varthabharthi


ಅನುಗಾಲ

ಸೀತೆಯ ಮಾತು-ಕತೆ

ವಾರ್ತಾ ಭಾರತಿ : 17 Feb, 2022
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಈ ಕೃತಿಯಲ್ಲಿ 'ಪುನರ್ಮಿಲನ', 'ಭೂಮಿಗೀತ', 'ಮಣ್ಣಿನ ಗಡಿಗೆ', 'ಬಿಡುಗಡೆಯಾದವಳು' ಮತ್ತು 'ಸೆರೆಯಾಳು' ಎಂಬ 5 ಕಥೆಗಳಿವೆ. ಇವು ರಾಮಾಯಣದ ವಿವಿಧ ಭಾಗಗಳನ್ನು ನಿರೂಪಿಸುವಂತಿದ್ದರೂ ಮಾಮೂಲು ಸೂತ್ರದಲ್ಲಿಲ್ಲ. ಕಥಾನುಕ್ರಮಣಿಕೆಯಲ್ಲಿ ಘಟನೆಗಳು ಹಿಂದು ಮುಂದಾಗಿ ಇರುತ್ತವೆ ಅಥವಾ ಬರುತ್ತವೆ. ಈ ಕಥೆಗಳ ಲಕ್ಷಣ ಅಥವಾ ವಿಶೇಷವೆಂದರೆ ನಾವು ದೂರೀಕರಿಸುವ ಪಾತ್ರಗಳು ಇಲ್ಲಿ ಆಪ್ತವಾಗಿ ನಡೆದುಕೊಳ್ಳುತ್ತವೆ. ನಿರೂಪಣೆ ಸರಳವಾಗಿದೆ. ಲೇಖಕಿಗೆ ತಾನು ಮಹತ್ವವನ್ನು ಹೇಳುತ್ತೇನೆಂಬ ಹಮ್ಮಿಲ್ಲ.


'ಪತಿವ್ರತೆ', 'ಚೆಲುವು', 'ಗೃಹಕೃತ್ಯ', 'ಸುಶೀಲ' ಮುಂತಾದ ಪದಗಳು ಹೆಣ್ಣಿಗೆ ಮಾತ್ರ ಅನ್ವಯಿಸುವಂತಿವೆ. ಯಾವುದು ಗಂಡಿಗೆ ನಿಯಮವೋ ಅದು ಹೆಣ್ಣಿಗೆ ಅಪವಾದದಂತೆ ಸೃಷ್ಟಿಯಾಗಿದೆ. ಆಡಂ ಕೂಡಾ ಈವ್‌ಳಿಂದ ಹಾಳಾದಂತಿದೆ. ಆತ ಮಾತ್ರವಲ್ಲ, ಈ ಜಗತ್ತಿನ ಎಲ್ಲ ಕಷ್ಟಕೋಟಲೆಗಳೂ ಹೆಣ್ಣಿನಿಂದಲೇ ಎಂಬುದಕ್ಕೆ ಇತಿಹಾಸ ಮತ್ತು ಪುರಾಣಗಳು ವಿಶ್ವದೆಲ್ಲೆಡೆ ರಚನೆಯಾಗಿವೆ. ಸೀತೆಯೆಂಬ ಸ್ತ್ರೀಯನ್ನು ಆಕೆಯ ಸುತ್ತಮುತ್ತಣ ಸ್ತ್ರೀಪಾತ್ರಗಳೊಂದಿಗೆ ಸಮೀಕರಿಸಿ ಕೃತಿಯೊಂದು ನೋಡಿದ ರೀತಿಯನ್ನು ಇಲ್ಲಿ ಹೇಳಲು ಪ್ರಯತ್ನಿಸಿದ್ದೇನೆ: ಭಾರತೀಯವೆಂದು ಕರೆಸಿಕೊಳ್ಳುವ ಪರಂಪರೆಯಲ್ಲಿ ಸ್ತ್ರೀಯರಿಗೆ ಬಹಳ ಗೌರವವನ್ನು ನೀಡಬೇಕೆಂದು ಮತ್ತು ನೀಡುತ್ತಿದ್ದರೆಂದು ವ್ಯಾಖ್ಯಾನಿಸಲಾಗಿದೆ. ಆದರೆ ವಾಸ್ತವವು ಬೇರೆಯೇ ಆಗಿರುವುದರಿಂದ ಅದನ್ನು ಸಮರ್ಥಿಸುವ ಸಂಸ್ಕೃತ ಶ್ಲೋಕಗಳಂತೂ ಹಾಸ್ಯಾಸ್ಪದವೆಂಬಂತೆ ಉಲ್ಲೇಖಿತವಾಗುತ್ತಿವೆ. ಭಾರತೀಯ ಚರಿತ್ರೆ ಮತ್ತು ಪುರಾಣವನ್ನು ನೋಡಿದರೆ ಸ್ತ್ರೀಯನ್ನು ಕಲಹಕಾರಣವೆಂದೋ ಗತಿಹೀನ ಜೀವಿಯೆಂದೋ ಚಿತ್ರಿಸಿದ್ದೇ ಹೆಚ್ಚು. ಎಲ್ಲಿ ನೋಡಿದರೂ ನಮ್ಮ ಬಹುತೇಕ ನಾಯಕ ಪ್ರಧಾನ ಸಿನೆಮಾಗಳಲ್ಲಿ ಬರುವ ಮರ ಸುತ್ತುವ ಒಂದೆರಡು ನೃತ್ಯ-ಗೀತೆಗಳಲ್ಲಿ ಮಿಂಚುವ ನಾಯಕಿಯರಂತೆ ಸ್ತ್ರೀಯು ಪತಿದೇವರೊಂದಿಗೆ ನಿಲ್ಲುವ ಸೌಭಾಗ್ಯವತಿ ಮಾತ್ರ.

ಪತಿ ಜನಪ್ರಿಯ ನಾಯಕನಾದರೆ ಪತಿಯೊಂದಿಗೆ ಆಕೆ ಹೊಟೇಲಿಗೆ ಹೋಗುವುದೂ ಸುದ್ದಿಯಾಗುವ ತಳಮಟ್ಟದ (ತಲಸ್ಪರ್ಶಿ?) ಸುದ್ದಿಯನ್ನು ಈಗ ಕಾಣುತ್ತೇವೆ. ಈಗಂತೂ ಸ್ತ್ರೀಯರ ಮೇಲಣ ದೌರ್ಜನ್ಯವು ಅತಿಯಾಗಿ ಅದೊಂದು ವಿಶೇಷವಲ್ಲವೆಂಬಷ್ಟು ಕ್ರೌರ್ಯವನ್ನು ನಮ್ಮ ಸಮಾಜ ಮತ್ತು ಮಾಧ್ಯಮಗಳು ತೋರುತ್ತಿವೆ. ಯಾವುದೇ ವಿವಾದದಲ್ಲಿ ಸ್ತ್ರೀ ಬಲಿಯಾಗಿ ಸಹಾನುಭೂತಿಗೆ ತುತ್ತಾದಾಗಲೂ ಅದು ವಿಶೇಷವೇ ಅಲ್ಲವೆಂಬಂತೆ ವರ್ತಿಸುವುದು ಹೆಚ್ಚಾಗುತ್ತಿದೆ. 'ಹೆಣ್ಣಿಗೆ ಹೆಣ್ಣೇ ಶತ್ರು' ಎಂದು ಉದ್ಗರಿಸುವವರಿದ್ದಾರೆ. ಹೆಣ್ಣನ್ನು ಜಾತಿ-ಮತ-ಧರ್ಮದ ಸಂಕುಚಿತ ವಿವಾದಗಳಲ್ಲಿ ಹೆಣ್ಣೆಂದು ಪರಿಗಣಿಸದೆ ಒಂದು ಧರ್ಮದ, ವರ್ಗದ, ಜಾತಿಯ, ಮತದ ಪ್ರತಿನಿಧಿಯೆಂಬಂತೆ ಕಾಣಲಾಗುತ್ತಿದೆ. ಇದರಿಂದ ವೈರಕ್ಕೆ, ದ್ವೇಷಕ್ಕೆ, ಶೋಷಣೆಗೆ ಒಂದು ಸೈದ್ಧಾಂತಿಕ ನೆಲೆಗಟ್ಟು ಸಿಕ್ಕ ಹಾಗಾಗಿದೆ. ಪುರಾಣವನ್ನು ಉದಾಹರಿಸಿದರೆ ರಾಮಾಯಣದಲ್ಲಿ ಕೌಸಲ್ಯೆಯಿಂದ ಸೀತೆಯ ಮೂಲಕ ಹಾದು ಶೂರ್ಪನಖಿ, ಮಂಡೋದರಿಯ ವರೆಗೆ, ಮಹಾಭಾರತದಲ್ಲಿ ಸತ್ಯವತಿಯಿಂದ ಉತ್ತರೆಯವರೆಗೆ ಸ್ತ್ರೀಯರು ಒಂದೋ ನಿಮಿತ್ತ ಮಾತ್ರ ಅಥವಾ ಕಥೆಯ ಓಟಕ್ಕೆ ಸಾಧನ. ಅವರ ದೃಷ್ಟಿಕೋನದಿಂದ ಯಾವುದೂ ನಡೆಯುವುದಿಲ್ಲ; ಯಾವ ತೀರ್ಮಾನವೂ ಆಗುವುದಿಲ್ಲ. ಅವರು ಸುಖಪಟ್ಟದ್ದೂ ಕಾಣಿಸುವುದಿಲ್ಲ. ಹತಭಾಗಿನಿಯರಂತೆ ತಮ್ಮ ವಿಧಿಗೆ ತಾವೇ ಹೊಣೆಯೆಂಬಂತೆ ಕವಿ-ವಾಲ್ಮೀಕಿಯೇ ಇರಲಿ, ವ್ಯಾಸನೇ ಇರಲಿ, ಚಿತ್ರಿಸುತ್ತಾನೆ. ಶ್ರದ್ಧಾಭಕ್ತಿಯಿಂದ ಓದುಗರು, ಕೇಳುಗರು ಅನುಸರಿಸಿದ್ದಾರೆ ಅಥವಾ ಪ್ರಭಾವಿತರಾಗಿದ್ದಾರೆ.

 ಈ ಎರಡು ಮಹಾಕಾವ್ಯಗಳನ್ನು ಆಧರಿಸಿ ಬಂದ ಇತರ ಕಾವ್ಯ-ನಾಟಕಗಳೂ ಭಿನ್ನವಾಗಿಲ್ಲ. ಪರಂಪರೆಯನ್ನು ಭಗ್ನಗೊಳಿಸಿ ಸ್ತ್ರೀಪಾತ್ರಗಳಿಗೆ ಹೊಸ ರುಚಿಯನ್ನು ನೀಡಿದ ಕನ್ನಡ ಕಾವ್ಯಗಳು ಕಡಿಮೆಯೇ. ಸವೆದ ದಾರಿ ಎಲ್ಲರಿಗೂ ಪ್ರೀತಿ. ಪಂಪ, ರನ್ನ, ಲಕ್ಷ್ಮೀಶ, ಕುಮಾರವ್ಯಾಸ, ನಾಗಚಂದ್ರ, ತೊರವೆ ನರಹರಿ, ಕೊನೆಗೆ ಮುದ್ದಣನವರೆಗೂ ಹರಿದು ಬಂದ ಪುರಾಣಗಳು ಸ್ತ್ರೀಪಾತ್ರಗಳಿಗೆ ನ್ಯಾಯ ನೀಡಿದ್ದು ಕಡಿಮೆ. ಅಜ್ಜ ನೆಟ್ಟಾಲಕ್ಕೇ ಸ್ತ್ರೀಪಾತ್ರಗಳನ್ನು ನೇಣು ಹಾಕಿದ್ದು ಹೆಚ್ಚು. ರಾಮನ ಬದಲಿಗೆ ರಾವಣನಿಗೆ, ಅರ್ಜುನನ ಬದಲಿಗೆ ಕರ್ಣ-ದುರ್ಯೋಧನರಿಗೆ ಪ್ರಾಮುಖ್ಯತೆಯನ್ನು ನೀಡಿ ಪಲ್ಲಟಗೊಳಿಸಿದ ಕಾವ್ಯಗಳಲ್ಲೂ ಸ್ತ್ರೀಪಾತ್ರಗಳು ಪಲ್ಲಟಗೊಂಡದ್ದು ಕಡಿಮೆ. ಇತರ ಎಲ್ಲ ಅಂಶಗಳಲ್ಲಿ ಹೊಸ ವಿಮರ್ಶೆಯನ್ನು ಅನೇಕ ಕಾವ್ಯಗಳು ಮಾಡಿದರೂ ಸ್ತ್ರೀಪಾತ್ರಗಳ ಕಡೆಗೆ ಗಮನ ನೀಡಿದರೆ ಹಳೆಮನೆಯನ್ನು ದುರಸ್ತಿಮಾಡಿದಂತೆ ಹೊಸ ಕಾವ್ಯಗಳು ಬಂದು ರಂಜಿಸಿದವೇ ಹೊರತು ಸ್ತ್ರೀಪಾತ್ರಗಳನ್ನು ಹೊಸ ಬಗೆಯ ದೃಷ್ಟಿಕೋನದಿಂದ ನೋಡಲಿಲ್ಲ. ಲಕ್ಷ್ಮೀಶನಿಗೆ ಸೀತಾ ಪರಿತ್ಯಾಗವು 'ಕಲಿಯುಗದ ವಿಪ್ರರಾಚಾರಮಂ ಬಿಡುವಂತೆ' ಮಾತ್ರ ಕಂಡಿತು; 'ಕಡೆಗೂ ಕರುಣಾಳು ರಾಘವನಲಿ ತಪ್ಪಿಲ್ಲ' ಎಂದೇ ಸೀತೆ ಹೇಳಬೇಕೆಂದು ಅನ್ನಿಸಿತು. ಮುದ್ದಣನ 'ಶ್ರೀರಾಮಾಶ್ವಮೇಧಂ'ನಲ್ಲಿ ಇದೇ ಮಾತು 'ಕಯ್ವಿಲನೊಳ್ ಬೆಳೆದ ಕುರುಂಬುಲ್ಲಂ ಕಿಳ್ತು ಬಿಸುಡುವಂತೆ' ಕಂಡಿದೆ. ಸ್ತ್ರೀಪಾತ್ರಗಳನ್ನು ಕಡೆಗಣಿಸಿದ್ದನ್ನು ವ್ಯಂಗ್ಯದ ಧಾಟಿಯಲ್ಲಿ ಕಾಣುವ ಪ್ರಯತ್ನವನ್ನು ಮುದ್ದಣ ಮಾಡಿದ್ದಾನೆ: ರಾಮನು ಸೀತೆಯನ್ನು ತ್ಯಜಿಸಿ ಶೋಕಿಸಿದ್ದನ್ನು ಮುದ್ದಣ ವಿವರಿಸಿದಾಗ ಮನೋರಮೆ 'ಏಂ ತನಗೆ ಪೆರರ್ ಪೆಂಡಿರಿಲ್ಲೆಂದೆಯೆ?' ಎನ್ನುತ್ತಾಳೆ. ಪ್ರಾಯಃ 20ನೇ ಶತಮಾನದಲ್ಲಿ ಬಂದ ಕನ್ನಡ ಕಾವ್ಯಗಳು ಆಧುನಿಕ ಸಮಾಜದಲ್ಲಿ ಸ್ತ್ರೀಯ ಸ್ಥಾನವನ್ನು ಹೆಚ್ಚಿಸುವಲ್ಲಿ ಒಂದು ಬಗೆಯ ಬದಲಾವಣೆಯನ್ನು ಮಾಡಬಹುದೆಂಬ ನಿರೀಕ್ಷೆಯೂ ಹುಸಿಯಾಗಿದೆ.

ಸ್ತ್ರೀ ಪಾತ್ರವಾದ ಸೀತೆಯನ್ನು ಕ್ಷಕಿರಣದಿಂದ ಪರೀಕ್ಷಿಸಿದ ಪೋಲಂಕಿಯವರು, ಆನಂತರ ಭಗವಾನ್ ಮುಂತಾದ ಲೇಖಕರು, ಮೂಲಭೂತವಾದಿಗಳ 'ಶ್ರದ್ಧಾಭಕ್ತಿಯ' ಗೂಂಡಾಗಿರಿಗೆ ತುತ್ತಾದರು. ಇದನ್ನು ದೂರದಿಂದಲೇ ನೋಡಿದ ಇತರ ಕವಿಗಳು ತಣ್ಣಗೆ ಮಂದ್ರದಲ್ಲೇ ತಮ್ಮ ಧಾಟಿ, ವರಸೆಯನ್ನು ಮೂಡಿಸಿದರು. ಎಸ್.ಎಲ್. ಭೈರಪ್ಪನವರ 'ಪರ್ವ,' 'ಉತ್ತರ ಕಾಂಡ' ತನ್ನ ಸೌಮ್ಯಧಾಟಿಯಿಂದಾಗಿ ಒಟ್ಟಾರೆ ಹೊಸದೃಷ್ಟಿಕೋನವೆಂದನ್ನಿಸಿತೇ ಹೊರತು ಸ್ತ್ರೀಪಾತ್ರಗಳ ಪರಮಶೋಧನೆ ನಡೆಸುವಲ್ಲಿ ವಿಫಲವಾಯಿತು. 'ಉತ್ತರ ಕಾಂಡ'ದ ಸೀತೆಯನ್ನು ಆಕೆಯ ಸಖಿಯೇ 'ಹೆದರುಪುಕ್ಕಲಿ' ಎನ್ನುತ್ತಾಳೆ. ಇಂತಹ ಕೃತಿಗಳ ಪರಂಪರೆಯ ಶ್ರೀಸಂಸಾರದ ರಂಗೋಲಿಯೊಳಗೇ ಸ್ತ್ರೀಪಾತ್ರಗಳು ಕುಣಿದು ಧನ್ಯವಾದವು. 14 ವರ್ಷ ಗಂಡನಿಂದ ಬೇರೆಯಾದ ಊರ್ಮಿಳೆ ಕವಿಗಳ ಪಾಲಿಗೆ ಪೋಷಕಪಾತ್ರವಾಗಿ ಉಳಿದು 'ಔತ್ತರೇಯ ವಿರಹಿಣಿ' 'ದಾಕ್ಷಿಣಾತ್ಯ ತಪಸ್ವಿನಿ' ಎಂಬಲ್ಲಿಗೆ ಆಕೆಯ ಅಚ್ಚ ಭಾರತೀಯ ಸದ್ಗಹಿಣಿಯ ಪಾತ್ರ ವೈಭವವು ಮುಗಿಯಿತು.

20ನೇ ಶತಮಾನದಲ್ಲಿ ಕನ್ನಡದಲ್ಲಿ ಆಗದೇ ಇದ್ದ ಕೆಲಸ ತೆಲುಗಿನಲ್ಲಿ ನಡೆದಿದೆ. ಪುರಾಣದ ಸ್ತ್ರೀಪಾತ್ರಗಳನ್ನು (ಹಾಗೆ ನೊಡಿದರೆ ಇಡೀ ಪುರಾಣವನ್ನು) ಹೊಸ ಹಾದಿಯಲ್ಲಿ ನಡೆಸಿದ ಗೌರವವು ತೆಲುಗು ಸಾಹಿತ್ಯಕ್ಕಿದೆ. ಮುಖ್ಯವಾಗಿ ಭಾರತೀಯ ಸ್ತ್ರೀ ಪರಂಪರೆಯ ದ್ಯೋತಕದಂತಿರುವ ಸೀತೆಯ ಪಾತ್ರ ಅಲ್ಲಿ ಕಂಡಷ್ಟು ಮೆರುಗನ್ನು ಕನ್ನಡದಲ್ಲಿ ಕಂಡಿಲ್ಲ. ನಾರ್ಲ ವೇಂಕಟೇಶ್ವರ ರಾವ್ ಅವರ ಎರಡು ನಾಟಕಗಳು ('ಜಾಬಾಲಿ' ಮತ್ತು 'ಸೀತಾಭವಿಷ್ಯ') ಈ ದೃಷ್ಟಿಯಿಂದ ಗಮನಾರ್ಹ. ನಾಟಕಗಳ ಪೀಠಿಕೆಗಳಲ್ಲಿ ಲೇಖಕರು ತಮ್ಮ ಸಿದ್ಧಾಂತವನ್ನು ಹೊಸಬಗೆಯಲ್ಲಿ ಮಂಡಿಸಿ ಕಲೆಯು ಸ್ತ್ರೀಯನ್ನು ಕಾಣುವ ಬಗೆ ಬದಲಾಗಬೇಕೆಂಬುದನ್ನು ಸ್ಪಷ್ಟಪಡಿಸಿದರು. (ಈ ಎರಡೂ ನಾಟಕಗಳ ಬಗ್ಗೆ ನಾನು ಈ ಅಂಕಣದಲ್ಲೇ ಬರೆದಿದ್ದೇನೆ.)

 ಈ ದೃಷ್ಟಿಯಿಂದ ಗಮನಾರ್ಹವಾದ ಇನ್ನೊಂದು ಕೃತಿ ತೆಲುಗಿನಲ್ಲಿ ಪ್ರಕಟವಾದ ವೋಲ್ಗಾ ಎಂಬ ಕಾವ್ಯನಾಮದ ಪೋಪುರಿ ಲಲಿತ ಕುಮಾರಿ (1950-) ಅವರ 'ವಿಮುಕ್ತ' ಎಂಬ ಹೆಸರಿನ ಕಥಾ ಸಂಕಲನ. ಇದರಲ್ಲಿ ರಾಮಾಯಣದ ಬೆಳಕಿನ (ಕತ್ತಲಿನ?) ಸೀತೆಯ ಮನಸ್ಥಿತಿನ್ನು ಅನಾವರಣಗೊಳಿಸುವ 5 (ಸಣ್ಣ) ಕಥೆಗಳಿವೆ. ಇವು ಕನ್ನಡಕ್ಕೆ ಬಂದ ಹಾಗೆ ಕಾಣುವುದಿಲ್ಲ. ಇಂಗ್ಲಿಷಿನಲ್ಲಿ 'The Liberation of Sita' (ಸೀತೆಯ ಬಿಡುಗಡೆ) ಎಂಬ ಹೆಸರಿನಲ್ಲಿ ಇದು ಪ್ರಕಟವಾಗಿದೆ. ವೋಲ್ಗಾ ಎಂಬುದು ಲೇಖಕಿಯ ಗತಿಸಿದ ಹಿರಿಯ ಸೋದರಿಯ ಹೆಸರು. ಎಡಪಂಥದಿಂದ ಪ್ರಭಾವಿತಳಾದ ಈ ಲೇಖಕಿ ಪೂರ್ಣಾವಧಿ ಕಾರ್ಯಕರ್ತೆಯಾಗಿದ್ದು ಬಳಿಕ ಪೂರ್ಣಾವಧಿ ಸಾಹಿತ್ಯಕ್ಕೆ ತೊಡಗಿಸಿಕೊಂಡವರು. ಸ್ತ್ರೀ ಸ್ವಾತಂತ್ರ್ಯಕ್ಕಿಂತಲೂ ಸಾಮಾಜಿಕ ಚೌಕಟ್ಟಿನೊಳಗೆ ಸ್ತ್ರೀ ಅಸ್ಮಿತೆಯನ್ನು ಹೇಗೆ ಉಳಿಸಿಕೊಳ್ಳಬಲ್ಲಳು ಮತ್ತು ತನ್ನನ್ನು ತಾನು ಹೇಗೆ ಹುಡುಕಿಕೊಳ್ಳಬೇಕು ಮತ್ತು ಸ್ಥಾಪಿಸಿಕೊಳ್ಳಬೇಕು ಎಂಬುದನ್ನು ಶೋಧಿಸಲು ಯತ್ನಿಸಿದವರು.

ಈ ಕೃತಿಯಲ್ಲಿ 'ಪುನರ್ಮಿಲನ', 'ಭೂಮಿಗೀತ', 'ಮಣ್ಣಿನ ಗಡಿಗೆ', 'ಬಿಡುಗಡೆಯಾದವಳು' ಮತ್ತು 'ಸೆರೆಯಾಳು' ಎಂಬ 5 ಕಥೆಗಳಿವೆ. ಇವು ರಾಮಾಯಣದ ವಿವಿಧ ಭಾಗಗಳನ್ನು ನಿರೂಪಿಸುವಂತಿದ್ದರೂ ಮಾಮೂಲು ಸೂತ್ರದಲ್ಲಿಲ್ಲ. ಕಥಾನುಕ್ರಮಣಿಕೆಯಲ್ಲಿ ಘಟನೆಗಳು ಹಿಂದು ಮುಂದಾಗಿ ಇರುತ್ತವೆ ಅಥವಾ ಬರುತ್ತವೆ. ಈ ಕಥೆಗಳ ಲಕ್ಷಣ ಅಥವಾ ವಿಶೇಷವೆಂದರೆ ನಾವು ದೂರೀಕರಿಸುವ ಪಾತ್ರಗಳು ಇಲ್ಲಿ ಆಪ್ತವಾಗಿ ನಡೆದುಕೊಳ್ಳುತ್ತವೆ. ನಿರೂಪಣೆ ಸರಳವಾಗಿದೆ. ಲೇಖಕಿಗೆ ತಾನು ಮಹತ್ವವನ್ನು ಹೇಳುತ್ತೇನೆಂಬ ಹಮ್ಮಿಲ್ಲ. ಮೊದಲ ಕಥೆಯಲ್ಲಿ ಸೀತೆ ವಾಲ್ಮೀಕಿಯ ಆಶ್ರಮದಲ್ಲಿರುತ್ತಾಳೆ. ಕಾಡು ಸುತ್ತಲು ಹೋಗಿ ಹೂವುಗಳನ್ನು ತಂದ ಲವಕುಶರನ್ನು ಸೀತೆ ಪ್ರಶ್ನೆಮಾಡಿದಾಗ ಅವರು ತಾವು ನೋಡಿದ ಒಂದು ಉದ್ಯಾನದ ಮತ್ತು ಅಲ್ಲಿದ್ದ ಕಿವಿ-ಮೂಗು ಕತ್ತರಿಸಿಕೊಂಡ ಕುರೂಪಿ ಹೆಣ್ಣೊಬ್ಬಳ ಕುರಿತು ಹೇಳುತ್ತಾರೆ. ಕುತೂಹಲಿಯಾದ ಸೀತೆ ಅಲ್ಲಿ ಹೋಗಿ ಆ ಹೆಣ್ಣು ಇನ್ಯಾರೂ ಅಲ್ಲ ಶೂರ್ಪನಖಿ ಎಂದು ಗೊತ್ತುಮಾಡುತ್ತಾಳೆ. ಸೀತೆೆಯೊಂದಿಗಿನ ಮಾತುಕತೆಯಲ್ಲಿ ಶೂರ್ಪನಖಿಯ ಲೋಕಪ್ರೀತಿ, ಜೀವಪ್ರೀತಿ, ಹೆಣ್ತನ ಅನಾವರಣಗೊಳ್ಳುತ್ತದೆ. ಸುಂದರಾಕಾರವನ್ನು ಮೋಹಿಸುವುದು ತಪ್ಪೇ ಎಂದು ಆಕೆ ಪ್ರಶ್ನಿಸುತ್ತಾಳೆ. ಅಂಗಭಂಗವನ್ನು ಅನುಭವಿಸಿದ ಮೇಲೆ ಆಕೆ ಪ್ರೀತಿ-ಪ್ರೇಮವೆಂದರೆ ಇಷ್ಟೇ ಅಲ್ಲ, ಎಂಬ ವೈಶಾಲ್ಯವನ್ನು ಅನುಭವಿಸಿ ಉದ್ಯಾನವನ್ನು ನಿರ್ಮಿಸಿ ಅಲ್ಲಿನ ಹೂವುಗಳೊಂದಿಗೆ ತನ್ನ ಸೌಂದರ್ಯವನ್ನು ಕಾಣುತ್ತಾಳೆ. ಸೀತೆಗೆ 'ರಾಮನು ಶೂರ್ಪನಖಿಯನ್ನು ಅವಮಾನಿಸಿದಕ್ಕಾಗಿ ರಾವಣನು ಸೇಡು ತೀರಿಸಿಕೊಂಡ; ಹಾಗಾದರೆ ಸ್ತ್ರೀಯರೆಂದರೆ ಪುರುಷರಿಗೆ ತಮ್ಮ ಅಹಂನ್ನು ಪೂರೈಸುವ ಸ್ವತ್ತುಗಳು ಮಾತ್ರವೇ? ಯಾವ ಸ್ತ್ರೀಗಾದರೂ ರಾಮಲಕ್ಷ್ಮಣರು ಹೀಗೆಯೇ ಮಾಡುತ್ತಿದ್ದರೇ? ಶೂರ್ಪನಖಿಯು ಒಂದು ದಾಳವಾದಳೇ?' ಎಂಬುದರೊಂದಿಗೆ ತಾನೂ ಈ ಅಹಂಪೌರುಷದ ದಾಳವೇ ಎಂದನ್ನಿಸುತ್ತದೆ.

ಎರಡನೆಯ ಕಥೆಯಲ್ಲಿ ಅಹಲ್ಯೆಯ ಪ್ರಸ್ತಾಪವಿದೆ. ಅಹಲ್ಯೆಯ ತಪ್ಪಾದರೂ ಏನು? ಆಕೆ ಶೀಲವನ್ನು ಕಳೆದುಕೊಳ್ಳಲು ಯಾರು ಕಾರಣ? ಇಂದ್ರನು ಗೌತಮನ ರೂಪದಲ್ಲಿ ಬಾರದಿದ್ದರೆ ಆಕೆ ತನ್ನನ್ನು ತಾನು ಒಪ್ಪಿಸಿಕೊಳ್ಳುತ್ತಿದ್ದಳೇ? ಈ ಕಥೆಯ ಅಹಲ್ಯೆ ಕಲ್ಲಾದವಳಲ್ಲ. ಚಳಿ, ಮಳೆ, ಬಿಸಿಲನ್ನು ಲೆಕ್ಕಿಸದೆ ಒಂಟಿಯಾಗಿ ಕಲ್ಲಿನಂತೆ ಬದುಕಿದವಳು. ಸೀತೆ ಅವಳನ್ನು ಅರಣ್ಯದಲ್ಲಿ ಭೇಟಿಯಾಗಿ ಮಾತನಾಡುತ್ತಾಳೆ. ಹೆಣ್ಣಿನ ಬಾಳಿನಲ್ಲಿ ಸತ್ಯ ಮತ್ತು ಅಸತ್ಯದ ನಡುವೆ ಯಾವ ವ್ಯತ್ಯಾಸವೂ ಇಲ್ಲವೆಂದು ಅಹಲ್ಯೆ ಹೇಳುತ್ತಾಳೆ. ಅದನ್ನು ಸೀತೆ ಆ ಕ್ಷಣಕ್ಕೆ ಒಪ್ಪದಿದ್ದರೂ ಮುಂದೆ ತನ್ನನ್ನು ರಾಮನು ಅಗ್ನಿಪರೀಕ್ಷೆಗೆ ಒಳಪಡಿಸಿದಾಗ ಮನಗಾಣುತ್ತಾಳೆ. ಹೆಣ್ಣೊಬ್ಬಳು ತಾನು ಮಾಡದೇ ಇದ್ದ ತಪ್ಪನ್ನೂ ಒಪ್ಪಿಕೊಂಡರೆ ಸಮಾಜ ಸುಖವಾಗಿರುತ್ತದೆ ಎನ್ನುತ್ತಾಳೆ ಅಹಲ್ಯೆ. ಆದರೆ 'ಹೆಣ್ಣು ಗಂಡನ್ನು ಕೇಳಬೇಕಾದ್ದು ಸರಿಯೋ ತಪ್ಪೋ ಅದನ್ನು ಕೇಳುವುದಕ್ಕೆ ನೀನು ಯಾರು?' ಸತ್ಯವೆಂದರೆ ಯಾವುದು? ಯಾವುದು ಸಮಾಜದ ಬಹುಜನರಿಗೆ ಹಿತವಾಗುತ್ತದೋ ಅದು ಸತ್ಯವೆಂದು ಹೇಳಲಾಗುತ್ತದೆ. ಇದು ಸರಿಯೇ? ಈ ಸೂಕ್ಷ್ಮವನ್ನು ಕಥೆ ಈ ಇಬ್ಬರ ಮಾತುಕತೆಯಲ್ಲಿ ಚಿತ್ರಿಸುತ್ತದೆ. ಮೂರನೇ ಕಥೆಯು ಪರಶುರಾಮ ತಾಯಿ ರೇಣುಕೆಯೊಂದಿಗಿನ ಸಂವಹನದ್ದು. ಆಕೆಯೂ ಅರಣ್ಯದಲ್ಲಿರುವವಳೇ. ಬಗೆಬಗೆಯ ಮಣ್ಣಿನ ಆಟಿಗೆಗಳನ್ನು ಮಾಡುವ ಅವಳ ವೈಖರಿಗೆ ಸೀತೆ ಬೆರಗಾಗುತ್ತಾಳೆ. ಜೊತೆಗೇ ತನ್ನ ಮದುವೆಯ ಸಂದರ್ಭದಲ್ಲಿನ ಪರಶುರಾಮನ ವರ್ತನೆಯೂ ನೆನಪಾಗುತ್ತದೆ. ಆರ್ಯಧರ್ಮವನ್ನು ಎತ್ತಿಹಿಡಿಯುವ ರಾಮನ ವಾಗ್ದಾನವೇ ತಮ್ಮನ್ನು ಆ ದಿನ ಉಳಿಸಿದ್ದು ಎಂಬುದು ಅವಳಿಗೆ ನೆನಪಾಗುತ್ತದೆ. ರೇಣುಕೆ ಮಾಡಿದ ಮಣ್ಣಿನ ಮಡಿಕೆ ಇಲ್ಲಿ ಹೊಸ ಅರ್ಥವನ್ನು ಕಾಯ್ದುಕೊಳ್ಳುತ್ತದೆ. ಅದು ಎಷ್ಟು ಕೌಶಲ್ಯವಾದ್ದೆಂದರೆ ಅದರ ನಿರ್ಮಿತಿ ಅವಳ ಶೀಲದ ಮಾನದಂಡವಾಗುತ್ತದೆ. ಯಾವುದು ಕೌಶಲ್ಯದ ಕುರುಹಾಗಬೇಕಿತ್ತೋ ಅದು ಪುರುಷ ನಿರ್ಮಿತ ಸಮಾಜದಲ್ಲಿ ಪಾತಿವ್ರತ್ಯದ ಕುರುಹಾಗುತ್ತದೆ. ಎಷ್ಟೇ ತಪಸ್ಸನ್ನಾಚರಿಸಿದರೂ ಜಮದಗ್ನಿಯಂತಹ ಋಷಿಗಳು ವಿವೇಚನಾರಹಿತ ಸಂಪ್ರದಾಯಬದ್ಧರಾಗಿರುತ್ತಾರೆ. ತಂದೆ ಯಾರೆಂದು ತಾಯಿ ತೋರಿಸಿಕೊಟ್ಟ ವ್ಯಕ್ತಿಯೇ ತಾಯಿಗಿಂತ ದೊಡ್ಡವನಾಗುತ್ತಾನೆ. ಅಧಿಕಾರ ಚಲಾಯಿಸುತ್ತಾನೆ. ಹತ್ತು ತಿಂಗಳು ಹೆತ್ತು ಹೊತ್ತ ತಾಯಿಯನ್ನು ಮಕ್ಕಳು ಕೊಲ್ಲುವ ಹಂತಕ್ಕೆ ತಲುಪಿಸುತ್ತದೆ. ರೇಣುಕೆಯ ಮಾತು ಸೀತೆಯನ್ನು ತಲ್ಲಣಗೊಳಿಸುತ್ತದೆ, ಮಾತ್ರವಲ್ಲ, ಓದುಗನನ್ನೂ!

ನಾಲ್ಕನೇ ಕಥೆಯು ಸೀತೆ-ಊರ್ಮಿಳೆಯ ಕುರಿತಾದ್ದು. 14 ವರ್ಷಗಳ ಬಳಿಕ ಊರ್ಮಿಳೆ ಸೀತಾ-ರಾಮ-ಲಕ್ಷ್ಮಣರ ಆಗಮನದ ಬಗ್ಗೆ ಯಾವ ನಿರೀಕ್ಷೆಯನ್ನೂ ಇಟ್ಟುಕೊಳ್ಳದವಳು. ವಿರಾಗಿಣಿಯಲ್ಲ; ಮೌನಿ. ಅಕ್ಕ ಸೀತೆಯಲ್ಲಿ ಆಕೆ ತನ್ನ ಮನಸ್ಸನ್ನು ತೆರೆದಿಡುತ್ತಾಳೆ. ಆಕೆ ಬದಲಾಗಿದ್ದಾಳೆ. ಆಕೆಯ ಪಾಲಿಗೆ ಬದಲಾವಣೆಯೇ ಬದುಕು. ಲಕ್ಷ್ಮಣನು ಈ ಬದಲಾವಣೆಗೆ ಹೇಗೆ ಹೊಂದಿಕೊಳ್ಳುತ್ತಾನೆಂಬುದರ ಮೇಲೆ ತನ್ನ ಭವಿಷ್ಯವಿದೆ ಎನ್ನುತ್ತಾಳವಳು. ನಮ್ಮ ಪ್ರತಿಕ್ರಿಯೆಗಳು ಅನಿರೀಕ್ಷಿತವಾಗಿರಬೇಕು. ಆಗಷ್ಟೇ ಸಮಾಜ ಎಚ್ಚೆತ್ತುಕೊಳ್ಳುತ್ತದೆ. ನಾವು ಶಕ್ತಿಯನ್ನು, ಅಧಿಕಾರವನ್ನು ಕಳೆದುಕೊಳ್ಳಬೇಕು ಮತ್ತು ನಮ್ಮಿಳಗಾಗಬೇಕು. ಇದು ಅಂತರ್ಮುಖತೆಯಲ್ಲ. ಸಮಾಜಮುಖತೆ. ಊರ್ಮಿಳೆಯ ದೃಷ್ಟಿಕೋನ ಸೀತೆಗೆ ಏಕಕಾಲಕ್ಕೆ ಸಮಸ್ಯೆಗಳನ್ನೂ, ಉತ್ತರಗಳನ್ನೂ ನೀಡುತ್ತದೆ. ಕೊನೆಯ ಕಥೆಯು ಸೀತಾ-ರಾಮನಿಗೆ ಸಂಬಂಧಿಸಿದ್ದು. ಸೀತಾ ಪರಿತ್ಯಾಗದ ನಂತರ ರಾಮನು ಅಶ್ವಮೇಧಯಾಗವನ್ನು ಮಾಡಿದಂತಿದೆ. (ಇಡೀ ಉತ್ತರಕಾಂಡವೇ ಪ್ರಕ್ಷಿಪ್ತವೆನ್ನುತ್ತಾರೆ. ಆದರೆ ವಾಲ್ಮೀಕಿ ರಾಮಾಯಣವೂ ಕಲ್ಪಿತವೇ ತಾನೇ?) ಅಲ್ಲಿ ಸೀತೆಯ ಸುವರ್ಣ ಮೂರ್ತಿಯನ್ನಿಟ್ಟುಕೊಳ್ಳುತ್ತಾನೆ. ಹಾಗಾದರೆ ಸ್ತ್ರೀ ಅದರಲ್ಲೂ ಪತ್ನಿ ಒಂದು ಅಲಂಕಾರ ಮೂರ್ತಿಯಷ್ಟೇ ಅಲ್ಲವೇ? ಸೀತೆಯನ್ನು ರಾಮ ತ್ಯಜಿಸಿದನೇ ಹೊರತು ಸೀತೆ ರಾಮನನ್ನು ತ್ಯಜಿಸಿದ್ದಲ್ಲ. ಆತನ ಪಾಲಿಗೆ ಸೀತೆ ತನ್ನವಳಾದರೂ ಲೋಕಕ್ಕೆ ಸೇರಿದವಳು. ಇಲ್ಲವಾದರೆ ಅಗಸನ ಮಾತಿಗೆ ಸೀತೆಯನ್ನು ಆತ ತ್ಯಜಿಸುವ ಪ್ರಶ್ನೆಯಾದರೂ ಹೇಗೆೆ ಎದ್ದೀತು? ಮತ್ತೆ ಹಿಂದೆ ನೋಡಿದರೆ ಪಿತೃವಾಕ್ಯ ಪರಿಪಾಲನೆಯೆಂಬುದೇ ಧರ್ಮಕ್ಕೆ ವ್ಯತಿರಿಕ್ತ. ಪತಿಧರ್ಮ, ಹಾಗೆಯೇ ರಾಜಧರ್ಮ ಇವೆಲ್ಲ ರಾಮನೆದುರಿಗೆ ಇದ್ದಿತಷ್ಟೇ! ಪುರುಷರು ಸ್ತ್ರೀಯ ಭಾವನೆಗೆ ಮಾತ್ರವಲ್ಲ ಪ್ರಜೆಗಳ ಭಾವನೆಗಳಿಗೂ ಬೆಲೆಕೊಡದಿರುವುದೇ ಆಗಿನ ರಾಜಸತ್ತೆಯ, ಪುರುಷಸಮಾಜದ ಲಕ್ಷಣವೆಂಬರ್ಥದ ಮಾತುಗಳು ಈ ಚಿತ್ರಣದಲ್ಲಿವೆ.

ಇಡೀ ಕೃತಿಯು ಓದುಗನನ್ನು ಬೆಚ್ಚಿಬೀಳಿಸುವುದರೊಂದಿಗೆ ತನ್ನನ್ನು, ತನ್ನ ಕಾಲವನ್ನು, ಸಮಾಜವನ್ನು ತಲ್ಲಣಗೊಳಿಸುವ ಸ್ತ್ರೀಸ್ವಾತಂತ್ರ್ಯದ ಹಕ್ಕುಗಳ ಕಡೆಗೆ ಗಮನವನ್ನು ನೀಡಬೇಕೆಂಬ ಆಶಯವನ್ನು ಪೂರೈಸುತ್ತದೆ. ಸೀತೆ ಮೂಕ ಹಕ್ಕಿಯಾಗದೆ, ಒಂದು ಕಾಲಕ್ಕೆ ಸಲ್ಲದೆ, ಎಲ್ಲ ಕಾಲದ ಹೆಣ್ಣುಗಳ ಪ್ರತಿನಿಧಿಯಾಗಿ ಪ್ರಶ್ನಿಸುವ ಭಾವಜೀವವಾಗಿ ಕಾಣಿಸುವುದು ಈ ಕೃತಿಯ ಹೆಗ್ಗಳಿಕೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)