varthabharthi


ವೈವಿಧ್ಯ

‘ಸೃಷ್ಟಿಬಲೇಶ’ ವಚನಕಾರ ವೀರಣ್ಣ ಕಲಕೇರಿ

ವಾರ್ತಾ ಭಾರತಿ : 15 Feb, 2022
ಜಿ. ಎಮ್. ಶಿರಹಟ್ಟಿ - ನಿವೃತ್ತ ನಿರ್ದೇಶಕರು ದೂರದರ್ಶನ ಕೇಂದ್ರ

ಕೆಂಭಾವಿಯ ಆದಿ ವಚನಕಾರ ಭೋಗಣ್ಣ , ಮುದನೂರು ದೇವರ ದಾಸಿಮಯ್ಯ, ತಿಂಥಣಿ ಮೌನೇಶ್ವರ, ಕೊಡೆಕಲ್ಲ ಬಸವಣ್ಣ ಮುಂತಾದ ವಚನಕಾರರಿಂದ ಪ್ರಸಿದ್ಧ ಪಡೆದ ಸಗರ ನಾಡಿನಲ್ಲಿ ಆಧುನಿಕ ವಚನಕಾರರಾಗಿ ಚಿರಪರಿಚಿತರಾಗಿರುವ ಕೆಂಭಾವಿಯ ವೀರಣ್ಣ ಕಲಕೇರಿಯವರು ನೂರಾರು ವಚನಗಳಿಂದ ‘ಸೃಷ್ಟಿಬಲೇಶ’ ಎಂಬ ನಾಮಾಂಕಿತದ ವಚನ ವಾಙ್ಮಯವನ್ನು ಸೃಷ್ಟಿಸಿದ ಗಮನಾರ್ಹ ವಚನಕಾರರಾಗಿದ್ದಾರೆ. ಇತ್ತೀಚೆಗೆ ಅವರನ್ನು ಭೇಟಿಯಾದಾಗ ಅವರೊಡನೆ ನಡೆಸಿದ ಪ್ರಶ್ನೋತ್ತರ ಹೀಗಿದೆ

ಪ್ರ: ಸಮಕಾಲಿನ ಸಾಮಾಜಿಕ, ಆಧ್ಯಾತ್ಮಿಕ ವಿಚಾರಗಳನ್ನು ನಾಲ್ಕು ಪಂಕ್ತಿಗಳಲ್ಲಿ ಬರೆದು ಅವುಗಳಿಗೆ ವಚನಗಳ ರೂಪಕ ಏಕೆ ಕೊಟ್ಟೀರಿ?

ಉ: ಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯ ತನ್ನದೇಯಾದ ವಿಶಿಷ್ಠ ಸ್ಥಾನವನ್ನು ಹೊಂದಿದೆ. ಶರಣರು, ಸಂತರು ಅಭಿವ್ಯಕ್ತಿಗೆ ಈ ಸಾಹಿತ್ಯವನ್ನು ಮಾಧ್ಯಮವಾಗಿ ಬಳಸಿಕೊಂಡು ಬಂದದ್ದು ನಾವು ನೋಡುತ್ತೇವೆ. ಸಮಾಜದ ವ್ಯವಸ್ಥೆಯ ಜತೆಗೆ ಪರಿವರ್ತನೆಗೆ ಪ್ರಯತ್ನಿಸಿದ್ದನ್ನು, ಮೌಲ್ಯ ಪ್ರತಿಪಾದನೆಯ ಹೇಳಿಕೆಗಳು, ವೈಚಾರಿಕತೆ ನೆಲೆಗಟ್ಟಿನಲ್ಲಿ ಜೀವನ ಧರ್ಮದ ಅರಿವು ಮೂಡಿಸುವ ಕಾರ್ಯ 11ನೇ ಶತಮಾನದ ಪೂರ್ವದಲ್ಲಿಯೇ ಆಧ್ಯರಾದ ಕೆಂಭಾವಿ ಭೋಗಣ್ಣ, ಮುದನೂರು ದಾಸಿಮಯ್ಯ, ಮಾದಾರ ಚನ್ನಯ್ಯ ಸೇರಿದಂತೆ ಮೊದಲಾದ ಅನೇಕ ಶರಣರಿಂದ ಈ ಪರಂಪರೆ ಮುಂದುವರಿದು, ಬಸವಾದಿ ಶರಣರಾದಿಯಾಗಿ ವಚನ ಸಾಹಿತ್ಯ ಬೃಹದಾಕಾರವಾಗಿ ಬೆಳೆದು ಕ್ರಾಂತಿಯ ಸ್ವರೂಪವನ್ನು ಪಡೆಯುತ್ತದೆ. ನಂತರದ ಕಾಲಗಟ್ಟದಲ್ಲಿ ಅನೇಕ ವಚನಕಾರರು ವಚನ ಸಾಹಿತ್ಯಕ್ಕೆ ತಮ್ಮದೇಯಾದ ಕೊಡುಗೆ ನೀಡಿದ್ದಾರೆ, ನೀಡುತ್ತಾ ಬಂದಿದ್ದಾರೆ. ವಚನ ಸಾಹಿತ್ಯವು ಗಂಭೀರವಾದ ವಿಷಯವನ್ನು ಸರಳವಾಗಿ ಸುಲಭವಾಗಿ ಜನಸಾಮಾನ್ಯರಿಗೆ ತಿಳಿಸಲು ಇದೊಂದು ಸೂಕ್ತ ಮಾಧ್ಯಮವಾಗಿದೆ. ಆ ಹಿನ್ನೆಲೆಯಲ್ಲಿ ನನ್ನದು ತೃಣ ಸೇವೆ ಎನ್ನುವ ಭಾವ ನನ್ನದಾಗಿದೆ.

ಪ್ರ: ನಿಮ್ಮ ಎಲ್ಲಾ ವಿಚಾರಗಳನ್ನು ಚಿಂತನೆಗಳನ್ನು ಹಾಗೂ ಈಗಿನ ಮನುಷ್ಯನ ಸ್ಥಿತಿ ಎಲ್ಲವನ್ನು ‘ಸೃಷ್ಟಿಬಲೇಶ’ನಿಗೆ ಒಪ್ಪಿಸಿದ್ದೀರಿ, ಈ ಸೃಷ್ಟಿಬಲೇಶನ ಬಗ್ಗೆ ವಿವರಿಸುವಿರಾ?

 ಉ: ಬಹಳ ಸೂಕ್ತ ಮತ್ತು ಅತ್ಯವಶ್ಯಕವಾದ ಪ್ರಶ್ನೆ. ಈ ಕುರಿತು ವಿವರಿಸುವ ಕೌತುಕ ನನಗೂ ಇದೆ. ಧರ್ಮ ಹುಟ್ಟಿ ಮರ್ಮ ಮರೆತು

ಧರ್ಮಕೊಬ್ಬ ಗುರುವಾದನೆಂದೊಡೆ

ಜಾತಿಗೊಬ್ಬ ಗುರುವು ಹುಟ್ಟಿ

ಜಗದೋಳ್ ಜಗಳಹೆಚ್ಚಿ ಜನ್ಮ ಮೂಲಕ್ಕೆ

ಪೊರೆ ಬಂತು ನೋಡಾ ಸೃಷ್ಟಿಬಲೇಶ.. ಎನ್ನುವಂತೆ, ದೇವರು, ಧರ್ಮ, ಜಾತಿಗಳು ಇಂದು ಸಮಸ್ಯೆಯ ಸೆಲೆಯಾಗಿ ಪರಿಣಮಿಸುತ್ತಿವೆ. ಕಾರಣ ಮನುಷ್ಯನಲ್ಲಿ ಜೀವ ಧರ್ಮದ ಅರಿವು ಇದ್ದರೂ ಪೊರೆ ಬಂದಂತಾಗಿ ಮನುಷ್ಯನನ್ನು ಸಾತ್ವಿಕನನ್ನಾಗಿ, ಆದರ್ಶನನ್ನಾಗಿ ನಿರ್ಮಾಣ ಮಾಡಬೇಕಾದ ಮಾಧ್ಯಮಗಳು ಇಂದು ಬೃಹತ್ ಸಮಸ್ಯೆಗಳಾಗಿ ಸಮಾಜದ ಸಾಮರಸ್ಯಕ್ಕೆ ಹೊಡೆತ ಬೀಳುವುದರೊಂದಿಗೆ ಮನುಕುಲದಲ್ಲಿ ಸಂಕುಚಿತತೆ ಆವರಿಸಿದೆ. ಆದರ್ಶವಾದಿಗಳನ್ನು ಇಂದು ಒಂದೊಂದು ಪಂಗಡಗಳಿಗೆ ಅಳವಡಿಸಿಕೊಂಡು ಅವರನ್ನು ಸೀಮಿತಗೊಳಿಸುವಂತಾಗುತ್ತಿದೆ. ಇಂದು ಅದೆಷ್ಟೋ ದಾರ್ಶನಿಕರನ್ನು ಧರ್ಮ ಮತ್ತು ಜಾತಿಯ ಸಂಕೋಲೆಯಲ್ಲಿ ಬಂಧಿಸಿ ಅವರನ್ನು ಒಂದೊಂದು ಪಂಗಡಗಳಿಗೆ ಸೀಮಿತಗೊಳಿಸುತ್ತಿದ್ದೇವೆ. ಇದಕ್ಕಿಂತ ದೊಡ್ಡ ಖೇದ ಮತ್ತೊಂದಿಲ್ಲ ಎನಿಸುತ್ತಿದೆ.

 ಹಾಗಾಗಿ ಸೃಷ್ಟಿಬಲೇಶ ಸೀಮಿತಗೊಳ್ಳಬಾರದು, ಧರ್ಮ-ಜಾತಿ, ಪಂಗಡಗಳಿಗೆ ಸೀಮಿತಗೊಳ್ಳಬಾರದು ಎಂಬ ಉದ್ದೇಶದಿಂದ ಇಲ್ಲಿಯವರೆಗೂ ಹೆಸರಿಸದ ಜೀವಪರ ಪದ ಪ್ರಯೋಗವಾಗಿದೆ ನನ್ನ ವಚನಾಂಕಿತ ಎಂದುಕೊಂಡಿರುವೆ. ಇಲ್ಲಿ ಮೂರು ಪದಗಳಿವೆ. ಸೃಷ್ಟಿ, ಬಲ, ಈಶ= ಸೃಷ್ಟಿಬಲೇಶ. ಈ ಸೃಷ್ಟಿಯೊಳು ಒಂದು ಶಕ್ತಿ ಇದೆ, ಆ ಶಕ್ತಿಯ ನಿಯಂತ್ರಕನೇ ಕರ್ತೃ, ಒಡೆಯ ಎಂಬ ಪರಿಕಲ್ಪನೆಯಲ್ಲಿ ಜೀವಪರ ಧರ್ಮದ ಪ್ರತೀಕವಾಗಿ ಉಪಯೋಗಿಸಲ್ಪಟ್ಟ ಅಂಕಿತ ಈ ಸೃಷ್ಟಿಬಲೇಶ. ಇದು ನನ್ನ ಕನಸಿನ ಕೂಸು ಎಂದು ಹೇಳಬಲ್ಲೆ.

ಪ್ರ: ಈ ನಿಮ್ಮ ವಚನಗಳು ಈ ನಾಲ್ಕು ಸಾಲುಗಳಲ್ಲಿ ಸಂಪೂರ್ಣವಾಗಿ ನಿಮ್ಮ ವೈಚಾರಿಕತೆಯನ್ನು ಬಿಂಬಿಸಲು ಸಾಧ್ಯವಾಗಿದೆಯೇ? ಅಥವಾ ಇವುಗಳ ವಿಸ್ತಾರ ಇನ್ನು ಬೇಕೆನಿಸುತ್ತದೆಯೇ?

ಉ: ಈ ಪ್ರಶ್ನೆಯಿಂದ ‘‘ಪುರಾಣ ಹೇಳುತ್ತಾ ಹೋದರೆ ಅದು ಮುಗಿಯುವುದೇ ಇಲ್ಲ’’ ಎಂಬ ನಮ್ಮ ಜನಪದರ ಮಾತು ನೆನಪಿಗೆ ಬರುತ್ತದೆ. ತಮಿಳು ನಾಡಿನ ತಿರುವಳ್ಳುವರನ ಸಾಲುಗಳು ಕೇವಲ ಒಂದೂವರೆ ಮಾತ್ರ, ಈ ಒಂದೂವರೆ ಸಾಲುಗಳು ‘‘ಸಾಸಿವೆ ಕಾಳನ್ನು ಟೊಳ್ಳು ಮಾಡಿ ಸಪ್ತ ಸಾಗರ ಅಡಗಿಸಿಟ್ಟಂತೆ’’ ಎಂದು ಹೋಲಿಕೆ ಮಾಡಲಾಗಿದೆ. ಇಲ್ಲಿ ಆ ಸಾಲುಗಳಲ್ಲಿನ ಸತ್ವ ಮತ್ತು ಓದುಗನ ವಿಷಯ ಅರ್ಥ ಗ್ರಹಿಕೆಯನ್ನು ಅವಲಂಬಿತವಾಗಿರುತ್ತದೆ. ನಾನು ಕೂಡ ವಿಸ್ತಾರವನ್ನೇ ಸುಸ್ಥಿರವಾಗಿ ಸಂಕ್ಷಿಪ್ತವಾಗಿ ಹಿಡಿದಿಡಲು ಪ್ರಯತ್ನ ಮಾಡಿರುವೆ. ಈ ಸಾಲುಗಳು ಕೂಡ ಓದುಗನ ಅರ್ಥೈಸಿಕೊಳ್ಳುವಿಕೆಯನ್ನು ಅವಲಂಬಿಸಿದೆ ಎಂದು ಹೇಳಬಲ್ಲೆ.

ಪ್ರ: ಪ್ರಸಕ್ತ ಮನಸ್ಸಿನ ರೀತಿ ನೀತಿಗಳನ್ನು ಸಮಾಜದ ಓರೆಕೋರೆಗಳನ್ನು ತಿದ್ದುವುದರಲ್ಲಿ ನಾಲ್ಕು ಸಾಲಿನ ತಮ್ಮ ವಚನಗಳು ಯಶಸ್ವಿಯಾಗುವ ನಂಬಿಕೆ ನಿಮಗಿದೆಯೇ?

ಉ: ಈಗಾಗಲೇ ತಿರುವಳ್ಳುವರನ ಒಂದೂವರೆ ಸಾಲಿನ ಕುರಿತು ಹೇಳಿರುವೆ. ಇವತ್ತಿನ ಸ್ಥಿತಿಗತಿಗಳ ಹಾಗೂ ಓರೆ ಕೋರೆಗಳ ಬಗ್ಗೆ ನನ್ನ ಅರಿವಿನ ಪರಿಮಿತಿಯಲ್ಲಿ ಸಮಾಜದ ಗಮನಕ್ಕೆ ತರುವುದಷ್ಟೆ ನನ್ನ ಕೆಲಸ. ಈ ಸಾಲುಗಳು ಮುಂದಿನ ಪೀಳಿಗೆಗೆ ಮುಖ್ಯವಾಗಬಹುದು. ಇತಿಹಾಸದಲ್ಲಿ ಅನೇಕ ಜನ ಸಮಾಜ ಸುಧಾರಕರು ಬಂದು ಹೋದರು. ಸಮಾಜ ಸುಧಾರಕರೆಂದೇ ಕರೆಸಿಕೊಂಡರೂ ಅವರ ಆದರ್ಶಮಯ ನಡೆ ನುಡಿಗಳಿಂದ ಯಾವುದೇ ಸಾಮಾಜ ಪರಿಪೂರ್ಣ ಬದಲಾವಣೆ ಆಗಿದೆ ಎಂದು ಹೇಳಲಾಗದು. ಶರಣರು, ಸೂಫಿ ಸಂತರು ತಮ್ಮ ಅನುಭಾವಯುಕ್ತ ಆದರ್ಶಗಳನ್ನು ಬಿತ್ತಿದರು. ಆದರೆ ನಿರೀಕ್ಷಿತ ಫಲ ಪಡೆದರು ಎಂದು ಹೇಳಬಹುದೆ? ಸಮ ಸಮಾಜ ಪರಿಕಲ್ಪನೆಯಲ್ಲಿ ಸಾಕಷ್ಟು ಪ್ರಯತ್ನ ಮಾಡಿದ್ದನ್ನು ನೋಡುತ್ತೇವೆ, ಆದರೆ ಈಗ ಅವರ ಪ್ರಯತ್ನಗಳು ಎಷ್ಟರ ಮಟ್ಟಿಗೆ ಫಲಪ್ರದವಾಗಿದೆ ಎಂಬುದು ಕಣ್ಣಾರೆ ಕಾಣುತ್ತೇವೆ. ಆದರೂ ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆದೇ ಇದೆ, ನಡೆಯುತ್ತಲೇ ಇವೆ. ನನ್ನ ಸಾಲುಗಳು ಸಾರ್ವತ್ರಿಕವಾಗಿ ಪ್ರಭಾವ ಬೀರದೆ ಇರಬಹುದು. ಕೆವರ ಮನಸ್ಸಿನ ಮೇಲೆ ಪ್ರಾಭಾವ ಬೀರುವುದರಲ್ಲಿ ಸಂದೇಹವಿಲ್ಲ. ಆ ಕುರಿತು ಹಲವರು ಒಪ್ಪಿಕೊಂಡ ಉದಾಹರಣೆಗಳು ಇವೆ. ಇದಕ್ಕೆ ತಾವೂ ಹೊರತಾಗಿಲ್ಲ ಎಂದು ಭಾವಿಸಿದರೆ ತಪ್ಪಾಗಲಾರದು ಎಂಬ ನನ್ನ ಭಾವನೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)