ಬಾಹು‘ಬಲಿ’ಗಳ ಪೂರ್ವಾಂಚಲ
ಹಿಂದುತ್ವದ ರಾಜಕಾರಣಕ್ಕೆ ಸಂಬಂಧಿಸಿದಂತೆ ಆದಿತ್ಯನಾಥ್, ನರೇಂದ್ರ ಮೋದಿಯವರೇ ಗುರುಗಳು. ಗುಜರಾತ್ ಮಾದರಿಯಲ್ಲಿಯೇ ಗೋರಖ್‌ಪುರದಲ್ಲಿ ಹಿಂದುತ್ವದ ಪ್ರಯೋಗಶಾಲೆಯನ್ನು ಅವರು 20 ವರ್ಷಗಳ ಹಿಂದೆಯೇ ಪ್ರಾರಂಭಿಸಿದ್ದರು. ಮೋದಿಯವರಂತೆಯೇ ಮುಸ್ಲಿಮರ ವಿರುದ್ಧ ದ್ವೇಷದ ಬೆಂಕಿ ಉಗುಳಬಲ್ಲರು, ಮರುಗಳಿಗೆಯಲ್ಲಿ ಭಾವಾವೇಶದ ಅವತಾರ ಎತ್ತಿ ಗಳಗಳನೇ ಅತ್ತು ಬಿಡಲೂ ಬಲ್ಲರು. ರಾಜ್ಯ ಸರಕಾರದ ಪೊಲೀಸರು ತನ್ನ ಮೇಲೆ ದೌರ್ಜನ್ಯವೆಸುಗುತ್ತಿದ್ದಾರೆ ಎಂದು ಹಿಂದೊಮ್ಮೆ ಲೋಕಸಭೆಯಲ್ಲಿ ಕಣ್ಣೀರು ಸುರಿಸಿದಾಗ ಕಮ್ಯುನಿಸ್ಟ್ ನಾಯಕರೇ ಅವರ ಬಳಿಹೋಗಿ ಸಾಂತ್ವನ ಹೇಳಿದ್ದರು.
‘ಪೂರ್ವಾಂಚಲ’ ಎಂದು ಕರೆಯಲಾಗುವ ಪೂರ್ವ ಉತ್ತರಪ್ರದೇಶದಲ್ಲಿ ನಡೆಯಲಿರುವ ಕೊನೆಯ ಎರಡು ಹಂತಗಳ ಮತದಾನ ಭಾರತೀಯ ಜನತಾ ಪಕ್ಷಕ್ಕೆ ಮಾತ್ರವಲ್ಲ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೂ ಅಗ್ನಿ ಪರೀಕ್ಷೆಯನ್ನು ತಂದೊಡ್ಡಿದೆ. ನಾಳೆ ಆರನೇ ಹಂತದ ಮತದಾನ ನಡೆಯಲಿರುವ 57 ಕ್ಷೇತ್ರಗಳಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ಪರ್ಧಿಸುತ್ತಿರುವ ಗೋರಖ್‌ಪುರ ಕ್ಷೇತ್ರವೂ ಸೇರಿರುವುದು ದೇಶದ ಗಮನವೆಲ್ಲ ಆ ಕಡೆ ಹರಿಯುವಂತೆ ಮಾಡಿದೆ. ರಾಜ್ಯದಲ್ಲಿ ಬಿಜೆಪಿ ಗೆದ್ದರೂ, ಪೂರ್ವಾಂಚಲದಲ್ಲಿ ಪಕ್ಷಕ್ಕೆ ಹಿನ್ನಡೆಯಾದರೆ ‘‘ಬಾಬಾಜಿ’’ ಮುಖ್ಯಮಂತ್ರಿಯಾಗಿ ಪುನರಾಯ್ಕೆಯಾಗುವ ಹಾದಿಯಲ್ಲಿ ಹಲವಾರು ಕಂಟಕಗಳನ್ನು ಎದುರಿಸಬೇಕಾಗಬಹುದು. ಗೋಮತಿ ನದಿ ದಾಟಿ ಈಶಾನ್ಯಕ್ಕೆ ಸಾಗುತ್ತಿದ್ದಂತೆ ತೆರೆದುಕೊಳ್ಳುವ ಈ ಪೂರ್ವಾಂಚಲ ಉತ್ತರ ಪ್ರದೇಶದ ಅಪರಾಧ ಜಗತ್ತಿನ ರಾಜಧಾನಿ. ಗೋರಖ್‌ಪುರ, ವಾರಣಾಸಿ, ಮಿರ್ಜಾಪುರ, ಗಾಜಿಪುರ, ಕುಶಿನಗರ ಸೇರಿದಂತೆ ಸುಮಾರು 25 ಜಿಲ್ಲೆಗಳನ್ನು ಪೂರ್ವಾಂಚಲ ಎಂದು ಕರೆಯಲಾಗುತ್ತಿದೆ. ಸುಮಾರು ಏಳು ಕೋಟಿ ಜನಸಂಖ್ಯೆ ಇರುವ ಈ ಪ್ರದೇಶದಲ್ಲಿ ಸುಮಾರು 104 ವಿಧಾನಸಭಾ ಕ್ಷೇತ್ರಗಳಿವೆ.
ಇತಿಹಾಸದ ಪರಿಚಯವುಳ್ಳವರು ಪೂರ್ವಾಂಚಲ ಎಂದು ಕರೆಯಲಾಗುವ ಈಗಿನ ಪೂರ್ವ ಉತ್ತರಪ್ರದೇಶದ ಜಿಲ್ಲೆಗಳನ್ನು ನೋಡಿದರೆ ಅದು ಶಾಪಗ್ರಸ್ತ ನಾಡಿನಂತೆ ಕಾಣಬಹುದು. ಬ್ರಿಟಿಷರ ವಿರುದ್ದ ಮೊದಲ ಸ್ವಾತಂತ್ರ್ಯ ಹೋರಾಟದ ಕಹಳೆ ಮೊಳಗಿಸಿದ ಮಂಗಲ ಪಾಂಡೆಯಿಂದ ಹಿಡಿದು ಚಿಂತಕ ರಾಹುಲ್ ಸಾಂಕೃತಾಯನರ ವರೆಗೆ ಅನೇಕಾನೇಕ ಹೋರಾಟಗಾರರು, ಚಿಂತಕರು, ಕಲಾವಿದರನ್ನು ಕೊಟ್ಟ ನೆಲ ಇದು. ಒಂದು ಕಾಲದಲ್ಲಿ ಕೃಷಿ, ಉದ್ಯಮ, ಕರಕುಶಲ ಕಲೆಗಳು ಉತ್ತುಂಗ ಸ್ಥಿತಿಯಲ್ಲಿದ್ದ ಈ ಪ್ರದೇಶ ಈಗ ಅಪರಾಧ ಜಗತ್ತಿನ ಬಾಹುಬಲಿಗಳ ನಾಡು.
‘‘ಪೂರ್ವದ ಮ್ಯಾಂಚೆಸ್ಟರ್’’ ಎಂಬ ಖ್ಯಾತಿಗಳೊಗಾಗಿದ್ದ ಗೋರಖ್‌ಪುರ ಬಟ್ಟೆ ಗಿರಣಿಗೆ ಈಗ ಬೀಗ ಬಿದ್ದಿದೆ, ವಿಶ್ವಪ್ರಸಿದ್ದ ಬನಾರಸ್ ಸೀರೆ ನೇಯುವ ನೇಕಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸಕ್ಕರೆ ಕಾರ್ಖಾನೆಗಳು ಒಂದೊಂದಾಗಿ ಮುಚ್ಚುತ್ತಿವೆ. ಕಾರ್ಪೆಟ್ ಉದ್ಯಮ ನಷ್ಟದ ಹಾದಿಯಲ್ಲಿವೆ. ನೀರಾವರಿ ಸೌಲಭ್ಯ ಇಲ್ಲದೆ ಕೃಷಿ ಭೂಮಿ ಬಂಜರಾಗುತ್ತಿದೆ. ಮಾಲಿನ್ಯದಿಂದಾಗಿ ಗಂಗಾನದಿ ವಿಷವಾಗುತ್ತಿದೆ.
ದೇಶಕ್ಕೆಲ್ಲ ಒಂದು ಕಾನೂನು ಎಂದಾದರೆ ಪೂರ್ವಾಂಚಲಕ್ಕೆ ಇನ್ನೊಂದು. ಈ ಕಾಡಿನ ಕಾನೂನನ್ನೇ ಅಲ್ಲಿನ ಮೂಲನಿವಾಸಿ ಯೋಗಿ ಆದಿತ್ಯನಾಥ್ ಕಳೆದ ಐದು ವರ್ಷಗಳಲ್ಲಿ ಇಡೀ ರಾಜ್ಯಕ್ಕೆ ವಿಸ್ತರಿಸಿದ್ದಾರೆ. ಇಲ್ಲಿ ಕೊಲೆ, ಸುಲಿಗೆ, ದೌರ್ಜನ್ಯ, ಅಪಹರಣ ಅಪರಾಧಗಳಲ್ಲ, ಅದು ನ್ಯಾಯದಾನ. ಈ ಪಾತಕಗಳನ್ನು ನಡೆಸುವವರು ಅಪರಾಧಿಗಳಲ್ಲ, ಅವರನ್ನು ಜನ ‘‘ಭಯ್ಯಾ’’ ‘‘ಭಾಯಿ’’, ‘‘ಬಾಹುಬಲಿ’’ಗಳೆಂದು ಕರೆಯುತ್ತಾರೆ. ಇಲ್ಲಿನ ಅಪರಾಧ ಜಗತ್ತು ರಾಜಕೀಯ ಭಾಷೆಯಲ್ಲಿ ಮಾತನಾಡುತ್ತದೆ, ರಾಜಕೀಯಕ್ಕೆ ಅಪರಾಧ ಜಗತ್ತಿನ ಭಾಷೆ ಅರ್ಥವಾಗುತ್ತದೆ. ಈ ಅನೈತಿಕ ಸಂಬಂಧ ಪ್ರಜಾಪ್ರಭುತ್ವವನ್ನು ಅಪಹಾಸ್ಯದ ಮಟ್ಟಕ್ಕೆ ತಂದು ನಿಲ್ಲಿಸಿದೆ.
ಸಾಮಾನ್ಯವಾಗಿ ಈ ಭಾಗದ ಚುನಾವಣೆಯಲ್ಲಿ ಪ್ರಸ್ತಾಪವಾಗುವ ಅಪರಾಧ ಜಗತ್ತಿನ ಜೊತೆಯಲ್ಲಿ ಈ ಬಾರಿ ಬ್ರಾಹ್ಮಣ-ಠಾಕೂರ್‌ಗಳ ನಡುವಿನ ಸಂಘರ್ಷವೂ ಹೆಚ್ಚು ಚರ್ಚೆಗೊಳಗಾಗುತ್ತಿದೆ. ಈ ಚರ್ಚೆಯ ಕೇಂದ್ರ ವ್ಯಕ್ತಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಎಂಬ ಠಾಕೂರ್ ನಾಯಕ. ಸಾಮಾನ್ಯವಾಗಿ ಬಿಜೆಪಿಯನ್ನು ಬ್ರಾಹ್ಮಣ-ಬನಿಯಾ ಪಾರ್ಟಿ ಎಂದು ಕರೆಯಲಾಗುತ್ತದೆ. ಆದರೆ ನಿಧಾನವಾಗಿ ಮೇಲು ಮಧ್ಯಮ ಜಾತಿಗಳು ಆ ಪಕ್ಷದ ಜೊತೆ ಸೇರಲಾರಂಭಿಸಿದ ನಂತರ ಪ್ರತಿಯೊಂದು ರಾಜ್ಯದಲ್ಲಿಯೂ ಪಕ್ಷದೊಳಗೆ ಒಳಸಂಘರ್ಷಗಳು ನಡೆಯುತ್ತಿವೆ. ಉದಾಹರಣೆಗೆ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಬ್ರಾಹ್ಮಣ-ಠಾಕೂರ್‌ಗಳ ನಡುವಿನ ತಿಕ್ಕಾಟ.
ಅಟಲ್ ಬಿಹಾರಿ ವಾಜಪೇಯಿ ಅವರು ಉತ್ತರಪ್ರದೇಶವನ್ನು ತನ್ನ ಚುನಾವಣಾ ರಾಜಕೀಯಕ್ಕಾಗಿ ಆಯ್ಕೆ ಮಾಡಿಕೊಂಡ ನಂತರ ಆ ಪಕ್ಷದ ಮೇಲೆ ಬ್ರಾಹ್ಮಣರ ಹಿಡಿತ ಬಲವಾಗುತ್ತಾ ಹೋಗಿತ್ತು. ಲಾಲ್‌ಜಿ ಟಂಡನ್, ಕಲ್ ರಾಜ್ ಮಿಶ್ರಾ ಮೊದಲಾದ ನಾಯಕರು ವಾಜಪೇಯಿಯವರ ಪ್ರಾಕ್ಸಿಗಳಾಗಿ ಲಕ್ನೋದಲ್ಲಿ ಕೆಲಸಮಾಡತೊಡಗಿದ್ದರು. ಲೋದ್ ನಾಯಕ ಕಲ್ಯಾಣ್ ಸಿಂಗ್ ಬ್ರಾಹ್ಮಣರ ಹಿಡಿತವನ್ನು ಪ್ರಶ್ನಿಸಿದ ಕಾರಣಕ್ಕೆ ಪಕ್ಷದಿಂದ ಉಚ್ಚಾಟನೆಗೊಳಗಾಗಬೇಕಾಯಿತು. ಇದನ್ನು ಬಹುಬೇಗ ಅರ್ಥಮಾಡಿಕೊಂಡ ಠಾಕೂರ್ ನಾಯಕ ರಾಜ್‌ನಾಥ್‌ಸಿಂಗ್ ಹೊಂದಾಣಿಕೆಯ ರಾಜಕೀಯ ಮಾಡಿಕೊಂಡು ರಾಜಕೀಯ ಅಸ್ತಿತ್ವ ಉಳಿಸಿಕೊಂಡಿದ್ದಾರೆ.
ಆದರೆ ವಾಜಪೇಯಿ ಮರೆಗೆ ಸರಿಯುತ್ತಿದ್ದಂತೆ ಅವರ ಚೇಲಾಗಳಾದ ಟಂಡನ್-ಮಿಶ್ರಾಗಳ ಹಿಡಿತ ಕೂಡಾ ಸಡಿಲಗೊಳ್ಳಲಾರಂಭಿಸಿತು. ಅದೇ ಸಮಯಕ್ಕೆ ರಾಜ್ಯದ ಪೂರ್ವ ತುದಿಯಲ್ಲಿ ಯೋಗಿ ಆದಿತ್ಯನಾಥ್ ಎಂಬ ಠಾಕೂರ್ ನಾಯಕ ಪ್ರವರ್ಧಮಾನಕ್ಕೆ ಬರತೊಡಗಿದ್ದರು.
ಉತ್ತರಪ್ರದೇಶದಲ್ಲಿ ಬ್ರಾಹ್ಮಣರು ದೇಶದ ಬೇರೆ ಕಡೆ ಇರುವಂತೆ ‘ಮೂರು ಪರ್ಸೆಂಟ್’ ಸಮುದಾಯ ಅಲ್ಲ. ರಾಜ್ಯದ ಜನಸಂಖ್ಯೆಯಲ್ಲಿ ಬ್ರಾಹ್ಮಣರು ಬರೋಬ್ಬರಿ ಹತ್ತು ಪರ್ಸೆಂಟ್ ಇದ್ದಾರೆ. ಪ್ರಾರಂಭದಲ್ಲಿ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದ ಬ್ರಾಹ್ಮಣರು ಜನಸಂಘ-ಬಿಜೆಪಿ ನೆಲೆ ಪಡೆದುಕೊಳ್ಳುತ್ತಿದ್ದಂತೆ ಆ ಕಡೆ ವಾಲಿದ್ದರು. ಈ ನಡುವೆ ಬಿಎಸ್‌ಪಿ ಜೊತೆಯಲ್ಲಿಯೂ ಒಂದಷ್ಟು ವರ್ಷ ಕೂಡಿಕೊಂಡಿದ್ದರು. 2007ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿ ಪಕ್ಷದ ಜಯಭೇರಿಗೆ ಮಾಯಾವತಿಯವರು ನಡೆಸಿದ್ದ ದಲಿತ್-ಬ್ರಾಹ್ಮಣ್ ಭಾಯಿಚಾರವೂ ಕಾರಣ. ಬಹಳ ಬೇಗ ಬಿಎಸ್‌ಪಿಯಿಂದ ಹೊರಬಂದ ಬ್ರಾಹ್ಮಣರು ಮತ್ತೆ ಬಿಜೆಪಿ ಕಡೆ ಹೊರಳುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ತಮ್ಮ ಬದ್ದ ವಿರೋಧಿಗಳೆಂದು ತಿಳಿದುಕೊಂಡಿರುವ ಠಾಕೂರ್ ಸಮುದಾಯಕ್ಕೆ ಸೇರಿರುವ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ ಗಾದಿಯೇರಿ ಬಿಟ್ಟಿದ್ದರು. ಕಳೆದ ಐದು ವರ್ಷಗಳಲ್ಲಿ ಈ ಎರಡು ಸಮುದಾಯಗಳ ನಡುವೆ ಶೀತಲ ಸಮರವೊಂದು ನಡೆಯುತ್ತಾ ಬಂದಿದೆ. ಪೂರ್ವಾಂಚಲದಲ್ಲಿ ಬ್ರಾಹ್ಮಣ-ಠಾಕುರ್ ಸಂಘರ್ಷ ಹೊಸದಾಗಿ ಪ್ರಾರಂಭಗೊಂಡದ್ದಲ್ಲ. ಅದು ಗೋರಖ್‌ಪುರದ ಗೋರಕ್ಷ ಮಠದ ಹಿಂದಿನ ಮಹಂತರಗಳ ಕಾಲದಲ್ಲಿಯೇ ಪ್ರಾರಂಭಗೊಂಡಿತ್ತು. ಈ ರಕ್ತಸಿಕ್ತ ಸಂಘರ್ಷ ನಡೆಯುತ್ತಾ ಬಂದಿರುವುದು ರಾಜಕೀಯ ಆಧಿಪತ್ಯಕ್ಕಾಗಿ ಮಾತ್ರವಲ್ಲ, ಅದರ ಮುಖ್ಯ ಗುರಿ ಅಪರಾಧ ಜಗತ್ತಿನ ನಾಯಕತ್ವ.
ಸಾಮಾನ್ಯವಾಗಿ ಅಪರಾಧ ಜಗತ್ತಿನ ಚರ್ಚೆ ನಡೆಯುವಾಗ ಪ್ರಧಾನವಾಗಿ ಕೇಳಿಬರುವುದು ಒಂದಷ್ಟು ಮುಸ್ಲಿಮ್ ಡಾನ್‌ಗಳ ಹೆಸರುಗಳು. ಉತ್ತರಪ್ರದೇಶ ಚುನಾವಣೆಯ ಕಾಲದಲ್ಲಿ ಯೋಗಿ ಆದಿತ್ಯನಾಥ್ ‘ಬುಲ್ ಡೋಜರ್’ ಕತೆ ಹೇಳುವಾಗಲೂ ಹೆಚ್ಚಿನವರಿಗೆ ನೆನಪಾಗಿರುವುದು ಅದೇ ಮುಸ್ಲಿಮ್ ಭೂಗತ ದೊರೆಗಳ ಹೆಸರು. ವಿಚಿತ್ರವೆಂದರೆ ಉತ್ತರ ಪ್ರದೇಶದ ಅಪರಾಧ ಜಗತ್ತಿನ ರಾಜಧಾನಿ ಎಂದು ಹೇಳಬಹುದಾದ ಪೂರ್ವಾಂಚಲದಲ್ಲಿ ಕೇಳಿಬರುವ ಭೂಗತ ದೊರೆಗಳ ಪಟ್ಟಿಯಲ್ಲಿ ಮೊದಲ ಸಾಲಲ್ಲಿರುವುದು ಮುಸ್ಲಿಮರಲ್ಲ, ಬ್ರಾಹ್ಮಣರು.
ಅಪರಾಧ ಜಗತ್ತಿನ ನಾಯಕತ್ವವನ್ನು ಕೈವಶಮಾಡಿಕೊಳ್ಳಲು ಬ್ರಾಹ್ಮಣರು ಮತ್ತು ಠಾಕೂರ್‌ಗಳ ನಡುವೆ ನಡೆದ ಹೋರಾಟದ ಮೂಲಕವೇ ಉತ್ತರಪ್ರದೇಶದ ಅಪರಾಧ ಜಗತ್ತು ಉದ್ಘಾಟನೆಗೊಂಡಿರುವುದು. ದೇಶದಲ್ಲಿ ಮೊದಲ ಬಾರಿ ಜೈಲಲ್ಲಿದ್ದುಕೊಂಡೇ ಕಾಂಗ್ರೆಸ್ ಪಕ್ಷದಿಂದ ಚುನಾವಣೆ ಗೆದ್ದಿದ್ದ ಹರಿಶಂಕರ್ ತಿವಾರಿ ಎಂಬ ಬ್ರಾಹ್ಮಣ ನಾಯಕನೇ ಉತ್ತರಪ್ರದೇಶದ ಅಪರಾಧ ಜಗತ್ತಿನ ಮೊದಲ ದೊರೆ.
1950ರಲ್ಲಿ ಠಾಕೂರ್ ಜಾತಿಗೆ ಸೇರಿರುವ ಗೋರಕ್ಷಾ ಮಠದ ಮಹಂತ ದಿಗ್ವಿಜಯ್ ಮತ್ತು ಬ್ರಾಹ್ಮಣ ಜಾತಿಗೆ ಸೇರಿರುವ ಅಲ್ಲಿನ ಜಿಲ್ಲಾಧಿಕಾರಿ ಎಸ್.ಎನ್.ಎಂ. ತ್ರಿಪಾಠಿಯವರ ನಡುವೆ ನಡೆದ ಸಂಘರ್ಷದಲ್ಲಿ ಹಠಾತ್ತನೇ ಕಾಣಿಸಿಕೊಂಡವರು ಹರಿಶಂಕರ್ ತಿವಾರಿ. ಗೋರಖ್‌ಪುರ ಜಿಲ್ಲೆಯ ಚಿಲ್ಲಾಪುರ ಕ್ಷೇತ್ರದಿಂದ ಆರು ಬಾರಿ ಶಾಸಕರಾಗಿದ್ದ ತಿವಾರಿ ಕಾಂಗ್ರೆಸ್ ಪಕ್ಷದಿಂದ ರಾಜಕೀಯ ಜೀವನ ಪ್ರಾರಂಭಿಸಿದವರು. ನಂತರ ಸಮಾಜವಾದಿ ಪಕ್ಷ, ಬಿಎಸ್‌ಪಿ, ಬಿಜೆಪಿ ಪಕ್ಷದಿಂದ ಶಾಸಕರಾಗಿ ಸಂಪುಟ ಸಚಿವರಾದವರು. ಇವರ ಒಬ್ಬ ಮಗ ಬಿಜೆಪಿಯ ಲೋಕಸಭಾ ಸದಸ್ಯರಾದರೆ ಇನ್ನೊಬ್ಬ ಮಗ ಬಿಎಸ್‌ಪಿಯಿಂದ ಗೆದ್ದು ಶಾಸಕರಾಗಿ ಇತ್ತೀಚೆಗೆ ಸಮಾಜವಾದಿ ಪಕ್ಷ ಸೇರಿದ್ದಾರೆ. ಗೋರಖ್‌ಪುರ ರಾಜಕೀಯದಲ್ಲಿ ಯೋಗಿ ಆದಿತ್ಯನಾಥ್ ಅವರಿಗೆ ಈ ಹರಿ ಶಂಕರ್ ತಿವಾರಿ ಪ್ರಬಲ ವಿರೋಧಿ.
ಉತ್ತರಪ್ರದೇಶದಲ್ಲಿ ‘ಬಾಹುಬಲಿ’ಗಳೆಂದು ಕರೆಯಲಾಗುವ ಅಪರಾಧ ಜಗತ್ತಿನ ಪಾತಕಿಗಳ ಆದಾಯದ ಮೂಲ ಸರಕಾರಿ ಕಾಮಗಾರಿಗಳ ಗುತ್ತಿಗೆ, ಜಮೀನಿನ ಅತಿಕ್ರಮಣ ಮತ್ತು ನ್ಯಾಯಪಂಚಾಯಿತಿಗಳು. ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದ ನಂತರ ಬ್ರಾಹ್ಮಣ ಡಾನ್ ಗಳ ಆದಾಯದ ಮೂಲಗಳನ್ನೇ ಕತ್ತರಿಸಿಹಾಕಿಬಿಟ್ಟಿದ್ದಾರೆ.
ಸಾರ್ವಜನಿಕ ಸಭೆಗಳಲ್ಲಿ ಮತ್ತೆ ಮತ್ತೆ ಬುಲ್‌ಡೋಜರ್ ಕಾರ್ಯಾಚರಣೆಯನ್ನು ಉಲ್ಲೇಖಿಸುತ್ತಾ ತನ್ನ ಗುರಿ ಮುಸ್ಲಿಮ್ ಅಪರಾಧಿಗಳು ಎಂಬ ಸೂಚನೆಯನ್ನು ನೀಡಿದರೂ ಅವರ ಬುಲ್‌ಡೋಜರ್‌ಗೆ ಹೆಚ್ಚು ಬಲಿಯಾಗಿರುವುದು ಠಾಕೂರ್ ಭೂಗತ ದೊರೆಗಳ ಅಕ್ರಮ ಆಸ್ತಿ. ಪೊಲೀಸರ ಹತ್ಯೆ ನಡೆಸಿ ವಿಕಾಸ್ ದುಬೆ ಎಂಬ ಠಾಕೂರ್ ಡಾನ್‌ನನ್ನು ಎನ್‌ಕೌಂಟರ್ ನಲ್ಲಿ ಕೊಂದು ಹಾಕಿದ್ದ ಯೋಗಿ ಆದಿತ್ಯನಾಥ್ ಸರಕಾರ ಅಲ್ಲಿನ ರಾಜು ಭಯ್ಯೆನಂತಹ ಭೂಗತ ದೊರೆಗಳಿಗೆ ಹಗ್ಗ ಸಡಿಲುಬಿಟ್ಟಿರುವ ಆರೋಪಗಳಿವೆ.
ಗೋರಖ್‌ಪುರದ ಗೋಡೆಗಳಲ್ಲಿ ರಾರಾಜಿಸುತ್ತಿದ್ದ ‘‘ಮಚ್ಚರ್ ಔರ್ ಮಾಫಿಯಾ ಕೋ ಕತಮ್ ಕರ್ ನಾ ಹೈ’’ ಎಂದು ಬರೆದಿರುವ ಹಿಂದೂ ಮಹಾಸಭಾದ ಪೋಸ್ಟರ್‌ಗಳು 2007ರ ವಿಧಾನಸಭಾ ಚುನಾವಣೆಯ ಸಮೀಕ್ಷೆಗೆ ಹೋಗಿದ್ದ ನನ್ನನ್ನು ಸ್ವಾಗತಿಸಿತ್ತು. ‘ಜಪಾನೀ ಎನ್ ಸೆಪಲೈಟಿಸ್’ ಎಂಬ ಮೆದುಳು ಜ್ವರವನ್ನು ಹರಡುವ ಗೋರಖ್‌ಪುರದ ಸೊಳ್ಳೆಗಳು ವಿಶ್ವ ಕುಖ್ಯಾತಿ ಪಡೆದಿವೆ. ಮೂರು ದಶಕಗಳ ಅವಧಿಯಲ್ಲಿ ಈ ರೋಗಕ್ಕೆ ಅಂದಾಜು 24,000 ಮಂದಿ ಬಲಿಯಾಗಿದ್ದನ್ನು ಆ ಕಾಲದ ಅಧಿಕೃತ ಮಾಹಿತಿ ತಿಳಿಸಿತ್ತು.
ಇದೇ ಅವಧಿಯಲ್ಲಿ ಸಾಮಾಜಿಕ ಸ್ವಾಸ್ಥ್ಯ ಕೆಡಿಸುತ್ತಿರುವ ಇನ್ನೊಂದು ವ್ಯಾಧಿಗೆ ಸಾವಿರಾರು ಮುಗ್ದ ಜನ ಬಲಿಯಾಗಿರುವುದನ್ನು ಬೀದಿಯಲ್ಲಿ ಜನ ಪಿಸುಮಾತಿನಲ್ಲಿ ಹೇಳುತ್ತಿದ್ದರು. ಧೈರ್ಯದಿಂದ ಮಾತನಾಡಿದವರು ಕಡಿಮೆ.
ಅಯೋಧ್ಯೆಯಿಂದಲೇ ಉತ್ತರಪ್ರದೇಶದ ಕೋಮುವಾದಿ ರಾಜಕೀಯ ಶುರುವಾಗಿದೆ ಎಂದು ಹೇಳುವವರು ಯಾರಾದರೂ ಇದ್ದರೆ ಅವರಿನ್ನೂ ಗೋರಖ್‌ಪುರಕ್ಕೆ ಭೇಟಿ ನೀಡಿಲ್ಲ, ಅಲ್ಲಿನ ಗೋರಕ್ಷಾ ಪೀಠ ಮತ್ತು ಅದರ ಮಹಂತರ ಪರಿಚಯ ಇಲ್ಲ ಎಂದು ಹೇಳಬೇಕಾಗುತ್ತದೆ.
ರಾಜಕೀಯ ಮತ್ತು ಬಾಹಬಲಿಗಳ ಅಪರಾಧದ ಜಗತ್ತಿನ ಜೊತೆ ಗೋರಕ್ಷ ಪೀಠದ್ದು ಹಳೆಯ ನಂಟು. 1967ರಲ್ಲಿಯೇ ಈ ಪೀಠದ ಮಹಂತ ದಿಗ್ವಿಜಯನಾಥ ಹಿಂದೂ ಮಹಾಸಭೆಯಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಯೋಗಿ ಆದಿತ್ಯನಾಥ್ ಅವರ ಗುರು ಮಹಂತ ವೈದ್ಯನಾಥ ಅವರು ಗೋರಖ್‌ಪುರದಿಂದ ಮೂರು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಮೊದಲು ಹಿಂದೂ ಮಹಾಸಭಾದಿಂದ, ಮತ್ತೆರಡು ಬಾರಿ ಬಿಜೆಪಿಯಿಂದ. ಅವರ ಉತ್ತರಾಧಿಕಾರಿಯಾದ ಯೋಗಿ ಆದಿತ್ಯನಾಥ್ ನಾಲ್ಕು ಬಾರಿ ಬಿಜೆಪಿಯಿಂದ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಮೊದಲಿನಿಂದಲೂ ಯೋಗಿ ಆದಿತ್ಯನಾಥ್ ದಾಖಲೆಯಲ್ಲಿ ಮಾತ್ರ ಬಿಜೆಪಿ ಸದಸ್ಯ, ಅವರ ಚಟುವಟಿಕೆಗಳೆಲ್ಲ ನಡೆಯುತ್ತಿದ್ದುದು ಹಿಂದೂ ಮಹಾಸಭಾ ಮತ್ತು ಹಿಂದೂ ಯುವವಾಹಿನಿ, ಹಿಂದೂ ಜಾಗರಣ ಮಂಚ, ಪೂರ್ವಾಂಚಲ ವಿಕಾಸ ಮಂಚ ಮೊದಲಾದ ಹಿಂದುತ್ವದ ಸಂಘಟನೆಗಳ ಮೂಲಕ. ಹಿಂದಿನ ಚುನಾವಣೆಗಳ ಪ್ರಚಾರದಲ್ಲಿಯೂ ಬಿಜೆಪಿ ಕಾರ್ಯಕರ್ತರಿಗಿಂತ ಹೆಚ್ಚಾಗಿ ಹಿಂದೂ ಮಹಾಸಭಾದ ಬ್ಯಾನರ್-ಭಿತ್ತಿಪತ್ರಗಳೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದುದು.
ಹಿಂದುತ್ವದ ರಾಜಕಾರಣಕ್ಕೆ ಸಂಬಂಧಿಸಿದಂತೆ ಆದಿತ್ಯನಾಥ್, ನರೇಂದ್ರ ಮೋದಿಯವರೇ ಗುರುಗಳು. ಗುಜರಾತ್ ಮಾದರಿಯಲ್ಲಿಯೇ ಗೋರಖ್‌ಪುರದಲ್ಲಿ ಹಿಂದುತ್ವದ ಪ್ರಯೋಗಶಾಲೆಯನ್ನು ಅವರು 20 ವರ್ಷಗಳ ಹಿಂದೆಯೇ ಪ್ರಾರಂಭಿಸಿದ್ದರು. ಮೋದಿಯವರಂತೆಯೇ ಮುಸ್ಲಿಮರ ವಿರುದ್ಧ ದ್ವೇಷದ ಬೆಂಕಿ ಉಗುಳಬಲ್ಲರು, ಮರುಗಳಿಗೆಯಲ್ಲಿ ಭಾವಾವೇಶದ ಅವತಾರ ಎತ್ತಿ ಗಳಗಳನೇ ಅತ್ತು ಬಿಡಲೂ ಬಲ್ಲರು. ರಾಜ್ಯ ಸರಕಾರದ ಪೊಲೀಸರು ತನ್ನ ಮೇಲೆ ದೌರ್ಜನ್ಯವೆಸುಗುತ್ತಿದ್ದಾರೆ ಎಂದು ಹಿಂದೊಮ್ಮೆ ಲೋಕಸಭೆಯಲ್ಲಿ ಕಣ್ಣೀರು ಸುರಿಸಿದಾಗ ಕಮ್ಯುನಿಸ್ಟ್ ನಾಯಕರೇ ಅವರ ಬಳಿಹೋಗಿ ಸಾಂತ್ವನ ಹೇಳಿದ್ದರು.
ಯೋಗಿ ಆದಿತ್ಯನಾಥ್ ಅವರಂತಹ ಉಗ್ರ ಹಿಂದುತ್ವದ ಪ್ರತಿಪಾದಕರಿಗೆ ಹೇಳಿ ಮಾಡಿಸಿರುವ ಜಿಲ್ಲೆ ಗೋರಖ್‌ಪುರ. ಒಂದು ತುದಿಯಲ್ಲಿ ಅಯೋಧ್ಯೆ, ಇನ್ನೊಂದು ತುದಿಯಲ್ಲಿ ನೇಪಾಳವನ್ನು ಹೊಂದಿರುವ ಗೋರಖ್‌ಪುರದಲ್ಲಿ ಪತ್ರಿಕೆಗಳ ಪುಟ ತಿರುವಿದರೆ ನೇಪಾಳದ ಗಡಿಯಲ್ಲಿ ಐಎಸ್‌ಐ ತರಬೇತಿ ಕೇಂದ್ರಗಳ ಚಿತ್ರ, ಮುಸ್ಲಿಮ್ ಉಗ್ರಗಾಮಿಗಳ ಜೊತೆ ನಕ್ಸಲೀಯರು ಕೈಜೋಡಿಸಿದ ಸುದ್ದಿಗಳು ಹೇರಳವಾಗಿ ಸಿಗುತ್ತವೆ. ಕೋಮುದ್ವೇಷದ ಕಿಡಿ ಬೆಂಕಿಯಾಗಲು ಇಷ್ಟು ಸಾಕು. ಅಷ್ಟರಲ್ಲಿ ಹಿಂದೂ ಯುವವಾಹಿನಿ ಪಡೆಯ ಪ್ರವೇಶವಾಗುತ್ತದೆ, ಇನ್ನೊಂದು ಕಡೆಯಿಂದ ಮುಸ್ಲಿಮ್ ಸಂಘಟನೆಗಳು ಧಾವಿಸಿ ಬರುತ್ತವೆ.
ಗುಜರಾತ್‌ನಲ್ಲಿ ಆರ್‌ಎಸ್‌ಎಸ್ ಮತ್ತು ಅದರ ಅಂಗ ಸಂಸ್ಥೆಗಳನ್ನೆಲ್ಲ ಮೂಲೆಗೆ ಸರಿಸಿ ತನ್ನದೇ ಬ್ರಾಂಡಿನ ಪಕ್ಷ ಕಟ್ಟಿ ಯಶಸ್ಸು ಕಂಡ ನರೇಂದ್ರಮೋದಿಯವರ ರಾಜಕೀಯ ಬಹುಷಃ ಯೋಗಿ ಆದಿತ್ಯನಾಥ್ ಕಣ್ಣ ಮುಂದಿದೆ. ಇದನ್ನು ಅರಿಯಲಾರದಷ್ಟು ದಡ್ಡರು ಮೋದಿ-ಶಹಾಗಳು ಮತ್ತು ಆರ್‌ಎಸ್‌ಎಸ್ ನಾಯಕರಲ್ಲ. ಯೋಗಿ ಆದಿತ್ಯನಾಥ್ ಅವರ ಮಹತ್ವಾಕಾಂಕ್ಷೆಯ ವಾಸನೆಯ ಜಾಡು ಹಿಡಿದ ಕಾರಣಕ್ಕಾಗಿಯೇ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಮೋದಿ-ಶಹಾ ಜೋಡಿ ಪ್ರಯತ್ನಿಸಿದ್ದರು. ಕರ್ನಾಟಕದಲ್ಲಿ ಬಿ.ಎಸ್.ಯಡಿಯೂರಪ್ಪನವರ ಪದಚ್ಯುತಿಯಷ್ಟು ಸುಲಭದಲ್ಲಿ ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರನ್ನು ಕಿತ್ತುಹಾಕುವುದು ಸಾಧ್ಯವಿಲ್ಲ ಎಂದು ಅರಿವಾದ ನಂತರವೇ ಅವರು ಸಹಿಸಿಕೊಂಡಿರುವುದು. ಆರ್‌ಎಸ್‌ಎಸ್ ನಾಯಕರಿಗೂ ಸದ್ಯ ಮೋದಿ-ಶಹಾ ಜೋಡಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಯೋಗಿ ಆದಿತ್ಯನಾಥ್ ಇರಬೇಕು ಎಂದು ಅನಿಸಿರಲೂಬಹುದು.
ಈ ವರೆಗೆ ನಡೆದಿರುವ ಐದು ಹಂತದ ಮತದಾನಗಳಲ್ಲಿ ಬಿಜೆಪಿ ಕನಿಷ್ಠ ನೂರು ಸೀಟುಗಳನ್ನು ಕಳೆದುಕೊಂಡಿರುವ ಸಾಧ್ಯತೆ ಇದೆ. ಬಿಜೆಪಿಯ ಕುಸಿತ ಇದೇ ಗತಿಯಲ್ಲಿ ಮುಂದುವರಿದರೆ ಬಿಜೆಪಿ ವಿರೋಧ ಪಕ್ಷದ ಸ್ಥಾನದಲ್ಲಿ ಕೂರುವುದು ಮತ್ತು ಬಾಬಾಜಿ ತಾತ್ಕಾಲಿಕವಾಗಿ ಮಠ ಸೇರುವುದು ಅನಿವಾರ್ಯವಾಗಬಹುದು.