ಸಂಸದ ಸೂರ್ಯ ಅವರಿಗೊಂದು ಬಹಿರಂಗ ಪತ್ರ
ಎದೆ ಸೀಳಿದರೂ ನಾಲ್ಕಕ್ಷರ ನಿಜವಿಲ್ಲವೇಕೆ?
ಮೋದಿ ಸರಕಾರದ ಅಂಕಿ-ಅಂಶದ ಪ್ರಕಾರವೇ 2014-2021ರ ನಡುವಿನ ಅವಧಿಯ ಏಳು ವರ್ಷಗಳಲ್ಲಿ 2016ರಲ್ಲಿ ಮಾತ್ರ ಜಿಡಿಪಿ ಅಭಿವೃದ್ಧಿ ದರ ಶೇ. 8ರಷ್ಟಾಗಿತ್ತು. ಅದನ್ನು ಬಿಟ್ಟರೆ 2016ರಿಂದ 2020ರ ವರೆಗೆ ಪ್ರತಿವರ್ಷ ಕುಸಿಯುತ್ತಾ ಬಂದು ಜಿಡಿಪಿ ದರ ಕೋವಿಡ್ಗೆ ಮುಂಚೆ ಅತ್ಯಂತ ಕಡಿಮೆ ಶೇ.4ಕ್ಕೆ ಕುಸಿದಿತ್ತು. ಕೋವಿಡ್ ಅವಧಿಯಲ್ಲಿ ಅದು ಹೆಚ್ಚಾಗುವುದಿರಲಿ, ಮೊದಲಿಗಿಂತ ಶೇ. 27ರಷ್ಟು ಕಡಿಮೆಯಾಗಿತ್ತು. ಈಗಲೂ ನಮ್ಮ ಜಿಡಿಪಿಯಾಗಲೀ ಅಥವಾ ಅಭಿವೃದ್ಧಿ ದರವಾಗಲೀ ಕೋವಿಡ್ ಪೂರ್ವ ಹಂತವನ್ನು ಮುಟ್ಟಿಲ್ಲ.
ಸಂಸದ ತೇಜಸ್ವೀ ಸೂರ್ಯ ಅವರೇ,
ಕಾರ್ಪೊರೇಟ್ ಮಾಧ್ಯಮಗಳು ಹಾಗೂ ಆರೆಸ್ಸೆಸ್ಗಳ ಸಹಕಾರದೊಂದಿಗೆ ಮೋದಿ ಸರಕಾರ ಸೃಷ್ಟಿಸಿದ ‘‘ಹಿಂದೂ ಹಾಗೂ ದೇಶ ಆತಂಕದಲ್ಲಿವೆ’’ ಎಂಬ ಸುಳ್ಳುಗಳ ಅಲೆಯಲ್ಲಿ ತಾವೂ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸಂಸದರಾದಿರಿ.
ಅದೇ ಹಾವಿನಪುರದವರಾದರೂ ಯುವ ಸಂಸದರಾದ ನೀವು ಇನ್ನೂ ಬೆಳೆಯುತ್ತಿರುವುದರಿಂದ ಸ್ವಲ್ಪಮಟ್ಟಿನ ನಾಡಸೇವೆ ಮಾಡಬಹುದೆಂದು ಕೆಲವರು ಹುಸಿ ಆಶಾವಾದವನ್ನು ಇಟ್ಟುಕೊಂಡಿದ್ದರು. ಆದರೆ ತಾವು ಇತರ 25 ಬಿಜೆಪಿ ಎಂಪಿಗಳಂತೆ ಕರ್ನಾಟಕದ ಹಿತಾಸಕ್ತಿಗಳ ಪ್ರಶ್ನೆ ಬಂದಾಗ ಅಪಾರ ಮೌನವನ್ನೂ ಆರೆಸ್ಸೆಸ್-ಮೋದಿ-ಅಂಬಾನಿ ಆಸಕ್ತಿಗಳ ವಿಷಯ ಬಂದಾಗ ತಮ್ಮೆಲ್ಲಾ ಮಾತಿನ ಜಾಣ್ಮೆಯನ್ನು ಬಳಸುತ್ತಾ ಮೋದಿ ಸರಕಾರದ ಸುಳ್ಳಿನ ಮನೆಗೆ ಇಟ್ಟಿಗೆ ಜೋಡಿಸುತ್ತಾ ಬಂದಿರಿ. ವಿಷಾದವೆಂದರೆ ಮೋದಿ ಭಜನೆ ಮಾಡುವಲ್ಲಿ ಇತರ ರಾಜ್ಯದ ಎಂಪಿಗಳಿಗಿಂತ ಕರ್ನಾಟಕದ ಯುವಸಂಸದರ ನಡುವೆ ಪೈಪೋಟಿಯೇ ಏರ್ಪಟ್ಟಂತೆ ಕಾಣುತ್ತದೆ. ಆದರೆ ಆ ಸ್ಪರ್ಧೆಯಲ್ಲಿ ನೀವು ಮೊನ್ನೆ ಇತರರನ್ನೂ ಮೀರಿಸಿಬಿಟ್ಟಿರಿ. ಸಂಸತ್ತಿನಲ್ಲಿ ನೀವು ಮೋದಿ ಸರಕಾರದ ಕಳೆದ ಎರಡು ವರ್ಷಗಳ ದುರಾಡಳಿತವನ್ನು, ಹೆಚ್ಚುತ್ತಿರುವ ಆರ್ಥಿಕ ದುಸ್ಥಿತಿಯನ್ನು ಸಮರ್ಥಿಸಿಕೊಳ್ಳುತ್ತಾ ಸತ್ಯದ ತಲೆಯ ಮೇಲೆ ಹೊಡೆಯುವಂತೆ ಆಡಿದ ಸುಳ್ಳುಗಳು ನಿಮ್ಮನ್ನು ಮೋದಿ ಭಜನೆಯ ಪೈಪೋಟಿಯಲ್ಲಿ ಅಗ್ರಸ್ಥಾನಕ್ಕೆ ಏರಿಸಿವೆ. ಸಂಸತ್ತಿನಲ್ಲಿ ನೀವು ಆಡಿದ ಆ ಮಹಾಸುಳ್ಳುಗಳು ತಮ್ಮ ಭಟ್ಟಂಗಿತನಕ್ಕೆ, ಸ್ವಾರ್ಥಕ್ಕೆ ಮಾತ್ರವಲ್ಲ ಈ ದೇಶದ ಜನರ ಬಗ್ಗೆ ತಮಗೆ ಮತ್ತು ತಮ್ಮ ಪಕ್ಷಕ್ಕೆ ಇರುವ ಮಹಾ ತಿರಸ್ಕಾರಕ್ಕೂ ಹಾಗೂ ಜನರನ್ನು ಮುಠ್ಠಾಳರೆಂದು ಭಾವಿಸುವ ದುಷ್ಟತನಕ್ಕೂ ಉದಾಹರಣೆಯಾಗಿದೆ. ಕುಟುಂಬ ರಾಜಕಾರಣ- ಕಾಂಗ್ರೆಸ್ನಲ್ಲಿದೆ-ಆದರೆ ಬಿಜೆಪಿ ಎಲ್ಲಾ ಪಕ್ಷಗಳನ್ನೂ ಮೀರಿಸಿದೆ!
ಬಸವನಗುಡಿಯ ಬಿಜೆಪಿ ಶಾಸಕರಾದ ರವಿಸುಬ್ರಹ್ಮಣ್ಯರ ಸೋದರ ಸಂಬಂಧಿಯಾದ ತಾವು ಕಾಂಗ್ರೆಸ್ ಪಕ್ಷವನ್ನು ಹೇಗೆ ಕುಟುಂಬ ರಾಜಕಾರಣದ ಪಕ್ಷವೆಂದು ಹಂಗಿಸಿದಿರಿ. ಅದು ನಿಜವೇ. ಆದರೆ ಅದು ಕಾಲು ಭಾಗದ ಸತ್ಯ. ಇನ್ನು ಮುಕ್ಕಾಲು ಭಾಗ ಸತ್ಯವೇನೆಂದರೆ ಇಂದು ಮುಕ್ಕಾಲು ಭಾಗ ಡೈನಾಸ್ಟ್ಗಳು ಬಿಜೆಪಿ ಪಕ್ಷದವರೇ ಆಗಿರುವುದು. ವಾಸ್ತವವೇನೆಂದರೆ, 2019ರ ಲೋಕಸಭಾ ಚುನಾವಣೆಯಲ್ಲಂತೂ ಆಯ್ಕೆಯಾದ ಸಂಸದರಲ್ಲಿ ಶೇ. 30ರಷ್ಟು (542 ಸಂಸದರಲ್ಲಿ 162 ಸಂಸದರು) ಸಂಸದರು ವಂಶಾಡಳಿತ ರಾಜಕರಣದವರೇ. ಅದರಲ್ಲಿ ತಮ್ಮ ಬಿಜೆಪಿ ಪಕ್ಷವೇ ಅಗ್ರಸ್ಥಾನದಲ್ಲಿದೆಯಲ್ಲವೇ? ಲೋಕಸಭೆ ಮತ್ತು ರಾಜ್ಯಸಭೆಗಳೆರಡನ್ನೂ ಸೇರಿಸಿ ಒಟ್ಟಾರೆ ಸಂಸತ್ತಿನಲ್ಲಿ ಬಿಜೆಪಿ ಪಕ್ಷದ 388 ಸಂಸದರಿದ್ದಾರೆ. ಅದರಲ್ಲಿ 45 ಜನ, ಅಂದರೆ ಶೇ.11ರಷ್ಟು ಸಂಸದರು ಕುಟುಂಬ ರಾಜಕಾರಣಿಗಳೇ..ವಂಶಾಡಳಿತವನ್ನು ಮುಂದುವರಿಸುತ್ತಿರುವವರೇ..ಸಂಸತ್ತಿನಲ್ಲಿರುವ ಯಾವ ಪಕ್ಷಕ್ಕೂ ಸದ್ಯಕ್ಕೆ ತಮ್ಮ ಸನಿಹ ಬರಲೂ ಸಾಧ್ಯವಿಲ್ಲ. ತಮಗೆ ಗೊತ್ತಿಲ್ಲದಿದ್ದರೆ ಈ ವರದಿಯನ್ನು ಒಮ್ಮೆ ಓದಿಬಿಡಿ.
(https://theprint.in/politics/bjps-list-of-dynasts-is-only-growing-longer-it-now-includes-at-least-11-of-its-mps/465476/)
ಅಂಕಿ-ಅಂಶಗಳ ಹೇರಾಫೇರಿ ಮಾಡಿದರೆ ಜಿಡಿಪಿ ಏರುವುದೇ?
ಅವೆಲ್ಲಕ್ಕಿಂತ ಮುಖ್ಯವಾಗಿ ತಮ್ಮ ಎಲುಬಿಲ್ಲದ ನಾಲಗೆಯು ಮೋದಿ ಅಧಿಕಾರಕ್ಕೆ ಬರುವ ಮುಂಚೆ ಭಾರತದ ಜಿಡಿಪಿ ರೂ. 110 ಲಕ್ಷ ಕೋಟಿಯಿತ್ತೆಂದೂ ಅದೀಗ ಮೋದಿಯವರು ಮಾಡಿದ ಆರ್ಥಿಕ ಪವಾಡದಿಂದಾಗಿ ರೂ. 230 ಲಕ್ಷ ಕೋಟಿಗೇರಿದೆಯೆಂದು ಹೇಳಿತು.. ಮಾನ್ಯರೇ ಸ್ವಲ್ಪನಿಮ್ಮದೇ ಸರಕಾರದ ಅಂಕಿ-ಅಂಶಗಳನ್ನು ಗಮನಿಸಿ. 2014-2021ರ ನಡುವಿನ ಏಳು ವರ್ಷಗಳಲ್ಲಿ ಭಾರತದ ಜಿಡಿಪಿ ರೂ. 110 ಲಕ್ಷದಿಂದ ರೂ. 230 ಲಕ್ಷ ಕೋಟಿಗೇರಬೇಕೆಂದರೆ ಈ ಅವಧಿಯಲ್ಲಿ ನಮ್ಮ ಜಿಡಿಪಿ ಅಭಿವೃದ್ಧಿ ದರ ಏನಿಲ್ಲವೆಂದರೂ ವರ್ಷಾನುವಷರ್ ಶೇ. 15-20ರ ಗತಿಯಲ್ಲಿ ಅಭಿವೃದ್ಧಿಯಾಗಿರಬೇಕಿತ್ತು. ಅಲ್ಲವೇ? ಆದರೆ ಮೋದಿ ಸರಕಾರದ ಅಂಕಿ-ಅಂಶದ ಪ್ರಕಾರವೇ 2014-2021ರ ನಡುವಿನ ಅವಧಿಯ ಏಳು ವರ್ಷಗಳಲ್ಲಿ 2016ರಲ್ಲಿ ಮಾತ್ರ ಜಿಡಿಪಿ ಅಭಿವೃದ್ಧಿ ದರ ಶೇ. 8ರಷ್ಟಾಗಿತ್ತು. ಅದನ್ನು ಬಿಟ್ಟರೆ 2016ರಿಂದ 2020ರ ವರೆಗೆ ಪ್ರತಿವರ್ಷ ಕುಸಿಯುತ್ತಾ ಬಂದು ಜಿಡಿಪಿ ದರ ಕೋವಿಡ್ಗೆ ಮುಂಚೆ ಅತ್ಯಂತ ಕಡಿಮೆ ಶೇ.4ಕ್ಕೆ ಕುಸಿದಿತ್ತು. ಕೋವಿಡ್ ಅವಧಿಯಲ್ಲಿ ಅದು ಹೆಚ್ಚಾಗುವುದಿರಲಿ, ಮೊದಲಿಗಿಂತ ಶೇ. 27ರಷ್ಟು ಕಡಿಮೆಯಾಗಿತ್ತು. ಈಗಲೂ ನಮ್ಮ ಜಿಡಿಪಿಯಾಗಲೀ ಅಥವಾ ಅಭಿವೃದ್ಧಿ ದರವಾಗಲೀ ಕೋವಿಡ್ ಪೂರ್ವ ಹಂತವನ್ನು ಮುಟ್ಟಿಲ್ಲ. ಹೀಗಿರುವಾಗ ಸಂಸದರೇ ನೀವು ಯಾವ ಭಾರತದ ಜಿಡಿಪಿಯ ಬಗ್ಗೆ ಮಾತನಾಡುತ್ತಿದ್ದೀರಿ?
ಭಾರತದಲ್ಲಿ ಆಯಾ ಸಾಲಿನ ಜಿಡಿಪಿಯ ಮೌಲ್ಯವನ್ನು ಲೆಕ್ಕಾಚಾರ ಮಾಡುವಾಗ 2011-12ರ ಸಾಲಿನ ದರವನ್ನು ಸ್ಥಾಯಿ ದರವನ್ನಾಗಿ ಪರಿಗಣಿಸುತ್ತಾರೆ ಹಾಗೂ ಅದರ ಜೊತೆಗೆ ಅದೇ ಜಿಡಿಪಿಯ ಅಂಕಿ-ಅಂಶವನ್ನು ಹಾಲಿ ದರದಲ್ಲಿ ಲೆಕ್ಕ ಮಾಡಿ ಮತ್ತೊಂದು ಅಂಕಿ-ಅಂಶವನ್ನು ಕೊಡುತ್ತಾರೆ. ಹೀಗಾಗಿ ಪ್ರತಿವರ್ಷದ ಜಿಡಿಪಿಯನ್ನು ಎರಡು ರೀತಿಯಲ್ಲಿ ಒದಗಿಸಲಾಗುತ್ತದೆ. ಮೊದಲನೆಯದು 2011ರ ಸ್ಥಾಯಿ ದರದ ಮೊತ್ತ. ಎರಡನೆಯದು ಹಾಲಿ ದರದ ಲೆಕ್ಕಾಚಾರದಲ್ಲಿ ಮತ್ತೊಂದು ಮೊತ್ತ. ಹೀಗಾಗಿ ಜಿಡಿಪಿ ಬೆಳವಣಿಗೆಯನ್ನು ಹೋಲಿಸಿ ನೋಡಬೇಕಾದರೆ ಆಯಾ ವರ್ಷದ ಜಿಡಿಪಿಯ 2011ರ ಸ್ಥಾಯಿ ದರದ ಲೆಕ್ಕಾಚಾರವನ್ನು ಹಿಂದಿನ ವರ್ಷದ ಸ್ಥಾಯಿ ದರಗಳ ಮೊತ್ತಕ್ಕೂ, ಜಿಡಿಪಿಯ ಹಾಲಿ ದರದಲ್ಲಿನ ಲೆಕ್ಕಾಚಾರವನ್ನು, ಹಿಂದಿನ ವರ್ಷದ ಹಾಲಿ ದರದ ಲೆಕ್ಕಾಚಾರಗಳಿಗೂ ಹೋಲಿಸಬೇಕು. ಸ್ಥಾಯಿ ದರದ ಲೆಕ್ಕಾಚಾರಗಳನ್ನು ಹಾಲಿ ದರದೊಂದಿಗೆ ಹೋಲಿಸಬಾರದು.
ಆದರೆ ತಾವೂ ಮೋದಿ ಶಿಷ್ಯರಲ್ಲವೇ.. ಇದರಲ್ಲಿ ಒಂದು ಸಣ್ಣ ಮೋದಿ ಮ್ಯಾಜಿಕ್ ಮಾಡಿಬಿಟ್ಟಿರಿ. ಮೋದಿ ಸರಕಾರ ಅಧಿಕಾರಕ್ಕೆ ಬಂದ 2014ರಲ್ಲಿ ಭಾರತದ ಜಿಡಿಪಿಯು 2011-12ರ ದರದಲ್ಲಿ ರೂ. 105 ಲಕ್ಷ ಕೋಟಿಗಳು ಹಾಗೂ ಹಾಲಿ ದರದಲ್ಲಿ 124 ಲಕ್ಷ ಕೋಟಿ ರೂ.ಗಳೂ ಆಗಿದ್ದವು. ಕೋವಿಡ್ಗೆ ಮುನ್ನ 2019-20ರಲ್ಲಿ ಭಾರತದ ಜಿಡಿಪಿಯು 2011ರ ಸ್ಥಾಯಿ ದರದಲ್ಲಿ ರೂ. 145 ಲಕ್ಷ ಕೋಟಿಗಳಿಗೆ ಏರಿತು ಹಾಗೂ ಹಾಲಿ ದರದಲ್ಲಿ ರೂ. 203 ಲಕ್ಷ ಕೋಟಿಗಳಿಗೇರಿತ್ತು. ಇದು ಕೋವಿಡ್ ವರ್ಷವಾದ 2020-21ರಲ್ಲಿ ಕುಸಿದು 2011ರ ಸ್ಥಾಯಿ ದರದಲ್ಲಿ ರೂ. 135 ಲಕ್ಷ ಕೋಟಿಗಳಿಗೆ ಹಾಗೂ ಹಾಲಿ ದರದಲ್ಲಿ 197 ಲಕ್ಷ ಕೋಟಿ ರೂ. ಗಳಿಗೆ ಕುಸಿಯಿತು. 2021-22 ಸಾಲಿನಲ್ಲಿ ಹಾಲಿ ದರದಲ್ಲಿ ಭಾರತದ ಜಿಡಿಪಿಯು 232 ಲಕ್ಷ ಕೋಟಿಗೆ ಏರಿಕೆಯಾಗಲಿದೆಯೆಂದು ಊಹಿಸಲಾಗಿದೆ. ಆದರೆ 2011ರ ಸ್ಥಾಯಿ ದರದಲ್ಲಿ ಇದು 148 ಲಕ್ಷ ಕೋಟಿಗಳಷ್ಟೆ. ಹಾಲಿ ದರದ ಲೆಕ್ಕಚಾರವು ಹಣದುಬ್ಬರವನ್ನು ಸೇರಿಸಿ ಮಾಡುವ ಲೆಕ್ಕಾಚಾರವಾದ್ದರಿಂದ ಅದು ಆರ್ಥಿಕತೆಯಲ್ಲಿನ ಆ ಸಾಲಿನ ಅಸಲೀ ಏರಿಕೆಯನ್ನು ತೋರುವುದಿಲ್ಲ. ಅದರೆ ತಾವು ಅತ್ಯಂತ ಚಾಣಾಕ್ಷತನದಿಂದ (ಅಥವಾ ಕುತಂತ್ರದಿಂದ) ಜನರಿಗೆ ಮೋಸ ಮಾಡಿರುವುದು ಹೀಗೆ:
ಮೋದಿ ಪೂರ್ವದಲ್ಲಿ ಅಂದರೆ 2014ರಲ್ಲಿ ಭಾರತದ ಜಿಡಿಪಿಯು 2011-12ರ ಸ್ಥಾಯಿ ದರದಲ್ಲಿ 105 ಲಕ್ಷ ಕೋಟಿ. ಆದರೆ ಹಾಲಿ ದರದಲ್ಲಿ 124 ಲಕ್ಷ ಕೋಟಿ. ನೀವು ಸಂಸತ್ತಿನಲ್ಲಿ ಮಾತನಾಡುವಾಗ ಆಯ್ಕೆ ಮಾಡಿಕೊಂಡಿದ್ದು 2011ರ ಸ್ಥಾಯಿ ದರದ ಲೆಕ್ಕಾಚಾರವನ್ನು-105 ಲಕ್ಷ ಕೋಟಿ. ಆದರೆ 2021-22ರ ಸಾಲಿನ ಭಾರತದ ಜಿಡಿಪಿಯು 2011ರ ಸ್ಥಾಯಿ ದರದಲ್ಲಿ 148 ಲಕ್ಷ ಕೋಟಿಗಳು ಮಾತ್ರ. ಆದರೆ ಹಾಲಿ ದರದಲ್ಲಿ 232 ಲಕ್ಷ ಕೋಟಿ ಎಂಬ ಅಂದಾಜು ಮಾಡಲಾಗಿದೆ. ಮೋದಿ ಭಜನೆಗಾಗಿ ಇವೆರಡರಲ್ಲಿ ನೀವು ಆಯ್ಕೆ ಮಾಡಿಕೊಂಡಿದ್ದು 2011ರ ಸ್ಥಾಯಿ ದರವಲ್ಲ. ಬದಲಿಗೆ ಹಾಲಿ ದರದಲ್ಲಿ ಅರ್ಥಾತ್ ಇಂದಿನ ಹಣದುಬ್ಬರ ಮತ್ತು ವಿನಿಮಯ ದರದಲ್ಲಿ ಕೂಡಿಸಿ ಲೆಕ್ಕಹಾಕಿರುವ 232 ಲಕ್ಷ ಕೋಟಿಗಳನ್ನು. ಅಂದರೆ ಮೋದಿ ಪೂರ್ವದ ಜಿಡಿಪಿ ಮೊತ್ತವನ್ನು ಹೇಳುವಾಗ ಸ್ಥಾಯಿ ದರದ ಲೆಕ್ಕಾಚಾರ ಬಳಸಿದ್ದೀರಿ. ಮೋದಿ ಕಾಲದ ಜಿಡಿಪಿ ದರವನ್ನು ಹೇಳುವಾಗ ಹಾಲಿ ದರದ ಲೆಕ್ಕಾಚಾರ ಬಳಸಿದ್ದೀರಿ. ಇದು ಕೇವಲ ಗಣಿತ ದೋಷವಲ್ಲ. ರಾಜಕೀಯ ದೋಷ ಮತ್ತು ಬಡಜನರ ಬಗೆಗೆ ನಿಮಗಿರುವ ದ್ವೇಷ. ಮೋದಿ ಪೂರ್ವದ ಸರಕಾರಗಳು ದೇಶವನ್ನು ಅರೆಬೆತ್ತಲಾಗೇ ಇಟ್ಟಿದ್ದವು. ಆದರೆ ಆ ಕಾಲದಲ್ಲಿ ಸೊಂಟದ ಕೆಳಗೆ ತುಂಡುಬಟ್ಟೆ ಇದ್ದರೂ, ಬೆತ್ತಲಾಗಿದ್ದ ಮೇಲ್ಭಾಗವನ್ನು ಮಾತ್ರ ಆಯ್ಕೆ ಮಾಡಿ ದೇಶ ಪೂರ್ತಿ ಬೆತ್ತಲಾಗಿತ್ತೆಂದೂ ಹೇಳಿದಿರಿ. ಮೋದಿ ಕಾಲದಲ್ಲಿ ದೇಶವು ಸೊಂಟದ ಕೆಳಗೆ ಬೆತ್ತಲಾಗಿಬಿಟ್ಟಿದೆ. ಆದರೂ ಮೇಲ್ಭಾಗಕ್ಕೆ ಹಿಂದಿನ ಹರಕು ಹಳೆಯ ಬಟ್ಟೆ ಹೊದಿಸಿ ತೋರಿಸಿ ದೇಶಕ್ಕೆ ಬಟ್ಟೆ ತೊಡಿಸಿದವರೇ ನಾವೆಂದೂ ಕೊಚ್ಚಿಕೊಂಡಿದ್ದೀರಿ. ಇದು ಯಥಾವತ್ ನಿಮ್ಮ ಮೋದಿ ಸರಕಾರ ಇಕಾನಾಮಿಕ್ ಮಿರಾಕಲ್ ರೀತಿಯೇ. ಜನರನ್ನು ಸುಲಿಗೆ ಮಾಡಿ, ಜೀವನ, ಜೀವನೋಪಾಯಗಳನ್ನು ಕಸಿದು ಅಂಬಾನಿ-ಅದಾನಿಗಳ ಖಜಾನೆ ತುಂಬಿಸಿದಿರಿ. ಈಗ ಕೋಟ್ಯಧಿಪತಿಗಳು ಹೆಚ್ಚಾದ ದೇಶದಲ್ಲಿ ಬಡತನ-ನಿರುದ್ಯೋಗ ಇರಲು ಸಾಧ್ಯವೇ ಎಂದು ಕೇಳುತ್ತಿದ್ದೀರಿ..
ಅಥವಾ ನಿಮ್ಮದೇ ಸರಕಾರದ ವರದಿಯೊಂದು ಮೋದಿ ಅವಧಿಯಲ್ಲಿ 25,000 ನಿರುದ್ಯೋಗಿಗಳು ಮತ್ತು ಸಣ್ಣಪುಟ್ಟ ಉದ್ಯಮಿಗಳು ದಿವಾಳಿಯೆದ್ದು ಆತ್ಮಹತ್ಯೆ ಮಾಡಿಕೊಂಡರು ಎಂದು ವರದಿ ನೀಡಿದ್ದರೂ ದೇಶ ಸುಭಿಕ್ಷವಾಗಿದೆ ಎಂದು ವಾದಿಸಿದಿರಿ.. ಯೆಹೂದಿಗಳಿಗೆ ಕಷ್ಟದ ಸುಖ ಕಲಿಸಲು ಕಾನ್ಸನ್ಟ್ರೆಷನ್ ಕ್ಯಾಂಪ್ಗಟ್ಟಿದ ಹಿಟ್ಲರ್ನ ನಾಝಿಗಳಷ್ಟೆ ನಿಮ್ಮದೂ ಉದಾತ್ತ ಉಪ್ಪರಿಗೆ ಚಿಂತನೆ.. ಅಥವಾ, ಪ್ರತಿನಿತ್ಯ ನಡೆಯುತ್ತಿರುವ ಅಲ್ಪಸಂಖ್ಯಾತರ ಹಾಗೂ ದಲಿತರ ನರಮೇಧದ ಹಿಂದೆ ನಿಮ್ಮ ಸರಕಾರ ಹಾಗೂ ನಿಮ್ಮ ಪೊಲೀಸ್-ಸೇನೆಗಳ ಕೃಪಾಪೋಷಿತ ಹಂತಕ ಪಡೆಗಳಿರುವುದು ಸೂರ್ಯನಷ್ಟೇ ಸತ್ಯವಾಗಿದ್ದರೂ, ಹಿಜಾಬಿನ ಹಿಂದೆ ಅಂತರ್ರಾಷ್ಟ್ರೀಯ ಷಡ್ಯಂತ್ರವಿದೆಯೆಂದು ಹುಯಿಲೆಬ್ಬಿಸುತ್ತೀರಲ್ಲ ..ಹಾಗೆ..
ಎಲ್ಲವೂ ಅದೇ ವಿಷವೃಕ್ಷದ ಮುಳ್ಳುಗಳು.. ಆದರೆ ಹೆಸರಿಟ್ಟುಕೊಂಡ ಮಾತ್ರಕ್ಕೆ ಹೇಗೆ ವ್ಯಕ್ತಿತ್ವದ ಅಂಧತ್ವ ಕಳೆದು ತೇಜಸ್ಸು ಬರುವುದಿಲ್ಲವೋ, ಹಾಗೆಯೇ ಭಾಷೆಯನ್ನು ಸರಾಗವಾಗಿ ಬಳಸಿದ ಮಾತ್ರಕ್ಕೆ ಸುಳ್ಳುಗಳಿಗೆ ಸತ್ಯದ ಸತ್ವ ಬರುವುದಿಲ್ಲ ಸಂಸದರೇ .. ಸುಳ್ಳಿನ ಅರಗಿನ ಅರಮನೆಯಲ್ಲಿ ಸುಖಿಸುವರು ಸತ್ಯದ ಬೆಂಕಿ ತಾಗಿದಾಗ ಅದರೊಂದಿಗೆ ಭಸ್ಮವಾಗಿರುವುದು ಕಲ್ಪಿತ ಪುರಾಣವಲ್ಲ.. ಕಣ್ಣಮುಂದಿನ ಇತಿಹಾಸ.