ಹಿಜಾಬ್- ಕೇಸರಿ ಶಾಲು ವಿವಾದ; ಉಡುಪಿ ಜಿಲ್ಲೆಯಾದ್ಯಂತ ಪೊಲೀಸರಿಂದ ಪಥಸಂಚಲ
ಉಡುಪಿ, ಫೆ.11: ಹಿಜಾಬ್- ಕೇಸರಿ ಶಾಲು ವಿವಾದದ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿ ಯಿಂದ ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲೆಯಾದ್ಯಂತ ಪೊಲೀಸರು ಶುಕ್ರವಾರ ಪಥ ಸಂಚಲನ ನಡೆಸಿದರು.
ಉಡುಪಿ ಪೊಲೀಸ್ ಉಪವಿಭಾಗಕ್ಕೆ ಸಂಬಂಧಿಸಿ ಉಡುಪಿ ನಗರ ಠಾಣೆ ಯಿಂದ ಆರಂಭಗೊಂಡ ಪಥ ಸಂಚಲನವು ಕೋರ್ಟ್ ರಸ್ತೆ, ಹಳೆ ಡಯಾನ ಸರ್ಕಲ್, ಸಂಸ್ಕೃತ ಕಾಲೇಜು ರಸ್ತೆ, ಸಿಟಿ ಬಸ್ ನಿಲ್ದಾಣ, ಸರ್ವಿಸ್ ಬಸ್ ನಿಲ್ದಾಣ, ಕೆಎಂ ಮಾರ್ಗ, ಜೋಡುಕಟ್ಟೆ ಮಾರ್ಗವಾಗಿ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಸಮಾಪ್ತಿಗೊಂಡಿತು.
ಇದರಲ್ಲಿ ಉಡುಪಿ ನಗರ, ಮಹಿಳಾ ಠಾಣೆ, ಮಣಿಪಾಲ, ಮಲ್ಪೆ, ಬ್ರಹ್ಮಾವರ, ಕೋಟ, ಹಿರಿಯಡ್ಕ ಠಾಣೆಗಳ ಒಟ್ಟು 67, ಪ್ರಶಿಕ್ಷಣಾರ್ಥಿಗಳು, ಕೆಎಸ್‌ಆರ್‌ಪಿ, ಸಶಸ್ತ್ರ ಮೀಸಲು ಪಡೆಯ ಒಟ್ಟು 171 ಪೊಲೀಸ್ ಸಿಬ್ಬಂದಿ ಸೇರಿದಂತೆ ಒಟ್ಟು 238 ಮಂದಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಉಡುಪಿ ಎಸ್ಪಿ ವಿಷ್ಣುವರ್ಧನ್, ಹೆಚ್ಚುವರಿ ಎಸ್ಪಿ ಎಸ್.ಟಿ. ಸಿದ್ಧಲಿಂಗಪ್ಪ, ಡಿವೈಎಸ್ಪಿ ಸುಧಾಕರ್ ಎಸ್.ನಾಯ್ಕಿ, ಡಿಎಆರ್ ಡಿವೈಎಸ್ಪಿ ರಾಘವೇಂದ್ರ, ಪೊಲೀಸ್ ನಿರೀಕ್ಷಕರಾದ ಪ್ರಮೋದ್ ಕುಮಾರ್, ಮಂಜು ನಾಥ್ ಹಾಗೂ ವಿವಿಧ ಠಾಣೆಗಳ ಉಪನಿರೀಕ್ಷಕರು ಹಾಜರಿದ್ದರು.
ಕುಂದಾಪುರ ರೂಟ್ ಮಾರ್ಚ್
ಕುಂದಾಪುರ ಉಪವಿಭಾಗದ ಪೊಲೀಸ್ ಪಥ ಸಂಚಲನವು ಕುಂದಾಪುರ ಶಾಸ್ತ್ರೀ ವೃತ್ತದಿಂದ ಆರಂಭಗೊಂಡು, ಹೊಸ ಬಸ್ ನಿಲ್ದಾಣದ ಮೂಲಕವಾಗಿ ನಗರದಲ್ಲಿ ಸಂಚರಿಸಿ ಮತ್ತೆ ಶಾಸ್ತ್ರೀ ವೃತ್ತಕ್ಕೆ ಆಗಮಿಸಿ ಸಮಾಪ್ತಿಗೊಂಡಿತು.
ಕುಂದಾಪುರ ಡಿವೈಎಸ್ಪಿಶ್ರೀಕಾಂತ್ ಕೆ., ವೃತ್ತ ನಿರೀಕ್ಷಕ ಗೋಪಿಕೃಷ್ಣ ನೇತೃತ್ವದಲ್ಲಿ ಕುಂದಾಪುರ ಎಸ್ಸೈ ಸದಾಶಿವ ಗವರೋಜಿ, ಗ್ರಾಮಾಂತರ ಠಾಣೆ ಎಸ್ಸೈ ನಿರಂಜನ್, ಟ್ರಾಫಿಕ್ ಠಾಣೆ ಎಸ್ಸೈ ಸುಧಾಪ್ರಭು, ಶಂಕರನಾರಾಯಣ ಠಾಣೆ ಎಸ್ಸೈ ಶ್ರೀಧರ್ ನಾಯ್ಕ್, ಅಮಾಸೆಬೈಲು ಎಸ್ಸೈ ಸುಬ್ಬಣ್ಣ ಸೇರಿದಂತೆ ಪೊಲೀಸ್ ಸಹಾಯಕ ಉಪನಿರೀಕ್ಷಕರುಗಳು, ಸಿಬ್ಬಂದಿಗಳು ಹಾಜರಿದ್ದರು. ಕೆಎಸ್‌ಆರ್‌ಪಿ ಮಹಿಳಾ ವಿಭಾಗದ ಪೊಲೀಸರು, 2 ಡಿಎಆರ್ ತುಕಡಿ ಪಥಸಂಚಲನದಲ್ಲಿ ಇದ್ದವು.
ಕಾಪುನಲ್ಲಿ ಪಥ ಸಂಚಲ
ಕಾಪು ಪೊಲೀಸ್ ವೃತ್ತ ವ್ಯಾಪ್ತಿಯ ಪೊಲೀಸ್ ಠಾಣೆಗಳ ಪೊಲೀಸರಿಂದ ಕಾಪು ಪೇಟೆಯಲ್ಲಿಂದು ಬೆಳಗ್ಗೆ ಪಥ ಸಂಚಲನ ನಡೆಯಿತು. ಕಾಪು ವೃತ್ತ ನಿರೀಕ್ಷಕ ಪ್ರಕಾಶ್ ನೇತೃತ್ವದಲ್ಲಿ ನಡೆದ ಪಥಸಂಚಲನದಲ್ಲಿ ಕಾಪು, ಪಡುಬಿದ್ರೆ, ಶಿರ್ವ ಠಾಣಾ ವ್ಯಾಪ್ತಿಯ ಸುಮಾರು 90 ಪೊಲೀಸರು ಪಾಲ್ಗೊಂಡಿ ದ್ದರು. ಕಾಪು ಠಾಣೆಯ ಎಸ್ಸೈ ರಾಘವೇಂದ್ರ, ಶಿರ್ವ ಠಾಣೆಯ ಎಸ್ಸೈ ತಿಮ್ಮೇಶ್, ಪಡುಬಿದ್ರಿ ಠಾಣೆಯ ಎಸ್ಸೈ ಅಸೋಶ್ ಕುಮಾರ್ ಹಾಜರಿದ್ದರು.
ಜನರು ಆತಂಕ ಪಡಬೇಕಾಗಿಲ್ಲ: ಎಸ್ಪಿ
ಹಿಜಾಬ್ -ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿ ಉಡುಪಿ ಜಿಲ್ಲೆಯಲ್ಲಿ ಯಾವುದೇ ತೊಂದರೆ ಆಗಿಲ್ಲ. ಮುಂದೆಯೂ ಏನು ಆಗದಂತೆ ಕ್ರಮ ತೆಗೆದು ಕೊಳ್ಳಲಾಗುವುದು. ಅದಕ್ಕೆ ಬೇಕಾದ ಸಿದ್ಧತೆಗಳನ್ನು ಪೊಲೀಸ್ ಇಲಾಖೆ ಮಾಡಿ ಕೊಂಡಿದೆ. ಜನರು ಆತಂಕ ಪಡಬೇಕಾಗಿಲ್ಲ. ಶಾಲಾರಂಭಕ್ಕೆ ಸಂಬಂಧಿಸಿಯೂ ಎಲ್ಲ ಕಡೆ ಬಂದೋಬಸ್ತ್ ಮಾಡಲಾಗಿದೆ ಎಂದು ಎಸ್ಪಿ ವಿಷ್ಣುವರ್ಧನ್ ತಿಳಿಸಿದರು.
ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಹಾಗೂ ಸಮಾಜದಲ್ಲಿ ತೊಂದರೆ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಕುರಿತು ಸಂದೇಶ ನೀಡುವ ನಿಟ್ಟಿನಲ್ಲಿ ಈ ರೂಟ್ ಮಾರ್ಚ್‌ನ್ನು ಉಡುಪಿ ಜಿಲ್ಲೆಯಾ ದ್ಯಂತ ನಡೆಸಲಾಗಿದೆ ಎಂದು ಅವರು ಹೇಳಿದರು.