ಯುದ್ಧಗ್ರಸ್ಥ ಉಕ್ರೇನಿನಿಂದ ತಾಯ್ನಾಡಿಗೆ ಮರಳಿದ ಪ್ರಥಮ ಉಡುಪಿಗ
ಹೊಸದಿಲ್ಲಿಗೆ ಬಂದಿಳಿದ ಉದ್ಯಾವರದ ಮೃಣಾಲ್
ಮೃಣಾಲ್ ಉದ್ಯಾವರ
ಉಡುಪಿ, ಫೆ.27: ಯುದ್ಧಗ್ರಸ್ಥ ಉಕ್ರೇನ್ನಲ್ಲಿ ಸಿಲುಕಿರುವ ಉಡುಪಿ ಜಿಲ್ಲೆಗೆ ಸೇರಿದ ಒಟ್ಟು ಏಳು ಮಂದಿ ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಒಬ್ಬರು ಇಂದು ಸಂಜೆ ರೊಮೇನಿಯಾ ಮೂಲಕ ಹೊಸದಿಲ್ಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಆದರೆ ಅವರಿಗೆ ಮಾರ್ಗದರ್ಶನ ನೀಡಲು, ಸ್ವಾಗತಿಸಲು ಕರ್ನಾಟಕದ ಯಾವೊಬ್ಬ ಅಧಿಕಾರಿಯೂ ವಿಮಾನ ನಿಲ್ದಾಣದಲ್ಲಿ ಹಾಜರಿರಲಿಲ್ಲ ಎಂದು ತಿಳಿದು ಬಂದಿದೆ.
ಉದ್ಯಾವರ ಸಾಲ್ಮರದ ರಾಜೇಶ್ ಎಂಬವರ ಪುತ್ರ ಮೃಣಾಲ್ ಜಿಲ್ಲೆಯಲ್ಲೇ ಮೊದಲಿಗರಾಗಿ ಇಂದು ಸಂಜೆ 6:00ಗಂಟೆಗೆ ಹೊಸದಿಲ್ಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಉಕ್ರೇನಿನಿಂದ ಆಗಮಿಸಿದ ಭಾರತೀಯ ವಿದ್ಯಾರ್ಥಿಗಳೇ ತುಂಬಿದ್ದ ಈ ವಿಮಾನದಲ್ಲಿ ಕರ್ನಾಟಕದ ಏಕೈಕ ವಿದ್ಯಾರ್ಥಿ ಇವರಾಗಿದ್ದರು.
ಯುದ್ಧಗ್ರಸ್ಥ ಉಕ್ರೇನಿನಿಂದ ಆಗಮಿಸಿದ ಉಳಿದೆಲ್ಲಾ ರಾಜ್ಯಗಳ ವಿದ್ಯಾರ್ಥಿ ಗಳನ್ನು ಸ್ವಾಗತಿಸಲು, ಅವರಿಗೆ ಹುಟ್ಟೂರಿಗೆ ತೆರಳಲು ವಿಮಾನ ಸೇರಿದಂತೆ ಇತರ ವ್ಯವಸ್ಥೆ ಕಲ್ಪಿಸಲು ಆಯಾ ರಾಜ್ಯಗಳ ಅಧಿಕಾರಿಗಳು ವಿಮಾನ ನಿಲ್ದಾಣ ದಲ್ಲಿದ್ದರೂ, ಕರ್ನಾಟಕದಿಂದ ಯಾವೊಬ್ಬ ಅಧಿಕಾರಿಯೂ ಅಲ್ಲಿ ಉಪಸ್ಥಿತ ರಿರಲಿಲ್ಲ ಎಂದು ತಿಳಿದುಬಂದಿದೆ.
ತಡ ರಾತ್ರಿ ಬೆಂಗಳೂರಿಗೆ : ರಾತ್ರಿಯ ವೇಳೆ ಕರ್ನಾಟಕದ ಅಧಿಕಾರಿಗಳು ಮೃಣಾಲ್ ರನ್ನು ಸಂಪರ್ಕಿಸಿದ್ದು ತಡ ರಾತ್ರಿಯೇ ಬೆಂಗಳೂರಿಗೆ ಪ್ರಯಾಣಿಸಲು ವ್ಯವಸ್ಥೆ ಮಾಡಿದ್ದಾರೆ. ಸೋಮವಾರ ಬೆಳಗ್ಗಿನ ಜಾವ ಅವರು ಬೆಂಗಳೂರು ತಲುಪಲಿದ್ದಾರೆ. ಬೆಂಗಳೂರಿನಿಂದ ಮೊದಲ ವಿಮಾನದಲ್ಲಿ ಮಂಗಳೂರಿಗೆ ಬರಲು ವ್ಯವಸ್ಥೆ ಮಾಡಲಾಗಿದೆ ಎಂದು ಮೃಣಾಲ್ ತಿಳಿಸಿರುವುದಾಗಿ ಅವರ ತಂದೆ ರಾಜೇಶ್ 'ವಾರ್ತಾಭಾರತಿ'ಗೆ ತಿಳಿಸಿದ್ದಾರೆ.
ಮೃಣಾಲ್ ಉಳಿದವರೊಂದಿಗೆ ರೊಮೇನಿಯಾ ಗಡಿಯ ಮೂಲಕ ರೊಮೇನಿಯ ತಲುಪಿ ಅಲ್ಲಿಂದ ಭಾರತ ಸರಕಾರ ವ್ಯವಸ್ಥೆಗೊಳಿಸಿದ ವಿಮಾನದ ಮೂಲಕ ಬೆಳಗ್ಗೆ ಭಾರತಕ್ಕೆ ಪ್ರಯಾಣ ಬೆಳೆಸಿದ್ದರು. ಅವರು ನಾಳೆ ಬೆಂಗಳೂರು, ಮಂಗಳೂರು ಮೂಲಕ ಉದ್ಯಾವರದ ತಮ್ಮ ಮನೆಗೆ ಮರಳುವ ನಿರೀಕ್ಷೆ ಇದೆ.
ಉಳಿದಂತೆ ಹೊಸದಿಲ್ಲಿಯ ಕರ್ನಾಟಕ ಭವನದ ವ್ಯವಸ್ಥಾಪಕರಾಗಿರುವ ಪರ್ಕಳ ನಿವಾಸಿ ಬಿ ವಿ ರಾಘವೇಂದ್ರ ಅವರ ಪುತ್ರ ನಿಯಮ್ ರಾಘವೇಂದ್ರ ಅವರು ರೊಮೇನಿಯಾ ಗಡಿಯ ಮೂಲಕ ಉಕ್ರೇನ್ ತೊರೆದಿದ್ದು, ರೊಮೇನಿಯಾದಿಂದ ಶೀಘ್ರವೇ ಭಾರತದತ್ತ ಪ್ರಯಾಣ ಬೆಳೆಸುವ ನಿರೀಕ್ಷೆ ಇದೆ.
ಉಡುಪಿ ಜಿಲ್ಲೆಯ ಇನ್ನುಳಿದ ಐವರು ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ಸುರಕ್ಷಿತವಾಗಿದ್ದು, ದೇಶ ತೊರೆಯುವ ಬಗ್ಗೆ ಮಾಹಿತಿಗಾಗಿ ಕಾಯುತಿದ್ದಾರೆ ಎಂದು ಜಿಲ್ಲಾಡಳಿತ ನೀಡಿರುವ ಮಾಹಿತಿ ತಿಳಿಸಿದೆ.