ಲೀನಿ ರೀಫಿನ್‌ಸ್ಟಾಯ್ಲಾಳ ‘ಒಲಿಂಪಿಯಾ’ ಇತಿಹಾಸದ ಅಪೂರ್ವ ದಾಖಲೆ
ಈವರೆಗೂ ತಯಾರಾಗಿರುವ ಸಾಕ್ಷಚಿತ್ರಗಳಲ್ಲಿ ಜಗತ್ತಿನ ಅತ್ಯಂತ ಶ್ರೇಷ್ಠ ಕ್ರೀಡಾ ಸಾಕ್ಷಚಿತ್ರ ಎಂದರೆ ಪ್ರಾಯಶಃ ‘ಒಲಿಂಪಿಯಾ’ ಒಂದೇ. ಕ್ರೀಡಾಕೂಟದ ಘಟನೆಗಳನ್ನು ತನ್ನ ಆಡಳಿತದ ಪ್ರಚಾರ ಸಾಮಗ್ರಿಯಾಗಿ ಬಳಸಿಕೊಳ್ಳುವ ಇಚ್ಛೆಯಿಂದ ಪ್ರಭುತ್ವವೇ ಅಪರಿಮಿತ ಹಣವನ್ನು ನೀಡಿ ತಯಾರಿಸಿದರೂ ಅದರ ಧ್ಯೇಯೋದ್ದೇಶ, ಕುಟಿಲತೆಗಳನ್ನು ಮೀರಿ, ಚರಿತ್ರೆಯ ದಾಖಲೆಯಾಗುವುದರ ಜೊತೆಗೆ ಮನಸೂರೆಗೊಳ್ಳುವ ಮಾನವೀಯ ನೆಲೆಯ ಕಲಾಕೃತಿಯಾಗಿ ಅರಳಿದ್ದು ಅದರ ಹೆಗ್ಗಳಿಕೆ.
ಜಗತ್ತಿನ ಮಹಾನ್ ಪ್ರದರ್ಶನವೆಂದು ಕರೆಸಿಕೊಳ್ಳುವ ಒಲಿಂಪಿಕ್ ಕ್ರೀಡಾಕೂಟಕ್ಕೆ ರೋಚಕ ಇತಿಹಾಸವಿದೆ. ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಿಯತವಾಗಿ ನಡೆಯುವ ಈ ಮಹಾನ್ ಕ್ರೀಡಾಕೂಟ ಸೃಷ್ಟಿಸುವ ಅಳುಕು ಪುಳಕಗಳು, ಸೋಲು ಗೆಲುವುಗಳು, ತವಕ ತಲ್ಲಣಗಳು, ಅನಿರೀಕ್ಷಿತ ಘಟನೆಗಳು, ರೋಮಾಂಚನಕ್ಕೆ ರೋಮಾಂಚನಗೊಳಿಸುವ ದಾಖಲೆಗಳು, ಸಂತಸ- ಸಂತಾಪದ ಪ್ರವಾಹದ ಪ್ರಮಾಣಕ್ಕೆ ಈ ಭೂಮಂಡಲದ ಮತ್ತೊಂದು ಯಾವುದೇ ಘಟನೆ ಸಮವಾಗಲಾರದು. ಈ ಕ್ರೀಡಾಕೂಟಕ್ಕೆ ರಾಜಕೀಯ ಲೇಪನವೂ, ರಾಷ್ಟ್ರೀಯತೆಯ ಅಮಲೂ ಸೇರುವುದರಿಂದ ಅದು ವ್ಯಕ್ತಿ ಅಥವಾ ತಂಡದ ಸಾಮರ್ಥ್ಯವನ್ನು ನಿಕಷಕ್ಕೆ ಒಡ್ಡುವ ಒಂದು ವೇದಿಕೆಯಾಗದೆ ಅದನ್ನು ಮೀರಿದ ಸೆಣಸಾಟವಾಗಿ ಮಾರ್ಪಾಡಾಗುತ್ತದೆ. ಹಾಗಾಗಿ ಒಲಿಂಪಿಕ್ ಕ್ರೀಡಾಕೂಟವು ನಾಟಕೀಯ ಘಟನೆಗಳಿಗೆ ಸಾಕ್ಷಿಯಾಗುವುದರಿಂದ ಅದು ಇತಿಹಾಸದ ಪುಟಗಳಿಗೆ ಸೇರಿಹೋದರೂ ಅದರ ನೆನಪು ಸದಾ ಜೀವಂತವಾಗಿರುತ್ತದೆ. ಕೇವಲ ದಾಖಲೆಗಳಿಗಾಗಿ ತೆಗೆದ ಸಾಕ್ಷಚಿತ್ರಗಳು ಕ್ರೀಡಾಕೂಟದ ಆಚೆಗಿನ ಮಾನವ ಸಂಘರ್ಷಗಳು ಸೇರುವುದರಿಂದ ಉತ್ತಮ ನಿರ್ದೇಶಕರ ಉಸ್ತುವಾರಿಯಲ್ಲಿ ಕಲಾತ್ಮಕ ಕುಸುಮಗಳಾಗಿ ಅರಳುತ್ತವೆ.
ಆಧುನಿಕ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಸಂಬಂಧಿಸಿದಂತೆ ಈವರೆಗೂ ಹಲವಾರು ಸಾಕ್ಷಚಿತ್ರಗಳು ತಯಾರಾಗಿವೆ. ಆದರೆ ಚಾರಿತ್ರಿಕ ಮಹತ್ವ ಮತ್ತು ಚಲನಚಿತ್ರದ ಸಾಧ್ಯತೆಗಳನ್ನು ಬಳಸಿ ಆಯಾ ಕಾಲಘಟ್ಟದ ಸಾಮಾಜಿಕ, ರಾಜಕೀಯ ಮತ್ತು ಜನಾಂಗೀಯ ಸಂಗತಿಗಳನ್ನು ಬಳಸಿ ಅದನ್ನೊಂದು ಕಲಾತ್ಮಕವೂ ವಿಶಿಷ್ಟ ಚಾರಿತ್ರಿಕ ದಾಖಲೆಯನ್ನಾಗಿ ರೂಪಿಸಿದ ಎರಡು ಮುಖ್ಯ ಸಾಕ್ಷ ಚಿತ್ರಗಳ ಮಾದರಿಗಳಿವೆ. ಮಿತಿಗಳನ್ನು ಮೀರಿ ಒಂದು ಸಾಕ್ಷಚಿತ್ರವನ್ನು ಹೇಗೆಲ್ಲ ತೆಗೆಯಬಹುದು ಎಂಬುದಕ್ಕೆ ಒಂದು ಉದಾಹರಣೆಯಾದರೆ, ಸಾಕ್ಷಚಿತ್ರವನ್ನು ಹೇಗೆ ತೆಗೆಯಬಾರದೆಂಬುದಕ್ಕೆ ಮತ್ತೊಂದು ಮಾದರಿಯಾಗಿದೆ. ಈಗ ಮೊದಲ ನಮೂನೆಯ ಚಿತ್ರದ ಉದಾಹರಣೆಯೆಂದರೆ ಲೀನಿ ರೀಫಿನ್‌ಸ್ಟಾಯ್ಲಾ ಎಂಬ ಮಹಿಳೆ ರೂಪಿಸಿ ಸಾಕ್ಷಚಿತ್ರ - ‘ಒಲಿಂಪಿಯಾ’
ಈವರೆಗೂ ತಯಾರಾಗಿರುವ ಸಾಕ್ಷಚಿತ್ರಗಳಲ್ಲಿ ಜಗತ್ತಿನ ಅತ್ಯಂತ ಶ್ರೇಷ್ಠ ಕ್ರೀಡಾ ಸಾಕ್ಷಚಿತ್ರ ಎಂದರೆ ಪ್ರಾಯಶಃ ‘ಒಲಿಂಪಿಯಾ’ ಒಂದೇ. ಕ್ರೀಡಾಕೂಟದ ಘಟನೆಗಳನ್ನು ತನ್ನ ಆಡಳಿತದ ಪ್ರಚಾರ ಸಾಮಗ್ರಿಯಾಗಿ ಬಳಸಿಕೊಳ್ಳುವ ಇಚ್ಛೆಯಿಂದ ಪ್ರಭುತ್ವವೇ ಅಪರಿಮಿತ ಹಣವನ್ನು ನೀಡಿ ತಯಾರಿಸಿದರೂ ಅದರ ಧ್ಯೇಯೋದ್ದೇಶ, ಕುಟಿಲತೆಗಳನ್ನು ಮೀರಿ, ಚರಿತ್ರೆಯ ದಾಖಲೆಯಾಗುವುದರ ಜೊತೆಗೆ ಮನಸೂರೆಗೊಳ್ಳುವ ಮಾನವೀಯ ನೆಲೆಯ ಕಲಾಕೃತಿಯಾಗಿ ಅರಳಿದ್ದು ಅದರ ಹೆಗ್ಗಳಿಕೆ. ಇದು ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ತನ್ನ ಅಧಿಕಾರದ ಉಚ್ಛ್ರಾಯ ಸ್ಥಿತಿಯಲ್ಲಿರುವಾಗ ಸಂಘಟಿಸಿದ ಬರ್ಲಿನ್ ಒಲಿಂಪಿಕ್ (1936)ಕ್ರೀಡಾಕೂಟವನ್ನು ದಾಖಲಿಸಿದ ಸಾಕ್ಷಚಿತ್ರ. ಆರ್ಯನ್ ಕುಲದ ಹಿರಿಮೆಯನ್ನು ಎತ್ತಿ ಹಿಡಿದು ತನ್ನ ಸಿದ್ಧಾಂತಗಳಿಗೆ ಮತ್ತಷ್ಟು ಬೆಂಬಲ ಮತ್ತು ಜರ್ಮನಿಯ ಹಿರಿಮೆಯನ್ನು ಸಾರಲು ಹಿಟ್ಲರ್ ಒಲಿಂಪಿಕ್ ಕ್ರೀಡಾಕೂಟದಂತಹ ಮಹಾನ್ ಮಾನವೀಯ ಮೌಲ್ಯಗಳನ್ನು ಮೆರೆಯುವ ವೇದಿಕೆಯನ್ನು ಸಹ ಬಳಸಲು ಸಿದ್ಧತೆ ಮಾಡಿಕೊಂಡಿದ್ದ. ಸಾಕ್ಷಚಿತ್ರ ಯೋಜನೆಯು ಮುಂದಿನ ದಿನಗಳಲ್ಲಿ ಪ್ರಚಾರ ಸಾಧನವಾಗಿ ಬಳಸುವ ಉದ್ದೇಶದಿಂದಲೇ ರೂಪಿತವಾಗಿತ್ತು. ನಾಝಿ ಸಿದ್ಧಾಂತಗಳ ಪ್ರಚಾರಕ್ಕೆಂದೇ ನೇಮಕಗೊಂಡಿದ್ದ ನಾಝಿ ಪಕ್ಷದ ಪ್ರಚಾರ ಸಚಿವ ಪಾಲ್ ಜೋಸೆಫ್ ಗೋಬೆಲ್ಸ್ ಈ ಕ್ರೀಡಾಕೂಟದ ಪ್ರಚಾರದ ಉಸ್ತುವಾರಿ ವಹಿಸಿದ್ದ. ಅಮೆರಿಕದ ಯೆಹೂದಿ ಮತ್ತು ಕರಿಯ ಆಟಗಾರರು ಬರ್ಲಿನ್ ಕ್ರೀಡಾಕೂಟಕ್ಕೆ ಬಂದು ಆರ್ಯರಕ್ತವನ್ನು ಕುಲಗೆಡಿಸಬಾರದೆಂಬ ಉದ್ದೇಶದಿಂದ ಅಮೆರಿಕದ ಜೊತೆ ವಿಫಲ ಸಂಧಾನ ನಡೆಸಿದ್ದ. ಜರ್ಮನಿ ಮತ್ತದರ ಮಿತ್ರರಾಷ್ಟ್ರಗಳ ಆಟಗಾರರಿಗೆ ಸಾಕ್ಷಚಿತ್ರದಲ್ಲಿ ಆದ್ಯತೆಯಿರಬೇಕೆಂಬ ಷರತ್ತು ಸಾಕ್ಷಚಿತ್ರ ಮಾಡುವವರಿಗೆ ಇತ್ತು.
ಜರ್ಮನಿಯ ಬರ್ಲಿನ್‌ನಲ್ಲಿ ಹುಟ್ಟಿದ ಲೀನಿ ರೀಫಿನ್‌ಸ್ಟಾಯ್ಲಾ (22.8.1902) ನರ್ತಕಿಯಾಗಿ, ಈಜುಗಾರ್ತಿಯಾಗಿ, ಚಿತ್ರನಟಿಯಾಗಿ ಪ್ರವರ್ಧಮಾನಕ್ಕೆ ಬಂದ ನಂತರ ನಾಝಿ ಸರಕಾರದ ಸಂಪರ್ಕಕ್ಕೆ ಬಂದು ಅದರ ತತ್ವ ಸಿದ್ಧಾಂತಗಳ ‘ಟ್ರಯಂಪ್ ಆಫ್ ದ ವಿಲ್’ ( ಸಂಕಲ್ಪಶಕ್ತಿಯ ಗೆಲುವು) ಪ್ರಚಾರ ಚಿತ್ರ ನಿರ್ದೇಶಿಸಿದಳು. ಹಿಟ್ಲರನ ವಿಶ್ವಾಸ ಸಂಪಾದಿಸಿ ನಂತರ ಮತ್ತೆ ಮೂರು ಪ್ರಚಾರ ಚಿತ್ರಗಳನ್ನು ನಿರ್ದೇಶಿಸಿದಳು. ಕಲಾತ್ಮಕ ಚಿತ್ರಗಳಿಂದ ಪ್ರಭಾವಿತಳಾಗಿದ್ದ ಆಕೆ ಸಾಕ್ಷಚಿತ್ರದ ಪರಿಣಾಮ ಹೆಚ್ಚಿಸಲು ಹಿನ್ನೆಲೆ ಸಂಗೀತವನ್ನು ಬಳಸಿ ಮೆಚ್ಚುಗೆ ಗಳಿಸಿದ್ದಳು. ಆಕೆಯ ಕೌಶಲ್ಯವನ್ನು ಗುರುತಿಸಿ ಆಕೆಗೆ ಬರ್ಲಿನ್ ಕ್ರೀಡಾಕೂಟದ ಸಾಕ್ಷಚಿತ್ರ ನಿರ್ದೇಶಿಸುವ ಹೊಣೆಯನ್ನು ನಾಝಿ ಸರಕಾರ ಒಪ್ಪಿಸಿತು.
ಒಮ್ಮೆ ಸರಕಾರ ಕ್ರಿಡಾಕೂಟದ ಚಿತ್ರವನ್ನು ತಯಾರಿಸಲು ಅನುಮತಿ ನೀಡಿದ ನಂತರ ಲೀನಿ ತನ್ನ ಕ್ರಿಯಾಶೀಲತೆಗೆ ಪೂರ್ಣ ಸ್ವಾತಂತ್ರ್ಯ ಸಿಕ್ಕಿದಂತೆ ವರ್ತಿಸಿ ಇಡೀ ಚಿತ್ರವನ್ನು ತನ್ನ ಕಲ್ಪನೆಯಂತೆ ಚಿತ್ರಿಸಲು ಮುಂದಾದಳು. ಅದು ಏಕಕಾಲಕ್ಕೆ ಪ್ರಚಾರ ಚಿತ್ರವಾಗಿಯೂ ಕಲಾತ್ಮಕ ಗುಣಗಳಿಂದ ವಂಚಿತವಾಗಬಾರದೆಂದು ನಾಝಿ ಸರಕಾರದ ಷರತ್ತುಗಳನ್ನು ಯಾರಿಗೂ ಅರಿವಿಗೆ ಬಾರದಂತೆ ಉಲ್ಲಂಘಿಸಿದಳು. ಆದರೂ ತನ್ನ ಕ್ರಿಯಾಶೀಲತೆಯ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುತ್ತಿದ್ದ ಗೋಬೆಲ್ಸ್ ಜೊತೆ ನಿರಂತರವಾಗಿ ಸಂಘರ್ಷವಿದ್ದರೂ ತನ್ನ ನಿರ್ಧಾರಗಳನ್ನು ಬದಲಿಸಿದ್ದು ಕಡಿಮೆ. ಅನೇಕ ಸಂದರ್ಭದಲ್ಲಿ ಒತ್ತಡಕ್ಕೆ ಮಣಿಯದೆ ತಾನಂದುಕೊಂಡಂತೆ ಚಿತ್ರೀಕರಣ ಮಾಡಿದಳು. ಚಿತ್ರಿಸಿದ ಎಲ್ಲ ದೃಶ್ಯಗಳನ್ನು ಒಟ್ಟುಗೂಡಿಸಿ ವರ್ಷಕಾಲ ಸಂಕಲಿಸಿದ ‘ಒಲಿಂಪಿಯಾ0 1938ರಲ್ಲಿ ಎರಡು ಭಾಗಗಳಲ್ಲಿ ಬಿಡುಗಡೆಯಾಯಿತು.
ಮೊದಲನೆಯ ಭಾಗ ಫೆಸ್ಟಿವಲ್ ಆಫ್ ನೇಷನ್ಸ್(ರಾಷ್ಟ್ರಗಳ ಹಬ್ಬ)ವಾದರೆ ಎರಡನೆಯದು ಫೆಸ್ಟಿವಲ್ ಆಫ್ ಬ್ಯೂಟಿ(ಸೌಂದರ್ಯದ ಹಬ್ಬ). ಹೆಸರಿಗೆ ತಕ್ಕಂತೆ ಎರಡೂ ಚಿತ್ರಗಳು ಸಂಭ್ರಮದ ಹಬ್ಬವೇ ಆಗಿದ್ದವು. ಇದು ಒಲಿಂಪಿಕ್ ಕ್ರಿಡಾಕೂಟವೊಂದರ ಮೊದಲ ಸಾಕ್ಷಚಿತ್ರ. ಆದರೂ ಚಲನಚಿತ್ರ ನಿರ್ಮಾಣದ ಅತ್ಯಂತ ಸುಧಾರಿತ ತಂತ್ರಜ್ಞಾನವನ್ನು ಬಳಿಸಿಕೊಂಡು ತಯಾರಿಸಿದ ಚಿತ್ರವಾಗಿ ತಾಂತ್ರಿಕವಾಗಿ ಉನ್ನತ ಮಟ್ಟದಲ್ಲಿತ್ತು. ಆ ಕಾಲದಲ್ಲಿ ಅತ್ಯಂತ ವಿನೂತನ ತಂತ್ರಗಳನ್ನು, ದೃಶ್ಯ ಸಂಯೋಜನೆಯಲ್ಲಿ ನವೀನತೆಯನ್ನು, ಸಂಕಲನದಲ್ಲಿ ಹೊಸ ಮಾರ್ಗ ಹಿಡಿದ ಚಿತ್ರವೆಂಬ ಪ್ರಶಂಸೆಗೆ ಪಾತ್ರವಾಯಿತು. ಮುಂದೆ ಈ ಚಿತ್ರದಲ್ಲಿ ಬಳಸಿದ ಚಿತ್ರೀಕರಣದ ವಿಧಾನಗಳು ಅನುಕರಣೀಯ ಮಾದರಿಗಳಾಗಿ ಮುಂದಿನ ನಿರ್ದೇಶಕರಿಗೆ ಮಾರ್ಗಸೂತ್ರಗಳಾದವು. ನೆಲದಿಂದ ತುಸು ಮೇಲಕ್ಕೆ ಕ್ಯಾಮರಾ ಇಟ್ಟು ಓಟದ ಸ್ಪರ್ಧೆಗಳ ಚಿತ್ರೀಕರಣದಂತಹ ವಿಶಿಷ್ಟ ಕ್ಯಾಮರಾ ಕೋನಗಳು. ಕ್ಲೋಸ್‌ಅಪ್ ದೃಶ್ಯಗಳು, ಸ್ಮ್ಯಾಶ್ ಕಟ್ಸ್, ಟ್ರಾಕಿಂಗ್ ದೃಶ್ಯಗಳೆಲ್ಲವೂ ಮೊದಲೇ ರೋಮಾಂಚನ ತರುವ ಸ್ಪರ್ಧೆಗಳಿಗೆ ಮೋಹಕತೆಯನ್ನು ತಂದವು. ಸ್ಟೇಡಿಯಂ ಸುತ್ತಲೂ ಆರು ಕ್ಯಾಮರಗಳ ಬಳಕೆಗೆ ಸರಕಾರ ಮಿತಿ ಹೇರಿದರೂ, ಲೀನಿಯು ಗ್ರಾಂಡ್ ಸ್ಟ್ಯಾಂಡ್ ಸೇರಿದಂತೆ ಮೈದಾನದ ಅಂಚು, ಪ್ರೇಕ್ಷಕರ ನಡುವೆ ಇಷ್ಟವಾದ ಸ್ಥಳಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿ ಕ್ಯಾಮರಾ ಕೂಡಿಸಿದುದಲ್ಲದೆ ಟ್ರಾಲಿಗಳನ್ನು ಧಾರಾಳವಾಗಿ ಬಳಸಿದಳು. ಅಪಾಯಗಳನ್ನು ಲೆಕ್ಕಿಸದೆ ಏರ್ ಬಲೂನ್‌ಗಳಲ್ಲಿ, ದೋಣಿಗಳಲ್ಲಿ ಆಟೋಮ್ಯಾಟಿಕ್ ಕ್ಯಾಮರಾಗಳನ್ನು ಇಟ್ಟು ಚಿತ್ರೀಕರಿಸಿದಳು. ಈ ಒಲಿಂಪಿಯಾದ ವಿಶಿಷ್ಟತೆಯೆಂದರೆ ನೀರಿನೊಳಗಡೆ ಕಾಮರಾ ಇಟ್ಟು ಸ್ಪರ್ಧೆಗಳನ್ನು ಚಿತ್ರೀಕರಿಸಿದ್ದು!
ಆದರೆ ಅತ್ಯಂತ ಮಿತಿಗಳಲ್ಲಿ ಚಿತ್ರ ರೂಪಿಸಿದ ಲೀನಿಯು ಎಲ್ಲ ಮಿತಿಗಳನ್ನು ಮೀರಿ ತನ್ನ ಕ್ರಿಯಾಶೀಲತೆಯಿಂದ ಅದನ್ನೊಂದು ಕಲಾಕೃತಿಯಾಗಿಸಲು ಪಟ್ಟ ಶ್ರಮ ಹೆಚ್ಚಿತ್ತು. ನಾಝಿಗಳ ಷರತ್ತಿದ್ದರೂ ತನ್ನ ಯೋಜನೆಯಂತೆ ಆಕೆ ಚಿತ್ರೀಕರಣ ಮಾಡಿದ್ದಳು. ಮುಖ್ಯ ಸಂದರ್ಭಗಳಲ್ಲಿ ರಾಜಿ ಮಾಡಿಕೊಳ್ಳಲು ಒಪ್ಪುತ್ತಿರಲಿಲ್ಲ. ಚಿತ್ರೀಕರಣವು ನಾಝಿ ಸಿದ್ಧಾಂತಗಳಿಗೆ ಪ್ರಚಾರ ನೀಡುವಂತಿರಬೇಕು: ಚಿತ್ರಸಂಕಲನವು ನಾಝಿಗಳನ್ನು ವೈಭವೀಕರಿಸುವ ರೀತಿಯಲ್ಲಿರಬೇಕು ಎಂದು ಗೋಬೆಲ್ಸ್‌ನಿಂದ ಸತತ ಒತ್ತಡವಿತ್ತು ಆದರೆ ಲೀನೀ ಸ್ವತ: ಚಿತ್ರೀಕರಣ ಮತ್ತು ಸಂಕಲನವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಳು. ಆಫ್ರೋ ಅಮೆರಿಕನ್ ಅಥ್ಲೀಟುಗಳು ಸ್ಪರ್ಧೆಯಲ್ಲಿ ಗೆದ್ದ ಬಗ್ಗೆ ಹಿಟ್ಲರ್ ವ್ಯಗ್ರಗೊಂಡ ವಿಷಯವನ್ನು ದಾಖಲಿಸಲು ಗೋಬೆಲ್ಸ್ ಸೂಚಿಸಿದರೂ ಆಕೆ ಅದನ್ನು ಅಂಗೀಕರಿಸಲಿಲ್ಲ. ಅದಕ್ಕೆ ಬದಲು ಲೀನಿಯು ಚಿನ್ನದ ಪದಕಗಳನ್ನು ಗೆದ್ದು ದಾಖಲೆ ಬರೆದ ಜೆಸಿ ಓವೆನ್ಸ್ ಮತ್ತು ರಾಲ್ಫ್ ಮೆಟ್‌ಕಾಫ್ ಅವರನ್ನು ಎದ್ದು ಕಾಣುವಂತೆ ಚಿತ್ರಿಸಿದಳು
ನಾಝಿಗಳ ಮನೋಭಾವದ ಪರಿಚಯ ಚೆನ್ನಾಗಿಯೇ ಇದ್ದ ಲೀನಿಯು ಜೆಸ್ಸಿ ಓವೆನ್ಸ್‌ನ ಚರಿತ್ರಾರ್ಹ ಓಟವನ್ನು ದಾಖಲು ಮಾಡಿದ ನಂತರ ತನ್ನ ಕ್ರಿಯಾಶೀಲತೆಯನ್ನು ಇನ್ನಷ್ಟು ವಿಸ್ತರಿಸುವ ರೀತಿಯಲ್ಲಿ ಲಾಂಗ್ ಜಂಪ್(ಜರ್ಮನಿಯ ಪಟು ಎರಡನೇ ಸ್ಥಾನ)ನಲ್ಲಿ ಪ್ರಥಮ ಸ್ಥಾನ ಪಡೆದ ಜೆಸಿ ಆತನನ್ನು ಕರೆದು ಲಾಂಗ್ ಜಂಪ್ ಪಿಟ್ ಹತ್ತಿ ಕ್ಯಾಮರಾ ಇಟ್ಟು ಡಮ್ಮಿ ಜಂಪ್ ಮಾಡಿಸಿ ಕ್ಲೋಸ್ ಅಪ್, ಮಿಡ್ ಶಾಟ್‌ಗಳನ್ನು ಚಿತ್ರೀಕರಿಸಿದಳು. ಮೊದಲೇ ಕಪ್ಪು ಜನರ ವಿರುದ್ಧ ಕುದಿಯುತ್ತಿದ್ದ ನಾಝಿಗಳಿಗೆ ಈ ವರ್ತನೆ ಬೇಸರ ತರಿಸುತ್ತದೆಂದು ತಿಳಿದೂ ಆಕೆ ನಿಜವಾದ ನಿರ್ದೇಶಕಿಯಂತೆ ನಡೆದುಕೊಂಡಳು. ಲೀನಿಯ ಈ ಚಿತ್ರೀಕರಣದ ಭಾಗವನ್ನು ಜೆಸಿ ಓವೆನ್ಸ್ ಕುರಿತ ಇತ್ತೀಚಿನ ಬಯೋಪಿಕ್ ‘ರನ್’ನಲ್ಲಿ ಮರುಸೃಷ್ಟಿಸಿದೆ.
‘ಒಲಿಂಪಿಯಾ’ ಚಿತ್ರವನ್ನು ಥಿಯೇಟರ್‌ಗಳಲ್ಲಿ ಮೂರು ಭಾಷೆಗಳ ಕಾಮೆಂಟರಿಯೊಡನೆ (ಜರ್ಮನ್, ಫ್ರೆಂಚ್ ಮತ್ತು ಇಂಗ್ಲಿಷ್) ಎರಡು ಭಾಗಗಳಲ್ಲಿ ಬಿಡುಗಡೆ ಮಾಡಲಾಯಿತು. ಒಟ್ಟು 226 ನಿಮಿಷದ ಈ ಸಾಕ್ಷಚಿತ್ರದ ಮೊದಲ ಭಾಗ 126 ನಿಮಿಷವಿದ್ದರೆ, ಎರಡನೆಯ ಭಾಗ 100 ನಿಮಿಷಗಳಷ್ಟು ದೀರ್ಘವಾಗಿತ್ತು. ಜಗತ್ತಿನಾದ್ಯಂತ ಅಪಾರ ಮೆಚ್ಚುಗೆ ಗಳಿಸಿದ ಚಿತ್ರವಿದು. 1960ರಲ್ಲಿ ಒಲಿಂಪಿಯಾವನ್ನು ಜಗತ್ತಿನ ಹತ್ತು ಶ್ರೇಷ್ಠ ಚಿತ್ರಗಳಲ್ಲಿ ಒಂದೆಂದು ಆಕೆಯ ಸಮಕಾಲೀನ ನಿರ್ದೇಶಕರು ಮತ ಹಾಕಿ ಆಯ್ಕೆ ಮಾಡಿದರು. ಅಮೆರಿಕ ಟೈಂ ಪತ್ರಿಕೆಯು ‘‘ಕಣ್ತುಂಬುವ ವೈಭವದ ದೃಶ್ಯಗಳ ಮನಮೋಹಕ ಚಿತ್ರ’’ವೆಂದು ಕೊಂಡಾಡಿತು. ಲೀನಿಯು ನಾಝಿ ಪ್ರಚಾರ ಚಿತ್ರಗಳನ್ನು ತಯಾರಿಸಿದ ಕಾರಣಕ್ಕಾಗಿ ಜಗತ್ತಿನ ವಿಮರ್ಶಕರ ಟೀಕೆಗೆ ತುತ್ತಾದರೂ, ಪ್ರಚಾರ ಧ್ಯೇಯವನ್ನು ಮೀರಿ ಮಾನವೀಯ ಸಂವೇದನೆಯ ‘ಒಲಿಂಪಿಯಾ’ ಚಿತ್ರ ನೀಡಿದ ಕಾರಣ ಮೆಚ್ಚುಗೆಯನ್ನು ಗಳಿಸಿದಳು. ವೆನಿಸ್ ಚಿತ್ರೋತ್ಸವವೂ ಸೇರಿದಂತೆ ಜಗತ್ತಿನ ಅನೇಕ ಪ್ರಶಸ್ತಿಗಳಿಗೆ ಇದು ಪಾತ್ರವಾದ ಕಾರಣ ಲೀನಿಗೆ ಅಂಟಿದ ಕಳಂಕ ಸ್ವಲ್ಪಮಟ್ಟಿಗೆ ದೂರಾಯಿತು.
‘ಒಲಿಂಪಿಯಾ’- ಒಂದು ಪ್ರಚಾರದ ಚಿತ್ರವೆಂದು ಟೀಕಿಸುವಷ್ಟೇ ಸಂಖ್ಯೆಯಲ್ಲಿ ಅದೊಂದು ಮಾದರಿ ಸಾಕ್ಷಚಿತ್ರವೆಂದು ಕೊಂಡಾಡುವವರಿದ್ದಾರೆ. ಕ್ರೀಡಾಪಟುಗಳನ್ನು, ಕ್ರೀಡೆಗಳನ್ನು, ಜನರ ಪ್ರತಿಕ್ರಿಯೆಗಳನ್ನು ಚಿತ್ರಿಸಿರುವ ರೀತಿಯಲ್ಲಿ ಪ್ರಚಾರಚಿತ್ರ ಮಾಡುವ ಯಾವುದೇ ಕುರುಹುಗಳಿಲ್ಲ. ವಸ್ತುನಿಷ್ಠ ನಿರೂಪಣೆಯಿದೆಯೆಂಬುದು ಅದನ್ನು ಮೆಚ್ಚುವವರ ಸಕಾರಣ ವಾದ. ಕ್ರೀಡಾಸಕ್ತರೂ ಇದನ್ನು ಅನುಮೋದಿಸುತ್ತಾರೆ. ವೆನಿಸ್ ಚಿತ್ರೋತ್ಸವದಲ್ಲಿ ತೀರ್ಪುಗಾರರ ಮಹಾಮಂಡಳಿ ಅದನ್ನು ಅತ್ಯುತ್ತಮ ಚಿತ್ರ ಪುರಸ್ಕಾರಕ್ಕೆ ಆಯ್ಕೆ ಮಾಡಿತು. ಈ ಚಿತ್ರ ಅತ್ಯುನ್ನತ ಗುಣಮಟ್ಟದ ನಿರ್ಮಾಣವೆಂದು ಭಾವಿಸಿ, ಆಕೆ 60ರ ದಶಕದಲ್ಲಿ ಹಾಲಿವುಡ್‌ಗೆ ಭೇಟಿನೀಡಿದಾಗ ವಾಲ್ಟ್ ಡಿಸ್ನಿ ಆಕೆಗೆ ಭವ್ಯ ಸ್ವಾಗತ ಕೋರಿದ. ಜರ್ಮನ್ ವಿರೋಧಿ ಮನೋಭಾವವಿದ್ದ ಜನರು ಡಿಸ್ನಿಯನ್ನು ಕಟುಮಾತುಗಳಿಂದ ಖಂಡಿಸಿದರು. ಒಲಿಂಪಿಯಾ ಚಿತ್ರ ಪ್ರದರ್ಶನಕ್ಕೂ ಅಮೆರಿಕದಲ್ಲಿ ತಡೆಯುಂಟಾಗಿತ್ತು.
ಎರಡನೇ ಮಹಾ ಯುದ್ಧದಲ್ಲಿ ಜರ್ಮನಿ ಸೋತ ನಂತರ ವಿಚಾರಣೆ ಆರಂಭಿಸಿದ ನ್ಯಾಯಾಲಯಗಳು ಲೀನಿ ಅನ್ನು ನಾಝಿ ಎಂದು ಹಣೆಪಟ್ಟಿ ಕಟ್ಟಲು ನಿರಾಕರಿಸಿದವು. ಆಕೆ ನಾಝಿಗಳು ಪ್ರಾಯೋಜಿಸಿದ ಸಾಕ್ಷಚಿತ್ರ ನಿರ್ದೇಶಿಸಿದರೂ ಅದು ತನ್ನ ಚಾರಿತ್ರಿಕ ಮಹತ್ವದಿಂದ ತನ್ನದೇ ಸ್ಥಾನ ಪಡೆದಿದೆ.
ಆವರೆಗೂ ನಡೆಯುತ್ತಿದ್ದ ಕ್ರೀಡಾಕೂಟಗಳಿಗೆ ರಾಜಕೀಯ ಬಣ್ಣವಿರಲಿಲ್ಲ. ರಾಷ್ಟ್ರೀಯತೆ, ದೇಶಭಕ್ತಿಯ ಹುಚ್ಚೂ ಇರಲಿಲ್ಲ. ಕ್ರೀಡಾಪಟುಗಳ ಭಾಗವಹಿಸುವಿಕೆ ಮತ್ತು ಅವರ ಸೋಲು-ಗೆಲುವು ಅಷ್ಟೇ ಮುಖ್ಯ ಸಂಗತಿಯಾಗಿತ್ತು. ಗೆಲ್ಲವುದು ಮುಖ್ಯವಲ್ಲ, ಭಾಗವಹಿಸಿವುದು ಮುಖ್ಯ ಎಂಬ ಮಹಾನ್ ಧ್ಯೇಯವು ಕ್ರೀಡೆಯ ಉದಾತ್ತ ನೀತಿಯಾಗಿತ್ತು. ಗೆದ್ದವನನ್ನು ಅಭಿನಂದಿಸುವ, ಸೋತವನನ್ನು ಆಲಂಗಿಸಿ ಸಂತೈಸುವ ಮಾನವೀಯ ಸೆಲೆಗಳಿದ್ದವು. ಹಿಟ್ಲರ್ ತನ್ನ ಬರ್ಲಿನ್ ಒಲಿಂಪಿಕ್ಸ್ ಮೂಲಕ ಈ ಉದಾತ್ತ ಚಿಂತನೆಗೆ ಕೊಳ್ಳಿಯಿಟ್ಟ. ರಾಷ್ಟ್ರೀಯತೆಯ ಅಮಲು ಈ ಕ್ರೀಡಾಕೂಟದಿಂದಲೇ ಆರಂಭವಾಯಿತು. ಇಲ್ಲಿ ಶುರುವಾದ ರಾಜಕೀಯ ತಂತ್ರಗಳು ಮುಂದುವರಿಯುತ್ತಾ ಕ್ರೀಡಾಕೂಟವನ್ನು ವಿರೂಪಗೊಳಿಸಿದವು. ಒಲಿಂಪಿಕ್ ಪದಕ ಗೆಲ್ಲುವುದು ದೇಶಭಕ್ತಿಯ, ದೇಶದ ಪ್ರತಿಷ್ಠೆಯ ಸಂಕೇತವಾಯಿತು. ಹಾಗಾಗಿ ಬರ್ಲಿನ್ ಒಲಿಂಪಿಕ್ಸ್ ಕೆಟ್ಟ ಕಾರಣಗಳಿಗಾಗಿಯೂ ಐತಿಹಾಸಿಕವಾದದ್ದೇ. ಅದರ ಎಲ್ಲ ಸೌಂದರ್ಯ ಕುರೂಪಗಳನ್ನು ಕಲಾತ್ಮಕವಾಗಿ ದಾಖಲಿಸಿದ ಲೀನಿ ರೀಫಿನ್‌ಸ್ಟಾಯ್ಲಾನ ಮೊದಲ ಕ್ರೀಡಾ ಸಾಕ್ಷ ಚಿತ್ರವು ಚಿತ್ರಜಗತ್ತಿನ ವಿಶಿಷ್ಟ ವಿದ್ಯಮಾನ.