ಉಕ್ರೇನ್ ನಲ್ಲಿ ಸಿಲುಕಿದ ಉಡುಪಿ ಜಿಲ್ಲೆಯ ಮೂವರು ವೈದ್ಯಕೀಯ ವಿದ್ಯಾರ್ಥಿಗಳು
ರೋಹನ್
ಉಡುಪಿ, ಫೆ.24: ರಶ್ಯ ಹಾಗೂ ಉಕ್ರೇನಿನ ನಡುವೆ ಉಲ್ಬಣಿಸುತ್ತಿರುವ ಯುದ್ಧದ ವಾತಾವರಣದಿಂದ ಉಡುಪಿ ಜಿಲ್ಲೆಗೂ ಆತಂಕದ ಛಾಯೆ ಆವರಿಸುವಂತಾಗಿದೆ. ಉಡುಪಿ ಜಿಲ್ಲೆಯ ಮೂವರು ವಿದ್ಯಾರ್ಥಿಗಳು ಉಕ್ರೇನಿನ ಅತ್ಯಂತ ಪುರಾತನ ವೈದ್ಯಕೀಯ ಕಾಲೇಜೊಂದರಲ್ಲಿ ಕಲಿಯುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಅವರೆಲ್ಲರೂ ಸುರಕ್ಷಿತವಾಗಿರುವ ಬಗ್ಗೆ ಮನೆಯವರಿಗೆ ಮಾಹಿತಿ ಬಂದಿದೆ.
ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಿರಿಯ ವಿಜ್ಞಾನಿಯಾಗಿರುವ ಡಾ.ಧನಂಜಯ ಅವರ ಪುತ್ರ ರೋಹನ್ ಉಕ್ರೇನ್ನ ಕಾರ್ಕೀವ್ನಲ್ಲಿರುವ ನೇಷನಲ್ ಮೆಡಿಕಲ್ ಯುನಿರ್ವಸಿಟಿಯಲ್ಲಿ ಐದನೇ ಹಾಗೂ ಅಂತಿಮ ವರ್ಷದ ಎಂಬಿಬಿಎಸ್ ಕಲಿಯುತಿದ್ದಾರೆ. ಮುಂದಿನ ಮೇ ತಿಂಗಳ ವೇಳೆ ಅವರ ಕೋರ್ಸ್ ಮುಗಿಯಲಿತ್ತು. ಇವರೊಂದಿಗೆ ಕಾರ್ಕಳ ಹಾಗೂ ಹಿರಿಯಡ್ಕ ಮೂಲದ ಪುಣೆಯ ಇಬ್ಬರು ಸಹ ಇದೇ ಮೆಡಿಕಲ್ ಕಾಲೇಜಿನಲ್ಲಿ ಕಲಿಯುತಿದ್ದಾರೆ ಎಂದು ತಿಳಿದುಬಂದಿದೆ.
ರೋಹನ್ ಅವರಿಗೆ ಉಕ್ರೇರಿನಲ್ಲಿ ನಿಜವಾಗಿಯೂ ಯುದ್ಧ ಪ್ರಾರಂಭಗೊಂಡ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎನ್ನಲಾಗಿದೆ. ಪ್ರತಿದಿನ ಮನೆಗೆ ದೂರವಾಣಿ ಕರೆ ಮಾಡುವ ವೇಳೆ ಇಲ್ಲಿಂದ ಅವರಿಗೆ ಈ ಬಗ್ಗೆ ಸುಳಿವು ಸಿಕ್ಕಿತೆನ್ನಲಾಗಿದೆ. ನಿನ್ನೆಯವರೆಗೆ ಅವರಿಗೆ ಆಫ್ಲೈನ್ ಕ್ಲಾಸ್ಗಳು ನಡೆದಿದ್ದು, ನಿನ್ನೆ ಮತ್ತು ಇಂದು ಆನ್ಲೈನ್ ಕ್ಲಾಸ್ ನಡೆಯಿತೆನ್ನಲಾಗಿದೆ.
ಕಾರ್ಕೀವ್ನಲ್ಲೂ ಯುದ್ಧ ನಡೆಯುತ್ತಿರುವ ಬಗ್ಗೆ ಮಾಹಿತಿ ಇದ್ದು, ವಿದ್ಯಾರ್ಥಿಗಳೆಲ್ಲರೂ ಅಲ್ಲಿನ ಬಂಕರ್ಗಳಲ್ಲಿ ಸುರಕ್ಷಿತವಾಗಿದ್ದಾರೆ ಎಂದು ಅವರು ಮನೆಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಯುದ್ಧ ಸಾಧ್ಯತೆಯ ಮಾಹಿತಿ ಸಿಕ್ಕಿದಾಗ ರೋಹನ್ ತಾಯ್ನಾಡಿಗೆ ಮರಳಲು ವಿಮಾನ ಟಿಕೇಟ್ ಬುಕ್ ಮಾಡಿದ್ದು, ಮಾ.8ಕ್ಕೆ ಅವರ ಟಿಕೇಟ್ ಬುಕ್ ಆಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಇದೀಗ ರೋಹನ್ ಹಾಗೂ ಅವರ ಕುಟುಂಬ ಆತಂಕದಲ್ಲಿ ಕ್ಷಣಗಳನ್ನು ಕಳೆಯುತಿದ್ದಾರೆ.
ಕಾರ್ಕೀವ್ನ ನ್ಯಾಷನಲ್ ಮೆಡಿಕಲ್ ಯುನಿರ್ವಸಿಟಿ 1805ರಲ್ಲಿ ಸ್ಥಾಪನೆಗೊಂಡು 200 ವರ್ಷಗಳನ್ನು ಪೂರ್ಣಗೊಳಿಸಿದ ಕಾಲೇಜ್ ಆಗಿದೆ. ಇಲ್ಲಿ 10,000ಕ್ಕೂ ಅಧಿಕ ವಿದ್ಯಾರ್ಥಿಗಳು ಕಲಿಯುತಿದ್ದು, 700ಕ್ಕೂ ಅಧಿಕ ಪ್ರಾಧ್ಯಾಪಕರು ಕಲಿಸುತಿದ್ದಾರೆ. ವಿಶ್ವದ ಅತ್ಯಂತ ಪುರಾತನ ವೈದ್ಯಕೀಯ ಕಾಲೇಜುಗಳಲ್ಲಿ ಇದೂ ಒಂದಾಗಿದೆ.