ಉಡುಪಿ: ಕೋವಿಡ್ ಗೆ ಇಬ್ಬರು ಬಲಿ; 50 ಮಂದಿಯಲ್ಲಿ ಸೋಂಕು ಪತ್ತೆ
ಸಾಂದರ್ಭಿಕ ಚಿತ್ರ (PTI)
ಉಡುಪಿ: ಮಂಗಳವಾರ ಜಿಲ್ಲೆಯಲ್ಲಿ ಮತ್ತಿಬ್ಬರು ಹಿರಿಯರು ಕೋವಿಡ್ಗೆ ಬಲಿಯಾಗಿದ್ದಾರೆ. ದಿನದಲ್ಲಿ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 50 ಆಗಿದೆ. 89 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದರೆ, ಸದ್ಯ ಚಿಕಿತ್ಸೆಯಲ್ಲಿರುವವರ ಸಂಖ್ಯೆ 572ಕ್ಕಿಳಿದಿದೆ.
ಕುಂದಾಪುರದ 87 ವರ್ಷಪ್ರಾಯದ ವೃದ್ಧರು ಹಾಗೂ ಕಾರ್ಕಳದ 72ರ ಹಿರಿಯರು ಕೋವಿಡ್ನಿಂದ ಮೃತಪಟ್ಟಿದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಕೋವಿಡ್ಗೆ ಬಲಿಯಾದವರ ಸಂಖ್ಯೆ 536ಕ್ಕೇರಿದೆ. ಕುಂದಾಪುರದ ವೃದ್ಧ ಸೋಮವಾರ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಕಾರ್ಕಳದ ವೃದ್ಧ ಶನಿವಾರ ಸರಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಎಂದಿನಂತೆ ಇವರೂ ಕೋವಿಡ್ ರೋಗ ಲಕ್ಷಣದೊಂದಿಗೆ ಇತರ ಗಂಭೀರ ಕಾಯಿಲೆಯಿಂದ ಬಳಲುತಿದ್ದರು.
ಇಂದು ಪಾಸಿಟಿವ್ ಬಂದ 50 ಮಂದಿಯಲ್ಲಿ 15 ಮಂದಿ ಪುರುಷರು ಹಾಗೂ 35 ಮಂದಿ ಮಹಿಳೆಯರಿದ್ದಾರೆ. ಇವರಲ್ಲಿ 39 ಮಂದಿ ಉಡುಪಿ ತಾಲೂಕಿಗೆ, ತಲಾ ಮೂವರು ಕುಂದಾಪುರ ಹಾಗೂ ಆರು ಮಂದಿ ಕಾರ್ಕಳ ತಾಲೂಕಿಗೆ ಸೇರಿದವರು. ಪಾಸಿಟಿವ್ ಬಂದವರಲ್ಲಿ 45 ಮಂದಿಗೆ ಅವರವರ ಮನೆಗಳಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಈಗ 46ಕ್ಕಿಳಿದಿದೆ.
ಸೋಮವಾರ 89 ಮಂದಿ ರೋಗಮುಕ್ತರಾಗಿದ್ದು, ಕೊರೋನದಿಂದ ಜ.1ರ ನಂತರ ಚೇತರಿಸಿಕೊಂಡವರ ಸಂಖ್ಯೆ 17647ಕ್ಕೇರಿದೆ. ನಿನ್ನೆ ಜಿಲ್ಲೆಯ ಒಟ್ಟು 1288 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಜ.1ರ ಬಳಿಕ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 18,115ಕ್ಕೇರಿದೆ.
4239 ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ಇಂದು ಒಟ್ಟು 4239 ಮಂದಿ ಕೋವಿಡ್ ಲಸಿಕೆಯನ್ನು ಪಡೆದಿದ್ದಾರೆ. ಇವರಲ್ಲಿ 390 ಮಂದಿ 60 ವರ್ಷ ಮೇಲಿನ ಹಿರಿಯ ನಾಗರಿಕರು ಸೇರಿದಂತೆ ಒಟ್ಟು 482 ಮಂದಿ ಮುನ್ನೆಚ್ಚರಿಕೆ ಒಂದು ಡೋಸ್ ಲಸಿಕೆಯನ್ನು ಪಡೆದಿದ್ದಾರೆ.
ಉಳಿದಂತೆ 1483 ಮಂದಿ ಮೊದಲ ಡೋಸ್ ಹಾಗೂ 2274 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. 15ರಿಂದ 18 ವರ್ಷದೊಳಗಿನವರಲ್ಲಿ 28 ಮಂದಿ ಮೊದಲ ಡೋಸ್ ಹಾಗೂ 1549 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ.