ಜಗತ್ತಿನ ನೆಲಭಾಷೆಗಳನ್ನು ನುಂಗಿಕೊಳ್ಳುತ್ತಿರುವ ಇಂಗ್ಲಿಷ್
ಇಂದಿನ ಇಂಗ್ಲಿಷ್ ಎಂಬ ಜಗತ್ತಿನ ಪ್ರಬಲವಾದ ಸಂಪರ್ಕ ಭಾಷೆ ಪ್ರಪಂಚದ ಇತರ ಭಾಷೆಗಳನ್ನು ವ್ಯವಸ್ಥಿತವಾಗಿ ಕೊಲ್ಲುತ್ತಿದೆಯೇ ಎಂದು ಯಾರಾದರೂ ಕೇಳಿದರೆ, ಭೂಮಿಯಿಂದ ಅಳಿಸಿಹೋಗುತ್ತಿರುವ ಭಾಷೆಗಳ ಬಗ್ಗೆ ತಿಳಿದಿರುವವರು ಹೌದು, ಎನ್ನುವ ಉತ್ತರ ನೀಡುತ್ತಾರೆ. ಇಂಗ್ಲಿಷ್ ಜೊತೆಗೆ ಯಾವುದೇ ರಾಷ್ಟ್ರ ಮತ್ತು ರಾಜ್ಯಗಳಿಗೆ ಸಂಬಂಧಿಸಿದ ಆಡಳಿತ ಭಾಷೆಗಳು ಸಹ ಅಲ್ಪಸಂಖ್ಯಾತ ಭಾಷೆಗಳನ್ನು ಕೊಲ್ಲುತ್ತಿವೆ. ಅಂದರೆ ಜಗತ್ತಿನ ಪ್ರಬಲ ಭಾಷೆಗಳು ಸ್ಥಳೀಯ ಅಲ್ಪಸಂಖ್ಯಾತ ಭಾಷೆಗಳ ಅಥವಾ ದುರ್ಬಲ ಜನರು ಸಂವಹನ ಮಾಡುವ ಬುಡಕಟ್ಟು ಭಾಷೆಗಳನ್ನು ಅಳಿಸಿಹಾಕಿ ಬೆಳೆಯುತ್ತಿವೆ. ಇದಕ್ಕೆ ಪ್ರಬಲ ಭಾಷೆಗಳ ಆಧುನಿಕ ತಂತ್ರಜ್ಞಾನ ಸಂವಹನ ಮತ್ತು ವ್ಯವಹಾರ ಕಾರಣವಾಗಿದೆ.
ಉದಾಹರಣೆಗೆ ಫ್ರಾನ್ಸ್ ದೇಶದ ಫ್ರೆಂಚ್ ಭಾಷೆ ಬ್ರಿಟನ್, ಅಲ್ಸಾಟಿಯನ್, ಪ್ರೋವೆನ್ ಮತ್ತು ಫ್ರಾನ್ಸ್ ನ ಎಲ್ಲಾ ಅಲ್ಪಸಂಖ್ಯಾತ ಭಾಷೆಗಳನ್ನು ಕೊಲ್ಲುತ್ತಿದೆ. ಥಾಯ್ ಭಾಷೆ ಥಾಯ್ಲೆಂಡ್‌ನ ಮೋಂಗ್, ಅಖಾ, ಕುಕಿ ಥಾಡೋವ್ ಮತ್ತು ಇತರ ಅಲ್ಪಸಂಖ್ಯಾತ ಭಾಷೆಗಳನ್ನು ಮುಗಿಸುತ್ತಿದೆ. ರಶ್ಯನ್ (ಸ್ಲಾವಿಕ್) ಭಾಷೆ ಅನೇಕ ಉರಾಲಿಕ್ ಮತ್ತು ಎಸ್ಕಿಮೊ-ಅಲೆಟ್ ಭಾಷೆಗಳನ್ನು ಕೊಂದುಹಾಕಿ ಈಗ ಉಜ್ಬೆಕ್, ಕಜಕ್ ಮತ್ತು ಜಾರ್ಜಿಯನ್‌ನ ಕಾಕೇಸಿಯನ್ ಭಾಷೆಗಳನ್ನು ಮುಗಿಸಲು ಹೊರಟಿದೆ. ನಮ್ಮ ದೇಶದಲ್ಲಿ ಇಂಗ್ಲಿಷ್ ಮತ್ತು ಹಿಂದಿ ಎರಡೂ ಭಾಷೆಗಳು ಸೇರಿಕೊಂಡು ನೂರಾರು ಅಲ್ಪಸಂಖ್ಯಾತ ಬುಡಕಟ್ಟು ಭಾಷೆಗಳನ್ನು ಮತ್ತು ಸಂವಿಧಾನದಲ್ಲಿ ಮಾನ್ಯತೆ ಪಡೆದು ರಾಜ್ಯ ಭಾಷೆಗಳನ್ನು ಸಹ ನುಂಗಲು ಹೊರಟಿವೆ. ಇಂಗ್ಲಿಷ್ ಭಾಷೆ ಯು.ಎಸ್.ನ ನೂರಾರು ಸ್ಥಳೀಯ ಬುಡಕಟ್ಟು ಭಾಷೆಗಳನ್ನು ಈಗಾಗಲೇ ಮುಗಿಸಿದ್ದು ಅಳಿದುಳಿದ ಭಾಷೆಗಳನ್ನು ಮುಗಿಸುತ್ತಿದೆ. ಇದರಲ್ಲಿ ಆಲ್ಗೋನ್ಕಿವಿಯನ್, ಇರೊಕ್ವೋಯನ್ ಮತ್ತು ಅಥಾಬಾಸ್ಕನ್ ಗುಂಪಿಗೆ ಸೇರಿದ ಅನೇಕ ಭಾಷೆಗಳು ಸೇರಿವೆ. ಇವೆಲ್ಲ ಕೆಲವು ಭಾಷೆಗಳ ಹೆಸರುಗಳು ಮಾತ್ರ. ರೆಡ್ ಇಂಡಿಯನ್‌ರನ್ನು ಮುಗಿಸುವುದರ ಜೊತೆಗೆ ಅವರ ಅನೇಕ ಭಾಷೆಗಳು ಕಾಣದೆಹೋದವು. ಯು.ಕೆ. ಮತ್ತು ಐರ್ಲೆಂಡ್‌ನಲ್ಲಿ ಇಂಗ್ಲಿಷ್ ಭಾಷೆ ಸೆಲ್ಟಿಕ್, ಗೇಲಿಕ್ ಇತ್ಯಾದಿ ಭಾಷೆಗಳನ್ನು ನುಂಗಿಕೊಂಡಿದೆ. ಇದೇ ಇಂಗ್ಲಿಷ್ ಭಾಷೆ ಆಸ್ಟ್ರೇಲಿಯದ ಅನೇಕ ಮೂಲ ನಿವಾಸಿ ಭಾಷೆಗಳನ್ನು ಅಳಿಸಿಹಾಕಿದೆ. ಜಗತ್ತಿನಾದ್ಯಂತ ರಾಷ್ಟ್ರ-ರಾಜ್ಯಗಳಿಗೆ ಸಂಬಂಧಿಸಿದ ಭಾಷೆಗಳು ಇತರ ಅಲ್ಪಸಂಖ್ಯಾತ ಭಾಷೆಗಳನ್ನು ಮುಗಿಸುತ್ತಾ ಸಾಗಿವೆ. ಬ್ರಿಟಷರು ಆಳಿದ ವಸಾಹತು ದೇಶಗಳೆಲ್ಲ ಇಂಗ್ಲಿಷ್ ಭಾಷೆಯ ಪ್ರಭಾವವನ್ನು ತಪ್ಪಿಸಿಕೊಳ್ಳಲಾರದೆ ಹೋಗಿವೆ. ಭಾರತದಲ್ಲಿ ಇಂದು ರಾಷ್ಟ್ರೀಕೃತ, ಕೇಂದ್ರಾಡಳಿತ ಅಥವಾ ರಾಷ್ಟ್ರಭಾಷೆ ಎಂದು ಬಿಂಬಿಸುತ್ತಿರುವ ಉತ್ತರ ಭಾರತದ ಹಿಂದಿ ಭಾಷೆಯನ್ನು ಕಲಿತವರೇ ಹೆಚ್ಚಾಗಿ ಉದ್ಯೋಗಗಳನ್ನು ಪಡೆದುಕೊಳ್ಳುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಲಾಗುತ್ತಿದೆ. ಇದರ ಜೊತೆಗೆ ದೇಶದ ಪ್ರಮುಖ ಆರ್ಥಿಕ ಸ್ತಂಭವಾದ ವ್ಯವಸಾಯ ನಷ್ಟಕ್ಕೆ ಸಿಲುಕಿಕೊಂಡು ರೈತನು ಕಂಗಾಲಾಗಿದ್ದಾನೆ. ಗ್ರಾಮೀಣ ಪ್ರದೇಶಗಳ ಗುಡಿಗಾರಿಕೆ ಸಂಪೂರ್ಣವಾಗಿ ತಳಮಟ್ಟಕ್ಕೆ ಕುಸಿದುಕುಳಿತಿದೆ. ಒಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳ ಯುವಜನತೆ ಆರ್ಥಿಕ ಮತ್ತು ಸಾಮಾಜಿಕ ಒತ್ತಡಗಳಿಂದ ನಗರಗಳ ಕಡೆಗೆ ವಲಸೆಹೋಗಿ ಶಾಶ್ವತವಾಗಿ ನೆಲೆಸುವುದರಿಂದ ಅವರ ಮುಂದಿನ ತಲೆಮಾರುಗಳು ಮೂಲ ಭಾಷೆಗಳನ್ನು ಮರೆತುಹೋಗುವ ಪ್ರಮಾದ ಸೃಷ್ಟಿಯಾಗುತ್ತಿದೆ.
***
ಇಂದಿನ ಆಧುನಿಕ ಜಗತ್ತಿನಲ್ಲಿ ಇಂಗ್ಲಿಷ್ ಭಾಷೆ ಅತ್ಯಂತ ಪ್ರಮುಖ ಭಾಷೆಗಳಲ್ಲಿ ಒಂದಾಗಿದೆ. ಸಾಮಾನ್ಯ ಜನಜೀವನ, ಕೆಲಸ, ವ್ಯವಹಾರ, ಮನರಂಜನೆ, ಎಲ್ಲವೂ ತಂತ್ರಜ್ಞಾನದ ಮೂಲಕ ನಡೆಯುವುದರಿಂದ ಇಂಗ್ಲಿಷ್ ಭಾಷೆ ಅತ್ಯಗತ್ಯವಾದ ಭೂತದಂತೆ ಬೆಳೆದು ನಿಂತಿದೆ. ಇಂಗ್ಲಿಷ್ ಜೊತೆಗೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಆಡಳಿತ ಭಾಷೆಗಳು ಇದೇ ಕೆಲಸವನ್ನು ಮಾಡುತ್ತಿವೆ. ಅಂದರೆ ದೊಡ್ಡ ಮೀನುಗಳು ಚಿಕ್ಕ ಮೀನುಗಳನ್ನು ನುಂಗುತ್ತಿವೆ. ಮುಂದೊಂದು ದಿನ ದೊಡ್ಡ ದೊಡ್ಡ ಮೀನುಗಳು ತಿಮಿಂಗಿಲಗಳ ಪಾಲಾಗಲಿವೆ. ಇದರಿಂದ ಸ್ಥಳೀಯ ಭಾಷೆಗಳ ಇತಿಹಾಸ-ಸಂಸ್ಕೃತಿ ನಾಶವಾಗಿ ಜಾಗತಿಕ ಸಮಸ್ಯೆಯಾಗಿ ಮಾರ್ಪಡುತ್ತಿದೆ. ಒಟ್ಟಿನಲ್ಲಿ ನೂರಾರು ಭಾಷೆಗಳು ಏಕಕಾಲಕ್ಕೆ ನಶಿಸುತ್ತಿವೆ ಇಲ್ಲ ಅಳಿವಿನ ಅಂಚಿಗೆ ದೂಡಲ್ಪಡುತ್ತಿವೆ. ಕೆಲವೇ ಸಾವಿರಗಳ ಜನರು ಮಾತನಾಡುವ ಯಾವುದೇ ದೇಶದ ಯಾವುದೇ ಮೂಲೆಯ ಭಾಷೆಯಾದರೂ ಸರಿ. ಆ ಭಾಷೆಯನ್ನು ಉಳಿಸಿಕೊಳ್ಳುವುದು ಅತ್ಯವಶ್ಯಕವಾಗಿದೆ. ಯಾವುದೇ ಸಣ್ಣ ಭಾಷೆಯಾದರು ಸರಿ ಅದರಲ್ಲಿ ಸ್ಥಳೀಯ ಜನರ ಸಾವಿರಾರು ವರ್ಷಗಳ ಇತಿಹಾಸ, ಕಲೆ, ಆಚಾರ-ವಿಚಾರ, ಸಂಸ್ಕೃತಿ, ತಂತ್ರಜ್ಞಾನ ಭಾಷೆಯ ಜೊತೆಗೆ ಬಲವಾದ ಸಂಬಂಧವನ್ನು ಹೊಂದಿರುತ್ತದೆ. ಭಾಷೆಯನ್ನು ಬಳಸುವ ಮೂಲಕ ಸ್ಥಳೀಯ ಪರಿಸರ ಮತ್ತು ಸಾಂಸ್ಕೃತಿಕ ಜಗತ್ತಿನೊಂದಿಗೆ ಒಂದು ಅನುಸಂಧಾನ ಏರ್ಪಟ್ಟಿರುತ್ತದೆ. ಇದರೊಂದಿಗೆ ಜನಸಮುದಾಯಗಳ ಒಟ್ಟಾರೆ ಆಲೋಚನೆಗಳು, ಪ್ರಾಚೀನ ಪರಿಸರ, ಜ್ಞಾನ/ತಂತ್ರಜ್ಞಾನ ಮುಂದಿನ ತಲೆಮಾರುಗಳಿಗೆ ಸಾಗುತ್ತಾ ಹೋಗುತ್ತದೆ. ಆದರೆ ಅಂತಹ ಸಮೃದ್ಧ ಭಾಷೆಗಳಲ್ಲಿರುವ ಜ್ಞಾನವೇ ಈಗ ಒಂದೊಂದಾಗಿ ಭೂಮಿಯಿಂದ ನಶಿಸಿಹೋಗುತ್ತಿವೆ. ಇತ್ತೀಚಿನ ಶತಮಾನಗಳಲ್ಲಿ ವ್ಯಾಪಾರ, ವ್ಯವಹಾರ, ಸಂವಹನ, ತಂತ್ರಜ್ಞಾನ ಮತ್ತು ಕಂಪ್ಯೂಟಿಂಗ್‌ನ ಅಭಿವೃದ್ಧಿಯೊಂದಿಗೆ ಇಂಗ್ಲಿಷನ್ನು ಬಳಸಲಾಗುತ್ತಿದೆ. ಇಂದಿನ ಜಗತ್ತಿನಲ್ಲಿ ತಂತ್ರಜ್ಞಾನ ನಿರ್ಣಾಯಕ ವಿಷಯವಾಗಿದ್ದು ಮುಂದೆಯೂ ಇಂಗ್ಲಿಷ್ ಭಾಷೆ ಹೆಚ್ಚೆಚ್ಚು ಶಕ್ತಿಯುತವಾಗಿ ಬೆಳೆಯುತ್ತದೆ. ಯಾವುದೇ ವಿಶ್ವವಿದ್ಯಾನಿಲಯಕ್ಕೆ ಸೇರಬೇಕಾದರೂ ಇಂಗ್ಲಿಷ್ ಭಾಷೆಯ ಪ್ರಮಾಣ ಪತ್ರ ಜೊತೆಗೆ ಇರಲೇಬೇಕಾಗುತ್ತದೆ. ಅಮೆರಿಕ ಮತ್ತು ಇಂಗ್ಲೆಂಡ್ ದೇಶಗಳಲ್ಲಿ ಅತ್ಯುತ್ತಮ ವಿಶ್ವವಿದ್ಯಾನಿಲಯಗಳು ಇರುವುದರಿಂದ ಇಂಗ್ಲಿಷ್ ತಿಳಿದಿರಲೇಬೇಕಾಗುತ್ತದೆ. ಜಗತ್ತಿನ ಯಾವುದೇ ದೇಶದ ಒಬ್ಬ ಪ್ರಖ್ಯಾತ ವಿಜ್ಞಾನಿಯಾದರೂ, ಇಂಗ್ಲಿಷ್‌ನಲ್ಲಿ ಏನೂ ಬರೆಯಲಿಲ್ಲ ಎಂದರೆ ಆತನ ಬಗ್ಗೆ ಜಗತ್ತಿಗೆ ಏನೂ ಗೊತ್ತಾಗುವುದಿಲ್ಲ. ಇತ್ತೀಚಿನವರೆಗೂ ಇಂಗ್ಲಿಷ್ ಭಾಷೆ ಇತರ ಭಾಷೆಗಳ ದೃಷ್ಟಿಕೋನದಿಂದ ಒಂದು ಕೊಲ್ಲುವ ಸಾಧನವೆಂದು ಯಾರೂ ನಿರೀಕ್ಷಿಸಿರಲಿಲ್ಲ. ಈಗ ಜಗತ್ತೇ ಇಂಗ್ಲಿಷ್ ಭಾಷೆಯ ಹಿಂದೆ ಬಿದ್ದಿದ್ದು, ಇಂಗ್ಲಿಷ್ ಜೊತೆಗೆ ತಂತ್ರಜ್ಞಾನದ ಸಹಾಯವಿದ್ದರೆ ಜಗತ್ತನ್ನೇ ಗೆಲ್ಲುತ್ತೇವೆ ಮತ್ತು ಜಗತ್ತಿನ ಯಾವುದೇ ಮೂಲೆಯಲ್ಲಿ ಒಳ್ಳೆ ಕೆಲಸವನ್ನು ಗಿಟ್ಟಿಸಿಕೊಳ್ಳಬಹುದು ಎನ್ನುವ ನಂಬಿಕೆ ಮತ್ತು ಆಲೋಚನೆ ಯುವಜನರಲ್ಲಿ ತುಂಬಿಕೊಂಡಿದೆ. ಇಂಗ್ಲಿಷ್ ಜೊತೆಗೆ ಸಿಎಇ, ಎಫ್‌ಸಿಇ, ಟೋಫೆಲ್ ಇನ್ನೂ ಹೆಚ್ಚಿನ ಪರೀಕ್ಷೆಗಳಲ್ಲಿ ಪಾಸಾದರೆ ಇಂಗ್ಲಿಷ್ ವ್ಯವಹಾರ ಇರುವ ದೇಶಗಳಲ್ಲಿ ಓದಿ ಅಲ್ಲಿಯೇ ಕೆಲಸ ಗಿಟ್ಟಿಸಿಕೊಳ್ಳಬಹುದು. ಕೆಲವು ಪಾಶ್ಚಿಮಾತ್ಯ ದೇಶಗಳು ಮತ್ತು ಇನ್ನೂ ಕೆಲವು ದೇಶಗಳು ಆಯಾ ದೇಶಗಳ ಭಾಷೆಗಳಲ್ಲಿ ಪರೀಕ್ಷೆಗಳನ್ನು ನಡೆಸುತ್ತಿವೆ. ಕೇವಲ 1,500 ವರ್ಷಗಳ ಹಿಂದೆ ಈಗಿನ ಇಂಗ್ಲಿಷ್ ಭಾಷೆ ಬುಡಕಟ್ಟು ಜನರ ಗುಂಪುಗಳು ಮಾತನಾಡುವ ಒಂದು ವಿಸ್ಪ್(ತುಂಡು/ತಿರುಚಿದ) ಭಾಷೆಯಾಗಿತ್ತು. ಯುರೋಪಿನ ಮುಖ್ಯಭಾಗದಿಂದ ಜರ್ಮಾನಿಕ್ ಬುಡಕಟ್ಟುಗಳ ಜನರು ಬ್ರಿಟನ್ ದ್ವೀಪಗಳಿಗೆ ವಲಸೆ ಬಂದಾಗ ಮಾತನಾಡುತ್ತಿದ್ದ ಪಿಸುಗುಟ್ಟುವ ಭಾಷೆಯಾಗಿತ್ತು. ಈ ತಿರುಚಿದ ತುಂಡು ಭಾಷೆ ಈಗ ಜಗತ್ತಿನ ಬಹಳಷ್ಟು ಭಾಷೆಗಳನ್ನು ನುಂಗಿಕೊಳ್ಳುವ ಹಂತಕ್ಕೆ ತಲುಪಿದೆ.
ಇಂಗ್ಲಿಷ್ ಭಾಷೆಯನ್ನು 339 ದಶಲಕ್ಷ ಜನರು ಮಾತನಾಡಿದರೆ, ಸ್ಪ್ಯಾನಿಷ್ ಮಾತನಾಡುವವರ ಸಂಖ್ಯೆ 427 ದಶಲಕ್ಷ. ಇನ್ನು ಚೀನಾದ ಮ್ಯಾಂಡರಿನ್ ಮಾತನಾಡುವವರ ಸಂಖ್ಯೆ 897 ದಶಲಕ್ಷ. ಭಾರತದಲ್ಲಿ 422 ದಶಲಕ್ಷ ಜನರು ಹಿಂದಿ ಮಾತನಾಡುತ್ತಾರೆ ಎನ್ನಲಾಗಿದೆ. ಪ್ರಸ್ತುತ ಜಗತ್ತಿನಾದ್ಯಂತ 510 ದಶಲಕ್ಷ ಜನರು ಇಂಗ್ಲಿಷನ್ನು ಎರಡನೇ ಭಾಷೆಯಾಗಿ ಕಲಿಯುತ್ತಿದ್ದು, ಪ್ರತಿದಿನವೂ ಹೆಚ್ಚೆಚ್ಚು ಜನರು ಇದರ ಬಲೆಗೆ ಬೀಳುತ್ತಿದ್ದಾರೆ. ಜಗತ್ತಿನ ಯಾವ ಭಾಷೆಯೂ ಇಂಗ್ಲಿಷ್ ಭಾಷೆ ಹರಡುತ್ತಿರುವ ವೇಗದ ಹತ್ತಿರಕ್ಕೆ ಸುಳಿಯಲಾರದು. ವಿಜ್ಞಾನ, ವ್ಯವಹಾರ ಮತ್ತು ಮಾಧ್ಯಮಗಳಲ್ಲಿ ಇಂಗ್ಲಿಷ್ ಇನ್ನಷ್ಟು ಪ್ರಾಬಲ್ಯವನ್ನು ಸಾಧಿಸುತ್ತ ನಡೆಯುತ್ತಿದೆ. ಜೊತೆಗೆ ಇಂಗ್ಲಿಷ್ ಭಾಷೆ ಕಲಿಯುವುದು ಅಗ್ಗ ಮತ್ತು ಸುಲಭವಾಗಿದೆ. ಇದರ ಅಡ್ಡಪರಿಣಾಮದಿಂದ ಜಗತ್ತಿನ ನೂರಾರು ಮೂಲ ಭಾಷೆಗಳು ಹಿಂದಕ್ಕೆ ಸರಿಯುತ್ತಿವೆ. ಭಾಷಾತಜ್ಞ ಡೇವಿಡ್ ಗ್ರಾಡ್ಡೋಲ್ ಪ್ರಕಾರ ಜಗತ್ತಿನಲ್ಲಿ ಪ್ರಸ್ತುತ ಉಳಿದುಕೊಂಡಿರುವ ಸುಮಾರು 6,000-7,000 ಭಾಷೆಗಳಲ್ಲಿ ಶೇ.90 ಭಾಷೆಗಳು ಇದೇ ಶತಮಾನದಲ್ಲಿ ಕಣ್ಣುಮುಚ್ಚಿಕೊಳ್ಳುತ್ತವೆ. ಕೊಲಂಬಿಯಾ ವಿಶ್ವವಿದ್ಯಾನಿಲಯದ ಭಾಷಾಶಾಸ್ತ್ರಜ್ಞ ಮೆಕ್ ವೋರ್ಟರ್ ಇದೇ ಮಾತನ್ನು ಅನುಮೋದಿಸುತ್ತಾರೆ. ಸಂಶೋಧಕರು ಜಗತ್ತಿನ ನೂರಾರು ಭಾಷೆಗಳ ಬಗ್ಗೆ ಸಂಶೋಧನೆ ನಡೆಸಿದ ಮೇಲೆ ಎರಡು ವಾರಕ್ಕೆ ಒಂದು ಭಾಷೆ ಭೂಮಿಯಿಂದ ಅಳಿಸಿಹೋಗುತ್ತಿದೆ ಎಂಬ ನೋವಿನ ಸಂಗತಿಯನ್ನು ಹೊರಹಾಕಿದ್ದಾರೆ. ಮೆಕ್ ವೋರ್ಟರ್ ಮುಂದುವರಿದು ಹೀಗೆ ಹೇಳುತ್ತಾರೆ: ‘‘ಪೋಷಕರು ತಮ್ಮ ಮಕ್ಕಳ ಜೊತೆಗೆ ತಮ್ಮ ಮೂಲ ಭಾಷೆಗಳಲ್ಲಿ ಮಾತನಾಡದೆ ಪ್ರಬಲ ಭಾಷೆಗಳಲ್ಲಿ ಸಂವಹನ ನಡೆಸಿ ಅವರ ತಾಯಿ ಭಾಷೆಯನ್ನು ಅವರೇ ಸಾಯಿಸುತ್ತಿದ್ದಾರೆ. ಯಾವುದೇ ಒಂದು ಭಾಷೆಯನ್ನು ದಾಖಲು ಮಾಡದೆ ಒಂದು ಪೀಳಿಗೆಯಿಂದ ಮುಚ್ಚಿಟ್ಟರೆ ಸಾಕು ಅದು ಅಲ್ಲಿಗೆ ಕಣ್ಣುಮುಚ್ಚಿಕೊಳ್ಳುತ್ತದೆ. ಸಂಸ್ಕೃತಕ್ಕೂ ಇದೇ ಗತಿಯಾಗಿತ್ತು. ಹೀಗೆ ಅನೇಕ ಭಾಷೆಗಳು ಕಳೆದುಹೋಗಿ ಕೆಲವು ಭಾಷೆಗಳು ಮಾತ್ರ ಉಳಿದುಕೊಳ್ಳುತ್ತವೆ. ಆದರೆ ಮುಂದಿನ ದಿನಗಳಲ್ಲಿ ಇಂಗ್ಲಿಷ್ ಭಾಷೆ ಒಂದನೇ ಸಂಖ್ಯೆಯಲ್ಲಿ ವಿಜೃಂಭಿಸುವುದೆ?’’ ಎನ್ನುವ ಪ್ರಶ್ನೆಗೆ ಕೆಲವರು ಸಂದೇಹ ವ್ಯಕ್ತಪಡಿಸುತ್ತಾರೆ. ಆದರೆ ಕಳೆದುಹೋಗಿದ್ದು ಹೀಬ್ರೂ ಭಾಷೆಯನ್ನು ಎಲಿಯೆಜರ್ ಬೆನ್-ಯೆಹುಡಾ ಎಂಬಾತ 19ನೇ ಶತಮಾನದಲ್ಲಿ ಮರುಸ್ಥಾಪನೆ ಮಾಡಿದ.
ಇಂಗ್ಲಿಷ್ ಭಾಷೆ ಜಗತ್ತಿನ ಸಾರ್ವಭೌಮ ಭಾಷೆ ಆಗುವುದಿಲ್ಲ, ಬದಲಿಗೆ ಜಗತ್ತಿನಲ್ಲಿ ಹೆಚ್ಚು ಜನರು ಮಾತನಾಡುವ ಚೀನೀಯರ ಮ್ಯಾಂಡರಿನ್ ಭಾಷೆ ವಿಶ್ವದ ಭಾಷೆಯಾಗುತ್ತದೆ ಎನ್ನುವುದು ಕೆಲವರ ಅನಿಸಿಕೆ. ಚೀನಾ ದೇಶದ ಆರ್ಥಿಕ ಶಕ್ತಿಯೂ ಅದರ ಸಹಾಯಕ್ಕೆ ನಿಲ್ಲುತ್ತದೆ ಎಂಬುದಾಗಿ ವೋರ್ಟರ್ ಹೇಳುತ್ತಾರೆ. ಆದರೆ ಮ್ಯಾಂಡರಿನ್‌ಗಿಂತ ಮುಂಚೆಯೇ ಇಂಗ್ಲಿಷ್ ಭಾಷೆ ಜಗತ್ತನ್ನು ತೀವ್ರವಾಗಿ ಆವರಿಸಿಕೊಂಡುಬಿಟ್ಟಿದೆ. ಮುದ್ರಣ, ಶಿಕ್ಷಣ ಮತ್ತು ಮಾಧ್ಯಮಗಳ ಮೂಲಕ ಇಂಗ್ಲಿಷ್ ಎಷ್ಟು ಆಳವಾಗಿ ಬೇರೂರಿದೆಯೆಂದರೆ ಬೇರೆ ಯಾವುದೇ ಭಾಷೆ ಅದರ ಸ್ಥಾನವನ್ನು ಬದಲಾಯಿಸಲು ಸಾಧ್ಯವಿಲ್ಲ. ಮ್ಯಾಂಡರಿನ್ ಭಾಷೆಯ ಸ್ವರಗಳನ್ನು ಬಾಲ್ಯ ದಾಟಿದ ಮೇಲೆ ಯಾರೇ ಆಗಲಿ ಕಲಿಯುವುದು ಕಷ್ಟ ಮತ್ತು ಅಸಾಧ್ಯ. ಮ್ಯಾಂಡರಿನ್ ವರ್ಣಮಾಲೆಯಲ್ಲಿರುವ ಎಲ್ಲಾ ಅಕ್ಷರಗಳನ್ನು ಕಲಿಯುವುದು ಅಸಾಧ್ಯ. ಕಾರಣ ಇವು ಅಕ್ಷರಗಳಲ್ಲ ಕ್ಯಾರೆಕ್ಟರ್ಸ್ ಅಥವಾ ನಿಸರ್ಗದಲ್ಲಿರುವ ಸುಮಾರು 1,35,000 ಚಿಹ್ನೆಗಳು. ಇವುಗಳಲ್ಲಿ 1,500 ಚಿಹ್ನೆಗಳು ಗೊತ್ತಿದ್ದರೆ ಪತ್ರಿಕೆಯನ್ನು ಓದಬಹುದು, 2,600 ಚಿಹ್ನೆಗಳು ಗೊತ್ತಿದ್ದರೆ ಚೀನಿ ಭಾಷೆಯ ಪರೀಕ್ಷೆಯಲ್ಲಿ ಪಾಸಾಗಬಹುದಂತೆ. ಇಂಗ್ಲಿಷ್ ಭಾಷೆ ಹಲವಾರು ಭಾಷೆಗಳ ಸಂಯೋಜನೆಯೊಂದಿಗೆ ಗಣನೀಯವಾಗಿ ವಿಕಸನಗೊಂಡು ಬೆಳೆದುನಿಂತಿದೆ. ಚೀನಿ ಭಾಷೆಗೆ ಆ ರೀತಿಯ ಅವಕಾಶ ಬರಲಿಲ್ಲ, ಅದು ಇಂಗ್ಲಿಷ್ ಭಾಷೆಯ ಪರ್ಯಾಯ ಭಾಷೆಯಾಗಲು ಸಾಧ್ಯವೇ ಇಲ್ಲ ಎನ್ನುವುದು ಮಾತ್ರ ಗ್ಯಾರಂಟಿ.