ಗಣರಾಜ್ಯೋತ್ಸವ ದಿನಾಚರಣೆಗೆ ಶ್ರೀ ನಾರಾಯಣ ಗುರು ಸ್ತಬ್ಧಚಿತ್ರ ಯಾಕೆ ಬೇಡವಾಯಿತು?
ನಾರಾಯಣ ಗುರುಗಳ ಜಾಗದಲ್ಲಿ ಶಂಕರಾಚಾರ್ಯರ ಪ್ರತಿಕೃತಿಯನ್ನು ಇರಿಸಬೇಕೆನ್ನುವ ರಕ್ಷಣಾ ಸಚಿವಾಲಯದ ಸಲಹೆಯು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸುವ ಕೇಂದ್ರ ಸರಕಾರದ ಕಾರ್ಯಸೂಚಿಯನ್ನು ಮುನ್ನೆಲೆಗೆ ತಂದಿದೆ. ಕೇರಳದ ಈ ಇಬ್ಬರು ಮಹಾಪುರುಷರು ಪರಸ್ಪರ ತೀರಾ ಭಿನ್ನ ಹಾಗೂ ತೀರಾ ವಿರುದ್ಧ ಸಾಮಾಜಿಕ ಸಿದ್ಧಾಂತಗಳನ್ನು ಹೊಂದಿದವರು. ನಾರಾಯಣ ಗುರು ‘ಒಂದು ಜಾತಿ, ಒಂದು ಧರ್ಮ ಮತ್ತು ಒಬ್ಬರೇ ದೇವರು’ ಎಂಬ ಸಿದ್ಧಾಂತವನ್ನು ಬೋಧಿಸಿದರೆ, ಶಂಕರಾಚಾರ್ಯರು ಅಸಮಾನತೆಯ ಬ್ರಾಹ್ಮಣವಾದಿ ವೌಲ್ಯಗಳನ್ನು ಬೋಧಿಸಿದವರು.
ಪ್ರತಿ ಗಣರಾಜ್ಯೋತ್ಸವ ದಿನದಂದು ದಿಲ್ಲಿಯ ರಾಜಪಥದಲ್ಲಿ ಭವ್ಯ ಕಾರ್ಯಕ್ರಮಗಳು ನಡೆಯುತ್ತವೆ. ಅಲ್ಲಿ ಒಂದು ಕಡೆ ಸೇನೆಯ ಸಾಧನೆಗಳ ಪ್ರದರ್ಶನ ನಡೆದರೆ, ಇನ್ನೊಂದೆಡೆ ವಿವಿಧ ರಾಜ್ಯಗಳ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಯುತ್ತದೆ. ಈ ಸ್ತಬ್ಧಚಿತ್ರಗಳನ್ನು ಕೇಂದ್ರ ಸರಕಾರವೇ ಆಯ್ಕೆ ಮಾಡುತ್ತದೆ. ಈ ವರ್ಷ (2022) ಕೇಂದ್ರ ಸರಕಾರವು ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ಸ್ತಬ್ಧಚಿತ್ರಗಳನ್ನು ತಿರಸ್ಕರಿಸಿತು. ಈ ನಿರ್ಧಾರಕ್ಕೆ ಅದು ಕೊಟ್ಟ ಕಾರಣವೆಂದರೆ- 12 ಸ್ತಬ್ಧಚಿತ್ರಗಳನ್ನು ಮಾತ್ರ ಪ್ರದರ್ಶಿಸಬಹುದು ಎನ್ನುವುದು.
ಕೇರಳದ ಸ್ತಬ್ಧಚಿತ್ರಕ್ಕೆ ಸಂಬಂಧಿಸಿ ಇನ್ನೊಂದು ಬೆಳವಣಿಗೆ ನಡೆದಿದೆ. ಅದು ಬಳಿಕ ಬೆಳಕಿಗೆ ಬಂತು. ಸ್ತಬ್ಧಚಿತ್ರಗಳ ಆಯ್ಕೆಯ ಉಸ್ತುವಾರಿ ಹೊತ್ತಿರುವ ತೀರ್ಪುಗಾರರ ಸಮಿತಿ (ರಕ್ಷಣಾ ಸಚಿವಾಲಯ)ಯು ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ತಿರಸ್ಕರಿಸಿತಾದರೂ ಕೇರಳಕ್ಕೆ ಇನ್ನೊಂದು ಆಯ್ಕೆಯನ್ನು ನೀಡಿತು. ಸ್ತಬ್ಧಚಿತ್ರದಲ್ಲಿ ನಾರಾಯಣ ಗುರುಗಳ ಜಾಗದಲ್ಲಿ ಕೇರಳದವರೇ ಆಗಿರುವ ಶಂಕರಾಚಾರ್ಯರ ಪ್ರತಿಕೃತಿಯನ್ನು ಪ್ರತಿಷ್ಠಾಪಿಸಿದರೆ ಆಯ್ಕೆ ಮಾಡಬಹುದು ಎಂದಿತು. ಶಂಕರಾಚಾರ್ಯರು ಭಾರತವನ್ನು ಒಗ್ಗೂಡಿಸಿದವರು, ಹಾಗಾಗಿ ಸ್ತಬ್ಧಚಿತ್ರದಲ್ಲಿ ಅವರ ಪ್ರತಿಕೃತಿ ಇರಬೇಕು ಎಂಬ ಅಭಿಪ್ರಾಯವನ್ನು ತೀರ್ಪುಗಾರರ ಸಮಿತಿ ವ್ಯಕ್ತಪಡಿಸಿತು. ಕೇರಳದ ಸ್ತಬ್ಧಚಿತ್ರವೊಂದು ಗಣರಾಜ್ಯೋತ್ಸವದ ಮೆರವಣಿಗೆಯಿಂದ ತಿರಸ್ಕಾರಗೊಂಡಿರುವುದು 2017ರ ಬಳಿಕ ಇದು ಮೂರನೇ ಬಾರಿಯಾಗಿದೆ.
ಕುತೂಹಲಕರ ವಿಷಯವೆಂದರೆ, ನಾರಾಯಣ ಗುರುಗಳ ಜಾಗದಲ್ಲಿ ಶಂಕರಾಚಾರ್ಯರ ಪ್ರತಿಕೃತಿಯನ್ನು ಇರಿಸಬೇಕೆನ್ನುವ ರಕ್ಷಣಾ ಸಚಿವಾಲಯದ ಸಲಹೆಯು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸುವ ಕೇಂದ್ರ ಸರಕಾರದ ಕಾರ್ಯಸೂಚಿಯನ್ನು ಮುನ್ನೆಲೆಗೆ ತಂದಿದೆ. ಕೇರಳದ ಈ ಇಬ್ಬರು ಮಹಾಪುರುಷರು ಪರಸ್ಪರ ತೀರಾ ಭಿನ್ನ ಹಾಗೂ ತೀರಾ ವಿರುದ್ಧ ಸಾಮಾಜಿಕ ಸಿದ್ಧಾಂತಗಳನ್ನು ಹೊಂದಿದವರು. ನಾರಾಯಣ ಗುರು ‘ಒಂದು ಜಾತಿ, ಒಂದು ಧರ್ಮ ಮತ್ತು ಒಬ್ಬರೇ ದೇವರು’ ಎಂಬ ಸಿದ್ಧಾಂತವನ್ನು ಬೋಧಿಸಿದರೆ, ಶಂಕರಾಚಾರ್ಯರು ಅಸಮಾನತೆಯ ಬ್ರಾಹ್ಮಣವಾದಿ ವೌಲ್ಯಗಳನ್ನು ಬೋಧಿಸಿದವರು.
ಇವರ ಪೈಕಿ ಮೊದಲು ಬಂದವರು ಶಂಕರಾಚಾರ್ಯರು. ಅವರು 8-10ನೇ ಶತಮಾನದ ನಡುವೆ ಬದುಕಿದವರು. ಆ ಅವಧಿಯಲ್ಲಿ ಬುದ್ಧನ ಬೋಧನೆಗಳು ಜಾತಿ ಸಮಾನತೆಯ ಪರವಾಗಿ ಅರಿವನ್ನು ಮೂಡಿಸುವಲ್ಲಿ ಹಾಗೂ ‘‘ನಾವು ಈಗ ವಾಸಿಸುತ್ತಿರುವ ಜಗತ್ತೇ ಸತ್ಯ’’ ಎಂಬುದನ್ನು ಜನರಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದವು. ಜನರ ಸಂಕಷ್ಟಗಳನ್ನು ನಿರ್ಮೂಲನ ಮಾಡುವ ಹೋರಾಟ ಆರಂಭಗೊಂಡಿತ್ತು. ಆಗ ಶಂಕರಾಚಾರ್ಯರು ‘‘ನಾವು ವಾಸಿಸುತ್ತಿರುವ ಜಗತ್ತು ಒಂದು ಭ್ರಮೆ ಮತ್ತು ಬ್ರಹ್ಮ ಮಾತ್ರ ಸತ್ಯ’’ ಎಂಬುದಾಗಿ ವಾದಿಸಿದರು. ಅವರು ಬೌದ್ಧ ಚಿಂತಕರಿಗೆ ಸವಾಲು ಹಾಕಿ ಅವರನ್ನು ಅವಮಾನಿಸಿದರು. ಭಾರತದಲ್ಲಿ ಬೌದ್ಧ ಧರ್ಮ ನಾಶವಾಗಲು ಕಾರಣವಾದ ಸಿದ್ಧಾಂತಗಳನ್ನು ಬೋಧಿಸಿದವರ ಪೈಕಿ ಅವರೊಬ್ಬರು.
ಅವರು ದ್ವಾರಕೆ, ಬದರಿನಾಥ, ಪುರಿ ಜಗನ್ನಾಥ ಮತ್ತು ಶೃಂಗೇರಿಯಲ್ಲಿ ಮಠಗಳನ್ನು ಸ್ಥಾಪಿಸಿದರು. ಬೌದ್ಧಮಠಗಳನ್ನು ಮಾದರಿಯಾಗಿಟ್ಟುಕೊಂಡು ಅವರು ಈ ಕ್ರಮಗಳನ್ನು ತೆಗೆದುಕೊಂಡರು. ಆದರೆ, ಬೌದ್ಧ ಮಠಗಳು ಮತ್ತು ಶಂಕರಾಚಾರ್ಯರ ಮಠಗಳು ಸೈದ್ಧಾಂತಿಕವಾಗಿ ವಿರುದ್ಧ ಧ್ರುವಗಳಾಗಿದ್ದವು. ಬೌದ್ಧ ಧರ್ಮವು ಪ್ರಾಪಂಚಿಕತೆಗೆ ಆದ್ಯತೆ ನೀಡಿದರೆ, ಶಂಕರಾಚಾರ್ಯರು ಸಿದ್ಧಾಂತವಾದಿಯಾಗಿದ್ದರು. ಬೌದ್ಧ ಧರ್ಮವು ಸಮಾನತೆಯನ್ನು ಬೋಧಿಸಿದರೆ, ಶಂಕರಾಚಾರ್ಯರು ಲಿಂಗ ಮತ್ತು ಜನ್ಮಾಧಾರಿತ ಜಾತಿ ಶ್ರೇಣೀಕೃತ ವ್ಯವಸ್ಥೆ ಎನ್ನುವ ವೈದಿಕ ಬ್ರಾಹ್ಮಣ್ಯವಾದಿ ವೌಲ್ಯಗಳನ್ನು ಬೋಧಿಸಿದರು.
ನಾರಾಯಣ ಗುರುಗಳು ಶ್ರೇಷ್ಠ ಮಾನವತಾವಾದಿಯಾಗಿದ್ದರು. ಬಾಲ್ಯದಲ್ಲೇ ಅವರು ಆಧ್ಯಾತ್ಮಿಕತೆಯತ್ತ ವಿಶೇಷ ಒಲವು ಬೆಳೆಸಿದರು ಹಾಗೂ ಯೋಗಾಭ್ಯಾಸ ಮಾಡಿದರು. ತನ್ನ ಆಧ್ಯಾತ್ಮಿಕ ಯಾನದ ಅವಧಿಯಲ್ಲಿ, 1888ರಲ್ಲಿ ಅರುವಿಪ್ಪುರಮ್ಗೆ ಭೇಟಿ ನೀಡಿದ ಅವರು ಧ್ಯಾನದಲ್ಲಿ ತನ್ನನ್ನು ತೊಡಗಿಸಿಕೊಂಡರು. ಅಲ್ಲಿನ ತನ್ನ ವಾಸ್ತವ್ಯವದ ಅವಧಿಯಲ್ಲಿ ನಾರಾಯಣ ಗುರುಗಳು ನದಿಯಿಂದ ಕಲ್ಲೊಂದನ್ನು ತೆಗೆದು ಪ್ರತಿಷ್ಠಾಪಿಸಿದರು ಹಾಗೂ ಅದನ್ನು ಶಿವ ವಿಗ್ರಹ ಎಂಬುದಾಗಿ ಕರೆದರು. ಅಂದಿನಿಂದ ಈ ಸ್ಥಳವು ಅರುವಿಪ್ಪುರಮ್ ಶಿವ ದೇವಸ್ಥಾನ ಎಂಬುದಾಗಿ ಪ್ರಸಿದ್ಧಿ ಪಡೆಯಿತು. ಈ ಘಟನೆಯನ್ನು ಬಳಿಕ ‘ಅರುವಿಪ್ಪುರಮ್ ಪ್ರತಿಷ್ಠೆ’ ಎಂಬುದಾಗಿ ಕರೆಯಲಾಯಿತು. ಇದು ಭಾರೀ ಸಾಮಾಜಿಕ ಅಶಾಂತಿಗೆ ಕಾರಣವಾಯಿತು. ಮೇಲ್ಜಾತಿಯ ಬ್ರಾಹ್ಮಣರು ಇದನ್ನು ವಿರೋಧಿಸಿದರು.
ವಿಗ್ರಹವನ್ನು ಪ್ರತಿಷ್ಠೆ ಮಾಡುವ ನಾರಾಯಣ ಗುರುವಿನ ಹಕ್ಕನ್ನು ಅವರು ಒಪ್ಪಿಕೊಳ್ಳಲಿಲ್ಲ. ಆಗ ಗುರುಗಳು ಬ್ರಾಹ್ಮಣರಿಗೆ ಈ ರೀತಿಯಾಗಿ ಉತ್ತರಿಸಿದರು: ‘‘ಇದು ಬ್ರಾಹ್ಮಣ ಶಿವನಲ್ಲ, ಈಳವ ಶಿವ’’.
ಅವರ ಈ ಮಾತುಗಳು ಬಳಿಕ ಭಾರೀ ಪ್ರಸಿದ್ಧಿ ಪಡೆದವು ಹಾಗೂ ಅದನ್ನು ಜಾತೀಯತೆಯ ವಿರುದ್ಧವಾಗಿ ವ್ಯಾಪಕವಾಗಿ ಬಳಸಲಾಯಿತು. ಜಾತೀಯತೆಯ ವಿರುದ್ಧ ಹೋರಾಡುವುದಕ್ಕಾಗಿ ಅವರು ತನ್ನ ಬದುಕನ್ನೇ ಮೀಸಲಾಗಿಟ್ಟರು. ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಜಾತಿ ವ್ಯವಸ್ಥೆಯನ್ನು ಪ್ರಶ್ನಿಸುವಲ್ಲಿ ಅವರ ಈ ಕ್ರಮಗಳು ಯಶಸ್ವಿ ಪ್ರಾಯೋಗಿಕ ವಿಧಾನಗಳಾಗಿದ್ದವು.
ನಾರಾಯಣ ಗುರುಗಳು ಸರಿಯಾದ ಸಮಯದಲ್ಲಿ, ಅಂದರೆ 1904ರಲ್ಲಿ ತನ್ನ ನೆಲೆಯನ್ನು ಶಿವಗಿರಿಗೆ ಬದಲಾಯಿಸಿದರು. ಇಲ್ಲಿ ಅವರು ಸಮಾಜದ ಕೆಳ ವರ್ಗದ ಮಕ್ಕಳಿಗಾಗಿ ಶಾಲೆಯೊಂದನ್ನು ಆರಂಭಿಸಿ ಅವರಿಗೆ ಉಚಿತ ಶಿಕ್ಷಣವನ್ನು ನೀಡಿದರು. ಜಾತಿ ವ್ಯವಸ್ಥೆ ಆಳವಾಗಿ ಬೇರೂರಿದ್ದ ಅಂದಿನ ಕಾಲದಲ್ಲಿ ಇದು ಕ್ರಾಂತಿಕಾರಕ ಹೆಜ್ಜೆಯಾಗಿತ್ತು. ಮಹಾರಾಷ್ಟ್ರದಲ್ಲಿ ಜೋತಿರಾವ್ ಫುಲೆ ದಲಿತರಿಗಾಗಿ ಶಾಲೆಗಳನ್ನು ಆರಂಭಿಸಿದ ಘಟನೆಗೆ ಸಮವಾಗಿತ್ತು.
ಆಧುನಿಕ ಶಿಕ್ಷಣವು ಜಾತಿ ವ್ಯವಸ್ಥೆಯ ವಿರುದ್ಧದ ಹೋರಾಟದಲ್ಲಿ ದೊಡ್ಡ ಪ್ರೇರಕ ಶಕ್ತಿಯಾಗಿದೆ. ಅವರ ಶಾಲೆಯಲ್ಲಿ ಎಲ್ಲ ಜಾತಿಯ ಮಕ್ಕಳಿಗೆ ಪ್ರವೇಶವಿತ್ತು. ಇದು ಆಗ ಅಸ್ತಿತ್ವದಲ್ಲಿದ್ದ ಶಾಲಾ ವ್ಯವಸ್ಥೆಗೆ ತೀರಾ ವಿರುದ್ಧವಾಗಿತ್ತು. ಆ ಕಾಲದ ಬೇರೆ ಶಾಲೆಗಳಿಗೆ ಮೇಲ್ಜಾತಿಗಳ ಮಕ್ಕಳಿಗೆ ಮಾತ್ರ ಪ್ರವೇಶವಿತ್ತು.
ಏಳು ವರ್ಷಗಳ ಬಳಿಕ ನಾರಾಯಣ ಗುರುಗಳು ಅಲ್ಲೂ ಒಂದು ದೇವಸ್ಥಾನವನ್ನು ನಿರ್ಮಿಸಿದರು. ಬಳಿಕ 1912ರಲ್ಲಿ ಮಠವನ್ನೂ ನಿರ್ಮಿಸಿದರು. ಈ ದೇವಸ್ಥಾನ ಮತ್ತು ಮಠಕ್ಕೆ ಎಲ್ಲಾ ಜಾತಿಗಳ ಜನರಿಗೆ ಮುಕ್ತ ಪ್ರವೇಶವಿತ್ತು. ಬಳಿಕ, ಅವರು ಒಂದರ ನಂತರ ಒಂದರಂತೆ ತ್ರಿಶ್ಶೂರ್, ಕಣ್ಣೂರು, ಅಂಚುತೆಂಗು, ತಲಶ್ಶೇರಿ, ಕೋಝಿಕ್ಕೋಡ್ ಮತ್ತು ಮಂಗಳೂರಿನಲ್ಲಿ ದೇವಸ್ಥಾನಗಳನ್ನು ಕಟ್ಟಿಸಿದರು. ಇದು ನಂತರ ಬಂದ ಅಂಬೇಡ್ಕರ್ರ ಕಾಳಾರಾಮ್ ದೇವಸ್ಥಾನ ಪ್ರವೇಶ ಚಳವಳಿಯನ್ನು ನೆನಪಿಸುತ್ತದೆ. ಅಲ್ಲಿಯೂ ಮೇಲ್ಜಾತಿಯ ಜನರು ದಲಿತರ ದೇವಸ್ಥಾನ ಪ್ರವೇಶಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿದ್ದರು.
ನಾರಾಯಣ ಗುರುಗಳ ಪ್ರಯತ್ನಗಳು ಬ್ರಾಹ್ಮಣ್ಯವಾದಿ ವ್ಯವಸ್ಥೆಗೆ ಸವಾಲು ಹಾಕಿದ್ದವು ಹಾಗೂ ಜಾತಿ ವ್ಯವಸ್ಥೆಯ ತಡೆಬೇಲಿಗಳನ್ನು ಮುರಿಯಲು ಮುಂದಾಗಿದ್ದವು. ಅದು ಅಂದು ಚಾಲ್ತಿಯಲ್ಲಿದ್ದ ಜಾತಿ ವ್ಯವಸ್ಥೆಯ ವಿರುದ್ಧದ ಮಹತ್ವದ ಆಂದೋಲನವಾಗಿತ್ತು. ಕೇಂದ್ರ ಸರಕಾರದಲ್ಲಿರುವ ನಮ್ಮ ಹಾಲಿ ಆಡಳಿತ ವ್ಯವಸ್ಥೆಯು, ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಹೊಂದಿದ್ದ ಹಾಗೂ ಬ್ರಾಹ್ಮಣ್ಯವು ಪ್ರಧಾನ ಮತವಾಗಿದ್ದ ಗತ ಕಾಲದ ವೈಭವೀಕರಣದಲ್ಲಿ ತೊಡಗಿದೆ. ಬ್ರಾಹ್ಮಣ್ಯವನ್ನು ವೈದಿಕ ಧರ್ಮ ಅಥವಾ ಸನಾತನ ಧರ್ಮ ಎಂಬುದಾಗಿಯೂ ಕರೆಯಲಾಗುತ್ತದೆ. ಭಾರತದ ಮಹತ್ವದ ಆಧ್ಯಾತ್ಮಿಕ ಸಂಪ್ರದಾಯವನ್ನು ಪ್ರತಿನಿಧಿಸಿದವರು ಶಂಕರಾಚಾರ್ಯರು ಎಂಬುದಾಗಿ ಈಗ ಬಿಂಬಿಸಲಾಗುತ್ತಿದೆ.
ಭಾರತದ ಇತಿಹಾಸವೆಂದರೆ, ಬುದ್ಧ ಪ್ರತಿಪಾದಿಸಿದ ಸಮಾನತೆಯ ವೌಲ್ಯಗಳು ಮತ್ತು ವೈದಿಕ ಬ್ರಾಹ್ಮಣ್ಯ ಅಥವಾ ಅವರೇ ಹೇಳಿಕೊಳ್ಳುವಂತಹ ಸನಾತನ ಧರ್ಮವು ಬೋಧಿಸುವ ಶ್ರೇಣೀಕೃತ ಜಾತಿ ವ್ಯವಸ್ಥೆ ಎನ್ನುವ ವೌಲ್ಯಗಳ ನಡುವಿನ ನಿರಂತರ ಹೋರಾಟವಾಗಿದೆ ಎಂಬುದಾಗಿ ಅಂಬೇಡ್ಕರ್ ಹೇಳುತ್ತಾರೆ. ಈಗ ಬಲಪಂಥೀಯ ಸಿದ್ಧಾಂತವು ಮೇಲುಗೈ ಸಾಧಿಸಿರುವುದರಿಂದ, ಶಂಕರಾಚಾರ್ಯರಿಗೆ ಉದಾತ್ತ ವ್ಯಕ್ತಿತ್ವವನ್ನು ನೀಡಲು ಹಾಗೂ ಬುದ್ಧ ಮತ್ತು ಚಾರ್ವಾಕರಂತಹ ಪ್ರಾಪಂಚಿಕವಾದಿ ಸಂಪ್ರದಾಯಕ್ಕೆ ಸೇರಿದ ಇತರರನ್ನು ಕಡೆಗಣಿಸಲು ಸಂಘಟಿತ ಪ್ರಯತ್ನಗಳು ನಡೆಯುತ್ತಿವೆ.
ಕುತೂಹಲದ ವಿಷಯವೆಂದರೆ, ರಾಜಕೀಯ ಮಟ್ಟದಲ್ಲಿ ಬಿಜೆಪಿಯು ನಾರಾಯಣ ಗುರುಗಳನ್ನು ಮಾನ್ಯ ಮಾಡುತ್ತದೆ. ಆದರೆ ಇದು ಚುನಾವಣಾ ಉದ್ದೇಶಕ್ಕೆ ಹಾಗೂ ಒಂದು ನಿರ್ದಿಷ್ಟ ಮಟ್ಟದಲ್ಲಿ ಮಾತ್ರ. ನೈಜ ಮಾನ್ಯತೆಯನ್ನು ನೀಡುವ ವಿಷಯಕ್ಕೆ ಬಂದಾಗ, ಬಿಜೆಪಿಯು ನಾರಾಯಣ ಗುರುಗಳನ್ನು ಉಪೇಕ್ಷಿಸುತ್ತಾ ಬಂದಿದೆ. ಈ ಬಾರಿ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಕೇಂದ್ರ ಸರಕಾರ ತಿರಸ್ಕರಿಸಿರುವುದು ಇದನ್ನು ಸಾಬೀತುಪಡಿಸುತ್ತದೆ.
ಕೇರಳದ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಕೇಂದ್ರ ಸರಕಾರ ತಿರಸ್ಕರಿಸಿರುವುದು ಒಂದು ರೀತಿಯಲ್ಲಿ ಅಸಮಾನತೆಯ ರಾಜಕೀಯವನ್ನು ಸೂಚಿಸುತ್ತದೆ. ಇಂತಹ ರಾಜಕೀಯವನ್ನು ಬಲಪಂಥೀಯರು ಅನುಸರಿಸುತ್ತಾರೆ. ಕೇಂದ್ರ ಸರಕಾರದ ಈ ನಿರ್ಧಾರವು ರಾಜಕೀಯ ಪ್ರೇರಿತ ಎಂಬುದಾಗಿ ನಾರಾಯಣ ಗುರು ಮಠ ಮತ್ತು ಕೇರಳ ಸರಕಾರ ಭಾವಿಸಿದೆ ಹಾಗೂ ಇದು ಸತ್ಯ ಎಂಬಂತೆಯೂ ಕಾಣುತ್ತದೆ. ಕಾಂಗ್ರೆಸ್ ಮುಂತಾದ ಇತರ ರಾಜಕೀಯ ಪಕ್ಷಗಳೂ ಕೇಂದ್ರ ಸರಕಾರದ ಈ ನಿರ್ಧಾರವನ್ನು ಟೀಕಿಸಿವೆ.
ನಾವು ಶ್ರೇಷ್ಠ ಸ್ತಬ್ಧಚಿತ್ರಗಳನ್ನು ಆರಿಸಬೇಕಾಗಿದೆ; ಹಾಗಾಗಿ, ಈ ನಿರ್ಧಾರವನ್ನು ತೆಗೆದುಕೊಳ್ಳಬೇಕಾಯಿತು ಎಂದು ತೀರ್ಪುಗಾರರ ಮಂಡಳಿ ಹೇಳಿಕೊಂಡಿದೆ. ಈ ತೀರ್ಪುಗಾರರ ಮಂಡಳಿಗೆ ಕಬೀರ್, ನಾರಾಯಣ ಗುರುಗಳಂತಹವರು ಬಹಿಷ್ಕೃತರು. ಅಸ್ಪಶ್ಯತೆ ಮತ್ತು ಜಾತಿ ಅಸಮಾನತೆಗಳ ನಿವಾರಣೆಗೆ ಹೋರಾಡಿದ್ದ ಗಾಂಧೀಜಿ ಭಾರತದ ಸಂತ ಪರಂಪರೆಯಿಂದ ಪ್ರೇರಣೆ ಪಡೆದವರು. ನಾರಾಯಣ ಗುರುಗಳಂತಹ ಉದಾತ್ತ ವ್ಯಕ್ತಿತ್ವಗಳನ್ನು ಗುರುತಿಸಲು ಹಾಗೂ ನಮ್ಮ ರಾಷ್ಟ್ರೀಯ ಸಂಸ್ಕೃತಿಯಲ್ಲಿ ಅವರಿಗೆ ಸಿಗಬೇಕಾದ ಸ್ಥಾನವನ್ನು ನೀಡಲು ಇದು ಸಕಾಲವಾಗಿದೆ.
ಕೃಪೆ : countercurrents.org