ಬಿಜೆಪಿಯ ಮುಂದಿರುವ ಅಯೋಧ್ಯೆಯ ಅಗ್ನಿಕುಂಡ!
ಉತ್ತರಪ್ರದೇಶ ಚುನಾವಣೆ-5
ದೇವಾಲಯಗಳ ನಗರ ಎಂಬ ಖ್ಯಾತಿಯ ಅಯೋಧ್ಯೆ 1991ಕ್ಕಿಂತ ಮೊದಲು ಗತವೈಭವವನ್ನು ನೆನಪು ಮಾಡಿಕೊಡುತ್ತಿದ್ದ ಪಾಳುಬಿದ್ದ ಪಟ್ಟಣವಾಗಿತ್ತು ಬಾಬರಿ ಮಸೀದಿ ಧ್ವಂಸದ ನಂತರದ ದಿನಗಳಲ್ಲಿ ಇದ್ದಕ್ಕಿದ್ದ ಹಾಗೆ ಹೆಚ್ಚಿದ ಯಾತ್ರಾರ್ಥಿಗಳ ಆಗಮನದಿಂದಾಗಿ ಊರುತುಂಬಾ ಅಂಗಡಿಮುಂಗಟ್ಟುಗಳು ಬೆಳೆದು ಬಹಳಷ್ಟು ಕುಟುಂಬಗಳಿಗೆ ಬದುಕಿಗೊಂದು ದಾರಿಯಾಯಿತು. ಇದೀಗ ರಾಮಮಂದಿರ ನಿರ್ಮಾಣದ ಹೆಸರಲ್ಲಿ ಪಟ್ಟಣದ ನವೀಕರಣ ಕಾಮಗಾರಿ ನಡೆಯುತ್ತಿದೆ. ಅಲ್ಲಿನ ಪ್ರಮುಖ ರಸ್ತೆಗಳ ಅಗಲೀಕರಣ ಭರದಿಂದ ಸಾಗಿದ್ದು ಇದಕ್ಕಾಗಿ ನೂರಾರು ಅಂಗಡಿಗಳನ್ನು ತೆರವುಗೊಳಿಸಲಾಗುತ್ತಿದೆ. ಇದರಿಂದಾಗಿ ಒಂದು ಕಾಲದಲ್ಲಿ ಬಿಜೆಪಿ ಅಭ್ಯರ್ಥಿಗಳ ಪ್ರಚಾರಕರಂತೆ ವರ್ತಿಸುತ್ತಿದ್ದ ವರ್ತಕರು ಬಿಜೆಪಿಯನ್ನೇ ಶಪಿಸತೊಡಗಿರುವುದು ಈ ಪಟ್ಟಣದ ಹೊಸ ಬೆಳವಣಿಗೆ.
► 2002
2002ರ ಉತ್ತರಪ್ರದೇಶದ ವಿಧಾನಸಭಾ ಚುನಾವಣಾ ಸಮೀಕ್ಷೆಗೆ ಹೋಗಿದ್ದ ನಾನು ಮೊದಲ ಬಾರಿ ಅಯೋಧ್ಯೆಯ ಕರಸೇವಕಪುರಕ್ಕೆ ಭೇಟಿ ನೀಡಿದ್ದೆ. ಅದೂ ಫೆಬ್ರವರಿ ತಿಂಗಳ ಒಂದು ಅಹ್ಲಾದಕರ ಮುಸ್ಸಂಜೆ. ಮನಸ್ಸಿನೊಳಗೆ ಕುದಿಯುತ್ತಿದ್ದ ಆಕ್ರೋಶವನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿರುವವರಂತೆ ಕರಸೇವಕಪುರದ ಕಚೇರಿಯಲ್ಲಿ ಪಕ್ಕದ ಸರಯೂ ನದಿಯ ಮೇಲಿನಿಂದ ಬೀಸಿ ಬರುತ್ತಿದ್ದ ತಂಗಾಳಿಗೆ ಮುಖವೊಡ್ಡಿ ಕೂತಿದ್ದರು ವಿಶ್ವಹಿಂದೂ ಪರಿಷತ್ ನ ಆಗಿನ ಅಧ್ಯಕ್ಷ ಅಶೋಕ್ ಸಿಂಘಾಲ್.
ರಾಮಜನ್ಮ ಭೂಮಿಯ ಚಳವಳಿಯ ಬಗ್ಗೆ ಮಾತನಾಡುತ್ತಾ ‘‘ಮೈತ್ರಿಕೂಟದ ಸರಕಾರದಲ್ಲಿರಲು ವಾಜಪೇಯಿ ಮತ್ತು ಅಡ್ವಾಣಿಯವರಾದರೂ ಏನು ಮಾಡಲು ಸಾಧ್ಯ? ಪಾಪ ಅವರೂ ಅಸಹಾಯಕರಲ್ಲವೇ? ಎಂದು ಸಿಂಘಾಲ್ ಅವರನ್ನು ಕೆಣಕಿದ್ದೆ. ‘‘ ಅಟಲ ಬಿಹಾರಿ ವಾಜಪೇಯಿ ಕುಳಿತಿರುವ ಸ್ಥಾನ ರಾಮಜನ್ಮಭೂಮಿ ಚಳವಳಿಯ ಕೊಡುಗೆ. ಆ ಋಣ ತೀರಿಸುವ ಜವಾಬ್ದಾರಿ ಅವರ ಮೇಲಿದೆ. ರಾಜೀವ್ ಗಾಂಧಿ ಕಾಲದಲ್ಲಿ ರಾಮಮಂದಿರಕ್ಕೆ ಶಿಲಾನ್ಯಾಸ ನಡೆಯಿತು. ಪಿ.ವಿ.ನರಸಿಂಹರಾವ್ ಕಾಲದಲ್ಲಿ ವಿವಾದಾತ್ಮಕ ಕಟ್ಟಡವನ್ನು (ಬಾಬರಿ ಮಸೀದಿ) ಕೆಡವಿಹಾಕಲಾಯಿತು. ಈಗ ವಾಜಪೇಯಿಯವರ ಕಾಲದಲ್ಲಿ ರಾಮಮಂದಿರ ನಿರ್ಮಾಣ ಮಾಡಬೇಕು’’ ಎಂದು ನನ್ನನ್ನೆ ದುರುಗುಟ್ಟಿ ನೋಡಿದ್ದರು, ನಾನು ಬಿಜೆಪಿ ನಾಯಕರ ಅಭಿಮಾನಿ ಇರಬಹುದೆಂಬ ಶಂಕೆಯಿಂದ.
► 2004
2004 ಲೋಕಸಭಾ ಚುನಾವಣೆಯ ಕಾಲದಲ್ಲಿ ಪ್ರಚಾರಕ್ಕೆಂದು ಲಾಲ್ ಕೃಷ್ಣ ಅಡ್ವಾಣಿ ಅಯೋಧ್ಯೆಗೆ ಹೋಗಿದ್ದರು. ರಾಮಜನ್ಮಭೂಮಿ ಚಳವಳಿಯ ನಾಯಕನನ್ನು ಎದುರುಗೊಳ್ಳಲು ಭಾರೀ ಜನಸ್ತೋಮ ಸೇರಬಹುದೆಂಬ ನಿರೀಕ್ಷೆಯಿಂದ ಪತ್ರಕರ್ತರೆಲ್ಲರೂ ಹೋದರೆ ಅಲ್ಲಿದ್ದದ್ದು ಖಾಲಿ ಕುರ್ಚಿಗಳು. ರಾಮಜನ್ಮಭೂಮಿ ಚಳವಳಿಯ ಉಗ್ರ ನಾಯಕ ವಿನಯ ಕಟಿಯಾರ್ ಅಯೋಧ್ಯೆ ವಿಧಾನಸಭಾ ಕ್ಷೇತ್ರವನ್ನೊಳಗೊಂಡ ಫೈಝಾಬಾದ್ ಕ್ಷೇತ್ರದಿಂದ ಮೂರುಬಾರಿ ಗೆದ್ದವರು. 2004ರ ಲೋಕಸಭಾ ಚುನಾವಣೆಯಲ್ಲಿ ಆ ಕ್ಷೇತ್ರದಲ್ಲಿ ನಿಲ್ಲುವ ಧೈರ್ಯ ಸಾಲದೆ ಪಕ್ಕದ ಲಖೀಂ ಪುರಕ್ಕೆ ಓಡಿ ಹೋಗಿದ್ದರು. ಅಡ್ವಾಣಿ ಬರಲಿದ್ದಾರೆ ಎಂಬ ಸುದ್ದಿ ಕೇಳಿ ಅಲ್ಲಿನ ಪ್ರಮುಖ ಮಹಂತರೆಲ್ಲಾ ಕುಂಭಮೇಳದ ನೆಪದಲ್ಲಿ ಯಾತ್ರೆ ಹೋಗಿದ್ದರು. ಅಡ್ವಾಣಿ ಭಾಷಣ ಕೇಳಿ ಚಡಪಡಿಸುತ್ತಿದ್ದುದನ್ನು ಕಂಡು ಮಾತನಾಡಿಸಿದರೆ ‘‘ ಉಳಿದೆಲ್ಲ ಕಡೆ ಭಾರತ ಬೆಳಗುತ್ತಿದೆ ಎಂದು ಹೇಳುತ್ತಾ ಬಂದ ಅಡ್ವಾಣಿಯವರಿಗೆ ರಾಮಜನ್ಮ ಭೂಮಿಯನ್ನು ನೆನಪು ಮಾಡಿಕೊಳ್ಳಲು ಅಯೋಧ್ಯೆಗೆ ಬರಬೇಕಾಯಿತೇ?’’ ಎಂದು ಗೋಪಾಲ್ ದಾಸ್ ಎಂಬ ಹೆಸರಿನ ಮಹಂತ ನನ್ನನ್ನು ಪ್ರಶ್ನಿಸಿದ್ದ.
► 2007
ಅಯೋಧ್ಯೆ ಎಂದಾಗೆಲ್ಲ ರಾಮ ಮಂದಿರದ ಪೋಟೊಗಳನ್ನಿಟ್ಟುಕೊಂಡು ಬೆನ್ನಹಿಂದೆ ಓಡೋಡಿ ಬರುತ್ತಿದ್ದ ಬಡಕಲು ಶರೀರದ, ಹರಕಲು ಅಂಗಿಚಡ್ಡಿಯ ಬಾಲಕ ದೇವೇಂದ್ರ ನೆನಪಾಗುತ್ತಾನೆ. 2007ರ ವಿಧಾನಸಭಾ ಚುನಾವಣೆಯ ಸಮೀಕ್ಷೆಗೆಂದು ಹೋಗಿದ್ದಾಗ ಅಯೋಧ್ಯೆಯ ವಿಶೇಷ ಭದ್ರತಾ ಪಡೆಯ ಸುಪರ್ದಿಯಲ್ಲಿದ್ದ ರಾಮಲಲ್ಲಾ ದರ್ಶನ ಮಾಡಿಕೊಂಡು ಹೊರಬರುತ್ತಿದ್ದ ನನ್ನ ಬೆನ್ನುಹತ್ತಿದ ಬೇತಾಳನಂತೆ ದೇವೇಂದ್ರ ಕಾಡತೊಡಗಿದ್ದ.
ಅವನನ್ನು ಅಸಹನೆಯಿಂದಲೇ ಪಕ್ಕಕ್ಕೆ ಸರಿಸಿ ಮುಂದೆಹೋಗುತ್ತಿದ್ದಂತೆಯೇ ಆತನ ಕೀರಲು ದನಿಯ ಕಿರುಚಾಟದ ಕೊನೆಯ ವಾಕ್ಯ ಅಸ್ಪಷ್ಟವಾಗಿ ಕೇಳಿ ಕಿವಿ ನಿಮಿರಿತ್ತು. ಅವನನ್ನು ಹತ್ತಿರ ಕರೆದು ಆಗಷ್ಟೆ ಹೇಳಿ ಮುಗಿಸಿದ್ದ ವಾಕ್ಯವನ್ನು ಪುನರುಚ್ಚರಿಸುವಂತೆ ಹೇಳಿದೆ. ಆಜ್‌ಕಲ್ ಯೇ ದಂದಾ ನಹೀಂ ಚಲ್ ರಹಾ ಹೈ ಸಾಬ್, ಏಕ್ ಪೋಟೊ ಖರೀದಿಯೇ’’ ಎಂದ ಬಾಲಕ ಗಿರಾಕಿ ಸಿಕ್ಕ ಖುಷಿಯಲ್ಲಿ ತನ್ನ ವ್ಯಾಪಾರದ ಕಷ್ಟ ಹೇಳಿಕೊಳ್ಳುತ್ತಿದ್ದಾನೋ? ಇಲ್ಲವೇ ವಿಧಾನಸಭಾ ಚುನಾವಣೆಯ ಫಲಿತಾಂಶ ಹೇಳುತ್ತಿದ್ದಾನೋ ಎಂದು ನನಗೆ ಅನುಮಾನ ಶುರುವಾಗಿತ್ತು.
ಬಿಹಾರದ ಚಂಪಾರಣ ಜಿಲ್ಲೆಯ ಬಾಲಕ ದೇವೇಂದ್ರ ರಾಮನ ಮೇಲಿನ ಭಕ್ತಿಯಿಂದ ಅಯೋಧ್ಯೆಗೆ ಬಂದವನಲ್ಲ, ರೋಜಿ ರೋಟಿಗಾಗಿ ತಂದೆತಾಯಿಯ ಜೊತೆ ಗುಳೆ ಬಂದವ. ಆತನ ಒಂದು ಕೈಯಲ್ಲಿ ಒಂದು ಸುಂದರ ದೇವಾಲಯದ ಚಿತ್ರ ಇತ್ತು. ಅಯೋಧ್ಯೆಯಲ್ಲಿದ್ದ 704ನೇ ರಾಮದೇವಾಲಯ ಎಂದು ಅದರಲ್ಲಿ ಬರೆದಿತ್ತು. ಅದರ ಜೊತೆಗೆ ಒಂದಷ್ಟು ಪುಸ್ತಕಗಳಿದ್ದವು. ಅದರಲ್ಲಿ ‘ರಾಮಜನ್ಮಭೂಮಿ ಇತಿಹಾಸ್’ ಎನ್ನುವ ಪುಸ್ತಕದಲ್ಲಿ 90,000 ವರ್ಷಗಳ ಹಿಂದೆ ಇದೇ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರ ಹುಟ್ಟಿದ ಎಂದು ಬರೆದಿತ್ತು. ಇದರ ಜೊತೆಗೆ ರಾಮಜನ್ಮ ಭೂಮಿಗಾಗಿ ಬಿಜೆಪಿ ಮಾಡಿದ್ದ ತ್ಯಾಗ ಬಲಿದಾನಗಳ ವೀರಾಗಾಥೆ ಇತ್ತು.
ರಾಮನ ಮೇಲಿನ ನಂಬಿಕೆಯಿಂದ ಇಲ್ಲಿಗೆ ಭೇಟಿ ನೀಡುವ ಭಕ್ತರ ಕೈಗೆ ಇಂತಹ ಹಸಿಸುಳ್ಳುಗಳ ಇತಿಹಾಸ ಸಿಕ್ಕರೆ ಗತಿ ಏನು ಎಂದೆಲ್ಲ ಯೋಚನೆ ಬಂದು ಆ ಬಾಲಕನಿಗೆ ಗದರಿಸಬೇಕೆನಿಸಿತು. ಕತ್ತೆತ್ತಿದರೆ ಗೋಡೆಗಳಲ್ಲಿ ವಾಜಪೇಯಿ ಮತ್ತು ಅಡ್ವಾಣಿ ಎಂಬ ಅವಳಿ ನಾಯಕರ ಪೋಸ್ಟರ್ ಅಣಕಿಸುತ್ತಿತ್ತು. ರಾಮಮಂದಿರದ ಪೋಟೊ ತೋರಿಸಿಯೇ ದಿಲ್ಲಿಯಲ್ಲಿ ಅಧಿಕಾರಕ್ಕೆ ಬಂದವರು ಅವರು. ಬಡಪಾಯಿ ದೇವೇಂದ್ರ ಸುಳ್ಳೆಂದು ತನಗೆ ಗೊತ್ತಿಲ್ಲದ ಸುಳ್ಳುಗಳನ್ನು ಹೇಳುತ್ತಿರುವುದು ಎರಡು ಹೊತ್ತಿನ ರೋಟಿ-ಸಬ್ಜಿಗಾಗಿ. ವಿಚಿತ್ರವೆಂದರೆ ಆ ಬಾಲಕ ತನಗರಿವಿಲ್ಲದಂತೆ ನುಡಿದಿದ್ದ ಭವಿಷ್ಯ ನಿಜವಾಗಿತ್ತು. 2007ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಧೂಳೀಪಟವಾಗಿತ್ತು. 2009ರ ಲೋಕಸಭಾ ಚುನಾವಣೆಯಲ್ಲಿಯೂ ಆ ಪಕ್ಷದ ಸೋಲಿನ ಸರಣಿ ಮುಂದುವರಿದಿತ್ತು.
► 2012
2012ರ ವಿಧಾನಸಭಾ ಚುನಾವಣಾ ಕಾಲದಲ್ಲಿ ಅಯೋಧ್ಯೆಗೆ ಹೋಗಿದ್ದಾಗ ಕಣ್ಣೆದುರು ಕಂಡ ದೃಶ್ಯವಿದು:
‘‘ ಎಲ್ಲರೂ ಸಾಲಾಗಿ ನಿಲ್ಲಿ, ಗಂಡಸರು ಆ ಕಡೆ, ಹೆಂಗಸರು ಈ ಕಡೆ, ಫೋರ್ಸ್‌ನವರು ಮಾತ್ರ ನನ್ನ ಹಿಂದೆ ಬನ್ನಿ’’ ಎಂದು ಇನ್ ಸ್ಪೆಕ್ಟರ್ ನಾರಾಯಣ್ ಸಿಂಗ್ ಶೋಲೆ ಚಿತ್ರದ ಜೈಲರ್ ಅಸ್ರಾನಿ ಶೈಲಿಯಲ್ಲಿ ಡೈಲಾಗ್ ಹೊಡೆದ. ಇನ್ನೇನು ಒಳಗೆ ಹೊರಟಿದ್ದ ರಾಮಭಕ್ತರು ಈ ಆದೇಶ ಕೇಳಿ ಮತ್ತೆ ಕುಕ್ಕರುಗಾಲಲ್ಲಿ ಕುಳಿತು ಬಿಟ್ಟರು. ‘‘ ಕ್ಯಾಮರಾ, ಮೊಬೈಲ್, ಕೀಚೈನ್, ಬೆಲ್ಟ್ ಎಲ್ಲವನ್ನೂ ಇಲ್ಲಿಯೇ ಜಮಾ ಮಾಡಿ’’ ಎಂದ ಆತ ಸ್ವಲ್ಪ ತಡೆದು ‘’ದುಡ್ಡು ಒಳಗೆ ಕೊಂಡು ಹೋಗಬಹುದು’’ ಎಂದು ಪ್ರತ್ಯೇಕವಾಗಿ ಸ್ವಲ್ಪ ಒತ್ತು ಕೊಟ್ಟು ಹೇಳಿದ್ದ.
ಅಷ್ಟರಲ್ಲಿ ಸುಮಾರು ಎರಡುಗಂಟೆಗಳಿಂದ ಸುಡುಬಿಸಿಲಿನಲ್ಲಿ ಕಾಯುತ್ತಿದ್ದ ‘‘ರಾಮಭಕ್ತ’’ರಲ್ಲಿ ಗುಜುಗುಜು ಪ್ರಾರಂಭವಾಯಿತು. ಅವರೆಲ್ಲ ತಮ್ಮ ಅಂಗಿ, ಚಡ್ಡಿಗಳ ಕಿಸೆಗಳಿಗೆ ಕೈಹಾಕಿ ಹುಡುಕಾಡಿ ಒಳಗಿದ್ದುದನ್ನೆಲ್ಲ ಹೊರ ತೆಗೆದುಹಾಕಿದ್ದರು. ಅಲ್ಲಿ ಉದುರಿಬಿದ್ದದ್ದು ಒಂದಿಷ್ಟು ಚಿಲ್ಲರೆ ದುಡ್ಡು, ಬಿಟ್ಟರೆ ಬಗೆಬಗೆಯ ಗುಟ್ಕಾ, ಜರ್ದಾ ಪ್ಯಾಕೆಟ್ ಗಳು ಮಾತ್ರ. ಅವರ ಕೈಯಲ್ಲಿ ಹೂ,ಹಣ್ಣು,ಕುಂಕುಮ, ಆರತಿ ತಟ್ಟೆ ಯಾವುದೂ ಇರಲಿಲ್ಲ.
ಗೊಂಡಾದಿಂದ ‘‘ರಾಮಲಲ್ಲಾ’ನ ದರ್ಶನಕ್ಕೆ ಬಂದು ಸಾಲಲ್ಲಿ ಕೂತಿದ್ದ ಇವರಲ್ಲಿ ಹೆಚ್ಚಿನವರು ಆಗತಾನೆ ಹೊಲಗಳಿಂದ ನೇರವಾಗಿ ಹೊರಟು ಬಂದವರಂತಿದ್ದರು. ಮಾಸಿದ ಅಂಗಿ-ಪಂಚೆ, ಬರಿಗಾಲು, ಬಳಲಿದ ಮುಖ. ಮತದಾನದ ಹಿಂದಿನ ದಿನದ ಈ ತೀರ್ಥಯಾತ್ರೆ ಬಗ್ಗೆ ಯಾಕೋ ಅನುಮಾನಬಂದು ಅವರೆಲ್ಲ ಯಾಕೆ ಬಂದಿದ್ದರು ಎಂದು ಕೇಳಲು ಪ್ರಯತ್ನಪಟ್ಟಾಗೆಲ್ಲ ಅವರನ್ನು ಕರೆದುಕೊಂಡು ಬಂದಿದ್ದ ಠೇಕೆದಾರ್ ಮಧ್ಯಪ್ರವೇಶಿಸಿ ವಿವರಣೆ ಕೊಡುತ್ತಿದ್ದ. ಅಸಲಿ ಸಂಗತಿಯೇನೆಂದರೆ ಆ ದಿನ ಗೋಂಡಾ ಜಿಲ್ಲೆಯಲ್ಲಿ ಮತದಾನ ನಡೆಯುತ್ತಿತ್ತು. ಹಿಂದುಳಿದ ಮತ್ತು ದಲಿತ ಸಮುದಾಯಕ್ಕೆ ಸೇರಿರುವ ಈ ‘‘ರಾಮಭಕ್ತರು’’ ಬಿಜೆಪಿಯ ಮತದಾರರಾಗಿರಲಿಲ್ಲ. ಊರಲ್ಲಿಯೇ ಇದ್ದರೆ ಎಸ್ ಪಿಗೋ, ಬಿಎಸ್ ಪಿಗೋ ಮತಹಾಕಬಹುದೆಂಬ ಶಂಕೆಯಿಂದ ಇವರನ್ನುತೀರ್ಥ ಯಾತ್ರೆಗೆ ಕರೆದುಕೊಂಡು ಬಂದಿದ್ದರು. ಶ್ರೀರಾಮಚಂದ್ರನ ಹೆಸರು ಹೇಳಿ ರಾಮಭಕ್ತರ ಮತಯಾಚನೆ ಮಾಡುತ್ತಿದ್ದ ಭಾರತೀಯ ಜನತಾ ಪಕ್ಷ, ಅದೇ ರಾಮಭಕ್ತರನ್ನು ಮತಚಲಾಯಿಸದಂತೆ ಅಯೋಧ್ಯೆಗೆ ತೀರ್ಥಯಾತ್ರೆ ಕರೆದುಕೊಂಡು ಬಂದಿದ್ದರು.
2012ರ ವಿಧಾನಸಭಾ ಚುನಾವಣೆಯಲ್ಲಿ ಅಯೋಧ್ಯೆ ಕ್ಷೇತ್ರವನ್ನು ಸಮಾಜವಾದಿ ಪಕ್ಷದ ಅಭ್ಯರ್ಥಿ ಗೆದ್ದಿದ್ದರು.
► 2022
ಉತ್ತರ ಪ್ರದೇಶದಲ್ಲಿ ಐದನೇ ಹಂತದ ಮತದಾನ ನಡೆಯುತ್ತಿರುವ 61 ಕ್ಷೇತ್ರಗಳಲ್ಲಿ ಅಯೋಧ್ಯೆ ಕ್ಷೇತ್ರವೂ ಸೇರಿದೆ. ಇದು ರಾಮಜನ್ಮಭೂಮಿ-ಬಾಬರಿ ಮಸೀದಿ ವಿವಾದ ಸುಪ್ರೀಂಕೋರ್ಟ್‌ನಲ್ಲಿ ಇತ್ಯರ್ಥವಾದ ನಂತರ ನಡೆಯುತ್ತಿರುವ ಮೊದಲ ಚುನಾವಣೆ.
ಒಂದು ಕಾಲದ ಉತ್ತರಪ್ರದೇಶದ ಚುನಾವಣೆಗಳಲ್ಲಿ ಬಿಜೆಪಿ ನಾಯಕರ ಪ್ರಚಾರ ರಾಮಮಂದಿರದ ಪ್ರಸ್ತಾಪವಿಲ್ಲದೆ ಕೊನೆಗೊಳ್ಳುತ್ತಿರಲಿಲ್ಲ. ರಾಮಮಂದಿರ ನಿರ್ಮಾಣದ ವಿವಾದ ಇತ್ಯರ್ಥವಾಗಿ ಮಂದಿರ ನಿರ್ಮಾಣವಾಗುತ್ತಿದ್ದರೂ ಬಿಜೆಪಿ ಈಗಿನ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿಯವರೆಗೆ ತನ್ನ ಪ್ರಚಾರದಲ್ಲಿ ಇದಕ್ಕೆ ಮಹತ್ವ ನೀಡಿಲ್ಲ. ಈ ನಡೆಯಲ್ಲಿ ಆಶ್ಚರ್ಯ ಪಡುವಂತಹದ್ದೇನಿಲ್ಲ. ರಾಮಮಂದಿರ ನಿರ್ಮಾಣದ ವಿವಾದ ಭಾರತೀಯ ಜನತಾ ಪಕ್ಷಕ್ಕೆ ದೇಶಾದ್ಯಂತ ಮತಗಳಿಕೆಗೆ ನೆರವಾಗಿರಬಹುದು, ಉತ್ತರಪ್ರದೇಶದ ಚುನಾವಣೆಗಳಲ್ಲಿ ಮಾತ್ರ ಇದರ ದೊಡ್ಡ ಪ್ರಭಾವ ಎಂದೂ ಇರಲಿಲ್ಲ.
ಬಾಬರಿ ಮಸೀದಿ ಧ್ವಂಸದ ನಂತರ ನಡೆದ ವಿಧಾನಸಭಾ ಚುನಾವಣೆಗಳಲ್ಲಿ 2012ರ ಚುನಾವಣೆ ಹೊರತುಪಡಿಸಿ ಉಳಿದೆಲ್ಲ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಯೇ ಈ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಹೀಗಿದ್ದರೂ ಇಲ್ಲಿನ ಮತದಾರರು ರಾಮಮಂದಿರದ ನಿರ್ಮಾಣದ ಬಗ್ಗೆ ತಲೆಕೆಡಿಸಿಕೊಂಡಿದ್ದು ಕಡಿಮೆ. ಅಯೋಧ್ಯೆಯಿಂದ ಬರುತ್ತಿರುವ ವರದಿಗಳ ಪ್ರಕಾರ ಆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿನಿರಾಯಾಸವಾಗಿ ಗೆಲ್ಲುವ ಸಾಧ್ಯತೆ ಕಡಿಮೆ. ಬಹಳ ಮುಖ್ಯವಾಗಿ ಅಯೋಧ್ಯೆ ಪಟ್ಟಣದಲ್ಲಿನ ವರ್ತಕ ಸಮುದಾಯದಿಂದ ವ್ಯಾಪಕ ಪ್ರತಿರೋಧವನ್ನು ಬಿಜೆಪಿ ಅಭ್ಯರ್ಥಿ ಎದುರಿಸುತ್ತಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೇ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ವದಂತಿ ಇತ್ತು. ಆದರೆ ಸ್ಥಳೀಯ ವರ್ತಕರ ಆಕ್ರೋಶವನ್ನು ಕಂಡು ಅವರು ಹಿಂಜರಿದು ತಮ್ಮ ಹಳೆಯ ಕ್ಷೇತ್ರಕ್ಕೆ ಮರಳಬೇಕಾಯಿತು.
ದೇವಾಲಯಗಳ ನಗರ ಎಂಬ ಖ್ಯಾತಿಯ ಅಯೋಧ್ಯೆ 1991ಕ್ಕಿಂತ ಮೊದಲು ಗತವೈಭವವನ್ನು ನೆನಪು ಮಾಡಿಕೊಡುತ್ತಿದ್ದ ಪಾಳುಬಿದ್ದ ಪಟ್ಟಣವಾಗಿತ್ತು. ಬಾಬರಿ ಮಸೀದಿ ಧ್ವಂಸದ ನಂತರದ ದಿನಗಳಲ್ಲಿ ಇದ್ದಕ್ಕಿದ್ದ ಹಾಗೆ ಹೆಚ್ಚಿದ ಯಾತ್ರಾರ್ಥಿಗಳ ಆಗಮನದಿಂದಾಗಿ ಊರು ತುಂಬಾ ಅಂಗಡಿ ಮುಂಗಟ್ಟುಗಳು ಬೆಳೆದು ಬಹಳಷ್ಟು ಕುಟುಂಬಗಳಿಗೆ ಬದುಕಿಗೊಂದು ದಾರಿಯಾಯಿತು. ಇದೀಗ ರಾಮಮಂದಿರ ನಿರ್ಮಾಣದ ಹೆಸರಲ್ಲಿ ಪಟ್ಟಣದ ನವೀಕರಣ ಕಾಮಗಾರಿ ನಡೆಯುತ್ತಿದೆ. ಅಲ್ಲಿನ ಪ್ರಮುಖ ರಸ್ತೆಗಳ ಅಗಲೀಕರಣ ಭರದಿಂದ ಸಾಗಿದ್ದು ಇದಕ್ಕಾಗಿ ನೂರಾರು ಅಂಗಡಿಗಳನ್ನು ತೆರವುಗೊಳಿಸಲಾಗುತ್ತಿದೆ. ಇದರಿಂದಾಗಿ ಒಂದು ಕಾಲದಲ್ಲಿ ಬಿಜೆಪಿ ಅಭ್ಯರ್ಥಿಗಳ ಪ್ರಚಾರಕರಂತೆ ವರ್ತಿಸುತ್ತಿದ್ದ ವರ್ತಕರು ಬಿಜೆಪಿಯನ್ನೇ ಶಪಿಸತೊಡಗಿರುವುದು ಈ ಪಟ್ಟಣದ ಹೊಸ ಬೆಳವಣಿಗೆ.
ಈ ಕ್ಷೇತ್ರದ 3.80 ಲಕ್ಷ ಮತದಾರರಲ್ಲಿ ಬ್ರಾಹ್ಮಣ,ಠಾಕೂರ್, ವೈಶ್ಯರು ಒಂದುವರೆ ಲಕ್ಷದಷ್ಟಿದ್ದರೆ ಯಾದವ್,ಮುಸ್ಲಿಮ್ ಮತ್ತು ಪರಿಶಿಷ್ಟ ಜಾತಿಯವರು ಹೆಚ್ಚು ಕಡಿಮೆ ಅಷ್ಟೇ ಸಂಖ್ಯೆಯಲ್ಲಿದ್ದಾರೆ. ಕಾದು ನೋಡಬೇಕಾಗಿರುವುದು ಯಾದವೇತರ ಹಿಂದುಳಿದ ಜಾತಿಗಳು ಮತ್ತು ಜಾಟವೇತರ ಪರಿಶಿಷ್ಟ ಜಾತಿಯ ಮತದಾರರ ಆಯ್ಕೆಯನ್ನು. ಈ ಮತವರ್ಗವನ್ನೆ ಬಿಜೆಪಿ ಕೂಡಾ ನಂಬಿರುವುದು.
ಈ ಜಾತಿ ಸಮೀಕರಣದ ಮೇಲೆ ಕಣ್ಣಿಟ್ಟುಕೊಂಡೇ ಸಮಾಜವಾದಿ ಪಕ್ಷ ಈ ಕ್ಷೇತ್ರದಲ್ಲಿ ಒಂದು ಬಾರಿ ಗೆದ್ದಿದ್ದ ಬ್ರಾಹ್ಮಣ ಜಾತಿಗೆ ಸೇರಿರುವ ಮಾಜಿ ಶಾಸಕನನ್ನೇ ಕಣಕ್ಕಿಳಿಸಿದೆ. ಠಾಕೂರು ಜಾತಿಗೆ ಸೇರಿರುವ ಯೋಗಿ ಆದಿತ್ಯನಾಥ್ ವಿರುದ್ಧ ರಾಜ್ಯದ ಬ್ರಾಹ್ಮಣರು ಬುಸುಗುಡುತ್ತಿದ್ದಾರೆ. ಈ ಬಿರುಕು ತಮಗೆ ನೆರವಾಗಬಹುದೆಂಬ ನಿರೀಕ್ಷೆಯಲ್ಲಿದೆ ಸಮಾಜವಾದಿ ಪಕ್ಷ.