ಅಪಘಾತ ಪರಿಹಾರದಲ್ಲಿ ಪರ್ಸಂಟೇಜ್ ವ್ಯವಸ್ಥೆ ಬೇಡ: ನ್ಯಾ. ಅಬ್ದುಲ್ ನಝೀರ್
ಕುಂದಾಪುರ, ಫೆ.19: ನ್ಯಾಯಾಂಗದ ಮೇಲೆ ಗುರುತರ ಜವಾಬ್ದಾರಿಗಳಿ ರುತ್ತವೆ. ಕೆಲವೊಮ್ಮೆ ಆಕಸ್ಮಿಕವಾಗಿ ಎದುರಾಗುವ ಪ್ರಕರಣಗಳು ರೋಗವಿದ್ದಂತೆ. ರೋಗಿ ವೈದ್ಯರ ಬಳಿ ಹೋಗುವಂತೆ ಕಕ್ಷಿದಾರರು ನ್ಯಾಯಕ್ಕಾಗಿ ಬರುತ್ತಾರೆ. ಅಂತವರಿಗೆ ಕಡಿಮೆ ಖರ್ಚಿನಲ್ಲಿ ನ್ಯಾಯ ಒದಗಿಸಿ ಕೊಡಬೇಕು. ಮೋಟಾರು ವಾಹನದ ಅಪಘಾತ ಪರಿಹಾರದಲ್ಲಿ ಪರ್ಸಂಟೇಜ್ ಪಡೆಯುವ ವ್ಯವಸ್ಥೆ ಬೇಡ. ಇನ್ವೆಸ್ಟ್ಮೆಂಟ್ ಲಿಟಿಗೇಶನ್ ಮಾಡಬೇಡಿ ಎಂದು ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿ ಎಸ್.ಅಬ್ದುಲ್ ನಝೀರ್ ಹೇಳಿದ್ದಾರೆ.
ನೂತನವಾಗಿ ನಿರ್ಮಾಣಗೊಂಡ ಕುಂದಾಪುರ ನ್ಯಾಯಾಲಯ ಮತ್ತು ವಕೀಲರ ಸಂಘದ ಕಟ್ಟಡ, ಇ-ಸೇವಾ ಕೇಂದ್ರ, ಸಹಾಯವಾಣಿ ಕೇಂದ್ರ ಹಾಗೂ ವಿಡಿಯೋ ಕಾನ್ಫರೆನ್ಸ್ ಕೊಠಡಿಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ನ್ಯಾಯಾಲಯಕ್ಕೆ ಅಗತ್ಯವಾಗಿರುವ ಮೂಲಭೂತ ಸೌಕರ್ಯ ಹಾಗೂ ನ್ಯಾಯಾಧೀಶರನ್ನು ಒದಗಿಸುವುದು ಉಚ್ಛ ನ್ಯಾಯಾಲಯ ಹಾಗೂ ಸರಕಾರದ ಜವಾಬ್ದಾರಿಯಾಗಿದೆ. ಈ ಸೌಲಭ್ಯಗಳ ಸದುದ್ದೇಶವಾಗ ಬೇಕಾದರೆ ವಕೀಲರ ಹಾಗೂ ಕಕ್ಷಕಿದಾರರ ಪಾತ್ರವೂ ಅತಿ ಮುಖ್ಯ ಎಂದರು.
ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಮಾತನಾಡಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಕುಂದಾಪುರ, ಧಾರ್ಮಿಕ ಹಾಗೂ ಸಾಂಸ್ಕೃತಿಕ ವಾಗಿ ಕರಾವಳಿಯ ಪ್ರಮುಖ ತಾಣವೂ ಆಗಿದೆ. ಇಲ್ಲಿನ ವಿಶಿಷ್ಠ ಕುಂದಗನ್ನಡ ಭಾಷೆ ಹಾಗೂ ಪಂಚಗಂಗಾವಳಿ ಸಂಗಮ ಇಲ್ಲಿನ ವೈಶಿಷ್ಟ್ಯವನ್ನು ಹೆಚ್ಚಿಸಿದೆ. ಇಲ್ಲಿ ಕಾರ್ಯಾಚರಿಸುತ್ತಿರುವ 5 ನ್ಯಾಯಾಲಯಗಳ ಅವಶ್ಯಕತೆಗಾಗಿ ಅಂದಾಜು 6 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ. ಒಳ್ಳೆಯ ವಾತಾವರಣದಲ್ಲಿ ನ್ಯಾಯದಾನ ಪ್ರಕ್ರಿಯೆಗಳು ನಡೆಯುವುದರಿಂದ ಎಲ್ಲರಿಗೂ ಒಳಿತಾ ಗುತ್ತದೆ ಎಂದರು.
ಹೈಕೋರ್ಟ್ ಹಾಗೂ ಆಡಳಿತಾತ್ಮಕ ನ್ಯಾಯಮೂರ್ತಿ ರಂಗಸ್ವಾಮಿ ನಟರಾಜ್ ಮಾತನಾಡಿದರು. ಹೈಕೋರ್ಟ್ ಮಹಾ ವಿಲೇಖನಾಧಿಕಾರಿ ಟಿ.ಜಿ. ಶಿವಶಂಕರೇ ಗೌಡ, ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ.ವೆಂಕಟೇಶ್ ನಾಯ್ಕ್, ಸಮೀರ ನಝೀರ್, ಅರ್ಚನಾ ನಟರಾಜ್, ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ ಕಾಂತರಾಜು ಬಿ.ಟಿ., ಕುಂದಾಪುರ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಪ್ರಮೋದ್ ಹಂದೆ ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸುಬ್ರಮಣ್ಯ ಜೆ.ಎನ್.ಸ್ವಾಗತಿಸಿದರು. ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಸಳ್ವಾಡಿ ನಿರಂಜನ್ ಹೆಗ್ಡೆ ವಂದಿಸಿದರು. ಉಪಾಧ್ಯಕ್ಷ ರಾಘವೇಂದ್ರ ಚರಣ್ ನಾವಡ ಕಾರ್ಯಕ್ರಮ ನಿರೂಪಿಸಿದರು.