ಗಣನೆಗೆ ಸಿಗದವರು
ಇಂತಹ ಸೂಕ್ಷ್ಮಜಾತಿಗಳೂ ನಮ್ಮ ನಡುವೆ ಇವೆ; ಆದರೆ ಅವುಗಳಿಗೆ ಅಸ್ತಿತ್ವವೇ ಇಲ್ಲ ..!
ನಮ್ಮದು ಬಹು ಸಂಸ್ಕೃತಿಗಳ ಸಮಾಜ. ಗಣತಿಗೆ ಸಿಕ್ಕಿರುವ ಜಾತಿಗಳು ಸ್ವಲ್ಪ, ಸಿಗದಿರುವುದೇ ಅಗಾಧ. ರಾಜ್ಯ ಹಿಂದುಳಿದ ವರ್ಗಗಳ ವ್ಯಾಪ್ತಿಗೆ ಸುಮಾರು 1,350 ಜಾತಿಗಳು ಸೇರುತ್ತವೆ. ಹೆಚ್ಚಿನ ಜಾತಿಗಳು ಸೂಕ್ಷ್ಮಾತಿ-ಸೂಕ್ಷ್ಮ ಜಾತಿಗಳು ಎನ್ನಬಹುದು. ಏಕೆಂದರೆ ಹೆಚ್ಚಿನ ಇಂತಹ ಜಾತಿಗಳಿಗೆ ಯಾವುದೇ ಅಸ್ತಿತ್ವ ಅಥವಾ ಅಸ್ಮಿತೆ ಇಲ್ಲ. ಆದರೂ ಸಮಾಜದಲ್ಲಿ ಇಂತಹ ಜಾತಿಗಳು ನಮ್ಮ-ನಿಮ್ಮ ನಡುವೆ ಇವೆೆ. ಹೆಚ್ಚಿನ ಇಂತಹ ಜಾತಿಗಳು ಯಾವುದೇ ಮೀಸಲಾತಿ ಪಟ್ಟಿಯಲ್ಲಿ ಇಲ್ಲ. ಸರಕಾರವೂ ಸೇರಿದಂತೆ ಯಾರಿಗೂ ಇಂತಹ ಉಪಜಾತಿಗಳು ಇವೆ ಎನ್ನುವುದು ಗೊತ್ತಿಲ್ಲ. ಇಂತಹ ಸೂಕ್ಷ್ಮಾತಿ-ಸೂಕ್ಷ್ಮ ಜಾತಿಗಳು ಎಷ್ಟು ಹೀನಾಯ ಸ್ಥಿತಿಯಲ್ಲಿ ಬದುಕುತ್ತಿವೆ ಎಂದರೆ ಯಾರೂ ನಂಬುವುದಿಲ್ಲ. ಹೆಚ್ಚಿನವು ಅಲೆಮಾರಿ, ಅರೆ-ಅಲೆಮಾರಿ ಮತ್ತು ವಿಮುಕ್ತ ಜಾತಿಗಳು. ಆ ಜಾತಿಗೆ ಸೇರಿದ ಜನಸಂಖ್ಯೆ ಕೂಡ ರಾಜ್ಯದಲ್ಲಿ ಕೆಲವೊಮ್ಮೆ ಒಂದೆರಡು ಸಾವಿರವನ್ನೂ ಮೀರುವುದಿಲ್ಲ. ಕೆಲವೊಂದು ಸೂಕ್ಷ್ಮ ಜಾತಿಗಳಲ್ಲಿ ಒಟ್ಟು ಜನಸಂಖ್ಯೆ 400-500ರಷ್ಟು ಮಾತ್ರ ಇರುತ್ತದೆ. 1931ರ ರಾಜ್ಯದ ಗಣತಿ ವರದಿಯ ಆಧಾರದ ಮೇಲೆ ಪ್ರೊಜೆಕ್ಟೆಡ್ ಪಾಪುಲೇಶನ್ ತಂತ್ರ ಬಳಸಿ ಅವುಗಳ ಜನಸಂಖ್ಯೆಯನ್ನು ಇಂದಿಗೂ ಹೇಳಲಾಗುತ್ತಿದೆ. ಆದರೆ ಕೆಲವು ಇಂತಹ ಜಾತಿಗಳ ಮುಖಂಡರನ್ನು ಕೇಳಿದರೆ ನಾವು 15-20 ಲಕ್ಷ ಇದ್ದೇವೆ ಎನ್ನುತ್ತಾರೆ. ಇದನ್ನೇ ನಂಬಿದರೆ ಕರ್ನಾಟಕದ ಒಟ್ಟು ಜನಸಂಖ್ಯೆ 50 ಕೋಟಿ ದಾಟುತ್ತದೆ!.
ಇತ್ತೀಚೆಗೆ ಉತ್ತರ ಕರ್ನಾಟಕದ ಕ್ಷೇತ್ರಕಾರ್ಯದಲ್ಲಿ ನಮ್ಮ ತಂಡ ಇದ್ದಾಗ ‘ಜಾತಗಾರರು’ ಎಂಬ ಜಾತಿಯ ಪರಿಚಯವಾಯಿತು. ಸರಕಾರದ ಯಾವುದೇ ಪಟ್ಟಿಯಲ್ಲಿ ಈ ಜಾತಗಾರರು ಎಂಬ ಸಮುದಾಯ ಇಲ್ಲ. ನಾವು ಈ ಜಾತಿ ಎಂದು ಹೇಳಿಕೊಳ್ಳುವ ಕೆಲವು ಮಂದಿಯನ್ನು ಮಾತನಾಡಿಸಿದಾಗ ನಮಗೆ ತಿಳಿದುಬಂದ ಸಂಗತಿಯೆಂದರೆ ಎಮ್ಮೆಗಳ ಮೈಯಲ್ಲಿ ಬೆಳೆದಿರುವ ಹೆಚ್ಚಿನ ಕೂದಲನ್ನು ಶೇವ್ ಮಾಡುವುದು ಈ ಸಮುದಾಯದ ಕೆಲಸ. ಅಂದರೆ ನಮ್ಮಲ್ಲಿ ಎಮ್ಮೆಯ ಮೈಯನ್ನು ಶೇವ್ ಮಾಡುವುದಕ್ಕೆ ಒಂದು ಜಾತಿ ಇದೆ ಎಂದಾಯಿತು!. ನಿಜಕ್ಕೂ ಇಂತಹ ಒಂದು ಜಾತಿ ಇದೆಯೆಂದು ನಮಗೆಲ್ಲ ಗೊತ್ತಾಗಿದ್ದೇ ಅಂದು. ನಮ್ಮ ಪಕ್ಕದ ಕೊಡಗಿನಲ್ಲಿ ಒಂದು ಸಣ್ಣ ಸಮುದಾಯವಿದೆ ಅದನ್ನು ಕಾಪಾಳರು ಎಂದು ಕರೆಯುತ್ತಾರೆ. ಹಿಂದೆ ಕೊಡಗನ್ನು ಚಿಕ್ಕ ವೀರರಾಜೇಂದ್ರ ಆಳುತ್ತಿದ್ದಾಗ ಆತ ತನ್ನ ಅನಧಿಕೃತ ಪತ್ನಿಯರೊಂದಿಗೆ ಕಾಲಕಳೆಯುವ ಸಮಯದಲ್ಲಿ ಕಾಪಾಳರು ಅರಮನೆಯನ್ನು ಕೈಯಲ್ಲಿ ಬುಡ್ಡಿ ದೀಪ ಹಿಡಿದು ಕಾಯುತ್ತಿದ್ದರಂತೆ. ಇಂದು ಸಂಪೂರ್ಣ ಕೊಡಗಿನಲ್ಲಿ ಜಾಲಾಡಿದರೆ 100 ಮಂದಿ ಮಾತ್ರ ಇವರು ಇರಬಹುದು. ಕೆಟಗೆರಿ ಒಂದರಲ್ಲಿ ಅವರು ಬರುತ್ತಾರೆ. ಕೆಟಗೆರಿ ಒಂದರಲ್ಲಿ ಸುಮಾರು 95 ಜಾತಿಗಳಿವೆ. ಅದರಲ್ಲಿ ಇದುವರೆಗೆ ಮೀಸಲಾತಿ ಪಡೆದಿರುವುದು ಕೇವಲ 23 ಎನ್ನುತ್ತವೆ ವರದಿಗಳು. ಯಾರಿಗೆ ಮತ್ತು ಎಲ್ಲಿಗೆ ಹೋಗುತ್ತಿದೆ ಮೀಸಲಾತಿಗಳು?
ಬೆಳಗಾವಿ ಭಾಗದಲ್ಲಿ ದೊಂಬಾರಿ ಎಂಬ ಸಮುದಾಯವಿದೆ. ಇವರಲ್ಲಿ ಎಂತಹ ಒಂದು ವಿಚಿತ್ರ ಆಚರಣೆಯೆಂದರೆ ಇವರಲ್ಲಿ ಹೆಣ್ಣುಮಕ್ಕಳು ಹೆರಿಗೆಗೆಂದು ಆಸ್ಪತ್ರೆಗೆ ಹೋಗುವುದಿಲ್ಲ. ಹೆರಿಗೆ ಹತ್ತಿರವಿದ್ದಂತೆ ಆಕೆಯನ್ನು ಮಾತ್ರ ಮನೆಯಲ್ಲಿ ಬಿಟ್ಟು ಬಾಕಿ ಜನ ಹೊರ ಹೋಗುತ್ತಾರೆ. ಅವರೆಲ್ಲರೂ ತಿರುಗಿ ಬರುವಷ್ಟರಲ್ಲಿ ಆಕೆ ತಾನೇ ಹೆರಿಗೆ ಮಾಡಿಕೊಂಡು ಮಗುವನ್ನು ಮತ್ತು ಆ ಸ್ಥಳವನ್ನು ಸ್ವಚ್ಛ ಮಾಡಿರುತ್ತಾಳೆ. ಈ ಸಮುದಾಯದ ಹೆಣ್ಣು ಮಕ್ಕಳು ಆಸ್ಪತ್ರೆಗೆ ದಾಖಲಾದ ಉದಾಹರಣೆ ಇಲ್ಲ ಎನ್ನುತ್ತಾರೆ ಕೆಲವರು. ಈ ಸಮುದಾಯದ ಬಗ್ಗೆ ತೀರ ಇತ್ತೀಚಿನವರೆಗೆ ಯಾರಿಗೂ ಗೊತ್ತಿರಲಿಲ್ಲ. ಓರ್ವ ಜರ್ಮನ್ ಸಂಶೋಧಕ ಈ ಬಗ್ಗೆ ಸಂಶೋಧನೆಯನ್ನು ಮಾಡಿದ ನಂತರವೇ ಗೊತ್ತಾಗಿದ್ದು ಎನ್ನುತ್ತಾರೆ ತಜ್ಞ ಡಾ. ಸಿ ಎಸ್. ದ್ವಾರಕಾನಾಥ್. ಸರಕಾರದ ಯಾವ ಮೀಸಲಾತಿ ಪಟ್ಟಿಯಲ್ಲೂ ದೊಂಬಾರಿ ಎಂಬ ಹೆಸರು ಇಲ್ಲ. ನಿರ್ದಿಷ್ಟವಾಗಿ ಬೆಳಗಾವಿಯಲ್ಲಿ ಇರುತ್ತಾರೆ ಎಂದು ಮಾಹಿತಿ ಇದೆ. ಕೆಲವೊಮ್ಮೆ ಕೆಲಸಕ್ಕಾಗಿ ಮಹಾರಾಷ್ಟ್ರಕ್ಕೆ ವಲಸೆ ಹೋಗುತ್ತಾರೆ.
ಇನ್ನು ಪರಿಶಿಷ್ಟ ಜಾತಿಯ ಒಂದು ಉಪ ಪಂಗಡವೆಂದು ಹೇಳುವ ದಕ್ಕಲಿಗರು ಎನ್ನುವ ಸಮುದಾಯ ಅಸ್ಪಶ್ಯರಲ್ಲಿ ಅಸ್ಪಶ್ಯರಾಗಿದ್ದಾರೆ. ಇವರನ್ನು ಪರಸ್ಪರ ಜಾತಿಯವರೇ ಹತ್ತಿರ ಸೇರಿಸಿಕೊಳ್ಳುವುದಿಲ್ಲ. ಇವರು ಬಂದರೆ ಇವರನ್ನು ಊರ ಹೊರಗಡೆ ಇಡುತ್ತಾರೆ. ದಕ್ಕಲಿಗರನ್ನು ನೋಡಿದರೆ ಅಪಶಕುನ ಎಂದು ಕೆಲವು ಪರಿಶಿಷ್ಟ ಜಾತಿಯವರಲ್ಲಿ ನಂಬಿಕೆಯಿದೆ. ದಕ್ಕಲಿಗರು ಭಿಕ್ಷೆ ಬೇಡಲು ಊರ ಒಳಗೆ ಬರಬೇಕಾದರೆ ಒಂದು ಆಯಕಟ್ಟಿನ ಸ್ಥಳದಲ್ಲಿ ಭಿಕ್ಷಾಪಾತ್ರೆ ಇಡಬೇಕು. ಊರಿನ ಮಂದಿ ಪಾತ್ರೆಗೆ ಭಿಕ್ಷೆ ಹಾಕುತ್ತಾರೆ. ಕೊನೆಗೆ ದಕ್ಕಲಿಗರು ಬಂದು ಅದನ್ನು ತೆಗೆದುಕೊಂಡು ಹೋಗುತ್ತಾರೆ. ಇಂದಿಗೂ ಇದನ್ನೆಲ್ಲ ನಂಬಲು ಸಾಧ್ಯವೇ. ದಕ್ಕಲಿಗರ ಒಟ್ಟು ಜನಸಂಖ್ಯೆ ರಾಜ್ಯದಲ್ಲಿ ಕೇವಲ 450 ಎನ್ನಲಾಗುತ್ತಿದೆ. ಯಾರೂ ಊಹೆ ಮಾಡಿಕೊಳ್ಳದ ರೀತಿಯಲ್ಲಿ ಇವರೆಲ್ಲಾ ಬದುಕುತ್ತಿದ್ದಾರೆ.
ಸಿಖ್ಖರ ಸಂಸ್ಕೃತಿಯನ್ನು ಹೋಲುವ ಸಿಕ್ಲಿಗರು ಎನ್ನುವ ಅಲೆಮಾರಿ ಸಮುದಾಯ ನಮ್ಮ ನಡುವೆ ಇದೆ. ಇವರಿಗೂ ಸಿಖ್ಖರಿಗೂ ಕೆಲವೊಂದು ವಿಚಾರದಲ್ಲಿ ಸಾಮ್ಯತೆಯಿದೆ. ಇವರ ಮುಖ್ಯ ಕೆಲಸ ಪಾತ್ರೆಗಳಿಗೆ ಕಲಾಯಿ ಹಾಕುವುದು, ಹಳೆಯ ಪಾತ್ರೆಗಳನ್ನು ಮನೆ-ಮನೆಯಲ್ಲಿ ಸಂಗ್ರಹಿಸಿ ಗುಜರಿಗೆ ಹಾಕುವುದು ಅಥವಾ ಹಳೆಯ ಪಾತ್ರೆಗಳಿಂದ ಹೊಸದಾದ ಡಬ್ಬಿಗಳನ್ನು ಮಾಡುವುದು. ಇವರಲ್ಲಿ ಎಷ್ಟು ಬಡತನ ಇದೆಯೆಂದರೆ ಕೆಲವೊಮ್ಮೆ ಕುದುರೆಯ ಲದ್ದಿ ಮತ್ತು ಹಂದಿಯ ಲದ್ದಿಯಿಂದ ಇವರು ಮನೆಯಲ್ಲಿ ಒಲೆಯನ್ನು ಉರಿಸುತ್ತಾರೆ. ಯಾರಾದರೂ ಶ್ರೀಮಂತರು ಅಥವಾ ಮದುವೆ ಮನೆಗಳಲ್ಲಿ ಮಾಡಿರುವ ಪಾಯಸವನ್ನು ಸಂಗ್ರಹಿಸಿ ಅದನ್ನು ಒಣಗಿಸಿ ಡಬ್ಬಿಯಲ್ಲಿ ಸಂಗ್ರಹಿಸಿ ತಮ್ಮ ಹಬ್ಬಗಳು ಬಂದಾಗ ನೀರಿಗೆ ಹಾಕಿ ಬಿಸಿ ಮಾಡಿ ಕುಡಿಯುತ್ತಾರೆ. ರಾಜ್ಯದಲ್ಲಿ ಎಷ್ಟು ಮಂದಿಗೆ ಇಂತಹ ಒಂದು ಸಮುದಾಯದ ಇದೆ ಎನ್ನುವುದು ಗೊತ್ತು?. ಇವರ ಜೀವನ ಶೈಲಿ ಹೀಗೆ ಎಂದು ನಾವು ಹೇಳಿದರೆ ಯಾರೂ ನಂಬುವುದಿಲ್ಲ.
ಗ್ರಾಮೀಣ ಭಾಗದಲ್ಲಿ ಕರ್ಕರ ಮಂಡಿ ಎನ್ನುವ ಸಮುದಾಯವಿದೆ. ಇವರು ಇಂದಿಗೂ ಭಿಕ್ಷೆಬೇಡಿ ಬದುಕುತ್ತಿದ್ದಾರೆ. ಇವರು ಭಿಕ್ಷೆ ಬೇಡಲು ಬಂದಾಗ ಭಿಕ್ಷೆ ನೀಡಲು ಸತಾಯಿಸಿದರೆ ಅಲ್ಲೇ ತಕ್ಷಣ ವಾಂತಿ ಮಾಡಲು ಆರಂಭಿಸುತ್ತಾರೆ. ಯಾವುದೇ ಸಂದರ್ಭದಲ್ಲಿ ವಾಂತಿ ಮಾಡಬೇಕಾದ ಕಲೆ ಇವರಿಗೆ ರಕ್ತಗತವಾಗಿ ಬಂದಿದೆ. ನಮ್ಮ ಮನೆಗಳ ಮುಂದೆ ತಲೆ ಮೇಲೆ ಕುಕ್ಕೆಯಲ್ಲಿ ಮಾರಿ ದೇವಿಯನ್ನು ಹಿಡಿದುಕೊಂಡು ಕಚ್ಚೆ ಕಟ್ಟಿಕೊಂಡು ಬೆನ್ನಿಗೆ ಚಾವಟಿ ಹೊಡೆದುಕೊಂಡು ಭಿಕ್ಷೆ ಬೇಡುವ ಸಮುದಾಯ ನೆನಪಿರಬಹುದು. ಇವರನ್ನು ದುರ್ಗಾ ಮುರ್ಗಿ ಅನ್ನುತ್ತಾರೆ. ಅದೇ ರೀತಿ ರಾಮನವಮಿಯಂದು ರಾಮನ ಮತ್ತು ಹನುಮಂತನ ವೇಷ ಹಾಕಿ ಬೀದಿ ಬೀದಿಯಲ್ಲಿ ಭಿಕ್ಷೆ ಬೇಡುತ್ತಾರೆ ಕೆಲವರು. ಇವರನ್ನು ಹಗಲು ವೇಷದವರು ಎಂದು ಕರೆಯುತ್ತಾರೆ. ವರ್ಷದ ಕೆಲಸಮಯದಲ್ಲಿ ಮಾತ್ರ ಇವರು ಇಂತಹ ವೇಷ ಹಾಕಿ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಮನೆ ಮುಂದೆ ಶೃಂಗಾರ ಮಾಡಿದ ಎತ್ತುಗಳನ್ನು ಬಸವಣ್ಣ ಎಂದು ಹೆಸರು ನೀಡಿ ಭಿಕ್ಷೆ ಬೇಡುವ ಒಂದು ಸಮುದಾಯವಿದೆ ನಮ್ಮಲ್ಲಿ. ಯಾರೂ ಇವರ ಬಗ್ಗೆ ಗಂಭೀರವಾಗಿ ಯೋಚಿಸುವುದಿಲ್ಲ. ಮದಾರಿಗಳು ಎಂಬ ಇನ್ನೊಂದು ಜಾತಿ ನಮ್ಮ ನಡುವೆ ಇದೆ. ಹಾವು ಆಡಿಸುವುದು, ಕೋತಿ ಆಡಿಸುವುದು ಇವರ ಸಾಂಪ್ರದಾಯಿಕ ವೃತ್ತಿ. ಹಾವು ಕಡಿದು ಇವರಲ್ಲಿ ಕೆಲವು ಮಂದಿ ಪ್ರಾಣ ಸಹ ಬಿಟ್ಟಿದ್ದಾರೆ. ಈಗ ಪ್ರಾಣಿ ರಕ್ಷಣಾ ಕಾಯ್ದೆಗಳು ಜಾರಿ ಬಂದ ನಂತರ ಹಾವು ಮತ್ತು ಕೋತಿ ಗಳನ್ನು ಇಟ್ಟುಕೊಳ್ಳಲು ಯಾರಿಗೂ ಅನುಮತಿ ಇಲ್ಲ. ಇವರೆಲ್ಲ ರಸ್ತೆಗಳಲ್ಲಿ ಭಿಕ್ಷೆ ಬೇಡುತ್ತಿದ್ದಾರೆ. ಅದೇ ರೀತಿ ಕರಡಿಗಳನ್ನು ಆಡಿಸುವ ಇನ್ನೊಂದು ಸಮುದಾಯ ನಮ್ಮಲ್ಲಿದೆ. ಅವರನ್ನು ಕಲಂದರ್ ಎನ್ನಲಾಗುತ್ತದೆ. ಇವರಲ್ಲಿ ಮದುವೆಯ ಸಮಯದಲ್ಲಿ ಕರಡಿಗಳನ್ನು ವರದಕ್ಷಿಣೆ ಅಥವಾ ವಧುದಕ್ಷಿಣೆ ರೂಪದಲ್ಲಿ ವಿನಿಮಯ ಮಾಡಿಕೊಳ್ಳಲಾಗುತ್ತದೆ. ಇವರಲ್ಲಿ ಮನುಷ್ಯರಿಗಿಂತ ಕರಡಿಗಳಿಗೆ ಹೆಚ್ಚಿನ ಮನ್ನಣೆ ಮತ್ತು ಗೌರವ. ಆದರೆ ಇಂದು ಕರಡಿ ಆಡಿಸಲು ಅನುಮತಿ ಇಲ್ಲ. ಕೆಲವರು ಕದ್ದು ಮುಚ್ಚಿ ಗ್ರಾಮೀಣ ಪ್ರದೇಶಗಳಲ್ಲಿ ಕರಡಿಗಳ ಕೂದಲಿನಿಂದ ಮತ್ತು ಉಗುರುಗಳಿಂದ ತಾಯಿತ ತಯಾರಿಸಿ ಮಾರಿ ಬದುಕುತ್ತಿದ್ದಾರೆ. ಇದೇ ರೀತಿ ಯಾವುದೋ ಒಂದು ತಲೆಮಾರು ಮಾಡಿದ ತಪ್ಪಿಗೆ ಇಂದಿಗೂ ಕಳಂಕ ಹೊತ್ತಿರುವ ಗಂಟಿಚೋರ ಎನ್ನುವ ಸಮುದಾಯ, ಚಪ್ಪರ್ ಬಂದ್ ಎನ್ನುವ ಅಳಿವಿನ ಅಂಚಿನ ಸಮುದಾಯ, ಊರಿನವರ ಜಾತಕ ಇಟ್ಟುಕೊಂಡು ಅಲೆಯುತ್ತಿರುವ ಹೆಳವರು ಎನ್ನುವ ಸಮುದಾಯ, ಈ ರೀತಿ ಹತ್ತು ಹಲವಾರು ಅಸ್ತಿತ್ವದಲ್ಲಿ ಇರುವ ಆದರೆ ಯಾರಿಗೂ ಕಾಣದಿರುವ ಸೂಕ್ಷ್ಮಾತಿ-ಸೂಕ್ಷ್ಮ ಜಾತಿಗಳು ನಮ್ಮ ನಡುವೆ ಬದುಕುತ್ತಿವೆ.
ಜಾತಿಗಣತಿಯು ಸಹ ಇತ್ತೀಚಿನ ದಿನಗಳಲ್ಲಿ ವಿವಾದದ ಸಂಗತಿಯಾಗಿದೆ. ಈಗಾಗಲೇ ಕರ್ನಾಟಕದ ಜಾತಿಗಣತಿ ವರದಿ ಸಿದ್ಧವಿದೆ. ಅದನ್ನು ಹೊರಹಾಕಲು ಯಾರಿಗೂ ಧೈರ್ಯವಿಲ್ಲ ಅಷ್ಟೇ. ಪ್ರತಿಯೊಂದು ರಾಜಕೀಯ ಪಕ್ಷಕ್ಕೂ ವೋಟಿನದೇ ಚಿಂತೆ. ಈ ಮಧ್ಯೆ ಜಾತಿ ವರದಿಯ ಸ್ವಲ್ಪಭಾಗ ಸೋರಿಕೆಯಾಗಿ ಅದಕ್ಕೆ ರೆಕ್ಕೆಪುಕ್ಕಗಳು ಬಲಿತು ಇನ್ನೊಂದು ವಿವಾದಕ್ಕೆ ಕಾರಣವಾಗಿದೆ. ಜಾತಿಗಳ ಸಂಖ್ಯೆಯನ್ನು ಮತ್ತು ಅಲ್ಲಿನ ಜನ ಸಂಖ್ಯೆಯನ್ನು ಹೆಚ್ಚು ತೋರಿಸಿದಷ್ಟು ರಾಜಕೀಯ ಪಕ್ಷಗಳಿಗೆ ಲಾಭ. ಒಬಿಸಿಗೆ ಶೇ. 27 ಮೀಸಲಾತಿ ವಿಚಾರ ಬಂದಾಗಲೂ ಜಾತಿಗಣತಿ ವಿಚಾರ ಕುರಿತು ಅಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿತ್ತು. ಇಂದಿಗೂ ಯಾವ ಸರಕಾರಕ್ಕೂ ಜಾತಿಗಣತಿಯ ಬಗ್ಗೆ ಸರಿಯಾದ ಮಾಹಿತಿಯನ್ನು ಕೋರ್ಟಿಗೆ ನೀಡಲು ಸಾಧ್ಯವಾಗಿಲ್ಲ. ಜಾತಿಗಣತಿಯ ವರದಿಯನ್ನು ತಮ್ಮ ತಮ್ಮ ಲಾಭಕ್ಕೆ ಬಳಸಿಕೊಳ್ಳುವುದಕ್ಕೆ ಕಾಯುತ್ತಿದ್ದಾರೆ. ಯಾವುದೇ ಸರಕಾರಿ ಕಾರ್ಯಕ್ರಮಗಳು ಎಷ್ಟರ ಮಟ್ಟಿಗೆ ಮತ್ತು ಯಾರಿಗೆ ತಲುಪಿದೆ ಎನ್ನುವ ಮಾಹಿತಿ ಬೇಕಾದರೆ ವೈಜ್ಞಾನಿಕವಾದ ಜಾತಿಗಣತಿ ಆಗಬೇಕಾಗಿದೆ ಎನ್ನುವುದು ಮಾನವಶಾಸ್ತ್ರಜ್ಞರ ವಾದ.. ನಾವಿಲ್ಲಿ ಚಚೆರ್ ಮಾಡಿರುವ ಜಾತಿಗಳ ಹೆಸರನ್ನು ಕೇಳದವರ ಸಂಖ್ಯೆ ಹೆಚ್ಚಿದ್ದಾಗ ಅವರ ಜನಸಂಖ್ಯೆ ಎಷ್ಟು ಎಂದು ಯಾರಿಗೆ ನಿಜವಾಗಿ ಗೊತ್ತಿರುತ್ತದೆ?. ಕೆಲವು ಸೂಕ್ಷ್ಮಾತಿ-ಸೂಕ್ಷ್ಮ ಜಾತಿಗಳು ಯಾವ ಜಾತಿಗಣತಿ ವ್ಯಾಪ್ತಿಗೂ ಬರುವುದಿಲ್ಲ. ಏಕೆಂದರೆ ಅವರು ಎಲ್ಲಿರುತ್ತಾರೆಂದು ಯಾರಿಗೂ ಗೊತ್ತಿಲ್ಲ. ಆದರೂ ಅವರು ಇದ್ದಾರೆ, ಒಂದು ರೀತಿಯಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಹಾಗೆ.