varthabharthi


ಅನುಗಾಲ

ಶಾಲೆಯಲ್ಲಿ ಶಾಲೆಂಬ ಅಪಮಾನ

ವಾರ್ತಾ ಭಾರತಿ : 10 Feb, 2022
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಕೇಸರಿ ಶಾಲಿನೊಂದಿಗೆ ಈಗ ಮಹಿಳೆಯರಿಗೆ ಅಪಚಾರವೆಸಗುವುದು ರಾಷ್ಟ್ರೀಯ ದುರಂತ. ನರಭಕ್ಷಣೆಯಿಂದ ಕಿಂಚಿದೂನವಾದ ಈ ಪರಿಯ ಹಿಂಸಾತ್ಮಕ ಬದುಕಿಗೆ ನಾವು ನಮ್ಮ ಮಕ್ಕಳನ್ನು ತರಬೇತುಗೊಳಿಸಿ ಅವರನ್ನು ಹಿಂಸೆಗೆ ಪ್ರಚೋದಿಸಿದರೆ ನಾಳೆ ಅವರೇ ನಮ್ಮ ಮನೆಯಿಂದ ಕಳವು ಮಾಡಿದರೂ, ಹೆತ್ತೊಡಲನ್ನೂ, ಒಡಹುಟ್ಟನ್ನೂ ಲೆಕ್ಕಿಸದೆ ನಮ್ಮ ಮನೆಯ ಹೆಣ್ಣುಮಕ್ಕಳಿಗೆ ಅಪಮಾನವೆಸಗಿದರೆ ಅದನ್ನು ಕೇಸರಿ ಶಾಲಿನಡಿ ಮುಚ್ಚಿಡಬೇಕಾಗುತ್ತದೆ.

ಕರ್ನಾಟಕದ ಕರಾವಳಿಯಲ್ಲಿ ಮತ್ತೆ ಜಾತಿ-ಮತ-ಧರ್ಮದ ಹೆಸರಿನಲ್ಲಿ ದ್ವೇಷ-ವೈಷಮ್ಯ ಭುಗಿಲೆದ್ದಿದೆ. ಸಹನೆ, ಶಾಂತಿಯನ್ನು ಸುಟ್ಟುಹಾಕಲಾಗುತ್ತಿದೆ. ಅದರ ಸೋಂಕು ತಾನು ಹುಟ್ಟಿದ ಪರಿಸರದಲ್ಲಿ ಮಾತ್ರವಲ್ಲ, ಕೊರೋನಕ್ಕಿಂತಲೂ ಭೀಕರವಾಗಿ, ಕಾಳ್ಗಿಚ್ಚಿನಂತೆ, ಸುನಾಮಿಯಂತೆ ರಾಜ್ಯ ಮತ್ತು ದೇಶದೆಲ್ಲೆಡೆ ಹಬ್ಬುವ ಲಕ್ಷಣಗಳಿವೆ. ಸದ್ಯ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಇತ್ಯರ್ಥಕ್ಕಾಗಿ ಕಾದು ಕುಳಿತಿದೆಯಾದರೂ ಕಾನೂನಿನ ಮಿತಿಯನ್ನು ಈ ದೇಶ ಅಯೋಧ್ಯೆಯ ಪ್ರಕರಣದಲ್ಲಿ ಕಂಡಿರುವುದರಿಂದ ಬಹಳಷ್ಟನ್ನು ಆಶಿಸಲಾಗದು. ಬಾಬರಿ ಮಸೀದಿಯ ರಕ್ಷಣೆಯ ಹೊಣೆ ಹೊತ್ತ ಉತ್ತರ ಪ್ರದೇಶದ ಆಗಿನ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ‘ರಾಷ್ಟ್ರೀಯತೆ’ಯ ಹೆಸರಿನಲ್ಲಿ ತನ್ನ ಹೊಣೆಯಿಂದ ನುಣುಚಿಕೊಂಡದ್ದರಿಂದ ಶತಮಾನಗಳ ಕಾಲದ ಒಂದು ಕಟ್ಟಡವನ್ನು ಆಡಳಿತದ ಮೂಗಿನಡಿಯಲ್ಲೇ ನಿರ್ನಾಮ ಮಾಡಲು ಸಾಧ್ಯವಾಯಿತು. ಇದಕ್ಕಾಗಿ ಕಲ್ಯಾಣ ಸಿಂಗ್ ಅನುಭವಿಸಿದ್ದು ನ್ಯಾಯಾಲಯ ನಿಂದನೆಗಾಗಿ ಒಂದು ದಿನದ ಸಾದಾ ಕುಳಿತಿರುವ ಶಿಕ್ಷೆ ಮಾತ್ರ. ಆದರೆ ಮರಣೋತ್ತರವಾಗಿ ಈ ರಾಷ್ಟ್ರವಾದಿಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆದ್ದರಿಂದ ಕಾನೂನೆಂಬುದು ಕತ್ತೆಯೆಂಬ ಮಾತು ಮರೆತುಹೋಗದಂತೆ ಮತ್ತೆ ಮತ್ತೆ ಚರಿತ್ರೆ ನೆನಪಿಸುತ್ತಿದೆ. ಅದು ಯಾವ ಕಡೆಯಿಂದ ಒದೆಯುತ್ತದೆಂದು ಗೊತ್ತಾಗುವುದಿಲ್ಲವೆಂಬ ಅನುಕೂಲದ ಹೊರಾರ್ಥಕ್ಕಿಂತಲೂ ಅದು ಎಂದಿಗೂ ಕುದುರೆಯಾಗಲಾರದು ಎಂಬ ಒಳಾರ್ಥ ಹೊರಹೊಮ್ಮುತ್ತದೆ.

ಯಾರು ಸರಿ ಯಾರು ತಪ್ಪುಎಂಬುದನ್ನು ನ್ಯಾಯಾಲಯವು ನಿರ್ಧರಿಸುತ್ತದೆ. ಬಹುಜನ ಹಿತಾಯ ಬಹುಜನ ಸುಖಾಯ ಜನೋಕ್ತಿಯಾಗಿದ್ದದ್ದು ಈಗ ರಾಜಕಾರಣಿಗಳ ಬೀಜಮಂತ್ರವಾಗಿರುವುದರಿಂದ ಉಳಿದವರು ಎಲ್ಲಿಗೆ ಹೋಗಬೇಕು ಹೇಗೆ ಬದುಕಬೇಕು ಎಂಬುದನ್ನು ಬಹುಜನರು ತೀರ್ಮಾನಿಸುವುದೇ ಈ ದೇಶದ ಹಣೆಬರಹವಾಗಿದೆ. ಇದರ ಫಲಾಫಲಗಳನ್ನು ಅಳೆದು ತೂಗಿ ನಿರ್ಣಯಿಸುವ ವಿವೇಕ ಸಮಾಜಕ್ಕೆ ಇಲ್ಲವಾಗಿದೆ. ಬದುಕುವುದು ಬದುಕಗೊಡುವುದು ಮಾನವತ್ವದ ಮತ್ತು ಮಾನವೀಯತೆಯ ಮೂಲವೆಂಬುದು ಕಾಲೋಶದಲ್ಲಿ ಅಡಗುವುದು ಅನಿವಾರ್ಯ.

ಭಾರತೀಯತೆಯೆಂಬ ವೈಭವೀಕರಿಸಿದ ಪದವೊಂದು ನಮ್ಮಲ್ಲಿದೆ. ಅದರ ಹತ್ತಾರು ಸ್ವಯಂಭೂ ಲಕ್ಷಣಗಳಲ್ಲಿ ಮಹಿಳೆಯರನ್ನು ಗೌರವಿಸುವುದೂ ಒಂದು. ರಾಷ್ಟ್ರವಾದಿಗಳು ತಮ್ಮ ಭೀಷಣ ಭಾಷಣಗಳ ರಕ್ತಕ್ರಾಂತಿಯನ್ನು ಆರಂಭಿಸುವುದೇ ‘ಶ್ರದ್ಧೆಯ ಮಾತೆಯರೇ..’ ಎಂಬ ಪದಗಳಿಂದ. ಇಲ್ಲಿ ಮಾತೆಯರು ಎಂದರೆ ಹೆತ್ತವರು ಎಂದರ್ಥವಲ್ಲ. ಬದಲಿಗೆ ‘ಮಾತೃವತ್ ಪರದಾರೇಶು’ ಎಂಬ ಸಂಕೇತದ ಹಾಗೆ ಎಲ್ಲ ಸ್ತ್ರೀಸಮಾಜ. ‘‘ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ!’’ ‘‘ಎಲ್ಲಿ ಸ್ತ್ರೀಯರನ್ನು ಗೌರವಿಸುತ್ತಾರೋ ಅಲ್ಲಿ ದೇವತೆಗಳೂ ಸಂತೋಷಪಡುತ್ತಾರೆ’’ ರಾಷ್ಟ್ರವಾದಿಗಳು ವಿವೇಕಾನಂದರ ಮಾತುಗಳನ್ನು ಉಲ್ಲೇಖಿಸುತ್ತಲೇ ಇರುತ್ತಾರೆ: ‘‘ವಿಶ್ವದ ಬೇರೆಲ್ಲೆಡೆ ತನ್ನ ತಾಯಿಯನ್ನು ಹೊರತುಪಡಿಸಿ ಇನ್ನೆಲ್ಲ ಸ್ತ್ರೀಯರನ್ನು ಪತ್ನಿಯಂತೆ ನೋಡಿದರೆ, ಭಾರತ ಮಾತ್ರ ತನ್ನ ಪತ್ನಿಯನ್ನುಳಿದು ಇನ್ನೆಲ್ಲ ಸ್ತ್ರೀಯರನ್ನು ತಾಯಿಯಂತೆ ನೋಡುವ ಸಂಸ್ಕೃತಿಯನ್ನು ಆವಾಹಿಸಿಕೊಂಡಿದೆ.’’ ಇಂತಹ ಮಾತುಗಳನ್ನು ಆಡುತ್ತಲೇ ಮನೆಗೆ ಬೆಂಕಿಯನ್ನಿಡುವ ತಂತ್ರಕ್ಕೆ ಸ್ವತಃ ಸೃಷ್ಟಿಕರ್ತನೇ ‘ಅರೆ! ಬೆತ್ತಲೆ ಮನುಷ್ಯ ಇಷ್ಟೊಂದು ಬಣ್ಣಗಳನ್ನು ಹಚ್ಚಿಕೊಳ್ಳಬಲ್ಲನೇ!’ ಎಂದು ಬೆರಗಾಗಬೇಕು! ನಮ್ಮ ಜಾತ್ಯತೀತ ರಾಜಕಾರಣಿಯೊಬ್ಬರು ‘‘ಮಕ್ಕಳನ್ನು ರಾಜಕೀಯಕ್ಕೆ ತಳ್ಳಬೇಡಿ’’ ಎಂದರು. ಅವರವರ ಮಕ್ಕಳನ್ನು ರಾಜಕೀಯಕ್ಕೆಳೆದುಕೊಂಡು ಉಳಿದವರನ್ನು ಬಾವಿಗೆ ತಳ್ಳಿ ಆಳ ನೋಡುವುದರೊಂದಿಗೆ ನಮ್ಮದೇ ಮಕ್ಕಳನ್ನೂ ಬಾವಿಗೆ ತಳ್ಳುತ್ತಿರುವುದು ಹೊಸ ಭಾರತೀಯ ರಾಜಕಾರಣ. ಮಣ್ಣಿನ ಮುದ್ದೆಯನ್ನು ದೇವತೆಯಾಗಿಯೂ ರಾಕ್ಷಸನಾಗಿಯೂ ತಿದ್ದಬಹುದು. ಅದೊಂದು ರೂಪು ತಾಳಿದಾಗಲೇ ಅದರ ಲಕ್ಷಣಗಳು ಗೊತ್ತಾಗುವುದು. ಸಿನೆಮಾ, ನಾಟಕ, ಕಥೆ-ಕಾದಂಬರಿಗಳಲ್ಲಿ (ಮತ್ತು ಅದರ ಪ್ರತಿಬಿಂಬವಾದ ನಿಜಜೀವನದಲ್ಲಿ) ಮಕ್ಕಳನ್ನು ಕುರುಡುಮಾಡಿ ಭಿಕ್ಷೆಗೆ ಬಳಸುವುದನ್ನು ಓದಿದ್ದೇವೆ; ಕೇಳಿದ್ದೇವೆ. ಆದರೆ ಈಗ ಶಿಕ್ಷಣ ಸಂಸ್ಥೆಯಲ್ಲಿ ನಡೆಯುತ್ತಿರುವುದು ಅದಕ್ಕಿಂತಲೂ ಭೀಕರವಾದದ್ದು.

 ವಾಸ್ತವಕ್ಕೆ ಬರೋಣ: ವಿಷಯ ತೀರ ಚಿಕ್ಕದು. ಕೆಲವು ಮುಸ್ಲಿಮ್ ಹೆಣ್ಣು ಮಕ್ಕಳು ‘ಹಿಜಾಬ್’ ಎಂಬ ತಲೆವಸ್ತ್ರವನ್ನು ಧರಿಸಿ ಶಾಲೆಗೋ ಕಾಲೇಜಿಗೋ ಹೋಗುತ್ತಾರೆ. ಶಿಕ್ಷಣ ಸಂಸ್ಥೆಯೆಂದರೆ ಮಿನಿಸಮಾಜ. ಸಮಾಜದಲ್ಲಿ ನಾವು ಏನನ್ನು ಬಯಸುತ್ತೇವೋ ಅದು ಶಾಲೆಗಳಿಂದ ಆರಂಭವಾಗಬೇಕು. ‘ಮನೆಯೆ ಮೊದಲ ಪಾಠಶಾಲೆ’ ಎಂದದ್ದು ‘ಆನ್‌ಲೈನ್’ ಪಾಠಗಳಿಗಲ್ಲ. ಈ ಹೊಸ ಪದ್ಧತಿ ಆರಂಭವಾಗುವುದಕ್ಕೆ ಎಷ್ಟೋ ದಶಕಗಳ ಮೊದಲೇ ಒಬ್ಬ ಪುಣ್ಯಾತ್ಮ ಬರೆದ ಸಾಲು ಅದು. ಮನೆಯಲ್ಲೇ ನಿಜಶಿಕ್ಷಣದ ಓಂನಾಮ ಆರಂಭವಾಗುವುದು ತಾಯಿಯಿಂದ ಎಂಬ ರೂಪಕ. ತಂದೆಯಿಂದ ಎಂಬ ಬಳಕೆಯಿಲ್ಲ. ಹೇಳುವವಳು ಸ್ತ್ರೀ. ಕೇಳುವವರು ಪುಟ್ಟ ಮಕ್ಕಳು. ಹಿಂದೆ ಅಂದರೆ ಸ್ವತಂತ್ರ ಭಾರತದಲ್ಲೇ ಮೊದಲ ಪಾಠಗಳಲ್ಲಿ ಚಿತ್ರಸಹಿತ ಕಥೆಗಳಿದ್ದವು. ಒಂದಕ್ಕಿಂತ ಹೆಚ್ಚು ವ್ಯಕ್ತಿಗಳಿದ್ದರೆ ಒಬ್ಬ ಹಿಂದೂ, ಒಬ್ಬ ಮುಸ್ಲಿಮ್, ಒಬ್ಬ ಕ್ರೈಸ್ತ ಹುಡುಗನಿರುತ್ತಿದ್ದ. ಇದು ಹೀಗೇ ಯಾಕೆ? ಹಿಂದೂಗಳು ಶೇ. 80 ಇದ್ದಾರಲ್ಲ, ಮುಸ್ಲಿಮರು ಶೇ. 20 ಮಾತ್ರ ಎಂದು ಯಾರೂ ಕೇಳುತ್ತಿರಲಿಲ್ಲ. ನಮ್ಮ ನಾಟಕ, ಸಿನೆಮಾಗಳೂ ಉದಾತ್ತ ಜೀವಿಗಳ ಉದಾರ ಪ್ರಸಂಗಗಳನ್ನು ರಂಗದಿಂದ ಸಮಾಜಕ್ಕೆ ನೀಡುತ್ತಿದ್ದವು. ನಮ್ಮನ್ನಾಳುವವರು ಇಲ್ಲವೇ ನಮ್ಮ ಬದುಕಿಗೆ ತಾವು ಹೊಣೆಯೆಂದು ತಿಳಿದ ಸಜ್ಜನರು, ವಿವಿಧತೆಯಲ್ಲಿ ಏಕತೆಯ ಕಲ್ಪನೆ ಮತ್ತು ಆಶಯದೊಂದಿಗೆ ಎಲ್ಲವನ್ನೂ ಎಳವೆಯಿಂದಲೇ ಕಟ್ಟಬಹುದೆಂಬ ಕನಸನ್ನು ಸಾಕಾರಗೊಳಿಸಲು ಪ್ರಯತ್ನಿಸುತ್ತಿದ್ದರು. ಪ್ರಾಯಃ ಕಳೆಯುತ್ತಿರುವ ತಲೆಮಾರು ಇಂತಹ ಪುಣ್ಯದ ಕೊನೆಯ ಕೊಂಡಿಯೆಂದು ಅನಿಸುತ್ತಿದೆ.

ನಮ್ಮ ಶಾಲಾ ಮಕ್ಕಳನ್ನು ಒಂದೇ ಕಡೆ ಕೂರಿಸಿ ಪಾಠ ಹೇಳುವುದು ಅನುಕೂಲಕ್ಕಾಗಿ ಎಂದುಕೊಳ್ಳಬಹುದು. ಆದರೆ ಇದರ ಹಿಂದಣ ಚಿಂತನೆ ಅವರನ್ನು ಉತ್ತಮ ಸಮಾಜಜೀವಿಗಳಾಗಿಸುವುದು. ಪರಸ್ಪರರ ಕಷ್ಟಸುಖಗಳಲ್ಲಿ ಭಾಗಿಯಾಗಿಸುವುದು. ಭಿನ್ನ ಭಾಷೆ, ಜಾತಿ, ಮತ, ಧರ್ಮ, ಸಂಸ್ಕೃತಿ, ಆಚಾರಗಳ ಹಿನ್ನೆಲೆಯಿಂದ ಬರುವ ಮಕ್ಕಳು ಒಂದೆಡೆ ಸೇರಿ ಸಮಸೂತ್ರವಲ್ಲದಿದ್ದರೂ ಸಾಮರಸ್ಯದ ಎಳೆಗಳನ್ನು ಹಿಡಿಯಲು ಅವಕಾಶಮಾಡಿಕೊಡುವುದು. ಸದ್ಭಾವನೆಯ ಸ್ವಲ್ಪಬೋಧನೆಯೊಂದಿಗೆ ಈ ಪಾಠ ಅವರ ಮನಸ್ಸು, ಬುದ್ಧಿ ಮತ್ತು ಮೆದುಳನ್ನು ಆಕರ್ಷಿಸಿ ಅವರನ್ನು ದೇಶದ ಮತ್ತು ಇನ್ನೂ ಮುಖ್ಯವಾಗಿ ವಿಶ್ವದ ಸತ್ಪ್ರಜೆಗಳನ್ನಾಗಿಸುವುದು. ಇದು ವರ್ತಮಾನಕ್ಕೆ ಮಾತ್ರವಲ್ಲ, ಭವಿಷ್ಯಕ್ಕೂ ಹಿತವಾಗಿ ಸಮಾಜವು ವಿಕಾಸಗೊಳ್ಳುತ್ತ ಹೋಗುವುದಕ್ಕೆ ಅನುವು ಮಾಡಿಕೊಡುವುದು. ಬದುಕು ಒಂಟಿ ಜೀವನವಲ್ಲ, ‘ತಂಡದಾಟ’ (Team Game) ಎಂಬುದನ್ನು ಶ್ರುತಗೊಳಿಸುವುದು. ರಾಷ್ಟ್ರಧ್ವಜ ವಂದನೆಯೊಂದಿಗೆ ಶಾಲೆ ಆರಂಭವಾಗುವುದೂ ಇದಕ್ಕೇ. ಪ್ರಜೆಗಳಿಲ್ಲದೆ ರಾಷ್ಟ್ರವಿಲ್ಲ. ನಮ್ಮ ರಾಷ್ಟ್ರಧ್ವಜದ ಮೂರು ಬಣ್ಣಗಳು ತ್ಯಾಗ, ಶಾಂತಿ, ಸಮೃದ್ಧಿಯನ್ನು ಸಂಕೇತಿಸುತ್ತವೆ ಮಾತ್ರವಲ್ಲ, ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತವೆ. ಹಾಗೆಯೇ ಪರಸ್ಪರ ಜೋಡಣೆಯೊಂದಿಗೆ ಬದುಕುವುದನ್ನು ಹೇಳುತ್ತವೆ. ಬಿಳಿ ಬಣ್ಣವಂತೂ ಏಳು ಬಣ್ಣಗಳ ಸಂಗಮವೆಂಬುದು ಕವಿವಾಣಿ ಮಾತ್ರವಲ್ಲ ವೈಜ್ಞಾನಿಕ ಸತ್ಯವೂ ಹೌದು.

ಇದೆಲ್ಲ ಬದಲಾಗುತ್ತಿದೆ. ಬದಲಾವಣೆಯೆಂದರೆ ಕುಸಿಯುತ್ತ ಹೋಗುವುದು ಎಂಬಂತಿದೆ. ಹೌದು: ಬದುಕಿನಲ್ಲೂ ಒಂದು ಹಂತದ ಆನಂತರ ಜೀವಕೋಶಗಳ ಸೃಷ್ಟಿ ನಿಂತುಹೋಗುತ್ತದಂತೆ. ಯಯಾತಿಯ ಹಾಗೆ ಯೌವನವನ್ನು ಕಡಪಡೆಯುವ ಕಾಲ ಕಳೆಯಿತು. ಒಂದು ತಲೆಗೂದಲು ಬೆಳ್ಳಗಾದರೂ ವಿರಕ್ತಿಗೊಂಡು ಲೌಕಿಕದಿಂದ ದೂರವಾಗುವ ಕಾಲವೂ ಕಳೆಯಿತು. ಸ್ವಯಂಪ್ರಭೆಯ ಸಾವಿನೊಂದಿಗೆ ಬದುಕಿನ ನಶ್ವರತೆಯನ್ನು ಅರ್ಥಮಾಡಿಕೊಳ್ಳುವ ವೃಷಭದೇವರು ನಾವಲ್ಲ. ನಾವೇನಿದ್ದರೂ ಫಾಸ್ಟಸ್‌ನಂತೆ ಬದುಕನ್ನು ‘ಅನುಭವಿಸಲು’ ಇರುವವರು. ಅದಕ್ಕಾಗಿಯೇ ಮಾನಸಿಕ, ದೈಹಿಕ ವ್ಯಾಯಾಮದಂತಹ ಅನಿವಾರ್ಯಗಳು ಅಭ್ಯಾಸಕ್ಕೆ ಬೆಳೆದುಬಂದವು.

ಆದರೆ ದುರಂತವೆಂದರೆ ಅಜ್ಞಾನ, ಅಧಿಕಾರ ಮತ್ತು ಅಹಂಕಾರಗಳು ಆಡಳಿತದಲ್ಲಿ ಸಮ್ಮಿಳಿತಗೊಳ್ಳುವುದು. ಇದರ ಫಲಶ್ರುತಿಯೆಂದರೆ ಮಗುವನ್ನು ರಕ್ಷಿಸಲು ಅದನ್ನು ಎತ್ತಿಹಿಡಿಯುವ ಮಂಗ ನೀರಿನ ಮಟ್ಟ ಏರುತ್ತ ಬಂದಂತೆ ಅದನ್ನು ಅಡಿಗೆ ತಳ್ಳಿ ತಾನು ಪಾರಾಗುವ ಚಿಂತನೆ ನಡೆಸಿದಂತೆ ನಾವು ನಮ್ಮ ಮಕ್ಕಳ ತಲೆಯ ಮೇಲೆ ನಿಂತು ನಮ್ಮನ್ನು ಎತ್ತರಿಸಿಕೊಳ್ಳುತ್ತಿದ್ದೇವೆ. ಅವರನ್ನು ಬಲಿಗೊಟ್ಟು ಜನರಿಂದ ಆಯ್ಕೆಯನ್ನು ಬಯಸುತ್ತೇವೆ.

ಸದಾಶಯದ ಸಮಾಜವನ್ನು ನಮ್ಮ ಮುಂದಿನ ಪೀಳಿಗೆಗೆ ಕಟ್ಟಿಕೊಡುವ ಬದಲು ನಾವು ಮಕ್ಕಳ ಸಮಾಧಿಯನ್ನು ಕಟ್ಟಿಕೊಡುತ್ತೇವೆ. ಕೇಸರಿ-ಬಿಳಿ-ಹಸಿರಿನ ರಾಷ್ಟ್ರಧ್ವಜವನ್ನು ಈಗಾಗಲೇ ಮೂರು ತುಂಡುಗಳಾಗಿ ಬೇರ್ಪಡಿಸಲಾಗಿದೆ ಅಥವಾ ಬಿಳಿ ಮತ್ತು ಹಸಿರಿಗೆ ಕೇಸರಿ ಬಣ್ಣ ಬಳಿಯುವ ಮಹತ್ವದ ಪ್ರಯತ್ನ ಗಳಾಗುತ್ತಿವೆ. ನಿಜಕ್ಕೂ ಈ ಪ್ರಯತ್ನದ ಸರದಾರರೇ ಈ ದೇಶದ ‘ತುಕುಡೇ ತುಕುಡೇ ಗ್ಯಾಂಗ್!’

ಮತ್ತೆ ಸನಿಹದ ವಿಚಾರ-ವಸ್ತುವಿಗೆ ಬರುವುದಾದರೆ- ಹಿಜಾಬ್ ಧರಿಸಿದ್ದಕ್ಕೆ ಬಹುಜನರೆಂದುಕೊಳ್ಳುವ ಹಿಂದುತ್ವಧಾರಿಗಳು (ಈ ಪದವನ್ನು ಉದ್ದೇಶಪೂರ್ವಕವಾಗಿ, ಪ್ರಜ್ಞಾಪೂರ್ವಕವಾಗಿ ಬಳಸಿದ್ದೇನೆ. ಸಾಂದರ್ಭಿಕವಾಗಿ ಧರಿಸುವವರು ಧಾರಿಗಳು. ವ್ರತಧಾರಿಗಳು, ವೇಷಧಾರಿಗಳು ಎಂಬಂತೆ. ವಿವೇಕಾನಂದರ ವೇಷತೊಟ್ಟವರೆಲ್ಲ ವಿವೇಕಾನಂದರಾಗುವುದಿಲ್ಲ; ಹಾಗೆಯೇ ಕಾವಿ ಧರಿಸಿದವರೆಲ್ಲ ಯೋಗಿಗಳಾಗುವುದಿಲ್ಲ. ರತ್ನಾಕರ ವರ್ಣಿ ಹೇಳಿದಂತೆ ಮೊಲೆಯಮೇಲಿರ್ಪ ಯೋಗಿಗಳುಂಟು, ಆಲದೆಲೆಯ ಮೇಲಿರ್ಪ ಭೋಗಿಗಳುಂಟು.) ಶಾಲನ್ನು ಸನ್ಮಾನಿಸಲು ಬಳಸುತ್ತಿದ್ದರು. ಅಪಮಾನಿಸಲು ಅಲ್ಲ. ನಾನು ತಿಳಿದಂತೆ ಈ ಶಾಲು ಕೇಸರಿಯಾದದ್ದು ಇತ್ತೀಚೆಗೆ. ಹಿಂದೆಲ್ಲ ಬಿಳಿ ಅಥವಾ ಇತರ ಬಣ್ಣದಲ್ಲಿರುತ್ತಿತ್ತು ಮತ್ತು ಅದು ದೈಹಿಕ ಶ್ರಮದ ಸಂಕೇತವಾಗಿರುತ್ತಿತ್ತು. ಸಾದಾ ಇಲ್ಲವೇ ಚೌಕುಳಿಯ ಚಿತ್ರಗಳನ್ನು ಹೊಂದಿರುತ್ತಿತ್ತು. ರೈತರ ಸಂಕೇತವಾಗಿ ಮೊದಲಿಗೆ ಹಸಿರು ಶಾಲು/ಟವೆಲ್ ಬಳಕೆಯಾಯಿತು. ವೈದಿಕರಿಗೆ, ಪುರೋಹಿತರಿಗೆ ಬ್ರಹ್ಮವಸ್ತ್ರವು ಬ್ರಾಹ್ಮಣ್ಯದ ಬ್ರಹ್ಮಾಸ್ತ್ರವಾಗಿರುತ್ತಿತ್ತು. ಅದೆಂದೂ ಶಿಕ್ಷಣದ, ಅಧ್ಯಯನದ, ಸಂಕೇತವಾಗಿರಲಿಲ್ಲ.

ಆದರೆ ದುರದೃಷ್ಟವಶಾತ್ ಇದು ರಾಜಕೀಯದ ದಾಳವಾಗಿದೆ. ಕಾವಿ ತೊಟ್ಟವರು ಕಾಡಿಗೋ ಹಿಮಾಲಯಕ್ಕೋ ಹೋಗುತ್ತಾರೆಂದು ನಿರೀಕ್ಷಿಸಿದರೆ, ಅವರಲ್ಲಿ ಬಹುಪಾಲು ಅದನ್ನು ಐಹಿಕ ಬದುಕಿನ ಸುಖಕ್ಕೆ ಮತ್ತು ಧನಸಂಗ್ರಹಕ್ಕೆ, ಪ್ರತಿಷ್ಠೆಗೆ ಬಳಸುತ್ತಿದ್ದಾರೆ. ಕೆಲವರು ಸಕ್ರಿಯ ರಾಜಕಾರಣಿಗಳೋ ಅಥವಾ ಅವರ ಮರಿಗೂಂಡಾಗಳೋ ಆಗುತ್ತಿದ್ದಾರೆ. ಆದರೆ ಮಕ್ಕಳ ಮೇಲೆ ಇದು ಪ್ರಯೋಗವಾಗುತ್ತಿರುವುದು ಇದೇ ಮೊದಲು ಇರಬಹುದು. ಕೇಸರಿ ಶಾಲನ್ನು ಧರಿಸಿ ಶಾಲೆಗೆ ಹೋಗಲು ಆದೇಶವನ್ನು ಹೊತ್ತು ಹೊರಟವರಿಗೆ ಶಾಲಿನ ಮಾನಾಪಮಾನಗಳು ಗೊತ್ತಿಲ್ಲ. ಮಕ್ಕಳು ಶಾಲೆಗೆ ಹೋಗಬೇಕಾದರೆ ತಮ್ಮ ಪುಸ್ತಕ, ಪೆನ್ನು, ಚೀಲ, (ಕೆಲವರಿಗೆ ಊಟದ ಬುತ್ತಿ) ಇವುಗಳ ಕಡೆಗೆ ಗಮನಕೊಡುತ್ತಾರೆಯೇ ವಿನಾ ತಮ್ಮ ಧಿರಿಸಿನ ಮೇಲೆ ಶಾಲು ಹಾಕುವ ಯೋಚನೆ ಅವರಿಗೆ ಕನಸಿನಲ್ಲೂ ಮೂಡುವುದಿಲ್ಲ. ಹಾಗಾದರೆ ಈ ಶಾಲಿನ ಹಠ ಹೇಗೆ ಮೂಡಿತು?

ಇದು ಸಂಸ್ಕಾರವನ್ನು, ರಾಷ್ಟ್ರೀಯತೆಯನ್ನು ಹೇಳಿಕೊಡುವ ಆಖಾಡಗಳ ನೇಪಥ್ಯಗೀತೆಗಳು. ವಸುಧೈವ ಕುಟುಂಬಕಂ ಎಂದು ಹೇಳುವುದರೊಂದಿಗೆ ಒಗ್ಗಟ್ಟಿನ ಬದಲು ದ್ವೇಷವನ್ನು, ಸಂಕುಚಿತ ಮನೋಭಾವವನ್ನು, ಅಗತ್ಯ ಬಿದ್ದಾಗ ಗೂಂಡಾಗಿರಿಯನ್ನು ಮಾಡುವುದನ್ನು ಹೇಳಿಕೊಡಲಾಗುತ್ತದೆ. ಉದ್ಯೋಗ, ಹಿರಿಯರಿಗೆ ಗೌರವ ಕೊಡುವುದು, ಜಾತಿ-ಮತ-ಧರ್ಮ-ಭಾಷೆ ಇವು ಬದುಕಿಗೆ ಅನುಷಂಗಿಕವಾಗಿ ಪ್ರಾಪ್ತವಾಗುವ ಜೋಡಣೆಗಳು ಎಂಬುದನ್ನು ಹೇಳದೆ ಸೂರ್ಯನಿಗೆ ಮುಖಮಾಡಿ ಅದರ ಬೆಳಕನ್ನು ಸವಿಯದೆ ಅದರಿಂದ ಬೆಂಕಿಹಚ್ಚುವುದು ಹೇಗೆಂಬುದನ್ನು ಕಲಿಸುವುದು ರಾಷ್ಟ್ರೀಯತೆಯಾಗುತ್ತಿದೆ. ಶಿಕ್ಷಣದ ಪ್ರಾಮುಖ್ಯತೆ ಗೊತ್ತಿರಬೇಕಾದರೆ ಹೇಳಿಕೊಡುವವರು ವಿದ್ಯಾವಂತರಲ್ಲದಿದ್ದರೂ ಬುದ್ಧಿವಂತರಾಗಿರಬೇಕು, ಸಾಧ್ಯವಾದರೆ ವಿವೇಕಿಗಳೂ ಆಗಿರಬೇಕು. ಕೇಸರಿಶಾಲಿನೊಂದಿಗೆ ಈಗ ಮಹಿಳೆಯರಿಗೆ ಅಪಚಾರವೆಸಗುವುದು ರಾಷ್ಟ್ರೀಯ ದುರಂತ. ನರಭಕ್ಷಣೆಯಿಂದ ಕಿಂಚಿದೂನವಾದ ಈ ಪರಿಯ ಹಿಂಸಾತ್ಮಕ ಬದುಕಿಗೆ ನಾವು ನಮ್ಮ ಮಕ್ಕಳನ್ನು ತರಬೇತುಗೊಳಿಸಿ ಅವರನ್ನು ಹಿಂಸೆಗೆ ಪ್ರಚೋದಿಸಿದರೆ ನಾಳೆ ಅವರೇ ನಮ್ಮ ಮನೆಯಿಂದ ಕಳವು ಮಾಡಿದರೂ, ಹೆತ್ತೊಡಲನ್ನೂ, ಒಡಹುಟ್ಟನ್ನೂ ಲೆಕ್ಕಿಸದೆ ನಮ್ಮ ಮನೆಯ ಹೆಣ್ಣುಮಕ್ಕಳಿಗೆ ಅಪಮಾನವೆಸಗಿದರೆ ಅದನ್ನು ಕೇಸರಿ ಶಾಲಿನಡಿ ಮುಚ್ಚಿಡಬೇಕಾಗುತ್ತದೆ.

ಮುಖ್ಯ ನೆನಪಿಡಬೇಕಾದದ್ದು: ಶಾಲೆಯ ಗಂಟೆ ದೇವಾಲಯದ ಗಂಟೆಗಿಂತ ಮುಖ್ಯ. ಜ್ಞಾನದ ಬೆಳಕು ನೀಡುವ ಪ್ರಭೆಯನ್ನು ಅವಿವೇಕದ ಬೆಂಕಿ ನೀಡದು. ಶಾಲೆಯನ್ನು ಕೆಡವಿ ಮೂರ್ತಿ ಸ್ಥಾಪನೆಯಾದರೆ ಅದು ಯೇಸುವಿನ ಬದಲು ಗರಿಬಾಲ್ಡಿಯ ದೇಗುಲವಾದೀತು. ಬಸನವಣ್ಣನ ಮೂರ್ತಿಯನ್ನು ಸ್ಥಾಪಿಸಿದರೂ ಆತನ ಕಾಲದ ಕೊನೆ ಮತ್ತೊಮ್ಮೆ ಪ್ರದರ್ಶಿತವಾದೀತು. ಈ ದೇಶದ ಪ್ರತಿಮಾ ಲೋಕ ಈ ಎಲ್ಲ ಕೇಡುಗಳನ್ನು ತುಂಬಿಕೊಂಡು ಎಂತಹ ರಾಮರಾಜ್ಯವನ್ನು ಸ್ಥಾಪಿಸೀತು? ಅದು ಕ್ಷತ್ರಿಯ ರಾಮನ ರಾಜ್ಯವಾಗಿರದು; ಬದಲಿಗೆ ಚತುರ್ವೇದಗಳನ್ನೋದಿದ ರಾವಣ ರಾಜ್ಯವಾದೀತು. ರಾಮಾನುಜಾಚಾರ್ಯರು ತಮ್ಮದೇ ಪಂಥದ ತೆಂಕಲೈ ಬಡಗಲೈಗಳಿಗೆ ಉತ್ತರಿಸುತ್ತ ‘ಸಮಾನತೆೆ’ಯನ್ನು ಮರೆತು ತಮ್ಮ ಹಣೆಗೇ ಮೂರು ನಾಮ ಹಾಕಿಕೊಂಡು ಚಿಂತಾಕ್ರಾಂತರಾಗಿ ಕೂತಿರಬೇಕಾದೀತು. ಸರದಾರ ಪಟೇಲರು ‘ಏಕತೆ’ಯ ಸಂಕೇತವಾಗುವ ಬದಲು ‘ಒಂಟಿ’ತನದ, ‘ಏಕಾಂಗಿ’ತನದ ಸಂಕೇತವಾಗಿ ಉಳಿದಾರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)