ವಿಚಾರಣಾಧೀನ ಕೈದಿಗಳ ಭವಿಷ್ಯಕ್ಕೊಂದು ಹೊಸ ಮಾರ್ಗ
ದ.ಕ. ಜಿಲ್ಲಾ ಕಾರಾಗೃಹ ಬಂಧಿಗಳಿಗೆ ಕೌಶಲ್ಯ ತರಬೇತಿ
ಮಂಗಳೂರು : ಆರೋಪಿಗಳಿಗೆ ಶಿಕ್ಷೆಯ ತಾಣ ಎಂದೇ ಬಹುತೇಕವಾಗಿ ಬಿಂಬಿತವಾಗಿರುವ ಜೈಲಿನಲ್ಲೂ ಕೈದಿಗಳು ಮನಪರಿ ವರ್ತನೆಯೊಂದಿಗೆ ಭವಿಷ್ಯಕ್ಕೊಂದು ಬದುಕಿನ ಕಲೆಯನ್ನು ರೂಪಿಸಿಕೊಳ್ಳಬಹುದೆಂಬ ನಿಟ್ಟಿನಲ್ಲಿ ದ.ಕ. ಜಿಲ್ಲಾ ಕಾರಾಗೃಹ ವಿನೂತನ ಹೆಜ್ಜೆ ಇರಿಸಿದೆ.
ವಿಚಾರಣಾಧೀನ ಕೈದಿಗಳನ್ನು ಹೊಂದಿರುವ ಮಂಗಳೂರು ಕೊಡಿಯಾಲ್‌ಬೈಲ್‌ನ ಜಿಲ್ಲಾ ಕಾರಾಗೃಹದಲ್ಲಿ ಕಳೆದ ಸುಮಾರು 2 ವಾರಗಳಿಂದೀಚೆಗೆ ಆಸಕ್ತ ಕೈದಿಗಳಿಗೆ ಕೃಷಿ, ಕರಕುಶಲ ಸೇರಿ ದಂತೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಕಾರ್ಯ ಜಿಲ್ಲಾ ಕಾರಾಗೃಹ ಅಧೀಕ್ಷಕರು ಬಿ.ಟಿ.ಓಬಳೇಶಪ್ಪ ಮುಂದಾಳತ್ವ ಹಾಗೂ ಸ್ಥಳೀಯ ಕೆಲ ಸಮಾಜಮುಖಿ ಸಂಸ್ಥೆಗಳ ಸಹಕಾರದಲ್ಲಿ ನಡೆಯುತ್ತಿದೆ. ಜೈಲಿನಲ್ಲಿರುವ ಸುಮಾರು 40 ಮಂದಿ ಆಸಕ್ತ ವಿಚಾರಣಾ ಧೀನ ಕೈದಿಗಳ ಮೂಲಕ ಈ ಕೌಶಲ್ಯಾಭಿವೃದ್ಧಿ ತರಬೇತಿಯಡಿ ಈಗಾಗಲೇ ಕಣ್ಮನ ಸೆಳೆಯುವ ಹೂವಿನ ಹಾರಗಳು ಸಿದ್ಧಗೊಂಡಿವೆ. ಆಲಂಕಾರಿಕ ಗಿಡಗಳ ನಾಟಿ ನಡೆದಿದೆ. ಜತೆಯಲ್ಲೇ ಪ್ಲೈವುಡ್‌ನಿಂದ ತಯಾರಿಸಲ್ಪಡುವ ಕರಕುಶಲ ವಸ್ತುಗಳ ತಯಾರಿಯ ತರಬೇತಿ ಕಾರ್ಯ ನಡೆಯುತ್ತಿದೆ.
ಜಿಲ್ಲಾ ಕಾರಾಗೃಹದಲ್ಲಿ 5 ಮಂದಿ ಮಹಿಳೆಯರು ಸೇರಿ 263 (ಫೆ. 8ರಂದು) ವಿಚಾರಣಾಧೀನ ಕೈದಿಗಳಿದ್ದು, ಸುಮಾರು 40 ಮಂದಿ ಕೌಶಾಲ್ಯಾಭಿವೃದ್ಧಿ ತರಬೇತಿ, ವಸ್ತುಗಳ ತಯಾರಿ, ಕೃಷಿ ಬಗ್ಗೆ ಆಸಕ್ತಿ ತೋರಿದ್ದಾರೆ. 15 ದಿನಗಳ ಹಿಂದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸಿಬ್ಬಂದಿ ನೀಡಿದ ತರಬೇತಿಯ ಮೇರೆಗೆ 5 ಮಹಿಳಾ ಬಂಧಿಗಳು ಸೇರಿ ಒಟ್ಟು 12 ಮಂದಿ ಸುಂದರ ಹೂ ಮಾಲೆ (ಬಣ್ಣದ ಬಟ್ಟೆ, ಮಣಿ, ಮುತ್ತುಗಳಿಂದ) 107 ಹೂಮಾಲೆಗಳನ್ನು ತಯಾರಿಸಿದ್ದಾರೆ. ಇದೇ ಅವಧಿಯಲ್ಲಿ ಇತರ 20 ಮಂದಿ ಕೈದಿಗಳು ಮಣ್ಣನ್ನು ಹದಮಾಡಿಕೊಂಡು ನರ್ಸರಿಯಲ್ಲಿ ಉಪಯೋಗಿಸುವ ಪ್ಲಾಸ್ಟಿಕ್ ಕವರ್‌ಗಳಲ್ಲಿ ತುಂಬಿಸಿ ಅದರಲ್ಲಿ ಸುಮಾರು 2500ರಷ್ಟು ಆಲಂಕಾರಿಕ ಗಿಡಗಳನ್ನು ನೆಟ್ಟಿದ್ದಾರೆ. ಇದೀಗ ಅಡಿಕೆ ಬೀಜಗಳನ್ನು ಮೊಳಕೆ ಬರಿಸಿ ಅದರಲ್ಲಿ ಗಿಡಗಳನ್ನು ಬೆಳೆಸುವ ಬಗ್ಗೆಯೂ ಈ ಬಂಧಿಗಳಿಗೆ ತರಬೇತಿ ನೀಡಲಾಗುತ್ತಿದೆ. ಜತೆಗೆ ಮಹಿಳಾ ಬಂಧಿಗಳನ್ನು ಒಳಗೊಂಡು ಆಸಕ್ತ ಬಂಧಿಗಳಿಗೆ 50ಕ್ಕೂ ಅಧಿಕ ವಿವಿಧ ವಿನ್ಯಾಸದಿಂದ ಕೂಡಿದ ಪ್ಲೈವುಡ್ ಕಟ್ಟಿಂಗ್‌ಗಳಿಂದ ಕರಕುಶಲ ವಸ್ತುಗಳನ್ನು (ಟೇಬಲ್ ಮೇಲಿ ಡುವ ಆಲಂಕಾರಿಕ ವಸ್ತುಗಳು, ಚಾಕಲೇಟ್ ಬಾಕ್ಸ್, ಗಿಫ್ಟ್ ಐಟಂಗಳು,) ತಯಾರಿ ಸುವ ತರಬೇತಿಯನ್ನು ನೀಡಲಾಗುತ್ತಿದೆ.
ಕರಕುಶಲ ತಯಾರಿಕೆಗೆ ಕೆ.ನರೇಂದ್ರ ಶೆಣೈ, ನರ್ಸರಿ ಬಗ್ಗೆ ಶ್ರವಣ್ ಶೆಣೈ ಹಾಗೂ ಜಗನ್ನಾಥ ಜತೆಗೆ ಗಣೇಶ್ ಅವರೂ ಸಹಕರಿಸುತ್ತಿದ್ದಾರೆ.
ವಿಚಾರಣಾಧೀನ ಕೈದಿಗಳು ಆಗಿರುವ ಕಾರಣ ಕಡಿಮೆ ಅವಧಿಯಲ್ಲಿ ಕಲಿಯಲು ಸಾಧ್ಯವಾಗುವ ಹಾಗೂ ಜೈಲಿನಿಂದ ಹೊರ ಹೋದ ಬಳಿಕ ಅವರ ಬದುಕಿಗೊಂದು ಆಸರೆ ಯಾಗಬಲ್ಲ ನಿಟ್ಟಿನಲ್ಲಿ ಕೌಶಲ್ಯಗಳನ್ನು ನೀಡಲಾಗುತ್ತಿದೆ. ಬಹುತೇಕವಾಗಿ ಜೈಲುವಾಸಿಯಾಗಿ ಹೊರಹೋದ ಬಳಿಕ ಸಮಾಜ, ಕುಟುಂಬದಿಂದ ಸಾಕಷ್ಟು ರೀತಿಯ ತಾತ್ಸಾರ, ತಿರಸ್ಕಾರ ಮನೋಭಾವ ವನ್ನು ಎದುರಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಬದುಕು ಕಟ್ಟಿಕೊಳ್ಳಲು ಇಲ್ಲಿ ನೀಡುವ ತರಬೇತಿ ಪೂರಕವಾಗುವ ರೀತಿಯಲ್ಲಿ ಈ ಕಾರ್ಯಕ್ರಮವನ್ನು ಕೇವಲ ತರಬೇತಿಗೆ ಮಾತ್ರ ಸೀಮಿತಗೊಳಿಸದೆ, ಅವರ ಸ್ವಾವಲಂಬಿ ಭವಿಷ್ಯಕ್ಕೂ ಪೂರಕವಾಗುವಂತೆ ಅವರನ್ನು ತಯಾರು ಗೊಳಿಸುವುದು ತಮ್ಮ ಉದ್ದೇಶ ಎಂದು ಜೈಲು ಅಧೀಕ್ಷಕ ಬಿ.ಟಿ.ಓಬಳೇಶಪ್ಪ ತಿಳಿಸಿದ್ದಾರೆ.
‘‘ಕೇಂದ್ರ ಕಾರಾಗೃಹಗಳಲ್ಲಿ ಕೈದಿಗಳಿಗೆ ವಿವಿಧ ರೀತಿಯ ಉತ್ಪನ್ನಗಳನ್ನು ತಯಾರಿಸಿ ಆದಾಯ ಗಳಿಸಲು ಅವಕಾಶವಿದೆ. ಇದೇ ಮಾದರಿಯಲ್ಲಿ ಸರಕಾರ ನಿರ್ದೇಶನದ ಮೇರೆಗೆ ಎಲ್ಲಾ ಜೈಲುಗಳಲ್ಲೂ ಕೌಶಲ್ಯಾಭಿವೃದ್ಧಿ ವೃತ್ತಿ ತರಬೇತಿಗೆ ಅವಕಾಶ ಕಲ್ಪಿಸಲಾಗಿದ್ದು, ನಾವು ಸ್ಥಳೀಯವಾಗಿ ವಿಶೇಷತೆಯುಳ್ಳ ಅಲ್ಪಾವಧಿಯಲ್ಲಿ ಕಲಿಯಬಹುದಾದ ವಿಷಯಗಳ ಬಗ್ಗೆ ತರಬೇತಿಯನ್ನು ಆಯಾ ಕ್ಷೇತ್ರದ ಪರಿಣಿತರಿಂದಲೇ ನೀಡಲಾಗುತ್ತದೆ. ಅವರು ಜೈಲಿನಿಂದ ಬಿಡುಗಡೆಯಾದ ಬಳಿಕವೂ ಅವರು ತಮ್ಮ ಕೌಶಲ್ಯವನ್ನು ಮುಂದುವರಿಸಿದರೆ, ಅವರಿಗೆ ಪೂರಕವಾಗಿ ಕಚ್ಚಾವಸ್ತು, ಮಾರುಕಟ್ಟೆಯನ್ನು ತರಬೇತಿ ನೀಡಿದ ಸಂಸ್ಥೆಗಳಿಂದಲೇ ಮಾಡುವ ವ್ಯವಸ್ಥಿತ ತರಬೇತಿ ಇದಾಗಿದೆ’’ ಎನ್ನುತ್ತಾರೆ ಜೈಲು ಅಧೀಕ್ಷಕರು.
''ಜೈಲಿನಲ್ಲಿ ಬಂಧಿಗಳಾಗಿರುವಷ್ಟು ಸಮಯ ದಲ್ಲಿ ತಮ್ಮಲ್ಲಿನ ಕಲಾ ನೈಪುಣ್ಯವನ್ನು ಒರೆಗೆ ಹಚ್ಚಿ ಹೊಸ ಭವಿಷ್ಯ ಕಟ್ಟಿಕೊಳ್ಳುವಲ್ಲಿ ಈ ತರಬೇತಿ ಜೈಲುವಾಸಿಗಳಿಗೆ ಪೂರಕವಾಗ ಲಿದೆ. ಜೈಲಿನಲ್ಲಿ ತಯಾರು ಮಾಡುವ ಗಿಡಗಳು, ಹಾರಗಳು ಮತ್ತು ಕರಕುಶಲ ವಸ್ತುಗಳನ್ನು ಮಾರಾಟ ಮಾಡಿ, ಅದರ ಲಾಭಾಂಶವು ವೇತನ ರೂಪದಲ್ಲಿ ಜೈಲು ವಾಸಿಗಳಿಗೆ ದೊರಕಿದರೆ ಅವರ ಕುಟುಂಬಕ್ಕೂ ಒಂದು ರೀತಿಯಲ್ಲಿ ಸಾಂತ್ವಾನ ದೊರಕಲು ಸಾಧ್ಯವಾದೀತು. ಇದಕ್ಕಾಗಿ ಕಾರಾಗೃಹದ ಸಮೀಪವೇ ಮಾರಾಟ ಮಳಿಗೆ ಯೊಂದನ್ನು ಮಾಡುವ ಬಗ್ಗೆ ಮೇಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪಡೆಯಲು ಕ್ರಮ ವಹಿಸಲಾಗುವುದು''.
- ಬಿ.ಟಿ.ಓಬಳೇಶಪ್ಪ, ಅಧೀಕ್ಷಕರು, ಜಿಲ್ಲಾ ಕಾರಾಗೃಹ, ಮಂಗಳೂರು