ಮೊಟ್ಟೆ ವಿತರಣೆಗೆ ಹೆಚ್ಚಿನ ಬೆಂಬಲ; 4 ಜಿಲ್ಲೆಗಳಿಗೆ ಯೋಜನೆ ವಿಸ್ತರಿಸಲು ಪ್ರಸ್ತಾವ
ಬೆಂಗಳೂರು, ಫೆ.11: ರಾಜ್ಯದ ಬೀದರ್, ಬಳ್ಳಾರಿ, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿನ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿನ ಒಂದರಿಂದ ಎಂಟನೇ ತರಗತಿ ಮಕ್ಕಳಿಗೆ ಮೊಟ್ಟೆ ವಿತರಣೆಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿರುವ ಬೆನ್ನಲ್ಲೇ ಬಾಗಲಕೋಟೆ ಸೇರಿದಂತೆ 4 ಜಿಲ್ಲೆಗಳಿಗೆ ಮೊಟ್ಟೆ ವಿತರಣೆ ಯೋಜನೆಯನ್ನು ವಿಸ್ತರಿಸಲು ಶಿಕ್ಷಣ ಇಲಾಖೆಯು ಪ್ರಸ್ತಾಪಿಸಿದೆ.
ಆದರೆ ಕೇಂದ್ರ ಸರಕಾರದಿಂದ ನಿಗದಿಪಡಿಸಿರುವ ಅನುದಾನದಿಂದ ಸೀಮಿತ ದಿನ ಮತ್ತು ಸೀಮಿತ ಜಿಲ್ಲೆಗಳಲ್ಲಿ ಮಾತ್ರ ಮೊಟ್ಟೆ ವಿತರಣೆ ಯೋಜನೆಯು ಅನುಷ್ಠಾನ ಮಾಡಬಹುದೇ ವಿನಃ ಹೆಚ್ಚಿನ ಜಿಲ್ಲೆಗಳಿಗೆ ವಿಸ್ತರಿಸಲು ಸಾಧ್ಯವಾಗುವುದಿಲ್ಲ. ಯೋಜನೆಯನ್ನು 4 ಜಿಲ್ಲೆಗಳೂ ಸೇರಿದಂತೆ ಒಟ್ಟು 11 ಜಿಲ್ಲೆಗಳಲ್ಲಿ 120 ದಿನಗಳ ಅವಧಿಗೆ ವಿಸ್ತರಿಸಲು ಇತ್ತೀಚಿನ ವಿದ್ಯಾರ್ಥಿಗಳ ದಾಖಲಾತಿಗೆ ಅನುಗುಣವಾಗಿ 192.82 ಕೋಟಿ ರೂ. ಅನುದಾನ ಅಗತ್ಯವಿದೆ. 2022-23ನೇ ಸಾಲಿಗೆ ಕೇಂದ್ರ ಸರಕಾರದಿಂದ 28.45 ಕೋಟಿ ರೂ. ಅನುದಾನದ ಎದುರು ನೋಡುತ್ತಿರುವ ಇಲಾಖೆಯು ರಾಜ್ಯ ಸರಕಾರವೇ 164.37 ಕೋಟಿ ರೂ. ಅನುದಾನ ಭರಿಸಬೇಕಿದೆ ಎಂದೂ ಹೇಳಿದೆ.
ಬೀದರ್ ಸೇರಿದಂತೆ ಒಟ್ಟು 7 ಜಿಲ್ಲೆಗಳಲ್ಲಿ 14.44 ಲಕ್ಷ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಟಿಕಾಂಶದ ರೂಪದಲ್ಲಿ 2021ರ ಡಿಸೆಂಬರ್ 1ರಿಂದ ಮೊಟ್ಟೆ ವಿತರಣೆ ಆರಂಭವಾದ ನಂತರ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಾಗಿದೆ. ಪ್ರಸಕ್ತ ಶೇ.90ರಷ್ಟು ಮಕ್ಕಳು ಮೊಟ್ಟೆ ಸ್ವೀಕರಿಸುತ್ತಿದ್ದರೆ ಉಳಿದ ಶೇ.10ರಷ್ಟು ಮಕ್ಕಳು ಮಾತ್ರ ಬಾಳೆಹಣ್ಣು ಪಡೆಯುತ್ತಿದ್ದಾರೆ ಎಂದು ಪ್ರಸ್ತಾವನೆಯಲ್ಲಿ ಪ್ರಗತಿ ಮಾಹಿತಿ ಒದಗಿಸಿದೆ. ಇದರ ಪ್ರತಿ ‘the-file.in’ಗೆ ಲಭ್ಯವಾಗಿದೆ.
ಮೊಟ್ಟೆ ಸೇವನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಗದಗ್, ಹಾವೇರಿ, ಬಾಗಲಕೋಟೆ ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ಮತ್ತು 9-10ನೇ ತರಗತಿಗಳ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಣೆ ಮಾಡಲು ಮುಂದಾಗಿದೆ. ಬಾಗಲಕೋಟೆ ಜಿ ಲ್ಲೆಯಲ್ಲಿ 1ರಿಂದ 8ನೇ ತರಗತಿಯಲ್ಲಿ 21,87,388 ಮತ್ತು 9ರಿಂದ 10ನೇ ತರಗತಿಯಲ್ಲಿ 57,449 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಜಿಲ್ಲೆಯ ಮಕ್ಕಳಿಗೆ 120 ದಿನಗಳಿಗೆ ಪ್ರತಿ ಮಗುವಿಗೆ 6 ರೂ.ನಂತೆ 1ರಿಂದ 8ನೇ ತರಗತಿ ಮಕ್ಕಳಿಗೆ 16.41 ಕೋಟಿ ರೂ., 9-10 ತರಗತಿ ಮಕ್ಕಳಿಗೆ 4.14 ಕೋಟಿ ರೂ. ಸೇರಿ ಒಟ್ಟು 20.55 ಕೋಟಿ ರೂ. ಅನುದಾನ ಅಗತ್ಯವಿದೆ ಎಂದು ಪ್ರಸ್ತಾಪಿಸಿದೆ. ಈ 4 ಜಿಲ್ಲೆಗಳಿಗೆ 120 ದಿನಗಳವರೆಗೆ ಮೊಟ್ಟೆ ವಿತರಿಸಲು 52.08 ಕೋಟಿ ರೂ. ಅನುದಾನ ಅಗತ್ಯವಿದೆ ಎಂಬುದು ಇಲಾಖೆಯ ಪ್ರಸ್ತಾವನೆಯಿಂದ ತಿಳಿದು ಬಂದಿದೆ.
4 ಜಿಲ್ಲೆಗಳೂ ಸೇರಿದಂತೆ ಒಟ್ಟಾರೆ 11 ಜಿಲ್ಲೆಗಳ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಿಸಲು 120 ದಿನಗಳಿಗೆ 192.82 ಕೋಟಿ ರೂ. ಅನುದಾನ ಅಗತ್ಯವಿದೆ ಎಂದು ಹೇಳಿರುವ ಶಿಕ್ಷಣ ಇಲಾಖೆಯು ರಾಜ್ಯ ಸರಕಾರ ಈ ಯೋಜನೆಗೆ 164.37 ಕೋಟಿ ರೂ. ಭರಿಸಬೇಕು ಎಂದು ತಿಳಿಸಿದೆ. ಇನ್ನುಳಿದ 28.45 ಕೋಟಿ ರೂ.ಗಳನ್ನು ಕೇಂದ್ರ ಸರಕಾರವು 2022-23ನೇ ಸಾಲಿನಲ್ಲಿ ಫ್ಲೆಕ್ಸಿಬಿಲಿಟಿ ಫಾರ್ ನ್ಯೂ ಇಂಟ್ರವೆನ್ಷನ್ ಚಟುವಟಿಕೆಗಳಿಗೆ ಒದಗಿಸುವ ಯೋಜನೆಯಲ್ಲಿ ಭರಿಸಬೇಕಿದೆ ಎಂದು ವಿವರಿಸಿದೆ.
ಕೇಂದ್ರ ಸರಕಾರವು 1ರಿಂದ 8ನೇ ತರಗತಿಗೆ ಸಂಬಂಧಿಸಿದ ಮಕ್ಕಳ ವೆಚ್ಚವನ್ನು ಮಾತ್ರ ಭರಿಸುತ್ತದೆ. ಕೇಂದ್ರ ಸರಕಾರದಿಂದ ಫ್ಲೆಕ್ಸಿಬಿಲಿಟಿ ಫಾರ್ ನ್ಯೂ ಇಂಟ್ರವೆನ್ಷನ್ ಚಟುವಟಿಕೆಗಳಡಿ ನಿಗದಿಪಡಿಸಿರುವ ಅನುದಾನದಿಂದ ಸೀಮಿತ ದಿನಗಳಿಗೆ ಸೀಮಿತ ಜಿಲ್ಲೆಗಳಿಗೆ ಮಾತ್ರ ಕಾರ್ಯಕ್ರಮ ಅನುಷ್ಠಾನ ಮಾಡಲು ಸಾಧ್ಯವಾಗುತ್ತದೆಯೇ ಹೊರತು ಹೆಚ್ಚಿನ ಜಿಲ್ಲೆಗಳಿಗೆ ವಿಸ್ತರಿಸಲು ಸಾಧ್ಯವಾಗುವುದಿಲ್ಲ ಎಂದು ಮಾಹಿತಿ ಒದಗಿಸಿದೆ.
2022ರ ಮಾರ್ಚ್ 30ರವರೆಗಿನ 4 ತಿಂಗಳ ಅವಧಿಯಲ್ಲಿ 46 ದಿನಗಳಿಗೆ ಮೊಟ್ಟೆ ವಿತರಿಸಲು ಒಟ್ಟು 39.86 ಕೋಟಿ ರೂ. ಅನುದಾನ ನಿಗದಿಯಾಗಿತ್ತು. ಈ ಅನುದಾನದಲ್ಲಿ ಕೇಂದ್ರ ಸರಕಾರದ ಪಾಲಿನ ಅನುದಾನ 23.92 ಕೋಟಿ ರೂ. ಮತ್ತು ರಾಜ್ಯ ಸರಕಾರದ ಪಾಲಿನ 15.94 ಕೋಟಿ ರೂ. ಇದೆ.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಸರಕಾರದ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್ ಅಧ್ಯಕ್ಷತೆಯಲ್ಲಿ 2021ರ ಡಿಸೆಂಬರ್ 28ರಂದು ನಡೆದ ಸಭೆಯಲ್ಲಿ ಮೊಟ್ಟೆ ವಿತರಣೆಯ ಫಲಿತಾಂಶದ ಕುರಿತು ಚರ್ಚೆಯಾಗಿದೆ. ಈ ಸಭೆಯ ನಡವಳಿಗಳನ್ನು ‘the-file.in’ ಆರ್‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.
ಶಾಲಾ ಮಕ್ಕಳಿಗೆ ಮೊಟ್ಟೆ ವಿತರಿಸುವ ಕಾರ್ಯಕ್ರಮದ ಮೌಲ್ಯಮಾಪನ ನಡೆಸಲು 25.00 ಲಕ್ಷ ೂ. ಅನುದಾನ ಮಂಜೂರು ಮಾಡಲು ಇದೇ ಸಭೆಯು ಅನುಮೋದಿಸಿರುವುದು ನಡವಳಿಯಿಂದ ಗೊತ್ತಾಗಿದೆ.
ಕಲಬುರಗಿ ವಿಭಾಗ (6 ಜಿಲ್ಲೆಗಳು) ಮತ್ತು ವಿಜಯಪುರ ಜಿಲ್ಲೆ ಒಳಗೊಂಡಂತೆ ಒಟ್ಟಾರೆಯಾಗಿ 14.44 ಲಕ್ಷ ವಿದ್ಯಾರ್ಥಿಗಳಿಗೆ ಅನುಮೋದನೆ ನೀಡಲಾಗಿದೆ. ಸದ್ಯ ಈ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ 16 ಲಕ್ಷವಿದೆ. ಅನುಮೋದಿತ 14.44 ಲಕ್ಷ ವಿದ್ಯಾರ್ಥಿಗಳ ಪೈಕಿ ಶೇ.90ರಷ್ಟು ವಿದ್ಯಾರ್ಥಿಗಳು ಮೊಟ್ಟೆಯನ್ನು ಸ್ವೀಕರಿಸುತ್ತಿದ್ದು ಉಳಿದ ವಿದ್ಯಾರ್ಥಿಗಳು ಬಾಳೆಹಣ್ಣು ಸ್ವೀಕರಿಸುತ್ತಿದ್ದಾರೆ ಎಂದು ಮಧ್ಯಾಹ್ನ ಉಪಾಹಾರ ಯೋಜನೆಯ ಜಂಟಿ ನಿರ್ದೇಶಕರು ಸಭೆಯ ಗಮನಕ್ಕೆ ತಂದಿರುವುದು ನಡವಳಿಯಿಂದ ತಿಳಿದು ಬಂದಿದೆ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ ಯಾದಗಿರಿ, ರಾಯಚೂರು, ಬೀದರ್, ಬಳ್ಳಾರಿ, ಕಲಬುರಗಿ, ಕೊಪ್ಪಳ ಮತ್ತು ವಿಜಯಪುರ ಜಿಲ್ಲೆಗಳಲ್ಲಿ 1ರಿಂದ 8ನೇ ತರಗತಿ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟದಲ್ಲಿ ಮೊಟ್ಟೆ ವಿತರಿಸುವ ಬ್ಗೆ ಪ್ರಾಯೋಗಿಕ ಅಧ್ಯಯನದ ಭಾಗವಾಗಿ 4,44,322 ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ವಿತರಿಸುವ ಯೋಜನೆ ಜಾರಿಗೊಳಿಸಿತ್ತು.
ರಾಜ್ಯದ ಶೇ.32ರಷ್ಟು ಮಕ್ಕಳು ಕಡಿಮೆ ತೂಕ ಹಾಗೂ ಕುಂಠಿತ ಬೆಳವಣಿಗೆ ಹೊಂದಿದ್ದು, ಶೇ.45.2ರಷ್ಟು ಮಕ್ಕಳು ಮತ್ತು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದು 2020-21ರ ‘ನೀತಿ ಆಯೋಗ’ದ ವರದಿಯಲ್ಲಿ ವಿವರಿಸಿತ್ತು. ಹೀಗಾಗಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಮಕ್ಕಳಿಗೆ ಮೊಟ್ಟೆ ನೀಡುವ ಕಾರ್ಯಕ್ರಮ ಜಾರಿಗೊಂಡಿದ್ದನ್ನು ಸ್ಮರಿಸಬಹುದು.
ಮಧ್ಯಾಹ್ನ ಬಿಸಿಯೂಟದಲ್ಲಿ 2021ರ ಡಿಸೆಂಬರ್‌ನಲ್ಲಿ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಿಸಲು ಮುಂದಾಗಿದ್ದಕ್ಕೆ ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಮಠಾಧೀಶರು ಮತ್ತು ಜಾತಿ ಸಂಘಟನೆಗಳ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು.
ಮೊಟ್ಟೆ ನೀಡುವ ಮೂಲಕ ಸರಕಾರಿ ಶಾಲೆಗಳಲ್ಲಿ ಮಕ್ಕಳ ಆಹಾರದ ವಿಷಯದಲ್ಲಿ ಭೇದಭಾವ ಮಾಡಿದಂತಾಗುತ್ತದೆ. ಇದು ಪಂಕ್ತಿಭೇಧಕ್ಕೆ ಅವಕಾಶವಾಗುತ್ತದೆ. ಅಲ್ಲದೆ ಇದು ಧಾರ್ಮಿಕ ಸಾಮರಸ್ಯವನ್ನು ಹದಗೆಡಿಸುತ್ತದೆ ಎಂದು ಮಠಾಧೀಶರು ಪ್ರತಿಪಾದಿಸಿದ್ದರು.
ಕಲಬುರಗಿ, ವಿಜಯಪುರ ಜಿಲ್ಲೆಯಲ್ಲಿನ ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟದಲ್ಲಿ ನೀಡುತ್ತಿರುವ ಮೊಟ್ಟೆಯನ್ನು ಶೇ.90ರಷ್ಟು ವಿದ್ಯಾರ್ಥಿಗಳು ಸ್ವೀಕರಿಸಿದ್ಧಾರೆ. ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆಯನ್ನು ವಿರೋಧಿಸಿದ್ದ ನಿರ್ದಿಷ್ಟ ಸಮುದಾಯದ ಕೆಲ ಮಠಾಧೀಶರಿಗೆ ಮುಖಭಂಗವಾದಂತಾಗಿತ್ತು.