ಸಾವಿರಾರು ಘಟಕಗಳಲ್ಲಿ ಕಲುಷಿತ ಕುಡಿಯುವ ನೀರು
ಪ್ರಯೋಗಾಲಯಗಳ ವರದಿ ಪಡೆಯದೆ ಘಟಕಗಳ ಸ್ಥಾಪನೆ
ಬೆಂಗಳೂರು, ಫೆ.10: ರಾಜ್ಯದ ಗ್ರಾಮೀಣ, ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ವಿವಿಧ ಇಲಾಖೆಗಳ ಮೂಲಕ ಕಳೆದ 8 ವರ್ಷಗಳ ಅವಧಿಯಲ್ಲಿ ಪ್ರಯೋಗಾಲಯಗಳ ವರದಿಗಳನ್ನು ಡೆಯದೇ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಈಗಾಗಲೇ ಕಾರ್ಯಾಚರಿಸುತ್ತಿರುವ ಘಟಕಗಳ ಪೈಕಿ ಬಹುತೇಕ ಘಟಕಗಳು ಕಲುಷಿತಗೊಂಡಿವೆ. ಐಎಸ್‌ಒ ಮತ್ತು ಬಿಐಎಸ್ ಮಾನದಂಡಗಳಿಲ್ಲದೆ ಸಾವಿರಾರು ಘಟಕಗಳನ್ನು ತೆರೆದಿರುವುದು ಸೇರಿದಂತೆ ಹಲವು ಲೋಪ-ದೋಷಗಳನ್ನು ಪತ್ತೆ ಹಚ್ಚಿರುವ ಆಧ್ಯಯನ ವರದಿಯೊಂದು ಘಟಕಗಳ ಕಾರ್ಯಕ್ಷಮತೆಯನ್ನೂ ಬಹಿರಂಗಪಡಿಸಿದೆ.
ರಾಜ್ಯದಲ್ಲಿ ಸ್ಥಾಪಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಕಾರ್ಯಕ್ಷಮತೆ ಕುರಿತು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು ಈ ಕುರಿತು ಬಾಹ್ಯ ಸಂಸ್ಥೆ ಮೂಲಕ ಅಧ್ಯಯನ ನಡೆಸಿದೆ. ಈ ವರದಿ ಕುರಿತು ಯೋಜನೆ, ಸಾಂಖ್ಯಿಕ ಇಲಾಖೆಯು ಪರಿಶೀಲನೆ ನಡೆಸಿದ್ದು, ಇದರ ವರದಿಯ ಪ್ರತಿ ‘ಠಿಛ್ಛಿಜ್ಝಿಛಿ.ಜ್ಞಿ’ಗೆ ಲಭ್ಯಾಗಿದೆ.
ರಾಜ್ಯದ ಗ್ರಾಮೀಣ, ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಹಿಂದಿನ ಕಾಂಗ್ರೆಸ್ ಸರಕಾರವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್, ನಗರಾಭಿವೃದ್ಧಿ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಕ್ರಿಡಿಲ್, ಕೆಎಸ್‌ಎಂಎಸ್‌ಸಿಎಲ್ ಸೇರಿದಂತೆ ವಿವಿಧ ಇಲಾಖೆಗಳು, ನಿಗಮ, ಮಂಡಳಿಗಳ ಮೂಲಕ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತೆರೆದಿತ್ತು. ಹಾಲಿ ಬಿಜೆಪಿ ಸರಕಾರದ ಅವಧಿಯಲ್ಲಿಯೂ ಲಕ್ಷಾಂತರ ರೂ. ವೆಚ್ಚದಲ್ಲಿ ವಿವಿಧೆಡೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತೆರೆಯಲಾಗಿದೆ.
2013-14ರಿಂದ 2020-21ರ ಅವಧಿಯಲ್ಲಿ ಒಟ್ಟು 17,439 ಘಟಕಗಳು ಅನುಷ್ಠಾನಗೊಂಡಿವೆ. ಈ ಪೈಕಿ 1,664 ಘಟಕಗಳು (ಶೇ.9.5) ಕಾರ್ಯನಿರ್ವಹಿಸುತ್ತಿಲ್ಲ. ಇನ್ನೂ 309 ಘಟಕಗಳ (ಶೇ.1.8) ಕಾಮಗಾರಿ ಪ್ರಗತಿಯಲ್ಲಿವೆ. 1,664 ಘಟಕಗಳ ಪೈಕಿ ಕೆಡಬ್ಲೂಡಿಎಸ್‌ಡಿ 738 (ಶೇ.44.35), ಕೆಆರ್‌ಐಡಿಎಲ್ ನಿಂದ 592 (ಶೇ.35.38), ಅಲ್ಪಸಂಖ್ಯಾತರ ಇಲಾಖೆಯ 30(ಶೇ.1.8), ಯೋಜನೆ ಇಲಾಖೆ 145 (ಶೇ.8.71), ಸಮಾಜ ಕಲ್ಯಾಣ ಇಲಾಖೆ 48, (ಶೇ.2.88), ಕೆಎಸ್‌ಎಮ್‌ಎಲ್‌ಸಿಎಲ್ 7, (ಶೇ. 0.42), ಗ್ರಾಮೀಣಾಭಿವೃದ್ದಿ ಇಲಾಖೆಯ 10 (ಶೇ.0.6) ಘಟಕಗಳು ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಅಧ್ಯಯನ ವರದಿಯಿಂದ ತಿಳಿದು ಬಂದಿದೆ.
ವಿಶೇಷವೆಂದರೆ, 17,439 ಘಟಕಗಳ ಪೈಕಿ 9,493 ಘಟಕಗಳಿಗಷ್ಟೇ (ಶೇ.54.44) ಪ್ರಯೋಗಾಲಯ ವರದಿ ಲಭ್ಯವಿದೆ. ಇನ್ನುಳಿದ 7,946 (ಶೇ.45.56) ಘಟಕಗಳಿಗೆ ಪ್ರಯೋಗಾಲಯದ ವರದಿಯೇ ಲಭ್ಯವಿಲ್ಲ ಎಂಬ ಸಂಗತಿ ಅಧ್ಯಯನ ವರದಿಯಿಂದ ಗೊತ್ತಾಗಿದೆ.
ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಿಂದ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಉಸ್ತುವಾರಿಯಲ್ಲಿ ವಿವಿಧ ಅನುದಾನಗಳಡಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪಿತವಾಗಿವೆ.
ಒಟ್ಟು 1,000 ಎಲ್‌ಪಿಎಚ್ ಸಾಮರ್ಥ್ಯದ ಘಟಕಕ್ಕೆ ಅಂದಾಜು 8.50 ಲಕ್ಷ ರೂ. ನೀಡಲಾಗುತ್ತಿದೆ. ನಿರ್ವಹಣೆಗಾಗಿ ವಹಿಸಲಾದ ಘಟಕಗಳನ್ನು ಸುಸ್ಥಿತಿಯಲ್ಲಿಡಲು ಪ್ರತಿ ತಿಂಗಳು ಪ್ರತಿ ಘಟಕಕ್ಕೆ ಇಲಾಖೆಯಿಂದ 3,000 ರೂ. ಅನುದಾನ ಒದಗಿಸಲಾಗುತ್ತಿದೆ ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಇತರ ಅನುದಾನಗಳನ್ನು ಬಳಸಿ ಘಟಕಗಳನ್ನು ಸುಸ್ಥಿತಿಯಲ್ಲಿಡಲು ಕಾಲಕಾಲಕ್ಕೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನೀಡಲಾಗುತ್ತಿದೆ.
ಕಲುಷಿತ ನೀರಿನ ಮಾಹಿತಿ ನೀಡದ 5,110 ಘಟಕಗಳು
ಘಟಕಗಳಲ್ಲಿ ನೀರು ಕಲುಷಿತಗೊಂಡಿರುವ ಬಗ್ಗೆ 14,439 ಘಟಕಗಳ ಪೈಕಿ 9,329 ಘಟಕಗಳು ಮಾಹಿತಿ ನೀಡಿವೆ. ಅದರಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮೂಲಕ ತೆರೆದಿದ್ದ 8,624 ಘಟಕಗಳ ಪೈಕಿ 8,465 ಘಟಕಗಳು ಕಲುಷಿತಗೊಂಡಿವೆ. ಕ್ರಿಡಲ್‌ಗೆ ಸಂಬಂಧಪಟ್ಟ 5,775 ಘಟಕಗಳು ಕಲುಷಿತಗೊಂಡಿರುವ ಬಗ್ಗೆ ಅಧ್ಯಯನ ತಂಡಕ್ಕೆ ಯಾವುದೇ ಮಾಹಿತಿಯನ್ನೂ ನೀಡಿಲ್ಲ.
ಟೆಂಡರ್ ಕರೆಯದೆ 1,410 ಘಟಕಗಳ ಸ್ಥಾಪನೆ
17,439 ಘಟಕಗಳ ಪೈಕಿ 1,410 ಘಟಕಗಳನ್ನು ತೆರೆಯಲು ಯಾವುದೇ ಟೆಂಡರ್‌ಗಳನ್ನು ಕರೆದಿಲ್ಲ. 7,132 ಘಟಕಗಳಿಗೆ ಐಎಸ್‌ಒ ಮತ್ತು ಬಿಐಎಸ್ ಮಾನದಂಡಗಳನ್ನು ಖಚಿತಪಡಿಸಿಲ್ಲ ಹಾಗೂ 1,984 ಘಟಕಗಳ ನಿರ್ವಹಣೆಗಾಗಿ ಯಾವುದೇ ಒಪ್ಪಂದ (ಎಂಒಯು)ವೂ ಇಲ್ಲ. ಅಲ್ಲದೆ ಐಎಸ್‌ಒ, ಬಿಐಎಸ್ ಮಾನದಂಡಗಳನ್ನು ಖಚಿತಪಡಿಸದೇ ಹಾಗೂ ಘಟಕಗಳ ನಿರ್ವಹಣೆಗಾಗಿ ಒಪ್ಪಂದವಿಲ್ಲದೆಯೇ ಇರುವ ಒಟ್ಟು 920 (ಶೇ.5.27) ಘಟಕಗಳನ್ನು ಸ್ಥಾಪಿಸಲಾಗಿದೆ ಎಂಬುದು ವರದಿಯಿಂದ ಗೊತ್ತಾಗಿದೆ. ಈ 920 ಘಟಕಗಳ ಪೈಕಿ ಕ್ರಿಡಿಲ್‌ನ 57, ನಗರಾಭಿವೃದ್ಧಿ ಇಲಾಖೆಯ 52, ಸಮಾಜ ಕಲ್ಯಾಣ ಇಲಾಖೆಯ 164, ಯೋಜನಾ ಇಲಾಖೆಯ 185, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ 63, ಕೆಎಸ್‌ಎಮ್‌ಸಿಎಲ್‌ನ 9, ಸಹಕಾರ ಇಲಾಖೆ, ಜಿ.ಪಂ., ಗ್ರಾ.ಪಂ., ಕೆಎಲ್‌ಎಲ್‌ಎಡಿಎಸ್, ಕಿಯೋನಿಕ್ಸ್‌ಗೆ ಸೇರಿದ ಒಟ್ಟು 390 (ಶೇ.42) ಘಟಕಗಳ ಅಳವಡಿಕೆ ಮತ್ತು ನಿರ್ವಹಣೆಯಲ್ಲಿ ಲೋಪದೋಷಗಳಾಗಿದ್ದರೂ ಸಹ ಇದಕ್ಕೆ ಕಾರಣರಾದವರ ಮೇಲೆ ಯಾವುದೇ ಕ್ರಮ ಕೈಗೊಂಡ ಬಗ್ಗೆ ಮಾಹಿತಿಯೇ ಇಲ್ಲ ಎಂದು ವರದಿಯು ಹೊರಗೆಡವಿದೆ.