ಹಿಜಾಬ್ ವಿವಾದ, ಮುಸ್ಲಿಮರ ಮೇಲೆ ದಾಳಿಗೆ ಓಐಸಿ ಆತಂಕ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ದೇಶದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದ ಮತ್ತು ಮುಸ್ಲಿಮರನ್ನು ಗುರಿ ಮಾಡಿ ದಾಳಿಗಳು ಮುಂದುವರಿಯುತ್ತಿರುವ ಬಗ್ಗೆ ಹಾಗೂ ಅವರ ಪ್ರಾರ್ಥನಾ ಸ್ಥಗಳ ಮೇಲೆ ನಡೆಯುತ್ತಿರುವ ದಾಳಿಗಳ ಬಗ್ಗೆ ಆರ್ಗನೈಸೇಷನ್ ಆಫ್ ಇಸ್ಲಾಮಿಕ್ ಕೋ ಅಪರೇಷನ್ (OIC) ತೀವ್ರ ಆತಂಕ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ.
ಇದನ್ನು ಭಾರತ ಖಂಡಿಸಿದ್ದು, ಇದು ಸಂಘಟನೆಯ ಕೋಮು ಪ್ರವೃತ್ತಿಯನ್ನು ಸೂಚಿಸುತ್ತದೆ ಎಂದು ಟೀಕಿಸಿದೆ. ಭಾರತದ ವಿರುದ್ಧ ಮಾಡುತ್ತಿರುವ ನೀಚ ಅಪಪ್ರಚಾರವನ್ನು ತೀವ್ರಗೊಳಿಸುವ ಸಲುವಾಗಿ ಪಟ್ಟಭದ್ರ ಹಿತಾಸಕ್ತಿಗಳು ಸಂಸ್ಥೆಯನ್ನು ಹೈಜಾಕ್ ಮಾಡಿವೆ ಎಂದು ತಿರುಗೇಟು ನೀಡಿದೆ.
ಜಮ್ಮು ಕಾಶ್ಮೀರ ಬಗೆಗಿನ ವಿಷಯವನ್ನು ತಿರುಚಲು ಮತ್ತು ಭಾರತದಲ್ಲಿ ಮುಸ್ಲಿಮರಿಗೆ ಅಪಾಯವಿದೆ ಎಂಬ ಆರೋಪಕ್ಕೆ ಓಐಸಿ ಅವಕಾಶ ಮಾಡಿಕೊಡುತ್ತಿದೆ ಎನ್ನುವುದು ಭಾರತದ ನಂಬಿಕೆ. "ಓಐಸಿಯ ಪ್ರಧಾನ ಕಾರ್ಯದರ್ಶಿಯವರಿಂದ ಮತ್ತೊಂದು ಪ್ರಚೋದಿತ ಮತ್ತು ತಪ್ಪುದಾರಿಗೆಳೆಯುವಂಥ ಹೇಳಿಕೆಯನ್ನು ನಾವು ಗಮನಿಸಿದ್ದೇವೆ. ಭಾರತದ ಸಮಸ್ಯೆಗಳನ್ನು ಸಂವಿಧಾನಾತ್ಮಕ ಚೌಕಟ್ಟು ಮತ್ತು ವ್ಯವಸ್ಥೆಯ ಮೂಲಕ ಹಾಗೂ ಪ್ರಜಾಸತ್ತಾತ್ಮಕ ರೂಢಿಗಳು ಮತ್ತು ರಾಜನೀತಿಗೆ ಅನುಗುಣವಾಗಿ ಬಗೆಹರಿಸಲಾಗುತ್ತದೆ" ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ಅಭಿಪ್ರಾಯಪಟ್ಟಿದ್ದಾರೆ.
"ಓಐಸಿ ಕಚೇರಿಯ ಕೋಮು ಪ್ರವೃತ್ತಿ ಈ ವಾಸ್ತವಗಳನ್ನು ಸರಿಯಾಗಿ ಕಂಡುಕೊಳ್ಳಲು ಅವಕಾಶ ನೀಡುತ್ತಿಲ್ಲ. ಓಐಸಿ ಭಾರತದ ವಿರುದ್ಧ ಮಾಡುತ್ತಿರುವ ನೀಚ ಅಪಪ್ರಚಾರವನ್ನು ತೀವ್ರಗೊಳಿಸುವ ಸಲುವಾಗಿ ಪಟ್ಟಭದ್ರ ಹಿತಾಸಕ್ತಿಗಳು ಸಂಸ್ಥೆಯನ್ನು ಹೈಜಾಕ್ ಮಾಡಿವೆ. ಇದರಿಂದ ಸಂಘಟನೆ ತನ್ನ ಘನತೆಗೆ ತಾನೇ ಹಾನಿ ಮಾಡಿಕೊಳ್ಳುತ್ತಿದೆ" ಎಂದು ಅವರು ಹೇಳಿದ್ದಾರೆ.
ಕಳೆದ ವಾರ ಕರ್ನಾಟಕದ ಹಿಜಾಬ್ ಪ್ರಕರಣದ ಬಳಿಕ ಪಾಕಿಸ್ತಾನ ಮತ್ತು ಅಮೆರಿಕ ರಾಯಭಾರಿಗಳು ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದಾಗ ಕೂಡಾ ಭಾರತ ಇದನ್ನು ಟೀಕಿಸಿತ್ತು. ಭಾರತದ ಆಂತರಿಕ ವಿಷಯದ ಬಗೆಗೆ ಅಭಿಪ್ರಾಯ ವ್ಯಕ್ತಪಡಿಸುವುದು ಸ್ವಾಗತಾರ್ಹವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು.