ಕಲೆಯ ತಪಸ್ವಿ ರಾಜೇಶ್
ರಾಜೇಶ್ ಅವರನ್ನು ನಿಯಂತ್ರಿಸಿ ಅವರಲ್ಲಿದ್ದ ಸೂಕ್ಷ್ಮ ಕಲಾವಿದರನ್ನು ಹೊರತಂದವರು ಬಹಳ ಕಡಿಮೆಯೇ! ಹಲವೊಮ್ಮೆ ಅತಿ ಎನಿಸುವಷ್ಟರಮಟ್ಟಿಗೆ ಅಭಿನಯಿಸಿದರೂ ಅವರ ಪ್ರತಿಭೆಗೆ ಸವಾಲಾಗಿ ಒದಗಿಬಂದ ಚಿತ್ರಗಳ ಸಂಖ್ಯೆ ಹೆಚ್ಚಿಲ್ಲ. ಆದರೆ ಕಲೆಯನ್ನು ತಪಸ್ಸಿನಂತೆ ಆಚರಿಸಿದ ರಾಜೇಶ್ ಅವರಂತಹ ಕಲಾವಿದ ದೊರೆಯುವುದು ಅಪರೂಪ. ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ಕಲಾವಿದರಲ್ಲಿ ರಾಜೇಶ್ ಒಬ್ಬರು ಎಂಬುದು ನಿಸ್ಸಂಶಯ.
ಅದು ಅರವತ್ತರ ದಶಕ. ಕನ್ನಡ ಚಿತ್ರರಂಗವು ತನ್ನದೇ ಆದ ಸ್ಥಾನವೊಂದನ್ನು ಮತ್ತು ಅನನ್ಯತೆಯನ್ನು ಗಳಿಸಿಕೊಳ್ಳಲು ಹೆಣಗಾಡುತ್ತಿದ್ದ ದಶಕ. ಆರಂಭದಿಂದಲೂ ಕನ್ನಡ ಚಿತ್ರರಂಗ ನಿರ್ಮಾಣದ ದೃಷ್ಟಿಯಿಂದಲೂ ಚಿತ್ರರಂಗ ಬಡವಾಗಿತ್ತು. ಹಾಗಾಗಿ ಹೆಚ್ಚಿನ ಪ್ರಯೋಗಗಳ ಸಾಧ್ಯತೆಯನ್ನು ನಿರೀಕ್ಷಿಸುವಂತಿರಲಿಲ್ಲ. ಹೊಸ ನಟ ನಟಿಯರನ್ನು ಹಾಕಿಕೊಂಡು ಪ್ರಯೋಗ ಮಾಡುವುದೂ ಸವಾಲಿನ ಕೆಲಸವೇ ಆಗಿತ್ತು. ಆದರೆ ಅರವತ್ತನೆಯ ದಶಕದಲ್ಲಿ ಕನ್ನಡ ಚಿತ್ರರಂಗ ಸ್ಪಷ್ಟವಾದ ಹೆಜ್ಜೆಗಳನ್ನು ಇಟ್ಟು ತನ್ನ ಗುರಿಯನ್ನು ನಿರ್ಧರಿಸಿಕೊಳ್ಳಲಾರಂಭಿಸಿತು. ಈ ದಶಕದಲ್ಲಿ ಕಂಡದ್ದು ತೀವ್ರ ಕಲಿಕೆಯ ಹಾಗೂ ತೀವ್ರ ಹುಡುಕಾಟದ ದಿನಗಳನ್ನು. ಅರವತ್ತರ ದಶಕದ ಆರಂಭದಿಂದ ಅಂತ್ಯದವರೆಗೆ ಅದು ತನ್ನದೇ ಆದ ಜಾಡಿನ ಶೋಧನೆಯಲ್ಲಿ ಅನೇಕ ಪ್ರಯೋಗಗಳನ್ನು ನಡೆಸಿತು. ಜೊತೆಗೆ ಅನೇಕ ರಾಜಕೀಯ, ಸಾಂಸ್ಕೃತಿಕ, ಆರ್ಥಿಕ ಮತ್ತು ಔದ್ಯಮಿಕ ಕ್ಷೇತ್ರಗಳ ಪ್ರಭಾವವೂ ಕನ್ನಡ ಚಿತ್ರರಂಗದ ಮೇಲಾಯಿತು. ಇವೆಲ್ಲವುಗಳ ಒಟ್ಟು ಪರಿಣಾಮವಾಗಿ ಕನ್ನಡ ಚಿತ್ರರಂಗ ತನ್ನದೊಂದು ಅಸ್ಮಿತೆಯನ್ನು ಗುರುತಿಸಿಕೊಂಡಿತು. ಈ ದಶಕದಲ್ಲಿ ಅಂದರೆ 1960-69ರ ನಡುವೆ ಕನ್ನಡ ಚಿತ್ರರಂಗಕ್ಕೆ ಅನೇಕ ಹೊಸ ಪ್ರತಿಭೆಗಳ ಆಗಮನವಾಯಿತು. ಮುಖ್ಯವಾಗಿ ನಿರ್ದೇಶಕರು ಮತ್ತು ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಪರಿಚಿತರಾದರು. ಅನೇಕ ವರ್ಷಗಳ ಕಾಲ ಅಗ್ರಶ್ರೇಣಿ ನಿರ್ದೇಶಕರೆನಿಸಿದ ಎಂ.ಆರ್.ವಿಠ್ಠಲ್, ಎನ್.ಲಕ್ಷ್ಮೀನಾರಾಯಣ, ಕೆ.ಎಸ್.ಎಲ್. ಸ್ವಾಮಿ, ಪುಟ್ಟಣ್ಣ ಕಣಗಾಲ್, ದೊರೈ ಭಗವಾನ್, ಸಿದ್ದಲಿಂಗಯ್ಯ ಮೊದಲಾದವರು ಸ್ವತಂತ್ರ ನಿರ್ದೇಶಕರಾಗಿ ಬೆಳೆದ ಕಾಲ. ಅದೇ ರೀತಿ ಕಲಾವಿದರ ದಂಡು ಆಗಮಿಸಿದರೂ ನಾಯಕನಟರಾಗಿ ಅರವತ್ತರ ದಶಕದಲ್ಲಿ ಹೊರಹೊಮ್ಮಿ ನೆಲೆಕಂಡು ದೀರ್ಘಕಾಲ ಉಳಿದುಕೊಂಡವರೆಂದರೆ ನಟ ರಾಜೇಶ್ ಮಾತ್ರ. ಈ ವಿಶಿಷ್ಟ ವಿದ್ಯಮಾನಕ್ಕೆ ಕಾರಣವಿದೆ.
ಐವತ್ತರ ದಶಕದ ಉತ್ತರಾರ್ಧದಲ್ಲಿ ಕನ್ನಡಕ್ಕೆ ರಾಜ್, ಉದಯ್ ಮತ್ತು ಕಲ್ಯಾಣ್-ಮೂವರು ಕುಮಾರರು ಭರವಸೆಯ ನಾಯಕ ನಟರಾಗಿ ಚಿತ್ರರಂಗ ಪ್ರವೇಶಿಸಿದರು. ಮೂವರ ಅಭಿನಯ ಶೈಲಿಯೂ ಪರಸ್ಪರ ಭಿನ್ನವಾದುದು. ಆದರೆ ಅರವತ್ತರ ದಶಕದಲ್ಲಿ ಕಲ್ಯಾಣ್ ಅವರು ತಮಿಳು ಚಿತ್ರರಂಗಕ್ಕೆ ವಾಲಿದರೆ, ಉದಯಕುಮಾರ್ ಕ್ರಮೇಣ ಪೋಷಕ ಪಾತ್ರಗಳಿಗೆ ಜಾರಿದರು. ರಾಜ್ ನಾಯಕನಟರಾಗಿ ಬಹುವೇಗವಾಗಿ ಜನಪ್ರಿಯತೆ ಗಳಿಸಿ ಇಡೀ ಚಿತ್ರರಂಗದಲ್ಲಿ ಹರಡಿಕೊಂಡರು. ಅವರ ಪಾರಮ್ಯ ಎಷ್ಟಿತ್ತೆಂದರೆ ಆ ದಶಕಗಳ ಕನ್ನಡ ಚಿತ್ರರಂಗದಲ್ಲಿ ನಿರ್ಮಾಣವಾದ ಒಟ್ಟು 201 ಚಿತ್ರಗಳಲ್ಲಿ ರಾಜ್‌ಕುಮಾರ್ ವರ್ಷಕ್ಕೆ ಸರಾಸರಿ ಹತ್ತು ಚಿತ್ರಗಳಂತೆ 102 ಚಿತ್ರಗಳ ನಾಯಕರಾಗಿ ಅಭಿನಯಿಸಿದ್ದರು. ಈ ಅವಧಿಯಲ್ಲಿ ಅಪಾರ ನಿರೀಕ್ಷೆಯೊಡನೆ ಆರ್.ಎನ್.ಸುದರ್ಶನ್, ರಾಜಾಶಂಕರ್, ರಂಗಾ, ಬಿ.ಎಂ. ವೆಂಕಟೇಶ್, ರಮೇಶ್ ನಾಯಕರಾಗಿ ಆಗಮಿಸಿದರು. ‘ವಿಜಯ ನಗರ ವೀರಪುತ್ರ’ ಯಶಸ್ಸಿನ ಅಲೆಯೇರಿ ಬಂದ ಸುದರ್ಶನ್ ಸ್ಟಂಟ್ ಚಿತ್ರಗಳಲ್ಲಿ ಹೆಚ್ಚು ಕಾಣಿಸಿಕೊಂಡರು. ರಾಜಾಶಂಕರ್ ಅವರ ನಟನೆ ‘ದಶಾವತಾರ’ ಚಿತ್ರದ ನಂತರ ಬದಲಾಗಲೇ ಇಲ್ಲ. ಬಿ.ಎಂ. ವೆಂಕಟೇಶ್, ರಮೇಶ್‌ರವರು ದೊಡ್ಡ ಕಲಾವಿದರಾಗಿ ಬೆಳೆಯುವರೆಂಬ ನಿರೀಕ್ಷೆ ಯನ್ನು ಅವರಿಗಿದ್ದ ನಟನಾಮಿತಿಯೇ ಹುಸಿಗೊಳಿಸಿತು. ಆದರೆ ಯಾವ ನಿರೀಕ್ಷೆಯೂ ಹುಟ್ಟುಹಾಕದೆ ಬಂದ ರಾಜೇಶ್ ಅವರು ನಾಯಕನಟನಾದ ಮೊದಲ ಚಿತ್ರದಲ್ಲಿಯೇ ಮನಸೂರೆಗೊಳ್ಳುವ ನಟನೆಯಿಂದ ತಮ್ಮ ವೃತ್ತಿಬದುಕಿಗೊಂದು ಭದ್ರಬುನಾದಿ ಹಾಕಿ ನೆಲೆಯೂರಿದ್ದು ಅರವತ್ತರ ದಶಕದ ವಿಶೇಷಗಳಲ್ಲೊಂದು.
ಅರವತ್ತರ ದಶಕದಲ್ಲಿ ಉದಯಿಸಿದ ಗಟ್ಟಿ ಕಲಾವಿದ ಎಂದರೆ ರಾಜೇಶ್. ಅವರು ನಿಜಕ್ಕೂ ಕಲಾತಪಸ್ವಿ. 1935ರಲ್ಲಿ ಬೆಂಗಳೂರಿನಲ್ಲಿ ಮುನಿಚೌಡಪ್ಪನಾಗಿ ಜನಿಸಿದ ರಾಜೇಶ್ ಚಿತ್ರರಂಗಕ್ಕೆ ಬರುವ ಮುನ್ನ ವಿದ್ಯಾಸಾಗರ್ ಹೆಸರಲ್ಲಿ ಶಾಲೆಗೆ ದಾಖಲಾದರು. ಅವರ ಇತ್ತೀಚಿನ ವೀಡಿಯೊ ಸಂದರ್ಶನಗಳನ್ನು ಕೇಳಿದ ಪ್ರಕಾರ ಬಾಲ್ಯದಿಂದಲೇ ಅವರಿಗೆ ರಂಗಭೂಮಿ, ಸಾಹಿತ್ಯ, ಸಿನೆಮಾಗಳ ಸೆಳೆತವಿತ್ತು. ತಮಿಳಿನ ಎಂ.ಕೆ. ತ್ಯಾಗರಾಜ ಭಾಗವತರ್ ರಾಜಕುಮಾರಿ ಮತ್ತು ಮಹಾಲಿಂಗಂ ಟಿ.ಆರ್. ಅವರ ಅಭಿನಯವನ್ನು ಮೆಚ್ಚಿಕೊಂಡ ಹಾಗೆಯೇ ಬೆಳೆಯುತ್ತಾ ಶಿವಾಜಿ ಗಣೇಶನ್ ಅವರ ಡೈಲಾಗ್ ಡೆಲಿವರಿಗೆ ಮಾರುಹೋಗಿದ್ದರು. ಮನೆಯಲ್ಲಿ ವಿರೋಧವಿದ್ದರೂ ಅವರಿಗೆ ತಿಳಿಯದಂತೆ ಸುದರ್ಶನ ನಾಟಕ ಮಂಡಲಿಯ ನಾಟಕವೊಂದರಲ್ಲಿ ರಾಮನ ಪಾತ್ರ ವಹಿಸಿದರು. ನಾಟಕ ಪ್ರಚಾರದ ಕರಪತ್ರ ಸಿಕ್ಕಾಗಲೇ ಮನೆಯವರಿಗೆ ಮಗ ಅಭಿನಯ ಖಯಾಲಿಗೆ ಬಿದ್ದದ್ದು ತಿಳಿದದ್ದು.
ಹೀಗೆ ನಾಟಕ ರಂಗಕ್ಕೆ ಬಂದರೂ ಬದುಕಿಗೆ ಟೈಪಿಸ್ಟ್ ಆಗಿ ಸರಕಾರಿ ನೌಕರಿ ಹಿಡಿದ ವಿದ್ಯಾಸಾಗರ್ ತಮ್ಮದೇ ‘ಶಕ್ತಿನಾಟಕ ಮಂಡಲಿ’ ಹುಟ್ಟು ಹಾಕಿ ವೃತ್ತಿರಂಗಭೂಮಿಯನ್ನು ನಡೆಸಿದ ಸಾಹಸಿ. ‘ನಿರುದ್ಯೋಗಿ ಬಾಳು’, ‘ಬಡವನ ಬಾಳು’ ಮೊದಲಾದ ನಾಟಕಗಳನ್ನು ರಚಿಸಿ ರಂಗಕ್ಕೆ ತಂದರು. ಎತ್ತರವಾದ ನಿಲುವು, ಕಂಚಿನ ಕಂಠ, ಸ್ಪಷ್ಟವಾದ ಉಚ್ಚಾರಣೆ ಹಾಗೂ ಭಾವನೆಗಳನ್ನು ಸಮರ್ಥವಾಗಿ ಹಿಡಿದಿಡಬಲ್ಲ ಮುಖ ಅವರ ಅಭಿನಯಕ್ಕೆ ನೆರವಾದವು. ಒಂದು ಕಡೆ ಶ್ರೀರಾಮನ ಪಾತ್ರಕ್ಕೆ ಹೊಂದಿಕೊಂಡಂತೆಯೇ ಅವರು ಕಿತ್ತೂರು ಚನ್ನಮ್ಮ ನಾಟಕದ ಥ್ಯಾಕರೆ ಪಾತ್ರವನ್ನೂ ಜೀವಿಸಿದರು. ಥ್ಯಾಕರೆ ಪಾತ್ರದಲ್ಲಿ ಇಂಗ್ಲಿಷ್ ಶೈಲಿಯಲ್ಲಿ ಕನ್ನಡ ಮಾತನಾಡುವ ಅವರ ಧ್ವನಿಯನ್ನು ಅನೇಕರು ಇಂಗ್ಲಿಷರ ಪಾತ್ರ ವಹಿಸಿದಾಗ ಅನುಕರಿಸತೊಡಗಿದರು. ಬೆಂಗಳೂರಿನ ರಂಗಭೂಮಿಯಲ್ಲಿ ಸಾಕಷ್ಟು ಪ್ರಸಿದ್ಧರಾಗಿದ್ದ ಕಾಲದಲ್ಲಿ ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ ಅವರು ತಮ್ಮ ಸ್ವಂತನಿರ್ಮಾಣದ ‘ವೀರ ಸಂಕಲ್ಪ’(1964) ಚಿತ್ರದಲ್ಲಿ ರಾಜೇಶ್ ಅವರಿಗೆ ಮಾಚೀರಾಯನ ಪಾತ್ರವನ್ನು ನೀಡಿದರು. ಅದೇ ಚಿತ್ರವು ಬಿ.ಎಂ. ವೆಂಕಟೇಶ್, ದ್ವಾರಕೀಶ್ ಮತ್ತು ವಾಣಿಶ್ರೀ ಮತ್ತು ಸಹನಿರ್ದೇಶಕರಾದ ಭಾರ್ಗವ ಅವರಿಗೆ ಮೊದಲ ಚಿತ್ರವಾಗಿತ್ತು. ಅವರೆಲ್ಲರೂ ಮುಂದೆ ತಮ್ಮದೇ ಹಾದಿಯಲ್ಲಿ ಬೆಳೆದರು. ಪಾತ್ರ ಪುಟ್ಟದಾದರೂ ರಾಜೇಶ್ ತಮ್ಮ ಧ್ವನಿ ಮತ್ತು ಆಂಗಿಕ ಅಭಿನಯದಿಂದ ಗಮನ ಸೆಳೆದರು. ಮೊದಲು ಬಣ್ಣ ಹಚ್ಚಿದ ಚಿತ್ರ ‘ವೀರ ಸಂಕಲ್ಪ’ವಾದರೂ, ರಾಜೇಶ್ ಅವರು ನಟಿಸಿದ ಮೊದಲ ಚಿತ್ರ ಬಿಡುಗಡೆಯಾದದ್ದು ಎಂ.ಎಸ್. ನಾಯಕ್ ನಿರ್ದೇಶನದ ‘ಶ್ರೀ ರಾಮಾಂಜನೇಯ ಯುದ್ಧ’(1963). ರಾಜ್ ನಾಯಕರಾಗಿದ್ದ ಈ ಚಿತ್ರದಲ್ಲಿ ರಾಜೇಶ್ ಭರತನ ಪಾತ್ರ ವಹಿಸಿದ್ದರು. ಆನಂತರ ಪಂತುಲು ಅವರ ‘ಗಂಗೆ ಗೌರಿ’(1967) ಚಿತ್ರದಲ್ಲಿ ರಾಜೇಶ್ ವಿಷ್ಣುವಿನ ಪುಟ್ಟ ಪಾತ್ರದಲ್ಲಿ ನಟಿಸಿದ್ದರು.
ಆದರೆ ರಾಜೇಶ್ ಅವರ ವೃತ್ತಿಜೀವನಕ್ಕೆ ‘ನಮ್ಮ ಊರು’(1968) ಚಿತ್ರವು ದೊಡ್ಡ ಬ್ರೇಕ್ ನೀಡಿತು. ನಿರ್ಮಾಪಕರು ವಿದ್ಯಾಸಾಗರ್ ಹೆಸರನ್ನು ರಾಜೇಶ್ ಎಂದು ಬದಲಿಸಿದರು. ಸಿ.ವಿ.ಶಿವಶಂಕರ್ ನಿರ್ದೆಶಿಸಿದ ನಮ್ಮ ಊರು ಚಿತ್ರವು ಅನೇಕ ಭಾವತೀವ್ರತೆಯ ಸನ್ನಿವೇಶಗಳಿದ್ದ, ಗ್ರಾಮೀಣ ಬದುಕಿನ ಮಹತ್ವವನ್ನು ಸಾರುವ ಚಿತ್ರವಾಗಿ ಪ್ರೇಕ್ಷಕರನ್ನು ಸೆಳೆಯಿತು. ನಗರೀಕರಣ ಮತ್ತು ಕೈಗಾರೀಕರಣದಿಂದ ಗ್ರಾಮೀಣ ವಲಸೆ ಆರಂಭವಾಗಿದ್ದ ದಿನಗಳವು. ಅಂಥ ವಲಸೆಯನ್ನು ವಿದ್ಯಾವಂತ ಯುವಕನೋರ್ವ ತಡೆದು ಗಾಂಧಿಯ ಆಶಯದಂತೆ ಗ್ರಾಮಭಾರತ ನಿರ್ಮಿಸಲು ಪ್ರಯತ್ನಿಸುವ ಕತೆಯಿದು. ಹೋಗದಿರಿ ಬಂಧುಗಳೇ ಹಾಡು ಆ ಕಾಲದಲ್ಲಿ ಅತ್ಯಂತ ಜನಪ್ರಿಯವಾಗಿತ್ತು. ಅದು ಇಡೀ ಚಿತ್ರದ ಒಟ್ಟು ಆಶಯವನ್ನು ಹೇಳುವಂತೆ ರಚನೆಯಾಗಿತ್ತು. ಜೊತೆಗೆ ರಾಜ್ಯ ಸರಕಾರ ತೆರಿಗೆ ವಿನಾಯಿತಿ ನೀಡಿತು. ಚಿತ್ರದ ಯಶಸ್ಸು ಮತ್ತಷ್ಟು ವೃದ್ಧಿಸಿತು. ನಾಯಕನಿಗೆ ಹೆಚ್ಚಿನ ಅವಕಾಶವಿದ್ದ ಚಿತ್ರದಲ್ಲಿ ರಾಜೇಶ್ ತಮ್ಮ ಅಭಿನಯದಿಂದ ಪ್ರೇಕ್ಷಕರಿಗೆ ಮೋಡಿ ಹಾಕಿದರು. ರಂಗಭೂಮಿಯ ಅನುಭವದಿಂದ ಪರಿಪಕ್ವಗೊಂಡ ಅಭಿನಯ ಮತ್ತು ರಾಜ್ ಅವರಂತೆಯೇ ರಾಜೇಶ್ ಅವರ ಸ್ಪಷ್ಟ ಉಚ್ಚಾರಣೆ ಹಾಗೂ ಭಾವಕ್ಕೆ ತಕ್ಕ ಧ್ವನಿಯ ಏರಿಳಿತವನ್ನು ಕಂಡ ಪ್ರೇಕ್ಷಕರು ಅವರ ಅಭಿನಯವನ್ನು ಮೆಚ್ಚಿಕೊಂಡರು.
ಅದೃಷ್ಟದ ಬಾಗಿಲು ತೆರೆದ ‘ನಮ್ಮ ಊರು’ ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ಅವರಿಗೆ ಬೇಡಿಕೆ ಹೆಚ್ಚಿತು. ಕನ್ನಡದ ಪ್ರಧಾನ ನಿರ್ದೇಶಕರಿಗೂ ಅವರು ಅಚ್ಚುಮೆಚ್ಚಿನವರಾದರು. ಮರು ವರ್ಷ ಅವರು ಅಭಿನಯಿಸಿದ ಎಂಟು ಚಿತ್ರಗಳು ಬಿಡುಗಡೆಯಾದವು. ಎಂ. ಆರ್ ವಿಠ್ಠಲ್ ಅವರ ಎರಡುಮುಖ, ಪುಟ್ಟಣ್ಣನವರ ಕಪ್ಪು ಬಿಳುಪು, ಬಿ. ಎಸ್. ರಂಗಾ ಅವರ ‘ಭಲೇ ಬಸವ’ ಮತ್ತು ‘ಬ್ರೋಕರ್ ಭೀಷ್ಮಾಚಾರಿ’ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿ ಕನ್ನಡದಲ್ಲಿ ಒಂದು ವರ್ಷದ ಅವಧಿಯಲ್ಲೇ ನೆಲೆಯೂರಿದರು. ‘ಬ್ರೋಕರ್ ಭೀಷ್ಮಾಚಾರಿ’(1969) ಚಿತ್ರದ ನಾಯಕನ ಪಾತ್ರವನ್ನು ನಿರ್ವಹಿಸಿದ ರೀತಿ ಅವರೊಬ್ಬ ಅಸಲಿ ಕಲಾವಿದನೆಂಬುದನ್ನು ಗುರುತಿಸಿತು. ಈ ಚಿತ್ರಗಳಲ್ಲಿ ಅದಾಗಲೇ ಪ್ರೇಕ್ಷಕರಿಗೆ ಪರಿಚಯವಿದ್ದ ನಟಿಯರಾದ ಜಯಂತಿ, ಕಲ್ಪನಾ, ರಾಜಶ್ರೀ ಅವರ ನಾಯಕಿಯರಾಗಿದ್ದರು.
1970ರಿಂದ ಅವರ ಪ್ರಗತಿ ಮತ್ತಷ್ಟು ಏರುಗತಿ ಕಂಡುಕೊಂಡಿತು. ನಾಯಕ ನಟರಾದರೂ, ಪಾತ್ರ ಚಿಕ್ಕದಾದರೂ ಸತ್ವವಿದ್ದರೆ ಅಂಥವುಗಳನ್ನು ಒಪ್ಪಿಕೊಳ್ಳಲು ಅವರು ಹಿಂಜರಿಯುತ್ತಿರಲಿಲ್ಲ. ಅದಾಗಲೇ ಸ್ಟಾರ್ ಇಮೇಜು ಭದ್ರವಾಗುತ್ತಿದ್ದ ಕಾಲದಲ್ಲಿ ರಾಜೇಶ್ ಅಂತಹ ಕಟ್ಟುಪಾಡುಗಳನ್ನು ಮುರಿದು ಪಾತ್ರಗಳನ್ನು ಮಾತ್ರ ಪರಿಗಣಿಸುತ್ತಿದ್ದರು. ಅಭಿಮಾನಿ ವೃಂದ ಅವರಿಗಿಲ್ಲದ್ದು ಕಲಾವಿದ ಅರಳಲು ಸಾಧ್ಯವಾಯಿತು. ರಾಜೇಶ್‌ರವರು ಎಂತಹ ಪಾತ್ರವನ್ನು ಬೇಕಾದರೂ ನಿರ್ವಹಿಸಬಲ್ಲರು ಎಂಬುದಕ್ಕೆ ‘ಭಲೇ ಭಾಸ್ಕರ್’ ಮತ್ತು ‘ಬಿಡುಗಡೆ’ ಚಿತ್ರದಲ್ಲಿ ಖಳನಟನಾಗಿ ನೀಡಿರುವ ತಣ್ಣನೆಯ ಕ್ರೌರ್ಯದ ಪಾತ್ರಗಳೇ ಸಾಕ್ಷಿ. ಅಷ್ಟೆ ಏಕೆ ಇನ್ನೂ ನಾಯಕ ನಟರಾಗಿ ಅಭಿನಯಿಸುತ್ತಿದ್ದ ಕಾಲದಲ್ಲಿಯೇ ರಾಜ್ ಅವರ ಜೊತೆ ‘ದೇವರ ಮಕ್ಕಳು’, ‘ಬಿಡುಗಡೆ’, ‘ಕ್ರಾಂತಿವೀರ’ ಮತ್ತು ‘ಪ್ರತಿಧ್ವನಿ’ ಚಿತ್ರಗಳಲ್ಲಿ ಪಾತ್ರ ವಿಸ್ತಾರ ಚಿಕ್ಕದಾಗಿದ್ದರೂ ಇದ್ದ ಸನ್ನಿವೇಶಗಳಲ್ಲಿಯೇ ಡಾ. ರಾಜ್ ಅವರ ಹಾಜರಿಯಲ್ಲೂ ತಮ್ಮ ಪಾತ್ರ ಮಿಂಚುವಂತೆ ನಟಿಸಿದ್ದರು. ನೆಗೆಟಿವ್ ಛಾಯೆಯಿದ್ದ ಕೊನೆಯ ಮೂರು ಚಿತ್ರಗಳ ಪಾತ್ರಗಳಲ್ಲಿ ರಾಜ್ ಎದುರು ಅಭಿನಯಿಸಿದ ರಾಜೇಶ್‌ರವರ ನಟನೆಯನ್ನೇ ಪ್ರೇಕ್ಷಕರು ಹೆಚ್ಚು ಮೆಚ್ಚಿಕೊಂಡಿದ್ದರು. ಅದೇ ರೀತಿ ವಿಷ್ಣುವರ್ಧನ್ ನಾಯಕರಾಗಿದ್ದ ಯಶಸ್ವಿ ಚಿತ್ರ ‘ದೇವರಗುಡಿ’, ಚಂದ್ರಶೇಖರ್ ನಾಯಕರಾಗಿದ್ದ ‘ಮನೆಬೆಳಕು’ ಚಿತ್ರದಲ್ಲಿ ಪೋಷಕ ಪಾತ್ರವಾದರೂ ಅವರ ಅಭಿನಯ ವಿಶೇಷ ಗಮನ ಸೆಳೆದಿತ್ತು. ಅಷ್ಟೇ ಏಕೆ ತಮಿಳಿನ ಹಾಸ್ಯನಟ ತೇಂಗಾಯ್ ಶ್ರೀನಿವಾಸ್ ವಹಿಸಿದ್ದ ಪಾತ್ರವನ್ನು ‘ದೇವರ ದುಡ್ಡು’ ಚಿತ್ರದಲ್ಲಿ ನಿರ್ವಹಿಸಿ ಆ ಪಾತ್ರಕ್ಕೆ ತಂದ ಗಾಂಭೀರ್ಯ ಮರೆಯುವಂತಹದ್ದಲ್ಲ. ವೃತ್ತಿ ಬದುಕನ್ನು ಗಂಭೀರವಾಗಿ ಸ್ವೀಕರಿಸಿ ವೈಯಕ್ತಿಕವಾಗಿ ಅತ್ಯಂತ ಶಿಸ್ತಿನ ಕಲಾವಿದರೆನಿಸಿದ್ದ ರಾಜೇಶ್ ಅವರು ಯಾವುದೇ ಪಾತ್ರದ ಅಂತರಂಗವನ್ನು ಹೊಕ್ಕಬಲ್ಲವರಾಗಿದ್ದರು. ಪೌರಾಣಿಕ,(‘ಸುಭದ್ರಾ ಕಲ್ಯಾಣ’, ‘ರೇಣುಕಾದೇವಿ ಮಹಾತ್ಮೆ’) ಭಕ್ತಿ,(‘ಗುರುಸಾರ್ವಭೌಮ ರಾಘವೇಂದ್ರ ಕರುಣೆ’, ‘ಕ್ರಾಂತಿವೀರ ಬಸವಣ್ಣ’) ಸಾಹಸ(‘ಬೇತಾಳಗುಡ್ಡ’) ಸಾಮಾಜಿಕ ವಸ್ತುವಿದ್ದ ಹಲವಾರು ಚಿತ್ರಗಳಲ್ಲಿ ನಟಿಸಿ ಅವರು ತಮ್ಮ ಅಭಿನಯದ ವಿಸ್ತಾರವನ್ನು ತೋರಿಸಿದರು. ನಗರ ಪ್ರದೇಶದಲ್ಲಿ ಹುಟ್ಟಿ ಬೆಳೆದವರಾದ ರಾಜೇಶ್ ಮುಗ್ಧ ಹಳ್ಳಿಗನ ಪಾತ್ರಗಳಲ್ಲಿ ಪ್ರೇಕ್ಷಕರನ್ನು ಮನಸೂರೆಗೊಂಡಿದ್ದರು. ಅವರ ಇಂತಹ ಪಾತ್ರಗಳ ಅಭಿನಯ ‘ಸುವರ್ಣಭೂಮಿ’, ‘ನಮ್ಮ ಬದುಕು’, ‘ಬೋರೇಗೌಡ ಬೆಂಗಳೂರಿಗೆ ಬಂದ’, ‘ಬೆಳುವಲದ ಮಡಿಲಲ್ಲಿ’, ‘ಬದುಕು ಬಂಗಾರವಾಯ್ತು’ ಚಿತ್ರಗಳಲ್ಲಿ ಅನಾವರಣವಾಗಿದೆ.
ವಿಚಿತ್ರವೆಂದರೆ ರಾಜ್ ಮತ್ತು ರಾಜೇಶ್ ಅವರು ವಹಿಸಿದ ಮುಗ್ಧ ಹಳ್ಳಿಗನ ಪಾತ್ರಗಳ ನಡುವೆ ಸಾಮ್ಯಕ್ಕಿಂತ ವೈರುಧ್ಯ ಹೆಚ್ಚಿರುವುದು ಕನ್ನಡ ಚಲನಚಿತ್ರದ ಗಂಭೀರ ವಿದ್ಯಾರ್ಥಿಗಳಿಗೆ ಒಂದು ಅಧ್ಯಯನದ ವಸ್ತುವಾಗುವಷ್ಟು ಎದ್ದು ಕಾಣುತ್ತದೆ. ಹಳ್ಳಿಯಿಂದ ಬೆಂಗಳೂರಿಗೆ ಬರುವ ‘ಮೇಯರ್ ಮುತ್ತಣ್ಣ ’(1968) ಪಾತ್ರವು ನಗರದ ತಾಯ್ತನ ಮತ್ತು ಬೆಳೆಯುವ ವಿಫುಲ ಅವಕಾಶಗಳನ್ನು ತೆರೆದು ತೋರಿಸಿದರೆ ‘ಬೋರೇಗೌಡ ಬೆಂಗಳೂರಿಗೆ ಬಂದ’ ಚಿತ್ರವು ನಗರವನ್ನು ಕ್ರೂರವೂ ಕಿಡಿಗೇಡಿಗಳ ಆವಾಸಸ್ಥಾನವೆಂದು ಬಿಂಬಸಿ ಹಳ್ಳಿಗೆ ವಾಪಸಾಗುವ ಚಿತ್ರಣವಿದೆ. ‘ಮಣ್ಣಿನ ಮಗ’ ಮತ್ತು ‘ಬೆಳುವಲದ ಮಡಿಲಲ್ಲಿ’ ಚಿತ್ರದ ಪಾತ್ರಗಳನ್ನೂ ಗಮನಿಸಬಹುದು. ಮುಂದುವರಿದಂತೆ ‘ಜೀವನಚೈತ್ರ’ ಚಿತ್ರದ ನಾಯಕ ಮಕ್ಕಳ ದ್ರೋಹವನ್ನು ಕ್ಷಮಿಸುವ ತಂದೆಯಾದರೆ ‘ಬೆಳುವಲದ ಮಡಿಲಲ್ಲಿ’ ಮತ್ತು ‘ಕಲಿಯುಗ’ ಚಿತ್ರಗಳ ನಾಯಕ ತನಗಾದ ದ್ರೋಹವನ್ನು ಎಂದೂ ಕ್ಷಮಿಸದ ಹಠವಾದಿ. ಈ ಮೂರು ಜೋಡಿ ಚಿತ್ರಗಳು ವಿಭಿನ್ನ ಎರಡು ವಿಭಿನ್ನ ಗ್ರಾಮೀಣ ಪಾತ್ರಗಳನ್ನು ಸೃಷ್ಟಿಸಿದ ಚಿತ್ರಗಳು. ಮೊದಲ ಚಿತ್ರದಲ್ಲಿ ರಾಜ್ ಅವರ ನಟನೆ ಅಮೋಘವೆನಿಸಿದರೆ ರಾಜೇಶ್ ಅಭಿನಯ ಅಷ್ಟೇ ಆಪ್ಯಾಯಮಾನವಾಗಿದೆ.(ಕಲಿಯುಗ ಸ್ವಲ್ಪಭಿನ್ನ. ಆಶಯದಲ್ಲಿ ಹಾಗೆಯೇ ಇದೆ) ಗ್ರಾಮೀಣ ಪಾತ್ರ ಹೇಗೋ ಹಾಗೆಯೇ ನಗರದ ಐಶಾರಾಮಿ ಯುವಕನ ಬಿಂದಾಸ್ ಪಾತ್ರವನ್ನು ಅಷ್ಟೇ ಸೊಗಸಾಗಿ ಮಾಡಬಲ್ಲವರಾಗಿದ್ದರು. ‘ಮರೆಯದ ದೀಪಾವಳಿ’, ‘ಸಹಧರ್ಮಿಣಿ’, ‘ದೇವರಗುಡಿ’, ‘ಒಂದು ಹೆಣ್ಣಿನ ಕಥೆ’, ‘ಕಸ್ತೂರಿ ವಿಜಯ’ ಚಿತ್ರಗಳಲ್ಲಿ ಅಂತಹ ಸೂಟುಬೂಟು ತೊಟ್ಟು, ಸೊಗಸಾಗಿ ಇಂಗ್ಲಿಷ್ ಮಾತನಾಡುವ ಪಾತ್ರ ಗಳಲ್ಲಿ ಅವರು ಪ್ರೇಕ್ಷಕರಿಗೆ ಹತ್ತಿರವಾಗಿದ್ದರು.
ಕನ್ನಡ ಚಿತ್ರರಂಗದಲ್ಲಿ ನಾಯಕ-ನಾಯಕಿಯರ ಕೆಲವು ಜೋಡಿಗಳು ತಮ್ಮ ವಿಶಿಷ್ಟ ಕೆಮಿಸ್ಟ್ರಿಯಿಂದಾಗಿ ಜನಪ್ರಿಯವಾಗಿವೆ. ರಾಜ್-ಭಾರತಿ, ರಾಜ್-ಲೀಲಾವತಿ, ಉದಯ- ಜಯಂತಿ ಅಂತಹ ಜನಪ್ರಿಯ ಜೋಡಿಗಳಲ್ಲಿ ಕೆಲವು. ಹಾಗೆಯೇ ರಾಜೇಶ್- ಕಲ್ಪನಾ ಜೋಡಿ ಕನ್ನಡ ಪ್ರೇಕ್ಷಕರಿಗೆ ಹಾಕಿದ ಮೋಡಿ ಉಳಿದ ಜೋಡಿಗಳಿಗಿಂತ ಭಿನ್ನವಾದುದು. ಮೊದಲು ಉಲ್ಲೇಖಿಸಿದ ಜೋಡಿಗಳಲ್ಲಿ ಗ್ಲಾಮರ್ ಮತ್ತು ಪ್ರಣಯ ಹಾಗೂ ಸಾಂಸಾರಿಕ ಬದುಕಿನಲ್ಲಿ ಜೊತೆಗೂಡುವ ಪಾತ್ರಗಳಿಂದ ಗಮನ ಸೆಳೆದರೆ ರಾಜೇಶ್- ಕಲ್ಪನಾ ಜೋಡಿಯ ಜನಪ್ರಿಯತೆಗೆ ಅವರು ಅಭಿನಯದಲ್ಲಿ ಹೂಡುತ್ತಿದ್ದ ಸ್ಪರ್ಧೆಯು ಕಾರಣವಾಗಿತ್ತು. ‘ಕಪ್ಪುಬಿಳುಪು’ ಚಿತ್ರದಿಂದ ಆರಂಭವಾದ ಈ ಪೈಪೋಟಿ ‘ಕಾಣಿಕೆ’, ‘ಬೃಂದಾವನ’, ‘ದೇವರ ಮಕ್ಕಳು’, ‘ನಮ್ಮ ಮನೆ’, ‘ಅರಿಶಿನ ಕುಂಕುಮ’, ‘ಬೆಳುವಲದ ಮಡಿಲಲ್ಲಿ’, ‘ಮರೆಯದ ದೀಪಾವಳಿ’ ಚಿತ್ರಗಳವರೆಗೂ ಮುಂದುವರಿಯಿತು. ಇಲ್ಲಿನ ಬಹುತೇಕ ಚಿತ್ರಗಳಲ್ಲಿ ಕಾಕತಾಳೀಯವೆಂಬಂತೆ ರಾಜೇಶ್- ಕಲ್ಪನಾ ಅವರ ಪಾತ್ರಗಳು ಪ್ರೇಮ ಪ್ರಣಯಕ್ಕಿಂತಲೂ ಹಲವು ಸಂಘರ್ಷಗಳ, ತಾಕಲಾಟಗಳ, ಪಾತ್ರಗಳಲ್ಲಿ ಅವರು ನೀಡಿದ ಅಭಿನಯದಿಂದ ಪ್ರೇಕ್ಷಕರನ್ನು ಸೆಳೆದಿವೆ. ನಾಯಕ ನಟಿ ಪಾತ್ರಗಳು ಹೀಗೆ ಅಭಿನಯಮಾತ್ರದಿಂದ ಜನಪ್ರಿಯವಾದ ಪ್ರಕರಣಗಳು ಬಹಳ ವಿರಳ.
ತಮ್ಮ ವಿಶಿಷ್ಟವಾದ ಧ್ವನಿಯಿಂದ ರಾಜೇಶ್ ಅವರ ಅಭಿನಯಕ್ಕೊಂದು ಮೆರಗು ದೊರೆತಿತ್ತು. ‘ಬೋರೇಗೌಡ ಬೆಂಗಳೂರಿಗೆ ಬಂದ’, ‘ಬೆಳುವಲದ ಮಡಿಲಲ್ಲಿ’, ‘ಕಲಿಯುಗ’, ‘ಮರೆಯದ ದೀಪಾವಳಿ’ ಮುಂತಾದ ಚಿತ್ರಗಳಲ್ಲಿ ಅವರು ಸಂಭಾಷಣೆಯನ್ನು ಭಾವಾಭಿವ್ಯಕ್ತಿಗೆ ಬಳಸುವ ರೀತಿ ವಿಶಿಷ್ಟವೆನಿಸಿತ್ತು. ಆದರೆ ಕ್ರಮೇಣ ಅವರು ಒಂದು ಬಗೆಯ ಶೈಲೀಕೃತ ಅಭಿನಯಕ್ಕೆ ತಾವೇ ಮೋಹಗೊಂಡಂತೆ ಕಾಣುವುದೂ ಇದೆ. ನಟ ಶಿವಾಜಿ ಗಣೇಶನ್ ಅವರ ಗಾಢ ಪ್ರಭಾವ ಅವರ ಮೇಲಿರುವುದು ಅವರ ನಡಿಗೆ, ಹಾವ ಭಾವ ಮತ್ತು ಸಂಭಾಷಣೆಯನ್ನು ಒಪ್ಪಿಸುವ ಕ್ರಮದಿಂದ ಢಾಳಾಗಿ ಕಾಣುತ್ತದೆ. ಅದರಲ್ಲೂ ‘ಬೆಳುವಲದ ಮಡಿಲಲ್ಲಿ’, ‘ದೇವರ ಗುಡಿ’ ಮತ್ತು ‘ಕಲಿಯುಗ’ ಚಿತ್ರದಲ್ಲಿ ಆ ಛಾಪನ್ನು ನೋಡಬಹುದು. ಆದರೆ ಅವರನ್ನು ನಿಯಂತ್ರಿಸಿ ಅವರಲ್ಲಿದ್ದ ಸೂಕ್ಷ್ಮ ಕಲಾವಿದರನ್ನು ಹೊರತಂದವರು ಬಹಳ ಕಡಿಮೆಯೇ! ಹಲವೊಮ್ಮೆ ಅತಿ ಎನಿಸುವಷ್ಟರಮಟ್ಟಿಗೆ ಅಭಿನಯಿಸಿದರೂ ಅವರ ಪ್ರತಿಭೆಗೆ ಸವಾಲಾಗಿ ಒದಗಿಬಂದ ಚಿತ್ರಗಳ ಸಂಖ್ಯೆ ಹೆಚ್ಚಿಲ್ಲ. ಆದರೆ ಕಲೆಯನ್ನು ತಪಸ್ಸಿನಂತೆ ಆಚರಿಸಿದ ರಾಜೇಶ್ ಅವರಂತಹ ಕಲಾವಿದ ದೊರೆಯುವುದು ಅಪರೂಪ. ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ಕಲಾವಿದರಲ್ಲಿ ರಾಜೇಶ್ ಒಬ್ಬರು ಎಂಬುದು ನಿಸ್ಸಂಶಯ. ಅವರು ಹಾಡಿದ ‘‘ಹೋಗದಿರೀ ಸೊದರರೇ, ಹೋಗದಿರೀ ಬಂಧುಗಳೇ’’ ಮತ್ತು ‘‘ರವಿವರ್ಮನ ಕುಂಚದ ಕಲೆ ಬಲೆ ಸಾಕಾರವೋ...’’ ಗೀತೆಗಳು ಕನ್ನಡ ಚಿತ್ರರಂಗ ಇರುವವರೆಗೂ ಅವರ ನೆನಪನ್ನು ಅಜರಾಮರವಾಗಿಸುತ್ತವೆ.