ಉಕ್ರೇನ್ ನಲ್ಲಿದ್ದ ಕೊಡಗಿನ ಮೂವರು ವಿದ್ಯಾರ್ಥಿಗಳು ವಾಪಸ್: 11 ವಿದ್ಯಾರ್ಥಿಗಳು ಅತಂತ್ರ
ತಾಯಿಯೊಂದಿಗೆ ವಿದ್ಯಾರ್ಥಿನಿ ಎಂ.ಜಿ. ಮದೀಹ
ಮಡಿಕೇರಿ ಮಾ.2 : ರಷ್ಯಾ-ಉಕ್ರೇನ್ ನಡುವೆ ಯುದ್ಧ ಪ್ರಾರಂಭವಾಗಿ 6 ದಿನಗಳೇ ಕಳೆದಿದ್ದು, ಜಾಗತಿಕ ಎಚ್ಚರಿಕೆಯ ನಡುವೆಯೂ ಪರಿಸ್ಥಿತಿ ಉದ್ವಿಗ್ನವಾಗುತ್ತಿದೆ. ಈ ನಡುವೆಯೇ ಉಕ್ರೇನ್ನ ವಿವಿಧ ಪ್ರದೇಶಗಳಿಂದ ಭಾರತ ಸರಕಾರ ‘ಆಪರೇಷನ್ ಗಂಗಾ’ ಹೆಸರಲ್ಲಿ ಭಾರತೀಯರನ್ನು ಏರ್ಲಿಫ್ಟ್ ಮಾಡುತ್ತಿದೆ. ಉಕ್ರೇನ್ನಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿರುವ ಕೊಡಗು ಜಿಲ್ಲೆಯ ಒಟ್ಟು 14 ವಿದ್ಯಾರ್ಥಿಗಳಲ್ಲಿ ಈವರೆಗೆ 3 ಮಂದಿಯನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿದೆ. ಗೋಣಿಕೊಪ್ಪದ ಮದೀಹ ಎಂಬಾಕೆ ಸುರಕ್ಷಿತವಾಗಿ ತವರುಮನೆ ಸೇರಿದ್ದಾಳೆ.
ವಿರಾಜಪೇಟೆ ತಾಲ್ಲೂಕಿನ ಗೋಣಿಕೊಪ್ಪಲುವಿನ ನಿವಾಸಿ ಗಫೂರ್ ಎಂಬವರ ಪುತ್ರಿ ಎಂ.ಜಿ. ಮದೀಹ(22) ಎಂಬವರು ಕೂಡ ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ಉಕ್ರೇನ್ಗೆ ತೆರಳಿದ್ದರು. ರಶ್ಯಾ -ಉಕ್ರೇನ್ ಯುದ್ದ ಪ್ರಾರಂಭವಾದ ಬಳಿಕ ಭಾರತ ಸರಕಾರ ಏರ್ ಲಿಫ್ಟ್ ಮೂಲಕ ಭಾರತೀಯರನ್ನು ರಕ್ಷಿಸುವ ಕಾರ್ಯಾಚರಣೆ ಆರಂಭಿಸಿತು. ಮಾ.1ರಂದು ನಡೆಸಿದ ಏರ್ಲಿಫ್ಟ್ನಲ್ಲಿ ಮದೀಹ ಅವರನ್ನು ಕೂಡ ದೆಹಲಿಗೆ ಕರೆತರಲಾಗಿತ್ತು. ಬಳಿಕ ಏರ್ ಏಷ್ಯಾ ವಿಮಾನದ ಮೂಲಕ ಮದೀಹ ಬೆಂಗಳೂರು ತಲುಪಿದ್ದು, ನಂತರ ತನ್ನ ತವರು ಮನೆಗೆ ಆಗಮಿಸಿದ್ದಾರೆ. ಈ ಸಂದರ್ಭ ಆಕೆಯ ಪೋಷಕರು ಕಂಬನಿ ಮಿಡಿಯುತ್ತಾ ಆಕೆಯನ್ನು ಬರಮಾಡಿಕೊಂಡರು.
ಯುದ್ಧ ಪ್ರದೇಶದಿಂದ ರಕ್ಷಣೆಯ ಬಳಿಕ ನನಗೆ ಮರು ಜನ್ಮ ಸಿಕ್ಕಿದಂತಾಗಿದೆ. ಇದಕ್ಕಾಗಿ ಭಾರತ ಸರಕಾರ ಮತ್ತು ಭಾರತೀಯ ರಾಯಭಾರ ಕಚೇರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಮದೀಹ ಹೇಳಿದರು. ಕನ್ನಡಿಗ ವಿದ್ಯಾರ್ಥಿನಿ ನವೀನ್ ಸಾವು ತುಂಬಾ ಬೇಸರ ತಂದಿದೆ ಎಂದು ವಿಷಾದಿಸಿದ ಮದೀಹ, ಉಳಿದ ವಿದ್ಯಾರ್ಥಿಗಳನ್ನು ಸರ್ಕಾರ ಆದಷ್ಟು ಬೇಗ ರಕ್ಷಿಸಿ ಕರೆತರಲಿ ಎಂದು ಆಶಿಸಿದರು.
ಮದೀಹ ತಾಯಿ ಮಾತನಾಡಿ, ಉಕ್ರೇನ್ ಯುದ್ಧವನ್ನು ನೋಡುವಾಗ ತುಂಬಾ ಭಯವಾಗುತ್ತಿತ್ತು. ಇದೀಗ ನನ್ನ ಮಗಳು ಮನೆಗೆ ತಲುಪಿದ್ದು ತುಂಬಾ ಸಂತೋಷವಾಗಿದೆ. ಉಕ್ರೇನ್ನಲ್ಲಿ ಬೇರೆ ಮಕ್ಕಳು ಕೂಡ ಇದ್ದಾರೆ. ಅದರ ಬಗ್ಗೆ ಸುದ್ದಿ ಮಾಧ್ಯಮಗಳಲ್ಲಿ ನೋಡುವಾಗ ದುಃಖವಾಗುತ್ತದೆ. ನನ್ನ ಮಗಳನ್ನು ಕರೆತಂದಂತೆ ಆ ಮಕ್ಕಳನ್ನೂ ಕರೆತರಬೇಕು ಎಂದು ಮನವಿ ಮಾಡಿದರು.
ದೆಹಲಿಗೆ ಬಂದ ಇನ್ನಿಬ್ಬರು
ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ಉಕ್ರೇನ್ಗೆ ತೆರಳಿದ್ದ ಕೊಡಗು ಜಿಲ್ಲೆಯ ಪೊನ್ನಂಪೇಟೆಯ ವಿ.ಜೆ.ಶಿನ್ಯಾ(22) ಮತ್ತು ವಿರಾಜಪೇಟೆ ತಾಲ್ಲೂಕಿನ ಗೋಣಿಕೊಪ್ಪದ ಕಾವೇರಿ ಬಡಾವಣೆ ನಿವಾಸಿ ಆಲಿಷಾ(22) ಎಂಬವರನ್ನು ಏರ್ಲಿಫ್ಟ್ ಮೂಲಕ ದೆಹಲಿಗೆ ಕರೆ ತರಲಾಗಿದೆ. ಈ ವಿದ್ಯಾರ್ಥಿಗಳು ಇನ್ನಷ್ಟೇ ತವರು ಮನೆ ಸೇರಬೇಕಿದೆ ಎಂದು ತಿಳಿದು ಬಂದಿದೆ. ಆಲಿಶಾ ಉಕ್ರೇನ್-ಪೋಲೆಂಡ್ ಗಡಿಯ ಇವಾನೋ ಫ್ರಾನ್ಸಿಸ್ಕೋ ನಗರದ ಫ್ಲಾಟ್ ಒಂದರಲ್ಲಿ ನೆಲೆಸಿದ್ದರು.
ಈ ನಡುವೆ ದೆಹಲಿ ಏರ್ ಪೋರ್ಟ್ನಿಂದ ವಿಡಿಯೋ ಮೂಲಕ ಸಂದೇಶ ನೀಡಿರುವ ವಿ.ಜೆ.ಶಿನ್ಯಾ, ಉಕ್ರೇನ್ನಿಂದ ಹಂಗೇರಿಯಾ ಮೂಲಕ ಗಡಿ ಪ್ರವೇಶಿಸಲು ಒಂದು ದಿನವೇ ಬೇಕಾಯಿತು. ಅಲ್ಲಿನ ರಾಯಭಾರಿ ಕಚೇರಿ ಅಧಿಕಾರಿಗಳು ತುಂಬಾ ಸಹಾಯ ಮಾಡಿದ್ದಾರೆ. ಒಟ್ಟು 300 ಮಂದಿ ವಿದ್ಯಾರ್ಥಿಗಳು ದೆಹಲಿಗೆ ತಲುಪಿದ್ದೇವೆ. ಈ ಪೈಕಿ ಕರ್ನಾಟಕದ 7 ಮಂದಿ ವಿದ್ಯಾರ್ಥಿಗಳಿದ್ದು, ಸರಕಾರ ಊಟದ ವ್ಯವಸ್ಥೆ ಮಾಡಿದೆ. ದೆಹಲಿಯಿಂದ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ. ಮಾತ್ರವಲ್ಲದೇ ಕೀವ್, ಕಾರ್ಕೀವ್ ಕಡೆಗಳಲ್ಲಿ ಮತ್ತಷ್ಟು ವಿದ್ಯಾರ್ಥಿಗಳು ಸಿಲುಕಿದ್ದು, ಅಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಅಲ್ಲಿ ಸಿಲುಕಿರುವ ವಿದ್ಯಾರ್ಥಿಗಳಿಗೆ ಪ್ರಯಾಣಕ್ಕೆ ವ್ಯವಸ್ಥೆ ಕಲ್ಪಿಸಬೇಕು ಎಂದು ಭಾರತ ಸರಕಾರ ಮತ್ತು ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳನ್ನು ಮನವಿ ಮಾಡಿದ್ದಾರೆ.
ರಕ್ಷಣೆಗಾಗಿ ಮೊರೆ
ಕುಶಾಲನಗರ ಕುಡ್ಲೂರುವಿನ ಐಮುಡಿಯಂಡ ಅಕ್ಷಿತಾ ಅಕ್ಕಮ್ಮ, ವಿರಾಜಪೇಟೆ ತಾಲೂಕು ಅಮ್ಮತ್ತಿ ಹೊಸೂರುವಿನ ಎಂ.ಪಿ.ನಿರ್ಮಲ, ಬೇಟೋಳಿಯ ಶ್ರೇಯಾ ಪ್ರದೀಪ್, ಹೆಗ್ಗಳ ಗ್ರಾಮದ ಡಯಾನ ಮೇರಿ, ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆಯ ಅರ್ಜುನ್ ವಸಂತ್, ವಿರಾಜಪೇಟೆಯ ಕಾಂತರಾಜ್ ತೇಜಸ್ವಿನಿ, ಗೋಣಿಕೊಪ್ಪದ ಬಲ್ಲಚಂಡ ಶೀತಲ್, ವಿರಾಜಪೇಟೆ ಆರ್ಜಿ ಗ್ರಾಮದ ನಿವಾಸಿ ಶಾರುಖ್, ಕುಶಾಲನಗರ ಮುಳ್ಳುಸೋಗೆಯ ಬಿ.ಕೆ.ಲಿಖಿತ್, ಕುಶಾಲನಗರ ಕೂಡ್ಲೂರು ನಿವಾಸಿ ಚಂದನ್ ಗೌಡ ಹಾಗೂ ಬಿ.ವಿ.ಅಶ್ವಿನ್ ಕುಮಾರ್ ಎಂಬುವವರುಗಳು ಉಕ್ರೇನ್ನಲ್ಲಿ ಉಳಿದುಕೊಂಡಿದ್ದು, ಅವರನ್ನು ರಕ್ಷಿಸುವಂತೆ ಪೋಷಕರು ಮನವಿ ಮಾಡಿದ್ದಾರೆ.