ಹಿಜಾಬ್ ವಿವಾದದ ಹಿಂದೆ ಐಸಿಸ್ ಸಂಘಟನೆ: ಸಚಿವ ಆರ್. ಅಶೋಕ್
ಉಡುಪಿ, ಫೆ.20: ಹಿಜಾಬ್ ವಿವಾದದ ಹಿಂದೆ ಬಹಳ ದೊಡ್ಡ ಷಡ್ಯಂತ್ರ ಇದೆ. ಇದರಲ್ಲಿ ಐಸಿಸ್ ಸಂಘಟನೆ ಕೆಲಸ ಮಾಡುತ್ತಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಆರೋಪಿಸಿದ್ದಾರೆ. ಉಡುಪಿಯ ಕೆಂಜೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿವಾದ ವಿಧಾನಸಭೆಯಲ್ಲಿ ಚರ್ಚೆಗೆ ಬಾರದಂತೆ ಕಾಂಗ್ರೆಸ್ ನವರು ನೋಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ನ ಬಂಡವಾಳ ಏನು ಎಂಬುದು ಜನಕ್ಕೆ ಅರ್ಥ ಆಗುತ್ತಿದೆ. ಕೆಲವರು ಟಿಸಿ ಕೇಳುತ್ತಿದ್ದಾರೆ, ಕೆಲವರು ಶಾಲೆಗೆ ಬರುವುದಿಲ್ಲ ಎಂದು ಹೇಳುತ್ತಿದ್ದಾರೆ. ಒಂದು ಸಂಸ್ಥೆಯ ವಿಚಾರ ಪ್ರಪಂಚಕ್ಕೆ ಹಬ್ಬಿದ್ದು ಹೇಗೆ? ಆರು ಮಂದಿ ವಿದ್ಯಾರ್ಥಿಗಳು ಇಷ್ಟೆಲ್ಲ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ವಿದ್ಯೆ ಮುಖ್ಯವೇ ಹೊರತು ಧರ್ಮ ಮುಖ್ಯ ಅಲ್ಲ. ವಿದ್ಯೆ ಇದ್ದರೆ ಧರ್ಮ ಸೇರಿದಂತೆ ಎಲ್ಲವೂ ಹತ್ತಿರ ಓಡಿ ಬರುತ್ತದೆ. ದೇಶಕ್ಕಿಂತ ಧರ್ಮ ದೊಡ್ಡದಲ್ಲ ಎಂಬುದು ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್ ನಂಬಿಕೊಂಡು ಹೋದರೆ ದೇವರೇ ಗತಿ ಎಂದು ಅವರು ಟೀಕಿಸಿದರು.
ಹಿಜಾಬ್ ವಿಚಾರದಲ್ಲಿ ಪೋಷಕರು ಶಾಪ ಹಾಕುತ್ತಿದ್ದಾರೆ ಎಂಬ ಯು.ಟಿ ಖಾದರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಹಿಜಾಬ್ ಹಾಕುವವರು ಶಾಪ ಹಾಕುತ್ತಿರಬಹುದು. ಹಿಜಾಬ್ ಪರ ಮಾತನಾಡುವವರು ಕೆಲವೇ ಕೆಲವು ಜನ. ಇಡೀ ಕರ್ನಾಟಕ ಗುಡ್ಡೆ ಹಾಕಿದರು ನೂರು ಜನ ಸಿಗಲ್ಲ. ಹಿಜಾಬ್ ಪರ ಇರುವವರ ಓಟು ಬೇಡ ಸಿಂಪಥಿಯೂ ಬೇಡ ಎಂದರು.
ಅಂಜುಮನ್ ಇಸ್ಲಾಂ ಇಡೀ ರಾಜ್ಯದ ದೊಡ್ಡ ಶಿಕ್ಷಣ ಸಂಸ್ಥೆಯಾಗಿದೆ. ಹಿಜಾಬ್, ಕೇಸರಿ ಮುಖ್ಯ ಅಲ್ಲ ಅಂತ ಅವರೇ ಕರೆ ಕೊಟ್ಟಿದ್ದಾರೆ. ಬಹಳಷ್ಟು ಮೌಲ್ವಿಗಳು ಹಿಜಾಬ್ ಮುಖ್ಯ ಅಲ್ಲ ಎಂದಿದ್ದಾರೆ. ದೇಶದ ಮಾತು ಕೇಳೋದು ಬಿಟ್ಟು ವಿದೇಶದ ಮಾತು ಕೇಳುತ್ತಿದ್ದಾರೆ. ಸ್ಥಳೀಯ ಮುಸ್ಲಿಂ ನಾಯಕರು ಶಿಕ್ಷಣ ಪರ ಇದ್ದಾರೆ. ಎರಡು ಲಕ್ಷ ಸಂಬಳ ತೆಗೆದುಕೊಂಡು ವಿಧಾನಸಭೆಯಲ್ಲಿ ಗೊರಕೆ ಹೊಡಿಬೇಡಿ. ಸರಕಾರವೇ ವಿರೋಧ ಪಕ್ಷಕ್ಕೆ ಕಿವಿ ಹಿಂಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ತಿಳಿಸಿದರು.