varthabharthi


ಅನುಗಾಲ

ಅಂತರ್‌ರಾಷ್ಟ್ರೀಯವಾಗಿ ಭಾರತದ ಮಾನ ಮತ್ತು ಮಾನವಹಕ್ಕುಗಳು

ವಾರ್ತಾ ಭಾರತಿ : 24 Feb, 2022
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಭಾರತವು ತನಗೆ ತಾನು ಆರೋಪಿಸಿಕೊಂಡ ಸಹನೆ, ಸಹಾನುಭೂತಿ, ಮುಂತಾದ ಅನುಭೂತಿಗಳಿಗೆ ಹೊಂದದ ಕಾರಣಗಳಿಗಾಗಿ ವಿಶ್ವದಾದ್ಯಂತ ಸದ್ದು ಮತ್ತು ಹೆಸರು ಮಾಡುತ್ತಿದೆ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಸರ್ವೇಕ್ಷಣಾ ವರದಿಗಳು ತನ್ನ ಪರವಾಗಿದ್ದಾಗ (ಕಳೆದ 7 ವರ್ಷಗಳಲ್ಲಿ ಎಂದೂ ಟ್ರಂಪ್ ಅವರ ಹೇಳಿಕೆಯ ಹೊರತಾಗಿ ಯಾವ ಪ್ರಮುಖ ವರದಿಗಳೂ ಭಾರತದ ಪರವಾಗಿರಲಿಲ್ಲ! ಆ ಮಾತು ಬೇರೆ) ಅದನ್ನು ಕಿರೀಟದಂತೆ ಧರಿಸುವ ನಮ್ಮ ಜನನಾಯಕರು ಒಂದಿಷ್ಟು ಆಕ್ಷೇಪಗಳು ಬಂದಾಗ ಅವು ಚಿಕಿತ್ಸಕ ಇಲ್ಲವೇ ಮುನ್ನೆಚ್ಚರಿಕೆಯ ಮಾತುಗಳು ಎಂದು ತಿಳಿಯದೆ ಅವನ್ನು ಖಂಡಿಸತೊಡಗಿದ್ದಾರೆ.



ಬಾಂಗ್ಲಾ-ಪಾಕಿಸ್ತಾನ-ಅಮೆರಿಕಗಳಲ್ಲಿ ಭಾರತೀಯರಿಗೆ ಮತ್ತು ಹಿಂದೂ ಪೂಜಾಸ್ಥಾನಗಳಿಗೆ ದಾಳಿ/ಹಾನಿಯಾದಾಗ ಅವನ್ನು ಕಟುವಾಗಿ ಖಂಡಿಸಿ ನಮ್ಮ ಪ್ರಜೆಗಳಿಗೆ ಮತ್ತು ಭಾರತೀಯ ಮೂಲದ ಎಲ್ಲ ಪ್ರಜೆಗಳಿಗೆ, ಭಾರತೀಯವೆಂದು ಕರೆಸಿಕೊಳ್ಳುವ ಎಲ್ಲ ಸಾಂಸ್ಕೃತಿಕ ಧಾರ್ಮಿಕ ಕೇಂದ್ರಗಳಿಗೆ, ರಕ್ಷಣೆ ಕೊಡಬೇಕೆಂದು ಭಾರತವು ಆಯಾಯ ದೇಶಗಳನ್ನಾಳುವವರಿಗೆ ಕರೆಕೊಟ್ಟಿದೆ. ಇದು ನ್ಯಾಯವಾದದ್ದೇ. ಯಾವುದೇ ದೇಶವಿರಲಿ, ಅಲ್ಲಿನ ಬಹುಸಂಖ್ಯಾತರು ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುವುದು ಗಾಂಧಿಪ್ರಣೀತ ಸೂತ್ರವಷ್ಟೇ ಅಲ್ಲ, ವಿಶ್ವಸಂಸ್ಥೆ ಅಂಗೀಕರಿಸಿದ ಮಾನವ ಹಕ್ಕುಗಳ ಪ್ರಮೇಯವೂ ಹೌದು. ಈಚೆಗೆ ಸಿಂಗಾಪುರದ ಪ್ರಧಾನಿ ತಮ್ಮ ಸಂಸತ್ತಿನಲ್ಲಿ ಭಾಷಣಮಾಡುವಾಗ ಭಾರತದ ಕುರಿತೂ ಮಾತನಾಡಿದರು. ನೆಹರೂ ಕಾಲದ ಪ್ರಜಾಪ್ರಭುತ್ವವು ಮೋದಿ ಕಾಲದಲ್ಲಿ ಮರೆಯಾಗುತ್ತಿದೆಯೆಂದರು. ತಕ್ಷಣ ಭಾರತ ಸರಕಾರವು ಅದನ್ನು ವಿರೋಧಿಸಿ ಭಾರತದಲ್ಲಿನ ಸಿಂಗಾಪುರದ ರಾಯಭಾರಿಯನ್ನು ಕರೆಸಿಕೊಂಡು ತನ್ನ ತೀಕ್ಷ್ಣ ಪ್ರತಿಕ್ರಿಯೆಯನ್ನು ನೀಡಿತು. ತನ್ನ ಆಂತರಿಕ ವಿಚಾರಗಳಲ್ಲಿ ಇನ್ನೊಂದು ದೇಶ ಹಸ್ತಕ್ಷೇಪ ಮಾಡುವುದು ಸಲ್ಲದು ಎಂದಿತು. ‘ಗುಜರಾತ್ ಫೈಲ್ಸ್’ ಕೃತಿಯ ಮೂಲಕ ಹೆಸರುವಾಸಿಯಾದ ತೆಹಲ್ಕಾದ ಮಾಜಿ ಹಾಗೂ ಸದ್ಯ ಸ್ವತಂತ್ರ ಪತ್ರಿಕೋದ್ಯಮಿಯಾಗಿ ವಿದೇಶಿ ಪತ್ರಿಕೆಗಳ ವರದಿಗಾರ್ತಿಯಾಗಿರುವ ರಾಣಾ ಅಯ್ಯೂಬ್ ವಿರುದ್ಧ ಕೇಂದ್ರ ಸರಕಾರವು ಛೂಬಿಟ್ಟ ಜಾರಿ ನಿರ್ದೇಶನಾಲಯದ ದಾಳಿ ಮತ್ತು ಟ್ವಿಟರ್ ಮುಂತಾದ ಸಾಮಾಜಿಕ ಜಾಲತಾಣದಲ್ಲಿ ಆಕೆಯ ವಿರುದ್ಧ ಬರುತ್ತಿರುವ ವ್ಯಾಪಕ ಟೀಕೆಗಳು ಮಾತ್ರವಲ್ಲ, ಆಕೆೆ ಎದುರಿಸುತ್ತಿರುವ ಕೊಲೆ ಮತ್ತು ಅತ್ಯಾಚಾರದ ಬೆದರಿಕೆಯ ಕುರಿತು ಈಗಾಗಲೇ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಯಾಗಿದ್ದು ವಿಶ್ವಸಂಸ್ಥೆಯ ಅಧಿಕೃತ ವಕ್ತಾರರೇ ಇದು ಮಾನವ ಹಕ್ಕುಗಳಿಗೊದಗಿದ ಬೆದರಿಕೆಯೆಂದು ಹೇಳಿ ಈ ಕುರಿತು ಕ್ರಮಕೈಗೊಳ್ಳಬೇಕಾಗಿದೆಯೆಂದು ಭಾರತ ಸರಕಾರವನ್ನು ಎಚ್ಚರಿಸಿತು. ಇದನ್ನೂ ಭಾರತ ಸರಕಾರವು ಸಹಿಸದೆ ಇಲ್ಲಿ ಎಲ್ಲವೂ ಸರಿಯಿದೆ ನೀವಿದನ್ನು ಹೇಳಬೇಕಾದ್ದಿಲ್ಲವೆಂಬ ರೀತಿಯ ತಾತ್ಸಾರದ ಉತ್ತರವನ್ನು ನೀಡಿತು.

ಸ್ಕ್ವಾಡ್ ಶೃಂಗಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಭಾರತದ ವಿದೇಶಾಂಗ ಸಚಿವ ಶ್ರೀ ಜೈಶಂಕರ್ ಅವರು ಕಳೆದ 45 ವರ್ಷಗಳಲ್ಲಿ ಚೀನಾ-ಭಾರತ ದೇಶಗಳ ನಡುವೆ ಪರಿಸ್ಥಿತಿ ಇಷ್ಟು ಬಿಗಡಾಯಿಸಿರಲಿಲ್ಲವೆಂದು ಒಪ್ಪಿಕೊಂಡರು. ಭಾರತವು ತನಗೆ ತಾನು ಆರೋಪಿಸಿಕೊಂಡ ಸಹನೆ, ಸಹಾನುಭೂತಿ, ಮುಂತಾದ ಅನುಭೂತಿಗಳಿಗೆ ಹೊಂದದ ಕಾರಣಗಳಿಗಾಗಿ ವಿಶ್ವದಾದ್ಯಂತ ಸದ್ದು ಮತ್ತು ಹೆಸರು ಮಾಡುತ್ತಿದೆ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಸರ್ವೇಕ್ಷಣಾ ವರದಿಗಳು ತನ್ನ ಪರವಾಗಿದ್ದಾಗ (ಕಳೆದ 7 ವರ್ಷಗಳಲ್ಲಿ ಎಂದೂ ಟ್ರಂಪ್ ಅವರ ಹೇಳಿಕೆಯ ಹೊರತಾಗಿ ಯಾವ ಪ್ರಮುಖ ವರದಿಗಳೂ ಭಾರತದ ಪರವಾಗಿರಲಿಲ್ಲ! ಆ ಮಾತು ಬೇರೆ) ಅದನ್ನು ಕಿರೀಟದಂತೆ ಧರಿಸುವ ನಮ್ಮ ಜನನಾಯಕರು ಒಂದಿಷ್ಟು ಆಕ್ಷೇಪಗಳು ಬಂದಾಗ ಅವು ಚಿಕಿತ್ಸಕ ಇಲ್ಲವೇ ಮುನ್ನೆಚ್ಚರಿಕೆಯ ಮಾತುಗಳು ಎಂದು ತಿಳಿಯದೆ ಅವನ್ನು ಖಂಡಿಸತೊಡಗಿದ್ದಾರೆ. ಹೀಗೆ ಮಾಡುವಾಗ, ದೇಶದೊಳಗೆ ನಡೆಯುವ ವ್ಯವಹಾರವನ್ನು ಮುಚ್ಚಿಟ್ಟು ಮಾತನಾಡುತ್ತಾರೆ. ಆದರೆ ಇವೆಲ್ಲ ಪರದೆಯೊಳಗೆ ನಡೆಯುವ ನಾಟಕವಲ್ಲ. ಅವು ಸಂಭವಿಸುತ್ತಲೇ ಎಲ್ಲೆಡೆ ಪ್ರಸಾರವಾಗುತ್ತವೆ. ವಿಶ್ವಾದ್ಯಂತ ಪ್ರಚಾರವಾಗುತ್ತವೆೆ. ಅನೇಕ ರಾಷ್ಟ್ರಗಳು ಈ ಕುರಿತು ಮೌನವಾಗಿದ್ದರೆ ಅವು ಸುಮ್ಮನಿವೆಯೆಂದು ಅರ್ಥವಲ್ಲ. ಬದಲಾಗಿ ಯಾವುದೋ ಹಿತಾಸಕ್ತಿ ಅವನ್ನು ಮೌನವಾಗಿಸಿವೆಯೆಂದಷ್ಟೇ ಅರ್ಥ. ದೇಶದೊಳಗೆ ಎಷ್ಟೇ ಗೊಂದಲಗಳಿದ್ದರೂ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ವಿವಾದವಾಗದ ಸಂಗತಿಗಳು ಬೇಕಷ್ಟಿವೆ. ನಮ್ಮ ನೆರೆಯ ಮ್ಯಾನ್ಮಾರ್‌ನಲ್ಲಿ ನಡೆಯುವ ಭೀಕರ ಹತ್ಯಾಕಾಂಡವು ನಮ್ಮ ಮಾನವ ಹಕ್ಕುಗಳಿಗೆ ನಾಟುವುದಿಲ್ಲ. ಆಯಾಯ ರಾಷ್ಟ್ರಗಳು ತಮಗೆ ಬೇಕಾದಷ್ಟು ಮಾನವಹಕ್ಕುಗಳನ್ನಷ್ಟೇ ಯೋಚಿಸುತ್ತವೆ. ಕೃತಕ ಗಡಿದೇಶಗಳ ದೇಶ-ಕಾಲದ ಮಿತಿಯೊಳಗಷ್ಟೇ ನಡೆಯುವ ರಾಜಕೀಯ ಇದು. ಆದ್ದರಿಂದ ನಮ್ಮ ಬೇಳೆ ಎಲ್ಲಿ ಹೇಗೆ ಬೇಯಬೇಕೋ ಅಷ್ಟರ ಮಟ್ಟಿಗೆ ನಾವು ಪಂಚೇಂದ್ರಿಯಗಳನ್ನು ತೆರೆದಿಟ್ಟುಕೊಂಡ ಮನುಷ್ಯರು. ಉಳಿದಂತೆ ಕಿವುಡರು; ಕುರುಡರು; ದಪ್ಪಚರ್ಮದವರು. ಒಂದು ನೆನಪಿನಲ್ಲುಳಿಯುವ ಉದಾಹರಣೆ ನಮ್ಮೆದುರಿಗಿದೆ. (ಅದನ್ನು ಮರೆಸುವ ಎಲ್ಲ ಪ್ರಯತ್ನಗಳೂ ನಡೆಯುತ್ತಿವೆ.) ಭಾರತದ ಪ್ರಧಾನಿ ಅಮೆರಿಕಕ್ಕೆ ಹೋದಾಗ ಅಲ್ಲಿನ ಅಧ್ಯಕ್ಷ ಡೊನಾಲ್ಡ್‌ಟ್ರಂಪ್ ಮರುಚುನಾವಣೆಯನ್ನು ಬಯಸಿದ್ದರು. ಅವರು ಗೆಲ್ಲುತ್ತಾರೋ ಇಲ್ಲವೋ ಅದು ಅವರ ಆಂತರಿಕ ವಿಷಯವಾಗಿತ್ತು. ಆದರೆ ಭಾರತದ ಪ್ರಧಾನಿ ತಾನೊಂದು ದೇಶವನ್ನು ಪ್ರತಿನಿಧಿಸು ತ್ತಿದ್ದೇನೆಂದು ಮತ್ತು ಅಲ್ಲಿನ ಚುನಾವಣೆಯಲ್ಲಿ ತಮಗೆ ಮತವಿಲ್ಲವೆಂಬುದನ್ನು ಮರೆತು ‘‘ಅಬ್‌ಕೀ ಬಾರ್, ಟ್ರಂಪ್ ಸರಕಾರ್’’ ಎಂದು ಟ್ರಂಪ್‌ರನ್ನು ಮೆಚ್ಚಿಸುವ ಹೇಳಿಕೆಯನ್ನು ನೀಡಿದರು.

ಈ ಕುರಿತು ಭಾರತದ ಮಾಧ್ಯಮಗಳಲ್ಲಿ ದೊಡ್ಡ ಮಟ್ಟಿನ ಪ್ರಚಾರ ನಡೆಯಿತು. ಭಾರತವು ಅಮೆರಿಕದ ಚುನಾವಣೆಯನ್ನು ನಿಯಂತ್ರಿಸುವ ಮತ್ತು ವಿಶ್ವ ನಾಯಕನಾಗುವ (ನಮ್ಮ ಪದಕೋಶದಂತೆ ‘ವಿಶ್ವಗುರು’) ಹಂತಕ್ಕೆ ತಲುಪಿದೆಯೆಂದು ಹೇಳಿಕೆ ನೀಡಿದವರೂ ಇದ್ದರು. ಕೆಲವು ಮಂದಿ ಮಾತ್ರ ಖಂಡಿಸಿದರು; ಟೀಕಿಸಿದರು. ಇವರನ್ನು ‘ಢೋಂಗಿ ಜಾತ್ಯತೀತರು’ ಇಲ್ಲವೇ ‘ಅರ್ಬನ್ ನಕ್ಸಲೀಯರು’ ಎಂದು ದೂರ(ವಿಡ)ಲಾಯಿತು. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಕಾನೂನುಗಳಿವೆ; ಆದರೆ ಅವು ನೀತಿಸಂಹಿತೆಗಳಂತೆ ಮಾತ್ರ ಚಲಾವಣೆಯಲ್ಲಿವೆ. ಅವುಗಳನ್ನು ಉಲ್ಲಂಘಿಸಿ ದಕ್ಕಿಸಿಕೊಳ್ಳಲು ದೊಡ್ಡ ಮತ್ತು ಶಕ್ತ ರಾಷ್ಟ್ರಗಳಿಗಷ್ಟೇ ಸಾಧ್ಯ. ವಿಶ್ವಸಂಸ್ಥೆಯೆಂಬ ಒಂದು ಜಾಗತಿಕ ವೇದಿಕೆಯಿದ್ದರೂ ಅದು ಜಗತ್ತಿನ ರಾಜಕೀಯಕ್ಕೆ ಹಿರಿಯಣ್ಣನಾಗಲಿಲ್ಲ. ಏಕೆಂದರೆ ಅದನ್ನು ನಿಯಂತ್ರಿಸುವ ಅದಕ್ಕಿಂತ ಶಕ್ತ ರಾಷ್ಟ್ರಗಳಿವೆ. ಹೀಗಾಗಿ ಅಮೆರಿಕ, ಚೀನಾದಂತಹ ರಾಷ್ಟ್ರಗಳು ಏನೇ ಮಾಡಿದರೂ ಅವನ್ನು ನಿಯಂತ್ರಿಸಲು ವಿಶ್ವಸಂಸ್ಥೆಯ ವೇದಿಕೆಗೆ ಸಾಧ್ಯವಾಗಿಲ್ಲ. ಕಳೆದ ಕೆಲವು ದಶಕಗಳ ಇತಿಹಾಸವನ್ನು ಗಮನಿಸಿದರೆ ಆಯಾಯ ರಾಷ್ಟ್ರಗಳಲ್ಲಿ ನಡೆಯುವ, ಹಿಂಸೆ, ವಂಚನೆ, ನರಮೇಧ ಇವುಗಳನ್ನು ವಿಶ್ವಸಂಸ್ಥೆಯು ನಿಯಂತ್ರಿಸಲು ವಿಫಲವಾಗಿದೆ. ಶಕ್ತರಾಷ್ಟ್ರಗಳು ಏನೇ ಮಾಡಿದರೂ ಅವನ್ನು ನಿಯಮದೊಳಕ್ಕೆ ತಂದು ಅನುಮೋದಿಸುವ ಪರಿಪಾಠ ಬೆಳೆದುಬಂದಿದೆ. ಹೀಗಾಗಿ ಇರಾಕ್, ಲಿಬಿಯಾ, ಅಫ್ಘಾನಿಸ್ತಾನ ಮಾತ್ರವಲ್ಲ ಚೀನಾ, ಉತ್ತರ ಕೊರಿಯಾ, ಮ್ಯಾನ್ಮಾರ್‌ಗಳಂತಹ ರಾಷ್ಟ್ರಗಳಲ್ಲೂ ದಬ್ಬಾಳಿಕೆ, ದೌರ್ಜನ್ಯ, ಶೋಷಣೆ ನಡೆದರೂ ಅಮೆರಿಕ ಮತ್ತದರ ಮಿತ್ರ ರಾಷ್ಟ್ರಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ದಾಳಿಮಾಡಿ ‘ಶಾಂತಿ’ಯನ್ನು ಸ್ಥಾಪಿಸಿವೆ.

ಶಾಂತಿಗಾಗಿ ನಡೆದ, ನಡೆಯುವ ಈ ಯುದ್ಧಗಳು ಅಲ್ಲಿನ ಸ್ಥಿತಿಗಳನ್ನು ಇನ್ನಷ್ಟು ಶೋಚನೀಯವಾಗಿಸಿವೆ ಮತ್ತು ಅವುಗಳ ಬಗ್ಗೆ ಯಾರೂ ಚಕಾರವೆತ್ತದಂತೆ ಜಾಗರೂಕವಾಗಿ ವ್ಯವಹರಿಸಿವೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂಬ ಸೂತ್ರದಲ್ಲಿ ಒಳಗಿದ್ದ ಮುಳ್ಳನ್ನು ತೆಗೆದು ಅಲ್ಲಿ ಹೊಸ ಮತ್ತು ಹೊರಗಿನ ಮುಳ್ಳನ್ನು ಊರುವ ಈ ವಿದ್ಯಮಾನವು ಹೊಸ ಜಾಗತಿಕ ರಾಜಕೀಯವಾಗಿದೆ. ನಮ್ಮ ರಾಜ್ಯ, ರಾಷ್ಟ್ರಮಟ್ಟದಲ್ಲಿ ಒಂದು ರೀತಿಯ ರಾಜಕೀಯ ಜಗಳಗಳಿವೆ. ಎದುರಾಳಿಯನ್ನು ಬಗ್ಗುಬಡಿಯಬೇಕಾದರೆ ‘‘ನೀವು ಮಾಡಿದ ವಂಚನೆ ನನಗೆ ಗೊತ್ತಿದೆ, ನನ್ನ ಸುದ್ದಿಗೇನಾದರೂ ನೀವು ಬಂದರೆ ಅವುಗಳನ್ನು ಬಯಲಿಗೆಳೆಯುತ್ತೇನೆ’’ ಎಂದು ಬೆದರಿಕೆ ಹಾಕುವುದನ್ನು ದಿನನಿತ್ಯವೆಂಬಂತೆ ಮಾಧ್ಯಮಗಳಲ್ಲಿ ಓದುತ್ತೇವೆ. ಹಾಗೆ ಹೇಳಿದ ತಕ್ಷಣ ಎದುರಾಳಿ ವಂಚಕ (ಹೌದಾದರೆ) ಸುಮ್ಮನಿರುತ್ತಾನೆ. ಈ ವಂಚನೆ ಯಾವುದು, ಯಾರು ನಡೆಸಿದರು, ಈ ರಾಜಕಾರಣಿಗಳ ಗೋಪ್ಯ ಸುದ್ದಿಗಳೇನು ಇವು ನಮ್ಮ ಪೊಲೀಸರಿಗಾಗಲೀ, ಸರಕಾರದ ಇತರ ಇಲಾಖೆಗಳಿಗಾಗಲೀ ಶೋಧಿಸಬೇಕಾದ, ತನಿಖೆ ನಡೆಸಬೇಕಾದ ವಿಚಾರವೆಂದು ಅನ್ನಿಸುವುದೇ ಇಲ್ಲ. ಕಾಲಕೋಶದಲ್ಲಿ ಇವೆಲ್ಲ ಹರಪ್ಪ ಮೊಹೆಂಜೋದಾರೋಗಳಷ್ಟೇ ಗತವಾಗುತ್ತವೆ. ಇದು ದೇಶ-ರಾಜ್ಯಗಳ ರಾಜಕೀಯವಾದರೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಇದರ ಆಕಾರ ಇನ್ನೂ ದೊಡ್ಡದು. ನಮ್ಮ ಪ್ರತಿಷ್ಠೆಯೋ ಇನ್ನೇನೋ ಅನುಕೂಲವೋ ಮುನ್ನೆಲೆಗೆ ಬಂದು ಅಲ್ಲಿ ನಡೆಯುವ ಇತರ ಎಲ್ಲ ಕರಾಳ ವಿದ್ಯಮಾನಗಳೂ ಗೌಣವಾಗುತ್ತವೆ. ಈಚೆಗೆ ಭಾರತದ ಒಕ್ಕೂಟ ಆಯ-ವ್ಯಯಪತ್ರದಲ್ಲಿ ತಾಲಿಬಾನ್ ಸರಕಾರಕ್ಕೆ ರೂ. 200 ಕೋಟಿ ಅನುದಾನದ ವ್ಯವಸ್ಥೆ ಮಾಡಲಾಯಿತು.

ಮಾನವೀಯ ನೆಲೆಯಲ್ಲಿ 50 ಸಾವಿರ ಮೆಟ್ರಿಕ್ ಟನ್ ಗೋಧಿಯನ್ನು ಸರಬರಾಜು ಮಾಡಲಾಯಿತು. ತಾಲಿಬಾನ್ ಹೇಗೆ ಆಡಳಿತಮಾಡುತ್ತದೆಯೆಂಬುದಕ್ಕೆ ವಿವರಣೆಯಾಗಲೀ ಉದಾಹರಣೆಯಾಗಲೀ ಬೇಕಿಲ್ಲ. ಭಾರತವೂ ಸೇರಿದಂತೆ ಯಾರೇ ನೀಡುವ ಸಹಾಯವು ಅಲ್ಲಿ ಮಾನವಹಕ್ಕುಗಳ ದಮನಕ್ಕೆ ಇನ್ನಷ್ಟು ಶಕ್ತಿಯನ್ನೊದಗಿಸುತ್ತದೆ. ಇದನ್ನು ಸಮರ್ಥಿಸುವ ಭಾರತ ಸರಕಾರವು ಪಾಕಿಸ್ತಾನಕ್ಕೆ ಚೀನಾ ನೀಡುವ ಸಹಾಯವನ್ನು ಖಂಡಿಸುತ್ತದೆ. ಉತ್ತರ ಕೊರಿಯಾಕ್ಕೆ ಚೀನಾ ನೀಡುವ ಬೆಂಬಲವನ್ನು ಭಾರತವು ಟೀಕಿಸುತ್ತದೆ; ಆದರೆ ರಶ್ಯ ನೀಡುವ ಬೆಂಬಲದ ಕುರಿತು ಮೌನವಾಗುತ್ತದೆ. ಏಕೆಂದರೆ ರಶ್ಯ ಜಾಗತಿಕವಾಗಿ ನಮಗೆ ಬೆಂಬಲ ನೀಡದಿದ್ದರೂ ಶಸ್ತ್ರಾಸ್ತ್ರಗಳ ವ್ಯಾಪಾರ ನಡೆಸುತ್ತದೆ. ಇವಿಷ್ಟೇ ಅಲ್ಲ, ಸದ್ಯ ಉಕ್ರೇನಿನ ವಿರುದ್ಧ ರಶ್ಯ ಇನ್ನೇನು ನಡೆಸಲಿರುವ ದಾಳಿಯ ಕುರಿತು ಭಾರತ ಮೌನವಾಗಿದೆ. ಅಮೆರಿಕವು ರಶ್ಯದ ಈ ಕಾರ್ಯವನ್ನು ಅತ್ಯುಗ್ರವಾಗಿ ಖಂಡಿಸಿದೆ ಮಾತ್ರವಲ್ಲ, ಯುದ್ಧ ನಡೆದಲ್ಲಿ ಉಕ್ರೇನಿಗೆ ಬೆಂಬಲ ನೀಡುವುದನ್ನು ಸ್ಪಷ್ಟಪಡಿಸಿದೆ. ಕೆನಡಾ ಈಗಾಗಲೇ ರಶ್ಯದ ವಿರುದ್ಧ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಿದೆ. ಭಾರತವು ತನ್ನ ನಿಲುವನ್ನು ಸ್ಪಷ್ಟವಾಗಿ ಹೇಳುವುದರ ಬದಲಾಗಿ ಈ ವಿವಾದವನ್ನು ಮಾತುಕತೆಯ ಮೂಲಕ ಅಹಿಂಸಾತ್ಮಕವಾಗಿ ಬಗೆಹರಿಸಿಕೊಳ್ಳಬೇಕು ಎಂದು ಅರಳಿಕಟ್ಟೆಯ ಪ್ರವಚನವನ್ನಾಡಿದೆ. ತಮಾಷೆಯೆಂದರೆ ಈ ನುಣುಚಿಕೊಳ್ಳುವ ಅಭಿಪ್ರಾಯವನ್ನು ರಶ್ಯವು ಶ್ಲಾಘಿಸಿದೆ. ಭಾರತ ಖಚಿತ ನಿಲುವು ತಾಳಬೇಕಾದರೆ ಪ್ರಾಯಃ ಬುಷ್ ಹೇಳಿದಂತೆ ಒಂದೋ ನಮ್ಮ ಪರ, ಇಲ್ಲವೇ ನಮ್ಮ ವಿರೋಧ ಎಂಬ ಸ್ಥಿತಿ ಬರಬೇಕೇನೋ?

ಇದನ್ನು ಆಯಾಯ ರಾಷ್ಟ್ರಗಳು ಅಂತರ್‌ರಾಷ್ಟ್ರೀಯ ರಾಜನೀತಿಯೆಂಬ ಹೆಸರಿನಲ್ಲಿ ಸಮರ್ಥಿಸಿಕೊಳ್ಳುತ್ತವೆ. ಆದರೆ ಯಾವುದೋ ಒಂದು ಹಂತದಲ್ಲಿ ಯಾವುದೇ ರಾಷ್ಟ್ರವು ನಿರ್ಣಾಯಕ ಪಾತ್ರವನ್ನು ವಹಿಸಲೇಬೇಕಲ್ಲವೇ? ಆದರೆ ಅಂತಹ ಅನಿವಾರ್ಯವನ್ನು ಮುಂದೂಡಿಕೊಂಡು ಹೋಗುವುದಷ್ಟೇ ಇಂದಿನ ಅಂತರ್‌ರಾಷ್ಟ್ರೀಯ ರಾಜಕಾರಣ. ಉಕ್ರೇನಿನ ವಿರುದ್ಧ ರಶ್ಯವು ದಾಳಿ ನಡೆಸಿತಾದರೆ ಭಾರತ ಏನು ಮಾಡುತ್ತದೆ ಎಂಬುದು ಭಾರತೀಯರಾದ ನಮಗಿರಲಿ, ಭಾರತ ಸರಕಾರವನ್ನು ನಡೆಸುವ ಮಂದಿಗೂ ಗೊತ್ತಿದೆಯೇ ಇಲ್ಲವೇ ಎಂಬ ಸಂಶಯ ತಾಳಬೇಕಾಗುತ್ತದೆ. ಹೀಗೆ ಕೆಲವೊಮ್ಮೆ ಅಂತರ್‌ರಾಷ್ಟ್ರೀಯ ವಿದ್ಯಮಾನಗಳೂ ರಾಷ್ಟ್ರೀಯ ರಹಸ್ಯಗಳಾಗುತ್ತವೆ!

ನಮ್ಮ ಕಾಲದಲ್ಲಿ ನಮ್ಮ ವೈಭವವನ್ನು ಎಲ್ಲರೂ ಹೇಳುತ್ತಾರೆಂದರೆ ಅದು ನಮ್ಮ ಆಳ್ವಿಕೆಯಿರುವ ತನಕ. ಭಾರತದಲ್ಲಿ ಬ್ರಿಟಿಷ್ ಚಕ್ರವರ್ತಿಯ ಸಿಂಹಾಸನಾರೋಹಣವನ್ನು ವರ್ಷವರ್ಷ ವೈಭವೀಕರಿಸಲಾಗುತ್ತಿತ್ತು. ಇದು ಅವರ ಶ್ರೇಷ್ಠತೆಯ ಕುರುಹೆಂದು ಹೇಳುವುದಕ್ಕಿಂತಲೂ ಅವರ ಆಳ್ವಿಕೆಯಡಿ ಅಧೀನರು ನಡೆಸಲೇಬೇಕಾದ ಅನಿವಾರ್ಯ ಆಚರಣೆಯೆಂದು ತಿಳಿಯಬೇಕು. ನಮ್ಮ ಕಾಲದಲ್ಲಿ ನಮ್ಮನ್ನು ಹೇಗೆ ಹೇಳುತ್ತಾರೆಂಬುದು ಮುಖ್ಯವಲ್ಲ; ನಮ್ಮ ಕಾಲಾನಂತರ ನಮ್ಮನ್ನು ಸಮಾಜವು ಹೇಗೆ ಸ್ವೀಕರಿಸುತ್ತದೆಯೆಂಬುದು ಮುಖ್ಯ. ಹಾಗೆಯೇ ನಮ್ಮ ದೇಶದೊಳಗಡೆ ನಮ್ಮ ನಾಯಕರು ಹೇಗೆ ಸ್ವೀಕಾರಾರ್ಹರೆಂಬುದು ಮುಖ್ಯವಲ್ಲ; ಬದಲಿಗೆ ದೇಶದ ಹೊರಗೆ ಒಬ್ಬ ವ್ಯಕ್ತಿ ಹೇಗೆ ಸ್ವೀಕಾರಾರ್ಹನೆಂಬುದು ಮುಖ್ಯ. ನೆಹರೂಕಾಲವನ್ನು ಸಿಂಗಾಪುರದ ಪ್ರಧಾನಿ ಶ್ಲಾಘಿಸಿದ್ದರೆ ಅದು ನೆಹರೂ ಕುರಿತ ಒಂದು ಮಹತ್ವದ ಹೇಳಿಕೆಯಾಗಿದೆ. ತನ್ನ ಕಾಲವನ್ನೂ ಮೀರಿ ನೆಹರೂ ಹೇಗೆ ಅಲಿಪ್ತ ಚಳವಳಿಯು ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಪ್ರಸ್ತುತವಾಗಲು ಸಹಾಯವಾದರು ಎಂಬುದೇ ಈ ಅಭಿವ್ಯಕ್ತಿಯ ಸಂಕೇತ. ಸೋವಿಯೆತ್ ಒಕ್ಕೂಟವು ಗೊರ್ಬಚೇವ್ ಕಾಲದಲ್ಲಿ ಪ್ರತ್ಯೇಕವಾದದ್ದು ಅವರ ವೈಫಲ್ಯವೆನಿಸುವುದಿಲ್ಲ. ಟಿಟೊ ಅವರ ಯುಗೋಸ್ಲಾವಿಯಾ ಈಗ ಎಲ್ಲಿದೆ? 2ನೇ ಮಹಾಯುದ್ಧದಲ್ಲಿ ಹೋಳಾದ ಜರ್ಮನಿಯು ಮುಂದೆ ಒಂದಾಯಿತು. ಇವೆಲ್ಲ ಕಾಲದ ವಿದ್ಯಮಾನ. ನೆಹರೂ ಚೀನಾದ ವಿರುದ್ಧದ ಯುದ್ಧದಲ್ಲಿ ನಮ್ಮ ದೇಶದ ಒಂದಷ್ಟು ನೆಲವನ್ನು ಕಳೆದುಕೊಂಡರು ಎಂಬ ವೈಫಲ್ಯವು ಅವರ ವ್ಯಕ್ತಿತ್ವವನ್ನು ಅಂತರ್‌ರಾಷ್ಟ್ರೀಯವಾಗಿ ಕುಗ್ಗಿಸುವುದಿಲ್ಲ. ಆದ್ದರಿಂದ ನೆಹರೂ ಅವರನ್ನು ಟೀಕಿಸುವಾಗ ಅವರನ್ನು ಸುದೀರ್ಘ ಆಡಳಿತದ ಮೊದಲ ಪ್ರಧಾನಿಯೆಂದು ನೆನಪಿಸಿಕೊಂಡು ಮಾತನಾಡುವುದು ನಮಗೂ ಗೌರವ; ದೇಶಕ್ಕೂ ಗೌರವ. ಹಾಗೆಯೇ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಮಾತನಾಡುವಾಗ ನಮ್ಮ ಮತ್ತು ದೇಶದೊಳಗಿನ ಲಘುಮಾತುಗಳನ್ನು ಅವರೂ ಕೇಳಿರುತ್ತಾರೆ ಎಂಬುದನ್ನು ಅರಿತುಕೊಳ್ಳುವುದು ಒಳ್ಳೆಯದು. ರಾಣಾ ಅಯ್ಯೂಬ್‌ಗೆ ನೀಡಬೇಕಾದ ರಕ್ಷಣೆ ಮತ್ತು ಗೌರವವು ಭಾರತದ ಮಾನವನ್ನೂ ಮಾನವಹಕ್ಕುಗಳ ಮಾಪನವನ್ನೂ ಹೆಚ್ಚಿಸೀತು. ಚೀನಾದೊಂದಿಗಿನ ಸಂಬಂಧದಲ್ಲಿ ಆ್ಯಪ್‌ಗಳನ್ನು ನಿಷೇಧಿಸುವುದಕ್ಕಿಂತ ನಮ್ಮ ಸುಳ್ಳುಗಳನ್ನು, ಬೂಟಾಟಿಕೆಗಳನ್ನು ಬದಿಗಿಟ್ಟು ಪ್ರಾಮಾಣಿಕ, ನೈಜ ರಾಜತಾಂತ್ರಿಕತೆಯಲ್ಲಿ ತೊಡಗಿದರೆ ಚಾಣಕ್ಯನಿಗೆ ಗೌರವ ಬಂದೀತು. ಜಗತ್ತಿನಲ್ಲಿ ಉಳಿದವರು ಆಳಿದವರಲ್ಲ ಎಂಬುದನ್ನೂ ನೆನಪಿಟ್ಟುಕೊಳ್ಳಬಹುದು. ಸಿದ್ಧಾರ್ಥನಿಗಿಂತ ಬುದ್ಧ ಮುಖ್ಯವಾಗುವುದು ಹೀಗೆ. ಶಿವಾಜಿಯ ಕಾಲದಲ್ಲಿ ರಾಮತೀರ್ಥರಿದ್ದದ್ದಲ್ಲ. ರಾಮತೀರ್ಥರ ಕಾಲದಲ್ಲಿ ಶಿವಾಜಿ ಬದುಕಿದ್ದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)