ರಶ್ಯ-ಉಕ್ರೇನ್ ಯುದ್ಧಕ್ಕೆ ಯಾರು ಜವಾಬ್ದಾರಿ?
ಉಕ್ರೇನ್ ಮೇಲೆ ರಶ್ಯ ನಡೆಸುತ್ತಿರುವ ದಾಳಿಯನ್ನು ರೋಮಾಂಚಕಾರಿ ಇತ್ಯಾದಿಯಾಗಿ, ಇದೊಂದು ವೀಡಿಯೊ ವಾರ್ ಗೇಮ್ ಎಂಬಂತೆ ಚಪ್ಪರಿಸುತ್ತಿರುವ ಕನ್ನಡ ಮಾಧ್ಯಮಗಳಂತೆಯೇ, ಮೂರನೇ ಮಹಾಯುದ್ಧದ ಕಿಡಿ ಹಚ್ಚಬಹುದಾದ ಈ ದುಸ್ಸಾಹಸವನ್ನು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಇದೇ ರೀತಿ ಭಾವಿಸಿದ್ದಾರೆಯೇ? ಅಥವಾ ಇದರಲ್ಲಿ ಬೇರೆ ಪ್ರಶ್ನೆಗಳೂ ಇವೆಯೇ? ಇದಕ್ಕೆ ಹೊಣೆ ಯಾರು?
ವಿಸ್ತಾರದಲ್ಲಿ ಯುರೋಪಿನ ಎರಡನೇ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಉಕ್ರೇನ್ ಮೇಲೆ, ಯುರೋಪ್ ಮತ್ತು ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ದೇಶವಾದ ರಶ್ಯ ಎಲ್ಲಾ ಅಂತರ್ರಾಷ್ಟ್ರೀಯ ಕಾನೂನುಗಳನ್ನು ಮುರಿದು, ನ್ಯಾಟೋದಂತಹ ಭಾರೀ ಆರ್ಥಿಕ ಮತ್ತು ಮಿಲಿಟರಿ ಶಕ್ತಿಕೂಟದ ಎಚ್ಚರಿಕೆಯನ್ನು ಕಡೆಗಣಿಸಿ, ಬಹುವಿಧಗಳ ಆಕ್ರಮಣವನ್ನು ನಡೆಸಿದೆ. ಒಂದು ಕಾಲದಲ್ಲಿ ಸೋವಿಯತ್ ಒಕ್ಕೂಟದ ಭಾಗವಾಗಿ ಪರಮಾಣು ಅಸ್ತ್ರಗಳನ್ನು ಹೊಂದಿದ್ದ ಗಣರಾಜ್ಯವಾಗಿದ್ದ ಉಕ್ರೇನ್, ಇಂದು ರಶ್ಯದ ದೈತ್ಯ ಮಿಲಿಟರಿ ಶಕ್ತಿಯ ಎದುರು ಅಸಹಾಯಕವಾಗಿ ಕಾಣುತ್ತಿದೆ. ಆದುದರಿಂದ, ಬೇರೆ ಪ್ರಬಲ ರಾಷ್ಟ್ರಗಳ ನೇರ ಬೆಂಬಲದ ಹೊರತು, ಈ ಯುದ್ಧದ ಫಲಿತಾಂಶ ಗೋಡೆಬರಹದಷ್ಟೇ ಸ್ಪಷ್ಟವಾಗಿದೆ. ಎಷ್ಟೇ ಸಾಹಸಿಕವಾಗಿ ಪ್ರತಿಹೋರಾಟ ನಡೆಸಿದರೂ, ಅಂತಿಮ ಸೋಲು ಉಕ್ರೇನಿಗೆ ಕಟ್ಟಿಟ್ಟ ಬುತ್ತಿಯಾಗಿದೆ. ಭಾರೀ ಸಾವುನೋವುಗಳು ಮತ್ತು ಬಹುಕಾಲದ ಮಾನವೀಯ ಬಿಕ್ಕಟ್ಟಿಗೆ ಈಗಾಗಲೇ ಮುನ್ನುಡಿ ಬರೆಯಲಾಗಿದೆ. ಎಷ್ಟೇ ಎಚ್ಚರ ವಹಿಸಿದರೂ, ಸರಣಿ ಕ್ರಿಯೆ ಮತ್ತು ಪ್ರತಿಕ್ರಿಯೆಗಳ ಕಾರಣದಿಂದ ನ್ಯಾಟೋ ಮತ್ತು ಯು.ಕೆ., ಜಪಾನ್, ಆಸ್ಟ್ರೇಲಿಯ ಸೇರಿದಂತೆ ಹಲವಾರು ದೇಶಗಳನ್ನು ತನ್ನ ಸುಳಿಗೆ ಸೆಳೆದುಕೊಳ್ಳಬಹುದಾದ ಮೂರನೇ ಮಹಾಯುದ್ಧದ ಚಂಡಮಾರುತದ ಕಣ್ಣು ಇಲ್ಲಿದೆ. ಇದಕ್ಕೆ ಹೊಣೆ ಯಾರು?
ಈ ವಿಷಯಕ್ಕೆ ಬರುವ ಮೊದಲು, ಇದನ್ನು ಬರೆಯುವ ಹೊತ್ತಿಗೆ ನೆಲದ ವಸ್ತುಸ್ಥಿತಿ ಹೇಗಿತ್ತು ಎಂಬುದನ್ನು ತುಂಬಾ ಚುಟುಕಾಗಿ ನೋಡೋಣ. ಈ ಆಕ್ರಮಣದ ಕುರಿತು ಯುಎಸ್ಎ ಮುನ್ನೆಚ್ಚರಿಕೆ ನೀಡಿದ್ದರೂ, ನಿಜವಾಗಿಯೂ, ಸ್ವತ ಉಕ್ರೇನ್ ಸೇರಿದಂತೆ ಯಾರೂ ಈ ರೀತಿಯ ಹಠಾತ್ ಆಕ್ರಮಣ ನಡೆಯುವುದು ಎಂದು ಊಹಿಸಿರಲಿಲ್ಲ. ಇದೀಗ ರಶ್ಯವು ಪೂರ್ವದ ತನ್ನ ನೆಲದಿಂದ, ಉತ್ತರದಲ್ಲಿ ತನ್ನ ಕೈಗೊಂಬೆ ಸರ್ವಾಧಿಕಾರಿ ಅಲೆಕ್ಸಾಂಡರ್ ಲುಕಶೆಂಕೋ ಸರಕಾರವಿರುವ ಬೆಲಾರೂಸ್ನಿಂದ (ಉಕ್ರೇನ್ ರಾಜಧಾನಿ ಕಿಯೇವ್ ಅದರ ಗಡಿಗೆ ತೀರಾ ಹತ್ತಿರ) ಮತ್ತು ದಕ್ಷಿಣದಲ್ಲಿ ತಾನು ಬಲವಂತವಾಗಿ ಕಿತ್ತುಕೊಂಡಿರುವ ಕ್ರೈಮಿಯಾ ಮತ್ತು ಕಪ್ಪು ಸಮುದ್ರದಿಂದ ನೆಲ, ವಾಯು ಮತ್ತು ನೌಕಾದಾಳಿ ನಡೆಸುತ್ತಿದೆ. ದೂರಕ್ಕೆ ಅನುಗುಣವಾಗಿ ಅದು ಉಕ್ರೇನಿನೊಳಗೆ ರಾಜಧಾನಿ ಕಿಯೇವ್, ಎರಡನೇ ದೊಡ್ಡ ನಗರ ಕಾರ್ಕಿಯೇವ್, ಬಂದರು ಪಟ್ಟಣ ಒಡೆಸ್ಸಾ ಸೇರಿದಂತೆ ಇಡೀ ದೇಶದಲ್ಲಿ 14ಕ್ಕೂ ಹೆಚ್ಚಿನ ನಗರಗಳ ಮೇಲೆ ಶೆಲ್, ಕ್ಷಿಪಣಿ ಮತ್ತು ನೇರ ವಿಮಾನ ದಾಳಿಯನ್ನು ನಡೆಸಿ, ಈಗಾಗಲೇ ನೂರಾರು ಉಕ್ರೇನಿ ಸೈನಿಕರು ಮತ್ತು ನಾಗರಿಕರ ಸಾವಿಗೆ ಕಾರಣವಾಗಿದೆ.
ಯುದ್ಧ ಟ್ಯಾಂಕ್ಗಳ ಸಹಿತ ಸೈನಿಕರು ಮೊದಲಿಗೆ ಬಂಡುಕೋರ ಪ್ರಾಂತಗಳಾದ ದೊನ್ಬಾಸ್ ಪ್ರದೇಶದ ಡೊನೆಟ್ಸ್ಕ್ ಮತ್ತು ಲುಹಾನ್ಸ್ ಪ್ರವೇಶಿಸಿ, ಈಗ ಲೈನ್ ಆಫ್ ಕಾಂಟ್ಯಾಕ್ಟ್ ಎಂದು ಕರೆಯಲಾಗುವ ಗಡಿಯನ್ನು ದಾಟುತ್ತಿವೆ. ನಿಜವಾದ ಭೂಸೇನಾ ಕದನ ಇನ್ನಷ್ಟೇ ಆರಂಭವಾಗಬೇಕಾಗಿದೆ. ಉಕ್ರೇನ್ ನಾಗರಿಕರು ಒಂದೋ ನಗರಗಳನ್ನು ಬಿಟ್ಟು ಹಳ್ಳಿಗಾಡುಗಳತ್ತ ಪಲಾಯನದ ಪ್ರಯತ್ನ ಮಾಡುತ್ತಿದ್ದಾರೆ ಮತ್ತು ಕೆಲವರು ಮಕ್ಕಳ ಸಹಿತ ಬಾಂಬ್ ನಿರೋಧಕ ಆಶ್ರಯತಾಣಗಳಲ್ಲಿ ಕಿಕ್ಕಿರಿದು ತುಂಬಿದ್ದಾರೆ. ಅಣುರಿಯಾಕ್ಟರ್ ದುರಂತದಿಂದ ಕುಖ್ಯಾತವಾಗಿದ್ದ ಉಕ್ರೇನಿನ ಚೆರ್ನೋಬಿಲ್ ಈಗ ರಶ್ಯನ್ ಸೈನಿಕರ ವಶದಲ್ಲಿದ್ದು, ಅಲ್ಲಿನ ವಿಕಿರಣ ಹರಡದಂತೆ ತಡೆಯುತ್ತಿರುವ ತಂತ್ರಜ್ಞರನ್ನು ರಶ್ಯದ ಸೈನಿಕರು ಒತ್ತೆಸೆರೆ ಹಿಡಿದಿದ್ದಾರೆ ಎಂಬ ಸುದ್ದಿ ಬಂದಿದೆ.
ಒಂದು ಕಡೆಯಲ್ಲಿ ಉಕ್ರೇನ್ ಅಧ್ಯಕ್ಷ ವೊಲಾದಿಮಿರ್ ಝೆಲೆನ್ಸ್ಕಿ ಅಸಹಾಯಕ ಸ್ಥಿತಿಯಲ್ಲಿ ಬೇರೆಬೇರೆ ದೇಶಗಳ ನೆರವಿಗಾಗಿ ಯಾಚಿಸುತ್ತಲೇ, ಪ್ರತಿಹೋರಾಟದ ಮಾತುಗಳನ್ನು ಆಡುತ್ತಿದ್ದಾರೆ. ತಾನು ಮತ್ತು ತನ್ನ ಕುಟುಂಬ, ರಶ್ಯದ ಮೊದಲ ಗುರಿ ಎಂದೂ ಅವರು ಹೇಳಿದ್ದಾರೆ. ಇನ್ನೊಂದು ಕಡೆಯಲ್ಲಿ ವಿಶ್ವಸಂಸ್ಥೆಯು ಈ ಅಪ್ರಚೋದಿತ ದಾಳಿಯನ್ನು ಕಟುವಾಗಿ ಖಂಡಿಸಿದೆ. ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರವಾದ ಭಾರತದ ನಿಲುವು ಡೋಲಾಯಮಾನವಾಗಿದೆ. ಸದ್ಯಕ್ಕೆ ಇದನ್ನು ಅನಿರ್ಧಾರ ಎನ್ನಬಹುದು.
ನಾಟಕೀಯವಾದ ರಾಜತಾಂತ್ರಿಕ ಪರಿಭಾಷೆಯನ್ನು ಸದ್ಯಕ್ಕೆ ಬದಿಗಿಡೋಣ. ಯುಎಸ್ಎ, ಯುಕೆ, ಐರೋಪ್ಯ ಒಕ್ಕೂಟ, ಜಪಾನ್, ಆಸ್ಟ್ರೇಲಿಯ ಮುಂತಾದ ದೇಶಗಳು ಕಟುವಾದ ಶಬ್ದಗಳಲ್ಲಿ ರಶ್ಯವನ್ನು ಖಂಡಿಸಿ, ಸೂಕ್ತ ಪ್ರತೀಕಾರದ ಹೇಳಿಕೆಗಳನ್ನು ನೀಡಿವೆ. ಯುಎಸ್ಎ ಮತ್ತು ಪರಸ್ಪರರ ರಕ್ಷಣೆಗೆ ಬದ್ಧವಾದ ನ್ಯಾಟೋ ಮಿಲಿಟರಿ ಕೂಟವೂ ಈ ಹೇಳಿಕೆಯನ್ನೇ ಪ್ರತಿಧ್ವನಿಸಿದೆ. ಆದರೆ, ಎಲ್ಲಾ ರೀತಿಯಲ್ಲೂ ಉಕ್ರೇನಿನ ಬೆಂಬಲಕ್ಕೆ ನಿಂತರೂ, ನ್ಯಾಟೋ ಸದಸ್ಯನಲ್ಲದ ಉಕ್ರೇನಿನಲ್ಲಿ ನೇರ ಮಿಲಿಟರಿ ಕಾರ್ಯಾಚರಣೆಯ ಯಾವುದೇ ಸಾಧ್ಯತೆಯಿಲ್ಲ. ಈ ದೇಶಗಳು, ರಶ್ಯದ ಬ್ಯಾಂಕುಗಳು, ಶ್ರೀಮಂತ ವ್ಯಕ್ತಿಗಳನ್ನು ಒಳಗೊಂಡಂತೆ ಹಲವಾರು ಆರ್ಥಿಕ ದಿಗ್ಬಂಧನಗಳನ್ನು ಹೇರಿವೆ. ಇವು ಎರಡಲಗಿನ ಕತ್ತಿಯಾಗಿದ್ದು, ಎರಡೂ ಕಡೆ ಗಳನ್ನು ಬಾಧಿಸುವಂತಹದ್ದಾಗಿದ್ದು, ಇದು ರಶ್ಯದ ಮೇಲೆ ಪರಿಣಾಮ ಬೀರಬಹುದೆ? ಸದ್ಯಕ್ಕೆ ಇಡೀ ವಿದ್ಯಮಾನದ ಪರಿಣಾಮ ಭಾರತ ಸೇರಿದಂತೆ ಎಲ್ಲೆಡೆ ಶೇರು ಮತ್ತು ತೈಲ ಮಾರುಕಟ್ಟೆಯಲ್ಲಿ ಕಂಡುಬರುತ್ತಿದೆ. ರಶ್ಯದ ಶೇರುಗಳು 45 ಶೇಕಡಾದಷ್ಟು ಕುಸಿದಿವೆ. ಇದು ಚುಟುಕಾಗಿ ವಸ್ತುಸ್ಥಿತಿ.
ಈ ಬಹುದೊಡ್ಡ ಮಾನವೀಯ ಬಿಕ್ಕಟ್ಟಿಗೆ ಹೊಣೆಗಾರರು ಯಾರು? ಈ ಬಿಕ್ಕಟ್ಟಿನ ಎರಡೂ ಕಡೆ ನಿಂತಿರುವ ದೇಶಗಳ ಜೊತೆ ಭಾರೀ ಪ್ರಮಾಣದ ಆರ್ಥಿಕ, ವಾಣಿಜ್ಯ ಮತ್ತು ರಕ್ಷಣಾ ಹಿತಾಸಕ್ತಿಗಳನ್ನು ಹೊಂದಿರುವ ಭಾರತದಲ್ಲಿ ಕುಳಿತು ಇದನ್ನು ನಿರ್ಧರಿಸುವುದು ಕಷ್ಟ. ಆದರೂ, ಎರಡು ಶತಮಾನಗಳ ಇತಿಹಾಸದಲ್ಲಿ ನಡೆದ ಬಹುತೇಕ ಎಲ್ಲಾ ಯುದ್ಧಗಳಲ್ಲಿ ನೇರ ಅಥವಾ ಹಿಂಬಾಗಿಲಿನ ಕೈವಾಡ ಹೊಂದಿರುವ ಯುಎಸ್ಎಯ ಮೂಗು ತೂರಿಸುವ, ಬಂಡವಾಳ ವಿಸ್ತರಣೆಯ ಇತಿಹಾಸವನ್ನು ವಿರೋಧಿಸುತ್ತಾ ಬಂದಿರುವವರಿಗೂ ಈ ಬಾರಿ ಅದನ್ನು ಒಂಟಿಯಾಗಿ ಹೊಣೆ ಮಾಡುವುದು ಕಷ್ಟ. ಆದರೂ, ಇಲ್ಲಿನ ಎಡ ಪಂಥೀಯರು ರಶ್ಯವನ್ನು ಸಮರ್ಥಿಸುವ ಪ್ರಯತ್ನ ಮಾಡುತ್ತಿರುವುದು ಕಾಣುತ್ತಿದೆ. ರಶ್ಯ ಈಗ ಹಿಂದಿನ ಕಮ್ಯುನಿಸ್ಟ್ ಸೋವಿಯತ್ ಒಕ್ಕೂಟ ವಲ್ಲ; ಅದು ಈಗ ಮಾಫಿಯಾ ಪ್ರಭಾವವಿರುವ ಬಂಡವಾಳಶಾಹಿ ದೇಶ; ಪುಟಿನ್ ವಿರೋಧಿಗಳನ್ನು ಕೊಲ್ಲಲು ಯತ್ನಿಸುವ, ಜೈಲಿಗೆ ತಳ್ಳುವ ಮತ್ತು ತನ್ನನ್ನು ಜೀವನವಿಡೀ ಅಧ್ಯಕ್ಷ ಎಂದು ಘೋಷಿಕೊಂಡ ಒಬ್ಬ ಸರ್ವಾಧಿಕಾರಿ ಎಂಬುದನ್ನು ಅವರು ಮರೆತಂತಿದೆ. ಈ ಹಳೆಯ ಕನವರಿಕೆಗಳನ್ನು ಮರೆತು ಕೆಳಗಿನ ಕೆಲವು ವಿಷಯಗಳನ್ನು ಗಮನಿಸಿದಾಗ, ರಶ್ಯದ ಕೆಲವು ವಾದಗಳಲ್ಲಿಯೂ ಹುರುಳಿದೆ ಎಂದು ಗಮನಿಸಬೇಕು. ಜೊತೆಗೆ ಉಕ್ರೇನ್ ಒಂದು ಅಸಹಾಯಕ ವಂಚಿತ ದೇಶವಾಗಿಯೂ ಕಂಡುಬರುವುದು.
1991ರಲ್ಲಿ ಸೋವಿಯತ್ ಒಕ್ಕೂಟವು ವಿಘಟನೆ ಗೊಂಡಾಗ ಅದರಲ್ಲಿದ್ದ ಗಣರಾಜ್ಯಗಳೆಲ್ಲಾ ಸ್ವತಂತ್ರವಾದವು. ಅವುಗಳಲ್ಲಿ ದೊಡ್ಡ ದೇಶವಾದ ಉಕ್ರೇನ್ ಒಂದು. ಈ ಹೊಸ ದೇಶಗಳ ಗಡಿ ವಿವಾದಗಳು ಕಾಲಾಂತರದಲ್ಲಿ ಹಾಗೋ ಹೀಗೋ ಶಮನವಾದರೂ, ಉಕ್ರೇನಿನ ಪೂರ್ವ ಗಡಿ ಸೇರಿದಂತೆ ಕೆಲವು ಉಳಿದುಕೊಂಡಿದ್ದವು. ಈ ರೀತಿ ವಿಭಜನೆಯಾದಾಗ ಸೋವಿಯತ್ ಒಕ್ಕೂಟದ ಮೂರನೇ ಒಂದು ಪರಮಾಣು ಅಸ್ತ್ರಗಳು ಉಕ್ರೇನ್ ಪಾಲಿಗೆ ಬಂದಿದ್ದವು. ಅವೀಗ ಉಕ್ರೇನ್ ಕೈಯಲ್ಲಿ ಇರುತ್ತಿದ್ದರೆ, ಪುಟಿನ್ ಬೀದಿಗೂಂಡಾಗಳಂತೆ ಎಲ್ಲರನ್ನೂ ಧಿಕ್ಕರಿಸಿ, ಸಮಾಧಾನದ ಮಾತುಗಳನ್ನು ಕಡೆಗಣಿಸಿ ಅದನ್ನು ಈ ರೀತಿ ನಡೆಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆದರೆ, 1994ರ ಬುಡಾಪೆಸ್ಟ್ ಒಪ್ಪಂದದಂತೆ ಅದು ಎಲ್ಲಾ ಪರಮಾಣು ಅಸ್ತ್ರಗಳನ್ನು ನಾಶಪಡಿಸಿ ವಿಶ್ವಶಾಂತಿಗೆ ದೊಡ್ಡ ಕೊಡುಗೆ ನೀಡಿತ್ತು. ಈ ಒಪ್ಪಂದದಂತೆ ರಶ್ಯ, ಯುಎಸ್ಎ, ಯುಕೆ ಜತೆಯಾಗಿ ಉಕ್ರೇನಿನ ರಕ್ಷಣೆಯ ಭರವಸೆ ನೀಡಿದ್ದವು. ನಂತರ ಚೀನಾ ಮತ್ತು ಫ್ರಾನ್ಸ್ ಕೂಡಾ ಇಂತಹ ಭರವಸೆ ನೀಡಿದ್ದು, ಇದೀಗ ರಶ್ಯವೇ ಅದರ ಮೇಲೆ ದಾಳಿ ಮಾಡಿ, ಇತರ ದೇಶಗಳು ತಮ್ಮ ಭರವಸೆಯಲ್ಲಿ ವಿಫಲರಾಗಿರುವುದು ಇತಿಹಾಸದ ಮಹಾವಂಚನೆಗಳಲ್ಲಿ ಒಂದು.
ನ್ಯಾಟೋ ಎಂಬುದು ಮೂಲತಃ ಶೀತಲ ಸಮರ ಕಾಲದಲ್ಲಿ ಸೋವಿಯತ್ ಒಕ್ಕೂಟದ ಜೊತೆಗೆ ಪೋಲೆಂಡ್, ಹಂಗೇರಿ, ಬಲ್ಗೇರಿಯಾ ಮುಂತಾದ ಎಲ್ಲಾ ಪೂರ್ವ ಯುರೋಪ್ ದೇಶಗಳ ವಾರ್ಸಾ ಪ್ಯಾಕ್ಟ್ ಮಿಲಿಟರಿ ಒಪ್ಪಂದಕ್ಕೆ ಪ್ರತಿಯಾದ ಒಕ್ಕೂಟವಾಗಿತ್ತು. ಶೀತಲ ಸಮರ ಕೊನೆಗೊಂಡು, ಸೋವಿಯತ್ ಒಕ್ಕೂಟ ಒಡೆದು ರಶ್ಯ ಒಂಟಿಯಾದ ಬಳಿಕ ನ್ಯಾಟೋದ ಅಗತ್ಯವಿರಲಿಲ್ಲ. ಆದರೆ, ಹೊಸದಾಗಿ ಉದಯಿಸಿದ ರಶ್ಯದ ದೌರ್ಬಲ್ಯವನ್ನು ಬಂಡವಾಳ ಮಾಡಿಕೊಂಡು ಲಾತ್ವಿಯಾ, ಜಾರ್ಜಿಯಾ ಇತ್ಯಾದಿ ಹಿಂದಿನ ಸೋವಿಯತ್ ದೇಶಗಳೂ ಸೇರಿದಂತೆ ಹೊಸ 13 ದೇಶಗಳಿಗೆ ನ್ಯಾಟೋ ವಿಸ್ತರಿಸಿತು. ಆ ದೇಶಗಳ ಚುನಾಯಿತ ಸರಕಾರಗಳ ಇಚ್ಛೆಯಂತೆ ಇದು ನಡೆದಿದೆ ಎಂದು ಯುಎಸ್ಎ ಹೇಳಿಕೊಂಡರೂ, ಇದೂ ಒಂದು ಮೋಸ. ಈ ಸಿಟ್ಟು ರಶ್ಯಕ್ಕೆ ಇದ್ದುದು ಸಹಜವಾಗಿದೆ.
ನಡುವೆ ಹೆಚ್ಚುವರಿಯಾಗಿ (ಬಫರ್) ಇದ್ದುದು ಉಕ್ರೇನ್ ಮತ್ತು ಬೆಲಾರೂಸ್ ಮಾತ್ರ. ಅವೂ 2003ರಲ್ಲಿಯೇ ನ್ಯಾಟೋ ಸದಸ್ಯತ್ವ ಕೋರಿದಾಗ, ನ್ಯಾಟೋ ತನ್ನ ಮನೆಯಂಗಳದ ಅಂಚಿನಲ್ಲೇ ನಿಲ್ಲುವ ಭದ್ರತಾ ಅಪಾಯಕ್ಕೆ ಒಳಗಾದುದೂ ಸಹಜವೇ ಆಗಿದೆ. ಆದರೆ, ಅಲ್ಲಿ ಕೈಗೊಂಬೆ ಸರಕಾರಗಳ ಸ್ಥಾಪನೆಯಾದಾಗ ಅದರ ಆತಂಕ ದೂರವಾಗಿತ್ತು. ಆದರೆ, ಉಕ್ರೇನ್ನಲ್ಲಿ ಆರೆಂಜ್ ಅಪ್ರೈಸಿಂಗ್ ಎಂಬ ಜನಪ್ರಿಯ ಬಂಡಾಯ ನಡೆದು ಹೊಸ ಸರಕಾರ ಬಂದು, ಅದು ಮತ್ತೆ ನ್ಯಾಟೋ ಸೇರಲು ಹೊರಟಾಗ ರಶ್ಯದ ಆತಂಕ ತಾರಕಕ್ಕೇರಿತು. ಆಗಲೇ ಅದು ಪೂರ್ವ ಉಕ್ರೇನಿನ ದೊನ್ಬಾಸ್ ಪ್ರದೇಶದ ರಶ್ಯನ್ ಭಾಷಿಕರು ಹೆಚ್ಚಾಗಿರುವ ಎರಡು ಪ್ರಾಂತಗಳು ಮತ್ತು ಕಪ್ಪು ಸಮುದ್ರಕ್ಕೆ ಉಕ್ರೇನಿನ ಅರ್ಧ ಸಂಪರ್ಕ ತಪ್ಪಿಸುವ ಕ್ರೈಮಿಯಾದಲ್ಲಿ ಬಂಡುಕೋರರನ್ನು ಎಬ್ಬಿಸಿತು. 2014ರಲ್ಲಿ ಇಲ್ಲಿ ಯುದ್ಧವೇ ನಡೆದು ಕ್ರೈಮಿಯಾವನ್ನು ವಶಕ್ಕೆ ತೆಗೆದುಕೊಂಡಿತು. ನಂತರದ ಮಿನ್ಸ್ಕ್ ಒಪ್ಪಂದದ ಪ್ರಕಾರ ಪೂರ್ವದ ಎರಡು ಪ್ರಾಂತಗಳು ಸ್ವಾಯತ್ತತೆ ಪಡೆದು ಅಲ್ಲಿ ರಶ್ಯ ಬೆಂಬಲಿತ ಬಂಡುಕೋರರ ಆಡಳಿತವಿದೆ.
ಕೊನೆಗೂ ಪುಟಿನ್ಗೆ ಬೇಕಾಗಿದ್ದುದು ನ್ಯಾಟೋ ವಿಸ್ತರಣೆ ನಿಲ್ಲಿಸುವುದು ಮತ್ತು ನಡುವೆ ಒಂದು ಬಫರ್ ಜೋನ್. ಅದಕ್ಕಾಗಿಯೇ ಆತ ಒತ್ತಡ ಹೇರಲು ಸೇನಾ ಅಭ್ಯಾಸದ ನೆಪದಲ್ಲಿ ಉಕ್ರೇನ್ ಗಡಿಯಲ್ಲಿ ಸೇನಾ ಜಮಾವಣೆ ಮಾಡಿದ್ದು, ಅತ್ಯಂತ ಪ್ರಚೋದನಕಾರಿಯಾದ ಪರಮಾಣು ಅಸ್ತ್ರ ಪ್ರಯೋಗದ ಅಭ್ಯಾಸ ನಡೆಸಿದ್ದು. ಈಗಲೂ ಆತನ ಗುರಿ, ಉಕ್ರೇನಿನ ಮಿಲಿಟರಿಯನ್ನು ಇಲ್ಲವಾಗಿಸಿ ಕೈಗೊಂಬೆ ಸರಕಾರವನ್ನು ಸ್ಥಾಪಿಸುವುದು. ಇದನ್ನು ಆತ ಈಗ ಬಹಿರಂಗವಾಗಿಯೇ ಹೇಳಿದ್ದಾರೆ ಮತ್ತು ಸದ್ಯದ ದಾಳಿಗಳ ವಿನ್ಯಾಸದಿಂದ ಗೊತ್ತಾಗುತ್ತದೆ.
ಇಲ್ಲಿಯ ತನಕ, ರಶ್ಯದ ಆತಂಕವನ್ನೂ, ಕೃತ್ಯಗಳನ್ನು ಸಮರ್ಥಿಸಲು ಸಾಧ್ಯವಿತ್ತು. ತಾಳ್ಮೆಯಿಂದ ವರ್ತಿಸಿದ್ದರೆ ಒಂದು ಸೌಹಾರ್ದ ಪರಿಹಾರವೂ ಸಾಧ್ಯ ಇತ್ತು. ಆದರೆ, ಯಾವಾಗ ಮಿನ್ಸ್ಕ್ ಒಪ್ಪಂದ ಮತ್ತು ಅಂತರ್ರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘಿಸಿ ಉಕ್ರೇನಿನ ಎರಡು ಪ್ರಾಂತಗಳನ್ನು ದೇಶಗಳೆಂದು ಮಾನ್ಯತೆ ನೀಡಿದರೋ ವಿಶ್ವಸಂಸ್ಥೆ, ಜಗತ್ತಿನ ಬಹುತೇಕ ರಾಷ್ಟ್ರಗಳ ಸಮಾಧಾನದ ಮಾತುಗಳನ್ನು ಧಿಕ್ಕರಿಸಿ ಯುದ್ಧ ಆರಂಭಿಸಿದರೋ ಅಂದಿಗೆ ಎಲ್ಲಾ ಸಮರ್ಥನೆಗಳು ಮಣ್ಣುಪಾಲಾದಂತೆ. ಇದೀಗ ಇದು ಉಕ್ರೇನ್ ಮೇಲಿನ ದಾಳಿಯ ಪ್ರಶ್ನೆಯಾಗಿ ಉಳಿದಿಲ್ಲ. ಬೆಳೆಯುತ್ತಿರುವ ಪ್ರಜಾಪ್ರಭುತ್ವ ಮಾತ್ರವಲ್ಲ; ವಿಶ್ವದ ದೊಡ್ಡ ದೇಶಗಳಲ್ಲಿ ಒಂದರ ಮೇಲೆ ಪ್ರಬಲ ರಾಷ್ಟವೊಂದು ಎಗ್ಗಿಲ್ಲದೇ ದಾಳಿ ಮಾಡಬಹುದಾದರೆ, ಚಿಕ್ಕಪುಟ್ಟ ದೇಶಗಳ ಪಾಡೇನು ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿದೆ. ಇಡೀ ನಾಗರಿಕ ಜಾಗತಿಕ ವ್ಯವಸ್ಥೆಗೇ ಒಡ್ಡಿದ ಅಪಾಯವಿದು. ಇಡೀ ಜಗತ್ತನ್ನೇ ಜಾಗತಿಕ ಯುದ್ಧ ಮತ್ತು ವಿನಾಶದ ಅಪಾಯಕ್ಕೆ ಒಡ್ಡಿರುವ ಈ ದುಸ್ಸಾಹಸಕ್ಕೆ ಸದ್ಯಕ್ಕೆ ಪುಟಿನ್ ಒಬ್ಬರೇ ಹೊಣೆಯಾಗುತ್ತಾರೆ. ವಿಪರ್ಯಾಸವೆಂದರೆ, ಆತ ತನ್ನ ಉದ್ದೇಶಕ್ಕೆ ವ್ಯತಿರಿಕ್ತವಾಗಿ ತನ್ನ ದೇಶವನ್ನೂ ಇಡೀ ಪ್ರಪಂಚವನ್ನೂ ಇನ್ನಷ್ಟು ಅಭದ್ರತೆ ಮತ್ತು ಅಪಾಯಕ್ಕೆ ತಳ್ಳಿರುವುದು!