ನ್ಯಾಯಾಲಯಗಳು ಪ್ರಶ್ನಾತೀತವೇ? ನ್ಯಾಯಾಧೀಶರು ವಿಮರ್ಶಾತೀತರೇ?
ನ್ಯಾಯಾಂಗ ನಿಂದನೆಯಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ನ್ಯಾಯಾಂಗ ನಿಂದನೆಯೆಂಬ ಎರಡು ರೀತಿಗಳಿವೆ. ಒಂದು ನ್ಯಾಯಾಂಗ ಕೊಟ್ಟ ಆದೇಶವನ್ನು ಸರಕಾರಗಳು ಪಾಲಿಸದಿದ್ದಾಗ ಅದು ಸಿವಿಲ್ ನ್ಯಾಯಾಂಗ ನಿಂದನೆಯಾಗುತ್ತದೆ. ನ್ಯಾಯಾಧೀಶರು ನಿಷ್ಪಕ್ಷಪಾತದಿಂದ ಕಾರ್ಯ ನಿರ್ವಹಣೆ ಮಾಡಲು ಉದ್ದೇಶಪೂರ್ವಕವಾಗಿ ತೊಡಕುಂಟುಮಾಡುವುದನ್ನು ಪ್ರಜಾತಂತ್ರ ದೇಶಗಳು ಸಾಮಾನ್ಯವಾಗಿ ಕ್ರಿಮಿನಲ್ ನ್ಯಾಯಾಂಗ ನಿಂದನೆಯೆಂದು ಭಾವಿಸುತ್ತವೆ. ಆದರೆ ಅವುಗಳಲ್ಲಿ ನ್ಯಾಯಾದೇಶದ ಟೀಕೆ, ವಿಮರ್ಶೆಗಳು ಸೇರುವುದಿಲ್ಲ. ಅದು ಹೆಚ್ಚೆಂದರೆ ನ್ಯಾಯಾಧೀಶರ ವ್ಯಕ್ತಿಗತ ತೇಜೋವಧೆಗಳನ್ನು ಮಾತ್ರ ಒಳಗೊಳ್ಳುತ್ತದೆ.
ಸುಮಾರು ಪ್ರಬುದ್ಧ ಪ್ರಜಾತಾಂತ್ರಿಕ ದೇಶಗಳು ತಮ್ಮ ಸಂವಿಧಾನಗಳಲ್ಲಿ ಕ್ರಿಮಿನಲ್ ನ್ಯಾಯಾಂಗ ನಿಂದನೆಯ ಅವಕಾಶಗಳನ್ನೇ ಕಲ್ಪಿಸಿಲ್ಲ. ಇನ್ನು ಕೆಲವು ಪ್ರಜಾತಂತ್ರಗಳು ನ್ಯಾಯಾಧೀಶರ ವ್ಯಕ್ತಿ ನಿಂದನೆಯನ್ನು, ನ್ಯಾಯಾದೇಶದ ಟೀಕೆಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿ ಪರಿಗಣಿಸುತ್ತವೆ.
ಕಂಡದ್ದನ್ನು ಕಂಡಹಾಗೆ ಹೇಳಿದ ತಪ್ಪಿಗೆ ಚಿತ್ರನಟ ಅದಕ್ಕಿಂತ ಮಿಗಿಲಾಗಿ ಒಬ್ಬ ಪೆರಿಯಾರ್‌ವಾದಿ, ಅಂಬೇಡ್ಕರ್‌ವಾದಿ ಆಕ್ಟಿವಿಸ್ಟ್ ಆಗಿರುವ ಚೇತನ್ ಅವರು ಒಂದು ವಾರದ ಜೈಲುವಾಸ ಮುಗಿಸಿ ನಿನ್ನೆ ಬಿಡುಗಡೆಯಾಗಿದ್ದಾರೆ. ಚೇತನ್ ಅವರು ಮಾಡಿರುವ ಟ್ವೀಟ್, ಅದರ ನೆಪದಲ್ಲಿ ಅವರು ಬಂಧನವಾದ ರೀತಿ, ಅವರು ಜಾಮೀನು ಅರ್ಜಿಯನ್ನು ನ್ಯಾಯಾಲಯಗಳು ನಿರ್ವಹಿಸಿದ ರೀತಿಗಳನ್ನು ಗಮನಿಸಿದರೆ ಇದರ ಹಿಂದೆ ನಾಗರಿಕರು ನ್ಯಾಯಾಲಯಗಳನ್ನು ಸಕಾರಣವಾಗಿಯೂ ವಿಮರ್ಶೆ ಮಾಡದಂತೆ ಎಚ್ಚರಿಸುವ ಸಂದೇಶವೂ ಇದ್ದಂತಿದೆ.
ಚೇತನ್ ಅವರ ಮೇಲೆ ಹೊರಿಸಿರುವ ಆರೋಪಗಳು ನೇರವಾಗಿ ನ್ಯಾಯಾಂಗ ನಿಂದನೆಯ ಆರೋಪಗಳಲ್ಲ.
ಆದರೂ ಅವರನ್ನು ಬಂಧಿಸಿದ್ದು ಮಾತ್ರ ವಾರದ ಹಿಂದೆ ನ್ಯಾಯಾಧೀಶರ ಧೋರಣೆಯ ಬಗ್ಗೆ ಮಾಡಿದ ಟ್ವೀಟಿನ ಕಾರಣಕ್ಕೆ. ದೂರುಕೊಟ್ಟವರು ನ್ಯಾಯಾಧೀಶರೂ ಅಲ್ಲ. ವಾಸ್ತವದಲ್ಲಿ ದೂರುದಾರರು ಯಾರು ಎಂಬುದೇ ಬಂಧಿಸಿದ ಹಲವಾರು ಗಂಟೆಗಳ ಕಾಲ ನಿಗೂಢವಾಗಿತ್ತು. ರಾತ್ರಿಯವರೆಗೂ ದೂರುದಾರ ಯಾರಾಗಬೇಕೆಂಬ ಬಗ್ಗೆ ಪೊಲೀಸರಲ್ಲೇ ಇದ್ದ ಗೊಂದಲ ಹಾಗೂ ಅಂತಿಮವಾಗಿ ಸ್ವಪ್ರೇರಣೆಯಿಂದ ಆದ ದೂರು ದಾಖಲು-ಇವೆಲ್ಲವನ್ನು ನೋಡಿದರೆ ಸಾಮಾನ್ಯ ಜ್ಞಾನ ಇರುವ ಯಾರು ಬೇಕಾದರೂ ಚೇತನ್ ಬಂಧನದ ಹಿಂದೆ ಕರಿಕೋಟುಗಳ ಕೆಂಪು ಕಟ್ಟಡವು ಎದುರಿಗಿರುವ ವಿಧಾನ ಸೌಧದ ಮೇಲೆ ಹಾಕಿರಬಹುದಾದ ಒತ್ತಡದ ಅಂದಾಜನ್ನು ಮಾಡಬಹುದು.
ಅಷ್ಟು ಮಾತ್ರವಲ್ಲ ಪೊಲೀಸರು 'ಸ್ವಪ್ರೇರಣೆ'ಯಿಂದ ದಾಖಲಿಸಿಕೊಂಡಿರುವ ಎಫ್‌ಐಆರ್‌ನಲ್ಲೂ ''ಚೇತನ್ ಅವರು ನ್ಯಾಯಾಲಯದ ಬಗ್ಗೆ ಮುಸ್ಲಿಮರಲ್ಲಿ ಅನುಮಾನ ಮೂಡಿಸುವ ಹಾಗೂ ನ್ಯಾಯಾಧೀಶರು ನಿಷ್ಪಕ್ಷಪಾತವಾಗಿ ಕೆಲಸ ನಿರ್ವಹಿಸದಂತೆ ಮಾಡಿದ'' ಆರೋಪಗಳಿವೆ.
ಹೀಗಾಗಿ ಚೇತನ್ ಅವರ ಬಂಧನ ಮತ್ತು ಬಿಡುಗಡೆಯ ವಿದ್ಯಮಾನಗಳು ಕೆಲವು ಪ್ರುುಖ ಪ್ರಶ್ನೆಗಳನ್ನು ಎತ್ತುತ್ತವೆ.
ನ್ಯಾಯಾಲಯಗಳ ಆದೇಶಗಳನ್ನೂ, ನ್ಯಾಯಾಧೀಶರ ಆಕ್ಷೇಪಾರ್ಹ ಧೋರಣೆಗಳನ್ನೂ ನಾಗರಿಕರು ವಿಮರ್ಶಿಸಬಾರದೆ? ವಿಮರ್ಶೆಗಳನ್ನು ಮತ್ತು ಸಕಾರಣ ಟೀಕೆಗಳನ್ನು ನ್ಯಾಯಾಂಗವು ನಿಂದನೆಯೆಂದು ಭಾವಿಸಬಹುದೇ? ನ್ಯಾಯಾಲಯಗಳು ಪ್ರಶ್ನಾತೀತವೆೀ? ನ್ಯಾಯಾಧೀಶರು ವಿಮರ್ಶಾತೀತರೇ?
ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಮುನ್ನ ಈ ಎಲ್ಲಾ ಪ್ರಕರಣಗಳಿಗೆ ಕಾರಣವಾದ ಚೇತನ್ ಅವರ ಟ್ವೀಟ್ ಮತ್ತು ಅದು ಎತಿ್ತದ ಪ್ರಶ್ನೆಗಳನ್ನು ಗಮನಿಸೋಣ.
ನ್ಯಾಯಾಧೀಶರ ಟಿಪ್ಪಣಿ ಖಂಡಿಸಿ ಬಹಿರಂಗ ಪತ್ರಗಳು ಮತ್ತು ಚೇತನ್ ಅವರ ಟ್ವೀಟ್
2020ರ ಜೂನ್ 22ರಂದು ಕರ್ನಾಟಕದ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿ ಕೃಷ್ಣ ಶ್ರೀಪಾದ ದೀಕ್ಷಿತ್ ಅವರು ಮಹಿಳೆಯೊಬ್ಬಳನ್ನು ಮದುವೆಯಾಗುವ ಆಸೆ ತೋರಿಸಿ ಬಲಾತ್ಕಾರ ಮಾಡಿದ ಆರೋಪ ಹೊತ್ತಿದ್ದ ರಾಕೇಶ್ ಎಂಬ ವ್ಯಕ್ತಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದರು. ಆಷ್ಟೇ ಆಗಿದ್ದರೆ ಅದು ವಿವಾದವಾಗುತ್ತಿರಲಿಲ್ಲ. ದೂರುದಾರ ಮಹಿಳೆಯು ಬಲಾತ್ಕಾರಕ್ಕೆ ಗುರಿಯಾದ ನಂತರವೂ ಆರೋಪಿಯ ಜೊತೆ ಬೆಳಗಾಗುವವರೆಗೆ ಉಳಿದುಕೊಂಡಿದ್ದು 'ಭಾರತೀಯ ನಾರಿ'ಯ ನಡವಳಿಕೆಗೆ ತಕ್ಕುದಾಗಿರಲಿಲ್ಲ ಎಂಬ ಟಿಪ್ಪಣಿಯನ್ನು ನ್ಯಾಯಾಧೀಶ ದೀಕ್ಷಿತ್ ಅವರು ಮಾಡಿದ್ದಲ್ಲದೆ ಮೇಲ್ನೋಟಕ್ಕೆ ಅಪರಾಧವು ಸಂಭವಿಸಿರಲಾರದು ಎಂಬ ತೀರ್ಮಾನಕ್ಕೆ ಬರಲು ಅದನ್ನೂ ಒಂದು ಕಾರಣವಾಗಿ ಬಳಸಿಕೊಂಡಿದ್ದರು.
ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುವಂತೆ ನ್ಯಾಯಾದೇಶದಲ್ಲಿ ವ್ಯಕ್ತವಾಗಿದ್ದ 'ಭಾರತೀಯ ನಾರಿಗೆ ತಕ್ಕುದಾದ ನಡವಳಿಕೆ' ಎಂಬ ಗ್ರಹಿಕೆ ನ್ಯಾಯಾಧೀಶರಾದ ದೀಕ್ಷಿತರ ವ್ಯಕ್ತಿಗತ ತಿಳಿವಳಿಕೆಯೇ ವಿನಾ ನಮ್ಮ ಸಂವಿಧಾನದಲ್ಲಿರುವ ತಿಳಿವಳಿಕೆಯಾಗಿರಲಿಲ್ಲ.
ಸುಪ್ರೀಂಕೋರ್ಟಿನ ನ್ಯಾಯಮೂರ್ತಿ ವಿ. ಆರ್. ಕೃಷ್ಣ ಅಯ್ಯರ್ ಅವರು ಸ್ಪಷ್ಟವಾಗಿ ಹೇಳಿರುವಂತೆ ಸ್ವತಂತ್ರ ನ್ಯಾಯಾಂಗವೆಂದರೆ ಕೇವಲ ಸರಕಾರಗಳಿಂದ ಸ್ವತಂತ್ರವಾಗಿರುವುದು ಮಾತ್ರವಲ್ಲ. ನ್ಯಾಯಾಧೀಶರು ತಮ್ಮ ವೈಯಕ್ತಿಕ ಅಭಿಪ್ರಾಯ ಹಾಗೂ ಧೋರಣೆಗಳಿಂದಲೂ ಸ್ವತಂತ್ರವಾಗಿರಬೇಕು. ತಮ್ಮ ನ್ಯಾಯನಿರ್ವಹಣೆಯ ಪ್ರಕ್ರಿಯೆಯಲ್ಲಿ ತಮ್ಮ ವೈಯಕ್ತಿಕ ಪೂರ್ವಗ್ರಹಗಳು ಮಧ್ಯಪ್ರವೇಶಿಸದಂತೆ ನೋಡಿಕೊಳ್ಳುವುದೂ ಕೂಡ ಸ್ವತಂತ್ರ ನ್ಯಾಯಾಂಗದ ಹಾಗೂ ನ್ಯಾಯಾಧೀಶರ ಸಾಂವಿಧಾನಿಕ ಕರ್ತವ್ಯ ಮತ್ತು ಜವಾಬ್ದಾರಿ. ಅದರಲ್ಲೂ ಈ ಪ್ರಕರಣದಲ್ಲಿ ನ್ಯಾಯಾಧೀಶ ದೀಕ್ಷಿತ್ ಅವರ ಅಭಿಪ್ರಾಯ ಈ ದೇಶದಲ್ಲಿ ಹೆಣ್ಣು ಹೇಗೆ ಬದುಕಬೇಕು, ಹೇಗೆ ನಡೆದುಕೊಳ್ಳಬೇಕು, ತನಗೆ ಅನ್ಯಾಯವಾದಾಗಲೂ ಹೇಗೆ ನಿರ್ದಿಷ್ಟವಾಗಿ ವರ್ತಿಸಲೇಬೇಕೆಂಬ ಬಗ್ಗೆ ಸಂವಿಧಾನಾತ್ಮಕ ಮೌಲ್ಯಗಳಿಗೆ ತದ್ವಿರುದ್ಧವಾದ ಪುರುಷಾಧಿಪತ್ಯದ ಪೂರ್ವಗ್ರಹಗಳನ್ನೇ ವ್ಯಕ್ತಪಡಿಸುತ್ತಿತ್ತು ಮತ್ತು ಅದಕ್ಕೆ ನ್ಯಾಯಾಂಗದ ಮಾನ್ಯತೆಯನ್ನು ಒದಗಿಸುತ್ತಿತ್ತು. ಆದ್ದರಿಂದ 2020ರ ಜೂನ್‌ನಲ್ಲೇ ಈ ರಾಜ್ಯದ ಹಾಗೂ ದೇಶದ ಸುಮಾರು 17 ಮಹಿಳಾ ಹಾಗೂ ಮಾನವ ಹಕ್ಕುಗಳ ಸಂಘಟನೆಗಳು ಮತ್ತು 22 ಗಣ್ಯ ನಾಗರಿಕರು ನ್ಯಾಯಮೂರ್ತಿ ದೀಕ್ಷಿತರ ಈ ಪುರುಷಾಧಿಪತ್ಯ ಗ್ರಹಿಕೆಯನ್ನೂ, ಬಲಾತ್ಕಾರ ಪ್ರಕರಣಗಳಲ್ಲಿ ಬಲಿಯಾದವರನ್ನೇ ಬೇಟೆಯಾಡುವ ಧೋರಣೆಗಳನ್ನು ತೀವ್ರವಾಗಿ ಖಂಡಿಸಿ ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಿಗೆ ಒಂದು ಬಹಿರಂಗ ಪತ್ರವನ್ನು ಬರೆದಿದ್ದರು. ಆ ಪತ್ರದ ಪೂರ್ಣ ಪಾಠವನ್ನು ಆಸಕ್ತರು ಈ ವೆಬ್ ವಿಳಾಸದಲ್ಲಿ ಓದಬಹುದು:
https://www.livelaw.in/pdf_upload/pdf_upload-377073.pdf
ಅದೇ ಸಂದರ್ಭದಲ್ಲೇ ಚೇತನ್ ಕೂಡಾ ಟ್ವೀಟ್ ಮಾಡಿ ಆ ಬಹಿರಂಗ ಪತ್ರದಲ್ಲಿ ಮಾಡಿರುವಂತಹ ವಿಮರ್ಶೆಯನ್ನೇ ಮಾಡಿದ್ದರು.
ಆನಂತರ ಸುಪ್ರೀಂ ಕೋರ್ಟಿನ ಹಿರಿಯ ವಕೀಲೆ ಅಪರ್ಣಾ ಭಟ್ ಅವರು ದೀಕ್ಷಿತ್ ಅವರ ಈ ಟ್ವೀಟಿನ ಬಗ್ಗೆ ಸುಪ್ರೀಂ ಕೋರ್ಟಿನ ಆಗಿನ ಮುಖ್ಯ ನ್ಯಾಯಾಧೀಶ ಬೊಬ್ಡೆ ಮತ್ತು ಇತರ ಮಹಿಳಾ ನ್ಯಾಯಾಧೀಶರನ್ನುದ್ದೇಶಿಸಿ ಒಂದು ಬಹಿರಂಗ ಪತ್ರವನ್ನು ಬರೆದಿದ್ದರು. ಈ ಎಲ್ಲಾ ಬೆಳವಣಿಗೆಗಳ ನಂತರ ಕರ್ನಾಟಕ ಸರಕಾರವೇ ದೀಕ್ಷಿತ್ ಅವರ ಪೀಠದ ಮುಂದೆ ಅರ್ಜಿಯನ್ನು ಹಾಕಿ ವಿವಾದಕ್ಕೆ ಒಳಗಾಗಿರುವ ವಾಕ್ಯಗಳನ್ನು ತೆಗೆದುಹಾಕಲು ಕೋರಿತು. ಆ ನಂತರ 2020ರ ಜುಲೈ 4 ರಂದು ಹೈಕೋರ್ಟು ಈ ವಾಕ್ಯಗನ್ನು ಆದೇಶದಿಂದ ತೆಗೆದುಹಾಕಿತು.
ಹೀಗೆ ಚೇತನ್ ಅವರು ನ್ಯಾಯಮೂರ್ತಿ ದೀಕ್ಷಿತ್ ಅವರ ಧೋರಣೆಯ ಬಗ್ಗೆ ಮಾಡಿದ್ದ ಟ್ವೀಟಿನಲ್ಲಿದ್ದ ವಿಮರ್ಶೆಯನ್ನು ಹೈಕೋರ್ಟ್ ಪರೋಕ್ಷವಾಗಿ ಒಪ್ಪಿಕೊಂಡ ಮೇಲೆ ಅವರನ್ನು ಟ್ವೀಟಿನ ನೆಪದಲ್ಲಿ ಬಂಧಿಸುವ ಜರೂರತ್ತೇನಿತ್ತು?
ಪ್ರಾಯಶಃ ಆ ಕಾರಣಕ್ಕಾಗಿಯೇ ಅವರ ಮೇಲೆ ನ್ಯಾಯಾಂಗ ನಿಂದನೆಯ ಪ್ರಕರಣಕ್ಕೆ ಬದಲಾಗಿ ಎರಡು ಸಮುದಾಯಗಳ ನಡುವೆ ದ್ವೇಷ ಬಿತ್ತುವ ಆರೋಪವನ್ನು (ಐಪಿಸಿ 505, 505 (2)) ಹೊರಿಸಲಾಗಿದೆಯೇ?
ಟೀಕೆಗಳು-ವಿಮರ್ಶೆಗಳು ನ್ಯಾಯಾಂಗ ನಿಂದನೆಯೇ?
ನ್ಯಾಯಾಂಗ ನಿಂದನೆಯಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ನ್ಯಾಯಾಂಗ ನಿಂದನೆಯೆಂಬ ಎರಡು ರೀತಿಗಳಿವೆ. ಒಂದು ನ್ಯಾಯಾಂಗ ಕೊಟ್ಟ ಆದೇಶವನ್ನು ಸರಕಾರಗಳು ಪಾಲಿಸದಿದ್ದಾಗ ಅದು ಸಿವಿಲ್ ನ್ಯಾಯಾಂಗ ನಿಂದನೆಯಾಗುತ್ತದೆ. ನ್ಯಾಯಾಧೀಶರು ನಿಷ್ಪಕ್ಷಪಾತದಿಂದ ಕಾರ್ಯ ನಿರ್ವಹಣೆ ಮಾಡಲು ಉದ್ದೇಶಪೂರ್ವಕವಾಗಿ ತೊಡಕುಂಟುಮಾಡುವುದನ್ನು ಪ್ರಜಾತಂತ್ರ ದೇಶಗಳು ಸಾಮಾನ್ಯವಾಗಿ ಕ್ರಿಮಿನಲ್ ನ್ಯಾಯಾಂಗ ನಿಂದನೆಯೆಂದು ಭಾವಿಸುತ್ತವೆ. ಆದರೆ ಅವುಗಳಲ್ಲಿ ನ್ಯಾಯಾದೇಶದ ಟೀಕೆ, ವಿಮರ್ಶೆಗಳು ಸೇರುವುದಿಲ್ಲ. ಅದು ಹೆಚ್ಚೆಂದರೆ ನ್ಯಾಯಾಧೀಶರ ವ್ಯಕ್ತಿಗತ ತೇಜೋವಧೆಗಳನ್ನು ಮಾತ್ರ ಒಳಗೊಳ್ಳುತ್ತದೆ.
ಸುಮಾರು ಪ್ರಬುದ್ಧ ಪ್ರಜಾತಾಂತ್ರಿಕ ದೇಶಗಳು ತಮ್ಮ ಸಂವಿಧಾನಗಳಲ್ಲಿ ಕ್ರಿಮಿನಲ್ ನ್ಯಾಯಾಂಗ ನಿಂದನೆಯ ಅವಕಾಶಗಳನ್ನೇ ಕಲ್ಪಿಸಿಲ್ಲ. ಇನ್ನು ಕೆಲವು ಪ್ರಜಾತಂತ್ರಗಳು ನ್ಯಾಯಾಧೀಶರ ವ್ಯಕ್ತಿ ನಿಂದನೆಯನ್ನು, ನ್ಯಾಯಾದೇಶದ ಟೀಕೆಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿ ಪರಿಗಣಿಸುತ್ತವೆ.
ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು 'ಮುಠ್ಠಾಳ ಮುದುಕ' ನ್ಯಾಯಾಧೀಶರು
ನ್ಯಾಯಾಂಗವು ತಮ್ಮ ಮೇಲಿನ ಟೀಕೆಗಳನ್ನು ಹೇಗೆ ಪರಿಗಣಿಸಬೇಕು ಎನ್ನುವುದನ್ನು 1987ರಲ್ಲಿ ಬ್ರಿಟನ್‌ನಲ್ಲಿ ನಡೆದ (Spycatcher) ಪ್ರಕರಣವನ್ನು ಅಲ್ಲಿನ ಸಾಂವಿಧಾನಿಕ ಕೋರ್ಟಿನ ನ್ಯಾಯಾಧೀಶರು ನಿರ್ವಹಿಸಿದ ರಿೀತಿಯಿಂದ ಕಲಿಯುವುದು ಬಹಳಷ್ಟಿದೆ.
1987ರಲ್ಲಿ ಬ್ರಿಟನಿನ ಗೂಢಚರ್ಯೆ ಸಂಸ್ಥೆಯ ಮಾಜಿ ಉದ್ಯೋಗಿಯೊಬ್ಬ ತನ್ನ ಅನುಭವಗಳನ್ನು ('Spycatcher') ಎಂಬ ಪುಸ್ತಕ ಬರೆದು ಪ್ರಕಟಿಸಲು ಮುಂದಾದ. ಅದರಲ್ಲಿ ದೇಶದ ಭದ್ರತೆಗೆ ಸಂಬಂಧಪಟ್ಟ ವಿಷಯಗಳಿರುವುದರಿಂದ ಅದರ ಪ್ರಕಟನೆಗೆ ನಿಷೇಧ ಹೇರಬೇಕೆಂದು ಕೋರಿ ಸಾಂವಿಧಾನಿಕ ಕೋರ್ಟಿನ ಮುಂದೆ ಸರಕಾರವು ಅಹವಾಲು ಮಂಡಿಸಿತು. ಐದು ನ್ಯಾಯಾಧೀಶರ ಪೀಠದಲ್ಲಿ ಮೂವರು ನ್ಯಾಯಧೀಶರು ಸರಕಾರದ ವುನವಿಯ ಪರವಾಗಿ ತೀರ್ಪುಕೊಟ್ಟರು.
ಮರುದಿನ ಬ್ರಿಟನ್‌ನ 'ಡೈಲಿ ಮಿರರ್' ಎಂಬ ಪತ್ರಿಕೆ ತನ್ನ ಮುಖಪುಟದಲ್ಲಿ ಆ ಮೂವರು ನ್ಯಾಯಧೀಶರ ಚಿತ್ರಗಳನ್ನು ತಲೆಕೆಳಗಾಗಿ ಪ್ರಕಟಿಸಿದ್ದು ಮಾತ್ರವಲ್ಲದೆ 'You Old Fools'-ಮುಠ್ಠಾಳ ಮುದುಕರು- ಎಂಬ ಶೀರ್ಷಿಕೆಯಿಟ್ಟು ವಿಮರ್ಶಾ ಬರಹವನ್ನು ಪ್ರಕಟಿಸಿತ್ತು. ಇದನ್ನು ನ್ಯಾಯಾಂಗ ನಿಂದನೆಯೆಂದು ಪರಿಗಣಿಸಬೇಕೆಂದು ಆ ಮೂವರು ನ್ಯಾಯಾಧೀಶರಲ್ಲಿ ಹಿರಿಯರಾದ ಟೆಂಪಲಟನ್ ಅವರನ್ನು ಕೋರಿದಾಗ ಅವರು:
''ನಾವು ಮುದುಕರೆಂಬುದು ಸತ್ಯ ಸಂಗತಿಯೇ ಹೊರತು ನಿಂದನೆಯಲ್ಲ. ಹಾಗೆಯೇ ನಾವು ಮುಠ್ಠಾಳರೆಂಬುದು ಅವರ ಅಭಿಪ್ರಾಯ. ಅವರ ಅಭಿಪ್ರಾಯ ನನ್ನ ನ್ಯಾಯ ನಿರ್ವಹಣೆಗೆ ಅಡ್ಡಿ ಬಂದಿಲ್ಲವಾದ್ದರಿಂದ ಅದೂ ನ್ಯಾಯಾಂಗ ನಿಂದನೆಯಲ್ಲ'' ಎಂದು ಹೇಳಿಬಿಟ್ಟರು.
ನಂತರ 2016ರಲ್ಲಿ ಬ್ರಿಟನ್ ಐರೋಪ್ಯ ಒಕ್ಕೂಟದಿಂದ ಹೊರಬರಲು ನಡೆಸಬೇಕೆಂದಿದ್ದ ಬ್ರೆಕ್ಸಿಟ್ ಮತಗಣನೆಗೆ ಸಂಸತ್ತಿನ ಅನುಮೋದನೆ ಬೇಕೆಂದು ಸಾಂವಿಧಾನಿಕ ಕೋರ್ಟು ತೀರ್ಪು ಕೊಟ್ಟಾಗಲೂ 'ಡೈಲಿ ಮೇಲ್' ಎಂಬ ಪತ್ರಿಕೆ ಆ ನ್ಯಾಯಾಧೀಶರುಗಳನ್ನು ''Enemies Of The People''- ಜನತೆಯ ಶತ್ರುಗಳು- ಎಂದು ಟೀಕಿಸಿತು. ಆಗಲೂ ಬ್ರಿಟನ್‌ನ ನ್ಯಾಯಾಲಯಗಳು ಅದನ್ನು ನಿಂದನೆ ಎಂದು ಪರಿಗಣಿಸದೆ ಅಭಿವ್ಯಕ್ತಿ ಸ್ವಾತಂತ್ರ ಎಂದು ಪರಿಗಣಿಸಿತು.
ಭಾರತದ ನ್ಯಾಯಾಲಯಗಳು- ಕೆಲವು ನಿಂದನೆಗೆ ಬೆಣ್ಣೆ, ಹಲವು ಟೀಕೆಗೆ ಸುಣ್ಣ ಭಾರತದ ಸಾಂವಿಧಾನಿಕ ನ್ಯಾಯಾಲಯಗಳು ತಮ್ಮ ಮೇಲಿನ ವಿಮರ್ಶೆಗಳ ಬಗ್ಗೆ ಒಟ್ಟಾರೆಯಾಗಿ ಸಂವೇದನೆಯನ್ನೇ ವ್ಯಕ್ತಪಡಿಸಿದ್ದರೂ ಕಳೆದ ಕೆಲವು ವರ್ಷಗಳಿಂದ ಕೆಲವು ನಿರ್ದಿಷ್ಟ ಧೋರಣೆಯ ಅಭಿಪ್ರಾಯಗಳ ಬಗ್ಗೆ ತಿರಸ್ಕಾರವನ್ನು, ಇನ್ನು ಕೆಲವು ಧೋರಣೆಯ ವಿಮರ್ಶೆಗಳ ಬಗ್ಗೆ ಒಲುಮೆಯನ್ನು ೂಢಿಸಿಕೊಂಡಂತೆ ಕಾಣುತ್ತದೆ.
ಉದಾಹರಣೆಗೆ 2012ರಲ್ಲಿ ಆಗ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿದ್ದ ಬಿಜೆಪಿಯ ಅರುಣ್ ಜೇಟ್ಲಿಯವರು ಸುಪ್ರೀಂ ಕೋರ್ಟಿನ ನ್ಯಾಯಾಧೀಶರ ಬಗ್ಗೆ ಟೀಕೆ ಮಾಡುತ್ತಾ:
''ಭಾರತದ ನ್ಯಾಯಾಧೀಶರುಗಳು ನಿವೃತ್ತಿಪೂರ್ವದಲ್ಲಿ ನೀಡುವ ಆದೇಶಗಳ ಮೇಲೆ ನಿವೃತ್ತಿಯ ನಂತರದ ಗಳಿಕೆಯ ಅವಕಾಶಗಳ ಲಾಲಸೆಯ ಪ್ರಭಾವವಿರುತ್ತದೆ'' ಎಂದು ನೇರವಾಗಿ ಭ್ರಷ್ಟಾಚಾರದ ಆರೋಪ ಮಾಡಿದ್ದರು.
ಅಷ್ಟು ಮಾತ್ರವಲ್ಲ:
''ಭಾರತದ ನ್ಯಾಯಾಧೀಶರುಗಳಲ್ಲಿ ಎರಡು ಬಗೆ. ಕೆಲವರಿಗೆ ಕಾನೂನು ಗೊತ್ತು. ಕೆಲವರಿಗೆ ಕಾನೂನು ಮಂತ್ರಿಗಳು ಗೊತ್ತು'' ಎಂದು ಅತ್ಯಂತ ನೇರವಾಗಿ ವಶೀಲಿಬಾಜಿಯ ಆರೋಪ ಹೊರಿಸಿದ್ದರು. ಅವರ ಮೇಲೆ ಯಾವ ನಿಂದನೆಯ ಮೊಕದ್ದಮೆಯೂ ದಾಖಲಾಗಲಿಲ್ಲ.
ಹಾಗೆಯೇ ದಿಲ್ಲಿ ಹೈಕೋರ್ಟ್‌ನ ನ್ಯಾಯ ನಿಷ್ಠ್ಠುರ ನ್ಯಾಯಮೂರ್ತಿ ಮುರಳೀಧರ್ ನೆನಪಿರಬೇಕಲ್ಲವೇ?
ದಿಲ್ಲಿ ಚುನಾವಣೆಯ ಸಂದರ್ಭದಲ್ಲಿ ಸಂಘಪರಿವಾರವು ದಿಲ್ಲಿ ಪೊಲೀಸರ ಸಂಪೂರ್ಣ ಸಹಕಾರ ಮತ್ತು ಸಹಯೋಗಗಳೊಂದಿಗೆ ಮುಸ್ಲಿಮರ ಮೇಲೆ ಭೀಕರ ಹಿಂಸಾಚಾರಗಳನ್ನು ನಡೆಸಿತ್ತು. ಅದಕ್ಕೆ ಕಾರಣವಾದ ಬಿಜೆಪಿಯ ನಾಯಕರ ಮೇಲೆ ಎಫ್‌ಐಆರ್ ಹಾಕಲು ಕೂಡ ದಿಲ್ಲಿ ಪೋಲೀಸರು ನಿರಾಕರಿಸಿದ್ದರು.
ಆಗ ದಿಲ್ಲಿ ಪೊಲೀಸರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಕೂಡಲೇ ಅವರ ಮೇಲೆ ಎಫ್‌ಐಆರ್ ದಾಖಲಿಸಬೇಕೆಂದ ು ಆದೇಶಿಸಿದ್ದು ನ್ಯಾಯಮೂರ್ತಿ ಮುರಳೀಧರ್ ಅವರು. ಆ ಅಪರಾಧಕ್ಕಾಗಿ ಮೋದಿ ಸರಕಾರದ ಸಲಹೆ ಮೇರೆಗೆ ಅವರನ್ನು ರಾತ್ರೋರಾತ್ರಿ ಪಂಜಾಬ್-ಹರ್ಯಾಣ ಹೈೋರ್ಟಿಗೆ ವರ್ಗಾವಣೆ ಮಾಡಲಾಯಿತು.
ಹಾಗಂತ, ಅವರು ಕಾಂಗ್ರೆಸ್ ಒಲವಿದ್ದವರೇನಲ್ಲ. ಸಿಖ್ ಹತ್ಯಾಕಾಂಡದಲ್ಲಿ ಕಾಂಗ್ರೆಸ್ ಮುಖಂಡ ಸಜ್ಜನ್ ಕುಮಾರ್‌ಗೆ ಕಠಿಣ ಶಿಕ್ಷೆಯನ್ನು ವಿಧಿಸಿದ್ದು ಕೂಡ ಇದೇ ನ್ಯಾಯಮೂರ್ತಿಗಳೇ... ತೃತೀಯ ಲಿಂಗಿಗಳ ಹಕ್ಕುಗಳನ್ನು ಎತ್ತಿಹಿಡಿದವರು ಹಾಗೂ ಮುಖ್ಯ ನ್ಯಾಯಮೂರ್ತಿಗಳ ಕಚೇರಿಯು ಆರ್‌ಟಿಐ ಅಡಿ ತರಬೇಕೆಂದು ಆದೇಶಿಸಿದವರು, ಪಂಜಾಬ್ ಹೈಕೋರ್ಟಿನಲ್ಲಿ ವಕೀಲರು ತಮ್ಮನ್ನು ''ಮೈ ಲಾರ್ಡ್'' ಎಂದು ಸಂಬೋಧಿಸಬಾರದೆಂದು ವಿನಂತಿ ಮಾಡಿ ನ್ಯಾಯಾಂಗದಲ್ಲಿ ಮುಂದುವರಿದಿದ್ದ ವಸಾಹತುಶಾಹಿ ಪರಂಪರೆಯನ್ನು ನಿಲ್ಲಿಸಿದವರು....ಇದೇ ನ್ಯಾಯಮೂರ್ತಿಗಳೇ.
ಇಂತಹ ನ್ಯಾಯನಿಷ್ಠುರ ನ್ಯಾಯಮೂರ್ತಿಯ ಮೇಲೆ- ಸಂಘಪರಿವಾರದ ಥಿಂಕ್ ಟ್ಯಾಂಕ್‌ನ ಸದಸ್ಯ ಹಾಗೂ 'ತುಘಲಕ್' ಪತ್ರಿಕೆ ಸಂಪಾದಕ ಹಾಗೂ ಮೋದಿ ಸರಕಾರ ಬಂದಮೇಲೆ ಆರ್‌ಬಿಐನ ನಿರ್ದೇಶಕನಾಗಿಯೂ ನೇಮಕವಾಗಿರುವ- ಗುರುಸ್ವಾಮಿಯವರು ''ನ್ಯಾಯಮೂರ್ತಿ ಮುರಳೀಧರ ಅವರು ದೇಶದ್ರೋಹಿ ಶಕ್ತಿಗಳ ಪರವಾಗಿರುವವರು'' ಎಂಬರ್ಥದ ಟ್ವೀಟ್ ಮಾಡಿದ್ದರು. ಅದಕ್ಕೂ ಮುಂಚೆ ಪಿ. ಚಿದಂಬರಂ ಅವರ ಮಗ ಕಾರ್ತಿ ಚಿದಂಬಂರಂ ಅವರ ಜಾಮೀನು ಅರ್ಜಿಯನ್ನು ಪುರಸ್ಕರಿಸಿದ್ದಕ್ಕೆ ''ನ್ಯಾಯಮೂರ್ತಿ ಮುರಳೀಧರ್ ಅವರು ಚಿದಂಬರಂ ಅವರ ಬಳಿ ಜೂನಿಯರ್ ಆಗಿ ಕೆಲಸ ಮಾಡಿದ್ದರೇ?'' ಎಂಬರ್ಥದ ದುರುದ್ದೇಶಪೂರ್ವಕ ಟ್ವೀಟ್ ಮಾಡಿದ್ದರು. ಆದರೆ ಈ ಎರಡೂ ಪ್ರಕರಣಗಳಲ್ಲೂ ಅವರ ಮೇಲೆ ಯಾವುದೇ ದೂರನ್ನು ಯಾರೂ ್ವಪ್ರೇರಣೆಯಿಂದ ದಾಖಲಿಸಿಕೊಳ್ಳಲಿಲ್ಲ.
ಬದಲಿಗೆ, ರಾಜಶೇಖರ ರಾವ್ ಎಂಬ ವಕೀಲರು ಹೈಕೋರ್ಟಿನಲ್ಲಿ ಈ ಬಗ್ಗೆ ದೂರು ದಾಖಲಿಸಿದ ನಂತರ ಗುರುಸ್ವಾಮಿಯವರಿಗೆ ನ್ಯಾಯಾಂಗ ನಿಂದನೆ ನೋಟಿಸ್ ನೀಡಲಾಯಿತು. ಗುರುಸ್ವಾಮಿಯವರು ಆ ನೋಟೀಸನ್ನು ಹಾಗೂ 'ನ್ಯಾಯಾಂಗ ನಿಂದನೆ'ಯನ್ನು ಶಿಕ್ಷಿಸುವ ಕ್ರಮವನ್ನು ಕೂಡ ಗೇಲಿ ಮಾಡುತ್ತಾ ಮತ್ತೊಂದು ಟ್ವೀಟ್ ಮಾಡಿದರು.
ಇಷ್ಟಾದರೂ, ಒಂದು ವರ್ಷಗಳ ಕಾಲ ದಿಲ್ಲಿ ಹೈಕೋರ್ಟ್ ಯಾವ ಕ್ರಮವನ್ನು ಕೈಗೊಳ್ಳಲಿಲ್ಲ.
ಒಂದು ವರ್ಷದ ನಂತರ ಗುರುಸ್ವಾಮಿಯವರು ತನ್ನ ಟ್ವೀಟಿನ ಬಗ್ಗೆ ಯಾವ ಪಶ್ಚಾತ್ತಾಪವನ್ನು ವ್ಯಕ್ತಪಡಿಸದಿದ್ದರೂ... ಕೇವಲ ಟ್ವೀಟನ್ನು ವಾಪಸ್ ತೆಗೆದುಕೊಳ್ಳಬೇಕೆಂಬ ಏಕೈಕ ಷರತ್ತಿನ ಮೇಲೆ ಅವರ ಮೇಲಿನ ನ್ಯಾಯಾಂಗ ನಿಂದನೆಯ ಕೇಸನ್ನು ಹೈಕೋರ್ಟ್ ರದ್ದುಮಾಡಿತು!! ಇನ್ನು ವಿವೇಕ್ ಅಗ್ನಿಹೋತ್ರಿ ಇನ್ನಿತರರ ಮೇಲೆ ತಾನೇ ಕೊಟ್ಟ ನೋಟಿಸ್ ಏನಾಯಿತೆಂದು ವಿಚಾರಿಸಲು ಸಹ ್ಯಾಯಾಲಯ ಇನ್ನೂ ಮನಸ್ಸು ಮಾಡಿಲ್ಲ.
ಮತ್ತೊಂದು ಕಣ್ಣಿಗೆ ಸುಣ್ಣ!
ಆದರೆ ಮತ್ತೊಂದೆಡೆ ಇದೇ ಕೋರ್ಟ್‌ಗಳು ಜನಹಿತದ ಉದ್ದೇಶದಿಂದ ನ್ಯಾಯಾದೇಶಗಳನ್ನು ಮತ್ತು ಅದರ ಭಾಗವಾಗಿ ನ್ಯಾಯಾಧೀಶರ ಧೋರಣೆಗಳನ್ನು ಸಕಾರಣವಾಗಿ ಮತ್ತು ತಾರ್ಕಿಕವಾಗಿ ವಿಮರ್ಶೆ ಮಾಡಿದ್ದಕ್ಕೆ ಶಿಕ್ಷೆಗೆ ಗುರಿಮಾಡುತ್ತಿದ್ದಾರೆ.
-ನರ್ಮದಾ ಡ್ಯಾಂ ಪ್ರಕರಣದಲ್ಲಿ ಸುಪ್ರೀಂ ಕೋರ್ಟಿನ ಆದೇಶ ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪೆನಿಗಳ ಪರವಾಗಿದೆ ಎಂದು ವಿಮರ್ಶೆ ಮಾಡಿದ್ದಕ್ಕೆ ಲೇಖಕಿ ಆರುಂಧತಿ ರಾಯ್ ಅವರಿಗೆ ಒಂದು ದಿನದ ಜೈಲು ಶಿಕ್ಷೆ ವಿಧಿಸಲಾಯಿತು.
- ಆಡಳಿತರೂಢ ಪಕ್ಷದ ಸದಸ್ಯರೊಬ್ಬರಿಂದ ದುಬಾರಿ ಕೊಡುಗೆಯನ್ನು ಸ್ವೀಕರಿಸಿ ಅಂದಿನ ಮುಖ್ಯನ್ಯಾಯಾಧೀಶ ಬೊಬ್ಡೆಯವರು ನ್ಯಾಯಾಂಗ ನಿಷ್ಪಕ್ಷಪಾತಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಟ್ವೀಟ್ ಮಾಡಿದ್ದಕ್ಕೆ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರಿಗೆ ಸುಪ್ರೀಂ ಕೋರ್ಟು ಒಂದು ರುಪಾಯಿ ದಂಡ ಅಥವಾ ಮೂರು ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿತ್ತು.
-ಇದೀಗ ನ್ಯಾಯಾಧೀಶರ ಪುರುಷಾಧಿಪತ್ಯದ ಪೂರ್ವಗ್ರಹಗಳನ್ನು ಟೀಕಿಸಿದ್ದಕ್ಕೆ ಚೇತನ್ ಅವರಿಗೆ ಈ ಶಿಕ್ಷೆ ಯುವರ್ ಲಾರ್ಡ್ ಶಿಪ್, ಕೋರ್ಟ್‌ಗಳು ನ್ಯಾಯಾಂಗ ನಿಂದನೆ ಹಾಗೂ ಒಟ್ಟಾರೆ ನ್ಯಾಯನಿರ್ವಹಣೆಯ ವಿಷಯಗಳಲ್ಲಿ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಹ್ಚುವಂತೆ ನಡೆದುಕೊಳ್ಳುತ್ತಿವೆಯೇ?
ಬೆಣ್ಣೆ ಹಚ್ಚಿಸಿಕೊಂಡಿರುವ ಕಣ್ಣುಗಳ ಬಣ್ಣ ಕೇಸರಿಯಾಗಿಯೂ, ಸುಣ್ಣ ಬಳಿಸಿಕೊಳ್ಳುತ್ತಿರುವ ಕಣ್ಣುಗಳ ಬಣ್ಣ ಕೆಂಪು, ನೀಲಿ, ಹಸಿರಾಗಿರುವುದು ಕೇವಲ ಕಾಕತಾಳೀಯವೇ..?