ್ಲಿ ಎರಡು ವಿಧಗಳಿವೆ. ಮಾರಣಾಂತಿಕವಾಗುವ ವೇಗವಾಗಿ ಬೆಳೆಯುವ ಮತ್ತು ಮಾಂಸದ ಗಡ್ಡೆಯ ಸುತ್ತಕವಚವಿಲ್ಲದ ಟ್ಯೂಮರ್ಗಳನ್ನು ಮಾಲಿಗ್ನೆಂಟ್ ಅಥವಾ ತೀವ್ರತರವಾಗಿ ಬೆಳೆಯುವ ಟ್ಯೂಮರ್ ಎನ್ನಲಾಗುತ್ತದೆ. ಇನ್ನು ನಿಧಾನಗತಿಯಿಂದ ಬೆಳೆಯುವ ಮಾರಣಾಂತಿಕವಲ್ಲದ ಹಾಗೂ ಗಡ್ಡೆಯ ಸುತ್ತ ಹೊರಗವಚ ಅಥವಾ ಕ್ಯಾಪ್ಸೂಲ್ ಇರುವ ಮಾಂಸದ ಗಡ್ಡೆಗಳನ್ನು ಬಿನೈನ್ ಗಡ್ಡೆಗಳು ಎನ್ನಲಾಗುತ್ತದೆ. ಒಟ್ಟಿನಲ್ಲಿ ಎಲ್ಲಾ ಗಡ್ಡೆಗಳನ್ನು ಸಾರ್ವತ್ರಿಕವಾಗಿ ಟ್ಯೂಮರ್ ಅಥವಾ ಮಾಂಸದ ಗಡ್ಡೆ ಎಂದುದಾಗಿ ಸಂಬೋಧಿಸಲಾಗುತ್ತದೆ. ಹಾಗೂ ಮಾಲಿಗ್ನೆಂಟ್ ಗಡ್ಡೆಗಳಿಗೆ ಹೆಚ್ಚಾಗಿ ಕ್ಯಾನ್ಸರ್ ಎಂದೂ ಸಂಭೋಧಿಸಲಾಗುತ್ತದೆ. ಈ ಟ್ಯೂಮರ್ ದೇಹದ ಬೇರೆ ಬೇರೆ ಅಂಗಾಂಶಗಳಿಂದ ಜನ್ಮ ತಾಳಬಹುದು ಮತ್ತು ಯಾವ ಜೀವಕೋಶಗಳಿಂದ ಹುಟ್ಟಿದೆ ಎಂಬುದರ ಆಧಾರದ, ಮೇಲೆ ಗಡ್ಡೆಗಳನ್ನು ಬೇರೆ ಬೇರೆ ಹೆಸರಿನಿಂದ ಕರೆಯಲಾಗುತ್ತದೆ. ಸಾಮಾನ್ಯವಾಗಿ ಚರ್ಮದ ಮೇಲ್ಭಾಗದ ಪದರದಿಂದ ಹುಟ್ಟುವ ತೀವ್ರತರವಾದ ಗಡ್ಡೆಗಳನ್ನು ಕಾರ್ಸಿನೋಮಾ ಎನ್ನಲಾಗುತ್ತದೆ. ಉದಾಹರಣೆಗೆ ಥೈರಾಯಿಡ್ ಕಾರ್ಸಿನೋಮ, ಮೆದೋಜಿರಕ ಕ್ಯಾನ್ಸರ್, ಸ್ತನದ ಕ್ಯಾನ್ಸರ್ ಇತ್ಯಾದಿ ಇನ್ನು ಚರ್ಮದ ಕೆಳಗಿನ ಭಾಗದ ಎಲುಬು, ಮಾಂಸಖಂಡಗಳು, ರಕ್ತನಾಳಗಳು, ಸ್ನಾಯಗಳು, ಅಸ್ಥಿಮಜ್ಜೆಗಳು ಮುಂತಾದ ಅಂಗಾಂಶಗಳಿಂದ ಹುಟ್ಟಿ ಬರುವ ತೀವ್ರತರವಾದ ಕ್ಯಾನ್ಸರ್ಗೆ ಸಾರ್ಕೋಮ ಎನ್ನಲಾಗುತ್ತದೆ. ಸಾರ್ಕೋಮಾ ಹೆಚ್ಚಾಗಿ ರಕ್ತದ ಮುಖಾಂತರ ದೇಹದೆಲ್ಲೆಡೆ ಬೇಗನೆ ಹರಡುತ್ತದೆ. ಇನ್ನೂ ಕಾರ್ಸಿನೋಮಾ ಹೆಚ್ಚಾಗಿ ಲಿಂಫ್ ಎಂಬ ಜೀವಕೋಶಗಳ ದ್ರವ್ಯಗಳ ಮುಖಾಂತರ ಹರಡುತ್ತದೆ.
ಕ್ಯಾನ್ಸರ್ ಬರಲು ಕಾರಣಗಳು
ಕ್ಯಾನ್ಸರ್ ರೋಗ ಬರಲು ನಿರ್ದಿಷ್ಟವಾದ ಕಾರಣ ಇದೆ ಎಂದು ಬೊಟ್ಟು ಮಾಡಿ ತೋರಿಸಲು ಸಾಧ್ಯವಿಲ್ಲ. ಹತ್ತು ಹಲವು ಕಾರಣಗಳು ಒಟ್ಟು ಸೇರಿ ಜೀವಕೋಶಗಳ ಜೈವಿಕ ವಿಭಜನೆ ಕ್ರಿಯೆಯನ್ನು ಹೈಜಾಕ್ ಮಾಡಿ ಅನಿಯಂತ್ರಿಕ ಗಡ್ಡೆ ಬೆಳೆಯಲು ಪ್ರಚೋಧಿಸುತ್ತದೆ. ಆದರೆ ಹೆಚ್ಚಿನ ಎಲ್ಲಾ ಕ್ಯಾನ್ಸರ್ಗಳಿಗೆ ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಅತಿಯಾದ ಬಳಕೆ ಕಾರಣ ಎಂದೂ ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಇದಲ್ಲದೆ ಆನುವಂಶಿಕ ಕಾರಣಗಳು, ಮದ್ಯಪಾನ, ಅನಾರೋಗ್ಯಕರ ಜೀವನ ಶೈಲಿ, ಅನಾರೋಗ್ಯ ಪೂರ್ಣ ಆಹಾರ ಪದ್ಧತಿ, ಒತ್ತಡದ ಜೀವನ ಎಲ್ಲವೂ ಕ್ಯಾನ್ಸರ್ಗೆ ಕಾರಣವಾಗುತ್ತದೆ ಎಂದೂ ತಿಳಿದು ಬಂದಿದೆ. ಅತಿಯಾದ ಕೃತಕ ರಸದೂತಗಳ ಬಳಕೆ, ಅತಿಯಾದ ಗರ್ಭನಿರೋಧಕ ಮಾತ್ರೆಗಳ ಬಳಕೆಯಿಂದಲೂ ಮಹಿಳೆಯರಲ್ಲಿ ಕ್ಯಾನ್ಸರ್ಗೆ ಕಾರಣವಾಗುತ್ತದೆ ಎಂದು ಅಂದಾಜಿಸಲಾಗಿದೆ. ಅತಿಯಾದ ವಿಕಿರಣದ ವಾತಾವರಣಕ್ಕೆ ತೆರೆದುಕೊಳ್ಳುವುದು, ಅನಾರೋಗ್ಯಕರ ಲೈಂಗಿಕ ಜೀವನ, ಹತ್ತು ಹಲವು ಸಂಗಾತಿಗಳ ಜೊತೆ ಲೈಂಗಿಕ ಸಂಬಂಧ, ಹತ್ತಾರು ಬಾರಿ ಗರ್ಭ ಧರಿಸುವುದು, ಹೆಪಟೆಟಿಸ್ ಬಿ ಮತ್ತು ಸಿ ವೈರಾಣು ಸೋಂಕು, ಏಡ್ಸ್ ವೈರಾಣು ಸೋಂಕು, ಎಬ್ಸ್ಟೈನ್ಬಾರ್ ವೈರಾಣು ಸೋಂಕು, ಹ್ಯೂಮನ್ ಪಾಪಿಲೋಮ ವೈರಾಣು ಸೋಂಕು, ವಾಯು ಮಾಲಿನ್ಯ, ವಾತಾವರಣದ ವೈಪರೀತ್ಯ, ವೃತ್ತಿ ಸಂಬಂಧಿ ಕ್ಯಾನ್ಸರ್ಕಾರಕ ವಸ್ತುಗಳು ದೇಹಕ್ಕೆ ಸೇರುವುದು, (ಪೈಂಟರ್ಗಳು, ಸೀಸದ ಕಾರ್ಖಾನೆ ಕೆಲಸಗಾರರು) ಅತಿಯಾದ ರಾಸಾಯನಿಕಯುಕ್ತ ಜಂಕ್ ಆಹಾರ ಹಾಗೂ ಸಿದ್ಧ ಆಹಾರ ಸೇವನೆ ಎಲ್ಲವೂ ಕ್ಯಾನ್ಸರ್ಗೆ ಕಾರಣವಾಗುವ ವಾತಾವರಣವನ್ನು ಸೃಷ್ಟಿಸುತ್ತದೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ. ಒಟ್ಟಿನಲ್ಲಿ ಅನುವಂಶಿಕ ಕಾರಣ ಒಂದನ್ನು ಬಿಟ್ಟು ಉಳಿದೆಲ್ಲಾ ಕಾರಣಗಳನ್ನು ಸ್ವಯಂ ನಿಯಂತ್ರಣ ಸಾಧಿಸಿ, ಕ್ಯಾನ್ಸರ್ ಕಾರಕ ವಸ್ತುಗಳಿಗೆ ನಾವು ತೆರೆದುಕೊಳ್ಳದಿದ್ದಲ್ಲಿ ಕ್ಯಾನ್ಸರ್ ಮುಕ್ತ ಜೀವನ ಸಾಧಿಸಲು ಖಂಡಿತಾ ಸಾಧ್ಯವಿದೆ.
ಚಿಕಿತ್ಸೆ ಹೇಗೆ?
ಕ್ಯಾನ್ಸರ್ ಆರಂಭಿಕ ಹಂತದಲ್ಲಿ ಚಿಕಿತ್ಸೆಗೆ ಚೆನ್ನಾಗಿ ಸ್ಪಂದಿಸುತ್ತದೆ. ಶೇ. 90ರಷ್ಟು ಕ್ಯಾನ್ಸರ್ನ್ನು ಸರ್ಜರಿ ಮುಖಾಂತರ ತೆಗೆಯಲಾಗುತ್ತದೆ. ಆದರೆ ಕೆಲವೊಂದು ಕ್ಯಾನ್ಸರ್ನ್ನು ಕಿಮೋಥೆರಫಿಯಿಂದ ಗುಣಪಡಿಸಲಾಗುತ್ತದೆ. ಆರಂಭಿಕ ಹಂತದಲ್ಲಿ ಸರ್ಜರಿ ಖಂಡಿತವಾಗಿಯೂ ಉತ್ತಮ. ಆದರೆ ಮುಂದುವರಿದ ಹಂತದಲ್ಲಿ (3ನೆ ಮತ್ತು 4ನೇ ಹಂತದಲ್ಲಿ) ಸರ್ಜರಿಯ ಜೊತೆಗೆ ಕಿಮೋಥೆರಪಿ ಮತ್ತು ರೆಡೀಯೋಥೆರಪಿಯ (ವಿಕಿರಣ ಚಿಕಿತ್ಸೆ) ಅವಶ್ಯಕತೆ ಇರುತ್ತದೆ. ಚಿಕಿತ್ಸೆಯ ಆಯ್ಕೆ ಮತ್ತು ನಿರ್ಧಾರವನ್ನು ವೈದ್ಯರು ನಿರ್ಧರಿಸುತ್ತಾರೆ. ವೈದ್ಯರ ಸಲಹೆಯನ್ನು ಚಾಚೂ ತಪ್ಪದೆ ಪಾಲಿಸಿದಲ್ಲಿ ಖಂಡಿತವಾಗಿಯೂ ಕ್ಯಾನ್ಸರ್ ರೋಗವನ್ನು ಗೆಲ್ಲಬಹುದು. ಕೊನೆಮಾತು
ವಿಶ್ವದಾದ್ಯಂತ ಕೊಟ್ಯಾಂತರ ಮಂದಿ ಕ್ಯಾನ್ಸರ್ನಿಂದಾಗಿ ಸಾಯುತ್ತಿದ್ದಾರೆ. ಸರಿಸುಮಾರು ವರ್ಷದಲ್ಲಿ 16 ಮಿಲಿಯನ್ ಮಂದಿ ಕ್ಯಾನ್ಸರ್ನಿಂದಾಗಿ ಬಳಲುತ್ತಿದ್ದಾರೆ ಮತ್ತು 8 ಮಿಲಿಯನ್ ಮಂದಿ ಸಾವನ್ನಪ್ಪುತ್ತಿದ್ದಾರೆ. ಬಾಯಿ, ಗಂಟಲು, ಶ್ವಾಸಕೋಶ, ಕರುಳಿನ ಕ್ಯಾನ್ಸರ್ ಮತ್ತು ಪ್ರೊಸ್ಟೆಟ್ (ವೃಷಣ) ಕ್ಯಾನ್ಸರ್ ಪುರುಷರಲ್ಲಿ ಹೆಚ್ಚಾಗಿರುತ್ತದೆ. ಸ್ತನ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್ ಮತ್ತು ಜನನಾಂಗ (ಸರ್ವಿಕ್ಸ್ ಅಂದರೆ ಗರ್ಭಕೋಶದ ಕುತ್ತಿಗೆ)ದ ಕ್ಯಾನ್ಸರ್ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ. ಪ್ರಾಥಮಿಕ ಹಂತದಲ್ಲಿಯೇ ಗುರುತಿಸಿದಲ್ಲಿ ಕ್ಯಾನ್ಸರನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಮುಂದುವರಿದ ರಾಷ್ಟ್ರಗಳಲ್ಲಿ ಒಂದು ಅಥವಾ ಎರಡನೇ ಹಂತದಲ್ಲಿ ಗುರುತಿಸಿ ಪರಿಣಾಮಕಾರಿ ಚಿಕಿತ್ಸೆ ನೀಡುತ್ತಾರೆ. ಆದರೆ ಭಾರತದಂತಹ, ಇನ್ನೂ ಮುಂದುವರಿಯುತ್ತಿರುವ ದೇಶಗಳಲ್ಲಿ ಬಡತನ, ಮೂಢನಂಬಿಕೆ ಅನಕ್ಷರತೆ ಅಜ್ಞಾನ ಮತ್ತು ಮೂಲಭೂತ ಸೌಕರ್ಯದ ಕೊರತೆಯಿಂದಾಗಿ ವೈದ್ಯರ ಬಳಿ ಬರುವಾಗ ಕ್ಯಾನ್ಸರ್ ಮೂರು ಅಥವಾ ನಾಲ್ಕನೇ ಹಂತಕ್ಕೆ ತಲುಪಿರುತ್ತದೆ. ಈ ಹಂತದಲ್ಲಿ ಕ್ಯಾನ್ಸರನ್ನು ಗುಣಮುಖವಾಗಿಸುವ ಸಾಧ್ಯತೆ ಬಹಳ ಕಡಿಮೆ ಇರುತ್ತದೆ. ಭಾರತ ದೇಶವೊಂದರಲ್ಲಿ ವರ್ಷಕ್ಕೆ 14 ಲಕ್ಷ ಜನರು ಕ್ಯಾನ್ಸರ್ಗೆ ತುತ್ತಾಗುತ್ತಾರೆ. ಮತ್ತು ವಿಶ್ವದ ಕ್ಯಾನ್ಸರ್ ರ್ಯಾಂಕ್ ಪಟ್ಟಿಯಲ್ಲಿ ಭಾರತಕ್ಕೆ 5ನೇ ಸ್ಥಾನ ಲಭಿಸಿದೆ. ಈ ಪೈಕಿ ಶೇ. 90ರಷ್ಟು ಕ್ಯಾನ್ಸರ್ ತಂಬಾಕಿನ ಸೇವನೆಯಿಂದ ಬರುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ತಂಬಾಕಿನಿಂದ ಬಾಯಿ, ನಾಲಗೆ, ಗಂಟಲು ಮುಂತಾದ ಅಂಗಗಳು ಕ್ಯಾನ್ಸರ್ಗೆ ತುತ್ತಾಗುತ್ತದೆ. ಇದರ ಜೊತೆಗೆ ಧೂಮಪಾನ, ಮದ್ಯಪಾನ ಸೇರಿಕೊಂಡು ಶ್ವಾಸಕೋಶ, ಕರುಳು, ಅನ್ನನಾಳ. ಯಕೃತ್, ಮೂತ್ರಪಿಂಡ ಇತ್ಯಾದಿ ಅಂಗಗಳು ಕ್ಯಾನ್ಸರ್ಗೆ ತುತ್ತಾಗುತ್ತದೆ. ಸಮಾಧಾನಕರವಾದ ಅಂಶವೆಂದರೆ ಈ ದುಶ್ಚಟಗಳನ್ನು ನಿಯಂತ್ರಿಸಿ ಕ್ಯಾನ್ಸರ್ನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು.