ಬಡವರು ವಿದ್ಯಾವಂತರಾಗಲಿ
ನಾರಾಯಣ ಗುರುಗಳ ಕ್ರಾಂತಿಕಾರಿ ಚಳವಳಿಗಳು
ಭಾಗ 9
ಕೇವಲ ಶಿಕ್ಷಣ ಮಾತ್ರ ಬಡವರನ್ನು ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಸಾಮಾಜಿಕವಾಗಿ ಪ್ರಬಲರನ್ನಾಗಿ ಮತ್ತು ಸುರಕ್ಷಿತರನ್ನಾಗಿ ಮಾಡಬಲ್ಲದು. ‘‘ಬಡವರನ್ನು ಹೆಚ್ಚೆಚ್ಚು ವಿದ್ಯಾವಂತರನ್ನಾಗಿ ಮಾಡಿದರೆ ಸಮುದಾಯ ಸುರಕ್ಷಿತವಾಗುತ್ತದೆ. ಮೇಲ್ಜಾತಿಯವರ ಸಮಾನವಾಗಿ ಬೆಳೆಯಲು ಶೋಷಿತರಿಗೆ ಇರುವ ಮಾರ್ಗ ಶಿಕ್ಷಣ ಒಂದೇ’’ ಅಸ್ಪೃಶ್ಯರು ಹಾಗೂ ಮೈಲಿಗೆಯರು ಎಂದು ಭಾವಿಸುವ ದಲಿತರ ಮಕ್ಕಳಿಗೆ ಶಿಕ್ಷಣದೊಂದಿಗೆ ಸಭೆ ಸಂಸ್ಕೃತಿ ಮತ್ತು ಶುಚಿತ್ವವನ್ನು ಕಲಿಸಬೇಕೆಂದರು.
‘‘ಜನರು ಶಿಕ್ಷಣದ ಉಪಯೋಗ ಮತ್ತು ಅದರ ಅಭಾವದಿಂದಾಗುವ ಹಾನಿಯನ್ನು ಮೊದಲು ತಿಳಿದುಕೊಳ್ಳಬೇಕು. ಶಿಕ್ಷಣಕ್ಕಾಗಿ ಜನರನ್ನು ಜಾಗೃತಗೊಳಿಸಬೇಕು. ಶಿಕ್ಷಣಕ್ಕಾಗಿ ಗಂಡಸರು, ಹೆಂಗಸರು ಆತುರವುಳ್ಳವರು ಮತ್ತು ಹೆಮ್ಮೆಪಡುವವರೂ ಆಗಬೇಕು. ಸಮಾಜದ ನೇತಾರರು, ಸುಧಾರಕರು ಅಗತ್ಯವಿದ್ದಲ್ಲಿ ಶಾಲೆಗಳನ್ನು, ವಾಚನಾಲಯಗಳನ್ನು ತೆರೆಯಬೇಕು. ಈಳವರಲ್ಲಿ ಗಂಡಸರು ಹೆಂಗಸರೆಂಬ ಭೇದವಿಲ್ಲದೆ ಎಲ್ಲರೂ ಕಡಿಮೆ ಪಕ್ಷ ಪ್ರಾಥಮಿಕ ವಿದ್ಯೆಯನ್ನಾದರೂ ಪಡೆಯುವಂತಾಗಬೇಕು’’.
ವಿದ್ಯಾರ್ಥಿ ವೇತನ: ಕೇವಲ ಆರ್ಥಿಕ ಸಮಸ್ಯೆಗಳಿಂದ ಜಾಣ ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು. ಅಂತಹ ಮಕ್ಕಳಿಗೆ ಗ್ರಾಮಸ್ಥರು ಸಹಾಯವನ್ನು ಮಾಡಬೇಕು. ಎಸ್‌ಎನ್‌ಡಿಪಿಯಂತಹ ಸಂಘಟನೆಗಳು ಅರ್ಹ ವಿದ್ಯಾಥಿಗಳಿಗೆ ಜಾತಿಭೇದಗಳಿಲ್ಲದೆ ಸಹಾಯ ಮಾಡಬೇಕೆಂದು ಆಗ್ರಹ ಮಾಡಿದರು. ಈಳವರಲ್ಲದೆ ಅನ್ಯರಿಗೆ ಈ ಸಂಘಟನೆಗಳು ಹೇಳುವಂತಹ ಯಾವ ತರದ ಸಹಾಯಗಳನ್ನು ಮಾಡಲಿಲ್ಲ. ಈಳವರ ಸಂಘಟನೆಗಳು ಗುರುಗಳ ಮಾತನ್ನು ಜಾತಿಯ ವಿಷಯದಲ್ಲಿ ಪಾಲಿಸಲಿಲ್ಲವೆಂದೇ ಹೇಳಬೇಕು.
ಒಮ್ಮೆ ಇರಿಂಜಾಲ ಕುಡದಲ್ಲಿ ದೇವಸ್ಥಾನ ಕಟ್ಟಬೇಕೆಂದಿದ್ದ ಈಳವರನ್ನು ಉದ್ದೇಶಿಸಿ ಗುರುಗಳು ದೇವಸ್ಥಾನಗಳು ಇನ್ನು ಸಾಕು, ಶಾಲೆಗಳನ್ನು ಮಾಡಿರಿ ಎಂದರು. ‘‘ಇನ್ನು ಮೇಲೆ ಯಾರೂ ದೇವಸ್ಥಾನಗಳನ್ನು ಕಟ್ಟಲು ಉತ್ತೇಜಿಸಬೇಡಿ. ಶಿಕ್ಷಣಾಲಯಗಳೇ ನಿಮಗೆ ಮುಖ್ಯ ದೇವಾಲಯಗಳು, ಸಾರ್ವಜನಿಕರಿಂದ ವಂತಿಗೆಯನ್ನು ಸಂಗ್ರಹಿಸಿ ಶಾಲೆ, ಕಾಲೇಜುಗಳನ್ನು ಸ್ಥಾಪಿಸಬೇಕು. ದೇವಸ್ಥಾನಗಳು ಜಾತಿ ಭೇದಗಳಿಲ್ಲದ ಸಾಮೂಹಿಕ ಪ್ರಾರ್ಥನಾ ಮಂದಿರಗಳಾಗಬೇಕು. ಆದರೆ ಈಗಿನ ವಿದ್ಯಮಾನಗಳನ್ನು ನೋಡಿದರೆ ದೇವಸ್ಥಾನಗಳು ಜಾತಿಭೇದಗಳನ್ನು ಹೆಚ್ಚಿಸುತ್ತಿರುವಂತೆ ತೋರುತ್ತವೆ. ಆದ್ದರಿಂದ ಜನರನ್ನು ಹೆಚ್ಚು ಹೆಚ್ಚು ಶಿಕ್ಷಿತರನ್ನಾಗಿ ಮಾಡುವೆಡೆ ನಾವು ಗಮನ ಹರಿಸಬೇಕು. ಜನರು ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳಲಿ. ಅವರ ಸುಧಾರಣೆಗೆ ಉಳಿದಿರುವುದು ಅದೊಂದೇ ಮಾರ್ಗ’’ ಎಂದು ಗುರುಗಳು ಹೇಳಿದರು.
ವ್ಯಕ್ತಿ ವಿಕಾಸವಾಗದೆ ಸಮಾಜ ಸುಧಾರಣೆ ಆಗದು. ಶಾರೀರಿಕ ಮತ್ತು ಮಾನಸಿಕ ಸದಾಚಾರ, ಸಾಮಾಜಿಕ, ಆರ್ಥಿಕ, ಬೌದ್ಧಿಕ, ಸಾಂಸ್ಕೃತಿಕವಾಗಿ ಸುದೃಢವಾಗಿದ್ದರೆ ಮಾತ್ರ ಮನುಷ್ಯ ಸರಿಯಾಗಿ ಯೋಚಿಸಿ ವರ್ತಿಸುತ್ತಾನೆ ಹಾಗೂ ಉತ್ತಮ ಜೀವನ ನಡೆಸಲು ಶಕ್ತನಾಗುತ್ತಾನೆ.
ಡಾ. ಪಲ್ಪು ಅವರು ಸರಕಾರಕ್ಕೆ ಅರ್ಪಿಸಿದ ಈಳವ ಸಂಕಟ ಅರ್ಜಿಗೆ ಉತ್ತರವಾಗಿ ದಿವಾನ ವೆಂಕಟ ಸುಬ್ಬಯ್ಯನವರ ‘‘ಈಳವರು ವಿದ್ಯಾಭ್ಯಾಸವನ್ನು ಮಾಡಿ ಸರಕಾರಿ ಕೆಲಸಕ್ಕೆ ಪ್ರಯತ್ನ ಮಾಡುವುದಕ್ಕಿಂತ ತಲೆ ತಲಾಂತರಗಳಿಂದ ಮಾಡಿಕೊಂಡು ಬಂದ ಕೃಷಿ, ತೆಂಗಿನ ನಾರಿನ ಕೈಗಾರಿಕೆ ಮತ್ತು ಮೂರ್ತೆಗಾರಿಕೆಯನ್ನು ಮಾಡುವುದು ಲೇಸು’’ ಎನ್ನುವ ಉತ್ತರ ಅಂದಿನ ಹಿಂದೂ ಸವರ್ಣರ ಸರಕಾರ ಹೇಗೆ ಹಿಂದುಳಿದ ಜಾತಿಯವರನ್ನು ಶಿಕ್ಷಣದಿಂದ ದೂರ ಇಡಲು ಬಯಸುತ್ತಿತ್ತು ಎನ್ನುವುದಕ್ಕೆ ಜೀವಂತ ಉದಾಹರಣೆಯಾಗಿ ಉಳಿದಿದೆ.
ಸರಕಾರ ಮತ್ತು ಮೇಲ್ವರ್ಗದ ಹಿಂದೂಗಳ ಆಧೀನದಲ್ಲಿ ಸಾಮಾನ್ಯ ಜನರು ಅವಿದ್ಯಾವಂತರಾಗಿ ಶೋಷಿಸಲ್ಪಡುತ್ತಿದ್ದ ದಿನಗಳಲ್ಲಿ ನಾರಾಯಣ ಗುರುಗಳು ಅಕ್ಷರ ಕ್ರಾಂತಿಯನ್ನು ಮಾಡಿದರೆನ್ನುವುದೇ ಒಂದು ಮಹಾಪವಾಡ.
ಕೃಪೆ: ‘ಶ್ರೀ ನಾರಾಯಣ ಗುರು ವಿಜಯ ದರ್ಶನ’ ಗ್ರಂಥ