ಕನ್ನಡ ಭಾಷೆಗೆ ಭವಿಷ್ಯ ಇದೆಯೇ?
ಎನ್‌ಡಿಎ ಸರಕಾರ ಕೇಂದ್ರದಲ್ಲಿ ಸಂಪೂರ್ಣ ಆಡಳಿತ ಚುಕ್ಕಾಣಿ ಹಿಡಿದುಕೊಂಡ ಮೇಲೆ ಯಾವುದೋ ಒಂದು ರೀತಿಯಲ್ಲಿ ಹಿಂದಿ ಭಾಷೆಯನ್ನು ದಕ್ಷಿಣ ರಾಜ್ಯಗಳ ಮೇಲೆ ಹೇರುವ ಮೂಲಕ ದಾಳಿ ನಡೆಸುತ್ತಿದೆ. ಅದಕ್ಕೆ ಮುಂಚೆ ಹಿಂದಿ ಭಾಷೆಯ ನುಸುಳುವಿಕೆ ಇರಲಿಲ್ಲ ಎಂದೇನೂ ಅಲ್ಲ. ಆದರೆ ಅದು ಈಗ ತೀವ್ರಗೊಂಡು ನೇರವಾಗಿ ಮತ್ತು ಕ್ರೂರವಾಗಿಯೆ ನಮ್ಮ ಮೇಲೆ ಎರಗಿದ್ದು ನಮ್ಮವರೇ ಅದರ ಸಹಾಯಕ್ಕೆ ನಿಂತುಕೊಂಡಿದ್ದಾರೆ. ಕೇಂದ್ರ ಸರಕಾರ ಉತ್ತರ ರಾಜ್ಯಗಳ ಮೇಲೆ ಎಷ್ಟೇ ಹಣ ಸುರಿದರೂ ಅವುಗಳ ಆರ್ಥಿಕ ದುಃಸ್ಥಿತಿ ಸುಧಾರಿಸಲಿಲ್ಲ. ಫಲಿತಾಂಶ ಉತ್ತರದಿಂದ ದಕ್ಷಿಣಕ್ಕೆ ವಲಸೆ ಬರುತ್ತಿರುವ ಕೂಲಿ ಕಾರ್ಮಿಕರ ಸಂಖ್ಯೆ ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ದಕ್ಷಿಣ ಭಾರತೀಯ ಕಾರ್ಮಿಕರ ಸಂಖ್ಯೆ ತೀರಾ ಕಡಿಮೆಯಾಗುತ್ತಿದೆ. ಬೆಂಗಳೂರನ್ನು ಉದಾಹರಣೆಗೆ ತೆಗೆದುಕೊಂಡರೆ ಕಟ್ಟಡ ಕೆಲಸ, ಬಡಗಿ, ಪ್ಲಂಬರ್, ಮನೆ ಕೆಲಸ, ಪಾರ್ಲರ್, ಮಾಲ್‌ಗಳು ಹೀಗೆ ಎಲ್ಲಾ ಕಡೆಯೂ ಉತ್ತರ ಮತ್ತು ಈಶಾನ್ಯ ರಾಜ್ಯಗಳ ಜನರು ಕೆಲಸ ಮಾಡುತ್ತಿದ್ದಾರೆ. ಇನ್ನು ಐಟಿ-ಬಿಟಿ ಹಬ್‌ಗಳಾಗಿ ಬೆಳೆದು ನಿಂತಿರುವ ಬೆಂಗಳೂರು, ಹೈದರಾಬಾದ್, ಚೆನ್ನೈ ನಗರಗಳು ಈಗ ಹಿಂದಿ ಭಾಷೆಯ ಬೆದರಿಕೆಯನ್ನು ಅನುಭವಿಸುತ್ತಿವೆ.
ಕರ್ನಾಟಕದಲ್ಲಿ ಬಿಜೆಪಿಯನ್ನು ಗೆಲ್ಲಿಸಿ ತಮ್ಮ ತಲೆಗಳ ಮೇಲೆ ತಾವೇ ಮಣ್ಣು ಹಾಕಿಕೊಂಡರು ಎನಿಸುತ್ತಿದೆ. ಕಾರಣ ಬೆಂಗಳೂರಿನಲ್ಲೇ ಹಿಂದಿ ಭಾಷೆ ಧಾರಾಳವಾಗಿ ಕಾಣಿಸಿಕೊಂಡು ಎಲ್ಲಾ ಕೇಂದ್ರ ಸರಕಾರಿ ಕಚೇರಿಗಳನ್ನು ಆವರಿಸಿಕೊಳ್ಳುತ್ತಿದೆ. ಕನ್ನಡ ಭಾಷೆ ಸಂಪೂರ್ಣವಾಗಿ ಮಾಯವಾಗುತ್ತಿದೆ. ನಮ್ಮ ಡಬಲ್ ಇಂಜಿನ್ ಸರಕಾರಗಳ ಶಾಸಕರುಗಳು, ಮಂತ್ರಿಗಳು ಅತ್ತ ದಿಲ್ಲಿಯಲ್ಲಿ ಇತ್ತ ಕರ್ನಾಟಕದಲ್ಲಿ ಬಾಯಿಬಿಡದೆ ಕುಳಿತುಕೊಂಡಿದ್ದಾರೆ. ಸಾಲದ್ದಕ್ಕೆ ನಮ್ಮ ಘನ ಸರಕಾರ ಈ ನಡುವೆ ಹೊಸ ಸಂಸ್ಕೃತ ವಿಶ್ವವಿದ್ಯಾನಿಲಯಕ್ಕೆ 359 ಕೋಟಿ ಹಣ ನೀಡಿ 100 ಎಕರೆ ಜಮೀನನ್ನು ಮಂಜೂರು ಮಾಡಿದೆ. ಅತ್ತ ಒಂದೇ ಒಂದು ಕನ್ನಡ ವಿಶ್ವವಿದ್ಯಾನಿಲಯ ತನ್ನ ಸಿಬ್ಬಂದಿಗೆ ಮತ್ತು ಶಿಕ್ಷಕರಿಗೆ ರಾಜ್ಯ ಸರಕಾರ ಸಂಬಳ ಕೊಡಲಾಗದೆ ಸಬೂಬುಗಳನ್ನು ಹೇಳುತ್ತಿದೆ. ಇಡೀ ರಾಜ್ಯದ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳ ಬ್ಯಾಂಕ್‌ಗಳಲ್ಲಿ ಕನ್ನಡಿಗರ ಸಂಖ್ಯೆ ಈಗ ತೀರಾ ವಿರಳವಾಗುತ್ತಿದೆ. ಇದಕ್ಕೆ ಕಾರಣ ಸ್ಥಳೀಯ ಅಭ್ಯರ್ಥಿಗಳಿಗೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಯ ತೊಡಕು. ಗ್ರಾಮೀಣ ವಿದ್ಯಾರ್ಥಿಗಳು ಇಂಗ್ಲಿಷ್ ಮತ್ತು ಗಣಿತವನ್ನು ಸರಿಯಾಗಿ ಕಲಿಯಲಾಗದೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವುದಕ್ಕೂ ಮುಂದೆ ಬರುತ್ತಿಲ್ಲ.
ಯಾರೇ ಗ್ರಾಮೀಣ ವಿದ್ಯಾರ್ಥಿಗಳನ್ನು ನೀವು ಏನಾಗಲು ಇಚ್ಛೀಸುತ್ತಿರಿ ಎಂದು ಪ್ರಶ್ನಿಸಿದರೆ ಅವರು ಕೊಡುವ ಮೊದಲ ಉತ್ತರ ಟೀಚರ್, ಇಲ್ಲ ಹೈಸ್ಕೂಲ್ ಮೇಷ್ಟ್ರು. ಯಾಕೆಂದರೆ ಇಂಗ್ಲಿಷ್ ಮತ್ತು ಹಿಂದಿ ಭಯ. ಇನ್ನು ಕಷ್ಟಪಟ್ಟು ಎಸೆಸೆಲ್ಸಿ ದಾಟಿದವರು, ಇಲ್ಲ ಪಿಯು ಫೇಲಾದವರು, ಡಿಗ್ರಿ ಮುಗಿಸಿದವರೂ ಕೂಡ ಯಾವುದೋ ಒಂದು ಸರಕಾರಿ ಇಲಾಖೆಯಲ್ಲಿ ಡಿ-ಗ್ರೂಪ್ ಕೆಲಸ ಸಿಕ್ಕಿದರೆ ಸಾಕೆಂದುಕೊಂಡು ಹೋರಾಟ ನಡೆಸುತ್ತಿರುತ್ತಾರೆ. ಒಂದು ಕಡೆ ಹಿಂದಿ ತೂಗುಕತ್ತಿ, ಇನ್ನೊಂದು ಕಡೆ ಇಂಗ್ಲಿಷ್ ಗುಮ್ಮ. ಇಂಗ್ಲಿಷ್ ಓದಿದ ರಾಜ್ಯದ ನಗರವಾಸಿಗಳ ಮಕ್ಕಳೂ ಹೆಚ್ಚಾಗಿ ಕೇಂದ್ರ ಸರಕಾರ ಇಲಾಖೆಗಳು ಮತ್ತು ಬ್ಯಾಂಕ್ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಿಲ್ಲ. ಪಿಯು ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಇಲ್ಲ ವೈದ್ಯಕೀಯ ಕಡೆಗೆ ಮಾತ್ರ ಒಲವು ತೋರುತ್ತಾರೆ. ಹಣ ಇರುವ ಪೋಷಕರು ಕೋಟಿಗಳಾದರೂ ಸುರಿದು ವೈದ್ಯಕೀಯ ಕಾಲೇಜುಗಳಿಗೆ ಕಾಡಿಬೇಡಿ ತಮ್ಮ ಮಕ್ಕಳನ್ನು ಸೇರಿಸುತ್ತಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದಾಗ ಕರ್ನಾಟಕದ ಅಭ್ಯರ್ಥಿಗಳು ಕೇಂದ್ರ ಸರಕಾರಿ ಇಲಾಖೆಗಳಿಗೆ ಸೇರಿಕೊಳ್ಳುವುದು ಅಪರೂಪ. ಕೇಂದ್ರದ ಹಿಡಿತದಲ್ಲಿರುವ 120ಕ್ಕಿಂತ ಹೆಚ್ಚು ವಿಭಾಗಗಳು, ಬ್ಯಾಂಕ್ ಕ್ಷೇತ್ರ, ಸರಕಾರಿ, ಅರೆಸರಕಾರಿ ಕ್ಷೇತ್ರಗಳ ಕೆಲಸಗಳನ್ನು ಉತ್ತರ ಭಾರತ ಮತ್ತು ಕೆಲವು ಬುದ್ಧಿವಂತ ರಾಜ್ಯಗಳ ಅಭ್ಯರ್ಥಿಗಳು ಮಾತ್ರ ಪಡೆದುಕೊಳ್ಳುತ್ತಿದ್ದಾರೆ. ತಮ್ಮ ರಾಜ್ಯದ ಮೇಲೆ ಪ್ರೀತಿ ಇರುವ ಕೆಲವು ನಾಯಕರು, ಅಧಿಕಾರಿಗಳು ಅವಕಾಶ ಸಿಕ್ಕಿದಾಗ ತಮ್ಮ ರಾಜ್ಯಗಳ ಅಭ್ಯರ್ಥಿಗಳಿಗೆ ಸಹಾಯ ಮಾಡಿದ ಉದಾಹರಣೆಗಳಿವೆ. ಲಾಲು ಪ್ರಸಾದ್ ಯಾದವ್ ಅವರು ರೈಲ್ವೆ ಮಂತ್ರಿಯಾಗಿದ್ದಾಗ ರೈಲ್ವೆ ಇಲಾಖೆಗೆ ಸಾಕಷ್ಟು ಬಿಹಾರಿಗಳನ್ನು ಸೇರಿಸಿದ್ದರು.
ರಾಜ್ಯದ ಎಲ್ಲಾ ಹಳೆಯ ಶ್ರೇಷ್ಠ ಕಾಲೇಜುಗಳು ಮತ್ತು ವಿಜ್ಞಾನ ವಿಭಾಗಗಳು ಕಳೆದ ಮೂರು ದಶಕಗಳಲ್ಲಿ ಸಂಪೂರ್ಣವಾಗಿ ಕಣ್ಣು ಮುಚ್ಚಿಕೊಂಡವು. ಈಗೇನಿದ್ದರೂ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಪದವಿಗಳಿಗೆ ಬೇಕಾದ ಬೆರಳೆಣಿಕೆ ವಿಷಯಗಳು ಮಾತ್ರ ಕಾಲೇಜುಗಳಲ್ಲಿ ಉಳಿದುಕೊಂಡಿವೆ. ಜೊತೆಗೆ ಕಂಪ್ಯೂಟರ್ ವಿಜ್ಞಾನಕ್ಕೆ ಸಂಬಂಧಪಟ್ಟ ವಿಷಯಗಳು ಮತ್ತು ಯಾರನ್ನೇ ಕೇಳಿದರೂ ಎಂಬಿಎ ಎನ್ನುವ ಸವಕಳಿ ವಿಷಯ.
ಬೆಂಗಳೂರು ವಿಶ್ವವಿದ್ಯಾನಿಲಯದ ಭೂವಿಜ್ಞಾನ ಸ್ನಾತಕೋತ್ತರ ವಿಭಾಗದಲ್ಲಿ ಕಳೆದ ದಶಕದಲ್ಲಿ ವಿದ್ಯಾರ್ಥಿಗಳೇ ಇಲ್ಲದೆ ಮುಚ್ಚುವ ಹಂತಕ್ಕೆ ತಲುಪಿತ್ತು. ಇದೇ ಪರಿಸ್ಥಿತಿ ಎಲ್ಲಾ ವಿಶ್ವವಿದ್ಯಾನಿಲಯಗಳ ವಿಭಾಗಗಳದ್ದೂ ಆಗಿದೆ. ಎರಡು ವರ್ಷಗಳ ಹಿಂದೆ ಇದೇ ವಿಭಾಗಕ್ಕೆ ಉಪನ್ಯಾಸ ಕೊಡಲು ಹೋಗಿದ್ದಾಗ ಎಂಎಸ್ಸಿಯ ಮೊದಲ, ಎರಡನೇ ವರ್ಷದ ತರಗತಿಗಳಲ್ಲಿ ಸುಮಾರು 100 ವಿದ್ಯಾರ್ಥಿಗಳು ಇರುವುದಾಗಿ ತಿಳಿದು ಸಂತೋಷವಾಯಿತು. ಅವರೆಲ್ಲ ಡೊನೇಷನ್ ಕೊಟ್ಟು ಸೇರಿರುವ ಅನ್ಯ ರಾಜ್ಯಗಳ ವಿದ್ಯಾರ್ಥಿಗಳಾಗಿದ್ದು ಅವರಲ್ಲಿ ನಾಲ್ಕೈದು ವಿದ್ಯಾರ್ಥಿಗಳು ಮಾತ್ರ ಕರ್ನಾಟಕದವರಿದ್ದರು. ಅವರ ಭವಿಷ್ಯ ಏನಾಗುತ್ತದೋ ಅದು ಬೇರೆ ಮಾತು.
ಅಂದರೆ ನಮ್ಮ ರಾಜ್ಯದ ವಿದ್ಯಾರ್ಥಿಗಳ ಪ್ರಾತಿನಿಧ್ಯ ಯಾವುದೇ ಭೂವಿಜ್ಞಾನ ಇಲಾಖೆಯಲ್ಲಿ ಮುಂದಿನ ದಿನಗಳಲ್ಲಿ ಸೊನ್ನೆ ಇರುತ್ತದೆ. ಜೊತೆಗೆ ನಮ್ಮ ರಾಜ್ಯದ ಅಭ್ಯರ್ಥಿಗಳು ಕೇಂದ್ರ, ಬ್ಯಾಂಕ್ ಮತ್ತು ಇತರ ಯಾವುದೇ ಇಲಾಖೆಗಳಲ್ಲೂ ಮುಂದಿನ ದಿನಗಳಲ್ಲಿ ಸೊನ್ನೆ ಸುತ್ತುತ್ತಾರೆ ಎನ್ನುವುದು ಗ್ಯಾರಂಟಿ. ಈಗಾಗಲೇ ಕರ್ನಾಟಕ ಮೂಲದ ಲಾಭದಾಯಕ ಬ್ಯಾಂಕ್‌ಗಳನ್ನು ನಷ್ಟದಲ್ಲಿದ್ದ ಉತ್ತರ ಭಾರತದ ಬ್ಯಾಂಕ್‌ಗಳ ಜೊತೆಗೆ ಸೇರಿಸಿಕೊಂಡಾಗ ನಮ್ಮವರು ಯಾರೂ ಬಾಯಿಬಿಡಲಿಲ್ಲ. ಬೆಂಗಳೂರು ಏರ್ ಶೋ ಮತ್ತು ಇಸ್ರೋದ ಕೆಲವು ವಿಭಾಗಗಳನ್ನು ಉತ್ತರಕ್ಕೆ ಕಳುಹಿಸುವ ಹುನ್ನಾರಗಳು ನಡೆಯುತ್ತಿವೆ. ಎಫ್‌ಎಮ್ ರೈನ್‌ಬೋ ಆಕಾಶವಾಣಿಯನ್ನು ಏನೋ ಮಾಡಲು ಹೊರಟಿದ್ದಾರೆ. ನಾನು ಬೆಂಗಳೂರಿನ ಆಗ್ನೇಯ ದಿಕ್ಕಿನಲ್ಲಿರುವ ಒಂದು ಅಪಾರ್ಟ್ ಮೆಂಟ್‌ನಲ್ಲಿ ವಾಸ ಮಾಡುತ್ತಿದ್ದೇನೆ. ಇದರಲ್ಲಿ 400 ಫ್ಲ್ಯಾಟ್‌ಗಳಿದ್ದು ಕನ್ನಡದವರ ಸಂಖ್ಯೆ ಬೆರಳೆಣಿಕೆಯಷ್ಟಿದೆ. ತೆಲುಗು, ತಮಿಳು, ಮಲಯಾಳಿಗಳನ್ನು ದಕ್ಷಿಣದವರೆಂದೇ ಪರಿಗಣಿಸಿದರೂ ಶೇ. 15-20 ದಾಟುವುದಿಲ್ಲ.
ಇಲ್ಲಿರುವ ಉತ್ತರ ಭಾರತದವರೆಲ್ಲ ಹಣವಂತರ ಹಿನ್ನೆಲೆಗೆ ಸೇರಿದವರು. ಇನ್ನೊಂದು ಬೆಂಗಳೂರಿಗೆ ಬಂದು, ಇಲ್ಲೇ ಓದಿ, ಇಲ್ಲೇ ಕೆಲಸಕ್ಕೆ ಸೇರಿಕೊಂಡು ಎರಡು, ಮೂರು ಫ್ಲ್ಯಾಟ್‌ಗಳನ್ನು ಕೊಂಡುಕೊಂಡು ನೆಲೆಸಿರುವ ಐಟಿ-ಬಿಟಿಗಳು. ಈ ಕೊಡುಗೆ ದಯಪಾಲಿಸಿದವರು ರಾಜ್ಯದಲ್ಲಿ ನೂರಾರು ಕಾಲೇಜುಗಳನ್ನು ಸ್ಥಾಪನೆ ಮಾಡಿದ ನಮ್ಮ ರಾಜಕಾರಣಿಗಳು ಮತ್ತು ಲ್ಯಾಂಡ್ ಮಾಫಿಯಾಗಳು. ಈಗ ಹೇಳಿ ಕರ್ನಾಟಕದಲ್ಲಿ ಕನ್ನಡ ಭಾಷೆ-ಕನ್ನಡಿಗರು ಉಳಿದುಕೊಳ್ಳು ತ್ತಾರೆಯೇ? ತಮಿಳುನಾಡು ಮತ್ತು ಕೇರಳ ರಾಜ್ಯಗಳಿಂದ ನಾವೇನಾದರೂ ಕಿಂಚಿತ್ತು ಕಲಿತುಕೊಳ್ಳುವುದು ಇದೆಯೆ? ಮೈಸೂರು ಮಹಾರಾಜರ ಕಾಲದಿಂದಲೇ ‘‘ಮಾಡಲ್ ಸ್ಟೇಟ್’’ ಎಂದು ಕರೆಸಿಕೊಳ್ಳುತ್ತಿದ್ದ ಕರ್ನಾಟಕ ರಾಜ್ಯ ಮತ್ತು ಕನ್ನಡ ಭಾಷೆಯ ಭವಿಷ್ಯ ಏನು?