‘ಅಕ್ಕಯ್ ಕರುಣೆಗೊಂದು ಸವಾಲು’ ನಾಟಕ; ಮಾ.6ಕ್ಕೆ ಪ್ರದರ್ಶನ
ಡಾ.ಅಕ್ಕಯ್ ಪದ್ಮಶಾಲಿ
ಬೆಂಗಳೂರು, ಫೆ. 27: ಸಾಧಿಸುವ ಛಲವೊಂದಿದ್ದರೆ ಏನೆಲ್ಲ ಸಾಧನೆ ಮಾಡಬಹುದು. ಇನ್ನೂ ಸಾಧನೆ, ಹೋರಾಟದ ಹಾದಿಗೆ ಲಿಂಗತ್ವ ಅಡ್ಡಿಯಾಗುವುದಿಲ್ಲ ಎನ್ನುವುದಕ್ಕೆ ತಾಜಾ ಉದಾಹರಣೆ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಡಾ.ಅಕ್ಕಯ್ ಪದ್ಮಶಾಲಿ.
ಈಗ ಇವರ ಜೀವನ, ಕಷ್ಟ, ಪ್ರೀತಿ ಕುರಿತು ಪ್ರೇರಣಾತ್ಮಕ ನಾಟಕವೊಂದು ಮೂಡಿಬರುತ್ತಿದೆ. ರಾಜಧಾನಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮಾ.6ರಂದು ಸಂಜೆ 6 ಗಂಟೆಗೆ ‘ಅಕ್ಕಯ್ ಕರುಣೆಗೊಂದು ಸವಾಲು’ ನಾಟಕ ಪ್ರದರ್ಶನಗೊಳ್ಳುತ್ತಿದ್ದು, ಇದು ಅಕ್ಕಯ್ ಅವರ ಆತ್ಮಕಥನ 'ಅಕ್ಕಯ್' ಭಾಗವಾಗಿದೆ.
ಅಕ್ಕಯ್ ಬದುಕನ್ನು ನಾಟಕರೂಪದಲ್ಲಿ ತೆರೆದಿಡುತ್ತಿದ್ದಾರೆ ಸಾಹಿತಿ ಬೇಳೂರು ರಘುನಂದನ್. ಕಾಜಾಣ ಮತ್ತು ಸಾತ್ವಿಕರಂಗ ಪಯಣತಂಡದಿಂದ 15 ಮಂದಿಗಳ ತಂಡ ಕೆಲಸ ಮಾಡಿದ್ದು, ಕೃಷ್ಣಮೂರ್ತಿಕವತ್ತಾರ್ ನಾಟಕ ರಚಿಸುತ್ತಿದ್ದಾರೆ. ಮುಖ್ಯವಾಗಿ ಅಕ್ಕಯ್ ಪಾತ್ರಕ್ಕೆ ನಯನ ಸೂಡ ಜೀವ ತುಂಬಿದ್ದಾರೆ.
ಲೈಂಗಿಕ ಅಲ್ಪಸಂಖ್ಯಾತರ ನೋವನ್ನು ಸ್ವತ: ಅನುಭವಿಸಿರುವ ಅಕ್ಕಯ್ ಪದ್ಮಶಾಲಿ, ತಮ್ಮ ಬಾಲ್ಯದ ದಿನಗಳಿಂದ ಹಿಡಿದು ಹೋರಾಟದ ಪ್ರತಿ ಹಂತದಲ್ಲೂ ಸಮಾಜದ ವಿವಿಧೆಡೆಯಿಂದ ಬಂದ ಎಲ್ಲರೀತಿಯ ಅಪಮಾನ, ಹೀನಾಯ ಆರೋಪಗಳನ್ನು ಎದುರಿಸಿದ ಬಗೆಯನ್ನು ನಾಟಕರೂಪದಲ್ಲಿ ವಿವರಿಸಿದ್ದಾರೆ.
ಸದ್ಯ ರಾಜಕೀಯ ಚಟುವಟಿಕೆಗಳಲ್ಲೂ ಸಕ್ರಿಯವಾಗಿರುವ ಅಕ್ಕಯ್, ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಕ್ಕಾಗಿ ಅವರು ‘ಒಂದೆಡೆ' ಎಂಬ ಸಂಘಟನೆಯನ್ನು ಸ್ಥಾಪಿಸಿದ್ದಾರೆ. ನಾಟಕ ಕುರಿತು ‘ವಾರ್ತಾಭಾರತಿ’ವೊಂದಿಗೆ ಮಾತನಾಡಿದ ಅಕ್ಕಯ್, ಲಿಂಗತ್ವ, ಲೈಂಗಿಕ ಸಮಾನತೆ, ಸಮಾಜದೊಂದಿಗೆ ಸಹಬಾಳ್ವೆಯನ್ನು ಕೋರುವ ನಾಟಕ ಹಲವು ಆಯಾಮಗಳನ್ನು ಕಟ್ಟಿಕೊಡುತ್ತಲೇ ಸಿದ್ದಮಾದರಿಯ ಕಟ್ಟೆಗಳನ್ನು ಒಡೆದು ಹೊಸತೊಂದನ್ನು ಕಟ್ಟುವುದು ನಾಟಕದ ವಿಶೇಷ ಎಂದು ನುಡಿದರು.
ನಾಟಕ ನಿರ್ದೇಶಕ ಬೇಲೂರು ರಘನಂದನ್ ಪ್ರತಿಕ್ರಿಯಿಸಿ, ಅಕ್ಕಯ್ ಆತ್ಮಕಥನ ಬದುಕಿನ ಸ್ಪೂರ್ತಿಯೇ ನಾಟಕ ರಚನೆಗೆ ಕಾರಣ .ಲೈಂಗಿಕ ಅಲ್ಪಸಂಖ್ಯಾತರ ಬದುಕು, ಹೋರಾಟದ ಹಾದಿ ಆತ್ಮಕಥನದಲ್ಲಿ ಅಕ್ಷರವಾಗಿದ್ದರೆ ಅಕ್ಕಯ್ ನಾಟಕ ಬಣ್ಣತುಂಬಿ ಭಾವ ಮೂಡಿಸಲಿದೆ ಎಂದು ಹೇಳಿದರು.
-ನಾಟಕ-ಅಕ್ಕಯ್
-ವಿನ್ಯಾಸ-ರಂಗರೂಪ-ನಿರ್ದೇಶನ-ಬೇಲೂರುರಘನಂದನ್
-ಮಾರ್ಚ್-6(ಉಚಿತ ಪ್ರವೇಶ)
-ಸ್ಥಳ: ರವೀಂದ್ರಕಲಾಕ್ಷೇತ್ರ
-ಸಮಯ: ಸಂಜೆ 6ಕ್ಕೆ
ನಾಟಕದ ವಿಶೇಷತೆ ಏನು?
ಅಕ್ಕಯ್ ಜೀವನ ಕುರಿತು ನಾಟಕದಲ್ಲಿ ನಮ್ಮಲ್ಲಿ ಒಂದು ತಲ್ಲಣ ತಂದೊಡ್ಡಿ ನಮ್ಮನ್ನು ಮತ್ತಷ್ಟು ವೈಚಾರಿಕವಾಗಿ ಆಲೋಚಿಸಲು ಹಚ್ಚುತ್ತದೆ. ಸಿದ್ಧ ಮಾದರಿಗಳ ಆಚೆ ನಿಂತು ನಮ್ಮ ಸುತ್ತ ನೋಡಲು ಪ್ರೇರೇಪಿಸುತ್ತದೆ. ಜಗತ್ತಿನ ಜೀವ ವೈವಿಧ್ಯತೆಯನ್ನು ಗೌರವಿಸಲು ಹೇಳಿ ಕೊಡುತ್ತದೆ.