ದುಬೈ: ಫೆ.19ರಂದು ವಿಜಯ್ ಪ್ರಕಾಶ್ ಸಂಗೀತ ಸಂಜೆ 'ನೀನೇ ರಾಜಕುಮಾರ'
ದುಬೈ, ಫೆ.16: ಕರ್ನಾಟಕ ರತ್ನ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಸ್ವರ ಮಾಂತ್ರಿಕ ಎಸ್. ಪಿ. ಬಾಲಸುಬ್ರಹ್ಮಣ್ಯಂರವರ ಸ್ಮರಣಾರ್ಥ ವಿಜಯ್ ಪ್ರಕಾಶ್ ಸಂಗೀತ ಸಂಜೆ ಕಾರ್ಯಕ್ರಮ 'ನೀನೇ ರಾಜಕುಮಾರ' ದುಬೈನಲ್ಲಿ ಫೆ.19ರಂದು ಸಂಜೆ 6 ಗಂಟೆಗೆ ಅಲ್ ನಸರ್ ಲೀಸರ್ ಲ್ಯಾಂಡ್ ನಲ್ಲಿ ನಡೆಯಲಿದೆ.
ಕೋವಿಡ್ ಸಂಕಷ್ಟಗಳ ನಂತರ ನಡೆಯುತ್ತಿರುವ ಪ್ರಥಮ ಕನ್ನಡ ಸಂಗೀತ ಕಾರ್ಯಕ್ರಮದಲ್ಲಿ ಖ್ಯಾತ ಹಿನ್ನೆಲೆ ಗಾಯಕ ವಿಜಯ್ ಪ್ರಕಾಶ್ ಹಾಗೂ ಅನುರಾಧ ಭಟ್, ಮೇಘನಾ ಭಟ್, ದುಬೈ ಉದ್ಯಮಿ ಗಾಯಕ ಹರೀಶ್ ಶೇರಿಗಾರ್ ಹಾಗೂ ಹತ್ತಕ್ಕೂ ಹೆಚ್ಚು ಸಂಗೀತಗಾರರು ಭಾಗವಹಿಸಲಿದ್ದು, ಈ ಸಂಗೀತ ಕಾರ್ಯಕ್ರಮದ ನಿರೂಪಣೆಯನ್ನು ನಿರೂಪಕಿ ಅನುಪಮಾ ಭಟ್, ಆರ್.ಜೆ. ಎರಾಲ್ ನಡೆಸಿಕೊಡಲಿದ್ದಾರೆ.
ದುಬೈನ ಪುನೀತ್ ರಾಜಕುಮಾರ್ ಅಭಿಮಾನಿಗಳು ಆಯೋಜಿಸುತ್ತಿರುವ ಈ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರು ಈ ದೂ.ಸಂ.: 0552443737, 0555592434, 050 3911719. ಅಥವಾ ನೇರವಾಗಿ www.eticketing.ae ಮೂಲಕ ಟಿಕೆಟ್ ಕಾದಿರಿಸಬಹುದು ಎಂದು ಪ್ರಕಟನೆ ತಿಳಿಸಿದೆ.